"ನೀವು ಸೈತಾನನ ತಂತ್ರೋಪಾಯಗಳನ್ನು ಎದುರಿಸಿ ನಿಲ್ಲುವದಕ್ಕೆ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ" (ಎಫೆಸ 6:11).
ನಮ್ಮಲ್ಲಿ ಅನೇಕರು ಈ ವಚನವನ್ನು ಕೇಳಿಸಿಕೊಂಡಿದ್ದೇವೆ ಮತ್ತು "ರಕ್ಷಣೆಯೆಂಬ ಶಿರಸ್ತ್ರಾಣ" ಹಾಗೂ "ನೀತಿಯೆಂಬ ವಜ್ರಕವಚ" ಮುಂತಾದ ಸಾಧನಗಳ ಬಗ್ಗೆ ಓದಿದ್ದೇವೆ. ಆದರೆ ಈ ಯುದ್ಧದ ಉಪಕರಣಗಳನ್ನು ಧರಿಸಿಕೊಂಡ ಮೊದಲ ವ್ಯಕ್ತಿ ಸ್ವತಃ ಯೇಸುವೇ ಎಂಬ ವಿಷಯ ನಿಮಗೆ ತಿಳಿಯದಿರಬಹುದು:
"... ಆಗ ಉದ್ಧಾರಕನಾದ ಯಾವ ಪುರುಷನೂ ಇಲ್ಲವೆಂಬುದನ್ನು ಕಂಡು ಕರ್ತನು ಸ್ತಬ್ಧನಾದನು; ಆಗ ಆತನ ಸ್ವಹಸ್ತವೇ ಆತನಿಗೆ ರಕ್ಷಣಸಾಧನವಾಯಿತು. ... ಆತನು ನೀತಿಯನ್ನು ವಜ್ರಕವಚವನ್ನಾಗಿ ತೊಟ್ಟು, ತನ್ನ ತಲೆಯ ಮೇಲೆ ರಕ್ಷಣೆಯೆಂಬ ಶಿರಸ್ತ್ರಾಣವನ್ನು ಧರಿಸಿಕೊಂಡನು" (ಯೆಶಾಯ 59:16-17 - ಭಾವಾನುವಾದ).
ಯೇಸುವಿನ ಕುರಿತಾದ ಈ ಹಳೆಯ ಒಡಂಬಡಿಕೆಯ ಪ್ರವಾದನೆಯನ್ನು ಪೌಲನು ಎಫೆಸದವರಿಗೆ 6ರಲ್ಲಿ ಪ್ರಸ್ತಾಪಿಸಿದ್ದಾನೆ.
ಆದರೆ ಆಶ್ಚರ್ಯಕರ ಸಂಗತಿಯೆಂದರೆ, ಯೇಸುವು ದೇವರ ಮುಂದೆ ನಮಗಾಗಿ ವಿಜ್ಞಾಪನೆ ಮಾಡುವುದಕ್ಕಾಗಿ ಈ ಸರ್ವಾಯುಧಗಳನ್ನು ಧರಿಸಿಕೊಂಡನು ಎಂದು ಈ ವಚನದಲ್ಲಿ ಹೇಳಲಾಗಿದೆ. ಅದಲ್ಲದೆ ಈಗ ಆತನು ತನ್ನ ಮಾದರಿಯನ್ನು ನಾವು ಅನುಸರಿಸುವಂತೆ ನಮಗೆ ಕರೆ ನೀಡುತ್ತಾನೆ.
ದಿನನಿತ್ಯದ ಜೀವಿತದಲ್ಲಿ ಇತರರಿಗಾಗಿ ಆಯುಧಗಳನ್ನು ಹೊರುವವರು
ಹಳೆಯ ಒಡಂಬಡಿಕೆಯ ವಚನಗಳಲ್ಲಿ ಮತ್ತು ಹಿಂದಿನ ಕಾಲದ ಸಮಯದಲ್ಲಿ, ಒಬ್ಬ ಯುದ್ಧಶೂರನ ಜೊತೆಯಲ್ಲಿ ಒಬ್ಬ ಆಯುಧ ಹೊರುವವನು ಇರುತ್ತಿದ್ದನು - ಈತನು ಅಜ್ಞಾತನಾಗಿದ್ದು, ಆಯುಧಗಳನ್ನು ಹೊತ್ತುಕೊಂಡು ಹಿಂಬಾಲಿಸುತ್ತಾ ಬರುತ್ತಿದ್ದ ಸಹಾಯಕನಾಗಿದ್ದನು; ಆತನು ಅಪಾಯದ ನಡುವೆಯೂ ಯುದ್ಧವೀರನ ಜೊತೆಗೆ ಇರುತ್ತಿದ್ದನು ಮತ್ತು ಆ ಯುದ್ಧವೀರನಿಗೆ ಅವಶ್ಯವಾಗಿದ್ದ ಪ್ರತಿಯೊಂದು ಆಯುಧವನ್ನು ತಪ್ಪದೆ ಒದಗಿಸುತ್ತಿದ್ದನು. ನಾವು ನಮಗೋಸ್ಕರ ಅನುದಿನವೂ ವಿಜ್ಞಾಪನೆ ಮಾಡುತ್ತಾ ಆಯುಧಗಳನ್ನು ಹೊರುವವನಾಗಿ ಜೀವಿಸುತ್ತಿರುವ ಯೇಸುವಿನ ಪರಿಪೂರ್ಣ ಮಾದರಿಯನ್ನು (ಇಬ್ರಿಯರಿಗೆ 7:25) ಅನುಕರಿಸುತ್ತಾ, ನಮ್ಮ ಜೀವನಸಂಗಾತಿ (ಹೆಂಡತಿ ಅಥವಾ ಗಂಡ) ಮತ್ತು ಮಕ್ಕಳಿಗಾಗಿ, ಹಾಗೂ ಸಭೆಯ ಕುಟುಂಬಕ್ಕಾಗಿ ವಿಜ್ಞಾಪನೆ ಮಾಡುವಂತ ಕರೆಯನ್ನು ಸ್ವೀಕರಿಸಿ ಜೀವಿಸುವುದರ ಉತ್ತಮ ಚಿತ್ರಣ ಇದಾಗಿದೆ.
