WFTW Body: 

ನಮ್ಮ ಎಲ್ಲಾ ಆತ್ಮಿಕ ಸಮಸ್ಯೆಗಳ ಮೂಲಕಾರಣ ಯಾವುದೆಂದರೆ, ನಾವು ನಮ್ಮ ದೇವರು ಸರ್ವಶಕ್ತನಾದ ಪ್ರೀತಿಸುವ ತಂದೆ ಆಗಿದ್ದಾರೆ ಎನ್ನುವುದನ್ನು ತಿಳಕೊಳ್ಳದಿರುವುದೇ ಆಗಿದೆ.

ಯೇಸುವು ನಮಗೆ ನೀಡಿರುವ ಒಂದು ಸತ್ಯಾಂಶವು ನನ್ನ ಕ್ರಿಸ್ತೀಯ ಜೀವನವನ್ನು ವಿಶೇಷವಾಗಿ ಪರಿವರ್ತಿಸಿದೆ - ತಂದೆಯು ಯೇಸುವನ್ನು ಪ್ರೀತಿಸಿದಂತೆಯೇ ಯೇಸುವಿನ ಶಿಷ್ಯರನ್ನು ಪ್ರೀತಿಸುತ್ತಾರೆ, ಎನ್ನುವಂಥದ್ದು. ಯೇಸುವು ತನ್ನ ಶಿಷ್ಯರಿಗಾಗಿ ತಂದೆಯನ್ನು ಪ್ರಾರ್ಥಿಸಿದ್ದು ಏನೆಂದರೆ, "... ನೀನು ನನ್ನನ್ನು ಪ್ರೀತಿಸಿದಂತೆ ಅವರನ್ನೂ ಪ್ರೀತಿಸಿದ್ದೀ, ಎಂದು ಲೋಕಕ್ಕೆ ತಿಳಿದುಬರಲಿ" (ಯೋಹಾನ 17:23), ಎಂದು. ಈ ಸತ್ಯಾಂಶ ನಮ್ಮ ಸುತ್ತಲಿನ ಜಗತ್ತಿಗೆ ತಿಳಿಯಬೇಕು. ಆದರೆ ಜಗತ್ತು ಇದನ್ನು ಅರಿಯುವ ಮುನ್ನ, ಈ ವಿಷಯ ನಮ್ಮ ಹೃದಯಗಳಲ್ಲಿ ಆಳವಾಗಿ ಬೇರೂರಬೇಕು.

ಈ ವಾಗ್ದಾನ ಎಲ್ಲಾ ಜನರಿಗೆ ಅನ್ವಯಿಸುವುದಿಲ್ಲ, ಆದರೆ ಯಾರು ಯೇಸುವಿನ ಶಿಷ್ಯರಾಗುತ್ತಾರೋ ಅಂಥವರಿಗೆ ಅನ್ವಯಿಸುತ್ತದೆ - ಅಂದರೆ ಯಾರಲ್ಲಿ ಯೇಸುವಿಗಾಗಿ ಪ್ರೀತಿಯು: (1) ಜಗತ್ತಿನ ಬೇರೆಲ್ಲರಿಗಾಗಿ ಇರುವ ಪ್ರೀತಿಗಿಂತ ಹೆಚ್ಚಿನದ್ದು ಆಗಿರುತ್ತದೆ; (2) ಸ್ವಂತ ಜೀವಕ್ಕಿಂತ ಅಮೂಲ್ಯವಾಗಿರುತ್ತದೆ; ಮತ್ತು (3) ಧನ-ಸಂಪತ್ತು ಹಾಗೂ ಆಸ್ತಿಯ ಮೇಲಿನ ಪ್ರೀತಿಯನ್ನು ಮೀರಿಸುತ್ತದೆ (ಶಿಷ್ಯತ್ವದ ಈ ಮೂರು ಷರತ್ತುಗಳನ್ನು ಯೇಸುವು ಲೂಕ 14:26,27,33 ರಲ್ಲಿ ವಿವರಿಸಿದ್ದಾರೆ). ಈ ಮೂರು ಷರತ್ತುಗಳನ್ನು ಕೈಗೊಳ್ಳುವ ಜನರಿಗೆ ಈ ವಾಗ್ದಾನವು ಕೊಡಲ್ಪಟ್ಟಿದೆ.

