WFTW Body: 

ಎಲ್ಲಾ ಜನರ ಜೀವಿತದಲ್ಲಿ 30ನೇ ವಯಸ್ಸು ಬಹಳ ಮಹತ್ತರವಾದ ಒಂದು ಕಾಲಾವಧಿಯಾಗಿ ತೋರಿಬರುತ್ತದೆ - ಇದು ಹಳೆ ಒಡಂಬಡಿಕೆ ಮತ್ತು ಹೊಸ ಒಡಂಬಡಿಕೆ ಎರಡಕ್ಕೂ ಅನ್ವಯಿಸುವ ಮಾತಾಗಿದೆ.

ಯೋಸೇಫನು 30ನೇ ವಯಸ್ಸಿನಲ್ಲಿದ್ದಾಗ ಐಗುಪ್ತವನ್ನು ಆಳುವವನಾದನು. ಯೋಸೇಫನು 17ನೇ ವಯಸ್ಸನ್ನು ತಲುಪುವಷ್ಟರಲ್ಲೇ, ದೇವರು ಆತನ ಜೀವಿತಕ್ಕೆ ಒಂದು ಉದ್ದೇಶವನ್ನು ತಾನು ಇರಿಸಿಕೊಂಡಿರುವುದಾಗಿ ಆತನಿಗೆ ಕನಸಿನಲ್ಲಿ ಪ್ರಕಟಿಸಿದ್ದರು. ಹೆಚ್ಚಿನ ಹದಿಹರೆಯರು ಕೆಟ್ಟದಾದ ಕನಸುಗಳನ್ನು ಕಾಣುವ ಇಂತಹ ವಯಸ್ಸಿನಲ್ಲಿ, ಒಬ್ಬ ಯೌವನಸ್ಥನು ದೇವರ ವಿಷಯಗಳನ್ನು ಅತೀ ಸೂಕ್ಷ್ಮತೆಯಿಂದ ಗ್ರಹಿಸಿಕೊಂಡು, ದೇವರಿಂದ ಕನಸುಗಳನ್ನು ಹೊಂದಿಕೊಳ್ಳುವಂಥದ್ದು ಒಂದು ಅದ್ಭುತ ಸಂಗತಿಯಾಗಿದೆ. ಯೋಸೇಫನು ಪಟ್ಟಂತಹ ಬಾಧೆಗಳನ್ನು ನೋಡಿರಿ - ತನ್ನ ಸಹೋದರರಿಂದ ಹೊಟ್ಟೆಕಿಚ್ಚು, ದುಷ್ಟ ಸ್ತ್ರೀಯಿಂದ ತಪ್ಪಾದ ದೂಷಣೆ ಮತ್ತು ಸೆರೆಮನೆ ವಾಸ. ಆ ಕಾಲದ ಸೆರೆಮನೆಗಳು ಭಯಾನಕ ಕತ್ತಲು ಕೋಣೆಗಳಾಗಿದ್ದವು; ಅಲ್ಲಿ ಇಲಿಗಳು, ಹುಳಗಳು ಮತ್ತು ಜಿರಳೆಗಳು ಪರದಾಡುತ್ತಿದ್ದವು. ಆದರೆ ಆದಿಕಾಂಡ 39:21ರಲ್ಲಿ ಈ ರೀತಿಯಾಗಿ ಹೇಳಲ್ಪಟ್ಟಿದೆ - "ಕರ್ತನು ಯೋಸೇಫನ ಸಂಗಡ ಇದ್ದನು".