ನಾವು ನಮ್ಮ ದಿನನಿತ್ಯದ ಜೀವಿತದಲ್ಲಿ ಇಂತಹ ಹೋರಾಟಗಳನ್ನು ಕಾಣುತ್ತೇವೆ:
- ಒಬ್ಬ ಜೀವನಸಂಗಾತಿಯು ನಿರಾಶೆ ಅಥವಾ ತನ್ನ ಬಗ್ಗೆ ಕೊರಗುವಿಕೆ ಅಥವಾ ಚಿಂತೆ ಅಥವಾ ಕೆಲಸದ ಹೊರೆ ಅಥವಾ ಹಣದ ಸಮಸ್ಯೆಯ ಹೊರೆಯನ್ನು ಹೊರಲಾರದೆ ಬಳಲುತ್ತಿರುವ ಸನ್ನಿವೇಶ.
- ಒಂದು ಮಗುವು ಅಸುರಕ್ಷತೆ ಅಥವಾ ಯಾರಿಗೂ ತಿಳಿಯದಿರುವ ಪಾಪ ಅಥವಾ ಶಾಲೆಯಲ್ಲಿ ಎದುರಾದ ಕಠಿಣ ಪರಿಸ್ಥಿತಿ ಇವುಗಳ ನಿಮಿತ್ತ ಪೇಚಾಡುತ್ತಿರುವ ಸನ್ನಿವೇಶ.
- ಒಬ್ಬ ಸಹೋದರ ಅಥವಾ ಸಹೋದರಿ ಪಾಪದ ಭಾರದಿಂದ ಸೋತಿರುವುದು ಅಥವಾ ಕೆಲವೊಮ್ಮೆ ವಿಷಪೂರಿತ ಪಾಪದ ಪರಿಣಾಮವನ್ನು ಅರಿಯದೇ ಇರುವಂತ ಸನ್ನಿವೇಶ.
ಇಂತಹ ಸಂದರ್ಭಗಳಲ್ಲಿ ನಾವು ಅವರನ್ನು ದೂರದಿಂದ ಟೀಕಿಸುವುದು ಸರಿಯಲ್ಲ, ಆದರೆ ನಾವು ಅವರಿಗಾಗಿ ಆಯುಧ ಹೊರುವ ಸೇವಕರಾಗಿ ಹೀಗೆ ಹೇಳಬೇಕು, "ನಿನ್ನ ಹೋರಾಟ ನನ್ನ ಹೋರಾಟವಾಗಿದೆ. ನಿನ್ನ ಬಲಹೀನತೆ ನನ್ನ ಬಲಹೀನತೆಯಾಗಿದೆ. ನನ್ನ ಜೊತೆಯಲ್ಲಿ ಯೇಸುವು ನಿಂತ ಹಾಗೆ, ನಿನ್ನ ಜೊತೆಯಲ್ಲಿ ನಾನು ನಿಲ್ಲುತ್ತೇನೆ."