ನಮಗೆ ಪರಲೋಕದಲ್ಲಿ ಒಬ್ಬ ಪ್ರೀತಿಯುಳ್ಳ ತಂದೆ ಇದ್ದಾರೆಂದು ನಾವು ಮನಸ್ಸಿನಲ್ಲಿ ಒಪ್ಪಿಕೊಳ್ಳಬಹುದು. ಆದರೆ ನಮ್ಮ ಮನಸ್ಸು ಚಿಂತೆ, ಕಳವಳ, ಅಭದ್ರತೆ ಹಾಗೂ ಗಾಬರಿಯಿಂದ ತುಂಬಿದ್ದರೆ, ಅದು ನಾವು ಯೇಸುವಿನ ಶಿಷ್ಯರು ಆಗಿಲ್ಲವೆಂದಾಗಲೀ, ಅಥವಾ ನಮ್ಮ ತಂದೆಯು ಯೇಸುವನ್ನು ಪ್ರೀತಿಸಿದ ಮಟ್ಟದಲ್ಲಿ ನಮ್ಮನ್ನು ಪ್ರೀತಿಸುತ್ತಾರೆಂಬ ನಂಬಿಕೆ ನಮ್ಮ ಒಳ ಹೃದಯದಲ್ಲಿ ಇಲ್ಲವೆಂದಾಗಲೀ ತೋರಿಸುತ್ತದೆ! ಮಾನವ ದೃಷ್ಟಿಯಿಂದ ನೋಡಿದಾಗ, ದೇವರು ನಮ್ಮನ್ನು ಇಷ್ಟು ಶ್ರೇಷ್ಠವಾಗಿ ಪ್ರೀತಿಸುವುದು ನಂಬಲು ಅಸಾಧ್ಯವಾದ ಮಾತು. ಆದರೆ ಯೇಸುವು ನಮಗೆ ಈ ವಿಷಯವನ್ನು ಸರಳವಾಗಿ ತಿಳಿಸಿದ್ದಾರೆ. ಹಾಗಾಗಿ ನಾವು ಇದು ನಿಜವೆಂದು ಅರಿತುಕೊಳ್ಳಬಹುದು.

ನಮ್ಮ ಕಣ್ಣುಗಳು ಈ ಅದ್ಭುತ ಸತ್ಯವನ್ನು ನೋಡಿದ ನಂತರ, ಅದು ನಮ್ಮ ಜೀವನದ ಸಂಪೂರ್ಣ ದೃಷ್ಟಿಕೋನವನ್ನು ಬದಲಾಯಿಸುತ್ತದೆ. ನಮ್ಮ ಜೀವನದಿಂದ ಏಲ್ಲಾ ಗುಣಗುಟ್ಟುವಿಕೆ, ನಿರುತ್ಸಾಹ, ಮಂಕುತನ, ಭಯ ಮತ್ತು ಆತಂಕಗಳು ದೂರ ಸರಿಯುತ್ತವೆ. ಇದು ಸಾಧ್ಯವೆಂದು ನನಗೆ ತಿಳಿದಿದೆ, ಏಕೆಂದರೆ ನನ್ನ ಜೀವನದಲ್ಲಿ ಇದು ನಡೆದಿದೆ. ಈಗ ನನ್ನ ಜೀವನದ ಕದಲಿಸಲಾಗದ ಅಸ್ತಿವಾರ ಇದಾಗಿದೆ: ದೇವರು ಯೇಸುವನ್ನು ಪ್ರೀತಿಸಿದ ಹಾಗೆಯೇ ನನ್ನನ್ನೂ ಸಹ ಪ್ರೀತಿಸುತ್ತಾರೆ.

ನಾವು ನಮ್ಮ ಜೀವನದಲ್ಲಿ ಸೋಲನ್ನು ಅನುಭವಿಸುತ್ತಿರುವುದಕ್ಕೆ ಕಾರಣ ನಾವು ಸಾಕಷ್ಟು ಬಾರಿ ಉಪವಾಸ ಮಾಡದೇ ಮತ್ತು ಸಾಕಷ್ಟು ಸಮಯ ಪ್ರಾರ್ಥನೆಗಾಗಿ ಉಪಯೋಗಿಸದೇ ಇರುವುದು ಆಗಿದೆ, ಎನ್ನುವ ಮಾತು ನಿಜವಲ್ಲ. ಇಲ್ಲ. ಜಯವು ನಂಬಿಕೆಯ ಮೂಲಕ ಸಿಗುತ್ತದೆ - ನಮ್ಮ ಸ್ವ-ಪ್ರಯತ್ನದಿಂದಾಗಿ ಅಲ್ಲ. "ಲೋಕವನ್ನು ಜಯಿಸಿದಂಥದು ನಮ್ಮ ನಂಬಿಕೆಯೇ" (1 ಯೋಹಾನ 5:4). ನೀವು ಪ್ರಶ್ನಿಸ ಬಹುದು,"ಯಾವುದರಲ್ಲಿ ನಂಬಿಕೆ?" ಎಂದು. ಅದಕ್ಕೆ ಉತ್ತರ, "ದೇವರಲ್ಲಿ ನಿಮಗಾಗಿ ಇರುವ ಪರಿಪೂರ್ಣ ಪ್ರೀತಿಯಲ್ಲಿ ನಂಬಿಕೆ."

ಅನೇಕ ವಿಶ್ವಾಸಿಗಳು ತಮ್ಮ ಜೀವನದಲ್ಲಿ ಸೈತಾನನ ನಿಂದನೆಗಳ ಮೂಲಕ ಖಂಡನೆಗೆ ಒಳಗಾಗುತ್ತಾರೆ, "ನೀನು ಸಾಕಷ್ಟು ಬಾರಿ ಉಪವಾಸ ಮಾಡುತ್ತಿಲ್ಲ. ನೀನು ಬಹಳ ಕಡಿಮೆ ಸಮಯ ಪ್ರಾರ್ಥಿಸುತ್ತಿರುವೆ. ನೀನು ಸಾಕ್ಷಿ ಹೇಳುವುದರಲ್ಲಿ ಹಿಂದೆ ಬಿದ್ದಿರುವೆ. ನೀನು ಸತ್ಯವೇದವನ್ನು ಬಹಳ ಕಡಿಮೆ ಅಧ್ಯಯನ ಮಾಡುತ್ತಿರುವೆ", ಇತ್ಯಾದಿ. ಅವರು ಇಂತಹ ಆಪಾದನೆಗಳಿಂದ ಹೊಡದೆಬ್ಬಿಸಲ್ಪಟ್ಟು, ಉದ್ರೇಕದಿಂದ ಅನೇಕ ಚಟುವಟಿಕೆಗಳಲ್ಲಿ ತೊಡಗುತ್ತಾರೆ ಮತ್ತು ಮೇಲಿಂದ ಮೇಲೆ ನಿರ್ಜೀವಕರ್ಮಗಳಲ್ಲಿ ನಿರತರಾಗುತ್ತಾರೆ.

