WFTW Body: 

"ನನ್ನೆದುರು ನಿಲ್ಲುವದಕ್ಕೂ ... ಗೋಡೆಯನ್ನು ಗಟ್ಟಿಮಾಡುವದಕ್ಕೂ ತಕ್ಕವನನ್ನು ನಾನು ಹುಡುಕಿದಾಗ ಯಾರೂ ಸಿಕ್ಕಲಿಲ್ಲ" (ಯೆಹೆಜ್ಕೇಲ 22:30) . ನಾವು ಈ ಜಗತ್ತಿನ ಇತಿಹಾಸದಲ್ಲಿ ಪದೇ ಪದೇ ನೋಡುವಂತೆ, ದೇವರು ಇಸ್ರಾಯೇಲಿಗೆ ಮತ್ತು ಕ್ರಿಸ್ತಸಭೆಗೆ ಸಂಬಂಧಿಸಿದಂತೆ ತನ್ನ ಉದ್ದೇಶಗಳನ್ನು ಪೂರೈಸುವದಕ್ಕಾಗಿ, ಒಬ್ಬನೇ ಒಬ್ಬ ಮನುಷ್ಯನ ಮೇಲೆ ಅವಲಂಬಿಸಬೇಕಾದ ವಿಶೇಷ ಸನ್ನಿವೇಶದ ಹಲವು ಉದಾಹರಣೆಗಳಿವೆ. ಆದರೆ ಆ ಏಕಾಂಗಿ ಮನುಷ್ಯ ದೇವರ ಜೊತೆಗೆ ನಿಂತಾಗ, ಯಾವಾಗಲೂ ಬಹುಮತವನ್ನು ಹೊಂದಿರುತ್ತಾನೆ.

ನೋಹನು: ಕೆಟ್ಟತನವೂ ಮತ್ತು ದೇವರ ವಿರುದ್ಧ ತಿರುಗಿಕೊಳ್ಳುವ ಮನೋಭಾವವೂ ನೋಹನ ಕಾಲದಲ್ಲಿ ಇಡೀ ಜಗತ್ತಿನಲ್ಲಿ ತುಂಬಿದ್ದಾಗ, ಭೂಮಿಯ ಮೇಲೆ ದೇವಭಯವಿದ್ದ ಎಂಟು ಜನರು ಇದ್ದರೂ ಸಹ, ದೇವರ ಉದ್ದೇಶಗಳು ಕೇವಲ ಒಬ್ಬ ಮನುಷ್ಯನ - ನೋಹನ - ನಂಬಿಗಸ್ಥಿಕೆಯನ್ನು ಸಂಪೂರ್ಣವಾಗಿ ಅವಲಂಬಿಸಿಕೊಂಡು ನೆರವೇರಿದವು. ಆ ಸಮಯದಲ್ಲಿ, ನೋಹನು ಮಾತ್ರ ದೇವರ ದಯೆಯನ್ನು ಕಂಡುಕೊಂಡನು (ಆದಿಕಾಂಡ 6:8). ಆ ಒಬ್ಬ ಮನುಷ್ಯನು ದೇವರಿಗೆ ಅಪನಂಬಿಗಸ್ಥನಾಗಿ ಜೀವಿಸಿದ್ದರೆ, ಇಡೀ ಮಾನವ ಕುಲವು ವಿನಾಶಕ್ಕೆ ಒಳಗಾಗಿ ಅಳಿಸಿಹೋಗುತ್ತಿತ್ತು, ಮತ್ತು ನಾವು ಯಾರೂ ಈ ದಿನ ಜೀವಂತವಾಗಿರುತ್ತಿರಲಿಲ್ಲ!! ನೋಹನು ನಿಷ್ಠೆಯುಳ್ಳವನಾಗಿ ನಡಕೊಂಡದ್ದಕ್ಕೆ ನಾವು ದೇವರಿಗೆ ಸ್ತೋತ್ರ ಸಲ್ಲಿಸುವದು ಖಂಡಿತವಾಗಿ ಉಚಿತವಾಗಿದೆ. ಯೇಸುವು ತಿಳಿಸಿದಂತೆ, ಕೊನೆಯ ದಿನಗಳು ನೋಹನ ದಿನಗಳಂತೆ ಇರುತ್ತವೆ. ನೋಹನ ಕಾಲದಲ್ಲಿ ನಡೆದಂತೆ ಕೊನೆಯ ದಿವಸಗಳಲ್ಲೂ ಲೈಂಗಿಕ ಭ್ರಷ್ಟತೆಯೂ, ಹಿಂಸಾಚಾರವೂ ಎದ್ದು ಕಾಣುವಂತಹ ಗುರುತುಗಳಾಗಿರುತ್ತವೆ. ನಾವು ಜೀವಿಸುತ್ತಿರುವ ಈ ದಿನಗಳು ಅಂಥಹ ಕಾಲಕ್ಕೆ ಸೇರಿವೆ. ಆ ಕಾರಣಕ್ಕಾಗಿ, ನೋಹನಂತಹ ದೃಢನಿಲುವಿನ ಮನುಷ್ಯರು ಈ ದಿನವೂ ದೇವರಿಗೆ ಬೇಕಾಗಿದ್ದಾರೆ.

