WFTW Body: 

ಕ್ರೈಸ್ತಸಭೆಯ ಇತಿಹಾಸದಲ್ಲಿ ನಮಗೆ ಒಂದು ಬಹಳ ಒಳ್ಳೆಯ ಪಾಠವು ಸಿಗುತ್ತದೆ. ಪ್ರತಿಯೊಂದು ಸಲ ದೇವರು ತನ್ನ ಜನರಿಗಾಗಿ ಏನಾದರೂ ಮಾಡಲು ಹೊರಟಾಗ, ಅವರು ಯಾವಾಗಲೂ ಒಬ್ಬ ಮನುಷ್ಯನೊಂದಿಗೆ ಆರಂಭಿಸುತ್ತಾರೆ. ಅವರು ಇಸ್ರಾಯೇಲ್ಯರನ್ನು ಬಿಡುಗಡೆ ಮಾಡುವುದಕ್ಕೆ ಮೊದಲು, ಆ ಕೆಲಸಕ್ಕಾಗಿ ಒಬ್ಬ ಸೂಕ್ತ ವ್ಯಕ್ತಿಯನ್ನು ಕಂಡುಕೊಳ್ಳಬೇಕಾಗಿತ್ತು. ಆ ಮನುಷ್ಯನ ತರಬೇತಿಗೆ 80 ವರ್ಷಗಳ ಸಮಯ ಬೇಕಾಯಿತು - ಮತ್ತು ಅದು ಕೇವಲ ಪಠ್ಯಪುಸ್ತಕದ ಶಿಕ್ಷಣವಾಗಿರಲಿಲ್ಲ. ಮೋಶೆಯು ಈಗಾಗಲೇ ಐಗುಪ್ತ ದೇಶದ ಅತ್ಯುತ್ತಮ ಶಿಕ್ಷಣ ಕೇಂದ್ರಗಳಲ್ಲಿ ತರಬೇತಿ ಪಡೆದಿದ್ದನು, ಆದರೆ ಅದು ಅವನನ್ನು ದೇವರ ಕೆಲಸಕ್ಕೆ ಅರ್ಹನನ್ನಾಗಿ ಮಾಡಲಿಲ್ಲ. ಅ.ಕೃ. 7ರಲ್ಲಿ ಸ್ತೆಫನನು ತಿಳಿಸುವಂತೆ, ಮೋಶೆಯು ಮಾತು ಮತ್ತು ಕಾರ್ಯ ಇವೆರಡರಲ್ಲೂ ಸಮರ್ಥನಾಗಿದ್ದನು. ಅವನು ತನ್ನ 40ನೇ ವಯಸ್ಸಿನಲ್ಲಿ ಒಬ್ಬ ಬಲಿಷ್ಠನು ಮತ್ತು ವಾಕ್ಚಾತುರ್ಯವುಳ್ಳವನು ಆಗಿದ್ದನು. ಅವನು ಒಬ್ಬ ಉತ್ತಮ ಸೇನಾಪತಿಯೂ, ಬಹು ಐಶ್ವರ್ಯವಂತನೂ ಆಗಿದ್ದನು ಮತ್ತು ವಿಶ್ವದ ಸರ್ವ ಶ್ರೇಷ್ಠ ದೇಶದಲ್ಲಿ ಅತ್ಯುತ್ತಮ ವಿದ್ಯಾಭ್ಯಾಸವನ್ನು ಪಡೆದಿದ್ದನು - ಏಕೆಂದರೆ ಆಗಿನ ಕಾಲದಲ್ಲಿ ಐಗುಪ್ತ ದೇಶವು ಜಗತ್ತಿನ ಏಕೈಕ ಮಹಾಶಕ್ತಿಯಾಗಿತ್ತು. ಇಷ್ಟೆಲ್ಲಾ ಸಾಧನೆಯ ನಂತರ, ಆತನು ದೇವರ ಸೇವೆಗೆ ಅನರ್ಹನಾಗಿ ಕಂಡುಬಂದನು. ಸ್ತೆಫನನು ಹೇಳುವಂತೆ, ಮೋಶೆಯು ಅಂದುಕೊಂಡದ್ದು ಏನೆಂದರೆ, ತಾನು ಇಸ್ರಾಯೇಲ್ಯರ ವಿಮೋಚನೆಗಾಗಿ ದೇವರು ಮೇಲೆಬ್ಬಿಸಿದ ಪ್ರತಿನಿಧಿ ಎಂದು ಜನರು