ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ಶಿಷ್ಯಂದಿರಿಗೆ
WFTW Body: 

ಎಫೆಸ 4:13ರಲ್ಲಿ ಅಪೊಸ್ತಲ ಪೌಲನು, "ನಾವೆಲ್ಲರು ಪ್ರವೀಣತೆಗೆ ಬಂದವರಾಗಿ, ಕ್ರಿಸ್ತನ ಪರಿಪೂರ್ಣತೆಯೆಂಬ ಪ್ರಮಾಣವನ್ನು ಮುಟ್ಟುವ ತನಕ" ಎಡೆಬಿಡದೆ ಬೆಳೆಯಬೇಕು, ಎಂದು ಹೇಳುತ್ತಾನೆ. ಪ್ರವೀಣತೆಯ ಮಟ್ಟವನ್ನು ತಲುಪುವ ಗುರಿ ನಮ್ಮಲ್ಲಿ ಇರುವುದು ಮಾತ್ರವಲ್ಲದೆ, ಇತರರು ಅಲ್ಲಿಗೆ ತಲುಪಲು ಸಹಾಯ ಮಾಡುವುದು ಸಹ ನಮ್ಮ ಗುರಿಯಲ್ಲಿ ಸೇರಿರಬೇಕು. ನಾವು ಈ ಹಾದಿಯನ್ನು ಹಿಡಿದಾಗ, "ಇನ್ನೂ ಕೂಸುಗಳಂತೆ ನಡೆಯಬಾರದು; ದುರ್ಜನರ ವಂಚನೆಗೂ, ದುರ್ಬೋಧಕರ ಕುಯುಕ್ತಿಗೂ ಒಳಬಿದ್ದು, ನಾನಾ ಉಪದೇಶಗಳಿಂದ ಕಂಗೆಟ್ಟು, ಗಾಳಿಯಿಂದ ಅತ್ತಿತ್ತ ನೂಕಿಸಿಕೊಂಡು ಹೋಗುವವರ ಹಾಗಿರಬಾರದು" (ಎಫೆಸ 4:14).

ನಾವು ವಿವೇಚನೆಯಲ್ಲಿ (ಅಂದರೆ, ಸರಿ-ತಪ್ಪುಗಳ ಪ್ರಜ್ಞೆ) ಬೆಳೆಯಲಿಕ್ಕಾಗಿ, ನಾವು ವಂಚನೆ ಮತ್ತು ಸುಳ್ಳು ಬೋಧನೆಗಳಿಗೆ ಒಳಗಾಗುವುದನ್ನು ದೇವರು ಅನುಮತಿಸುತ್ತಾರೆ. ಇದಿಲ್ಲದೆ ನಮ್ಮ ವಿವೇಚನೆ ಬೆಳೆಯುವುದಿಲ್ಲ. ಅದಕ್ಕಾಗಿ ದೇವರು ಅನೇಕ ವಂಚಕರು ಮತ್ತು ಸುಳ್ಳು ಪ್ರವಾದಿಗಳು ಕ್ರೈಸ್ತ ಪ್ರಪಂಚದಲ್ಲಿ ಅಲ್ಲಿಲ್ಲಿ ಚಲಿಸುವುದನ್ನು ಅನುಮತಿಸುತ್ತಾರೆ. ಇದರ ಮೂಲಕ ಯಾರಲ್ಲಿ ಸರಿಯಾದ ಆತ್ಮವಿದೆ ಮತ್ತು ಯಾರಲ್ಲಿ ಸರಿಯಾದ ಆತ್ಮವಿಲ್ಲ, ಎಂದು ನಾವು ವಿವೇಚಿಸಲು ಸಾಧ್ಯವಾಗುತ್ತದೆ. ನಾವು ಇತರರನ್ನು ತೀರ್ಪುಮಾಡುವದು ಬೇಕಿಲ್ಲ. ಆದರೆ ನಮ್ಮ ವಿವೇಚನೆಯನ್ನು ಬೆಳೆಸಿಕೊಳ್ಳಬೇಕು. ಆಗ ನಮ್ಮ ಆತ್ಮಿಕ ಪ್ರಜ್ಞೆ ಚುರುಕಾಗುತ್ತದೆ.

