ನಮ್ಮ ಕ್ರೈಸ್ತ ಜೀವಿತದ ಪ್ರಗತಿಯನ್ನು ತೋರಿಸುವ ಒಂದು ರೇಖಾಚಿತ್ರವನ್ನು ನಾವು ಬರೆದರೆ, ಆ ರೇಖೆಯು ಮೇಲೂ ಕೆಳಗೂ ಹೋಗುವುದು ಕಾಣಿಸುತ್ತದೆ. ನಾವೆಲ್ಲರೂ ಈ ಅನುಭವವನ್ನು ಪಡೆದಿದ್ದೇವೆ. ಆದರೆ ವರ್ಷಗಳು ಸಾಗುತ್ತಿರುವಾಗ, ಸಾಮಾನ್ಯವಾಗಿ ಆ ರೇಖೆ ಮೊದಲಿಗಿಂತ ಹೆಚ್ಚು ಮೇಲೆ ಏರಬೇಕು. ಆ ದಾರಿಯಲ್ಲಿ ಏರು ಇಳಿತಗಳು ಹಾಗೂ ಸಮ ಮಟ್ಟದ ಪ್ರದೇಶಗಳೂ ಇದ್ದರೂ, ನಾವು ನಿಧಾನವಾಗಿ ಮೇಲಕ್ಕೆ ಏರುತ್ತಿರುತ್ತೇವೆ. ನಾವು ಮುಂದುವರಿಯುತ್ತಿದ್ದಂತೆ ನಮ್ಮ ಬೀಳುವಿಕೆ ಕಡಿಮೆಯಾಗುತ್ತದೆ ಮತ್ತು ಕ್ರಮೇಣವಾಗಿ ಸಮ ಮಟ್ಟದ ಬಯಲುಗಳು ಹೆಚ್ಚುತ್ತವೆ. ಹಠಾತ್ತಾಗಿ ಮೇಲೇರುವ ಕಡಿದಾದ ದಾರಿಗಳು ಹೆಚ್ಚಾಗಿ ಸಿಗುವುದಿಲ್ಲ - ಆದರೆ ಒಮ್ಮೊಮ್ಮೆ ಅವುಗಳು ಸಹ ಎದುರಾಗಬಹುದು. ಆದರೆ ಸಾಮಾನ್ಯವಾಗಿ ದಾರಿಯ ಏರುವಿಕೆ ಸಾಧಾರಣವಾದದ್ದು ಆಗಿರುತ್ತದೆ. ಆದರೆ ಯಾರಲ್ಲಿ ಜಯದ ಭರವಸೆ ಇಲ್ಲವೋ, ಅಥವಾ ಯಾರು ಜಯಕ್ಕಾಗಿ ಸೆಣಸಾಡುವುದಿಲ್ಲವೋ, ಅವರ ಪ್ರಗತಿಯ ರೇಖಾಚಿತ್ರವು ಕೆಳಮುಖವಾಗಿ ಸಾಗುತ್ತದೆ - ಯಾಕೆಂದರೆ, ಅವರಲ್ಲಿ ದೇವರ ಭಯ ಇರುವುದಿಲ್ಲ ಮತ್ತು ಅವರು ದೇವರ ವಾಗ್ದಾನಗಳನ್ನು ನಂಬುವುದಿಲ್ಲ.
