ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ಶಿಷ್ಯಂದಿರಿಗೆ
WFTW Body: 

"ಕ್ರಿಸ್ತನು ಸಭೆಯನ್ನು ಪ್ರೀತಿಸಿ, ಆಕೆಗಾಗಿ ತನ್ನನ್ನೇ ಒಪ್ಪಿಸಿಕೊಟ್ಟನು"(ಎಫೆ. 5:25-26). ಕ್ರೈಸ್ತಸಭೆಯನ್ನು ಕಟ್ಟುವುದಕ್ಕಾಗಿ, ಯೇಸುವು ಸಭೆಯನ್ನು ಪ್ರೀತಿಸಿದ ಹಾಗೆಯೇ ನಾವು ಸಭೆಯನ್ನು ಪ್ರೀತಿಸಬೇಕು. ನಾವು ಸಭೆಗೆ ನಮ್ಮ ಹಣವನ್ನು ಅಥವಾ ನಮ್ಮ ಸಮಯವನ್ನು ಕೊಟ್ಟರೆ ಸಾಕಾಗುವುದಿಲ್ಲ. ನಾವು ನಮ್ಮನ್ನೇ - ಅಂದರೆ ನಮ್ಮ ಸ್ವೇಚ್ಛಾ ಜೀವಿತವನ್ನು - ಒಪ್ಪಿಸಿಕೊಡಬೇಕು.

ದೇವರು ತಾನು ಮನುಷ್ಯನನ್ನು ಎಷ್ಟು ಪ್ರೀತಿಸುತ್ತೇನೆಂದು ವಿವರಿಸಲು ಬಯಸಿದಾಗ, ಅವರು ತನ್ನ ಪ್ರೀತಿಯನ್ನು ಒಂದೇ ಒಂದು ಲೌಕಿಕ ಉದಾಹರಣೆಯನ್ನು ನೀಡಲು ಸಾಧ್ಯವಾಯಿತು - ಒಬ್ಬ ತಾಯಿಗೆ ತನ್ನ ಹೊಸದಾಗಿ ಹುಟ್ಟಿದ ಮಗುವಿಗಾಗಿ ಇರುವಂತ ಪ್ರೀತಿ (ಯೆಶಾಯನು 49:15ನ್ನು ನೋಡಿರಿ), ನೀವು ಇಂತಹ ಒಬ್ಬ ತಾಯಿಯನ್ನು ಗಮನಿಸಿದರೆ, ಆಕೆಯಲ್ಲಿ ತನ್ನ ಮಗುವಿಗಾಗಿ ಇರುವಂತ ಪ್ರೀತಿಯಲ್ಲಿ ತ್ಯಾಗದ ಮನೋಭಾವ ತುಂಬಿರುವುದನ್ನು ನೋಡುತ್ತೀರಿ. ಮುಂಜಾನೆಯಿಂದ ನಡುರಾತ್ರಿಯ ವರೆಗೆ, ಹಾಗೂ ರಾತ್ರಿಯಿಡೀ, ಆ ತಾಯಿಯು ತನ್ನ ಕೂಸಿಗಾಗಿ ತ್ಯಾಗ, ತ್ಯಾಗ ಮತ್ತು ಇನ್ನಷ್ಟು ತ್ಯಾಗ ಮಾಡುತ್ತಾಳೆ; ಮತ್ತು ಪ್ರತಿಯಾಗಿ ಆಕೆ ಏನನ್ನೂ ಪಡೆಯುವುದಿಲ್ಲ. ಆಕೆ ಎಷ್ಟೋ ವರ್ಷಗಳ ಕಾಲ ತನ್ನ ಮಗುವಿಗಾಗಿ ನೋವು ಅನಾನುಕೂಲಗಳನ್ನು ಲೆಕ್ಕಿಸದೆ, ಸಂತೋಷದಿಂದ ದುಡಿಯುತ್ತಲೇ ಇರುತ್ತಾಳೆ, ಮತ್ತು ಈ ಶ್ರಮೆಗಾಗಿ ಯಾವ ಪ್ರತಿಫಲವನ್ನೂ ನಿರೀಕ್ಷಿಸುವುದಿಲ್ಲ.