ಎಫೆಸ 4:15ರಲ್ಲಿ, "ಪ್ರೀತಿಯಿಂದ ಸತ್ಯವನ್ನು ನುಡಿಯುವ ಮೂಲಕ ಬೆಳೆಯಬೇಕು," ಎಂದು ನಮ್ಮನ್ನು ಪ್ರೇರೇಪಿಸಲಾಗಿದೆ. ಸತ್ಯ ಮತ್ತು ಪ್ರೀತಿ, ಇವುಗಳ ನಡುವೆ ಸಮತೋಲನ ಇರುವುದನ್ನು ಗಮನಿಸಿರಿ. ನಾವು ಸತ್ಯವನ್ನು ನುಡಿಯುವುದು ಸರಿಯೇ? ಖಂಡಿತವಾಗಿ, ಯಾವಾಗಲೂ! ಆದರೆ ಅದನ್ನು ಸ್ವಚ್ಛಂದವಾಗಿ ವಿವೇಚನೆಯಿಲ್ಲದೆ ನುಡಿಯುವುದು ಸರಿಯೇ? ಇಲ್ಲ. ನಾವು ಸತ್ಯವನ್ನು "ಪ್ರೀತಿಯಿಂದ" ನುಡಿಯಬೇಕು. ನಿಮಗೆ "ಪ್ರೀತಿಯಿಂದ" ಸತ್ಯವನ್ನು ನುಡಿಯಲು ಸಾಧ್ಯವಾಗದೇ ಇದ್ದರೆ, ಸಂಬಂಧ ಪಟ್ಟ ಜನರನ್ನು ಪ್ರೀತಿಸಿ, ಅವರಿಗೆ ಸತ್ಯವನ್ನು ತಿಳಿಸುವಷ್ಟು ಪ್ರೀತಿ ನಿಮ್ಮಲ್ಲಿ ಉಂಟಾಗುವ ತನಕ ನೀವು ಕಾಯಬೇಕಾಗುತ್ತದೆ. "ಪ್ರೀತಿ"ಯೆಂಬ ಹಲಗೆಯ ಮೇಲೆ ನೀವು "ಸತ್ಯ"ವೆಂಬ ಲೇಖನಿಯಿಂದ ಬರೆಯಬಹುದು. ಬರೆಯುವ ಹಲಗೆಯಿಲ್ಲದೆ ನೀವು ಸತ್ಯವನ್ನು ಬರೆದು ತೋರಿಸಲು ಪ್ರಯತ್ನಿಸಿದರೆ, ಬರೀ ಗಾಳಿಯಲ್ಲಿ ಕೈಬೀಸಿ ಬರೆದಂತೆ ಆಗುತ್ತದೆ. ನಿಮ್ಮ ಬರಹವನ್ನು ಯಾರೂ ಅರ್ಥ ಮಾಡಿಕೊಳ್ಳಲಾರರು. ಎಲ್ಲಾ ಸಮಯದಲ್ಲಿ ನಿಜವನ್ನು ನುಡಿಯುವ ಮೂಲಕ - ಬೋಧನೆಯಲ್ಲಿ ಮತ್ತು ಖಾಸಗಿ ಸಂಭಾಷಣೆಯಲ್ಲಿ - ನಾವು "ಎಲ್ಲಾ ವಿಷಯಗಳಲ್ಲಿ ಬೆಳೆದು ಶಿರಸ್ಸಾದ ಕ್ರಿಸ್ತನಂತೆ ಆಗುತ್ತಾ ಬರುತ್ತೇವೆ" (ಎಫೆಸ 4:15).

ಪೌಲನು "ದೇಹ"ದ ಕುರಿತಾಗಿ ಹೇಳಿರುವ ಮಾತು: "ದೇಹವೆಲ್ಲಾ ಕ್ರಿಸ್ತನ ದೊರೆತನದಲ್ಲಿ ಇದ್ದುಕೊಂಡು, ಎಲ್ಲಾ ಅಂಗಗಳು ಕೀಲುಗಳ ಮೂಲಕ ಬಿಗಿಯಾಗಿ ಜೋಡಿಸಲ್ಪಟ್ಟು ಅದರದರ ಶಕ್ತಿಯ ಪ್ರಕಾರ ಪಾಲ್ಗೊಂಡಾಗ, ದೇಹದಲ್ಲಿ ಪ್ರೀತಿಯ ಐಕ್ಯತೆ ಉಂಟಾಗಿ, ಕ್ಷೇಮಾಭಿವೃದ್ಧಿ ಸಾಧ್ಯವಾಗುತ್ತದೆ" (ಎಫೆಸ 4:16 -- ಸ್ವ. ಅನು.). ಇಲ್ಲಿ "ಕೀಲುಗಳು" ಅನ್ಯೋನ್ಯತೆಯನ್ನು ಸೂಚಿಸುತ್ತದೆ. ಕೇವಲ ಒಂದು ತೋಳಿನಲ್ಲಿ ಎಷ್ಟು ಕೀಲುಗಳು ಇವೆಯೆಂದು ಗಮನಿಸಿರಿ. ಭುಜದಲ್ಲಿ ಒಂದು ಕೀಲು, ಮೊಣಕೈಯಲ್ಲಿ ಇನ್ನೊಂದು ಕೀಲು, ಮಣಿಕಟ್ಟಿನಲ್ಲಿ ಮತ್ತೊಂದು, ಅಲ್ಲದೆ ಪ್ರತಿಯೊಂದು ಬೆರಳಿನಲ್ಲೂ ಮೂರು ಜೋಡಣೆಗಳು ಇವೆ - ಕಡೇ ಪಕ್ಷ 17 ಜೋಡಣೆಗಳು ಇವೆ. ಈ ಜೋಡಣೆಗಳ ಮೂಲಕವೇ ನಿಮ್ಮ ತೋಳು ಸುಲಭವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ನೀವು ಬಲವಾದ ಮೇಲಿನ ತೋಳು ಮತ್ತು ಬಲವಾದ ಕೆಳತೋಳನ್ನು ಹೊಂದಿರಬಹುದು, ಆದರೆ ನಿಮ್ಮ ಮೊಳಕೈ ಗಂಟು ಬಿಗಿಯಾಗಿದ್ದರೆ, ಆ ತೋಳಿನಿಂದ ನೀವು ಏನು ಮಾಡಬಹುದು? ಏನನ್ನೂ ಮಾಡಲು ಆಗುವುದಿಲ್ಲ. ತೋಳಿನಲ್ಲಿ ಬಲವಿದ್ದರೆ ಮಾತ್ರ ಸಾಲದು, ತೋಳಿನ ಸಂಧಿಗಳು (ಕೀಲುಗಳು) ಸಹ ಚೆನ್ನಾಗಿ ಕೆಲಸ ಮಾಡಬೇಕು.

