ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ
WFTW Body: 

ಪ್ರಕಟನೆ 3:1-6ರಲ್ಲಿ, "ಸಾರ್ದಿಸಿನಲ್ಲಿರುವ ಸಭೆಯ ದೂತನಿಗೆ ಬರೆ" - ಎಂದು ಹೇಳಲಾಗಿದೆ ... ಸಾರ್ದಿಸಿನಲ್ಲಿದ್ದ ದೂತನು, ಇತರರ ಮುಂದೆ ತಾನೊಬ್ಬ ಶ್ರೇಷ್ಠ ಆತ್ಮಿಕ ಮನುಷ್ಯನು ಎಂಬ ದೊಡ್ಡ ಖ್ಯಾತಿಯನ್ನು ಬೆಳೆಸಿಕೊಂಡಿದ್ದನು. ಆದರೆ ಅವನ ಬಗ್ಗೆ ಕರ್ತನಾದ ಯೇಸುವಿನ ಅಭಿಪ್ರಾಯವು ಆತನ ಸಾರ್ದಿಸಿನ ಸಹ-ವಿಶ್ವಾಸಿಗಳ ಅಭಿಪ್ರಾಯಕ್ಕೆ ಸಂಪೂರ್ಣ ವಿರುದ್ಧವಾಗಿತ್ತು. ಇದು ಸಾರ್ದಿಸಿನ ಬಹುತೇಕ ಮಂದಿ ವಿಶ್ವಾಸಿಗಳು ಎಷ್ಟು ಲೌಕಿಕರಾಗಿದ್ದರು ಮತ್ತು ಎಷ್ಟು ಸುಲಭವಾಗಿ ಮೋಸ ಹೋಗುತ್ತಿದ್ದರು ಎಂಬುದನ್ನು ತೋರಿಸುತ್ತದೆ.

ಒಬ್ಬ ಆತ್ಮಿಕ ಬೋಧಕ ಮತ್ತು ಒಬ್ಬ ಲೌಕಿಕ ಬೋಧಕನ ನಡುವಿನ ಅಂತರವನ್ನು ಗುರುತಿಸುವ ಸಾಮರ್ಥ್ಯ ಶೇಕಡಾ 90ಕ್ಕಿಂತ ಹೆಚ್ಚಿನ ವಿಶ್ವಾಸಿಗಳಲ್ಲಿ ಇರುವುದಿಲ್ಲ. ಶೇಕಡಾ 99ಕ್ಕೂ ಹೆಚ್ಚಿನ ವಿಶ್ವಾಸಿಗಳಿಗೆ ಮಾನವ ಮನೋಬಲ ಮತ್ತು ಪವಿತ್ರಾತ್ಮನ ಬಲ ಇವುಗಳ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ವಿಶ್ವಾಸಿಗಳು ಸಭಾ ಮಂದಿರಗಳಲ್ಲಿ ಒಬ್ಬ ಬೋಧಕ ಅಥವಾ ಒಬ್ಬ ಸಭಾ ಹಿರಿಯನ ಆತ್ಮಿಕ ವರಗಳ ಪ್ರದರ್ಶನವನ್ನು ನೋಡಿ ಪ್ರಭಾವಿತರಾಗುತ್ತಾರೆ, ಮತ್ತು ಅದರ ಆಧಾರದ ಮೇಲೆ ಆತನ ಬೆಲೆ ಕಟ್ಟುತ್ತಾರೆ. ಈ ರೀತಿಯಾಗಿ ಅವರು ವಂಚಿಸಲ್ಪಡುತ್ತಾರೆ. ಆದರೆ ದೇವರು ಹೃದಯವನ್ನು ನೋಡುತ್ತಾರೆ. ಸಾರ್ದಿಸಿನ ದೂತನಲ್ಲಿ ಪವಿತ್ರಾತ್ಮನ ವರಗಳು ಇದ್ದಿರಬಹುದು. ಆದರೆ ಅವನು ಆತ್ಮಿಕವಾಗಿ ಸತ್ತಿದ್ದನು.