ದಾವೀದನು ಅರಸನಾದಾಗ ಆತನಿಗೆ 30 ವರ್ಷ ವಯಸ್ಸಾಗಿತ್ತು. 1 ಸಮುವೇಲ 16 ನೇ ಅಧ್ಯಾಯದಲ್ಲಿ, ಸಮುವೇಲನು ಇಷಯನಿಗೆ ಆತನ ಎಲ್ಲಾ ಮಕ್ಕಳನ್ನು ಯಜ್ಞಕ್ಕಾಗಿ ಕರೆತರಲು ಹೇಳಿದಾಗ, ಇಷಯನು ಮೊದಲ ಏಳು ಮಕ್ಕಳನ್ನು ಮಾತ್ರ ಕರೆತಂದನು. ಆತನು ತನ್ನ ಕೊನೆಯ ಮಗನಾಗಿದ್ದ ದಾವೀದನನ್ನು ಕರೆತರುವ ಸಂಬಂಧ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ - ಏಕೆಂದರೆ ದಾವೀದನು ಚಿಕ್ಕವನಾಗಿದ್ದರಿಂದ ಆತನ ಬಗ್ಗೆ ಯಾರೂ ಹೆಚ್ಚು ಯೋಚಿಸುತ್ತಿರಲಿಲ್ಲ. ದಾವೀದನು ಆ ಕುಟುಂಬದ ಚಿಕ್ಕ ಬಾಲಕನಾಗಿದ್ದನು, ಆತನ ವಯಸ್ಸು ಕೇವಲ 15 ವರ್ಷ ಇರಬಹುದು. ದಾವೀದನು ಕರೆಯಲ್ಪಟ್ಟಾಗ, ಆ ಕರೆಯ ಮಹತ್ವ ಏನೆಂಬ ತಿಳುವಳಿಕೆ ಆತನಿಗೆ ಇರಲಿಲ್ಲ. ಆದರೆ ದೇವರು ಆತನನ್ನು ಗಮನಿಸುತ್ತಿದ್ದರು ಮತ್ತು ಕರ್ತನಿಗಾಗಿ ಆತನಲ್ಲಿದ್ದ ಭಯಭಕ್ತಿ ಹಾಗೂ ಪ್ರೀತಿಯನ್ನು ದೇವರು ನೋಡಿದ್ದರು. ಆತನು ಬಂದ ತಕ್ಷಣವೇ, ದೇವರು ಸಮುವೇಲನಿಗೆ "ಎದ್ದು ಇವನನ್ನು ಅಭಿಷೇಕಿಸು" ಎಂಬುದಾಗಿ ಹೇಳಿದರು. ಆಗ ಸಮುವೇಲನು ದಾವೀದನನ್ನು ಅಭಿಷೇಕಿಸಿದನು ಮತ್ತು ಕರ್ತನ ಆತ್ಮನು ಅದ್ಭುತವಾಗಿ ಯೌವನಸ್ಥನಾದ ಆ ಹದಿಹರೆಯದ ಬಾಲಕನ ಮೇಲೆ ಬಂದನು.

ದೇವರು ಯೆರೆಮೀಯನನ್ನು ಪ್ರವಾದನೆಗಾಗಿ ಕರೆದಾಗ, ಆತನು ಒಬ್ಬ ಯೌವನಸ್ಥನಾಗಿದ್ದನು. ದೇವರು ಯೆರೆಮೀಯನಿಗೆ ಹೀಗೆ ಹೇಳಿದರು - "ನಾನು ನಿನ್ನನ್ನು ಗರ್ಭದಲ್ಲಿ ರೂಪಿಸುವದಕ್ಕೆ ಮುಂಚೆ ನಿನ್ನನ್ನು ತಿಳಿದಿದ್ದೆನು; ನೀನು ಉದರದಿಂದ ಬರುವದಕ್ಕೆ ಮೊದಲೇ ನಿನ್ನನ್ನು ಪ್ರತಿಷ್ಠಿಸಿದ್ದೆನು; ಜನಾಂಗಗಳಿಗೆ ಪ್ರವಾದಿಯನ್ನಾಗಿ ನಿನ್ನನ್ನು ನೇಮಿಸಿದ್ದೇನೆ" (ಯೆರೆಮೀಯ 1:5,6). ನಾವು ನಮ್ಮ ತಾಯಿಯ ಗರ್ಭದಲ್ಲಿ ಜೀವಪಡೆದು ಸಣ್ಣ ಕಣಗಳಾಗಿ ಇದ್ದಾಗಲೂ ಸಹ, ದೇವರು ನಮ್ಮ ಮೇಲೆ ತನ್ನ ಕಣ್ಣನ್ನು ಇರಿಸಿದ್ದರು. ಯೆರೆಮೀಯನಿಗಾಗಿ ದೇವರು ಒಂದು ಯೋಜನೆಯನ್ನು ಹಾಕಿಕೊಂಡಂತೆ, ನಮ್ಮ ಜೀವನಕ್ಕಾಗಿಯೂ ಸಹ ಒಂದು ಯೋಜನೆಯನ್ನು ಹಾಕಿಕೊಂಡಿದ್ದಾರೆ. ಎಲ್ಲಾ ಯೌವನಸ್ಥರಿಗೂ ಇದು ಒಂದು ಪ್ರೋತ್ಸಾಹದಾಯಕ ವಿಷಯವಾಗಿದೆ. ಕರ್ತರು ಯೆರೆಮೀಯನಿಗೆ ಹೇಳಿದ ಮಾತು, "ಬಾಲಕನು ಎನ್ನಬೇಡ; ಯಾರ ಬಳಿಗೆ ನಿನ್ನನ್ನು ಕಳುಹಿಸುತ್ತೇನೋ ಅವರೆಲ್ಲರ ಬಳಿಗೆ ನೀನು ಹೋಗೇ ಹೋಗುವಿ; ನಾನು ಆಜ್ಞಾಪಿಸುವದನ್ನೆಲ್ಲಾ ನುಡಿಯಲೇ ನುಡಿಯುವಿ" (ಯೆರೆಮೀಯ 1:7). ಮತ್ತು ಇದರ ನಂತರ, ಕರ್ತರು ತನ್ನ ಪ್ರವಾದಿಗಳಿಗೆ ಅನೇಕ ಬಾರಿ ನುಡಿದ ಒಂದು ಮಾತನ್ನು ಆತನಿಗೆ ಹೇಳಿದರು: "ಅವರಿಗೆ ಅಂಜಬೇಡ; ನಿನ್ನನ್ನು ಉದ್ಧರಿಸಲು ನಾನೇ ನಿನ್ನೊಂದಿಗೆ ಇರುವೆನು" (ಯೆರೆಮೀಯ 1:8).