ಈ ನಿಯಮ ಕ್ರಿಸ್ತನ ದೇಹಕ್ಕೆ ಹೇಗೆ ಅನ್ವಯಿಸುತ್ತದೆ ಎಂದು ನೋಡಿರಿ. ಸಭೆಯಲ್ಲಿ ಒಬ್ಬ ಒಳ್ಳೆಯ ಸಹೋದರ, ಬಲಿಷ್ಠವಾದ ಮೇಲಿನ ತೋಳು ಆಗಿರುತ್ತಾನೆ. ಮತ್ತೊಬ್ಬ ಒಳ್ಳೆಯ ಸಹೋದರ ಬಲಿಷ್ಠವಾದ ಕೆಳ ತೋಳಿನಂತೆ ಇರುತ್ತಾನೆ. ಆದರೆ ಅವರಿಬ್ಬರ ನಡುವೆ ಐಕ್ಯತೆ ಇಲ್ಲದಿರಬಹುದು. ಇಂದು ಕ್ರಿಸ್ತನ ದೇಹದಲ್ಲಿ ಕಂಡುಬರುವ ವಿಷಾದಕರ ಸಂಗತಿ ಇದೇ ಆಗಿದೆ. ಮಾನವ ದೇಹದಲ್ಲಿ ಇದಕ್ಕೆ ಸಂಧಿವಾತ ಖಾಯಿಲೆ ಎಂಬ ಹೆಸರಿದೆ, ಮತ್ತು ಅದು ತುಂಬಾ ನೋವನ್ನು ತರುತ್ತದೆ. ಬಹಳಷ್ಟು ಸ್ಥಳೀಯ ಸಭೆಗಳು ಸಂದಿವಾತದಿಂದ ನರಳುತ್ತಿವೆ. ನಮ್ಮ ದೇಹದ ಗಂಟುಗಳು ಸರಿಯಾಗಿದ್ದಾಗ, ಅವು ನಿಶ್ಯಬ್ದವಾಗಿ ಕಾರ್ಯವೆಸಗುತ್ತವೆ. ಆದರೆ ದೇಹಕ್ಕೆ ಸಂದಿವಾತವಾದಾಗ, ಅಂಗಗಳ ಚಲನೆಯು ಒಂದು ಕೀಚಲು ಧ್ವನಿಯನ್ನು ಉಂಟುಮಾಡುತ್ತದೆ. ಕೆಲವು ವಿಶ್ವಾಸಿಗಳ ನಡುವಿನ "ಅನ್ಯೋನ್ಯತೆ" ಇಂಥದ್ದೇ ಆಗಿದೆ. ಅಲ್ಲಿ ಕೀಚಲು ಧ್ವನಿ ಕೇಳಿಸುತ್ತದೆ. ಆದರೆ ಗಂಟುಗಳು ಸರಿಯಾಗಿದ್ದಾಗ, ಚಲನೆಯಲ್ಲಿ ಯಾವ ಶಬ್ದವೂ ಕೇಳಿಸದು. ನಮ್ಮ ನಡುವಿನ ಅನ್ಯೋನ್ಯತೆ ಹಾಗಿರಬೇಕು. ಇಂತಹ ಅನುಭವ ನಿಮಗೆ ಅಗಿಲ್ಲವಾದರೆ, ಆಗ ನೀವು ಸಂಧಿವಾತಕ್ಕೆ ಬೇಕಾದ ಔಷಧಿಯನ್ನು ತೆಗೆದುಕೊಳ್ಳಬೇಕು - ನಿಮ್ಮ "ಸ್ವಾರ್ಥ ಜೀವಿತವನ್ನು" ಸಾಯಿಸಬೇಕು. ಆಗ ನಿಮ್ಮ ಖಾಯಿಲೆ ವಾಸಿಯಾಗುತ್ತದೆ ಮತ್ತು ಇತರರೊಂದಿಗೆ ನಿಮ್ಮ ಅನ್ಯೋನ್ಯತೆ ಅದ್ಭುತವಾಗುತ್ತದೆ. ಕ್ರಿಸ್ತನ ದೇಹಕ್ಕಾಗಿ ದೇವರ ಚಿತ್ತ ಇದೇ ಆಗಿದೆ.