"ಕಾವಲುಗಾರರು ಮತ್ತು ಆಯುಧಗಳನ್ನು ಹೊರುವವರಾಗಿ - ಪ್ರೀತಿಯಿಂದ ವಿಜ್ಞಾಪನೆ ಮಾಡುವ ಜನರನ್ನಾಗಿ - ಕರ್ತನು ನಮ್ಮನ್ನು ಪರಿವರ್ತಿಸಲಿ”
ವಿಜ್ಞಾಪನೆ ಮಾಡುವಂತ ಪ್ರೀತಿಯ ಲಕ್ಷಣ #1: ನಾನು ನೂರಕ್ಕೆ ನೂರರಷ್ಟು ನಿನ್ನ ಜೊತೆಗಿರುತ್ತೇನೆ
1 ಸಮುವೇಲನು 14ರಲ್ಲಿ, ಯೋನಾತಾನನು ಆಯುಧಗಳನ್ನು ಹೊರುವ ತನ್ನ ಸೇವಕನೊಂದಿಗೆ ಪರ್ವತದ ಅಪಾಯಕರ ಮಾರ್ಗದ ಮೂಲಕ ಕಡಿದಾದ ಎರಡು ಕೋಡುಗಲ್ಲುಗಳನ್ನು ಏರಿ, ನಂಬಿಕೆಯ ಬಲದಿಂದ ಫಿಲಿಷ್ಟಿಯರ ಕಾವಲುದಂಡಿನ ಮೇಲೆ ದಾಳಿಮಾಡಿದ ಸಂದರ್ಭದಲ್ಲಿ, "ಒಂದು ವೇಳೆ ಸ್ವತಃ ಕರ್ತನೇ ನಮಗೋಸ್ಕರ ಕಾರ್ಯನಡಿಸುವನು, ಏಕೆಂದರೆ ಬಹುಜನರಿಂದಾದರೂ ಸ್ವಲ್ಪಜನರಿಂದಾದರೂ ರಕ್ಷಿಸುವುದು ಕರ್ತನಿಗೆ ಅಸಾಧ್ಯವಲ್ಲ," ಎಂದು ಹೇಳಿದನು (1 ಸಮುವೇಲನು 14:6). ಇದಕ್ಕೆ ಉತ್ತರಿಸುತ್ತಾ ಅವನ ಆಯುಧಗಳನ್ನು ಹೊರುವವನು ನುಡಿದ ಮಾತು ನಿಜವಾಗಿಯೂ ಅದ್ಭುತಕರವಾಗಿದೆ: "ನಿನ್ನ ಮನಸ್ಸಿನಂತೆ ಮಾಡು; ನಾನು ಸಂಪೂರ್ಣವಾಗಿ ನಿನ್ನ ಕೋರಿಕೆಯ ಹಾಗೆ ನಡೆದುಕೊಳ್ಳುತ್ತೇನೆ" (1 ಸಮುವೇಲನು 14:7 -NLT ಅನುವಾದ).
ಹೆಂಡತಿ : ನಿನ್ನ ಗಂಡನು ಒಂದು ಆತ್ಮಿಕ ಹೋರಾಟದಲ್ಲಿ ತೊಡಗಿರುವಾಗ, ನಿನ್ನ ಪ್ರತಿಕ್ರಿಯೆ "ನಾನು ಸಂಪೂರ್ಣವಾಗಿ ನಿನ್ನ ಜೊತೆಯಲ್ಲಿದ್ದೇನೆ" ಎಂಬುದಾಗಿದೆಯೋ, ಅಥವಾ ನೀನು ಸಂಶಯ ಮತ್ತು ಭಯದ ಬೀಜವನ್ನು ಬಿತ್ತುತ್ತೀಯೋ?
- ಗಂಡ : ನಿನ್ನ ಹೆಂಡತಿ ಕಷ್ಟಪಡುತ್ತಿರುವಾಗ, ನೀನು ದೂರದಿಂದ ಟೀಕಿಸುತ್ತೀಯೋ, ಅಥವಾ ಆಕೆಯ ನ್ಯೂನ್ಯತೆ ಅಥವಾ ಬಲಹೀನತೆ ನಿನ್ನ ಸ್ವಂತ ಬಲಹೀನತೆಯೆಂದು ತಿಳಿದು ಆಕೆಯ ಸಹಾಯಕ್ಕೆ ಮುಂದಾಗುತ್ತೀಯೋ?
- ಸಹೋದರರು ಮತ್ತು ಸಹೋದರಿಯರು : ನಿಮ್ಮ ಸಭಾಹಿರಿಯರು ಕರ್ತನಲ್ಲಿ ಭರವಸೆಯಿಟ್ಟು ಒಂದು ಕಷ್ಟಕರ ಸನ್ನಿವೇಷವನ್ನು ನಿಭಾಯಿಸುತ್ತಿರುವಾಗ ಅಥವಾ ಗಂಭೀರವಾದ ನಿರ್ಣಯಗಳನ್ನು ಕೈಗೊಳ್ಳುವಾಗ, ನೀವು ಆಯುಧಗಳನ್ನು ಹೊರುವ ಸೇವಕರಾಗಿ ಅವರನ್ನು ಬಲಪಡಿಸುತ್ತೀರಾ, ಅಥವಾ ದೂರದಲ್ಲಿ ನಿಂತುಕೊಂಡು ಟೀಕಿಸುತ್ತೀರಾ?
