WFTW Body: 

ನಮ್ಮಲ್ಲಿ ಯೇಸುವಿನ ಸಾರೂಪ್ಯವನ್ನು ಉಂಟುಮಾಡುವುದೇ ದೇವರ ಗುರಿಯಾಗಿದೆ. ಇದನ್ನು ಕುರಿತಾದ ಸತ್ಯವೇದದ ಮೂರು ವಚನಗಳು ಇಲ್ಲಿವೆ:

(ಅ) ರೋಮಾಪುರದವರಿಗೆ 8:28,29 : ನಮ್ಮನ್ನು ಈ ಗುರಿಗೆ ತಲುಪಿಸಲಿಕ್ಕಾಗಿ, ನಮ್ಮ ತಂದೆಯಾದ ದೇವರು ಎಲ್ಲಾ ಬಾಹ್ಯ ಸಂಗತಿಗಳು ಒಟ್ಟಾಗಿ ಕೆಲಸ ಮಾಡುವಂತೆ ಮಾಡುತ್ತಾರೆ.

(ಆ) 2ಕೊರಿಂಥದವರಿಗೆ 3:18 : ನಮ್ಮನ್ನು ಈ ಗುರಿಯ ಕಡೆಗೆ ಕರೆದೊಯ್ಯುವುದಕ್ಕಾಗಿ ಪವಿತ್ರಾತ್ಮನು ನಮ್ಮೊಳಗೆ ಬಂದು ನೆಲೆಸುತ್ತಾನೆ.

(ಇ) 1ಯೋಹಾನನು 3:2,3 : ಕ್ರಿಸ್ತನು ಪ್ರತ್ಯಕ್ಷವಾಗಲಿದ್ದಾನೆಂಬ ನಿರೀಕ್ಷೆಯನ್ನು ಇಟ್ಟುಕೊಂಡಿರುವ ಪ್ರತಿಯೊಬ್ಬನೂ ಈ ಗುರಿಯನ್ನು ಮುಟ್ಟಲು ಶ್ರಮಿಸುತ್ತಾನೆ.

ಯೇಸುವು ಎಲ್ಲಾ ಸನ್ನಿವೇಶಗಳಲ್ಲಿ ಸತ್ತ ಹಾಗೆ ನಾವು ಸಹ ಮರಣವನ್ನು ಸ್ವೀಕರಿಸಿದರೆ, ನಾವು ಖಂಡಿತವಾಗಿ ಆತನೊಂದಿಗೆ ಬದುಕುತ್ತೇವೆ. ದೇವರು ನಮಗಾಗಿ ಸಿದ್ಧಪಡಿಸುವ ಸನ್ನಿವೇಶಗಳಲ್ಲಿ ನಾವು ದೇವರಲ್ಲಿ ನಂಬಿಕೆಯಿಟ್ಟರೆ, ನಾವು ಇಂತಹ "ಯೇಸುವಿನ ಮರಣಾವಸ್ಥೆಯನ್ನು" ಸ್ವೀಕರಿಸುತ್ತೇವೆ - ಅಂದರೆ, ನಮ್ಮ ಸ್ವೇಚ್ಛಾಭಿಲಾಷೆಯನ್ನು ಸಾಯಿಸಿ (ಸ್ವಂತ ಸುಖಭೋಗ, ಸ್ವಂತ ಮನ್ನಣೆ, ಸ್ವಂತ ಘನತೆ, ಮುಂತಾದವುಗಳ ಹಂಬಲವನ್ನು ಸಾಯಿಸುವುದು), ಇವುಗಳ ಸ್ಥಾನದಲ್ಲಿ ದೇವರು ದಯಪಾಲಿಸುವ ದೈವಿಕ ಜೀವನವು, ನಾವು ಸಾಯಿಸಿದ ಕೊಳೆತುಹೋದ ಆದಾಮನ ಪ್ರವೃತ್ತಿಗಿಂತ ಬಹಳ ಶ್ರೇಷ್ಠವಾದದ್ದೆಂಬ ಸಂಪೂರ್ಣ ನಂಬಿಕೆ ನಮ್ಮಲ್ಲಿರುತ್ತದೆ.