ಈ ವಿಷಯದಲ್ಲಿ ನಾವೆಲ್ಲರೂ ಎಚ್ಚರ ವಹಿಸಬೇಕು: ’ನಮ್ಮ ಬಗ್ಗೆ ನಮ್ಮ ಸಹ-ವಿಶ್ವಾಸಿಗಳಲ್ಲಿ ಶೇಕಡಾ 99ರಷ್ಟು ಜನ ಹೊಂದಿರುವ ಅಭಿಪ್ರಾಯ ಶೇಕಡಾ 100ರಷ್ಟು ತಪ್ಪಾಗಿರಬಹುದು’! ನಮ್ಮ ಬಗ್ಗೆ ದೇವರ ಅಭಿಪ್ರಾಯ ಅವರ ಅಭಿಪ್ರಾಯಕ್ಕೆ ’ಸಂಪೂರ್ಣ ವಿರುದ್ಧವಾಗಿ’ ಇರಬಹುದು. ಹಾಗೆಯೇ, ಒಂದು ಕ್ರೈಸ್ತಸಭೆಗೂ ಇದು ಅನ್ವಯಿಸುತ್ತದೆ. ಒಂದು ಸಭೆಯು "ಆತ್ಮಿಕವಾಗಿ ಸಜೀವವಾಗಿದೆ" ಎಂದು ಜನರು ಭಾವಿಸಬಹುದು. ಆದರೆ ದೇವರ ದೃಷ್ಟಿಯಲ್ಲಿ ಅದು ಆತ್ಮಿಕವಾಗಿ ಸತ್ತಿರಬಹುದು. ಇದಕ್ಕೆ ವ್ಯತಿರಿಕ್ತವಾದ ಸಂಗತಿಯೂ ಉಂಟಾಗಬಹುದು: ದೇವರು ’ಆತ್ಮಿಕವಾಗಿ ಸಜೀವವಾಗಿದೆ’ ಎಂದು ಗ್ರಹಿಸುವ ಸಭೆಯನ್ನು, ವಿವೇಚನೆ ಇಲ್ಲದ ಜನರು ಆತ್ಮಿಕವಾಗಿ ಸತ್ತಿರುವಂಥದ್ದು ಎಂದು ಗ್ರಹಿಸಬಹುದು.

ಅನೇಕ ವಿಶ್ವಾಸಿಗಳು ಸಭಾಕೂಟಗಳಿಗೆ ಬರುವಾಗ ತಮಗೆ ಸಿಗುವ ಹಾರ್ದಿಕ ಸ್ವಾಗತ, ಸಭೆಯ ಜನಸಮೂಹ, ಸಭೆಯಲ್ಲಿ ಗದ್ದಲ ಮತ್ತು ಉದ್ವೇಗದ ಪ್ರಮಾಣ, ಸಂಗೀತದ ಮಿಡಿತ ಮತ್ತು ಆಕರ್ಷಣೆ, ಹೆಚ್ಚು ಜ್ಞಾನದ ಅಂಶವಿರುವ ಪ್ರಸಂಗ ಮತ್ತು ಭಾರಿ ಮೊತ್ತದ ಕಾಣಿಕೆ ಸಂಗ್ರಹಣೆ - ಇವುಗಳ ಆಧಾರದ ಮೇಲೆ ಸಭೆಯ ಬೆಲೆ ಕಟ್ಟುತ್ತಾರೆ!! ಆದರೆ ಇವುಗಳಲ್ಲಿ ಯಾವ ಸಂಗತಿಯೂ ದೇವರ ಮೇಲೆ ಪ್ರಭಾವ ಬೀರುವುದಿಲ್ಲ.

ದೇವರು ಒಂದು ಸಭೆಯ ಸದಸ್ಯರ ಹೃದಯಗಳಲ್ಲಿ ಕ್ರಿಸ್ತನಿಗೆ ಹೋಲುವ ದೀನತೆ, ಪರಿಶುದ್ಧತೆ ಮತ್ತು ಪ್ರೀತಿ ಮತ್ತು ನಿಸ್ವಾರ್ಥತೆ ಇದೆಯೇ ಎನ್ನುವುದರ ಆಧಾರದ ಮೇಲೆ ಆ ಸಭೆಯ ಮೌಲ್ಯವನ್ನು ನಿರ್ಣಯಿಸುತ್ತಾರೆ. ಆದ್ದರಿಂದ ದೇವರು ಒಂದು ಕ್ರೈಸ್ತಸಭೆಗೆ ಕಟ್ಟುವ ಬೆಲೆ ಮತ್ತು ಮನುಷ್ಯನು ಕಟ್ಟುವ ಬೆಲೆಯಲ್ಲಿ ಸಂಪೂರ್ಣ ವಿಭಿನ್ನತೆ ಕಾಣಿಸಬಹುದು. ನಿಜವಾಗಿ, ಅವು ಹೆಚ್ಚಾಗಿ ಒಂದಕ್ಕೊಂದು ಹೋಲುವುದೇ ಇಲ್ಲ.