ಪಾಪವನ್ನು ಗಂಭೀರವಾಗಿ ಪರಿಗಣಿಸಿರಿ ಮತ್ತು ಪ್ರತಿಯೊಂದು ಸೋಲಿಗಾಗಿ ದುಃಖಿಸಿ ಮರುಗಿರಿ. ಹಾಗೆ ಮಾಡಿದಾಗ ನಿಜವಾದ ದೇವಭಯವು ನಿಮ್ಮಲ್ಲಿ ಇದೆಯೆಂದು ನಿಮಗೆ ತಿಳಿಯುತ್ತದೆ. ನಾನು ಆಗಾಗ್ಗೆ ಹೀಗೆ ಹೇಳುವದನ್ನು ನೀವು ಕೇಳಿದ್ದೀರಿ, "ನಾವು ಪಾಪದಲ್ಲಿ ಬೀಳುತ್ತೇವೆ ಎಂಬ ಅಂಶಕ್ಕಿಂತ ಹೆಚ್ಚು ಗಂಭೀರವಾದ ವಿಷಯ, ಪಾಪದಲ್ಲಿ ಬಿದ್ದ ನಂತರ ನಾವು ದುಃಖಿಸುವುದಿಲ್ಲ ಎಂಬ ಅಂಶ." ನೀವು ಪಾಪದಲ್ಲಿ ಬಿದ್ದ ತಕ್ಷಣ (ಅಥವಾ ನೀವು ಯಾವುದೇ ರೀತಿಯಲ್ಲಿ ದೇವರನ್ನು ದುಃಖ ಪಡಿಸಿದ ಕೂಡಲೆ), ಪಶ್ಚಾತಾಪ ಪಡಬೇಕು ಮತ್ತು ದುಃಖಿಸಬೇಕೆಂದು ನಾನು ಹಾಕಿರುವ ಸವಾಲು ನಿಮಗೆ ಮನದಟ್ಟಾದರೆ, ನಾನು ನನ್ನ ಕರ್ತವ್ಯವನ್ನು ಪೂರೈಸಿದ್ದೇನೆ.
ಎಲೀಷನ ಬಳಿಗೆ ತನ್ನ ಅಗತ್ಯತೆಯಲ್ಲಿ ಬಂದ ವಿಧವೆಗೆ (2 ಅರಸು. 4), ಆಕೆಯ ನೆರೆಹೊರೆಯವರಿಂದ ಪಾತ್ರೆಗಳನ್ನು ಕೇಳಿಕೊಂಡು ಬರುವಂತೆ ಮತ್ತು ಆಕೆಯ ಬಳಿ ಉಳಿದಿದ್ದ ಎಣ್ಣೆಯನ್ನು ಚಿಕ್ಕ ಲೋಟದಲ್ಲಿ ಸುರಿದು ಆ ಪಾತ್ರೆಗಳಲ್ಲಿ ತುಂಬಿಸುವಂತೆ ಹೇಳಲಾಯಿತು. ಅವಳು ತನ್ನ ಸಾಲವನ್ನು ಹೇಗೆ ತೀರಿಸುವುದೆಂದು ತಿಳಿದುಕೊಂಡಳು. ಅವಳು ಅದನ್ನೇ ಮಾಡಿದಳು. ಕೊನೆಯಲ್ಲಿ ಆಕೆಯ ಮಕ್ಕಳು, "ಇನ್ನೂ ತುಂಬಲು ಯಾವುದೇ ಪಾತ್ರೆಗಳು ಇಲ್ಲ," ಎಂದು ಹೇಳಿದರು. ಆಗ ನಾವು ಒಂದು ಹೇಳಿಕೆಯನ್ನು ಓದುತ್ತೇವೆ: "ಕೂಡಲೇ ಉಕ್ಕಿ ಹರಿಯುತ್ತಿದ್ದ ಎಣ್ಣೆಯು ನಿಂತುಹೋಯಿತು".