ನಾವೆಲ್ಲರೂ ನಮ್ಮ ಪೋಷಕರಿಂದ ಸ್ವಾಭಾವಿಕವಾಗಿ ಪಡೆದಿರುವ ಜೀವಿತಕ್ಕಿಂತ ಯೇಸುವಿನ ಪುನರುತ್ಥಾನದ ಜೀವಿತವು ನಿಶ್ಚಯವಾಗಿ ಬಹಳ ಉನ್ನತವಾದದ್ದು. ಆದರೆ ದೇವರು ನಮಗೆ ಯೇಸುವಿನ ಜೀವನವನ್ನು ಕೊಡುವುದಕ್ಕೆ ಮುನ್ನ, ನಾವು ಆದಾಮನಿಂದ ಬಂದಿರುವಂತ ಹಳೆಯ ಜೀವವನ್ನು ಮರಣಕ್ಕೆ ಒಪ್ಪಿಸಲು ಸಿದ್ಧರಾಗಿರಬೇಕು (2 ತಿಮೊ. 2:11; 2 ಕೊರಿ. 4:10). ಒಂದು ಉದಾಹರಣೆಯನ್ನು ಕೊಡುವುದಾದರೆ, ಇದು ನಮ್ಮ ಭಿಕ್ಷಾಪಾತ್ರೆಯಲ್ಲಿರುವ ಕೆಲವು ನಾಣ್ಯಗಳನ್ನು ನಾವು ದೇವರೊಂದಿಗೆ ಅದಲು-ಬದಲು ಮಾಡಿ, ಅವರು ನಮಗೆ ಕೊಡುವಂತ ಕೋಟ್ಯಾಂತರ ರೂಪಾಯಿಗಳನ್ನು ಪಡಕೊಳ್ಳುವುದರ ಒಂದು ಚಿತ್ರಣವಾಗಿದೆ. ಕೇವಲ ಒಬ್ಬ ಮೂರ್ಖನು ಮಾತ್ರ ಇಂತಹ ಬದಲಾವಣೆಯ ಅವಕಾಶವನ್ನು ನಿರಾಕರಿಸುತ್ತಾನೆ. ಆದರೆ ಈ ಪ್ರಪಂಚವು ಇಂತಹ ಮೂರ್ಖರಿಂದ ತುಂಬಿದೆ. ಹಾಗಾಗಿ ಅವರು ತಮ್ಮ ಕೆಲವು ನಾಣ್ಯಗಳನ್ನು ಮುಷ್ಟಿಯಲ್ಲಿ ಬಿಗಿಯಾಗಿ ಹಿಡಿದುಕೊಂಡು (ಅಂದರೆ, ಆ ಕೆಲಸಕ್ಕೆ ಬಾರದ ಆದಾಮನ ಜೀವನವನ್ನು ಅಪ್ಪಿಕೊಂಡು), ಈ ಲೋಕದ ತಮ್ಮ ಲೌಕಿಕ ಜೀವನವನ್ನು ಕೊನೆಗೊಳಿಸುವದಕ್ಕೆ ಮೊದಲು, ತಾವು ಎದುರಿಸುವ ಅನೇಕ ಶೋಧನೆಗಳ ಮೂಲಕ ಪಡೆಯ ಬಹುದಾಗಿದ್ದ ಆತ್ಮಿಕ ಸಂಪತ್ತನ್ನು (ದೈವಿಕ ಸ್ವಭಾವವನ್ನು) ಗಳಿಸುವ ಅವಕಾಶವನ್ನು ಕಳೆದುಕೊಳ್ಳುತ್ತಾರೆ. ಸತ್ಯವೇದವು ನಮ್ಮ ದುರಾಸೆಗಳನ್ನು ’ಮೋಸಕರವಾದವುಗಳು’ ಎಂದು ಹೇಳಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ (ಎಫೆ. 4:22), ಏಕೆಂದರೆ ನಾವು ಅವುಗಳ ಮೂಲಕ ಸಂತೋಷಕರ ಜೀವನವನ್ನು ಪಡೆಯುತ್ತೇವೆಂದು ಅವು ನಮ್ಮನ್ನು ವಂಚಿಸುತ್ತವೆ!

ದೇವರು ನಮ್ಮನ್ನು ಪ್ರೀತಿಸುತ್ತಾರೆ ಎಂಬುದನ್ನು ಸೂಚಿಸುವ ಎರಡು ಚಿಹ್ನೆಗಳು ಯಾವುವೆಂದರೆ, ನಾವು ಒಂದು ಸಣ್ಣ ವಿಷಯದಲ್ಲಿ ತಪ್ಪು ಮಾಡಿದಾಗಲೂ ಅವರು ನಮ್ಮನ್ನು ’ಗದರಿಸುತ್ತಾರೆ’ ಹಾಗೂ ’ಶಿಕ್ಷಿಸುತ್ತಾರೆ’ (ಇಬ್ರಿ. 12:5-8; ಪ್ರಕ. 3:19). ದೇವರು ನಮ್ಮನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಾರೆಂದು ಇದು ಸಾಬೀತು ಪಡಿಸುತ್ತದೆ. ಸ್ವತಃ ನಾವು ಸಹ ಯೇಸುವಿನ ಸಾರೂಪ್ಯವನ್ನು ಹೊಂದುವ (ಆತನಂತೆ ಆಗುವ) ಗುರಿಯನ್ನು ಗಂಭೀರವಾಗಿ ತೆಗೆದುಕೊಂಡಾಗ, ದೇವರು ನಮ್ಮನ್ನು ಆ ಗುರಿಯ ಕಡೆಗೆ ನಿರಂತರವಾಗಿ ನಡೆಸುತ್ತಾರೆ.

ದೇವರು ನಮ್ಮ ಜೀವಿತಕ್ಕಾಗಿ ಒಂದು ಯೋಜನೆಯನ್ನು ಇರಿಸಿಕೊಂಡಿದ್ದಾರೆ, ಮತ್ತು ನಾವು ಅವರನ್ನು ಪೂರ್ಣ ಹೃದಯದಿಂದ ಹುಡುಕಿದರೆ ಮಾತ್ರ ಈ ಯೋಜನೆ ನೆರವೇರುತ್ತದೆ - ಇಲ್ಲವಾದರೆ ಅದು ನೆರವೇರುವುದಿಲ್ಲ (ಇದರ ಬಗ್ಗೆ ಯೆರೆ. 29:11-13ರಲ್ಲಿ ಓದಿಕೊಳ್ಳಿರಿ). ದೇವರು ತನ್ನನ್ನು ಶ್ರದ್ಧೆಯಿಂದ ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾರೆ (ಇಬ್ರಿ. 11:6 - KJV). ಹಾಗಾಗಿ ಈ ಕ್ಷಣದಿಂದಲೇ ನೀನು ಅವರನ್ನು ಶ್ರದ್ಧೆಯಿಂದ ಹುಡುಕತಕ್ಕದ್ದು.