WFTW Body: 

ಅಪೊಸ್ತಲ ಪೇತ್ರನು ತನ್ನ ಮೊದಲನೆಯ ಪತ್ರಿಕೆಯಲ್ಲಿ, ವಿಧೇಯತೆಯ ಬಗ್ಗೆ ಅನೇಕ ವಿಷಯಗಳನ್ನು ಬರೆದಿದ್ದಾನೆ. ದೇವರ ನಿಜವಾದ ಕೃಪೆಯ ಅನುಭವ ಪಡೆದಿರುವ ಮನುಷ್ಯನು ಎಲ್ಲಾ ವೇಳೆಯಲ್ಲಿ, ಎಲ್ಲಾ ಸಂದರ್ಭಗಳಲ್ಲಿ, ತನ್ನ ಮೇಲೆ ನೇಮಿಸಲ್ಪಟ್ಟ ಅಧಿಕಾರಕ್ಕೆ ವಿಧೇಯನಾಗಿ ನಡೆಯುತ್ತಾನೆ. ಆತನಿಗೆ ವಿಧೇಯತೆಯು ಕಷ್ಟವೆನಿಸುವುದಿಲ್ಲ. ಆದಾಮನ ಸೃಷ್ಟಿಗಿಂತ ಬಹಳ ಮೊದಲೇ, ಪಾಪವು ಅವಿಧೇಯತೆ ಅಥವಾ ದಂಗೆಯೇಳುವುದರ ಮೂಲಕ ಹುಟ್ಟಿಕೊಂಡಿತು. ಪ್ರಧಾನ ದೇವದೂತನು ದೇವರ ಅಧಿಕಾರದ ವಿರುದ್ಧ ತಿರುಗಿಬಿದ್ದನು ಮತ್ತು ಆತನು ಆ ಕ್ಷಣದಲ್ಲೇ ಸೈತಾನನಾಗಿ ಬದಲಾದನು. ಇದೇ ಕಾರಣಕ್ಕಾಗಿ "ಅವಿಧೇಯತೆಯು ಮಂತ್ರತಂತ್ರಗಳಿಗೆ ಸಮನಾದದ್ದು" ಎಂದು ಬರೆಯಲ್ಪಟ್ಟಿದೆ (1 ಸಮುವೇಲನು 15:23) - ಏಕೆಂದರೆ ಹೇಗೆ ಮಂತ್ರಮಾಟವು ದುರಾತ್ಮಗಳೊಂದಿಗೆ ಸಂಪರ್ಕವನ್ನು ಉಂಟುಮಾಡುತ್ತದೋ, ಹಾಗೆಯೇ ದಂಗೆಯೇಳುವ ಮನೋಭಾವವು ಒಬ್ಬ ವ್ಯಕ್ತಿಯನ್ನು ದುರಾತ್ಮಗಳ ಬಳಿಗೆ ಕರೆದೊಯ್ಯುತ್ತದೆ. ಯೇಸುವು ಇದಕ್ಕೆ ತದ್ವಿರುದ್ಧವಾದ ಜೀವಿತವನ್ನು ಜೀವಿಸುವುದರ ಮೂಲಕ ಸೈತಾನನನ್ನು ಸೋಲಿಸಿದನು. ಆತನು ತನ್ನನ್ನು ತಗ್ಗಿಸಿಕೊಂಡನು ಮತ್ತು ತನ್ನ ತಂದೆಗೆ ಸಂಪೂರ್ಣ ವಿಧೇಯತೆಯಿಂದ ಭೂಲೋಕಕ್ಕೆ ಇಳಿದು ಬಂದನು; ಮತ್ತು ಆತನು ತನ್ನ ಲೌಕಿಕ ಜೀವಿತದ 30 ವರ್ಷಗಳ ಕಾಲ ಅಪರಿಪೂರ್ಣರಾಗಿದ್ದ ಯೋಸೇಫ ಮತ್ತು ಮರಿಯಳ ಅಧಿಕಾರಕ್ಕೆ ತನ್ನನ್ನು ಒಪ್ಪಿಸಿಕೊಂಡನು. ಏಕೆಂದರೆ ಆತನ ಪರಲೋಕದ ತಂದೆಯು ಇವರಿಬ್ಬರನ್ನು ಆತನ ಮೇಲೆ ಅಧಿಕಾರಿಗಳಾಗಿ ಇರಿಸಿದ್ದರು. ದೇವರ ನಿಜವಾದ ಕೃಪೆಯ ಅನುಭವವನ್ನು ಹೊಂದಿರುವಾತನು ತನ್ನ ಲೌಕಿಕ ಜೀವಿತದಲ್ಲಿ ದ್ರೋಹದ ಆತ್ಮದಿಂದ ಬಿಡುಗಡೆ ಅಥವಾ ರಕ್ಷಣೆಯನ್ನು ಅನುಭವಿಸುತ್ತಾನೆ. ನಿನ್ನ ಮೇಲಧಿಕಾರಿಗೆ ವಿಧೇಯನಾಗುವುದು ನಿನಗೆ ಕಷ್ಟವೆನಿಸಿದರೆ, ನೀನು ನಿನ್ನ ಒಳಜೀವಿತದಲ್ಲಿ ರಕ್ಷಣೆಯನ್ನು ಪಡೆಯಬೇಕಿದೆ.