ಗುರುತಿಸುವರು ಎಂದು. ಆದರೆ ಅವರು ಅವನನ್ನು ತಮ್ಮ ನಾಯಕನೆಂದು ಗುರುತಿಸಲಿಲ್ಲ. ಅವನಲ್ಲಿ ಅಷ್ಟೆಲ್ಲಾ ಪ್ರಾಪಂಚಿಕ ಕೀರ್ತಿ ಮತ್ತು ಸಾಮರ್ಥ್ಯಗಳಿದ್ದರೂ, ಅವು ದೇವರು ಅವನಿಗಾಗಿ ಇರಿಸಿದ್ದ ಕಾರ್ಯಕ್ಕೆ ಸೂಕ್ತನಾಗುವಂತೆ ಅವನನ್ನು ಸಜ್ಜುಗೊಳಿಸಲು ಸಾಧ್ಯವಾಗಲಿಲ್ಲ.

ಇಂದು ಅನೇಕ ಕ್ರೈಸ್ತರು ತಮ್ಮ ಸತ್ಯವೇದದ ಜ್ಞಾನ, ಸಂಗೀತದ ಪ್ರತಿಭೆ ಮತ್ತು ಯಥೇಚ್ಛ ಸಂಪತ್ತಿನ ಬಲದಿಂದಲೇ ತಾವು ದೇವರ ಸೇವೆಯನ್ನು ಮಾಡಬಹುದೆಂದು ಅಂದುಕೊಳ್ಳುತ್ತಾರೆ. ಆದರೆ ಇದು ತಪ್ಪಾದ ತಿಳುವಳಿಕೆಯಾಗಿದೆ. ಮೋಶೆಯ ಅನುಭವದಿಂದ ಅವರು ಒಂದು ಪಾಠವನ್ನು ಕಲಿಯಬೇಕಾಗಿದೆ: ಜಗತ್ತಿನ ಅತ್ಯುತ್ತಮ ವ್ಯವಸ್ಥೆಯಲ್ಲಿ 40 ವರ್ಷಗಳ ತರಬೇತಿಯು ಆತನನ್ನು ದೇವರ ಸೇವೆಗೆ ಆಣಿಮಾಡಲು ಸಾಧ್ಯವಾಗಲಿಲ್ಲ.

ದೇವರು ಮೋಶೆಯನ್ನು ಸಜ್ಜುಗೊಳಿಸುವುದಕ್ಕಾಗಿ, ಅರಮನೆಯ ವಾತಾವರಣದಿಂದ ಭಾರೀ ಬದಲಾವಣೆಯುಳ್ಳ ಅರಣ್ಯವಾಸದ ಮೂಲಕ ಆತನನ್ನು ಇನ್ನೂ 40 ವರ್ಷಗಳ ಕಾಲ ನಡೆಸಬೇಕಾಯಿತು. ಆತನ ಮನುಷ್ಯ ಬಲವನ್ನು ಮುರಿಯುವುದು ಅವಶ್ಯವಾಗಿತ್ತು. ಇದನ್ನು ನೆರವೇರಿಸುವುದಕ್ಕಾಗಿ ದೇವರು ಅವನಿಗೆ ಕುರಿ ಕಾಯುವ ಕೆಲಸವನ್ನು ಕೊಟ್ಟು, ತನ್ನ ಮಾವನ ಮನೆಯಲ್ಲಿ ವಾಸಿಸಿ ಆತನ ಆಳಾಗಿ ಕೆಲಸ ಮಾಡುವ ಪರಿಸ್ಥಿತಿಯನ್ನು ಉಂಟುಮಾಡಿದರು - ಅದೂ 40 ವರ್ಷಗಳ ದೀರ್ಘ ಕಾಲ. ಒಬ್ಬ ಪುರುಷನು ತನ್ನ ಮಾವನ ಮನೆಯಲ್ಲಿ ಒಂದು ವರ್ಷ ವಾಸಿಸ ಬೇಕಾದರೂ ಅವನಿಗೆ ಬಹಳ ಮುಖಭಂಗವಾಗುತ್ತದೆ! ಭಾರತದಲ್ಲಿ ಅನೇಕ ಸ್ತ್ರೀಯರು ತಮ್ಮ ವಿವಾಹಿತ ಜೀವನವಿಡೀ ಮಾವನ ಮನೆಯಲ್ಲಿ ವಾಸಿಸುತ್ತಾರೆಂದು