ಯೇಸುವು ದೂಷಣೆಯ ಆತ್ಮದ ವಿರುದ್ಧವಾಗಿ ನಮ್ಮನ್ನು ಎಚ್ಚರಿಸುತ್ತಾನೆ : ನಾವು ನಮ್ಮ ಸಹೋದರನ ಕಣ್ಣಿನ ರವೆಯನ್ನು (ಧೂಳು ಅಥವಾ ಕಸ) ಕಂಡುಹಿಡಿಯುತ್ತೇವೆ, ಆದರೆ ನಮ್ಮ ಕಣ್ಣಿನ ತೊಲೆಯನ್ನು ಗಮನಿಸುವುದಿಲ್ಲ (ಮತ್ತಾ. 7:3-5). ಆದರೆ ಕಣ್ಣಿನಿಂದ ದೂಷಣೆಯ ತೊಲೆಯನ್ನು ತೆಗೆದುಹಾಕುವುದರೊಂದಿಗೆ ಈ ವೃತ್ತಾಂತ ಕೊನೆಗೊಳ್ಳುವುದಿಲ್ಲ. ನಾವು ದೂಷಣೆಯ ಆತ್ಮವನ್ನು ತ್ಯಜಿಸಿದ ನಂತರ, ನಮ್ಮ ಸಹೋದರನ ಕಣ್ಣಿನ ರವೆಯನ್ನು ತೆಗೆದುಹಾಕುವುದರೊಂದಿಗೆ ಅದು ಕೊನೆಗೊಳ್ಳುತ್ತದೆ. ಸಹೋದರನ ಕಣ್ಣಿನ ರವೆ ನಮ್ಮ ಕಣ್ಣಿನ ರವೆಯಂತೆ, ಎಂಬ ನಿಲುವನ್ನು ನಾವು ತೆಗೆದುಕೊಂಡಾಗ ಮಾತ್ರ ಇದು ಸಾಧ್ಯವಾಗುತ್ತದೆ. "ಹತ್ತಿಕೊಳ್ಳುವ ಪಾಪವನ್ನು ನಾವು ತೆಗೆದಿಟ್ಟು ... ಯೇಸುವಿನ ಮೇಲೆ ದೃಷ್ಟಿಯಿಟ್ಟು ... ಒಂದಾಗಿ ಓಟವನ್ನು ಓಡೋಣ" (ಇಬ್ರಿಯರಿಗೆ 12:1-2 - ಭಾವಾನುವಾದ). ನಿನ್ನ ಭಾರವು ಕೇವಲ ನಿನ್ನದಾಗಿಲ್ಲ, ಅದು ಈಗ ನಮ್ಮ ಭಾರವಾಗಿದೆ.
ಯಾಕೋಬನು 5:20ರ ವಚನ, "ಒಬ್ಬ ಪಾಪಿಯನ್ನು ತಪ್ಪಾದ ಮಾರ್ಗದಿಂದ ತಿರುಗಿಸಿದವನು ಅವನ ಪ್ರಾಣವನ್ನು ಮರಣದಿಂದ ತಪ್ಪಿಸಿ ಬಹುಪಾಪಗಳನ್ನು ಮುಚ್ಚಿದವನಾಗಿದ್ದಾನೆ," ಎಂದು ಹೇಳುತ್ತದೆ. ಅನೇಕ ಪಾಪಗಳನ್ನು ಪ್ರೀತಿಯು ಮುಚ್ಚುವ ವಿಧಾನ ಇದಾಗಿದೆ (1 ಪೇತ್ರನು 4:8). ಪ್ರೀತಿಯು ಪಾಪವನ್ನು ನಿರ್ಲಕ್ಷಿಸುವುದಿಲ್ಲ; ಅದು ಮಾನಸಾಂತರಕ್ಕಾಗಿ ಮತ್ತು ಪಾಪ ವಿಮೋಚನೆಗಾಗಿ ಹೋರಾಡುತ್ತದೆ.
ಯೂದನು 22-23ರ ವಚನ, "ಸಂದೇಹಪಡುವ ಕೆಲವರಿಗೆ ಕರುಣೆಯನ್ನು ತೋರಿಸಿರಿ; ಅವರನ್ನು ಬೆಂಕಿಯ ಬಾಯೊಳಗಿಂದ ಎಳಕೊಂಡು ರಕ್ಷಿಸಿರಿ... ಕರುಣಿಸುವಾಗ ಭಯಯುಕ್ತಿಯುಳ್ಳವರಾಗಿರಿ; ಹೊಲಸು ನಡತೆಯಿಂದ ಮೈಲಿಗೆಯಾದ ಅವರ ಅಂಗಿಯನ್ನೂ ಅಸಹ್ಯಿಸಿರಿ." ಪ್ರೀತಿಯ ವಿಜ್ಞಾಪನೆಯು ಪಾಪದ ಸಹವಾಸದಿಂದ ಭ್ರಷ್ಟನಾಗುವುದರ ಬಗ್ಗೆ ಎಚ್ಚರ ವಹಿಸುತ್ತದೆ, ಆದಾಗ್ಯೂ ಅದು ಕರುಣೆಯಿಂದ ತುಂಬಿರುತ್ತದೆ ಮತ್ತು ಪ್ರೀತಿಪಾತ್ರರು ಪಾಪದ ಬೆಂಕಿಯಲ್ಲಿ ನಾಶವಾಗದಂತೆ ಅವರನ್ನು ಪಾಪದಿಂದ ನಿರಂತರವಾಗಿ ಹೊರಕ್ಕೆ ಎಳೆಯುತ್ತದೆ.