ಸಾರ್ದಿಸಿನ ಸಭೆಯಲ್ಲಿ, ಇತರ ಕೆಲವೆಡೆ ಇದ್ದಂತೆ ಯೆಜೆಬೇಲಳ ಹಾಗಿನ ಸ್ತ್ರೀಯರು ಇರಲಿಲ್ಲ ಮತ್ತು ಬಿಳಾಮ ಅಥವಾ ನಿಕೊಲಾಯಿತರ ಬೋಧನೆಗಳೂ ಇರಲಿಲ್ಲ. ಆದರೆ ಅಲ್ಲಿ ಇವೆಲ್ಲಕ್ಕಿಂತ ಕೆಟ್ಟದಾದ ಒಂದು ಸಂಗತಿ ಇತ್ತು - ’ಕಪಟತನ’. ಸಾರ್ದಿಸಿನ ದೂತನು ತಾನು ಒಳ್ಳೆಯ ಹೆಸರನ್ನು ಬೆಳೆಸಿಕೊಂಡಿದ್ದೇನೆ ಎಂದು ಮನಸ್ಸಿನಲ್ಲೇ ಸಂತೋಷಿಸಿರಬೇಕು. ಇಲ್ಲವಾದರೆ ಅವನು ಒಬ್ಬ ಕಪಟಿಯಾಗಿ ಕೊನೆಗೊಳ್ಳುತ್ತಿರಲಿಲ್ಲ. ನಾವು ಆತ್ಮಿಕವಾಗಿ ಜೀವಿತರು ಆಗಿದ್ದೇವೆಂದು ಇತರರು ನಮ್ಮ ಬಗ್ಗೆ ತಿಳಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ, ಆದರೆ ಅವರ ಅಭಿಪ್ರಾಯವು ನಮ್ಮ ತೃಪ್ತಿಗೆ ಕಾರಣವಾಗಬಾರದು. ಆದರೆ ನಾವು ಕರ್ತನಿಗಾಗಿ ಮಾಡುವ ಕಾರ್ಯದಲ್ಲಿ ಸ್ವಂತದ ಖ್ಯಾತಿಯನ್ನು ಹುಡುಕುವುದಾದರೆ, ಆಗ ನಾವು ದೇವರ ಸಮ್ಮುಖದಲ್ಲಿ ಜೀವಿಸುವ ಬದಲಾಗಿ ಮನುಷ್ಯರ ಮುಖದ ಮುಂದೆ ಜೀವಿಸುವ ಮಟ್ಟವನ್ನು ನಿಶ್ಚಯವಾಗಿ ತಲುಪುತ್ತೇವೆ. ಆಗ ಮನುಷ್ಯನ ಅಭಿಪ್ರಾಯ ಉಪಯೋಗವಿಲ್ಲದ್ದು ಎನ್ನುವದನ್ನು ನಾವು ತಿಳಿದಿಲ್ಲವೆಂದು ಒಪ್ಪಿಕೊಳ್ಳಬೇಕಾಗುತ್ತದೆ.