ಎಲೀಯನು: ಇಸ್ರಾಯೇಲ್ಯರ ಇತಿಹಾಸದ ಇನ್ನೊಂದು ಅವಧಿಯಲ್ಲಿ, ಅಹಾಬನು ತನ್ನ ಪ್ರಜೆಗಳು ಬಾಳನನ್ನು ಪೂಜಿಸುವಂತೆ ಆಜ್ಞಾಪಿಸಿದ್ದನ್ನು ಪರಿಗಣಿಸಿರಿ. ಆ ಸಮಯದಲ್ಲಿ ಇಸ್ರಾಯೇಲಿನಲ್ಲಿ ಬಾಳನ ವಿಗ್ರಹಕ್ಕೆ ಅಡ್ಡಬೀಳದೇ ಇದ್ದ 7000 ಮಂದಿ ಇಸ್ರಾಯೇಲ್ಯರು ಇದ್ದರು (1 ಅರಸು. 19:18) . ಅದು ಬಹಳ ದಿಟ್ಟವಾದ ಮತ್ತು ಶ್ಲಾಘನೀಯವಾದ ನಿಲುವು ಆಗಿತ್ತು. ಹಾಗಿದ್ದರೂ ಅವರದ್ದು ಕೇವಲ ನಿರಾಕರಿಸುವ ಸಾಕ್ಷಿಯಾಗಿತ್ತು: ಅವರು ವಿಗ್ರಹಗಳನ್ನು ಪೂಜಿಸಲಿಲ್ಲ. ಇದು ಇಂದಿನ ದಿವಸ ಅನೇಕ ವಿಶ್ವಾಸಿಗಳು ತೋರಿಸುವ ನಿರಾಕರಿಸುವ ಸಾಕ್ಷಿಯನ್ನು ಹೋಲುತ್ತದೆ - ಅವರು ಸಿಗರೇಟು ಸೇವಿಸುವುದಿಲ್ಲ, ಜೂಜಾಡುವುದಿಲ್ಲ, ಇತ್ಯಾದಿ. ಆದರೆ ದೇವರು ಇಸ್ರಾಯೇಲಿನಲ್ಲಿ ತನ್ನ ಉದ್ದೇಶಗಳನ್ನು ಪೂರ್ಣಗೊಳಿಸುವದಕ್ಕಾಗಿ ಆ 7000 ಮಂದಿಯಲ್ಲಿ ಒಬ್ಬನನ್ನಾದರೂ ಉಪಯೋಗಿಸಿಕೊಳ್ಳಲು ಆಗಲಿಲ್ಲ. ಆ ಕೆಲಸಕ್ಕೆ, ದೇವರಿಗೆ ಒಬ್ಬ ಎಲೀಯನು ಬೇಕಾಗಿದ್ದನು. ಅಹಾಬನು ಆ 7000 ಮಂದಿ "ವಿಶ್ವಾಸಿಗಳಿಗೆ" ಭಯಪಡಲಿಲ್ಲ. ಆದರೆ ಆತನು ಎಲೀಯನಿಗೆ ಭಯಪಡುತ್ತಿದ್ದನು. ಈ 7000 ಮಂದಿ ಖಂಡಿತವಾಗಿ ದೇವರೊಡನೆ ಪ್ರಾರ್ಥಿಸುತ್ತಿದ್ದರು; ಆದರೆ ಆ ಪ್ರಾರ್ಥನೆಗಳು ಆಕಾಶದಿಂದ ಬೆಂಕಿಯನ್ನು ಬೀಳಿಸಲಿಲ್ಲ. ಎಲೀಯನ ಪ್ರಾರ್ಥನೆಯಿಂದ ಅದು ನಡೆಯಿತು. ಎಲ್ಲಾ ವಿಶ್ವಾಸಿಗಳ ಪ್ರಾರ್ಥನೆಗಳಿಗೂ ದೇವರ ಸಾನ್ನಿಧ್ಯದಿಂದ ಒಂದೇ ರೀತಿಯ ಉತ್ತರ ಸಿಗುವದಿಲ್ಲ. ಎಲೀಯನ ಕುರಿತಾಗಿ ಸತ್ಯವೇದದಲ್ಲಿ ಹೇಳಿರುವ ಮಾತು, "ನೀತಿವಂತನ ಅತ್ಯಾಸಕ್ತಿಯುಳ್ಳ ವಿಜ್ಞಾಪನೆಯು ಬಹು ಬಲವಾಗಿದೆ (ಯಾಕೋಬ. 5:17,16) . ಆ ಒಬ್ಬ ಮನುಷ್ಯನು ಯಾರ ಸಹಾಯವೂ ಇಲ್ಲದೆ, ಒಂದು ಇಡೀ ಜನಾಂಗವನ್ನು ದೇವರ ಕಡೆಗೆ ತಿರುಗಿಸಿದನು, ದುಷ್ಟ ಶಕ್ತಿಗಳನ್ನು ಸೋಲಿಸಿದನು ಮತ್ತು ಬಾಳನ ಎಲ್ಲಾ ಪ್ರವಾದಿಗಳನ್ನು ಸಂಹರಿಸಿದನು. ಈ ದಿನವೂ ಸಹ, ದೇವರು ತನ್ನ ಉದ್ದೇಶಗಳನ್ನು ಪೂರೈಸುವದು, ಜನರ ಒಂದು ದೊಡ್ಡ ಗುಂಪಿನ ಮೂಲಕವಾಗಿ ಅಲ್ಲ, ಅದು ಒಬ್ಬ ನಿಷ್ಠಾವಂತ ಮನುಷ್ಯನ ಮೂಲಕವಾಗಿ ನೆರವೇರುತ್ತದೆ.

ಎಲೀಷನು: ಎಲೀಯನ ಸಮಯದಲ್ಲಿ ಐವತ್ತು ಜನ "ಪ್ರವಾದಿ ಮಂಡಲಿಯವರು" (ಆಗಿನ ಬೈಬಲ್ ಕಾಲೇಜಿನ ವಿಧ್ಯಾರ್ಥಿಗಳು) ತಾವೂ ಸಹ ಒಂದು ದಿನ ಪ್ರವಾದಿಗಳಾಗುವ ನಿರೀಕ್ಷೆಯನ್ನು ಇರಿಸಿಕೊಂಡಿದ್ದರು. ಆದರೆ ದೇವರ ಪವಿತ್ರಾತ್ಮನು ಅವರನ್ನು ಮುಟ್ಟದೆ ಬಳಸಿಕೊಂಡು ಹೋಗಿ, "ಪ್ರವಾದಿ ಮಂಡಲಿಯ ಸದಸ್ಯನಾಗಿರದ" ಎಲೀಷನ ಮೇಲೆ ಬಂದನು (2 ಅರಸು. 2:7,15) . ಇಸ್ರಾಯೇಲಿನಲ್ಲಿ ಎಲೀಷನು ಒಬ್ಬ ಸೇವಕನ ರೂಪದಲ್ಲೇ ಎಲ್ಲರಿಗೆ ಪರಿಚಿತನಾಗಿದ್ದನು - "ಎಲೀಯನ ಕೈಗೆ ನೀರು ಕೊಡುತ್ತಿದ್ದವನು" (2 ಅರಸು. 3:11). ಅರಾಮ್ಯರ ಅರಸನು ತನ್ನ ಸೈನ್ಯದೊಡನೆ ಬಂದು ಇಸ್ರಾಯೇಲ್ನೆ ಮೇಲೆ ದಾಳಿ ಮಾಡಿದಾಗ, ಈ ಐವತ್ತು ಸತ್ಯವೇದ ಪಂಡಿತರಲ್ಲಿ ಒಬ್ಬನೂ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ - ಏಕೆಂದರೆ ಅವರು ತಮ್ಮ ವೇದ ಶಾಲೆಯಲ್ಲಿ ಮೋಶೆಯ ಧರ್ಮಶಾಸ್ತ್ರವನ್ನು ಅಧ್ಯಯನ ಮಾಡಿರಬಹುದು, ಆದರೆ ಅವರು ದೇವರನ್ನು ಅರಿತಿರಲಿಲ್ಲ. ಎಲೀಷನೊಬ್ಬನೇ ಇಡೀ ಇಸ್ರಾಯೇಲಿನಲ್ಲಿ ದೇವರೊಡನೆ ನಿಕಟ ಸಂಬಂಧವನ್ನು ಹೊಂದಿದ್ದನು, ಹಾಗಾಗಿ ಆತನು ಅರಾಮ್ಯರು ಯಾವ ಕಡೆಯಿಂದ ದಾಳಿ ಮಾಡಲಿದ್ದಾರೆ ಎಂಬುದನ್ನು ಇಸ್ರಾಯೇಲ್ಯರ ಅರಸನಿಗೆ ಮೊದಲೇ ತಿಳಿಸಿ, ಅವರು ಜಾಗರೂಕತೆಯಿಂದ ಇರುವಂತೆ ಎಚ್ಚರಿಸಲು ಸಾಧ್ಯವಾಯಿತು. ಇಂದಿನ ದಿನವೂ, ಒಬ್ಬ ಪ್ರವಾದಿಯ ಮುಖ್ಯ ಕರ್ತವ್ಯವು ಇಂಥದ್ದೇ ಆಗಿರುತ್ತದೆ: ಸೈತಾನನು ಎಲ್ಲಿಂದ ದೇವಜನರ ಮೇಲೆ ದಾಳಿ ಮಾಡಲಿದ್ದಾನೆ ಎಂಬುದಾಗಿ ಅವರನ್ನು ಮೊದಲೇ ಎಚ್ಚರಿಸುವದು. ಇಂದು ಒಂದು ಸಭೆಯಲ್ಲಿ ಎಲೀಷನಂತಹ ಒಬ್ಬ ಪ್ರವಾದಿಯು, ಐವತ್ತು ಮಂದಿ ಬೋಧಕರಿಗಿಂತ ("ಪ್ರವಾದಿ ಮಂಡಲಿಯವರು") ಹೆಚ್ಚಾಗಿ ದೇವಜನರನ್ನು ಆತ್ಮಿಕ ಅನಾಹುತದಿಂದ ಕಾಪಾಡುತ್ತಾನೆ. ದೇವರಾತ್ಮನ ಧ್ವನಿಯನ್ನು ಕೇಳಿಸಿಕೊಳ್ಳಲಾರದ ಒಬ್ಬ ಮನುಷ್ಯನಲ್ಲಿ ಸತ್ಯವೇದ ಜ್ಞಾನವು ಯಾವ ಉಪಯೋಗವೂ ಇಲ್ಲದ್ದಾಗಿದೆ. ದೇವರ ಧ್ವನಿಯನ್ನು ಕೇಳಿಸಿಕೊಳ್ಳುವ ಒಬ್ಬ ಮನುಷ್ಯನು ಮಾತ್ರವೇ ಒಂದು ಸಭೆಯನ್ನು ಸೈತಾನನ ಕುತಂತ್ರಗಳಿಂದ ಮತ್ತು ದಾಳಿಗಳಿಂದ ರಕ್ಷಿಸಬಲ್ಲನು. ಪೂರ್ವ ಕಾಲದಲ್ಲಿ ಪ್ರವಾದಿಗಳಿಗೆ "ದರ್ಶಿಗಳು" ಎಂಬ ಇನ್ನೊಂದು ಹೆಸರಿತ್ತು ("ದೇವರು ಕೊಡುವ ದೂರದೃಷ್ಟಿಯ ಮೂಲಕ ಮುಂದೆ ನಡೆಯಲಿರುವ ಸಂಗತಿಯನ್ನು ಮೊದಲೇ ನೋಡುವಂಥವನು"- 1 ಸಮುವೇಲ. 9:9) . ಅವರಿಗೆ ವೈರಿಯ ದಾಳಿಯು ಎಲ್ಲಿಂದ ಬರಲಿದೆಯೆಂದು ತಿಳಿದಿತ್ತು, ಮತ್ತು ಒಂದು ಮಾರ್ಗವನ್ನು ಅನುಸರಿಸುವುದರಲ್ಲಿ ಇರುವ ಅಪಾಯಗಳು ಯಾವುವು ಎಂದು ಮೊದಲೇ ಗೊತ್ತಾಗುತ್ತಿತ್ತು. ಇಂದು ದೇವಸಭೆಗೆ ಇಂತಹ ದೀರ್ಘದರ್ಶಿಗಳ ಅವಶ್ಯಕತೆ ಬಹಳವಾಗಿದೆ.

