WFTW Body: 

ನಾವು ’ಲೂಕ. 22:31'ರಲ್ಲಿ, ಪೇತ್ರನು ಎದುರಿಸಲಿದ್ದ ಒಂದು ಅಪಾಯದ ಕುರಿತಾಗಿ ಯೇಸುವು ಆತನನ್ನು ಎಚ್ಚರಿಸಿದ್ದರ ಬಗ್ಗೆ ಓದುತ್ತೇವೆ. ಯೇಸುವು ಆತನಿಗೆ ಹೇಳಿದ ಮಾತು ಇದು, "ಸಿಮೋನನೇ, ಸಿಮೋನನೇ, ನೋಡು, ಸೈತಾನನು ನಿಮ್ಮನ್ನು ಗೋದಿಯಂತೆ ಒನೆಯಬೇಕೆಂದು ಅಪ್ಪಣೆ ಕೇಳಿಕೊಂಡನು; ಆದರೆ ನಿನ್ನ ನಂಬಿಕೆ ಕುಂದಿ ಹೋಗಬಾರದೆಂದು ನಾನು ನಿನ್ನ ವಿಷಯದಲ್ಲಿ ದೇವರಿಗೆ ವಿಜ್ಞಾಪನೆ ಮಾಡಿಕೊಂಡೆನು. ನೀನು ತಿರುಗಿಕೊಂಡ ಮೇಲೆ ನಿನ್ನ ಸಹೋದರರನ್ನು ದೃಢಪಡಿಸು."

ಪೇತ್ರನು ಸೋಲುವುದನ್ನು ದೇವರು ಅನುಮತಿಸಿದ್ದರಲ್ಲಿ ಒಂದು ಉದ್ದೇಶವಿತ್ತು. ಆ ಉದ್ದೇಶ ಪೇತ್ರನನ್ನು ಒಂದು ಜರಡಿಯಲ್ಲಿ ಸೋಸುವುದು ಆಗಿತ್ತು. ವಾಸ್ತವಿಕವಾಗಿ ಸೈತಾನನು ಪೇತ್ರನನ್ನು ಸಂಪೂರ್ಣವಾಗಿ ನಾಶಪಡಿಸುವ ಉದ್ದೇಶವನ್ನು ಹೊಂದಿದ್ದನು, ಆದರೆ ದೇವರು ಅದಕ್ಕೆ ಒಪ್ಪಿಗೆ ಕೊಡಲಿಲ್ಲ. ನಾವು ನಮ್ಮ ಶಕ್ತಿ ಮೀರಿದ ಶೋಧನೆಯನ್ನು ಎದುರಿಸುವುದನ್ನಾಗಲೀ, ಪರೀಕ್ಷೆಗೆ ಒಳಪಡುವುದನ್ನಾಗಲೀ ದೇವರು ಅನುಮತಿಸುವುದಿಲ್ಲ. ಹಾಗಾಗಿ ಪೇತ್ರನನ್ನು ಜರಡಿಯಲ್ಲಿ ಸೋಸುವ ಅವಕಾಶ ಸೈತಾನನಿಗೆ ಸಿಕ್ಕಿತು. ಪೇತ್ರನ ಸೋಲಿನ ಫಲಿತಾಂಶವೆಂದರೆ, ಆತನೊಳಗೆ ಇದ್ದ ಬಹಳಷ್ಟು ಹೊಟ್ಟು (ಕಳಪೆ ಸಂಗತಿಗಳು) ಹೊರಕ್ಕೆ ತೆಗೆಯಲ್ಪಟ್ಟವು. ವಾಸ್ತವಿಕವಾಗಿ ಇದೇ ಕಾರಣಕ್ಕಾಗಿ ನಾವು ಸಹ ಸೋಲುವುದನ್ನು ದೇವರು ಅನುಮತಿಸುತ್ತಾರೆ. ನಮ್ಮೆಲ್ಲರ ಜೀವಿತದಲ್ಲಿ ಹೊಟ್ಟಿನ ಹಾಗೆ ಇರುವ ಕಳಪೆ ಸಂಗತಿಗಳು ತೆಗೆದು ಹಾಕಲ್ಪಡುವುದು ಒಳ್ಳೆಯದಲ್ಲವೇ? ನಿಶ್ಚಯವಾಗಿ ಹೌದು. ಒಬ್ಬ ರೈತನು ಗೋದಿಯ ಬೆಳೆಯ ಕಟಾವಿನ ನಂತರ, ಗೋದಿಯನ್ನು ಬೇರ್ಪಡಿಸುವುದಕ್ಕೆ ಒಂದು ಜರಡಿಯನ್ನು ಉಪಯೋಗಿಸ ಬೇಕಾಗುತ್ತದೆ. ಹಾಗೆ ಮಾಡಿದಾಗ ಮಾತ್ರ ಹೊಟ್ಟು ವಿಂಗಡಿಸಲ್ಪಡುತ್ತದೆ.