ವಿಜ್ಞಾಪನೆ ಮಾಡುವಂತ ಪ್ರೀತಿಯ ಲಕ್ಷಣ #2: ನಾನು ಮಾತನ್ನು ಕಡಿಮೆ ಮಾಡುತ್ತೇನೆ ಮತ್ತು ಪ್ರಾರ್ಥನೆಯನ್ನು ಹೆಚ್ಚಿಸುತ್ತೇನೆ
ಇದು ದೇವರ ವಾಕ್ಯವು ಅನುಮೋದಿಸುವ ಒಂದು ವಿಧವಾದ "ಮಾತಿಲ್ಲದ ಸುವಾರ್ತಾ ಸೇವೆ"ಯಾಗಿದೆ. 1 ಪೇತ್ರನು 3:1-3ರಲ್ಲಿ ಹೇಳಿರುವಂತೆ, "ಅದೇ ರೀತಿಯಾಗಿ ಸ್ತ್ರೀಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯಕ್ಕೆ ಅವಿಧೇಯರಾಗಿದ್ದರೂ, ನೀವು ನಿರ್ಮಲರಾಗಿಯೂ ಭಯಭರಿತರಾಗಿಯೂ ನಡೆದುಕೊಳ್ಳುವುದನ್ನು ನೋಡಿ, ವಾಕ್ಯೋಪದೇಶವಿಲ್ಲದೆ ತಮ್ಮ ಹೆಂಡತಿಯರಾದ ನಿಮ್ಮ ನಡತೆಯಿಂದಲೇ ಸನ್ಮಾರ್ಗಕ್ಕೆ ಬಂದಾರು." ನೀವು ಒಂದು ಮಾತನ್ನೂ ನುಡಿಯದೆ ಒಂದು ಪ್ರಾಣವನ್ನು ಗೆಲ್ಲಬಹುದೆಂದು ನಿಮಗೆ ತಿಳಿದಿದೆಯೇ?
ಮೇಲಿನ ವಚನದಲ್ಲಿ "ಅದೇ ರೀತಿಯಾಗಿ" ಎಂದು ಸೂಚಿಸಲಾಗಿರುವಂತ, ಮತ್ತು ನಾವು ಅನುಸರಿಸ ಬೇಕಾದಂತ ಉದಾಹರಣೆ, ಇದರ ಕೆಲವು ವಚನಗಳ ಹಿಂದೆ 1 ಪೇತ್ರನು 2:22-23ರಲ್ಲಿ ಯೇಸುವಿನ ಕುರಿತಾಗಿ ಬರೆಯಲ್ಪಟ್ಟಿದೆ - "ಆತನು ಬೈಯುವವರನ್ನು ಪ್ರತಿಯಾಗಿ ಬೈಯಲಿಲ್ಲ; ಆತನು ಬಾಧೆಯನ್ನು ಅನುಭವಿಸುವಾಗ ಯಾರನ್ನೂ ಬೆದರಿಸದೆ, ನ್ಯಾಯವಾಗಿ ತೀರ್ಪು ಮಾಡುವಾತನಿಗೆ ತನ್ನ ಕಾರ್ಯವನ್ನು ಒಪ್ಪಿಸಿದನು."
ಇದು ತೋರಿಸುವುದು ಏನೆಂದರೆ ಈ ಮಾದರಿ ಕೇವಲ ಹೆಂಡಂದಿರಿಗೆ ಮಾತ್ರವಲ್ಲದೆ ನಮಗೆಲ್ಲರಿಗೆ ಕೊಡಲ್ಪಟ್ಟಿದೆ, ಏಕೆಂದರೆ ಇಲ್ಲಿ ಉದಾಹರಣೆಯಾಗಿ ಯೇಸುವು ಇದ್ದಾನೆ. ಅನೇಕ ವೇಳೆ ವಿಜ್ಞಾಪನೆ ಮಾಡುವ ಪ್ರೀತಿ ಹೇಗಿರುತ್ತದೆಂದರೆ, ಜನರೊಂದಿಗೆ ಕಡಿಮೆ ಮಾತುಗಳು ಮತ್ತು ದೇವರೊಂದಿಗೆ ಹೆಚ್ಚಿನ ಮಾತುಗಳು.
ಕುತೂಹಲಕಾರಿ ಸಂಗತಿಯೆಂದರೆ, ದೇವರ ಸರ್ವಾಯುಧಗಳ ವಿವರಣೆಯನ್ನು ನೀಡಿದ ನಂತರ, ಪೌಲನ ಮುಂದಿನ ಹೇಳಿಕೆಯಲ್ಲಿ ಈ ಸರ್ವಾಯುಧಗಳ ವಿಸ್ತಾರವಾದ ಉದ್ದೇಶವು ಕಂಡುಬರುತ್ತದೆ. ದೇವರ ಸರ್ವಾಯುಧಗಳನ್ನು ವಿವರಿಸುವ ವಚನಗಳ ನಂತರದ ವಚನಗಳಲ್ಲಿ, ಪೌಲನು ಎಫೆಸದವರಿಗೆ 6:18ರಲ್ಲಿ, "ನೀವು ಪವಿತ್ರಾತ್ಮಪ್ರೇರಿತರಾಗಿ ಎಲ್ಲಾ ಸಮಯಗಳಲ್ಲಿ ಸಕಲ ವಿಧವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಯಿಂದಲೂ ದೇವರನ್ನು ಪ್ರಾರ್ಥಿಸಿರಿ. ಇದರಲ್ಲಿ ಪೂರ್ಣಚಿತ್ತರಾಗಿದ್ದು ದೇವಜನರೆಲ್ಲರ ವಿಷಯದಲ್ಲಿ ವಿಜ್ಞಾಪನೆಮಾಡುತ್ತಾ ಎಚ್ಚರವಾಗಿರ್ರಿ," ಎಂದು ಹೇಳುತ್ತಾನೆ. ಇಲ್ಲಿರುವ ಕ್ರಾಂತಿಕಾರಿ ಆಲೋಚನೆ ಏನೆಂದರೆ, ನಾನು ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳುವುದು ವೈರಿಯನ್ನು ಎದುರಿಸಿ ನಿಲ್ಲುವುದಕ್ಕಾಗಿ ಮಾತ್ರವಲ್ಲದೆ, ಇತರರಿಗಾಗಿ ಪ್ರಾರ್ಥನೆಯ ಮೂಲಕ ಹೋರಾಡುವುದಕ್ಕಾಗಿ - ನನ್ನ ಸ್ವಂತ ಕುಟುಂಬಕ್ಕಾಗಿ ಮತ್ತು ಅದರ ನಂತರ ಮುಂದುವರಿದು ನನ್ನ ಸಭೆಗಾಗಿ ಮತ್ತು ಸುತ್ತಲಿನ ಸಮಾಜಕ್ಕಾಗಿ.