ದಾನಿಯೇಲನು: ದೇವರು ಇಸ್ರಾಯೇಲ್ಯರನ್ನು ಐಗುಪ್ತದೇಶದಿಂದ ಕಾನಾನ್ದೇಗಶಕ್ಕೆ ಕರೆತರಲು ಬಯಸಿದಾಗ, ಅದಕ್ಕಾಗಿ ಅವರಿಗೆ ಒಬ್ಬ ಮನುಷ್ಯನು ಬೇಕಾಗಿದ್ದನು. ಅವರಿಗೆ ಮೋಶೆಯು ಸಿಕ್ಕಿದನು. ಹಾಗೆಯೇ ಅವರು ಯೆಹೂದ್ಯರನ್ನು ಬಾಬೆಲಿನಿಂದ ಯೆರೂಸಲೇಮಿಗೆ ಕರೆತರಲು ಬಯಸಿದಾಗ, ಅವರಿಗೆ ಇನ್ನೊಬ್ಬ ಮನುಷ್ಯನ ಅವಶ್ಯಕತೆಯಿತ್ತು. ಅವರಿಗೆ ದಾನಿಯೇಲನು ಸಿಕ್ಕಿದನು. ದಾನಿಯೇಲನು ತನ್ನ ಯೌವನ ಪ್ರಾಯದಿಂದಲೇ ನಂಬಿಗಸ್ಥನಾಗಿದ್ದನು ಮತ್ತು ತನಗೆ ಬಂದ ಒಂದೊಂದು ಶೋಧನೆಯನ್ನೂ ಶ್ರೇಷ್ಠ ರೀತಿಯಲ್ಲಿ ಜಯಿಸಿದನು. ಬಾಬೆಲಿನಲ್ಲಿ ಆತನು ಹದಿಹರೆಯದ ಯೌವನಸ್ಥನಾಗಿದ್ದಾಗ, ತನ್ನ ಕರ್ತನಿಗಾಗಿ ದೃಢವಾಗಿ ನಿಂತನು. "ದಾನಿಯೇಲನು ತನ್ನನ್ನು ಅಶುದ್ಧ ಮಾಡಿಕೊಳ್ಳಬಾರದೆಂದು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡನು" (ದಾನಿಯೇಲ. 1:8) - ಎಲ್ಲಾ ಯುವಜನರು ನೆನಪಿಟ್ಟುಕೊಳ್ಳಬಹುದಾದ ಒಂದು ವಚನ ಇದಾಗಿದೆ. ಇತರ ಎಲ್ಲಾ ಯೆಹೂದ್ಯ ಯುವಕರು ರಾಜನಿಗೆ ಭಯಪಟ್ಟು ಆತನು ತಮಗಾಗಿ ಏರ್ಪಡಿಸಿದ್ದ ಎಲ್ಲಾ ಆಹಾರ ಪಾನಗಳನ್ನು ಉಂಡಾಗ (ಅದು ಯಾಜಕಕಾಂಡದಲ್ಲಿ ಅಯೋಗ್ಯ ಆಹಾರವೆಂದು ದೇವರು ನಿಷೇಧಿಸಿದ್ದ ಆಹಾರವಾಗಿತ್ತು), ದಾನಿಯೇಲನೊಬ್ಬನೇ ಅದನ್ನು ತಿನ್ನಲು ನಿರಾಕರಿಸಿದನು. ಆ ದಿನ ಅದೇ ಊಟದ ಮೇಜಿನಲ್ಲಿ ಕುಳಿತಿದ್ದ ಮೂರು ಯುವಜನರು, ದಾನಿಯೇಲನ ನಿಲುವನ್ನು ನೋಡಿ, ತಾವೂ ಸಹ ಅವನೊಡನೆ ಸೇರಿಕೊಂಡರು. ದಾನಿಯೇಲ ಮತ್ತು ಆ ಮೂವರು ಬಾಬೆಲಿನಲ್ಲಿ ಬಲವಾದ ಪ್ರಭಾವ ಬೀರುವಂತಹ ದೇವಜನರಾದರು. 