ನಮ್ಮೆಲ್ಲರ ಜೀವಿತದ ಹೊಟ್ಟನ್ನು ತೆಗೆದು ಹಾಕಲು ಕರ್ತರು ಸೈತಾನನನ್ನು ಉಪಯೋಗಿಸುತ್ತಾರೆ. ಬಹಳ ವಿಸ್ಮಯಕರ ವಿಷಯವೆಂದರೆ, ದೇವರು ತಮ್ಮ ಉದ್ದೇಶ ಸಾಧನೆಗಾಗಿ ನಾವು ಪದೇ ಪದೇ ಸೋಲುವುದನ್ನು ಅನುಮತಿಸುತ್ತಾರೆ!! ಪೇತ್ರನಲ್ಲಿ ಈ ಉದ್ದೇಶ ಸಫಲಗೊಳ್ಳಲು ದೇವರು ಸೈತಾನನನ್ನು ಬಳಸಿಕೊಂಡರು ಮತ್ತು ಅವರು ನಮ್ಮ ಜೀವಿತಗಳಲ್ಲೂ ಸಹ ಈ ಉದ್ದೇಶ ನೆರವೇರಲು ಸೈತಾನನನ್ನು ಬಳಸಿಕೊಳ್ಳುತ್ತಾರೆ. ನಮ್ಮೆಲ್ಲರಲ್ಲೂ ಬಹಳಷ್ಟು ಪ್ರಮಾಣದ ಕಳಪೆ ಸಂಗತಿಗಳು ಇವೆ - ಅಹಂಕಾರ, ಸ್ವಾಭಿಮಾನ ಮತ್ತು ಸ್ವ-ನೀತಿಗಳೆಂಬ ಹೊಟ್ಟು. ಇಂತಹ ಹೊಟ್ಟನ್ನು ನಮ್ಮೊಳಗಿನಿಂದ ಸಂಪೂರ್ಣವಾಗಿ ತೆಗೆದು ನಮ್ಮನ್ನು ಶುಚಿಗೊಳಿಸುವುದಕ್ಕೆ, ದೇವರು ಸೈತಾನನ ಮೂಲಕ ನಾವು ಪದೇ ಪದೇ ಸೋಲುವಂತೆ ಮಾಡುತ್ತಾರೆ.

ಕರ್ತರು ಈ ಉದ್ದೇಶವನ್ನು ನಿಮ್ಮ ಜೀವಿತದಲ್ಲಿ ನೆರವೇರಿಸುತ್ತಿದ್ದಾರೆಯೇ ಇಲ್ಲವೇ, ಎಂಬುದು ನಿಮಗೆ ಮಾತ್ರ ತಿಳಿದಿದೆ. ಆದರೆ ಆ ಹೊಟ್ಟು ತೆಗೆದು ಹಾಕಲ್ಪಡುತ್ತಿದ್ದರೆ, ನಿಮ್ಮ ದೀನತೆ ಹಿಂದಿನಿಗಿಂತ ಹೆಚ್ಚುತ್ತದೆ ಮತ್ತು ನಿಮ್ಮ ಸ್ವ-ನೀತಿ ಕಡಿಮೆಯಾಗುತ್ತಾ ಇರುತ್ತದೆ. ಸೋಲುತ್ತಿರುವ ಇತರರ ಬಗ್ಗೆ ನಿಮ್ಮಲ್ಲಿ ಕೀಳು ಭಾವನೆ ಇರುವುದಿಲ್ಲ. ನೀವು ಬೇರೆಲ್ಲರಿಗಿಂತ ಉತ್ತಮರೆಂಬ ಭಾವನೆ ನಿಮ್ಮಲ್ಲಿ ಇರುವುದಿಲ್ಲ.

