WFTW Body: 

ಆದಿಕಾಂಡದ 37ನೇ ಅಧ್ಯಾಯದಲ್ಲಿ ನಾವು ಓದುವಂತೆ, ಯೋಸೇಫನು ದೇವಭಯವನ್ನು ಹೊಂದಿದ್ದ ಒಬ್ಬ ಹುಡುಗನಾಗಿದ್ದನು ಮತ್ತು ಇದರ ಪರಿಣಾಮವಾಗಿ ಆತನು ಸೈತಾನನ ದ್ವೇಷಕ್ಕೆ ಪಾತ್ರನಾದನು. ಹಾಗಾಗಿ ಸೈತಾನನು ಯೋಸೇಫನನ್ನು ನಾಶ ಮಾಡುವಂತೆ ಅವನ ಅಣ್ಣಂದಿರನ್ನು ಪ್ರೇರೇಪಿಸಿದನು. ಆದರೆ ಅವರು ಯೋಸೇಫನ ಪ್ರಾಣವನ್ನು ತೆಗೆಯದಂತೆ ದೇವರು ನೋಡಿಕೊಂಡರು. ಆದಾಗ್ಯೂ ಅಣ್ಣಂದಿರು ಅವನನ್ನು ಕೆಲವು ಇಷ್ಮಾಯೇಲ್ಯ ವರ್ತಕರಿಗೆ ಮಾರಾಟ ಮಾಡಿದರು. ಆ ವರ್ತಕರು ಯೋಸೇಫನನ್ನು ಕರಕೊಂಡು ಎಲ್ಲಿಗೆ ಹೋದರೆಂದು ನಿಮಗೆ ಗೊತ್ತಿದೆಯೇ? ಇನ್ನೆಲ್ಲಿಗೂ ಅಲ್ಲ, ಐಗುಪ್ತದೇಶಕ್ಕೆ! ಆ ಮೂಲಕವಾಗಿ ದೇವರ ಯೋಜನೆಯ ಮೊದಲ ಹಂತವು ಪೂರ್ಣವಾಯಿತು! ಐಗುಪ್ತದಲ್ಲಿ, ಪೋಟೀಫರನೆಂಬ ಅಧಿಕಾರಿಯು ಯೋಸೇಫನನ್ನು ಕ್ರಯಕ್ಕೆ ತೆಗೆದುಕೊಂಡನು. ಇದೂ ಸಹ ದೇವರ ಯೋಜನೆಯಾಗಿತ್ತು. ಪೋಟೀಫರನ ಹೆಂಡತಿ ಒಬ್ಬ ದುಷ್ಟಳಾಗಿದ್ದಳು. ಆಕೆಯು ಸುಂದರನಾಗಿದ್ದ ಯೋಸೇಫನನ್ನು ಬಯಸಿದಳು, ಮತ್ತು ದಿನೇ ದಿನೇ ಆತನನ್ನು ತನ್ನೆಡೆಗೆ ಸೆಳೆಯಲು ಪ್ರಯತ್ನಿಸಿದಳು. ಅಂತಿಮವಾಗಿ ಆಕೆಯ ಬಯಕೆ ಪೂರೈಸದೇ ಹೋದಾಗ, ಆಕೆ ಯೋಸೇಫನನ್ನು ಸುಳ್ಳು ಆಪಾದನೆಗೆ ಒಳಪಡಿಸಿ ಸೆರೆಮನೆಗೆ ಹಾಕಿಸಿದಳು.