ಇದೇ ರೀತಿ, ಯೆಶಾಯನು ನಮಗೆ ಇಂತಹ ವಿಜ್ಞಾಪನೆಯ ಹೋರಾಟದ ಒಂದು ಸುಂದರ ಚಿತ್ರಣವನ್ನು ನೀಡುತ್ತಾನೆ.
ಯೆಶಾಯನು 62:1ರಲ್ಲಿ, "ನಾನು ಮೌನವಾಗಿರದೆ ಚಿಯೋನಿನ ನೀತಿಯು ಪ್ರಕಾಶಿಸುವ ತನಕ, ಯೆರೂಸಲೇಮಿನ ರಕ್ಷಣೆಯ ದೀಪವು ಪ್ರಜ್ವಲಿಸುವ ತನಕ, ಚಿಯೋನಿನ ಹಿತವನ್ನು ಲಕ್ಷಿಸುತ್ತಿರುವೆನು," ಎನ್ನುತ್ತಾನೆ.
ಈ ವಚನದಲ್ಲಿ "ಚಿಯೋನ್" ಮತ್ತು "ಯೆರೂಸಲೇಮ್" ಎಂಬ ಪದಗಳ ಜಾಗದಲ್ಲಿ ನಿಮ್ಮ ಜೀವನಸಂಗಾತಿಯ ಹೆಸರನ್ನು, ನಿಮ್ಮ ಸಹೋದರನ ಹೆಸರನ್ನು, ನಿಮ್ಮ ಮಗುವಿನ ಹೆಸರನ್ನು ಸೇರಿಸಿ ಓದಿಕೊಳ್ಳಿರಿ: "ನಾನು ನನ್ನ ಹೆಂಡತಿಗಾಗಿ ಮೌನವಾಗಿರುವುದಿಲ್ಲ ... ನನ್ನ ಮಗುವಿಗಾಗಿ ... ನನ್ನ ಸಹೋದರನಿಗಾಗಿ."
ಇದೇ ವಿಜ್ಞಾಪನೆಯ ಸೇವೆಯಾಗಿದೆ - ನಿರಂತರವಾದದ್ದು, ಹೆಚ್ಚಾಗಿ ಯಾರಿಗೂ ಕಾಣಿಸದೆ ಇರುವಂತದ್ದು, ಆದರೆ ದೇವರ ದೃಷ್ಟಿಯಲ್ಲಿ ಅಮೂಲ್ಯವಾದದ್ದು. ಸಮುವೇಲನು ಇದನ್ನು ಆಳವಾಗಿ ಅರಿತುಕೊಂಡು ಹೀಗೆನ್ನುತ್ತಾನೆ, "ನಾನಾದರೋ ನಿಮಗೋಸ್ಕರವಾಗಿ ಕರ್ತನನ್ನು ಪ್ರಾರ್ಥಿಸುವುದನ್ನು ಬಿಡುವದೇ ಇಲ್ಲ; ಬಿಟ್ಟರೆ ಆತನ ದೃಷ್ಟಿಯಲ್ಲಿ ಪಾಪಿಯಾಗಿರುವೆನು" (1 ಸಮುವೇಲನು 12:23). ಪ್ರಾರ್ಥಿಸದೇ ಇರುವುದು ದೇವರ ವಿರುದ್ಧ ಪಾಪ ಮಾಡಿದಂತೆ ಎಂದು ಸಮುವೇಲನು ಕಂಡುಕೊಂಡನು. ಅರಸನಾಗಿದ್ದ ಸೌಲನು ಹಿಂಜಾರಿ ಬಿದ್ದು ದೇವರ ಅಭಿಷೇಕವನ್ನು ಕಳೆದುಕೊಂಡಾಗಲೂ, ಸಮುವೇಲನು ಅವನನ್ನು ನೋಡುವದಕ್ಕೆ ಹೋಗದಿದ್ದರೂ, ಅವನ ವಿಷಯದಲ್ಲಿ ದುಃಖಿಸುವುದನ್ನು ನಿಲ್ಲಿಸಲಿಲ್ಲ (1 ಸಮುವೇಲನು 15:35).