ನಮ್ಮಲ್ಲಿರುವ ಕಸ-ಹೊಟ್ಟುಗಳನ್ನು ತೆಗೆದು ಹಾಕುವುದಕ್ಕಾಗಿ ಸೈತಾನನನ್ನುದೇವರು ಸಮ್ಮತಿಸುತ್ತಾರೆ ಮತ್ತು ಇದಕ್ಕಾಗಿ ನಾವು ಪದೇ ಪದೇ ಸೋಲುವುದನ್ನು ಅವರು ಅನುಮತಿಸುತ್ತಾರೆ. ಹಾಗಾಗಿ ನೀವು ಸೋತಾಗ ನಿರಾಶರಾಗಬೇಡಿರಿ. ನೀವು ಇನ್ನೂ ದೇವರ ಕೈಯಲ್ಲಿ ಇದ್ದೀರಿ. ನೀವು ಪದೇ ಪದೇ ಸೋಲುವುದರಿಂದ ಒಂದು ಮಹಿಮಾಭರಿತ ಉದ್ದೇಶ ಸಾಧಿಸಲ್ಪಡುತ್ತಿದೆ. ಆದರೆ ಇಂತಹ ಸಂದರ್ಭಗಳಲ್ಲಿ, ದೇವರು ನಿಮ್ಮನ್ನು ಪ್ರೀತಿಸುತ್ತಾರೆಂಬ ನಂಬಿಕೆ ನಿಮ್ಮಲ್ಲಿ ಕ್ಷೀಣಿಸಬಾರದು. ಇದಕ್ಕಾಗಿ ಯೇಸುವು ಪೇತ್ರನಿಗಾಗಿ ವಿಜ್ಞಾಪಿಸಿದರು ಮತ್ತು ಅವರು ಈ ದಿನ ನಮಗಾಗಿ ಇದನ್ನೇ ವಿಜ್ಞಾಪಿಸುತ್ತಿದ್ದಾರೆ. ನಾವು ಎಂದಿಗೂ ಸೋಲನ್ನು ಕಾಣದಿರಲಿ ಎಂದು ಅವರು ಪ್ರಾರ್ಥಿಸುತ್ತಿಲ್ಲ, ಆದರೆ ನಾವು ಸೋಲಿನಿಂದ ಜಾರುತ್ತಾ ಅತ್ಯಂತ ಕೆಳಮಟ್ಟವನ್ನು ತಲುಪಿದಾಗ, ದೇವರ ಪ್ರೀತಿಯ ಬಗ್ಗೆ ನಮ್ಮಲ್ಲಿರುವ ಭರವಸೆಯು ಇನ್ನೂ ಭದ್ರವಾಗಿರಲಿ, ಎಂದು ಅವರು ಪ್ರಾರ್ಥಿಸುತ್ತಿದ್ದಾರೆ.