ಆದರೆ ಆ ಸೆರೆಮನೆಯಲ್ಲಿ ಯೋಸೇಫನು ಯಾರನ್ನು ಭೇಟಿಯಾದನೆಂದು ನೀವು ಯೋಚಿಸುತ್ತೀರಿ? ಫರೋಹನಿಗೆ ಪಾನಕವನ್ನು ಕೊಡುವವರ ಮುಖ್ಯಸ್ಥನನ್ನು! ಯೋಸೇಫನ ಸೆರೆಯ ಸಮಯದಲ್ಲೇ ಫರೋಹನ ಮುಖ್ಯ ಪಾನದಾಯಕನೂ ಸಹ ಸೆರೆಮನೆಗೆ ಸೇರುವಂತೆ ದೇವರು ವ್ಯವಸ್ಥೆ ಮಾಡಿದ್ದರು, ಹಾಗಾಗಿ ಯೋಸೇಫನು ಅವನನ್ನು ಭೇಟಿಯಾದನು. ಇದು ದೇವರ ಯೋಜನೆಯ ಎರಡನೆಯ ಹಂತವಾಗಿತ್ತು. ಮೂರನೆಯ ಹಂತದಲ್ಲಿ, "ಪಾನದಾಯಕರ ಮುಖ್ಯಸ್ಥನು ಫರೋಹನ ಸೇವೆಗೆ ಹಿಂದಿರುಗಿದ ನಂತರ, ಎರಡು ವರ್ಷಗಳ ವರೆಗೆ ಯೋಸೇಫನನ್ನು ನೆನಪು ಮಾಡದೆ ಮರೆಯುವಂತೆ ದೇವರು ಏರ್ಪಡಿಸಿದರು ... ಎರಡು ವರುಷಗಳಾದ ಮೇಲೆ ಫರೋಹನಿಗೆ ಒಂದು ಕನಸುಬಿತ್ತು ... ಆ ಪರಿಸ್ಥಿತಿಯಲ್ಲಿ ಪಾನದಾಯಕರ ಮುಖ್ಯಸ್ಥನು ಫರೋಹನಿಗೆ ಯೋಸೇಫನ ಬಗ್ಗೆ ತಿಳಿಸಿದನು" (ಆದಿ. 40:23,ಆದಿ. 41:1,9). ದೇವರ ವೇಳಾಪಟ್ಟಿಯಲ್ಲಿ, ಯೋಸೇಫನು ಸೆರೆಯಿಂದ ಬಿಡುಗಡೆ ಹೊಂದಲು ಇದು ಸರಿಯಾದ ಸಮಯವಾಗಿತ್ತು. ಕೀರ್ತ. 105:19,20 ಹೀಗೆ ಹೇಳುತ್ತದೆ, "ಕರ್ತನ ಮಾತು ನೆರವೇರುವ ತನಕ, ಯೋಸೇಫನು ಕರ್ತನ ವಾಕ್ಯದಿಂದ ಶೋಧಿತನಾದನು. ಅರಸನು ಅಪ್ಪಣೆ ಮಾಡಿ ಅವನನ್ನು ತಪ್ಪಿಸಿದನು; ಜನಪತಿಯು ಅವನನ್ನು ಬಿಡಿಸಿದನು."

ಯೋಸೇಫನಿಗೆ ಈಗ 30 ವರ್ಷ ವಯಸ್ಸಾಗಿತ್ತು. ದೇವರ ಸಮಯ ಬಂದಿತ್ತು. ಹಾಗಾಗಿ ಈಗ ದೇವರು ಫರೋಹನಿಗೆ ಒಂದು ಕನಸನ್ನು ಕೊಟ್ಟರು. ಜೊತೆಗೆ ಆ ಪಾನದಾಯಕರ ಮುಖ್ಯಸ್ಥನಿಗೆ, ಕನಸುಗಳ ಅರ್ಥವನ್ನು ಹೇಳುವಂತ ಯೋಸೇಫನ ನೆನಪನ್ನು ದೇವರು ಮೂಡಿಸಿದರು. ಈ ರೀತಿಯಾಗಿ ಯೋಸೇಫನು ಫರೋಹನ ಮುಂದೆ ನಿಲ್ಲುವಂತಾಯಿತು ಮತ್ತು ಆತನು ಐಗುಪ್ತದೇಶಕ್ಕೆ ಎರಡನೆಯ ಸರ್ವಾಧಿಕಾರಿಯಾದನು. ಯೋಸೇಫನ ಜೀವನದ ಘಟನೆಗಳನ್ನು ದೇವರು ಸೂಕ್ತ ಸಮಯದಲ್ಲಿ ಅತ್ಯಂತ ಉತ್ತಮವಾಗಿ ನಿಯಂತ್ರಿಸಿದ್ದರು! ನಾವು ಈ ಸಂಗತಿಗಳನ್ನು ದೇವರು ಯೋಜಿಸಿದ ಹಾಗೆ ಯೋಜಿಸುವುದು ಅಸಾಧ್ಯವಾದ ಮಾತಾಗಿದೆ. ನಮ್ಮ ಕೈಯಲ್ಲಿ ಯೋಸೇಫನ ಜೀವನದ ನಿಯಂತ್ರಣ ಇದ್ದಿದ್ದರೆ, ನಾವು ಬಹುಶ: ಅವನಿಗೆ ಯಾರೂ ಹಾನಿ ಮಾಡದಂತೆ ಜನರನ್ನು ತಡೆಯುತ್ತಿದ್ದೆವು. ಆದರೆ ದೇವರು ಇದನ್ನು ಮಾಡಿದ ರೀತಿ ಅದಕ್ಕೂ ಶ್ರೇಷ್ಠವಾಗಿತ್ತು. ದುಷ್ಟರು ನಮ್ಮ ಜೀವಿತದಲ್ಲಿ ಮಾಡುವ ಹಾನಿಯ ಮೂಲಕ ದೇವರ ಸಂಕಲ್ಪಗಳು ನೆರವೇರುವುದು ಒಂದು ಮಹಾ ಅದ್ಭುತವಾಗಿದೆ! ದೇವರು ಸೈತಾನನ ದುಷ್ಕರ್ಮಗಳನ್ನು ಆತನ ವಿರುದ್ಧವಾಗಿ ತಿರುಗಿಸಿ, ತನ್ನ ಸಂಕಲ್ಪದ ಮೇರೆಗೆ ಕರೆಯಲ್ಪಟ್ಟವರಿಗೆ ಎಲ್ಲಾ ಕಾರ್ಯಗಳು ಅನುಕೂಲವಾಗುವಂತೆ ಬದಲಾಯಿಸುವುದರಲ್ಲಿ ಬಹಳ ಸಂತೋಷವನ್ನು ಪಡೆಯುತ್ತಾರೆ.

ವಿಮೋಚನಕಾಂಡದ ಮೊದಲ ಅಧ್ಯಾಯದಲ್ಲಿ, ಐಗುಪ್ತದೇಶದಲ್ಲಿ ಇಸ್ರಾಯೇಲ್ಯರು ಗುಲಾಮರಾಗಿದ್ದರೂ, ಅವರನ್ನು ನೋಡಿ ಫರೋಹನು ಕಳವಳಗೊಂಡನೆಂದು ನಾವು ಓದುತ್ತೇವೆ. ಅವರ ಸಂಖ್ಯೆ ಬೆಳೆಯುತ್ತಾ ಹೋದಾಗ, ಒಂದು ದಿನ ಅವರು ಐಗುಪ್ತರ ವಿರುದ್ಧ ದಂಗೆ ಏಳುತ್ತಾರೆ ಮತ್ತು ತಮಗಾಗಿ ಕೂಲಿ ಕೆಲಸಗಳನ್ನು