WFTW Body: 

’ಹಬಕ್ಕೂಕ’ನ ಗ್ರಂಥವು ಪ್ರಶ್ನೆಗಳಿಂದ ಕಾಡಿಸಲ್ಪಟ್ಟಿದ್ದ ಒಬ್ಬ ಮನುಷ್ಯನು, ಸಂದೇಹದಿಂದ ದೃಢನಂಬಿಕೆಗೆ ಪ್ರಯಾಣಿಸಿದ್ದರ ನಿರೂಪಣೆಯಾಗಿದೆ. ಆರಂಭದಲ್ಲಿ ಆತನು, "ಕರ್ತನೇ, ನಾನು ಮೊರೆಯಿಡುತ್ತಿದ್ದರೂ ನೀನು ಎಷ್ಟು ಕಾಲ ಕೇಳದೇ ಇರುವಿ? ಹಿಂಸೆ, ಹಿಂಸೆ, ಎಂದು ನಿನ್ನನ್ನು ಕೂಗಿಕೊಂಡರೂ ರಕ್ಷಿಸದೆ ಇರುವಿ," ಎಂದು ಸಂಶಯದಿಂದ ಪ್ರಶ್ನಿಸುತ್ತಾನೆ (ಹಬ. 1:2). ಆದರೆ ಕೊನೆಗೆ ಅವನು, "ನಾನು ಕರ್ತನಲ್ಲಿ ಉಲ್ಲಾಸಿಸುವೆನು ... ದೇವರಾದ ಕರ್ತನೇ ನನ್ನ ಬಲ; ಆತನು ಉನ್ನತ ಪ್ರದೇಶಗಳಲ್ಲಿ ನನ್ನನ್ನು ನಡಿಸುತ್ತಾನೆ," ಎಂದು ಸಂಪೂರ್ಣ ವಿಶ್ವಾಸದಿಂದ ನುಡಿಯುತ್ತಾನೆ (ಹಬ. 3:18-19).

ಹಬಕ್ಕೂಕನಿಗೆ ಕರ್ತನು ಕಾಣಿಸಿದಾಗ, ಅವನ ಹೃದಯವು ಸ್ತುತಿಯಿಂದ ತುಂಬಿತು, "ಕರ್ತನೋ ತನ್ನ ಪರಿಶುದ್ಧ ಮಂದಿರದಲ್ಲಿದ್ದಾನೆ; ಭೂಲೋಕವೆಲ್ಲಾ ಆತನ ಮುಂದೆ ಮೌನವಾಗಿರಲಿ" (ಹಬ. 2:20). ಆತನ ಮನಸ್ಸಿನಲ್ಲಿ ನಂಬಿಕೆಯ ಕುರಿತಾದ ವಿವಾದವು ನಂಬಿಕೆಯ ಜಯದೊಂದಿಗೆ ಕೊನೆಗೊಂಡಿತು. ಆಗ ಅವನು ನುಡಿದ ಮಾತು, "ಕರ್ತನೇ, ನಿನ್ನ ಮಹಿಮೆಯ ಮುಂದೆ ನಾನು ನಿಶ್ಯಬ್ದವಾಗಿದ್ದೇನೆ. ಈಗ ನನ್ನಲ್ಲಿ ಯಾವ ಪ್ರಶ್ನೆಗಳೂ ಇಲ್ಲ." ಯೋಬನೂ ಸಹ ದೇವರ ಮಹಿಮೆಯನ್ನು ನೋಡಿದಾಗ ಹೀಗೆ ಉದ್ಗರಿಸಿದನು, "ನಾನು ಈಗಲಾದರೋ ನಿನ್ನನ್ನೇ ಕಣ್ಣಾರೆ ಕಂಡೆನು. ನಾನು ಬಾಯಿಯ ಮೇಲೆ ಕೈಯಿಟ್ಟುಕೊಳ್ಳುವೆನು" (ಯೋಬ. 42:5; 40:3). ಯೋಬನು ಕರ್ತನನ್ನು ನೋಡಿದ ನಂತರ ಅವನಲ್ಲಿ ಯಾವ ಪ್ರಶ್ನೆಯೂ ಇರಲಿಲ್ಲ. ದೇವರು ನಿಮ್ಮ 10,000 ಪ್ರಶ್ನೆಗಳನ್ನು ಉತ್ತರಿಸುವುದಿಲ್ಲ, ಏಕೆಂದರೆ ಹಾಗೆ ಮಾಡಿದರೆ, ಆಗ ನಿಮ್ಮಲ್ಲಿ 10,000 