ವಿಜ್ಞಾಪನೆಯ ಪ್ರೀತಿ ಎಂಥದ್ದೆಂದರೆ, ಸಂಬಂಧವು ಬಿಟ್ಟುಹೋಗಿ ಬಹಳ ಸಮಯದ ನಂತರವೂ, ಪ್ರಾರ್ಥನೆಯು ಮುಂದುವರಿಯುತ್ತಾ ಇರುತ್ತದೆ.
ವಿಜ್ಞಾಪನೆಯ ಪ್ರೀತಿಯ ಲಕ್ಷಣ #3: ದೇವರು ನಿನ್ನಲ್ಲಿ ಉಂಟುಮಾಡಿದ ನೀತಿವಂತಿಕೆಯನ್ನು ನಾನು ಪ್ರಕಟಿಸುತ್ತೇನೆ
ಜೆಕರ್ಯನು 3ನೇ ಅಧ್ಯಾಯದಲ್ಲಿ, ಮಹಾಯಾಜಕನಾದ ಯೆಹೋಶುವನು ಕರ್ತನ ದೂತನ ಮುಂದೆ ಕೊಳೆಬಟ್ಟೆ ಧರಿಸಿ ನಿಂತಿರಲು, ಸೈತಾನನು ಅಲ್ಲಿ "ಆತನನ್ನು ದೂಷಿಸಲಿಕ್ಕಾಗಿ" ನಿಂತಿದ್ದನು. ಜೆಕರ್ಯನು 3:2ರಲ್ಲಿ ಕರ್ತನು ಉತ್ತರಿಸಿ, "ಸೈತಾನನೇ, ಕರ್ತನು ನಿನ್ನನ್ನು ಖಂಡಿಸಲಿ! ಹೌದು, ಯೆರೂಸಲೇಮನ್ನು ಆರಿಸಿಕೊಂಡಿರುವ ಕರ್ತನು ನಿನ್ನನ್ನು ಖಂಡಿಸಲಿ! ಅದು ಉರಿಯಿಂದ ಎಳೆದ ಕೊಳ್ಳಿಯಾಗಿದೆಯಲ್ಲಾ?" ಎಂದನು.
ಇದರ ನಂತರ ದೇವರು, "ಇವನ ಕೊಳೆಬಟ್ಟೆಯನ್ನು ತೆಗೆದುಬಿಡಿರಿ," ಎಂದು ಅಪ್ಪಣೆ ಕೊಡುತ್ತಾರೆ. ಅವರು ಯೆಹೋಶುವನಿಗೆ, "ಇಗೋ, ನಿನ್ನ ದೋಷವನ್ನು ನಿನ್ನಿಂದ ತೊಲಗಿಸಿದ್ದೇನೆ. ನಿನಗೆ ಶ್ರೇಷ್ಠವಸ್ತ್ರಗಳನ್ನು ತೊಡಿಸುವೆನು," ಎನ್ನುತ್ತಾರೆ. ಆಗ ಜೆಕರ್ಯನು ಒಂದು ಮಾತನ್ನು ಸೇರಿಸುತ್ತಾನೆ, "ಇವನ ತಲೆಗೆ ಶುಭ್ರವಾದ ಮುಂಡಾಸವನ್ನು ಸುತ್ತಿರಿ" (ಜೆಕರ್ಯನು 3:5).
ತಂದೆಯಾದ ದೇವರ ಹೃದಯದಲ್ಲಿ ದಾರಿತಪ್ಪಿದ ಮಗನ ಕುರಿತಾದ ಆಲೋಚನೆ ಇದೇ ಆಗಿದೆ: ಮಾನಸಾಂತರದ ಮೊದಲ ಚಿಹ್ನೆ ಕಂಡೊಡನೆ ತಂದೆಯು ಓಡಿಬಂದು, ಅಪ್ಪಿಕೊಂಡು, ಶ್ರೇಷ್ಠವಾದ ನಿಲುವಂಗಿ ತೊಡಿಸಿ, ಬಾಧ್ಯತೆಯ ಸ್ಥಾನವನ್ನು ಆತನಿಗೆ ನೀಡಿ, ಆತನೊಂದಿಗೆ ಉಲ್ಲಾಸ ಪಡುತ್ತಾನೆ. ಯಥಾರ್ಥ ಪಶ್ಚಾತಾಪ ಕಂಡುಬಂದ ಸಂದರ್ಭದಲ್ಲಿ ನಮ್ಮ ಪ್ರತಿಕ್ರಿಯೆ (ಆ ಸಾಮ್ಯದ ಹಿರಿಯ ಮಗನಂತೆ ನಡೆದುಕೊಳ್ಳದೆ) ಅದೇ ಉಲ್ಲಾಸವನ್ನು ಮತ್ತು ಹಬ್ಬದ ವಾತಾವರಣವನ್ನು ಮತ್ತು ಮತ್ತೊಬ್ಬನನ್ನು ನೀತಿವಂತನೆಂದು ನಿರ್ಣಯಿಸುವ ಮನೋಭಾವವನ್ನು ಹೊಂದಿರಬೇಕು. "ಸರಿ, ನೀನು ಬದಲಾಗುವುದಕ್ಕಾಗಿ ಹೊರಟಿದ್ದೀ. ಎಲ್ಲಿಯ ವರೆಗೆ ಹೀಗೆ ಮುಂದುವರಿಯುತ್ತೀ ಎಂದು ನಾನು ನೋಡುತ್ತೇನೆ," ಎಂಬುದಾಗಿ ಅಲ್ಲ. ಇದಕ್ಕೆ ಬದಲಾಗಿ, "ಕರ್ತನು ನಿನ್ನ ಅಪರಾಧವನ್ನು ಕ್ಷಮಿಸಿದ್ದಾನೆ ಮತ್ತು ನೀನು ಪಶ್ಚಾತ್ತಾಪಪಟ್ಟಾಗ ನಿನ್ನನ್ನು ನೀತಿವಂತನೆಂದು ಘೋಷಿಸಿದ್ದಾನೆ. ನಿನ್ನ ಕುರಿತಾದ ಆತನ ನಿರ್ಣಯವನ್ನು ನಾನು ಸಂತೋಷವಾಗಿ ಸಾರುತ್ತೇನೆ ಮತ್ತು ಅದಕ್ಕಾಗಿ ಉಲ್ಲಾಸಿಸುತ್ತೇನೆ."