ಕ್ರೈಸ್ತ ವಿಶ್ವಾಸಿಗಳು ಎಲ್ಲಾ ವಿಧವಾದ ಮಾನವ ಅಧಿಕಾರಕ್ಕೆ, ಅಂದರೆ ಅರಸರಿಗೆ, ಅಧಿಪತಿಗಳಿಗೆ, ಇತ್ಯಾದಿ ಎಲ್ಲರಿಗೂ ವಿಧೇಯರಾಗಿ ನಡೆಯುವುದಕ್ಕಾಗಿ ಕರೆಯಲ್ಪಟ್ಟಿದ್ದಾರೆ (1 ಪೇತ್ರನು 2:13-14). ಇಲ್ಲಿ ಪ್ರಸ್ತಾಪಿಸಿರುವ ಸಮಯದಲ್ಲಿ ರೋಮ್ ಸಾಮ್ರಾಜ್ಯಕ್ಕೆ "ನಿರೋನನು" (Emperor Nero) ಚಕ್ರವರ್ತಿಯಾಗಿದ್ದನು; ಈತನು ರೋಮ್ ಚಕ್ರವರ್ತಿಗಳಲ್ಲಿ ಅತ್ಯಂತ ದುಷ್ಟನೂ, ಕ್ರೈಸ್ತರನ್ನು ಹಿಂಸಿಸಿ ಕೊಲ್ಲುತ್ತಿದ್ದವನೂ ಆಗಿದ್ದನು. ಆದಾಗ್ಯೂ ಪೇತ್ರನು ಕ್ರೈಸ್ತರಿಗೆ, ಈ ಅರಸನಿಗೆ ವಿಧೇಯರಾಗಿ ನಡೆಯುವುದು ಮಾತ್ರವಲ್ಲದೆ, "ಅರಸನನ್ನು ಸನ್ಮಾನಿಸುವಂತೆ"ಆದೇಶಿಸುತ್ತಾನೆ (1 ಪೇತ್ರನು 2:17). ಅದಲ್ಲದೆ "ಎಲ್ಲಾ ಜನರನ್ನು ಸನ್ಮಾನಿಸುವಂತೆಯೂ" ಆತನು ತಿಳಿಸುತ್ತಾನೆ (1 ಪೇತ್ರನು 2:17). ಹಳೆಯ ಒಡಂಬಡಿಕೆಯಲ್ಲಿ, ವಯಸ್ಸಿನಲ್ಲಿ ಹಿರಿಯರ ಮುಂದೆ ಎದ್ದು ನಿಂತು ಅವರನ್ನು ಸನ್ಮಾನಿಸುವ ಆಜ್ಞೆಯನ್ನು ನೀಡಲಾಗಿತ್ತು (ಯಾಜಕಕಾಂಡ 19:32). ಆದರೆ ಹೊಸ ಒಡಂಬಡಿಕೆಯ ಅಡಿಯಲ್ಲಿ, ನಾವು ಎಲ್ಲಾ ಜನರನ್ನು ಗೌರವಿಸಬೇಕು.

"ನಿನಗೆ ನಿನ್ನ ಮೇಲಿನ ಅಧಿಕಾರಿಗಳಿಗೆ ವಿಧೇಯನಾಗುವುದು ಒಂದು ಸಮಸ್ಯೆಯಾಗಿದ್ದರೆ, ನಿನ್ನ ಒಳಜೀವಿತದಲ್ಲಿ ನೀನು ರಕ್ಷಣೆಯನ್ನು ಹೊಂದಬೇಕಿದೆ."