ನೀವು ಕೈಗೊಳ್ಳುವ ಎಲ್ಲಾ ಸ್ವ-ನಿಯಂತ್ರಣ, ಉಪವಾಸ, ಪ್ರಾರ್ಥನೆ ಮತ್ತು ಸಾಕ್ಷಿ ಹೇಳುವುದು ಇತ್ಯಾದಿಗಳು, ದೇವರಿಗಾಗಿ ನಿಮ್ಮಲ್ಲಿ ಇರುವ ಪ್ರೀತಿಯ ಮೂಲಕ ಪ್ರೇರೇಪಿಸಲ್ಪಡದೇ ಇದ್ದರೆ, ಅವೆಲ್ಲವೂ ನಿರ್ಜೀವ ಕರ್ಮಗಳಾಗಿವೆ ಎಂದು ನೀವು ಅರಿತಿರುವಿರಾ? ಅಂತಹ ಪ್ರೀತಿಯ ಮೂಲಕ ಇವುಗಳು ಯಥಾರ್ಥವಾಗಿ ಆರಂಭಗೊಳ್ಳುವದಕ್ಕೆ, ನಿಮಗೆ ಪ್ರಾಥಮಿಕವಾಗಿ ದೇವರು ನಿಮ್ಮಲ್ಲಿ ಇರಿಸಿರುವ ಪ್ರೀತಿಯಲ್ಲಿ ಭರವಸೆ ಇರಬೇಕು. ಎಫೆಸ ಪಟ್ಟಣದಲ್ಲಿದ್ದ ಕ್ರೈಸ್ತರಿಗಾಗಿ ಪೌಲನ ಪ್ರಾರ್ಥನೆ, ಅವರು ದೇವರ ಪ್ರೀತಿಯಲ್ಲಿ ನೆಲೆಗೊಂಡು ನಿಂತು ವಿಶೇಷ ಬಲ ಹೊಂದಲಿ, ಎಂದಾಗಿತ್ತು (ಎಫೆಸ 3:16-18).

ಲೋಕದಲ್ಲಿ ಎಲ್ಲೆಲ್ಲಿಯೂ ಜನರು ತಮ್ಮನ್ನು ಯಾರು ಪ್ರೀತಿಸುತ್ತಾರೆ, ಎಂಬ ನಿರೀಕ್ಷೆಯಲ್ಲಿ ಇರುತ್ತಾರೆ. ಅನೇಕ ಕ್ರೈಸ್ತರು ಪ್ರೀತಿಯನ್ನು ಹಂಬಲಿಸುತ್ತಾ, ಒಂದು ಕ್ರೈಸ್ತ ಸಭೆಯಿಂದ ಇನ್ನೊಂದಕ್ಕೆ ಹೋಗುತ್ತಿರುತ್ತಾರೆ. ಕೆಲವರು ಗೆಳೆತನದಲ್ಲಿ ಪ್ರೀತಿಯನ್ನು ಹುಡುಕಿದರೆ, ಇನ್ನು ಕೆಲವರು ವಿವಾಹದ ಮೂಲಕ ಅದಕ್ಕಾಗಿ ತವಕಿಸುತ್ತಾರೆ. ಆದರೆ ಇವೆಲ್ಲವೂ ನಿರಾಶೆಯೊಂದಿಗೆ ಅಂತ್ಯವಾಗಬಹುದು. ತಬ್ಬಲಿಗಳ ಹಾಗೆ, ಆದಾಮನ ಮಕ್ಕಳು ಸುರಕ್ಷತೆ ಇಲ್ಲದೆ ಜೀವಿಸುತ್ತಾರೆ, ಮತ್ತು ಮೇಲಿಂದ ಮೇಲೆ ತಮ್ಮ ಬಗ್ಗೆ ಯೋಚಿಸಿ ಮರುಕಗೊಂಡು ನಿರಾಶರಾಗುತ್ತಾರೆ.