ನಮ್ಮ ಕುಟುಂಬಗಳಿಗೆ ಹಾಗೂ ಸಭೆಗೆ ಒಂದು ಕರೆ
ಗಂಡ-ಹೆಂಡತಿ ಒಬ್ಬರಿಗೊಬ್ಬರು ಸರ್ವಾಯುಧಗಳನ್ನು ಹೊರುವವರಾಗಿ ಇರುವಂತ ಕುಟುಂಬಗಳ ಬಗ್ಗೆ ಯೋಚಿಸಿರಿ; ಅಲ್ಲಿ ತಂದೆ ಮತ್ತು ತಾಯಿಯು ದೂಷಣೆ ಮಾಡುವುದಿಲ್ಲ, ಇದಕ್ಕೆ ಬದಲಾಗಿ ತಮ್ಮ ಮಕ್ಕಳನ್ನು ಪ್ರೀತಿಯಿಂದ ಗಮನಿಸಿ ಅವರಿಗಾಗಿ ಪ್ರಾರ್ಥನೆ ಮಾಡುತ್ತಾರೆ; ಸಹೋದರರು ಹಾಗೂ ಸಹೋದರಿಯರು ಒಬ್ಬರಿಗೊಬ್ಬರ ಪವಿತ್ರತೆಗಾಗಿ ನಿರಂತರವಾಗಿ ಹೋರಾಟ ಮಾಡುವಂತ ಒಂದು ಸಭೆಯ ಬಗ್ಗೆ ಯೋಚಿಸಿರಿ. ಇಂತಹ ಕುಟುಂಬಗಳು ಮತ್ತು ಸಭೆಗಳು ಇರುವುದನ್ನು ಕಲ್ಪಿಸಿಕೊಳ್ಳಿರಿ:
- ಇತರರ ಹೋರಾಟಗಳನ್ನು ನಾವು ನಮ್ಮ ಹೋರಾಟವೆಂದು ಹೊತ್ತುಕೊಳ್ಳುತ್ತೇವೆ.
- ನಾವು ಮಾತನ್ನು ಕಡಿಮೆ ಮಾಡುತ್ತೇವೆ ಮತ್ತು ಪ್ರಾರ್ಥನೆಯನ್ನು ಹೆಚ್ಚಿಸುತ್ತೇವೆ.
- ಒಬ್ಬನು ಪಶ್ಚಾತ್ತಾಪ ಪಡುವುದರ ಮೊದಲ ಸಂಕೇತ ಕಾಣಿಸಿದೊಡನೆ, ನಾವು ಆತನ ಮೇಲೆ ದೇವರ ವಾಗ್ದಾನವಾದ ನೀತಿವಂತಿಕೆಯನ್ನು ಘೋಷಿಸಲು ಉತ್ಸುಕರಾಗಿರುತ್ತೇವೆ.
ನಮ್ಮ ವಿವಾಹ ಜೀವಿತದಲ್ಲಿ, ನಮ್ಮ ಕುಟುಂಬಗಳಲ್ಲಿ, ಮತ್ತು ನಮ್ಮ ಸಭೆಗಳಲ್ಲಿ - ದೇವರು ನಮ್ಮನ್ನು ಕಾವಲುಗಾರರನ್ನಾಗಿ ಮತ್ತು ಆಯುಧಗಳನ್ನು ಹೊರುವವರನ್ನಾಗಿ ಮೇಲಕ್ಕೆತ್ತಲಿ - ವಿಜ್ಞಾಪನೆ ಮಾಡುವಂತ ಪ್ರೀತಿಯನ್ನು ತೋರಿಸುವವರನ್ನಾಗಿ ಮಾಡಲಿ.