ಹೊಸ ಒಡಂಬಡಿಕೆಯಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ನಮ್ಮ ನಡತೆಯ ಗುಣಮಟ್ಟವು ಹೆಚ್ಚಿನದ್ದಾಗಿರಬೇಕು. ಹಳೆಯ ಒಡಂಬಡಿಕೆಯಲ್ಲಿ ಇಸ್ರಾಯೇಲ್ಯರು ದೇವರಿಗೆ ತಮ್ಮ 10% ವರಮಾನವನ್ನು ದಶಮಾಂಶವಾಗಿ ಕೊಡಬೇಕಾಗಿತ್ತು. ಹೊಸ ಒಡಂಬಡಿಕೆಯ ಅಡಿಯಲ್ಲಿ, ನಾವು ಎಲ್ಲವನ್ನೂ ಸಮರ್ಪಿಸಬೇಕು (ಲೂಕ. 14:33). ಹಳೆಯ ಒಡಂಬಡಿಕೆಯಲ್ಲಿ, ಒಂದು ದಿನವನ್ನು (ಸಬ್ಬತ್ ದಿನ) ದೇವರಿಗೆ ಮೀಸಲಾಗಿ ಇಡಲಾಗಿತ್ತು. ಹೊಸ ಒಡಂಬಡಿಕೆಯ ಅಡಿಯಲ್ಲಿ, ಪ್ರತಿದಿನವನ್ನೂ ದೇವರಿಗೆ ಸಮರ್ಪಿಸಬೇಕಿದೆ. ಹಳೆಯ ಒಡಂಬಡಿಕೆಯಲ್ಲಿ, ಚೊಚ್ಚಲ ಗಂಡು ಮಗುವನ್ನು ಕರ್ತರಿಗೆ ಮೀಸಲಾಗಿ ಇಡಲಾಗುತ್ತಿತ್ತು. ಹೊಸ ಒಡಂಬಡಿಕೆಯ ಅಡಿಯಲ್ಲಿ, ನಾವು ಪಡೆಯುವ ಎಲ್ಲಾ ಮಕ್ಕಳನ್ನು ದೇವರಿಗೆ ಸಮರ್ಪಿಸುತ್ತೇವೆ. ದೇವರ ಕೃಪೆಯನ್ನು ಅನುಭವಿಸಿರುವವನಿಗೆ ಎಲ್ಲಾ ಜನರನ್ನು ಸನ್ಮಾನಿಸುವುದು ಕಷ್ಟವೆನಿಸುವುದಿಲ್ಲ. ನಾವು ಯೇಸುವಿನಂತಹ ಸೇವಕರಾಗಬೇಕು, ಹಾಗಾಗಿ ನಾವು ಎಲ್ಲರನ್ನೂ ಸನ್ಮಾನಿಸಿ, "ಎಲ್ಲರೂ ನಮಗಿಂತ ಹೆಚ್ಚು ಪ್ರಮುಖರೆಂದು ಪರಿಗಣಿಸಿ," ಸಂತೋಷಿಸುತ್ತೇವೆ (ಫಿಲಿಪ್ಪಿ. 2:3).

ಇದರ ನಂತರ ಪೇತ್ರನು ವಿಶೇಷವಾಗಿ ಸೇವಕರನ್ನು ಸಂಬೋಧಿಸಿ ಮಾತನಾಡುತ್ತಾನೆ ಮತ್ತು ಅವರು ತಮ್ಮ ಯಜಮಾನರಿಗೆ ವಿಧೇಯರಾಗಬೇಕೆಂದು ತಿಳಿಸುತ್ತಾನೆ. ಸೇವಕರು ಅವರ ಯಜಮಾನರಿಗೆ ವಿಧೇಯರಾಗಬೇಕು ಎಂಬುದನ್ನು ಎಲ್ಲಾ ಅಪೊಸ್ತಲರು ಕಲಿಸಿಕೊಟ್ಟರು. ಒಬ್ಬ ಕ್ರೈಸ್ತನು ಒಂದು ಕಛೇರಿಯಲ್ಲಿ ಅಥವಾ ಕಾರ್ಖಾನೆಯಲ್ಲಿ ನೌಕರಿ ಮಾಡುವಾಗ, ತನ್ನ ಮೇಲಧಿಕಾರಿಗಳ ವಿರುದ್ಧ ತಿರುಗಿಬಿದ್ದರೆ, ಆತನು ಕ್ರಿಸ್ತನಿಗೆ ಬಹಳ ಕೆಟ್ಟ ಸಾಕ್ಷಿಯಾಗುತ್ತಾನೆ. ಒಬ್ಬ ಕ್ರೈಸ್ತ ವಿಧ್ಯಾರ್ಥಿಯು ತನ್ನ ಶಾಲೆಯಲ್ಲಿ ಅಥವಾ ಕಾಲೇಜಿನಲ್ಲಿ ತನ್ನ ಪ್ರಾಧ್ಯಾಪಕರನ್ನು ವಿರೋಧಿಸುವುದಾದರೆ, ಆತನು ಸಹ ಕ್ರಿಸ್ತನ ಹೆಸರಿಗೆ ಕೆಟ್ಟ ಸಾಕ್ಷಿಯಾಗಿದ್ದಾನೆ. ಇಂತಹ ಕ್ರೈಸ್ತನು "ದೇವರ ನಿಜವಾದ ಕೃಪೆಯನ್ನು" ಅರಿತಿಲ್ಲ. ಯೇಸುವು ಭೂಲೋಕಕ್ಕೆ ಬಂದು 30 ವರ್ಷಗಳ ಕಾಲ ತನ್ನ ಅಪರಿಪೂರ್ಣ ಲೌಕಿಕ ತಂದೆ-ತಾಯಿಗೆ ವಿಧೇಯನಾಗಿ ಜೀವಿಸಿದನೆಂಬುದನ್ನು ಅವನು ಅರ್ಥಮಾಡಿಕೊಂಡಿಲ್ಲ. ಇದು ನಾವೆಲ್ಲರೂ ಕಲಿಯಬೇಕಾದ ಪಾಠವಾಗಿದೆ. ಸೇವಕರೇ, ನಿಮ್ಮ ಯಜಮಾನರನ್ನು ಗೌರವಿಸಿ ಅವರಿಗೆ ಎಲ್ಲಾ ರೀತಿಯಲ್ಲಿ ವಿಧೇಯರಾಗಿ ನಡೆದುಕೊಳ್ಳಿರಿ. ನೀವು ಒಂದು ಕಛೇರಿಯಲ್ಲಿ, ಒಂದು ಕಾರ್ಖಾನೆಯಲ್ಲಿ, ಒಂದು ವಿದ್ಯಾಸಂಸ್ಥೆಯಲ್ಲಿ, ಒಂದು ಆಸ್ಪತ್ರೆಯಲ್ಲಿ ಇಲ್ಲವೇ ಬೇರೆಲ್ಲಾದರೂ ಕೆಲಸ ಮಾಡುವಾಗ, ಅಲ್ಲಿ ನಿಮ್ಮ ಮೇಲಧಿಕಾರಿಗಳನ್ನು ಗೌರವಿಸಬೇಕು.

ನಾವು ನಮ್ಮ ಮಕ್ಕಳಿಗೆ ಅವರ ಅಧ್ಯಾಪಕರನ್ನು ಗೌರವಿಸುವುದನ್ನು ಕಲಿಸಬೇಕು, ಮತ್ತು ಅವರು ತಮ್ಮ ತರಗತಿಯ ಮಕ್ಕಳೊಂದಿಗೆ ಸೇರಿಕೊಂಡು ಅಧ್ಯಾಪಕರನ್ನು ಗೇಲಿ ಮಾಡುವುದರಲ್ಲಿ ಪಾಲ್ಗೊಳ್ಳಬಾರದು. ಸೇವಕರು ತಮ್ಮ ಯಜಮಾನರಲ್ಲಿ ಒಳ್ಳೆಯವರನ್ನು ಹಾಗೂ ಸಾತ್ವಿಕರನ್ನು ಮಾತ್ರವಲ್ಲದೆ, ಅವಿವೇಕಿಗಳಾಗಿ ನಡೆಯುವವರನ್ನೂ ಸಹ ಗೌರವಿಸುವುದನ್ನು ಕಲಿಯಬೇಕು. ಒಳ್ಳೆಯ ಯಜಮಾನರಿಗೆ ವಿಧೇಯರಾಗುವುದು ಸುಲಭ. ಆದರೆ ದೇವರ ನಿಜವಾದ ಕೃಪೆಯ ವರವನ್ನು ಹೊಂದಿರುವ ಒಬ್ಬ ಕ್ರೈಸ್ತನು, ವಕ್ರಬುದ್ಧಿಯುಳ್ಳ ಯಜಮಾನನಿಗೂ ವಿಧೇಯನಾಗುತ್ತಾನೆ (1 ಪೇತ್ರನು 2:18). ನೀನು ನಿನ್ನ ಮನಸ್ಸಿಗೆ ಒಪ್ಪಿಗೆಯಾಗದ ಯಜಮಾನನಿಗೆ ವಿಧೇಯನಾಗಿ ನಡೆಯುವಾಗ ನಿನ್ನ ಕ್ರೈಸ್ತತ್ವದ ಬೆಳಕು ಪ್ರಕಾಶಿಸುತ್ತದೆ. ಸೂರ್ಯನ ಬೆಳಕಿನ ಮುಂದೆ ಉರಿಯುವ ಒಂದು ಮೇಣದ ಬತ್ತಿಯು ಸುಲಭವಾಗಿ ಕಾಣಿಸುವುದಿಲ್ಲ. ಆದರೆ ರಾತ್ರಿಯ ಕತ್ತಲಿನಲ್ಲಿ ಅದರ ಬೆಳಕು ಎಲ್ಲರಿಗೂ ಕಾಣಿಸುತ್ತದೆ. ಇದರಂತೆಯೇ, ಕತ್ತಲಿನ ವಾತಾವರಣದಲ್ಲಿ ಒಬ್ಬ ಕ್ರೈಸ್ತನ ಬೆಳಕು ಹೆಚ್ಚಾಗಿ ಹೊಳೆಯುತ್ತದೆ.