ನಾವು ಹಲವಾರು ಸೋಲುಗಳ ಮೂಲಕ ನಡೆದು ಬಂದಾಗ ಮಾತ್ರವೇ ಕೊನೆಗೆ ಒಂದು "ಶೂನ್ಯ ಬಿಂದು"ವನ್ನು ತಲುಪುತ್ತೇವೆ, ಮತ್ತು ಆಗ ನಾವು ನಿಜವಾಗಿ ಮುರಿಯಲ್ಪಟ್ಟಿರುತ್ತೇವೆ. ಪೇತ್ರನು ಆ ಜಾಗವನ್ನು ತಲುಪಿದಾಗ, ಆತನು ಎರಡನೆಯ "ತಿರುಗುವಿಕೆ" ಅಥವಾ ಮಾನಸಾಂತರವನ್ನು ಅನುಭವಿಸಿದನು (ಲೂಕ. 22:32). ಆತನು ತಿರುಗಿಕೊಂಡನು. ಪೇತ್ರನಿಗಾಗಿ ಯೇಸುವಿನ ಪ್ರಾರ್ಥನೆಗೆ ಉತ್ತರ ಸಿಕ್ಕಿದ್ದರ ರುಜುವಾತು ಏನೆಂದರೆ, ಪೇತ್ರನು ಜಾರಿಬಿದ್ದು ಅತ್ಯಂತ ಕೆಳಮಟ್ಟವನ್ನು ತಲುಪಿದಾಗ, ಆತನು ತಿರುಗಿಕೊಂಡನು. ಆತನು ನಿರುತ್ಸಾಹಗೊಂಡು ಅಲ್ಲಿಯೇ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಅವನು ತನ್ನ ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ. ಅವನು ಮೇಲೆದ್ದನು. ದೇವರು ಅವನಿಗೆ ಸ್ವ-ಇಚ್ಛೆಯಿಂದ ಇಷ್ಟಬಂದಂತೆ ನಡೆಯುವ ಅವಕಾಶವನ್ನು ಕೊಟ್ಟಿದ್ದರು. ಆದರೆ ಪೇತ್ರನು ಆ ಸ್ಚ-ಇಚ್ಛೆಯ ಕೊನೆಯ ಹಂತಕ್ಕೆ ಬಂದಾಗ, ದೇವರು ಅವನನ್ನು ಹಿಂದಕ್ಕೆ ಎಳೆದುಕೊಂಡರು.

ದೇವರ ಮಗುವಾಗುವುದು ಒಂದು ಅದ್ಭುತ ಅನುಭವವಾಗಿದೆ. ದೇವರು ನಮ್ಮನ್ನು ಹಿಡಿದುಕೊಂಡಾಗ, ಅವರು ನಮ್ಮ ರಕ್ಷಣೆಗಾಗಿ ನಮ್ಮ ಸುತ್ತ ಒಂದು ಹಗ್ಗವನ್ನು ಕಟ್ಟುತ್ತಾರೆ. ಆ ಹಗ್ಗವನ್ನು ಸಡಿಲಗೊಳಿಸಿ ಉದ್ದ ಬಿಟ್ಟಿರುತ್ತಾರೆ ಮತ್ತು ನೀವು ಜಾರಿಕೊಳ್ಳಬಹುದು ಮತ್ತು ಸಾವಿರಾರು ಬಾರಿ ಬೀಳಲೂ ಬಹುದು ಮತ್ತು ಬೇಕಿದ್ದರೆ ಕರ್ತನಿಂದ ದೂರ ಹೋಗಲೂ ಬಹುದು. ಆದರೆ ಒಂದು ದಿನ, ನೀವು ಆ ಹಗ್ಗದ ಕೊನೆಯನ್ನು ತಲುಪುತ್ತೀರಿ. ಆಗ ದೇವರು ನಿಮ್ಮನ್ನು ತಮ್ಮ ಬಹಳ ಸಮೀಪಕ್ಕೆ ಎಳೆದುಕೊಳ್ಳುತ್ತಾರೆ. ಅದೇ ವೇಳೆಯಲ್ಲಿ, ನಿಮಗೆ ಆ ಹಗ್ಗವನ್ನು ಕಡಿದು ಹಾಕಿ, ಅಲ್ಲಿಂದ ಪರಾರಿಯಾಗುವ ಅವಕಾಶವೂ ಸಹ ಕೊಡಲ್ಪಡುತ್ತದೆ. ಅಥವಾ, ದೇವರ ದಯೆಯ ಮೂಲಕ ಮುರಿಯಲ್ಪಟ್ಟು, ದುಃಖಿಸುತ್ತಾ ದೇವರ ಬಳಿಗೆ ಹಿಂದಿರುಗಲು ನೀವು ನಿರ್ಧರಿಸಬಹುದು. ಪೇತ್ರನು ಇದನ್ನೇ ಮಾಡಿದನು. ಆತನು ವ್ಯಥೆಪಟ್ಟು ಅತ್ತನು ಮತ್ತು ಕರ್ತರ ಕಡೆಗೆ ತಿರುಗಿಕೊಂಡನು. ಆದರೆ ಇಸ್ಕರಿಯೋತ ಯೂದನು ಹಾಗೆ ಮಾಡಲಿಲ್ಲ. ಅವನು ಆ ಹಗ್ಗವನ್ನು ಕತ್ತರಿಸಿ ಹಾಕಿದನು - ಅಂದರೆ ತನ್ನ ಜೀವಿತದ ಮೇಲೆ ದೇವರ ಅಧಿಕಾರದ ವಿರುದ್ಧ ತಿರುಗಿಕೊಂಡನು - ಮತ್ತು ನಿತ್ಯಜೀವದ ಭಾಗ್ಯವನ್ನು ಕಳೆದುಕೊಂಡನು. ಆದರೆ ನೀವು ಪೇತ್ರನು ಮಾಡಿದ್ದನ್ನು ಮಾಡುತ್ತೀರೆಂದು ನಾನು ನಂಬುತ್ತೇನೆ.

ಈ ಸನ್ನಿವೇಶದಲ್ಲಿ ಯೇಸುವು ಪೇತ್ರನಿಗೆ ಹೇಳಿದ ಮಾತು, "ನೀನು ತಿರುಗಿಕೊಂಡು ಮತ್ತೊಮ್ಮೆ ಬಲವನ್ನು ಹೊಂದಿದ ಮೇಲೆ, ನಿನ್ನ ಸಹೋದರರನ್ನು ದೃಢಪಡಿಸು." ನಾವು ಮುರಿಯಲ್ಪಟ್ಟಾಗಲೇ ಇತರರನ್ನು ಬಲ ಪಡಿಸುವುದಕ್ಕಾಗಿ ಬೇಕಾದ ಸಾಮರ್ಥ್ಯವನ್ನು ಪಡೆಯಲು ಸಾಧ್ಯವಾಗುತ್ತದೆ. ಪೇತ್ರನು ಬಲಹೀನನೂ, ಮುರಿಯಲ್ಪಟ್ಟವನೂ ಆದಾಗ ಮಾತ್ರ, ಆತನು ನಿಜವಾಗಿ ಬಲಶಾಲಿಯಾದನು - ಎಷ್ಟರ ಮಟ್ಟಿಗೆ ಎಂದರೆ, ಆತನು ತನ್ನ ಸಹೋದರರನ್ನು ಮತ್ತು ಸಹೋದರಿಯರನ್ನು ಬಲಪಡಿಸುವ ಸಾಮರ್ಥ್ಯವನ್ನು ಪಡೆದನು. ಪೇತ್ರನ ಪವಿತ್ರಾತ್ಮ-ಭರಿತ ಸೇವೆಯ ಸಿದ್ಧತೆ ಆತನ ಸೋಲುವಿಕೆಯ ಅನುಭವದ ಮೂಲಕ ಸಾಧ್ಯವಾಯಿತು ಎಂದು ನಾವು ಹೇಳಬಹುದು. ಆತನು ಸೋಲನ್ನು ಅನುಭವಿಸದೆ ಪವಿತ್ರಾತ್ಮನಿಂದ ತುಂಬಿಸಲ್ಪಟ್ಟಿದ್ದರೆ, ಆ ಪಂಚಾಶತ್ತಮ ದಿನದಂದು ತಾನು ಎಂದೂ ಸೋಲನ್ನು ಅನುಭವಿಸಿಲ್ಲ ಎಂಬ ಹೆಮ್ಮೆಯಿಂದ ಆತನು ಎದ್ದು ನಿಲ್ಲುತ್ತಿದ್ದನು, ಮತ್ತು ತನ್ನ ಮುಂದೆ ನೆರೆದಿದ್ದ ಆ ದಾರಿತಪ್ಪಿದ್ದ ಬಡ ಪಾಪಿಗಳನ್ನು ತಿರಸ್ಕಾರದ ಭಾವನೆಯಿಂದ ನೋಡುತ್ತಿದ್ದನು. ಆಗ ದೇವರು ಆತನ ವೈರಿಯಾಗುತ್ತಿದ್ದರು, ಏಕೆಂದರೆ ದೇವರು ಅಹಂಕಾರಿಗಳನ್ನು ಎದುರಿಸುತ್ತಾರೆ!!