ಹೊಸ ಪ್ರಶ್ನೆಗಳು ಉದ್ಭವಿಸುತ್ತವೆ! ಇದಕ್ಕೆ ಪರಿಹಾರ ಮಾರ್ಗ (ಯೋಬನ ಪ್ರಕರಣದಲ್ಲಿ ಮತ್ತು ಹಬಕ್ಕೂಕನ ಪ್ರಕರಣದಲ್ಲಿ ನಡೆದಂತೆ) ಸ್ವತಃ ಕರ್ತನನ್ನು ಕಾಣುವುದು ಆಗಿದೆ. ಕರ್ತನು ತನ್ನ ಪರಿಶುದ್ಧ ಮಂದಿರದಲ್ಲಿದ್ದಾನೆ. ನೀನು ಅವನ್ನು ನೋಡಿದ್ದೀಯಾ? ಅವನನ್ನು ನೋಡಿದ ನಂತರ ನರಪ್ರಾಣಿಯಾದ ನೀನು ಆತನ ಮುಂದೆ ಮೌನವಾಗಿರುವೆ ಮತ್ತು ನಿನ್ನಲ್ಲಿ ಯಾವ ಪ್ರಶ್ನೆಗಳು ಇರುವುದಿಲ್ಲ!

ಹಬಕ್ಕೂಕನು ದೇವರನ್ನು ಕಂಡಾಗ, ನಂಬಿಕೆಯ ಜೀವನವನ್ನು ಜೀವಿಸುವುದರ ಬಹುಮಾನವೇನೆಂದು ಆತನು ಅರಿತುಕೊಂಡನು. ದೇವರನ್ನು ಕೇಂದ್ರವಾಗಿ ಇರಿಸಿಕೊಳ್ಳುವ ಜೀವನವು ಜಯದ ಜೀವಿತವಾಗಿದೆ. ಮೊದಲು ದೇವರು ದುಷ್ಟರನ್ನು ಶಿಕ್ಷಿಸದೆ ಸುಮ್ಮನಿರುತ್ತಾರೆಂದು ಯೋಚಿಸುತ್ತಿದ್ದ ಹಬಕ್ಕೂಕನು, ಈಗ ದೇವರು ರೋಷಗೊಂಡಾಗ ಕರುಣೆಯನ್ನು ತೋರಿಸುತ್ತಾರೆಂದು ಹೇಳುತ್ತಾನೆ (ಹಬ. 3:2). ದೇವರು ತನ್ನ ಜನರನ್ನು ಕೈಬಿಟ್ಟಿರುವುದಾಗಿ ತಿಳಿದಿದ್ದ ಆತನು, ಈಗ ಒಂದು ಸ್ತುತಿಕೀರ್ತನೆಯನ್ನು ಹಾಡುತ್ತಾನೆ. ಅವನು ಹೀಗೆನ್ನುತ್ತಾನೆ, "ನೀನು ಮಾಡಿದ ಸಂಗತಿಗಳನ್ನು ಕೇಳಿ ನಾನು ಅತ್ಯಾಶ್ಚರ್ಯಪಟ್ಟೆನು. ಸದಮಲಸ್ವಾಮಿಯಾದ ದೇವರನ್ನು ನಾನು ನೋಡುವಾಗ, ಆತನ ಪ್ರಭಾವವು ಆಕಾಶಮಂಡಲವನ್ನು ಆವರಿಸುತ್ತಿದೆ. ಆತನ ಮಹಿಮೆಯು ಭೂಮಂಡಲವನ್ನು ತುಂಬುತ್ತಿದೆ. ದೇವರು ಎಂತಹ ಅದ್ಭುತಸ್ವರೂಪನು ಆಗಿದ್ದಾನೆ. ಆತನು ತನ್ನ ಭಯಂಕರ ಬಲಪರಾಕ್ರಮದಲ್ಲಿ ಆನಂದಿಸುತ್ತಾನೆ. ಅವನು ದೃಷ್ಟಿಸಲು, ಜನಾಂಗಗಳು ಬೆದರುತ್ತವೆ. ನೀನು ನಿನ್ನ ಅಭಿಷಿಕ್ತನ ಉದ್ಧಾರಕ್ಕೆ ಹೊರಟಿದ್ದೀ. ನೀನು ದುಷ್ಟನ ಮನೆಯ ಮುಖ್ಯಸ್ಥನನ್ನು ಹೊಡೆದುಹಾಕಿದ್ದೀ" (ಹಬ. 3:2-14).