ಮಾಡುವುದಿಲ್ಲವೆಂದು ಆ ಅರಸನು ಭಯಪಟ್ಟನು. ಹಾಗಾಗಿ ಒಡನೆಯೇ ಇಸ್ರಾಯೇಲ್ಯರ ಎಲ್ಲಾ ಗಂಡು ಮಕ್ಕಳನ್ನು ಕೊಲ್ಲುವಂತೆ ಆಜ್ಞೆ ಹೊರಡಿಸಿದನು. ವಾಸ್ತವವಾಗಿ, ಈ ಯೋಜನೆಯು ಪಿಶಾಚನಿಂದ ಬಂದಿತ್ತು. ಮೊದಲಿನಿಂದಲೂ ಸೈತಾನನು ಯೆಹೂದ್ಯರನ್ನು ಕೊಂದು ನಾಶಪಡಿಸಲು ಹೊಂಚು ಹಾಕುತ್ತಿದ್ದಾನೆ - ಮಾನವ ಇತಿಹಾಸದಲ್ಲಿ ಇದು ಅನೇಕ ಬಾರಿ ನಡೆದಿದೆ. ಅವುಗಳಲ್ಲಿ ಮೊದಲ ಸಂಚು ಇದಾಗಿತ್ತು, ಅಷ್ಟೇ. ಇಸ್ರಾಯೇಲ್ಯರ ಎಲ್ಲಾ ಗಂಡು ಮಕ್ಕಳನ್ನು ಸಾಯಿಸಬೇಕೆಂಬ ಫರೋಹನ ಆಜ್ಞೆಯಿಂದಾಗಿ, ಮೋಶೆಯು ಕೂಸಾಗಿದ್ದಾಗ ಆತನ ತಾಯಿಯು ಆತನನ್ನು ಒಂದು ಚಿಕ್ಕ ಹುಲ್ಲಿನ ಬುಟ್ಟಿಯಲ್ಲಿ ಇರಿಸಿ, ಅದನ್ನು ಪ್ರಾರ್ಥನೆಯೊಂದಿಗೆ ನದಿಯ ನೀರಿನಲ್ಲಿ ತೇಲಿಸಿ ಬಿಡುವುದನ್ನು ನಾವು ನೋಡುತ್ತೇವೆ. ಆ ದುಷ್ಟ ಆಜ್ಞೆ ಹೊರಟಿರದಿದ್ದರೆ, ಆಕೆ ಇಂತಹ ಕೆಲಸವನ್ನು ಮಾಡುತ್ತಿರಲಿಲ್ಲ. ಆದರೆ ಆಕೆ ಹೀಗೆ ಮಾಡಿದ್ದರಿಂದ, ಮೋಶೆಯು ಫರೋಹನ ಕುಮಾರ್ತೆಯ ಮೂಲಕವಾಗಿ, ಫರೋಹನ ಅರಮನೆಯಲ್ಲಿ ಬೆಳೆಯುವಂತಾಯಿತು - ಆತನ ಜೀವನದ ಮೊದಲ 40 ವರ್ಷಗಳ ಶಿಕ್ಷಣಕ್ಕೆ ಅದು ಸೂಕ್ತವಾದ ಜಾಗವೆಂದು ದೇವರು ನಿಶ್ಚಯಿಸಿದ್ದರು. ಫರೋಹನು ಆ ದುಷ್ಟ ಆಜ್ಞೆಯನ್ನು ಹೊರಡಿಸದೇ ಇದ್ದಲ್ಲಿ ಇದು ಸಾಧ್ಯವಾಗುತ್ತಿರಲಿಲ್ಲ, ಮತ್ತು ಆಗ ಮೋಶೆಯು ಬೆಳೆದು ಇನ್ನೊಬ್ಬ ಗುಲಾಮನಾಗುತ್ತಿದ್ದನು. ದೇವರ ಉದ್ದೇಶಗಳು ಹೇಗೆ ಸೈತಾನನ ಕಾರ್ಯಗಳ ಮೂಲಕ ನೆರವೇರುತ್ತವೆಂದು ನೀವು ಕಂಡಿರಾ?