ಯೆಹೆಜ್ಕೇಲನು ತನ್ನ ಸೇವೆಯನ್ನು ಪ್ರಾರಂಭಿಸಿದಾಗ 30 ವರುಷದವನಾಗಿದ್ದನು. ಯೆಹೆಜ್ಕೇಲನು ಒಬ್ಬ ಯಾಜಕನ ಮಗನಾಗಿದ್ದನು ಮತ್ತು ಯಾಜಕನಾಗಲು ತರಬೇತಿ ಪಡೆಯುತ್ತಿದ್ದನು. ಆದರೆ ಯೆಹೆಜ್ಕೇಲನು 30 ವರುಷದವನಾಗಿದ್ದಾಗ, ತುರ್ತಾಗಿ ಪ್ರವಾದಿಯಾಗಲು ದೇವರು ಆತನನ್ನು ಕರೆದರು (ಯೆಹೆಜ್ಕೇಲ 1:1). ಯೆಹೆಜ್ಕೇಲನು ತನ್ನ ಬಾಲ್ಯದ ದಿನಗಳಲ್ಲಿ ಯೆರೆಮೀಯನಿಗೆ ಅಧೀನನಾಗಿ ಇದ್ದಿರಬೇಕು. ಆತನು ಯೆರೆಮೀಯನ ಪ್ರವಾದನೆಗಳನ್ನು ಕೇಳಿರಬೇಕು ಮತ್ತು ಯೌವನಸ್ಥನಾಗಿದ್ದುಕೊಂಡು ಅದನ್ನು ಅಭ್ಯಾಸ ಮಾಡಿರಬೇಕು. ಈ ಯೌವನಸ್ಥನ ನಂಬಿಗಸ್ಥಿಕೆಯನ್ನು ನೋಡಿದ ದೇವರು, ಯೆಹೆಜ್ಕೇಲನು ಒಬ್ಬ ಯಾಜಕನಲ್ಲ, ಒಬ್ಬ ಪ್ರವಾದಿ ಆಗಬೇಕು ಎಂದು ನಿರ್ಧರಿಸಿದರು. ಒಂದು ದಿನ ದೇವರು ಯೆಹೆಜ್ಕೇಲನಿಗೆ ಮೇಲಣ ಲೋಕದ ಬಾಗಿಲನ್ನು ತೆರೆದು, ತನ್ನ ದೇವದರ್ಶನಗಳನ್ನು ಆತನಿಗೆ ತೋರ್ಪಡಿಸಿದರು ಮತ್ತು ತನ್ನ ಜನರಿಗಾಗಿ ಒಂದು ಸಂದೇಶವನ್ನು ಆತನಿಗೆ ವಹಿಸಿಕೊಟ್ಟರು.