ದೇವರು ಸಹ ನಮ್ಮನ್ನು ಇದೇ ರೀತಿ ಪ್ರೀತಿಸುತ್ತಾರೆ. ಅವರು ತನ್ನ ಈ ಸ್ವಭಾವವನ್ನು ನಮ್ಮಲ್ಲಿ ಉಂಟುಮಾಡಲು ಬಯಸುತ್ತಾರೆ. ಆದರೆ ಲೋಕದ ಯಾವುದೇ ಒಂದು ಸ್ಥಳೀಯ ಸಭೆಯ ಅನ್ಯೋನ್ಯತೆಯಲ್ಲಿ ಇಂತಹ ಪರಸ್ಪರ ಪ್ರೀತಿಯನ್ನು ಕಂಡುಕೊಳ್ಳುವುದು ಅಸಾಧ್ಯ ಸಂಗತಿಯಾಗಿದೆ. ಬಹುತೇಕ ವಿಶ್ವಾಸಿಗಳು ತಮ್ಮಂತೆಯೇ ಯೋಚಿಸುವಂತ ಮತ್ತು ತಮ್ಮ ಪಂಗಡಕ್ಕೆ ಸೇರಿಕೊಳ್ಳಲು ಇಚ್ಛಿಸುವ ಇತರರನ್ನು ಹೇಗೆ ಪ್ರೀತಿಸುವುದು ಎಂದು ಮಾತ್ರ ಅರಿತಿದ್ದಾರೆ. ಅವರದ್ದು ಮಾನವೀಯ ಪ್ರೀತಿಯಾಗಿದೆ ಮತ್ತು ತಾಯಂದಿರ ತ್ಯಾಗದ ಪ್ರೀತಿಗೆ ಇದು ಬಹಳ ದೂರವಾಗಿದೆ!! ಆದಾಗ್ಯೂ, ನಾವು ದೈವಿಕ ಪ್ರೀತಿಯ ಗುರಿಯನ್ನು ಇರಿಸಿಕೊಂಡು ಶ್ರದ್ಧೆಯಿಂದ ಮುನ್ನಡೆಯಬೇಕಿದೆ.

"ದೇವರು ತ್ಯಾಗದ ಆತ್ಮವನ್ನು ಹೊಂದಿರುವ ಒಬ್ಬನೇ ಒಬ್ಬ ವ್ಯಕ್ತಿಯನ್ನು ಎಲ್ಲಾದರೂ ಕಂಡುಕೊಂಡರೆ, ಸಭೆಯನ್ನು ಕಟ್ಟುವುದಕ್ಕಾಗಿ ಅವರು ಆತನನ್ನು ಬಳಸಿಕೊಳ್ಳುತ್ತಾರೆ"

ಒಬ್ಬ ತಾಯಿಯು ತನ್ನ ಮಗುವಿಗಾಗಿ ತನ್ನ ಸುತ್ತ ಮುತ್ತ ಇತರರು ಏನಾದರೂ ತ್ಯಾಗ ಮಾಡುತ್ತಾರೋ ಎಂಬುದನ್ನು ಗಮನಿಸುವುದಿಲ್ಲ. ಆಕೆಯು ಸ್ವತಃ ತಾನೇ ಸಂತೋಷದಿಂದ ತನ್ನ ಸರ್ವಸ್ವವನ್ನು ತ್ಯಾಗ ಮಾಡುತ್ತಾಳೆ. ಅದೇ ರೀತಿ, ಕ್ರೈಸ್ತಸಭೆಯನ್ನು ತನ್ನ ಸ್ವಂತ ಮಗುವಿನಂತೆ ನೋಡುವಾತನು ತನ್ನ ಸುತ್ತ ಮುತ್ತ ಇತರರು ಸಭೆಯ ನಿಮಿತ್ತ ಏನಾದರೂ ತ್ಯಾಗ ಮಾಡುತ್ತಿದ್ದಾರೋ ಇಲ್ಲವೋ ಎಂಬುದರ ಬಗ್ಗೆ ಚಿಂತಿಸುವುದಿಲ್ಲ. ಆತನು ಸ್ವತಃ ತನ್ನನ್ನು ಸಂತೋಷವಾಗಿ ಸಮರ್ಪಿಸಿಕೊಳ್ಳುತ್ತಾನೆ, ಮತ್ತು ಯಾರ ಮೇಲೂ ಯಾವುದೇ ದೂರನ್ನು ಅಥವಾ ಬೇಡಿಕೆಯನ್ನು ಹೊರಿಸುವುದಿಲ್ಲ. ಸಭೆಗಾಗಿ ಇತರರು ತ್ಯಾಗ ಮಾಡುತ್ತಿಲ್ಲವೆಂದು ದೂರುವವರು ತಾಯಂದಿರಲ್ಲ, ಅವರು ಸಂಬಳಕ್ಕಾಗಿ ದುಡಿಯುವ ದಾದಿಯರಾಗಿದ್ದಾರೆ. ಇಂತಹ ದಾದಿಯರು ನಿಗದಿತ ಸಮಯ ಕೆಲಸ ಮಾಡುತ್ತಾರೆ, ಮತ್ತು ಮುಂದಿನ 8 ಘಂಟೆ ಕೆಲಸದ ಪಾಳಿ ಮಾಡಬೇಕಾದ ದಾದಿಯು ಸಮಯಕ್ಕೆ ಸರಿಯಾಗಿ ಬಾರದಿದ್ದಾಗ ದೂರುತ್ತಾರೆ.