ನಾನು ಬಲ್ಲೆನು. ಆದರೆ ಒಬ್ಬ ಗಂಡಸು ಹೆಣ್ಣು ಕೊಟ್ಟ ಮಾವನ ಮನೆಯಲ್ಲಿ ವಾಸಿಸುವುದು ಮತ್ತು ಜೊತೆಗೆ ಮಾವನ ಕೆಲಸಗಾರನಾಗಿ ಇರುವುದು ಬೇರೆ ಸಂಗತಿಯಾಗಿದೆ. ಒಬ್ಬ ಪುರುಷನಿಗೆ ಅದು ಬಹಳ ತಗ್ಗಿಸುವ ಅನುಭವವಾಗಿ ಪರಿಣಮಿಸಬಹುದು. ಆದರೆ ದೇವರು ಮೋಶೆಯ ಮುರಿಯುವಿಕೆಯನ್ನು ಇದೇ ರೀತಿಯಾಗಿ ಸಾಧಿಸಿದರು. ದೇವರು ಯಾಕೋಬನನ್ನೂ ಸಹ ಇದೇ ರೀತಿಯಾಗಿ ಮುರಿದರು. ಆತನೂ ಸಹ ತನ್ನ ಮಾವನ ಮನೆಯಲ್ಲಿ 20 ವರ್ಷಗಳ ಕಾಲ ವಾಸಿಸ ಬೇಕಾಯಿತು. ದೇವರು ತನ್ನ ಮಕ್ಕಳನ್ನು ಮುರಿಯಲಿಕ್ಕಾಗಿ ಅತ್ತೆ ಮಾವಂದಿರನ್ನು ಬಳಸುತ್ತಾರೆ.

ಮೋಶೆಗೆ ಐಗುಪ್ತ ದೇಶದ ಸಕಲ ವಿಶ್ವವಿದ್ಯಾಲಯಗಳು ಯಾವುದನ್ನು ಕಲಿಸಲು ವಿಫಲವಾದವೋ, ಅದನ್ನು ಆತನು ಅರಣ್ಯ ಪ್ರದೇಶದಲ್ಲಿ ಕುರಿ ಮೇಯಿಸಿಕೊಂಡು ಮತ್ತು ತನ್ನ ಮಾವನ ಕೆಲಸದಾಳಾಗಿ ಇದ್ದುಕೊಂಡು ಕಲಿತನು. ಆ 40 ವರ್ಷಗಳು ಪ್ರಾಪ್ತವಾದಾಗ, ಮೋಶೆಯು ಎಷ್ಟು ಮುರಿಯಲ್ಪಟ್ಟಿದ್ದನೆಂದರೆ, ಹಿಂದೊಮ್ಮೆ ಉತ್ತಮ ಮಾತುಗಾರನಾಗಿದ್ದ ಮತ್ತು ತನ್ನ ಕೈಯಿಂದ ಇಸ್ರಾಯೇಲ್ಯರನ್ನು ಬಿಡುಗಡೆ ಉಂಟುಮಾಡುವ ನಿರೀಕ್ಷೆಯನ್ನು ಹೊಂದಿದ್ದ ವ್ಯಕ್ತಿಯು, ಈಗ ಹೀಗೆನ್ನುತ್ತಾನೆ, "ಕರ್ತನೇ, ನಾನು ಅನರ್ಹನು. ನಾನು ವಾಕ್ಚಾತುರ್ಯವಿಲ್ಲದವನು. ನಿನ್ನ ಜನರನ್ನು ನಡೆಸಿಕೊಂಡು ಹೋಗುವ ಈ ಕಾರ್ಯಕ್ಕೆ ದಯವಿಟ್ಟು ಬೇರೊಬ್ಬನನ್ನು ನೇಮಿಸು." ಈ ಮಾತನ್ನು ಕೇಳಿದಾಗ ದೇವರು ಹೀಗೆಂದು ಉತ್ತರಿಸಿದರು, "ಅಂತೂ ಕಟ್ಟಕಡೆಗೆ ನೀನು ಸಿದ್ಧನಾದೆ. ಈಗ ನಾನು ನಿನ್ನನ್ನು ಫರೋಹನ ಬಳಿಗೆ ಕಳುಹಿಸುತ್ತೇನೆ" (ವಿಮೋ. 4:10-17) .