ಯೌವನಸ್ಥನಾಗಿದ್ದ ದಾನಿಯೇಲನು ದೇವರ ಮೌಲ್ಯಗಳ ವಿರುದ್ಧವಾಗಿ ರಾಜಿಯಾಗದೇ, ನಂಬಿಗಸ್ಥನಾಗಿ ತನ್ನ ಜೀವನವನ್ನು ಆರಂಭಿಸಿದಾಗ, ತನಗೆ ಎಂಥಹ ಅದ್ಭುತ ಸೇವೆ ದೊರಕಲಿದೆ ಎಂಬುದನ್ನು ಅರಿತಿರಲಿಲ್ಲ. ಆದರೆ ದಾನಿಯೇಲನು ತನ್ನ ನಂಬಿಗಸ್ಥಿಕೆಯನ್ನು ಸಣ್ಣ ಸಣ್ಣ ವಿಷಯಗಳಲ್ಲಿ ಮತ್ತು ದೊಡ್ಡ ವಿಷಯಗಳಲ್ಲಿ ಕಾಪಾಡಿಕೊಂಡನು ಮತ್ತು ದೇವರು ಆತನ ಮೂಲಕ ಒಂದು ವಿಶೇಷವಾದ ಸೇವೆಯನ್ನು ಪೂರೈಸಿಕೊಂಡರು. ದಾನಿಯೇಲನ ಪುಸ್ತಕವು ಪ್ರಾರಂಭವಾದಾಗ ಬಹುಶಃ ಆತನಿಗೆ 17 ವರ್ಷ ವಯಸ್ಸು ಇರಬಹುದು ಮತ್ತು ಆತನು 90 ವರುಷದವನಾದಾಗ ಈ ಪುಸ್ತಕವು ಕೊನೆಗೊಂಡಿತು. ದಾನಿಯೇಲನು ಇಸ್ರಾಯೇಲ್ಯರ 70 ವರುಷಗಳ ಬಾಬೆಲಿನ ದಾಸತ್ವದ ಉದ್ದಕ್ಕೂ ಜೀವಿಸಿದನು, ಮತ್ತು ಆ ಸಂಪೂರ್ಣ ಅವಧಿಯಲ್ಲಿ ನಂಬಿಗಸ್ಥನಾಗಿ ನಡೆದನು. ಇದರಿಂದಾಗಿ ದೇವರು ಬಾಬೆಲಿನಿಂದ ಯೆರೂಸಲೇಮಿಗೆ ಜನರನ್ನು ಹಿಂದಿರುಗಿ ಕರೆತರುವ ಪ್ರಕ್ರಿಯೆಯನ್ನು ಆತನ ಮೂಲಕ ಪ್ರಾರಂಭಿಸಲು ಸಾಧ್ಯವಾಯಿತು. ಇಂದು ಸಹ, ದೇವರು 17 ವರುಷದ ಒಬ್ಬ ಯೌವನಸ್ಥನನ್ನು ಆರಿಸಿಕೊಳ್ಳಬಹುದು ಮತ್ತು ಆತನನ್ನು ಪ್ರವಾದಿಯನ್ನಾಗಿ ಮಾಡಬಹುದು ಮತ್ತು ಆತನಿಗೆ ದೇವರಿಗಾಗಿ ನಿಲ್ಲುವ ಅಧಿಕಾರವನ್ನು ಕೊಡಬಹುದು.

ಜೆಕರ್ಯನು ಹಗ್ಗಾಯನ ಜೊತೆಯಲ್ಲಿಯೇ ಪ್ರವಾದಿಸಿದ ಒಬ್ಬ ಯೌವನಸ್ಥನಾಗಿದ್ದನು. ಜೆಕರ್ಯನು ವಯಸ್ಸಿನಲ್ಲಿ ಹಗ್ಗಾಯನಿಗಿಂತ ಚಿಕ್ಕವನಾಗಿದ್ದರೂ ಸಹ, ದೇವರು ಆತನಿಗೆ ಕೊಟ್ಟ ಪ್ರವಾದನೆಯು ಹೆಚ್ಚಿನದಾಗಿತ್ತು. ದೇವರ ಆಶೀರ್ವಾದವು ವಯಸ್ಸಿನ ಪ್ರಕಾರವಾಗಿ ಇರುವುದಿಲ್ಲ. ಜೆಕರ್ಯನು ಇನ್ನೂ ಯೌವನಸ್ಥನಾಗಿದ್ದಾಗಲೇ ದೇವರು ಆತನಿಗೆ ದರ್ಶನಗಳನ್ನೂ ಮತ್ತು ದೈವೋಕ್ತಿಗಳನ್ನೂ ಕೊಡಲು ಪ್ರಾರಂಭಿಸಿದರು (ಜೆಕರ್ಯ 2:4). ನೀವು ಇನ್ನೂ ಯೌವನಸ್ಥರಾಗಿದ್ದಾಗಲೇ ದೇವರು ನಿಮ್ಮನ್ನು ಆರಿಸಿಕೊಂಡು, ನಿಮ್ಮನ್ನು ತನ್ನ ಪವಿತ್ರಾತ್ಮನಿಂದ ಅಭಿಷೇಕಿಸಿ, ಹಗ್ಗಾಯನ ಹಾಗಿನ ವಯಸ್ಸಿನಲ್ಲಿ ಹಿರಿಯನೂ ದೈವಿಕನೂ ಆಗಿರುವ ಒಬ್ಬ ಸಹೋದರನ ಜೊತೆಗೆ ನಿಮ್ಮನ್ನು ಸೇರಿಸಬಹುದು ಮತ್ತು ಕೊನೆಯಲ್ಲಿ ಅವರಿಗಿಂತ ವಿಶಾಲವಾದ ಸೇವೆಯನ್ನು ನಿಮಗೆ ಕೊಡಬಹುದು. ಜೆಕರ್ಯನು ನಿರುತ್ಸಾಹಗೊಂಡಂತ ಜನರನ್ನು ಪ್ರೋತ್ಸಾಯಿಸುವಂತ ಆಶಿರ್ವಾದದಾಯಕ ಸೇವೆಯನ್ನು ಹೊಂದಿದ್ದನು.