ಇದಾದ ನಂತರ ಹಬಕ್ಕೂಕನಿಗೆ ಮೊದಲು ದೇವರು ಕಾಣಿಸುತ್ತಾರೆ, ಬಾಬೆಲಿನ ಜನರು ಅಲ್ಲ. ನಿರ್ಮಲಚಿತ್ತರು ಎಲ್ಲೆಡೆಯೂ ಮತ್ತು ಎಲ್ಲಾ ವೇಳೆಯಲ್ಲೂ ದೇವರನ್ನು ನೋಡುತ್ತಾರೆ (ಮತ್ತಾ. 5:8). ಇದುವರೆಗೆ ಹಬಕ್ಕೂಕನು ಮಾಡುತ್ತಿದ್ದ ತಪ್ಪು ಏನೆಂದರೆ, ಅವನು ದುಷ್ಟರಾದ ಬಾಬೆಲಿನವರ ಸೌಭಾಗ್ಯವನ್ನು ಮಾತ್ರ ನೋಡುತ್ತಿದ್ದನು. ದೇವರು ಎಲ್ಲವನ್ನೂ ತನ್ನ ಹಿಡಿತದಲ್ಲಿ ಇರಿಸಿಕೊಂಡಿರುವುದನ್ನು ಅವನು ಈಗ ಕಂಡನು. "ದುಷ್ಟನ ಮನೆಯ ಮುಖ್ಯಸ್ಥ" ಎನ್ನುವ ಮಾತು ಸೈತಾನನಿಗೆ ಅನ್ವಯಿಸಬಹುದು - ಆತನು ಶಿಲುಬೆಯ ಮೇಲೆ ಕ್ರಿಸ್ತನ ಮೂಲಕ ಜಜ್ಜಲ್ಪಟ್ಟನು. ಹಬಕ್ಕೂಕನು ದೇವರ ಮಹಿಮೆ ಮತ್ತು ಘನತೆಯನ್ನು ನೋಡಿದಾಗ, ಆತನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ದೊರಕಿತು. ಅವನು ದೇವರನ್ನು ನೋಡಿ ತಳಮಳಗೊಂಡನು ಮತ್ತು ಹೀಗೆಂದನು, "ವಿಪತ್ಕಾಲವು ವಿರೋಧಿಗಳ ಮೇಲೆ ಬೀಳಲಿದೆ, ನಾನು ಅದಕ್ಕಾಗಿ ತಾಳ್ಮೆಯಿಂದ ಕಾದಿರಬೇಕೆಂದು ನನಗೆ ತಿಳಿಯಿತು" (ಹಬ. 3:16). ನಿಮ್ಮಲ್ಲಿ ಯಾವುದಾದರೂ ಸಂದೇಹವಿದ್ದಾಗ, ಅದರ ಕುರಿತಾಗಿ ದೇವರನ್ನು ವಿಚಾರಿಸಿರಿ, ಮತ್ತು ಮನುಷ್ಯರನ್ನಲ್ಲ. ಹಬಕ್ಕೂಕನಿಗೆ ಮತ್ತು ನಮಗೂ ಸಹ ದೇವರು ಹೇಳುವ ಕೊನೆಯ ಮಾತು, "ತಾಳ್ಮೆಯಿಂದ ಕಾದಿರು," ಎಂದಾಗಿದೆ! ಅವನು ತಾಳ್ಮೆಯಿಂದ ಕಾದು ದೇವರ ಮಾತನ್ನು ಆಲಿಸಿದಾಗ, ಅವನ ದೂರು ಸ್ತುತಿಯಾಗಿ ಬದಲಾಯಿತು. ನಮಗೂ ಸಹ ಹೀಗೆಯೇ ಆಗುತ್ತದೆ. ಅತಿ ಕಷ್ಟದ ಕೆಲಸ ಯಾವುದೆಂದರೆ, ಕಾದು ನಿಲ್ಲುವುದು.