ಆದರೆ ಒಬ್ಬ ತಾಯಿಗೆ ಪ್ರತಿದಿನ 8 ಗಂಟೆಗಳ ಕೆಲಸದ ಪಾಳಿ ಅಥವಾ ನಿಗದಿತ ಕಾರ್ಯಾವಧಿ ಇರುವುದಿಲ್ಲ. ಆಕೆ ದಿನಕ್ಕೆ 24 ತಾಸುಗಳೂ ಕೆಲಸ ಮಾಡುತ್ತಾಳೆ - ವರ್ಷದಿಂದ ವರ್ಷಕ್ಕೆ ಹೀಗೆಯೇ ಸಾಗುತ್ತದೆ - ಮತ್ತು ಆಕೆ ಇದಕ್ಕಾಗಿ ಯಾವ ಸಂಬಳವನ್ನೂ ಪಡೆಯುವುದಿಲ್ಲ. ಆಕೆಯ ಮಗುವಿಗೆ 20ರ ವಯಸ್ಸಾದಾಗಲೂ ತಾಯಿಯ ಕೆಲಸ ಮುಗಿದಿರುವುದಿಲ್ಲ!! ಕೇವಲ ತಾಯಂದಿರು ತಮ್ಮ ಕೂಸುಗಳಿಗೆ ಪ್ರತಿದಿನ ಮೊಲೆಹಾಲು ಕುಡಿಸುತ್ತಾರೆ. ದಾದಿಯರಲ್ಲಿ ತಾವು ನೋಡಿಕೊಳ್ಳುವ ಶಿಶುಗಳಿಗಾಗಿ ಮೊಲೆಹಾಲು ಇರುವುದಿಲ್ಲ. ಅದೇ ರೀತಿ, ಕ್ರೈಸ್ತಸಭೆಯಲ್ಲಿ ತಾಯಂದಿರಂತೆ ಇರುವವರಲ್ಲಿ ತಮ್ಮ ಆತ್ಮಿಕ ಮಕ್ಕಳ ಉತ್ತೇಜನಕ್ಕಾಗಿ ಯಾವಾಗಲೂ - ಪ್ರತಿಯೊಂದು ಕೂಟದಲ್ಲೂ - ದೇವರ ಒಂದು ವಾಕ್ಯವಿರುತ್ತದೆ. ಅನೇಕ ಸಭಾಹಿರಿಯರು ತಮ್ಮ ಸಭೆಗಾಗಿ ಒಂದು ವಾಕ್ಯವನ್ನು ಹೊಂದಿರುವುದಿಲ್ಲ, ಏಕೆಂದರೆ ಅವರು ತಾಯಂದಿರಲ್ಲ, ದಾದಿಯರಾಗಿದ್ದಾರೆ.

ಒಬ್ಬ ತಾಯಿಯು ತನ್ನ ಮಕ್ಕಳಿಂದ ಯಾವುದೇ ವೇತನ ಅಥವಾ ಸಂಬಳವನ್ನು ನಿರೀಕ್ಷಿಸುವುದಿಲ್ಲ. ಯಾವ ಮಗುವೂ ತನ್ನ ತಾಯಿಯ ಸೇವೆಗಾಗಿ ಆಕೆಗೆ ಸಂಭಾವನೆಯನ್ನು ಕೊಡುವುದಿಲ್ಲ. ವಾಸ್ತವವಾಗಿ, ಒಬ್ಬ ತಾಯಿಗೆ ಎಷ್ಟು ವೇತನ ಸಿಗಬೇಕೆಂದು ನೀವು ಲೆಕ್ಕ ಹಾಕುವುದಾದರೆ, ಒಂದು ಗಂಟೆಗೆ 20 ರೂಪಾಯಿಯಂತೆ ಲೆಕ್ಕ ಹಾಕಿದರೆ (ಅದು ಒಬ್ಬ ದಾದಿಯ ಪಗಾರವೆಂದು ಅಂದುಕೊಳ್ಳಿರಿ), ಪ್ರತಿಯೊಂದು ಮಗುವು 20ನೇ ವಯಸ್ಸನ್ನು ತಲುಪುವಷ್ಟರಲ್ಲಿ ತನ್ನ ತಾಯಿಗೆ 30 ಲಕ್ಷ ರೂಪಾಯಿಗಿಂತಲೂ ಹೆಚ್ಚು ಹಣವನ್ನು ಕೊಡಬೇಕಾಗುತ್ತದೆ!! ಒಂದು ಮಗುವು ತನ್ನ ತಾಯಿಗೆ ಅಷ್ಟು ಹಣವನ್ನು ಎಂದಿಗೂ ಕೊಡಲು ಸಾಧ್ಯವಿದೆಯೇ?