ನಾವು ಯಾಕೋಬ ಮತ್ತು ಮೋಶೆಯಿಂದ ಕಲಿಯುವ ಪಾಠವೇನು? ಇಷ್ಟು ಮಾತ್ರ: ’ನಾನು ಸಿದ್ಧನಾಗಿದ್ದೇನೆ,’ ಎಂದು ನೀವು ಅಂದುಕೊಳ್ಳುವಾಗ, ನೀವು ಸಿದ್ದರಾಗಿಲ್ಲ. ನಿಮ್ಮಲ್ಲಿ ಯೋಗ್ಯತೆ ಇದೆಯೆಂದು, ಸಾಮರ್ಥ್ಯ ಇದೆಯೆಂದು, ಸಾಕಷ್ಟು ತಿಳಿವಳಿಕೆ ಇದೆಯೆಂದು, ನೀವು ಮಾತಿನಲ್ಲಿ, ಹಾಡುವುದರಲ್ಲಿ ಮತ್ತು ವಾದ್ಯಗಳನ್ನು ನುಡಿಸುವುದರಲ್ಲಿ ಪರಿಣತರು ಎಂದು, ಮತ್ತು ದೇವರಿಗಾಗಿ ನೀವು ಅದ್ಭುತವಾದ ಕಾರ್ಯಗಳನ್ನು ಮಾಡಬಲ್ಲಿರೆಂದು ಅಂದುಕೊಳ್ಳುವಾಗ, ದೇವರು ಹೇಳುವುದೇನೆಂದರೆ, "ನೀನು ಅನರ್ಹನು. ನೀನು ಮುರಿಯಲ್ಪಡುವ ವರೆಗೆ ನಾನು ಕಾಯಬೇಕಾಗುತ್ತದೆ." ಇದಕ್ಕೆ ಯಾಕೋಬನಿಗೆ 20 ವರ್ಷಗಳ ಕಾಲ ಹಿಡಿಯಿತು, ಮೋಶೆಗೆ 40 ವರ್ಷಗಳು ಬೇಕಾದವು, ಪೇತ್ರನಿಗೆ 3 ವರ್ಷಗಳು ಬೇಕಾದವು ಮತ್ತು ಪೌಲನಿಗೆ ಕಡಿಮೆ ಪಕ್ಷ 3 ವರ್ಷದ ಸಮಯ ಹಿಡಿಯಿತು. ನಮಗೆ ಎಷ್ಟು ಸಮಯ ಬೇಕಾಗಬಹುದು? ನಾವು ಎಷ್ಟು ಬೇಗನೆ ದೇವರ ಬಲವಾದ ಕೈಯ ಕೆಳಗೆ ನಮ್ಮನ್ನು ಒಪ್ಪಿಸಿಕೊಡುವುದನ್ನು ಕಲಿಯುತ್ತೇವೆ ಎಂಬುದರ ಮೇಲೆ ಅದು ಅವಲಂಬಿಸಿದೆ.

ಇಲ್ಲಿ ನಮಗಾಗಿ ಒಂದು ಸಂದೇಶ ಮತ್ತು ಒಂದು ಮುನ್ನೆಚ್ಚರಿಕೆ ಇದೆ. ದೇವರು ನಿಮ್ಮ ಜೀವನಕ್ಕಾಗಿ ಒಂದು ಯೋಜನೆಯನ್ನು ತಯಾರಿಸಿರಬಹುದು. ಆದರೆ ನೀವು ಮುರಿಯಲ್ಪಡುವ ತನಕ ಅದು ನೆರವೇರುವುದು ಅಸಾಧ್ಯವಾಗಿದೆ. ದೇವರು ನಿಮ್ಮಲ್ಲಿ 10 ವರ್ಷಗಳಲ್ಲಿ ಮುಗಿಸ ಬಯಸುವ ಕಾರ್ಯಕ್ಕೆ 40 ವರ್ಷಗಳು ಹಿಡಿಯಬಹುದು. ಹಾಗಾಗಿ ನಾವು ಯಾವಾಗಲೂ ದೇವರ ಪರಾಕ್ರಮಶಾಲಿ ಕೈಯ ಕೆಳಗೆ ನಮ್ಮನ್ನು ತಗ್ಗಿಸಿಕೊಳ್ಳಲು ತಡಮಾಡದಿರುವುದು ಒಳ್ಳೆಯದು - ಪರಾಕ್ರಮಶಾಲಿ ಕೈ ಎಂದರೆ, ಅವರು ನಮ್ಮ ಜೀವನದ ಹಾದಿಯಲ್ಲಿ ಕಳುಹಿಸಿಕೊಡುವ ಸನ್ನಿವೇಶಗಳು.

ಪ್ರಲಾ. 3:27ವು ಹೀಗೆ ಹೇಳುತ್ತದೆ, "ಯೌವನದಲ್ಲಿ ನೊಗ ಹೊರುವುದು (ತನ್ನನ್ನು ತಗ್ಗಿಸಿಕೊಂಡು ಮುರಿಯಲ್ಪಡುವುದು) ಮನುಷ್ಯನಿಗೆ ಲೇಸು." ದೇವರು ನಿಮ್ಮ ಯೌವನ ಪ್ರಾಯದಲ್ಲಿ ನಿಮ್ಮನ್ನು ಮುರಿಯುವಂತೆ ಅವರಿಗೆ ಒಪ್ಪಿಸಿಕೊಳ್ಳಿರಿ. ದೇವರು ನಿಮ್ಮ ಜೀವನದಲ್ಲಿ ಸಮ್ಮತಿಸುವ ಸನ್ನಿವೇಶಗಳ ವಿರುದ್ಧ ಪ್ರತಿಭಟಿಸಬೇಡಿರಿ, ಏಕೆಂದರೆ ಅದರಿಂದ ದೇವರ ಯೋಜನೆಗೆ ಅಡ್ಡಿಮಾಡಿ ತಡೆದಂತಾಗುತ್ತದೆ. ದೇವರ ಸೇವೆ ಮಾಡುವ ಸಾಮರ್ಥ್ಯವು ನಿಮಗೆ ನಿಮ್ಮ ಸತ್ಯವೇದದ ಜ್ಞಾನ, ಸಂಗೀತ ಪ್ರತಿಭೆ ಮತ್ತು ನಿಮ್ಮ ಸಂಪತ್ತು ಇವೆಲ್ಲವುಗಳಿಂದ ಸಿಗುವುದಿಲ್ಲ. ಮುರಿಯುವಿಕೆಯು ಅವಶ್ಯವಾಗಿ ಬೇಕಾಗಿದೆ. ನೀವು ನಿಜವಾದ ದೇವಸಭೆಯಾದ ಯೆರೂಸಲೇಮನ್ನು ಕಟ್ಟಲು ಬಯಸಿದರೆ, ನೀವು ಅವಶ್ಯವಾಗಿ ಮುರಿಯಲ್ಪಡಬೇಕು. ನೀವು ಸನ್ನಿವೇಶಗಳ ಮೂಲಕ ಮತ್ತು ಜನರ ಮೂಲಕ ದೇವರಿಂದ ತಗ್ಗಿಸಲ್ಪಡಬೇಕು. ಅಂತಹ ಸಂದರ್ಭಗಳನ್ನು ನೀವು ತಳ್ಳಿಹಾಕದೆ ಸ್ವೀಕರಿಸಿದರೆ, ದೇವರು ನಿಮ್ಮಲ್ಲಿ ಒಂದು ಕಾರ್ಯವನ್ನು ತ್ವರಿತವಾಗಿ ಸಾಧಿಸಬಹುದು.