ಹಬಕ್ಕೂಕನ ಅದ್ಭುತವಾದ ಸ್ತುತಿಗೀತೆಯು ಇಡೀ ಹಳೆಯ ಒಡಂಬಡಿಕೆಯಲ್ಲಿ ನಂಬಿಕೆಯ ಕುರಿತಾದ ಬಹಳ ಸುಂದರ ಹಾಡುಗಳಲ್ಲಿ ಒಂದಾಗಿದೆ. ಅವನು ಒಬ್ಬ ಹೊಸ ಒಡಂಬಡಿಕೆಯ ದೇವಭಕ್ತನಂತೆ ಹಾಡುತ್ತಾನೆ: "ಆಹಾ, ಅಂಜೂರವು ಚಿಗುರದಿದ್ದರೂ, ದ್ರಾಕ್ಷಾಲತೆಗಳಲ್ಲಿ ಹಣ್ಣು ಸಿಕ್ಕದಿದ್ದರೂ, ಎಣ್ಣೆಮರಗಳ ಉತ್ಪತ್ತಿಯು ಶೂನ್ಯವಾದರೂ, ಹೊಲಗದ್ದೆಗಳು ಆಹಾರವನ್ನು ಕೊಡದೆಹೋದರೂ, ಹಿಂಡು ಹಟ್ಟಿಯೊಳಗಿಂದ ನಾಶವಾದರೂ, ಮಂದೆಯು ಕೊಟ್ಟಿಗೆಗಳ ಒಳಗೆ ಇಲ್ಲದಿದ್ದರೂ, ನಾನು ಕರ್ತನಲ್ಲಿ ಉಲ್ಲಾಸಿಸುವೆನು, ನನ್ನ ರಕ್ಷಕನಾದ ದೇವರಲ್ಲಿ ಆನಂದಿಸುವೆನು" (ಹಬ. 3:17-18). ಯೋಬನು ಅನುಭವಿಸಿದಂತೆ, ಹಬಕ್ಕೂಕನ ವ್ಯಾಪಾರವು ಹಾಳಾಗಿದ್ದಿರಬಹುದು ಮತ್ತು ಅವನು ಎಲ್ಲವನ್ನು ಕಳಕೊಂಡಿದ್ದಿರಬಹುದು. ಆದರೆ ಅವನು ಇನ್ನೂ ಸಂತೋಷಿಸುತ್ತಾ ಇರುತ್ತಾನೆ, ಏಕೆಂದರೆ ಆ ಸಂತೋಷವು ಕರ್ತನಿಂದ ಉಂಟಾಗುವಂಥದ್ದು ಮತ್ತು ಭೂಲೋಕದ ಯಾವುದರಿಂದಲೂ ಸಿಗುವಂಥದ್ದಲ್ಲ. ನಮ್ಮ ಸುತ್ತಲು ಎಲ್ಲದರಲ್ಲೂ ಸೋಲು ಉಂಟಾದರೂ, ನಾವು ನಮ್ಮ ರಕ್ಷಕನಾದ ದೇವರಲ್ಲಿ ಹರ್ಷಿಸುತ್ತೇವೆ.