ಕ್ರೈಸ್ತತ್ವದಲ್ಲಿ ಬಹಳಷ್ಟು ಬೋಧಕರು ತಮ್ಮ ಖ್ಯಾತಿಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಸತತವಾಗಿ ಅನೇಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಅವುಗಳ ಬಗ್ಗೆ ವರದಿಗಳನ್ನು ಬರೆಯುತ್ತಾ ಇರುತ್ತಾರೆ. ಇವರೆಲ್ಲರು ಸಾರ್ದಿಸಿನ ದೂತನಂತೆ ಕೊನೆಗೊಳ್ಳುತ್ತಾರೆ. ಮತ್ತು ಅವರು ಕಡೆಯ ದಿನದಲ್ಲಿ ಕರ್ತನ ನ್ಯಾಯತೀರ್ಪಿಗೆ ಒಳಗಾಗುತ್ತಾರೆ, ಏಕೆಂದರೆ ಅವರ ಕಾರ್ಯಗಳು ದೇವರ ಮುಂದೆ ಪರಿಪೂರ್ಣವಾಗಿ ಕಂಡುಬರಲಿಲ್ಲ. ಮನುಷ್ಯರನ್ನು ಮೆಚ್ಚಿಸುವುದು ನಮ್ಮ ಲಕ್ಷ್ಯವಾಗಿದ್ದರೆ, ದೇವರ ಮುಂದೆ ನಮ್ಮ ಕಾರ್ಯಗಳನ್ನು ಪರಿಪೂರ್ಣವಾಗಿ ಪೂರೈಸುವದು ಅಸಾಧ್ಯವಾಗಿದೆ.

ಸಾರ್ದಿಸಿನ ದೂತನು ಆತ್ಮಿಕವಾಗಿ ಗಾಢವಾದ ನಿದ್ದೆಯಲ್ಲಿದ್ದನು.

ಯೇಸುವು ತನ್ನ ಬರುವಿಕೆಗಾಗಿ ಸಿದ್ಧರಾಗಿರುವಂತೆ ಶಿಷ್ಯರು ಎಚ್ಚರಗೊಂಡು ಪ್ರಾರ್ಥನೆ, ವಿಜ್ಞಾಪನೆಗಳನ್ನು ಮಾಡುವುದು ಬಹಳ ಅವಶ್ಯವೆಂದು ಅವರ ಗಮನಕ್ಕೆ ತಂದನು - ಏಕೆಂದರೆ ಈ ಲೋಕದ ಚಿಂತೆ ಮತ್ತು ಹಣದ ಪ್ರೀತಿ, ಇವುಗಳಿಂದ ಉತ್ತಮ ವಿಶ್ವಾಸಿಗಳಲ್ಲೂ ನಿದ್ರೆಯ ಅಮಲು ಉಂಟಾಗುತ್ತದೆ (ಲೂಕ. 21:34-36 ನೋಡಿ). ಒಬ್ಬ ಮನುಷ್ಯನು ನಿದ್ರಿಸುವಾಗ, ಅವನಿಗೆ ತನ್ನ ಸುತ್ತಲಿನ ನಿಜ ಪ್ರಪಂಚದ ಸಂಗತಿಗಳ ತಿಳುವಳಿಕೆ ಇರುವುದಿಲ್ಲ. ಅವನು ತನ್ನ ಭ್ರಾಂತಿಯ ಕನಸುಗಳ ಲೋಕದಲ್ಲಿ ಅಲೆಯುತ್ತಾನೆ. ಆತ್ಮಿಕವಾಗಿ ನಿದ್ರಿಸುವವರಿಗೂ ಹೀಗೆಯೇ ಆಗುತ್ತದೆ. ಅವರಿಗೆ ದೇವರ ರಾಜ್ಯದ ನಿಜ ಪ್ರಪಂಚದ ಬಗ್ಗೆ, ತಮ್ಮ ಸುತ್ತಲು ನಶಿಸುತ್ತಿರುವ ಆತ್ಮಗಳ ಬಗ್ಗೆ ಮತ್ತು ನಿತ್ಯತ್ವದ ಸತ್ಯಾಂಶಗಳ ಬಗ್ಗೆ, ತಿಳುವಳಿಕೆ ಇರುವುದಿಲ್ಲ. ಆದಾಗ್ಯೂ ಅವರು ಈ ಹೊರತೋರಿಕೆಯ ಮತ್ತು ಸ್ವಲ್ಪ ಕಾಲ ಇರುವಂತ ಪ್ರಪಂಚದ ಐಶ್ವರ್ಯ, ಭೌತಿಕ ಸುಖ ಸೌಲಭ್ಯಗಳು, ಪ್ರಾಪಂಚಿಕ ಖ್ಯಾತಿ, ಗೌರವ ಇಂತಹ ಸಂಗತಿಗಳಿಗೆ ಜೀವಿತರಾಗಿ ಇರುತ್ತಾರೆ. ಸಾರ್ದಿಸಿನ ಸಭೆಯ ದೂತನ ಸ್ಥಿತಿ ಹೀಗೆಯೇ ಆಗಿತ್ತು.

