WFTW Body: 

ನಿಮ್ಮ ಜೀವಿತಕ್ಕಾಗಿ ದೇವರು ಇಟ್ಟಿರುವ ಪರಿಪೂರ್ಣ ಯೋಜನೆಯನ್ನು ಪೂರೈಸುವುದಕ್ಕಿಂತ ಹೆಚ್ಚಿನ ಸಾಧನೆ, ನೀವು ಭೂಲೋಕದಲ್ಲಿ ಮಾಡಬಹುದಾದ ಸಂಗತಿಗಳಲ್ಲಿ ಯಾವುದೂ ಇಲ್ಲ. ನಿಮಗಾಗಿ ನನ್ನ ಪ್ರಾರ್ಥನೆಯೇನೆಂದರೆ, ಜಗತ್ತಿನ ಯಾವುದೋ ಒಂದು ಭಾಗದಲ್ಲಿ ದೇವರು ತನ್ನ ಸಭೆಯನ್ನು ಕಟ್ಟುವುದಕ್ಕಾಗಿ ನಿಮ್ಮನ್ನು ಅವರ ಕೈಯಲ್ಲಿ ಒಂದು ಸಾಧನವಾಗಿ, ಒಂದು ದಿನ ನಿಮ್ಮ ಜೀವನ ಮತ್ತು ಶ್ರಮೆಯ ಮೂಲಕ ಉಪಯೋಗಿಸುತ್ತಾರೆ, ಎಂಬುದಾಗಿದೆ. ನಿಮ್ಮ ವಿದ್ಯಾಭ್ಯಾಸ ಮತ್ತು ನೌಕರಿಯು ಕೇವಲ ಜೀವನೋಪಾಯದ ಸಾಧನಗಳಾಗಿವೆ - ಅದರ ಮೂಲಕ ನೀವು ನಿಮ್ಮ ಅವಶ್ಯಕತೆಗಳಿಗಾಗಿ ಇತರರನ್ನು ಅವಲಂಬಿಸುವುದು ತಪ್ಪುತ್ತದೆ. ಆದರೆ ನಿಮ್ಮ ಜೀವನದಲ್ಲಿ ಕೊಡಲ್ಪಟ್ಟಿರುವ ಕರೆ ದೇವರಿಗಾಗಿ ಜೀವಿಸುವುದಾಗಿದೆ. ಹಾಗಾಗಿ ನಿಮ್ಮ ನೌಕರಿ ಅಥವಾ ಉದ್ಯೋಗವನ್ನು ಆರಾಧನೆಯ ಒಂದು ವಿಗ್ರಹವಾಗಿ ಮಾಡಬೇಡಿರಿ.

ದೇವರು ನಿಮ್ಮ ಭೂಲೋಕದ ಜೀವಿತದ ಎಲ್ಲಾ ವಿಷಯಗಳನ್ನು ಮೊದಲೇ ಯೋಜಿಸಿದ್ದಾರೆ. ನಿಮ್ಮ ವಿದ್ಯಾಭ್ಯಾಸದ ವಿವರಗಳು - ಅಂದರೆ, ನೀವು ಸೇರಬೇಕಾದ ಶಾಲಾ ಕಾಲೇಜುಗಳು ಅಷ್ಟೇ ಅಲ್ಲದೆ, ನೀವು ಕಾಲೇಜಿನಲ್ಲಿ ಓದಬೇಕಾದ ವಿಶೇಷ ಕೋರ್ಸುಗಳು ಕೂಡ ಇದರಲ್ಲಿ ಒಳಗೊಂಡಿವೆ. ಸಾರ್ವಭೌಮನಾದ ದೇವರು ನೀವು ಮುಂದೆ ಒಂದು ಯೋಗ್ಯ ನೌಕರಿಗೆ ಸೇರಬೇಕೆಂದು ಖಚಿತ ಪಡಿಸಿ, ಈ ಎಲ್ಲಾ ವಿಷಯಗಳನ್ನು ನಿಯಂತ್ರಿಸುತ್ತಾರೆ. ಆದುದರಿಂದ ನಿಮ್ಮ ಗರಿಷ್ಠ ಪ್ರಯತ್ನಗಳ ನಂತರವೂ, ಒಂದು ವೇಳೆ ನೀವು ಅಂದುಕೊಂಡಿದ್ದ ಅಥವಾ ನಿಮಗೆ ಬೇಕಾಗಿದ್ದ ಕೋರ್ಸುಗಳು ಅಥವಾ ಅವಕಾಶಗಳು ನಿಮಗೆ ಸಿಗದಿದ್ದರೆ, ದೇವರಿಗೆ ಸ್ತೋತ್ರವನ್ನು ಮಾತ್ರ ಮಾಡಿರಿ. ಅನೇಕ ವರ್ಷಗಳ ನಂತರ ನೀವು ಹಿಂದಿರುಗಿ ನೋಡಿದರೆ, ದೇವರು ನಿಮ್ಮನ್ನು ಗಮನಿಸುತ್ತಾ, ನಿಮ್ಮ ಜೀವಿತದ ಆಗುಹೋಗುಗಳನ್ನು ಸಾರ್ವಭೌಮನಾಗಿ ನಿಯಂತ್ರಿಸುತ್ತಾ ಇದ್ದರೆಂದು (ಇದು ನಿಮಗೆ ತಿಳಿಯದ ರೀತಿಯಲ್ಲಿ ನಡೆದಿತ್ತು), ಮತ್ತು ನಿಮ್ಮ ಜೀವಿತದಲ್ಲಿ ನಡೆದ ಎಲ್ಲಾ ಸಂಗತಿಗಳೂ ನಿಮಗಾಗಿ ದೇವರ ಅತ್ಯುತ್ತಮ ಯೋಜನೆಗೆ ಅನುಸಾರವಾಗಿಯೇ ನಡೆದವೆಂದು (ರೋಮಾ. 8:28) ನೀವು ಕಂಡುಕೊಳ್ಳುತ್ತೀರಿ. ದೇವರ ಈ ವಚನದಲ್ಲಿ ನಂಬಿಕೆ ಇರಿಸಿ ಜೀವಿಸಿರಿ.

ಭೂಲೋಕದಲ್ಲಿ ನಿಮ್ಮನ್ನು ಕುರಿತು ದೇವರ ಮುಖ್ಯ ಉದ್ದೇಶವೇನೆಂದರೆ, ನೀವು ದೇವರ ಸಾಕ್ಷಿಗಳಾಗಿ ಜೀವಿಸುವುದು - ಇದಕ್ಕಾಗಿ ಈ ಲೋಕದಲ್ಲಿ ನಿಮ್ಮ ಮೂಲಕ ಯೇಸುವಿನ ಜೀವವು ಪ್ರಕಟವಾಗಬೇಕು. ಹಾಗಾಗಿ ನಿಮ್ಮ ಅಭಿಲಾಷೆಗಳು ಅಥವಾ ಮಹತ್ವಾಕಾಂಕ್ಷೆಗಳಲ್ಲಿ ಎಂದಿಗೂ ಲೌಕಿಕತೆ ಇಲ್ಲದಂತೆ ನೋಡಿಕೊಳ್ಳಿರಿ. ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳಿರಿ. ದೇವರ ಪರಿಪೂರ್ಣ ಚಿತ್ತವನ್ನು ಹುಡುಕಿರಿ. ಕೊನೆಯಲ್ಲಿ ನ್ಯಾಯ ತೀರ್ಪಿನ ದಿನದಂದು ನೀವು ಕರ್ತನ ಮುಂದೆ ನಿಲ್ಲುವಾಗ, ನೀವು ಬಾಳಿದ ಜೀವನದ ಬಗ್ಗೆ ನಿಮಗೆ ವ್ಯಸನವಾಗದಂತೆ ಬಾಳಿರಿ. ಆ ಕೊನೆಯ ದಿನದಲ್ಲಿ ನೀವು ಕಾಲೇಜಿನಲ್ಲಿ ಪಡೆದ ಅಂಕಗಳು ಮುಖ್ಯವಾಗಿರುವುದಿಲ್ಲ, ಆದರೆ ದೇವರನ್ನು ಮೆಚ್ಚಿಸಿ ಅವರಿಂದ ಗಳಿಸುವ ಹೊಗಳಿಕೆಯೆಂಬ ಅಂಕಗಳು ಮಾತ್ರ ಮುಖ್ಯವಾಗಿರುತ್ತವೆ (1 ಕೊರಿ. 4:5) . ಆಗ ನೀವು ಈ ವಿಷಯದಲ್ಲಿ ಗಳಿಸಿದ ಅಂಕಕ್ಕೆ ಮಾತ್ರ ಮಹತ್ವವಿರುತ್ತದೆ.

ದೇವರು ನಮ್ಮ ಜೀವಿತವನ್ನು ಬಹಳ ಸುಂದರವಾಗಿ ಯೋಜಿಸುತ್ತಾರೆ. ನಾನು ನನ್ನ ಜೀವನದಲ್ಲಿ ಖುದ್ದಾಗಿ ಇದನ್ನು ಮತ್ತೆ ಮತ್ತೆ ಅನುಭವಿಸಿದ್ದೇನೆ, ಆದ್ದರಿಂದ "ಕೊಯ್ಯಲ್ಪಟ್ಟ ಕುರಿಯಾದಾತನ ಬಾಧೆಗಳಿಗಾಗಿ ಆತನಿಗೆ ಸಿಗಬೇಕಾದ ಪ್ರತಿಫಲವನ್ನು ಗಳಿಸಲಿಕ್ಕಾಗಿ," ಮುಂದಿನ ದಿನಗಳಲ್ಲಿ ನಾನು ನನ್ನ ಜೀವಿತವನ್ನು ಇನ್ನೂ ಹೆಚ್ಚಿನ ಶ್ರದ್ಧೆಯಿಂದ ಅವರ ಸೇವೆಗೆ ಅರ್ಪಿಸಲು ಬಯಸುತ್ತೇನೆ. 18ನೇ ಶತಮಾನದಲ್ಲಿ ಮೊರಾವಿಯಾ ಎಂಬ ಪ್ರದೇಶದ (ಇಂದಿನ ಜೆಕೋಸ್ಲಾವಿಯಾ ದೇಶದಲ್ಲಿದೆ) ಕ್ರೈಸ್ತ ಮುಖಂಡ ಕೌಂಟ್ ಜ಼ಿನ್‍ಜ಼ೆನ್‍ಡೋರ್ಫ್ ಎಂಬಾತನ ಕೆಳಗಿದ್ದ ಕ್ರೈಸ್ತರು ಇದೇ ಧ್ಯೇಯವನ್ನು ಹೊಂದಿದ್ದರು.

ದೇವರು ನಿಮ್ಮ ಜೀವನಕ್ಕಾಗಿ ಇಟ್ಟುಕೊಂಡಿರುವ ಪರಿಪೂರ್ಣ ಯೋಜನೆಗೆ ತಕ್ಕುದಾದ ಲೌಕಿಕ ಅರ್ಹತೆ ಅಥವಾ ಯೋಗ್ಯತೆ ನಿಮ್ಮಲ್ಲಿ ಇಲ್ಲದಿದ್ದರೂ, ಅದರಿಂದ ಯಾವುದೇ ಅಡ್ಡಿಯಾಗುವುದಿಲ್ಲ. ನಿಮ್ಮ ಜೀವಿತದಲ್ಲಿ ಆ ಯೋಜನೆ ಈಡೇರಲು ನಿಮ್ಮಲ್ಲಿ ದೀನತೆ ಮತ್ತು ನಂಬಿಕೆಯ ಮನೋಭಾವದ ಮನಸ್ಸು ಇರಬೇಕು. ಈ ಸದ್ಗುಣಗಳು ಸದಾ ನಿಮ್ಮಲ್ಲಿ ಇರಲಿ ಎಂದು ನಾನು ಬಯಸುತ್ತೇನೆ.