ಇಲ್ಲಿ ಎಣ್ಣೆಯನ್ನು ಪವಿತ್ರಾತ್ಮನಿಗೆ ಹೋಲಿಸಲಾಗಿದೆ. ಮತ್ತು ಪವಿತ್ರಾತ್ಮನ ದೀಕ್ಷಾಸ್ನಾನದಲ್ಲಿ (ತುಂಬುವಿಕೆ) ಇದೇ ರೀತಿಯ ಅನುಭವ ಹಲವರಿಗೆ ಸಿಕ್ಕುತ್ತದೆ. ಅವರು ಆರಂಭದಲ್ಲಿ ನಿಜವಾಗಿ ಪವಿತ್ರಾತ್ಮ ಭರಿತರಾಗಿರುತ್ತಾರೆ. ಆದರೆ ಸ್ವಲ್ಪ ಸಮಯದ ನಂತರ ಅವರಲ್ಲಿ ಅನೇಕರು, ಇನ್ನು ಮೇಲೆ ಇಂತಹ ತುಂಬುವಿಕೆ ಅಗತ್ಯವಿಲ್ಲ (ಎಣ್ಣೆಯನ್ನು ತುಂಬುವುದಕ್ಕೆ ಪಾತ್ರೆಗಳು ಉಳಿದಿಲ್ಲ) ಎಂಬ ಭಾವನೆಯನ್ನು ಹೊಂದುತ್ತಾರೆ. ಇದರಿಂದಾಗಿ ಪವಿತ್ರಾತ್ಮನು ಅವರ ಬದುಕಿನಲ್ಲಿ ಕಾರ್ಯ ಮಾಡುವುದನ್ನು ನಿಲ್ಲಿಸುತ್ತಾನೆ. ನಮ್ಮ ಜೀವಿತದ ಯಾವ ಕ್ಷೇತ್ರಗಳು ಕ್ರಿಸ್ತನನ್ನು ಹೋಲುವುದಿಲ್ಲವೋ, ಅವುಗಳು ಖಾಲಿ ಪಾತ್ರೆಗಳೆಂದು ಹೇಳಬಹುದು. ಪವಿತ್ರಾತ್ಮನ ಸಂಪೂರ್ಣ ತುಂಬುವಿಕೆ - ಕೇವಲ ಸ್ವಲ್ಪ ಭಾಗ ಅಲ್ಲ - ನಮ್ಮೆಲ್ಲರ ಬದುಕಿನ ಬಹಳಷ್ಟು ಕ್ಷೇತ್ರಗಳಲ್ಲಿ ಅವಶ್ಯವಾಗಿದೆ.
ಜೀವನದ ಕೆಲವು ಕ್ಷೇತ್ರಗಳಲ್ಲಿ ನಿಮಗೆ ಪಾಪದ ಮೇಲೆ ಜಯ ಸಿಕ್ಕಿರಬಹುದು, ಆದರೆ ಇದು ಪಾತ್ರೆಗಳನ್ನು ಕೇವಲ ಅರೆವಾಸಿ ತುಂಬಿರುವುದಾಗಿದೆ - ಯಾಕೆಂದರೆ ಕ್ರಿಸ್ತನ ಸ್ವಭಾವವನ್ನು ಹೊಂದುವುದು (ದೈವಿಕ ಸ್ವಭಾವದಲ್ಲಿ ಪಾಲ್ಗೊಳ್ಳುವುದು) ಪಾಪದ ಮೇಲೆ ಜಯಕ್ಕಿಂತಲೂ ಬಹಳ ದೊಡ್ಡ ಸಂಗತಿಯಾಗಿದೆ. ಉದಾಹರಣೆಗೆ, ಒಬ್ಬರ ಕುರಿತು ಕಹಿ ಭಾವನೆ ಇಲ್ಲದಿರುವುದು ಮತ್ತು ಆತನನ್ನು ಪ್ರೀತಿಸುವುದರ ನಡುವೆ ತುಂಬಾ ವ್ಯತ್ಯಾಸವಿದೆ. ಮೊದಲನೆಯದು ಕೇವಲ ನಕಾರಾತ್ಮಕವಾದದ್ದು (ಪಾಪದ ಮೇಲೆ ಜಯ). ಎರಡನೆಯದ್ದು ಸಕಾರಾತ್ಮಕವಾದದ್ದು (ದೈವಿಕ ಸ್ವಭಾವ). ಅದೇ ರೀತಿ, ಕೋಪಿಸದೇ ಇರುವುದು ಮತ್ತು ಒಳ್ಳೆಯ ಮಾತುಗಳನ್ನಾಡಿ ಆಶೀರ್ವದಿಸುವುದರ ನಡುವೆ ತುಂಬಾ ವ್ಯತ್ಯಾಸವಿದೆ. ಅದೇ ರೀತಿ ಬೇರೆ ಹಲವು ಕ್ಷೇತ್ರಗಳಲ್ಲೂ ಕೂಡ ಇರುತ್ತದೆ. ನಾವು ಯಾವುದೋ ಕ್ಷೇತ್ರದಲ್ಲಿ ಪಾಪವನ್ನು ಜಯಿಸಿದ್ದೇವೆಂದು ಸಂತೃಪ್ತರಾದರೆ, ಆಗ "ನಮ್ಮ ಬಳಿ ಯಾವ ಪಾತ್ರೆಯೂ ಖಾಲಿ ಇಲ್ಲ" ಎಂದು ಯೋಚಿಸುತ್ತೇವೆ ಮತ್ತು ವಿಶ್ರಮಿಸುತ್ತೇವೆ. ಆ ಸಮಯದಲ್ಲಿ ಎಣ್ಣೆ ಹರಿಯುವುದು ನಿಂತುಹೋಗುತ್ತದೆ - ಮತ್ತು ನಾವು ಹಿಂಜರಿಯಲು ಪ್ರಾರಂಭಿಸುತ್ತೇವೆ.
ನಾವು ಸ್ವತಃ ನಮ್ಮ ಜೀವನದಲ್ಲಿ ನಿರಂತರವಾಗಿ ಪಶ್ಚಾತಾಪ ಪಡುತ್ತಿರಬೇಕು, ಮತ್ತು ಇತರರನ್ನು ನ್ಯಾಯತೀರ್ಪು ಮಾಡಬಾರದು. ನಮ್ಮ ಒಂದೇ ಕರ್ತವ್ಯ ಏನೆಂದರೆ, ನಮ್ಮಲ್ಲಿ ತುಂಬಿಸಲಿಕ್ಕೆ ಸಿದ್ಧವಾಗಿರುವ ಖಾಲಿ ಪಾತ್ರೆಗಳು ಇವೆಯೆಂದು ನೋಡಿಕೊಳ್ಳುವುದು. ನಾವು ಹೀಗೆ ಮಾಡುವುದರ ಮೂಲಕ ಮಾತ್ರವೇ (ಆ ವಿಧವೆಯ ಹಾಗೆ) ನಮ್ಮ ಸಾಲವನ್ನು ತೀರಿಸಬಹುದು. ’ರೋಮಾಪುರದವರಿಗೆ 13:8'ರಲ್ಲಿ ನಾವು ಹೊಂದಿರುವ ಋಣ ಏನೆಂದು ವಿವರಿಸಲಾಗಿದೆ - "ಎಲ್ಲಾ ಜನರನ್ನು ಪ್ರೀತಿಸಬೇಕೆಂಬ ಋಣವೇ ನಾವು ತೀರಿಸಬೇಕಾದ ಸಾಲವಾಗಿದೆ". ನಾವು ಈ ರೀತಿಯಾಗಿ ಬೇರೆಯವರಿಗೆ ಆಶೀರ್ವಾದವಾಗಿರಲು ಸಾಧ್ಯವಿದೆ. ಪ್ರತಿಯೊಂದು ಸನ್ನಿವೇಶವು ನಮ್ಮ ಸ್ವಾರ್ಥಭಾವದ ಯಾವುದೋ ಒಂದು ಭಾಗವನ್ನು ತೆಗೆದುಹಾಕಲು ಯೋಜಿಸಲ್ಪಟ್ಟಿದೆ, ಮತ್ತು ಆ ಮೂಲಕ ನಮ್ಮಿಂದ ಇತರರಿಗೆ ಆಶೀರ್ವಾದ ಉಂಟಾಗುತ್ತದೆ. ಮೊದಲು ನಮ್ಮೊಳಗಿನ ಖಾಲಿ ಪಾತ್ರೆಗಳು ತುಂಬಲ್ಪಡದಿದ್ದರೆ, ನಮ್ಮ ಮೂಲಕ ಇತರರು ಆಶೀರ್ವಾದವನ್ನು ಹೊಂದಲಾರರು.