ಈ ಸಮಸ್ಯೆಗೆ ಪರಿಹಾರ ಇದೆಯೇ? ಇದಕ್ಕೆ ಪರಿಹಾರ ದೇವರ ಪ್ರೀತಿಯಲ್ಲಿ ನಮ್ಮ ಭದ್ರತೆಯನ್ನು ಕಂಡುಕೊಳ್ಳುವುದರಲ್ಲಿ ಇದೆ. ಯೇಸುವು ತನ್ನ ಶಿಷ್ಯರಿಗೆ ಅನೇಕ ಸಲ ಜ್ಞಾಪಿಸಿದ್ದು ಏನೆಂದರೆ, ಅವರ ಪ್ರತಿಯೊಂದು ತಲೆಕೂದಲುಗಳೂ ಎಣಿಕೆಯಾಗಿವೆ ಮತ್ತು ದೇವರ ಪ್ರೀತಿಯು ಕೋಟ್ಯಾಂತರ ಹಕ್ಕಿಗಳಿಗೆ ಆಹಾರವನ್ನೂ, ಅಡವಿಯ ಹೂವುಗಳಿಗೆ ಅಂದವಾದ ಅಲಂಕಾರವನ್ನೂ ನೀಡಿರುವಾಗ, ತಂದೆಯಾದ ದೇವರು ಖಂಡಿತವಾಗಿ ಯೇಸುವಿನ ಶಿಷ್ಯರನ್ನು ಸಲಹುತ್ತಾನೆ. ಇದಕ್ಕೂ ಶ್ರೇಷ್ಠವಾಗಿ ದೇವರ ಪ್ರೀತಿಯನ್ನು ಮನದಟ್ಟು ಮಾಡುವ ಸತ್ಯಾಂಶ ಯಾವುದೆಂದರೆ, "ಸ್ವಂತ ಮಗನನ್ನು ಉಳಿಸಿಕೊಳ್ಳದೆ ಆತನನ್ನು ನಮ್ಮೆಲ್ಲರಿಗೋಸ್ಕರ ಒಪ್ಪಿಸಿ ಕೊಟ್ಟನಲ್ಲಾ; ಮಗನನ್ನು ಕೊಟ್ಟ ಮೇಲೆ ಸಮಸ್ತವನ್ನೂ ನಮಗೆ ದಯಪಾಲಿಸದೇ ಇರುವನೇ" (ರೋಮಾ. 8:32). ದೇವರು ಯೇಸುವನ್ನು ಜೋಪಾನವಾಗಿ ಲಕ್ಷಿಸಿ ನೋಡಿಕೊಂಡಂತೆ ನಮಗೂ ಮಾಡುವರು.

ದೇವರು ಒಮ್ಮೊಮ್ಮೆ ನಮ್ಮ ಜೊತೆಯ ಜನರ ಮೂಲಕ ನಮ್ಮನ್ನು ನಿರಾಶೆಗೊಳಿಸುವುದು ಏಕೆಂದರೆ, ನಾವು ಮನುಷ್ಯನ ಮೇಲೆ ಭರವಸೆ ಇರಿಸುವುದನ್ನು ಕೊನೆಗೊಳಿಸಲಿಕ್ಕಾಗಿ. ಅವರು ನಮ್ಮನ್ನು ಇಂತಹ ವಿಗ್ರಹಾರಾಧನೆಯಿಂದ ಬಿಡಿಸಲು ಬಯಸುತ್ತಾರೆ - ಏಕೆಂದರೆ ಮಾನವನನ್ನು ಅವಲಂಬಿಸಿ ಬಾಳುವುದು ವಿಗ್ರಹಾರಾಧನೆಯ ಒಂದು ಮಾದರಿಯಾಗಿದೆ. ನಾವು ದೇವರನ್ನು ಮಾತ್ರ ಅವಲಂಬಿಸುವುದನ್ನು ಕಲಿಯಬೇಕೆಂದು ಅವರು ಇಚ್ಛಿಸುತ್ತಾರೆ. ಇದಕ್ಕಾಗಿ ದೇವರು ನಮ್ಮ ಸುತ್ತಮುತ್ತಲಿನ ಸನ್ನಿವೇಶಗಳನ್ನು ನಿಯಂತ್ರಿಸಿ, ನಮಗೆ ಎಲ್ಲಾ ದೆಶೆಯಲ್ಲೂ ಮಾನವನಿಂದ ನಿರಾಶೆ ಉಂಟಾಗುವಂತೆ ಮಾಡಿದಾಗ, ನಾವು ನಿರುತ್ಸಾಹಗೊಳ್ಳಬಾರದು. ಇದು ನಾವು ಸಹಾಯಕ್ಕಾಗಿ ಮಾನವ ತೋಳಿನ ಬಲವನ್ನು ನಂಬುವುದನ್ನು ಕೊನೆಗೊಳಿಸಿ, ದೇವರ ಮೇಲಿನ ನಂಬಿಕೆಯಿಂದ ಜೀವಿಸುವುದನ್ನು ಕಲಿತುಕೊಳ್ಳಲು ಅವರು ನಡೆಸುವ ಕಾರ್ಯವಾಗಿದೆ.