ನಮ್ಮಲ್ಲಿ ಒಬ್ಬನಾದರೂ ಮೂರ್ಖತನದ ತಪ್ಪುಗಳನ್ನು ಮಾಡದೇ ಜೀವಿಸಿಲ್ಲ. ಆದರೆ ನಾನು ನನ್ನ ಸ್ವಂತ ಜೀವಿತದ ಅನುಭವದಿಂದ ಹೇಳುವ ಸಾಕ್ಷಿ ಏನೆಂದರೆ, ಆ ಮೂರ್ಖತನದ ಕಾರ್ಯವನ್ನು ನಮ್ಮ ಪಾಪವೆಂದು ಒಪ್ಪಿಕೊಳ್ಳುವ ದೀನತೆ ನಮ್ಮಲ್ಲಿದ್ದಾಗ, ಮತ್ತು ನಾವು ಇತರರ ಮೇಲೆ ದೂರು ಹೊರಿಸದೇ, "ಕರ್ತನೇ, ನಾನು ಇದನ್ನು ಮಾಡಿದ್ದರೂ, ನೀನು ನನ್ನ ಜೀವನಕ್ಕಾಗಿ ಇಟ್ಟಿರುವ ಯೋಜನೆಯನ್ನು ನಿನ್ನ ಕರುಣೆಯ ಮೂಲಕ ನಡೆಸಿ ಕೊಡುತ್ತೀಯೆಂದು ನಾನು ನಂಬಿದ್ದೇನೆ," ಎಂಬ ಮಾತನ್ನು ನಂಬಿಕೆಯ ಮೂಲಕ ಒಪ್ಪಿಕೊಂಡರೆ, ದೇವರು ನಾವು ಮಾಡಿರುವ ಅನೇಕ ಮೂರ್ಖತನದ ಸಂಗತಿಗಳನ್ನು ಮನ್ನಿಸುತ್ತಾರೆ. ವಿಶ್ವಾಸಿಗಳಲ್ಲಿ ಅನೇಕರು ಕರ್ತನ ಮುಂದೆ ಈ ಮಾತನ್ನು ಯಾವತ್ತೂ ಅರಿಕೆಮಾಡುವುದಿಲ್ಲ, ಏಕೆಂದರೆ ಅವರು ತಮ್ಮ ಸೋಲುಗಳಿಂದಾಗಿ ಎಷ್ಟರ ಮಟ್ಟಿಗೆ ಎದೆಗುಂದಿದ್ದಾರೆ ಎಂದರೆ, ಅವರು ದೇವರ ಕರುಣೆಯ ಮೇಲೆ ಭರವಸೆಯನ್ನು ಕಳಕೊಳ್ಳುತ್ತಾರೆ. ಈ ರೀತಿಯಾಗಿ ಅವರು ತಮ್ಮ ಸೋಲುಗಳನ್ನು ದೇವರ ಸಾರ್ವಭೌಮತ್ವದ ಬಲ ಮತ್ತು ಕರುಣೆಗಿಂತ ದೊಡ್ಡದಾಗಿ ಮಾಡುವುದರ ಮೂಲಕ ದೇವರನ್ನು ಅವಮಾನಿಸುತ್ತಾರೆ. ನೀವು ದೇವರ ಮೇಲೆ ನಂಬಿಕೆಯಿಡಬೇಕು ಮತ್ತು ಅವರ ಮಹಾ ಕರುಣೆಗಾಗಿ ಸ್ತೋತ್ರ ಮಾಡಬೇಕು. ನೀವು ಹೀಗೆ ಮಾಡಿದಾಗ ಎಲ್ಲವೂ ಬಹಳ ಒಳ್ಳೆಯದಾಗಿ ನಡೆಯುತ್ತವೆ - ಬರಲಿರುವ ಪ್ರತಿಯೊಂದು ವರ್ಷವೂ ಹಿಂದಿನ ವರ್ಷಕ್ಕಿಂತ ಉತ್ತಮವಾಗಿರುತ್ತದೆ.