ಕರ್ತನು ಅವನಿಗೆ ಬುದ್ಧಿ ಹೇಳುತ್ತಾ, ಅವನು ನಿದ್ರೆಯಿಂದ ಎಚ್ಚರವಾಗುವಂತೆ - ಬೇರೆ ಮಾತುಗಳಲ್ಲಿ, ಆತನ ಭ್ರಾಂತಿಯ ಕನಸಿನ ಲೋಕವನ್ನು (ಲೌಕಿಕ ಆಕರ್ಷಣೆಯ ಪ್ರಪಂಚ) ತ್ಯಜಿಸುವಂತೆ - ಮತ್ತು ಆತನ ಜೀವನದಲ್ಲಿ ಸಾಯುವ ಸ್ಥಿತಿಗೆ ತಲುಪಿದ್ದರೂ, ಇನ್ನೂ ಜೀವಿತವಾಗಿದ್ದ ವಿಷಯಗಳನ್ನು ದೃಢಪಡಿಸುವಂತೆ ಹೇಳುತ್ತಾನೆ (ಪ್ರಕಟನೆ 3:2) . ಅವು ಆರಿಹೋಗುತ್ತಿರುವ ಕೆಂಡಗಳಂತಿದ್ದವು. ಆದರೆ ಅವನು ಕೂಡಲೇ ಅವು "ಪ್ರಜ್ವಲಿಸಿ ಉರಿಯುವಂತೆ ಗಾಳಿ ಊದಬೇಕಿತ್ತು," ಇಲ್ಲವಾದರೆ ಅವು ಸಂಪೂರ್ಣವಾಗಿ ಆರಿಹೋಗಲಿದ್ದವು (2 ತಿಮೋ. 1:6 - Amplified Bible) . ಅವನ ಕಾರ್ಯಗಳು ದೇವರ ದೃಷ್ಟಿಯಲ್ಲಿ ಸಂಪೂರ್ಣವಾಗಿಲ್ಲವೆಂದು ಕರ್ತನು ಅವನಿಗೆ ತಿಳಿಸುತ್ತಾನೆ (ಪ್ರಕ. 3:2 - KJV) . "ಪರಿಪೂರ್ಣತೆ" ಎಂಬ ಪದವು ಅನೇಕ ವಿಶ್ವಾಸಿಗಳನ್ನು ಹೆದರಿಸುತ್ತದೆ. ಆದರೆ ಇಲ್ಲಿ ಕರ್ತನು, ದೇವರ ಮುಂದೆ ದೂತನ ಕೃತ್ಯಗಳು ಪರಿಪೂರ್ಣವಾಗಿ ಇರಬೇಕೆಂದು ಬಯಸುತ್ತಾನೆ.