ಎಸ್ತೇರಳ ಗ್ರಂಥದಲ್ಲಿ, ದೇವರು ಯೆಹೂದ್ಯರ ಜನಾಂಗವು ಸಂಹರಿಸಲ್ಪಟ್ಟು ನಿರ್ನಾಮವಾಗುವ ಸಂದರ್ಭದಿಂದ ಅದನ್ನು ಕಾಪಾಡಿದ್ದರ ಕುರಿತಾಗಿ ನಾವು ಓದುತ್ತೇವೆ. ಆದರೆ ದೇವರು ಇದನ್ನು ಸಾಧಿಸಿದ ರೀತಿ ಅದ್ಭುತವಾಗಿದೆ - ಅದನ್ನು ಒಂದು ಚಿಕ್ಕ ಘಟನೆಯ ಮೂಲಕ ನಡೆಸಿದರು - ಒಂದು ರಾತ್ರಿ ಅರಸನಿಗೆ ನಿದ್ರೆ ಬರಲಿಲ್ಲ, ಅಷ್ಟೇ! ಒಂದು ರಾತ್ರಿ ಹಾಮಾನನು ತನ್ನ ಪತ್ನಿಯ ಜೊತೆಗೆ ಒಳಸಂಚು ಮಾಡಿ, ಮರುದಿನ ಬೆಳಿಗ್ಗೆ ಅರಸನ ಅಪ್ಪಣೆಯನ್ನು ಪಡೆದು ಮೊರ್ದೆಕೈಯನ್ನು ಗಲ್ಲುಮರದ ಮೇಲೆ ನೇತುಹಾಕಬೇಕೆಂದು ಯೋಚಿಸುತ್ತಿದ್ದನು - ಇದು ಯೆಹೂದ್ಯ ವಂಶದ ಸಂಹಾರಕ್ಕೆ ಮೊದಲ ಹೆಜ್ಜೆಯಾಗಿತ್ತು. ಹಾಮಾನ ಮತ್ತು ಆತನ ಪತ್ನಿ ತಮ್ಮ ಕುತಂತ್ರದಲ್ಲಿ ತೊಡಗಿದ್ದಾಗ, ದೇವರು ಸಹ ಮೊರ್ದೆಕೈಯ ಪರವಾಗಿ ಕಾರ್ಯನಿರತರಾಗಿದ್ದರು. "ಇಗೋ, ಇಸ್ರಾಯೇಲ್ಯರನ್ನು ಕಾಯುವಾತನು ತೂಕಡಿಸುವುದಿಲ್ಲ, ನಿದ್ರಿಸುವುದಿಲ್ಲ" (ಕೀರ್ತ. 121:4). ಅದೇ ರಾತ್ರಿ ದೇವರು ಅರಸನ ನಿದ್ರೆಯನ್ನು ಭಂಗಪಡಿಸಿದರು - "ಆ ರಾತ್ರಿಯಲ್ಲಿ ಅರಸನಿಗೆ ನಿದ್ರೆ ಬರಲಿಲ್ಲ; ಆದದರಿಂದ ಸ್ಮರಿಸತಕ್ಕ ಪೂರ್ವ ವೃತ್ತಾಂತಗಳ ಗ್ರಂಥವನ್ನು ಅವನು ತರಿಸಿ ಪಾರಾಯಣ ಮಾಡಿಸುತ್ತಿದ್ದನು" (ಎಸ್ತೇ. 6:1). ಅರಸನು ಅನೇಕ ಘಂಟೆಗಳ ಕಾಲ ತನ್ನ ರಾಜ್ಯದ ವೃತ್ತಾಂತವನ್ನು ಕೇಳುತ್ತಿರುವಾಗ ಮುಂಜಾನೆಯಾಯಿತು. ಅವರು ಓದುತ್ತಿದ್ದ ಭಾಗವು, ರಾಜನನ್ನು ಕೊಲ್ಲುವ ಒಳಸಂಚಿನಿಂದ ಮೊರ್ದೆಕೈಯು ರಕ್ಷಿಸಿದ ಜಾಗಕ್ಕೆ ಬಂತು. ಇದಕ್ಕಾಗಿ ಮೊರ್ದೆಕೈಗೆ ಯಾವ ಸ್ಥಾನಮಾನಗಳು ದೊರಕಿದವೆಂದು ಅರಸನು ವಿಚಾರಿಸಿದಾಗ, ಏನೂ ದೊರಕಲಿಲ್ಲ ಎಂದು ತಿಳಿದುಬಂತು.