ನೀನು ನಿನ್ನ ತಪ್ಪಿಗಾಗಿ ಶಿಕ್ಷಿಸಲ್ಪಟ್ಟಾಗ ಅದನ್ನು ತಾಳ್ಮೆಯಿಂದ ಸಹಿಸಿಕೊಂಡರೆ ಅದೊಂದು ದೊಡ್ಡ ವಿಷಯವಲ್ಲ. ಆದರೆ ಒಳ್ಳೆಯದನ್ನು ಮಾಡಿದಾಗ ಬಾಧಿಸಲ್ಪಡುವುದನ್ನು ಸಹಿಸಿಕೊಂಡರೆ, ಅದು ದೇವರ ದೃಷ್ಟಿಯಲ್ಲಿ ಶ್ಲಾಘ್ಯವಾಗಿದೆ (1 ಪೇತ್ರನು 2:20). ಅನ್ಯಾಯವಾಗಿ ಬಾಧೆಗೆ ಒಳಗಾಗುವುದು ಪೇತ್ರನ ಪತ್ರಿಕೆಯ ಒಂದು ಶ್ರೇಷ್ಠ ವಿಷಯವಾಗಿದೆ. ಆತನು ಮುಂದುವರೆದು, ಯೇಸುವು ನಿಖರವಾಗಿ ಇದೇ ರೀತಿ ಬಾಧೆಗೆ ಒಳಗಾದರೆಂದು ಹೇಳುತ್ತಾನೆ. ಅವರು ಅನ್ಯಾಯವಾಗಿ ಬಾಧೆಯನ್ನು ಅನುಭವಿಸಿದರು ಮತ್ತು ತನ್ನನ್ನು ಅನುಸರಿಸಿ ನಡೆಯುವುದಕ್ಕಾಗಿ ನಮಗೆ ಒಂದು ಮಾದರಿಯನ್ನು ತೋರಿಸಿಕೊಟ್ಟರು. ನಮ್ಮ ನಿಜವಾದ ಕರೆ ಏನೆಂದರೆ, "ಆತನು ಯಾವ ಪಾಪವನ್ನೂ ಮಾಡಲಿಲ್ಲ, ಆತನ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ; ಬೈಯುವವರನ್ನು ಆತನು ಪ್ರತಿಯಾಗಿ ಬೈಯಲಿಲ್ಲ; ಆತನು ಬಾಧೆಯನ್ನು ಅನುಭವಿಸಿದಾಗ, ಯಾರನ್ನೂ ಬೆದರಿಸದೆ ನ್ಯಾಯವಾಗಿ ತೀರ್ಪುಮಾಡುವವನಿಗೆ ತನ್ನ ಕಾರ್ಯವನ್ನು ಒಪ್ಪಿಸಿದನು; ಆತನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ನಮಗೆ ಈ ಮಾದರಿಯನ್ನು ನೀಡಿದನು"(1 ಪೇತ್ರನು 2:21-23). "ದೇವರ ನಿಜವಾದ ಕೃಪೆಯನ್ನು" ಅರಿತಿರುವ ಕ್ರೈಸ್ತನು ಇದೇ ರೀತಿ ನಡೆಯುತ್ತಾನೆ.