ಈಗ ನಮ್ಮನ್ನು ಎದುರಿಸುವ ಪ್ರಶ್ನೆ ಇದು: ಯೇಸುವು ತಿರುಗಿ ಬರುವ ವರೆಗೂ ಕರ್ತನಿಗಾಗಿ ಮತ್ತು ಆತನ ಸಭೆಗಾಗಿ ಈ ರೀತಿಯಾಗಿ - ಯಾವುದೇ ಸಂಬಳವಿಲ್ಲದೆ, ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ - ದುಡಿಯಲು ಯಾರು ಸಿದ್ಧರಿದ್ದಾರೆ? ಇಂತಹ ತ್ಯಾಗದ ಆತ್ಮವುಳ್ಳ ಒಬ್ಬನೇ ಒಬ್ಬ ವ್ಯಕ್ತಿಯನ್ನು ದೇವರು ಎಲ್ಲಾದರೂ ಕಂಡುಕೊಳ್ಳಲು ಸಾಧ್ಯವಾದರೆ, ದೇವರ ಸೇವೆ ಮಾಡಲು ಪ್ರಯತ್ನಿಸುವ ತ್ಯಾಗದ ಆತ್ಮವಿಲ್ಲದ 10,000 ಅರೆಮನಸ್ಸಿನ ವಿಶ್ವಾಸಿಗಳಿಗಿಂತ ಹೆಚ್ಚಾಗಿ, ದೇವರು ಇಂತಹ ಒಬ್ಬ ವ್ಯಕ್ತಿಯನ್ನು ಸಭೆಯನ್ನು ಕಟ್ಟುವುದಕ್ಕಾಗಿ ಬಳಸಿಕೊಳ್ಳುತ್ತಾರೆ.

ಯೇಸುವು ಭೂಲೋಕಕ್ಕೆ ಹಿಂದಿರುಗಿ ಬರುವಾಗ ಮತ್ತು ನೀವು ಆತನ ಮುಂದೆ ನಿಲ್ಲುವಾಗ, ನೀವು ಜೀವಿಸಿದ ರೀತಿಯ ಬಗ್ಗೆ ನಿಮ್ಮಲ್ಲಿ ಬೇಸರವಿರುತ್ತದೆಯೇ, ಅಥವಾ ನೀವು ದೇವರ ರಾಜ್ಯಕ್ಕಾಗಿ ಉಪಯುಕ್ತ ಜೀವನವನ್ನು ಜೀವಿಸಿದ್ದನ್ನು ತಿರುಗಿ ನೋಡಿ ತೃಪ್ತಿಗೊಳ್ಳುತ್ತೀರೋ? ಅನೇಕರು ಭೂಲೋಕದಲ್ಲಿ ತಮ್ಮ ಜೀವನವನ್ನು ವ್ಯರ್ಥಗೊಳಿಸಿ ದಿನಗಳೆಯುತ್ತಿದ್ದಾರೆ. ಬಹಳ ತಡವಾಗುವುದರ ಮೊದಲೇ ಎಚ್ಚರಗೊಳ್ಳಿರಿ, ಮತ್ತು ದೇವರ ಮಾರ್ಗವು ತ್ಯಾಗದ ಮಾರ್ಗವೆಂದು ನಿಮಗೆ ತೋರಿಸಬೇಕೆಂದು ದೇವರನ್ನು ಕೇಳಿಕೊಳ್ಳಿರಿ. ಕಿವಿಯುಳ್ಳವನು ಕೇಳಿಸಿಕೊಳ್ಳಲಿ.