ಇಲ್ಲಿ ದೇವರು ಮತ್ತೊಮ್ಮೆ ಸಂಗತಿಗಳನ್ನು ನಿಯಂತ್ರಿಸುವುದರಲ್ಲಿ ಬಹಳ ಶ್ರೇಷ್ಠ ಸಮಯಪ್ರಜ್ಞೆಯನ್ನು ಪ್ರದರ್ಶಿಸಿದರು. ನಿಖರವಾಗಿ ಆ ಕ್ಷಣದಲ್ಲಿ, ಹಾಮಾನನು ಮೊರ್ದೆಕೈಯನ್ನು ಗಲ್ಲಿಗೆ ಹಾಕುವದಕ್ಕೆ ಅರಸನ ಅಪ್ಪಣೆ ಪಡಕೊಳ್ಳಲು ಅಲ್ಲಿಗೆ ಬಂದನು. ಹಾಮಾನನು ಬಾಯಿ ತೆರೆಯುವದಕ್ಕೆ ಮೊದಲೇ ರಾಜನು ಹಾಮಾನನನ್ನು, ಅರಸನು ಯಾರನ್ನಾದರೂ ಸನ್ಮಾನಿಸಲು ಬಯಸಿದಾಗ ಅಂತಹ ಮನುಷ್ಯನಿಗೆ ಏನು ಮಾಡಬೇಕು, ಎಂದು ಕೇಳುತ್ತಾನೆ. ಅಹಂಭಾವದಿಂದ ತುಂಬಿದ್ದ ಹಾಮಾನನು, ಅರಸನು ತನ್ನನ್ನು ಸನ್ಮಾನಿಸಲಿದ್ದಾನೆ ಎಂದು ಯೋಚಿಸಿ, ಅಂತಹ ಮನುಷ್ಯನಿಗೆ ರಾಜವಸ್ತ್ರಗಳನ್ನು ತೊಡಿಸಿ ಪಟ್ಟದ ಕುದುರೆಯ ಮೇಲೆ ಕೂರಿಸಿ ಪಟ್ಟಣದಲ್ಲಿ ಮೆರವಣಿಗೆ ಮಾಡಿಸಿ ಗೌರವಿಸಬೇಕೆಂದು ಹೇಳಿದನು. "ಈಗಲೇ ಹೋಗಿ ಮೊರ್ದೆಕೈಯೆಂಬ ಯೆಹೂದ್ಯನಿಗೆ ಹಾಗೆಯೇ ಮಾಡು," ಎಂದು ರಾಜನು ಹೇಳಿದನು. ನಮ್ಮ ದೇವರು ಎಷ್ಟು ಅದ್ಭುತವಾದ ರೀತಿಯಲ್ಲಿ ಸೈತಾನನ ಯೋಜನೆಗಳನ್ನು ತಲೆಕೆಳಗಾಗಿ ತಿರುಗಿಸುತ್ತಾರೆ! ಕೊನೆಗೆ ಹಾಮಾನನು ತಾನು ಮೊರ್ದೆಕೈಗಾಗಿ ಸಿದ್ಧಪಡಿಸಿದ್ದ ಗಲ್ಲಿಗೆ ಹಾಕಲ್ಪಟ್ಟನು.

ಸತ್ಯವೇದವು ಹೇಳುವಂತೆ, "ಗುಂಡಿಯನ್ನು ತೋಡುವವನು ತಾನೇ ಅದರಲ್ಲಿ ಬೀಳುವನು; ಇತರರ ಮೇಲೆ ಕಲ್ಲನ್ನು ಹೊರಳಿಸುವವನ ಮೇಲೆಯೇ ಕಲ್ಲು ಹೊರಳುವದು" (ಜ್ಞಾ. 26:27) . ಈ ಕತೆಯಲ್ಲಿ ಹಾಮಾನನು, ಯಾವಾಗಲೂ ನಮ್ಮ ವಿರುದ್ಧ ಕುತಂತ್ರವನ್ನು ಮಾಡುವ ಸೈತಾನನ ಒಂದು ನಮೂನೆಯಾಗಿದ್ದಾನೆ. ಅವನ ಯೋಜನೆಗಿಂತ ಬಹಳ ಶ್ರೇಷ್ಠವಾದ ಯೋಜನೆ ದೇವರ ಬಳಿ ಇದೆ, ಹಾಗಾಗಿ ದೇವರು ಅವನನ್ನು ತಡೆಯುವುದಿಲ್ಲ. ಅವರು ಸೈತಾನನ ಯೋಜನೆಗಳನ್ನು ತಲೆಕೆಳಗಾಗಿಸಲು