ಹೊರಗಿನ ಸ್ತುತಿಗೀತೆಯು, ಒಳಗಿನ ನಂಬಿಕೆಯ ಜಯದ ಅಭಿವ್ಯಕ್ತವಾಗಿದೆ. "ಅವರು ಆತನ ಮಾತನ್ನು ನಂಬಿ ಆತನನ್ನು ಕೀರ್ತಿಸಿದರು" (ಕೀರ್ತ. 106:12). ಹಬಕ್ಕೂಕನು ಹೀಗೆ ಮುಂದುವರಿಸುತ್ತಾನೆ, "ಕರ್ತನಾದ ದೇವರೇ ನನ್ನ ಬಲ! ಆತನು ನನ್ನ ಕಾಲನ್ನು ಜಿಂಕೆಯ ಕಾಲಿನಂತೆ ಚುರುಕು ಮಾಡಿ ಉನ್ನತ ಪ್ರದೇಶಗಳಲ್ಲಿ ನನ್ನನ್ನು ನಡೆಸುತ್ತಾನೆ" (ಹಬ. 3:19). ಆರಂಭದಲ್ಲಿ ಹಲವಾರು ವಿಧವಾದ ಸಂದೇಹಗಳು ಮತ್ತು ಆತಂಕಗಳನ್ನು ಹೊಂದಿದ್ದ ಪ್ರವಾದಿಯು, ಈಗ ಕರ್ತನು ತನ್ನನ್ನು ಪ್ರತಿಯೊಂದು ಸಂದೇಹದ ಪರ್ವತ ಶಿಖರಕ್ಕೆ ಸುರಕ್ಷಿತವಾಗಿ ನಡೆಸುತ್ತಾನೆ ಮತ್ತು ತನ್ನನ್ನು ಪರ್ವತದ ಕಡಿದಾದ ಬಂಡೆಗಳ ಸಂದಿನಲ್ಲಿ ಜಿಂಕೆಗಳು ಕಾಲು ಜಾರದಂತೆ ನಡೆಯುವ ಹಾಗೆಯೇ ನಡೆಸುತ್ತಾನೆಂದು ಹೇಳುತ್ತಾನೆ. ಕೀರ್ತನೆಯ ಕೊನೆಯಲ್ಲಿ ಹಬಕ್ಕೂಕನು ಸ್ವಾರಸ್ಯಕರವಾದ ಒಂದು ಚಿಕ್ಕ ಟಿಪ್ಪಣಿಯನ್ನು ಸೇರಿಸಿದ್ದಾನೆ: "(ಪ್ರಧಾನ ಗಾಯಕನಿಗೆ - ನನ್ನ ತಂತಿವಾದ್ಯದೊಡನೆ ಇದನ್ನು ಹಾಡತಕ್ಕದ್ದು)" (ಹಬ. 3:19). ಆತನ ಟಿಪ್ಪಣಿಯ ತಾತ್ಪರ್ಯ ಏನೆಂದರೆ, ಎಲ್ಲವನ್ನು ಕಳಕೊಂಡಿದ್ದರೂ ಈ ಹಾಡನ್ನು ಶೋಕಗೀತೆಯ ಹಾಗೆ ಹಾಡಬೇಡ! ಇದನ್ನು ಉಲ್ಲಾಸಭರಿತ ಸಂಗೀತದೊಂದಿಗೆ ಹಾಡತಕ್ಕದ್ದು - ಅಷ್ಟೇ ಅಲ್ಲ, ಅನೇಕ ವಾದ್ಯಗಳನ್ನೂ ಸಹ ಉಪಯೋಗಿಸತಕ್ಕದ್ದು! ನಾವು ಕರ್ತನನ್ನು ಹೃತ್ಪೂರ್ವಕವಾಗಿ ಸ್ತುತಿಸುವದನ್ನು ಕಲಿತುಕೊಳ್ಳಬೇಕು. ಕೀರ್ತನೆಗಳನ್ನು ಎಂದಿಗೂ ಸಪ್ಪೆಯಾಗಿ, ರಾಗವಿಲ್ಲದೆ ಹಾಡಬಾರದು. ಸರ್ವ ಸೃಷ್ಟಿಯಲ್ಲಿ ಏನೇ ನಡೆಯಲಿ, ಕರ್ತನು ತನ್ನ ಸಿಂಹಾಸನದ ಮೇಲೆ ಕುಳಿತಿದ್ದಾನೆ ಮತ್ತು ಯೇಸುವು ಜಯಶಾಲಿಯಾಗಿದ್ದಾರೆ. ಹಾಗಾಗಿ ನಾವು ದೇವರು ಕೊಟ್ಟಿರುವ ಸ್ವರವನ್ನು ಎತ್ತಿ ಎಲ್ಲಾ ವಿಧವಾದ ವಾದ್ಯಗಳೊಂದಿಗೆ, ಆತನನ್ನು ಕೊಂಡಾಡೋಣ ಮತ್ತು ಆತನ ನಾಮವನ್ನು ಘನ ಪಡಿಸೋಣ. ಆಮೆನ್.