ಯೇಸುವು ಇಹಲೋಕದ ಸೇವೆಯನ್ನು ಪ್ರಾರಂಭಿಸಿದಾಗ 30 ವರುಷದವರಾಗಿದ್ದರು. ಯೇಸುವಿಗೂ ಸಹ ತನ್ನ ಸೇವೆಗೆ ಹೋಗುವ ಮುನ್ನ, 30 ವರುಷಗಳ ಕಾಲ ಯೋಸೇಫ ಮತ್ತು ಮರಿಯರಿಗೆ ಅಧೀನನಾಗಿ ನಡೆಯುವ ತರಬೇತಿಯ ಅಗತ್ಯತೆ ಇತ್ತು. ಹಾಗಿದ್ದಲ್ಲಿ ನಮಗೆ ಈ ತರಬೇತಿ ಇನ್ನೆಷ್ಟು ಅವಶ್ಯವಾಗಿ ಬೇಕಿದೆ?

ಅಪೊಸ್ತಲರಲ್ಲಿ ಹೆಚ್ಚಿನವರು ತಮ್ಮ ಸೇವೆಯನ್ನು ಪ್ರಾರಂಭಿಸಿದಾಗ ಆಜು ಬಾಜು 30 ವರುಷದವರಾಗಿದ್ದರು. ಇಂದು ಸಹ, ದೇವರು ತನ್ನ ಮಕ್ಕಳನ್ನು ಬಹುಶಃ ಈ ವಯಸ್ಸಿನಲ್ಲಿ ಅವರವರಿಗಾಗಿ ಇಟ್ಟಿರುವ ಪ್ರತ್ಯೇಕ ಸೇವೆಗೆ ಮುನ್ನಡೆಸಲು ಬಯಸುತ್ತಾರೆ. ಆದರೆ ಆ ನಿರ್ದಿಷ್ಟ ಸಮಯ ಬರುವ ತನಕ, ಅನೇಕ ವರುಷಗಳ ಕಾಲ ದೇವರು ನಮ್ಮನ್ನು ಆ ಪ್ರತ್ಯೇಕ ಸೇವೆಗಾಗಿ ಸಿದ್ಧಪಡಿಸುವುದು ಅವಶ್ಯವಾಗಿದೆ. ನೀವು ನಿಮ್ಮ ಹದಿಹರೆಯದಲ್ಲಿ ಹಾಗೂ 20ರ ದಶಕದಲ್ಲಿ ದೇವರಿಗೆ ಸಂಪೂರ್ಣವಾಗಿ ಶರಣಾಗಿ ಅವರು ನಿಮ್ಮನ್ನು ಸಿದ್ಧಗೊಳಿಸಲು ಅನುಮತಿಸುವುದಾದರೆ, ನೀವು 30 (ಅಥವಾ 35)ನೇ ವಯಸ್ಸಿಗೆ ಬಂದಾಗ, ದೇವರು ನಿಮಗಾಗಿ ಇಟ್ಟಿರುವಂತ ಪ್ರತ್ಯೇಕ ಸೇವೆಗೆ ಸಿದ್ಧರಾಗಬಹುದು.