70 ವರ್ಷಗಳ ತರುವಾಯ, ದಾನಿಯೇಲನಿಗೆ ಸುಮಾರು 90ರ ವಯಸ್ಸಾದಾಗ, ಆತನ ಪ್ರಾರ್ಥನೆಗಳ ಮೂಲಕ ಯೆಹೂದ್ಯರು ಬಾಬೆಲಿನಿಂದ ಯೆರೂಸಲೇಮಿಗೆ ಹಿಂದಿರುಗುವ ಯಾತ್ರೆಯು ಶುರುವಾಯಿತು. ಇಂದಿನ ದಿನದಲ್ಲೂ ಬಾಬೆಲಿನಿಂದ (ಸುಳ್ಳಾದ ಸಭೆ) ಆತ್ಮಿಕ ಯೆರೂಸಲೇಮಿಗೆ (ಕ್ರಿಸ್ತನ ದೇಹ) ಹೋಗುವ ದೇವಜನರ ಒಂದು ಯಾತ್ರೆಯು ಸಾಗುತ್ತಿದೆ. ಇಂತಹ ಚಳುವಳಿಗಾಗಿಯೂ ಸಹ ದೇವರಿಗೆ ಜನರು ಬೇಕಾಗಿದ್ದಾರೆ. ಈ ದಿನವೂ ಸಹ, ದಾನಿಯೇಲನ ಮೂರು ಗೆಳೆಯರಾದ ಹನನ್ಯ, ಮೀಶಾಯೇಲ, ಅಜರ್ಯ, ಇವರಂತಹ ಅನೇಕ ಜನರು ಇದ್ದಾರೆ (ದಾನಿಯೇಲ. 1:11). ಅವರು ಕರ್ತನಿಗಾಗಿ ನಿಲ್ಲಲು ಉತ್ಸುಕರಾಗಿದ್ದಾರೆ, ಆದರೆ ಅವರಲ್ಲಿ ಸಾಕಷ್ಟು ಧೈರ್ಯವಿಲ್ಲ. ಅವರು ಒಬ್ಬ ದಾನಿಯೇಲನ ನೇತೃತ್ವಕ್ಕಾಗಿ ಕಾದಿದ್ದಾರೆ. ಹಾಗಾಗಿ ದೇವರು ಇನ್ನೊಮ್ಮೆ ದಾನಿಯೇಲನಂಥವರಿಗಾಗಿ ಕಾದಿದ್ದಾರೆ.

ದೇವರಿಗೆ ಒಂದೊಂದು ತಲೆಮಾರಿನಲ್ಲೂ ತನ್ನ ಹೆಸರಿನ ಪರಿಶುದ್ಧ ಸಾಕ್ಷಿಗಳು ಬೇಕಾಗಿದ್ದಾರೆ. ಆತನು ನಮ್ಮ ಈ ಪೀಳಿಗೆಯಲ್ಲೂ ತನಗಾಗಿ ಒಬ್ಬ ಸಾಕ್ಷಿಯನ್ನು ಇರಿಸದೇ ಸುಮ್ಮನಿರುವುದಿಲ್ಲ. ದೇವರಿಗೆ ಸಂಪೂರ್ಣವಾಗಿ ಒಪ್ಪಿಸಿಕೊಳ್ಳಲು ಕೊಡಬೇಕಾದ ಬೆಲೆಯನ್ನು ಈ ಜನಾಂಗದಲ್ಲಿ ನೀನು ಕೊಡುತ್ತೀಯಾ?