ವಿಮೋ. 17 ರಲ್ಲಿ, ’ಬಂಡೆಯನ್ನು ಹೊಡೆದ ಮೇಲೆ ನೀರು ಹೊರಟು ಹರಿಯ ತೊಡಗಿತು,’ ಎಂದು ನಾವು ಓದುತ್ತೇವೆ. ಬಂಡೆಯನ್ನು ಹೊಡೆಯದೆ ನೀರು ಹೊರಡುವುದಿಲ್ಲ. ಒಬ್ಬ ಸ್ತ್ರೀಯು ಬಹು ಬೆಲೆಯುಳ್ಳ ಸುಗಂಧ ತೈಲದ ಭರಣಿಯನ್ನು ತಂದು, ಅದನ್ನು ಯೇಸುವಿನ ಪಾದದ ಬಳಿ ಒಡೆದಾಗಲೇ, ಆ ತೈಲದ ಪರಿಮಳವು ಮನೆಯನ್ನೆಲ್ಲಾ ತುಂಬಿತು. ಭರಣಿಯು ಒಡೆಯದೇ ಇದ್ದಾಗ ಯಾರಿಗೂ ಅದರ ಪರಿಮಳ ಬರಲಿಲ್ಲ. ಯೇಸುವು ರೊಟ್ಟಿಯನ್ನು ತೆಗೆದುಕೊಂಡು ಅದನ್ನು ಆಶೀರ್ವದಿಸಿದಾಗ, ಏನೂ ಆಗಲಿಲ್ಲ. ಆದರೆ ಆತನು ಅದನ್ನು ಮುರಿದಾಗ, ಐದು ಸಾವಿರ ಮಂದಿ ಊಟ ಮಾಡಿದರು. ಇವೆಲ್ಲಾ ಉದಾಹರಣೆಗಳ ಸಂದೇಶವೇನು? ಮುರಿಯಲ್ಪಡುವಿಕೆಯಿಂದ ಆಶೀರ್ವಾದ ಉಂಟಾಗುತ್ತದೆ. ಒಂದು ಪರಮಾಣುವನ್ನು ವಿಭಜಿಸಿದಾಗ ಎಂತಹ ಅದ್ಭುತವಾದ ಶಕ್ತಿಯು ಹೊರಡುತ್ತದೆ! ಅದು ಇಡೀ ನಗರಕ್ಕೆ ವಿದ್ಯುಚ್ಛಕ್ತಿಯನ್ನು ಕೊಡಬಲ್ಲದು! ಒಂದು ಚಿಕ್ಕ ಅಣುವಿನ ಕಣ - ಅದು ಎಷ್ಟು ಚಿಕ್ಕದೆಂದರೆ, ಸೂಕ್ಷ್ಮದರ್ಶಕದ ಮೂಲಕವೂ ಅದು ಕಣ್ಣಿಗೆ ಬೀಳುವುದಿಲ್ಲ - ಆದರೆ ಅದನ್ನು ಒಡೆದಾಗ ಎಂತಹ ಶಕ್ತಿಯು ಅದರಿಂದ ಹೊರಡುತ್ತದೆಂದು ಯೋಚಿಸಿರಿ. ಪ್ರಕೃತಿ ಹಾಗೂ ಸತ್ಯವೇದವು ಕೊಡುವ ಸಂದೇಶ ಇಷ್ಟು ಮಾತ್ರ: "ಮುರಿಯಲ್ಪಡುವಿಕೆಯ ಮೂಲಕ ದೇವರ ಪ್ರಭಾವವು ಬಿಡುಗಡೆಯಾಗುತ್ತದೆ". ಈ ಸಂದೇಶವು ನಿಮ್ಮ ಜೀವಿತದಲ್ಲಿ ಎದ್ದು ಕಾಣಿಸಲಿ.