ದೇವರಿಗೆ ಬೇಕಾದಂತ ವ್ಯಕ್ತಿಯಾಗುವುದಕ್ಕೆ ಮೊದಲು, ಪೇತ್ರನು ಸಹ ಅವರಂತೆಯೇ ಒಂದು "ಶೂನ್ಯ-ಬಿಂದು"ವನ್ನು ತಲುಪಬೇಕಿತ್ತು. ನಾವು ತಳಮಟ್ಟದ ಮೂಲಕ ಸ್ವತಃ ಹಾದು ಹೋದಾಗ, ಅದೇ ಸ್ಥಿತಿಯಲ್ಲಿರುವ ಇತರರನ್ನು ನಾವು ಎಂದಿಗೂ ತಿರಸ್ಕರಿಸುವುದಿಲ್ಲ. ಈ ಅನುಭವದ ನಂತರ ನಾವು ಪಾಪಿಗಳನ್ನು, ಅಥವಾ ಹಿಂಜಾರಿದ ವಿಶ್ವಾಸಿಗಳನ್ನು, ಅಥವಾ ಜಾರಿ ಬಿದ್ದಿರುವ ಕ್ರೈಸ್ತ ನಾಯಕರನ್ನು ಸಹ ತಿರಸ್ಕಾರದ ಭಾವನೆಯಿಂದ ಎಂದಿಗೂ ನೋಡುವುದಿಲ್ಲ. ನಾವು ಪಾಪದ ಮೇಲೆ ಗಳಿಸಿರುವ ಜಯದ ಬಗ್ಗೆ ಸ್ವಲ್ಪವೂ ಹೆಚ್ಚಳ ಪಡುವುದಿಲ್ಲ, ಏಕೆಂದರೆ ಒಂದು ಸಮಯದಲ್ಲಿ ನಾವು ಸ್ವತಃ ಸೋತಿದ್ದರ ಅರಿವು ನಮ್ಮಲ್ಲಿರುತ್ತದೆ. ಹಾಗಾಗಿ ಪೇತ್ರನು ಇತರ ಕ್ರೈಸ್ತರನ್ನು ಹೀಗೆ ಎಚ್ಚರಿಸಿದನು, "ನೀವು ನಿಮ್ಮ ಹಿಂದಣ ಪಾಪಗಳಿಂದ ಹೇಗೆ ಶುದ್ಧೀಕರಿಸಲ್ಪಟ್ಟಿರಿ ಎಂಬುದನ್ನು ಮರೆಯದಿರಿ" (2 ಪೇತ್ರ. 1:9). ಅವರು ಇದನ್ನು ಮರೆತರೆ, ಅವರು ಕುರುಡರೂ ದೂರದೃಷ್ಟಿ ಇಲ್ಲದವರೂ ಆಗುತ್ತಾರೆಂದು ಆತನು ಅವರನ್ನು ಎಚ್ಚರಿಸಿದನು. ನಾನು ಎಂದಿಗೂ ಕುರುಡನು ಅಥವಾ ದೂರದೃಷ್ಟಿ ಇಲ್ಲದವನು ಆಗಲು ಬಯಸುವುದಿಲ್ಲ. ನಾನು ಎಲ್ಲಾ ವೇಳೆಯಲ್ಲಿ ದೂರದೃಷ್ಟಿಯ ನೋಟ - ಅಂದರೆ ಪರಲೋಕದ ಮೌಲ್ಯಗಳನ್ನು ಮತ್ತು ನಿತ್ಯತ್ವದ ಮೌಲ್ಯಗಳನ್ನು - ನೋಡ ಬಯಸುತ್ತೇನೆ.