ಇಚ್ಛಿಸುತ್ತಾರೆ. ಪಿಶಾಚನು ನಮಗಾಗಿ ತೋಡುವ ಗುಂಡಿಯಲ್ಲಿ ಕೊನೆಯಲ್ಲಿ ಆತನೇ ಬೀಳುವಂತೆ ಆಗುತ್ತದೆ. ಚೆಫ. 3:17ರ ಒಂದು ಅನುವಾದ ಹೀಗಿದೆ - ದೇವರು ನಮ್ಮನ್ನು ಪ್ರೀತಿಸಿ, ಯಾರಿಗೂ ತಿಳಿಯದಂತೆ ಯಾವಾಗಲೂ ನಮಗಾಗಿ ಯೋಜನೆಯನ್ನು ಸಿದ್ಧಪಡಿಸುತ್ತಾ ಇದ್ದಾರೆ. ಮೇಲಿನ ಘಟನೆಯ ರಾತ್ರಿ, ಮೊರ್ದೆಕೈಯು ತನ್ನ ವಿರುದ್ಧವಾಗಿ ಹಾಮಾನ ಮತ್ತು ಆತನ ಪತ್ನಿಯ ದುಷ್ಟ ಯೋಜನೆಗಳ ಪರಿವೆಯಿಲ್ಲದೆ ಹಾಯಾಗಿ ನಿದ್ರಿಸುತ್ತಿದ್ದಾಗ, ಇನ್ನೊಂದು ಪಕ್ಕದಲ್ಲಿ ದೇವರು ಮೊರ್ದೆಕೈಯ ರಕ್ಷಣೆಯ ಯೋಜನೆಯನ್ನು ಸಿದ್ಧಪಡಿಸುತ್ತಿದ್ದರು. ಹಾಗಾಗಿ ಒಂದು ವೇಳೆ ಮೊರ್ದೆಕೈಗೆ ಹಾಮಾನನ ಯೋಜನೆಯು ತಿಳಿದಿದ್ದರೂ ಸಹ, ಆತನು ನೆಮ್ಮದಿಯಾಗಿ ನಿದ್ರಿಸಬಹುದಾಗಿತ್ತು. ಇದು ಉತ್ತಮ ವಿಧಾನ! ದೇವರು ನಮ್ಮ ಕಡೆ ಇದ್ದರೆ, ನಮ್ಮನ್ನು ಎದುರಿಸುವವರು ಯಾರು?

ಕಲ್ವಾರಿಯು ಇದರ ಅತ್ಯುತ್ತಮ ಉದಾಹರಣೆಯಾಗಿದೆ - ಅಲ್ಲಿ ಸೈತಾನನು ಯೇಸುವಿನ ಶತ್ರುಗಳ ಮೂಲಕ ಅವನನ್ನು ಶಿಲುಬೆಗೆ ಏರಿಸಿದನು. ಆದರೆ ಅದೇ ಶಿಲುಬೆಯು ಸ್ವತಃ ಸೈತಾನನ ಸೋಲಿಗೆ ಕಾರಣವಾಯಿತು!! ಸೈತಾನನು ತನ್ನ ಹಂಚಿಕೆಗೆ ತಾನೇ ಬಲಿಯಾದನು - ಯಾವಾಗಲೂ ಹೀಗೆಯೇ ಆಗುತ್ತದೆ. ದೇವರು ಯೇಸುವಿಗಾಗಿ ಸೈತಾನನ ಯೋಜನೆಗಳನ್ನು ತಲೆಕೆಳಗಾಗಿ ಮಾಡಿದರು. ನಾವು ಸಹ ಪರಿಶುದ್ಧ ಮನಸಾಕ್ಷಿಯಿಂದ ದೇವರ ಮುಂದೆ ದೀನತೆಯಿಂದ ನಡೆದುಕೊಂಡರೆ, ಅವರು ನಮಗಾಗಿಯೂ ಇದನ್ನು ಮಾಡುವರು. ಪಿಶಾಚನು ಮತ್ತು ಆತನ ದಲಾಲಿಗಳು ನಮಗೆ ಹಾನಿಮಾಡಲು ಏನನ್ನು ಮಾಡಿದರೂ ಅದು ಅವರ ವಿರುದ್ಧವಾಗಿ ತಿರುಗುತ್ತದೆ - ಮತ್ತು ನಮ್ಮ ಜೀವನದಲ್ಲಿ ದೇವರ ಉದ್ದೇಶಗಳು ನೆರವೇರುತ್ತವೆ.