"ಕರ್ತನು ಹೀಗೆನ್ನುತ್ತಾನೆ -’ಮಾನವಮಾತ್ರದವರಲ್ಲಿ ಭರವಸವಿಟ್ಟು ನರಜನ್ಮದವರನ್ನು ತನ್ನ ಭುಜಬಲವೆಂದು ತಿಳಿಯುವವನು ಶಾಪಗ್ರಸ್ತನು. ... ಇವನು ಅಡವಿಯ ಗಿಡದ ಪೊದೆಗೆ ಸಮಾನನು. ಯಾವನು ಕರ್ತನಲ್ಲಿ ನಂಬಿಕೆ ಇಟ್ಟಿದ್ದಾನೋ, ಯಾವನಿಗೆ ಕರ್ತನು ಭರವಸವಾಗಿದ್ದಾನೋ ಅವನು ಧನ್ಯನು...ಅವನು ಹೊಳೆಯ ದಡದಲ್ಲಿ ನೆಡಲ್ಪಟ್ಟ ಮರದಂತೆ ಬಿಸಿಲಿನ ದಗೆಗೆ ಭಯಪಡದೆ ಹಸುರೆಲೆಯನ್ನು ಬಿಡುತ್ತಾ, ಕ್ಷಾಮದ ವರ್ಷದಲ್ಲಿಯೂ ನಿಶ್ಚಿಂತೆಯಾಗಿ ಸದಾ ಫಲಕೊಡುತ್ತಾ ಇರುವ ಮರಕ್ಕೆ ಸಮಾನನಾಗಿರುವನು’" (ಯೆರೆಮೀಯ 17:5-8).

ಕ್ರೈಸ್ತರಲ್ಲಿ ಕಂಡುಬರುವ ಎಲ್ಲಾ ಪೈಪೋಟಿ ಮತ್ತು ಅಸೂಯೆ ಅವರಲ್ಲಿರುವ ಅಭದ್ರತೆಯಿಂದ ಉಂಟಾಗುತ್ತವೆ. ದೇವರ ಪ್ರೀತಿಯಲ್ಲಿ ಭದ್ರನಾಗಿ ನೆಲೆನಿಂತಿರುವ ಒಬ್ಬ ಮನುಷ್ಯನು, ತನಗೆ ಕೊಡಲ್ಪಟ್ಟ ಪ್ರತಿಭೆ ಮತ್ತು ಸಾಮರ್ಥ್ಯ ಎಂಥದ್ದೇ ಆಗಿದ್ದರೂ ಅವು ದೇವರ ಕೊಡುಗೆಗಳು ಎಂದು ಅರಿತುಕೊಂಡು, ಎಂದಿಗೂ ಇನ್ನೊಬ್ಬ ಮನುಷ್ಯನೊಂದಿಗೆ ಅಸೂಯೆ ಅಥವಾ ಸೆಣಸಾಟ ನಡೆಸಲು ಹೊರಡುವುದಿಲ್ಲ. ವಿಶ್ವಾಸಿಗಳ ನಡುವಿನ ಸಂಬಂಧಗಳಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳು ಮೂಲತಃ ಈ ಅಭದ್ರತೆಯಿಂದಲೇ ಉಂಟಾಗುತ್ತವೆ.

ಆದ್ದರಿಂದ ಲೂಕ 14:26-34ರ ವಚನಗಳನ್ನು ಧ್ಯಾನಿಸಿ ಓದಿರಿ ಮತ್ತು ಯೇಸುವಿನ ಒಬ್ಬ ಪೂರ್ಣಹೃದಯದ ಶಿಷ್ಯನಾಗಿರಿ. ಇನ್ನು ಮೇಲೆ ದೇವರು ಯೇಸುವನ್ನು ಪ್ರೀತಿಸಿದಂತೆಯೇ ನಿಮ್ಮನ್ನು ಪ್ರೀತಿಸುತ್ತಾರೆ ಎನ್ನುವ ವಾಗ್ದಾನ ನಿಮಗೆ ಸಿಗುವುದರಿಂದ ನೀವು ಭದ್ರತೆಯನ್ನು ಕಂಡುಕೊಳ್ಳುತ್ತೀರಿ.