ಆತ್ಮಿಕ ಪರಿಪೂರ್ಣತೆ ಒಂದು ಬಹಳ ವಿಶಾಲವಾದ ವಿಷಯವಾಗಿದೆ. ಆದರೆ ಇಲ್ಲಿ ಅದರ ಅರ್ಥ, ಈ ಹಿರಿಯನು ಹೃತ್ಪೂರ್ವಕವಾಗಿ ದೇವರ ಮೆಚ್ಚಿಗೆಯನ್ನು ಪಡೆಯಬೇಕೆಂಬ ಒಂದೇ ಹಂಬಲದಿಂದ ಕೆಲಸಗಳನ್ನು ಮಾಡಲಿಲ್ಲ ಎಂಬದೇ. ಆತನ ಕ್ರಿಯೆಗಳು ಸತ್ಕ್ರಿಯೆಗಳಾಗಿದ್ದವು ('good works') - ಇದರಿಂದಾಗಿಯೇ ಅವನು ಆತ್ಮಿಕವಾಗಿ ಸಜೀವವಾಗಿದ್ದಾನೆ ಎಂಬ ಹೆಸರನ್ನು ಪಡೆದನು. ಆದರೆ ಆ ಕಾರ್ಯಗಳು ದೇವರ ಮಹಿಮೆಗಾಗಿ ಆಗಿರಲಿಲ್ಲ. ಅವುಗಳನ್ನು ಮನುಷ್ಯರ ಮೆಚ್ಚುಗೆಗಾಗಿ ಮಾಡಿದ್ದನು. ಆದ್ದರಿಂದ ಅವೆಲ್ಲವೂ ನಿರ್ಜೀವಕರ್ಮಗಳು ('dead works') ಆಗಿದ್ದವು. ಅವನು "ದೇವರಿಗೆ ಅರ್ಪಿಸುವ ವಸ್ತುಗಳ ವಿಷಯದಲ್ಲಿ ಅಧರ್ಮವಿತ್ತು" (ವಿಮೋ. 28:38). ದೇವರು ಅವನನ್ನು ಮೆಚ್ಚಿಕೊಂಡು ಸ್ವೀಕರಿಸುವ ಮೊದಲು, ಅವನು ತನ್ನಲ್ಲಿದ್ದ ಈ ಆತ್ಮಿಕ ಕಲ್ಮಶವನ್ನು ಶುಚಿ ಮಾಡಿಕೊಳ್ಳುವದು ಅವಶ್ಯವಾಗಿತ್ತು (2 ಕೊರಿ. 7:1). ಮನುಷ್ಯರು ಮಾನ್ಯತೆಗಾಗಿ ಕೈಗೊಳ್ಳುವ ಎಲ್ಲಾ ಸತ್ಕ್ರಿಯೆಗಳು ನಿರ್ಜೀವಕರ್ಮಗಳಾಗಿವೆ. ಆತ್ಮಿಕ ಪರಿಪೂರ್ಣತೆಗೆ ನಡೆಸುವ ಮೊದಲ ಹೆಜ್ಜೆ ಯಾವುದೆಂದರೆ, ಮಾಡುವ ಎಲ್ಲಾ ಕ್ರಿಯೆಗಳನ್ನು ದೇವರ ಸಮ್ಮುಖದಲ್ಲೇ ಮಾಡುವುದು. ನಾವು ಇಲ್ಲಿಂದ ಆರಂಭಿಸದಿದ್ದರೆ ಮುನ್ನಡೆಯನ್ನು ಸಾಧಿಸಲಾರೆವು. ಅದು ಪ್ರಾರ್ಥನೆಯಾಗಲಿ ಅಥವಾ ಉಪವಾಸವಾಗಲಿ ಅಥವಾ ಇತರರಿಗೆ ಸಹಾಯ ಮಾಡುವುದಾಗಲಿ ಅಥವಾ ಬೇರೇನೇ ಇರಲಿ, ನಾವು ಮುಖ್ಯವಾಗಿ ನಮ್ಮನ್ನು ಪ್ರಶ್ನಿಸಿಕೊಳ್ಳ ಬೇಕಾದದ್ದು, "ನಾನು ಇದನ್ನು ಮಾಡುವಾಗ, ಯಾವನೋ ಮನುಷ್ಯ ನನ್ನನ್ನು ನೋಡಿ ಮೆಚ್ಚುವುದಕ್ಕಾಗಿ ಇದನ್ನು ಮಾಡುತ್ತಿದ್ದೇನೆಯೇ, ಅಥವಾ ದೇವರ ಸಮ್ಮುಖದಲ್ಲಿ ಕೇವಲ ಆವರ ಮಹಿಮೆಗಾಗಿ ಮಾಡುತ್ತಿದ್ದೇನೆಯೇ?" ಒಂದು ತಪ್ಪಾದ ಉದ್ದೇಶವು ಅನೇಕ ಒಳ್ಳೆಯ ಕಾರ್ಯಗಳನ್ನು ಕೆಡಿಸುತ್ತದೆ ಮತ್ತು ದೇವರ ದೃಷ್ಟಿಯಲ್ಲಿ ಅವುಗಳನ್ನು ಅಯೋಗ್ಯ ಕಾರ್ಯಗಳನ್ನಾಗಿ ಮಾಡುತ್ತದೆ.