ಮಾನವ ಸಂಬಂಧಗಳಲ್ಲಿ ಭಿನಾಭಿಪ್ರಾಯಗಳು ಅನಿವಾರ್ಯವಾಗಿವೆ ಎಂಬ ಮಾತು ಪ್ರಾಮಾಣಿಕ ವಿಶ್ವಾಸಿಗಳ ಜೀವನದಲ್ಲೂ ನಿಜವಾಗಿರುತ್ತದೆ. ಕ್ರೈಸ್ತರಾಗಿರುವ ನಾವು ಕಷ್ಟದ ಸಮಯಗಳಲ್ಲಿ ಎಂದಿಗೂ ಪರಿಗಣಿಸಬಾರದ ಕೆಲವು ವಿಷಯಗಳಿವೆಯೆಂದು ನಾವು ನಂಬುತ್ತೇವೆ. ಉದಾಹರಣೆಗೆ, ನಾವು ಅಸಮಾಧಾನಗೊಂಡಾಗ, ನಮ್ಮ ವಿರೋಧಿಗಳನ್ನು ಕೊಲ್ಲುವ ಯೋಚನೆಯನ್ನೂ ಸಹ ನಾವು ಪರಿಗಣಿಸುವುದಿಲ್ಲ. ಇಂತಹ ಸಾಧ್ಯತೆ ಇದೆಯೆಂದು ಯೋಚಿಸುವುದೂ ಸಹ ಹಾಸ್ಯಾಸ್ಪದವಾಗಿದೆ. ಅದೇ ರೀತಿ, ದಾಂಪತ್ಯ ಜೀವನದಲ್ಲಿ, ನಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ವಿವಾಹ ವಿಚ್ಛೇದನದ ಮಾರ್ಗವನ್ನು ನಾವು ಪರಿಗಣಿಸುವುದೇ ಇಲ್ಲ. ಸ್ನೇಹಿತರ ನಡುವಿನ ವಾದವಿವಾದಗಳಲ್ಲಿ ಹೇಗೆ ಕೊಲೆ ಮಾಡುವುದು ಯೋಚಿಸಲಾರದ ಆಯ್ಕೆಯಾಗಿದೆಯೋ, ಅದೇ ರೀತಿ ದಾಂಪತ್ಯ ಜೀವನದಲ್ಲಿ ಸಂಗಾತಿಗಳ ನಡುವೆ ವಿಚ್ಛೇದನವೂ ಯೋಚಿಸಲಾರದ್ದಾಗಿದೆ.
ಯಾವುದನ್ನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳುವುದರ ಜೊತೆಗೆ, ಕಠಿಣ ಸಮಯಗಳಲ್ಲಿ ಏನು ಮಾಡಬೇಕೆಂದು ತಿಳಿಯುವುದು ಮುಖ್ಯವಾಗಿದೆ. ನಮ್ಮ ಸಂಘರ್ಷಗಳನ್ನು ಆರೋಗ್ಯಕರ, ರಚನಾತ್ಮಕ ರೀತಿಯಲ್ಲಿ ಪರಿಹರಿಸಲು ನಾವು ಸಾಧನಗಳನ್ನು ಹುಡುಕಬೇಕು.
ನನ್ನ ಸ್ವಂತ ದಾಂಪತ್ಯ ಜೀವನದಲ್ಲಿ, ಈ ಕೆಳಗಿನ ಎರಡು ವಿಷಯಗಳನ್ನು ನೆನಪಿಟ್ಟುಕೊಂಡದ್ದು ನನಗೆ ಬಹಳ ಸಹಾಯಕವಾಗಿದೆ.
ಸ್ವೇಚ್ಛೆಗೆ ನಾನೇ ಮೊದಲಿಗನಾಗಿ ಸಾಯಬೇಕು
ಯಾವುದೇ ಒಂದು ಕಷ್ಟಕರ ಸಂದರ್ಭದಲ್ಲಿ 100% ಆಪಾದನೆ ಒಂದು ಕಡೆ ಮಾತ್ರ ಇರುವುದು ಬಹಳ ವಿರಳವಾಗಿದೆ. ಯಾವುದೇ ಭಿನ್ನಾಭಿಪ್ರಾಯದಲ್ಲಿ ಎರಡು ಪಕ್ಷಗಳಿಗೂ ಆಪಾದನೆಯ ಸ್ವಲ್ಪ ಭಾಗ ಸಲ್ಲುತ್ತದೆ. 99.9% ತಪ್ಪು ಹೆಂಡತಿಯದ್ದೆಂದು ಪುರುಷನ ಭಾವನೆಯಾಗಿದ್ದರೂ, "ಮನೆಯ ಯಜಮಾನ" ಎನಿಸಿಕೊಳ್ಳುವ ಪುರುಷನು ಮೊದಲು ತನ್ನ ತಪ್ಪಿಗೆ ಕ್ಷಮೆ ಯಾಚಿಸುವ ಮೂಲಕ ನಾಯಕತ್ವವನ್ನು ತೋರಿಸಬೇಕೆಂದು ನಾನು ನಂಬುತ್ತೇನೆ. (ವಾಸ್ತವವಾಗಿ, ಆತನು ಭಾವಿಸಿದಂತೆ ಆಪಾದನೆಯ ಅಷ್ಟು ದೊಡ್ಡ ಭಾಗವು ಮತ್ತೊಬ್ಬರದ್ದು ಆಗಿರುವುದು ಸಾಧ್ಯವಾಗಿರುವುದಿಲ್ಲ).
"ಪ್ರಥಮವಾಗಿ ಆತ್ಮಿಕ ನಾಯಕತ್ವ ಕಾರ್ಯ ನಿರ್ವಹಿಸುವುದು ಹೇಗೆಂದರೆ, ಪರಸ್ಪರ ಸಂಬಂಧದ ಒಂದು ಸನ್ನಿವೇಶದಲ್ಲಿ ತನ್ನ ಸ್ವಂತ ಚಿತ್ತವನ್ನು ಮೊದಲು ಸಾಯಿಸುವುದು"
ನಾನು ಕಲಿತಿರುವ ಒಂದು ವಿಷಯವೆಂದರೆ, ನಾನು ಕ್ಷಮಾಯಾಚನೆ ಮಾಡುವಾಗ, ಅದಕ್ಕೆ ಪ್ರತಿಯಾಗಿ ನನ್ನ ಹೆಂಡತಿಯು ಕ್ಷಮಾಯಾಚನೆ ಮಾಡುತ್ತಾಳೆಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಬಾರದು. ನನ್ನ ಗುರಿ ನನ್ನ ತಪ್ಪನ್ನು ಯಥಾರ್ಥವಾಗಿ ಒಪ್ಪಿಕೊಂಡು, ನನ್ನ ಜವಾಬ್ದಾರಿಯನ್ನು ಸ್ವೀಕರಿಸುವುದು ಆಗಿರುತ್ತದೆಯೇ ಹೊರತು, ನನ್ನ ಹೆಂಡತಿಯ ಬಾಯಿಂದ ಕ್ಷಮಾಯಾಚನೆ ಬರಲಿ, ಎಂಬುದಲ್ಲ. ಹೌದು, ನನ್ನ ಹೆಂಡತಿ ಕ್ಷಮೆ ಕೇಳಲಿ ಎಂದು ನಾನು ಬಯಸಬಹುದು, ಆದರೆ ಅದು ಕೇವಲ ಶರೀರಭಾವದ ಬಯಕೆಯಾಗಿದೆ. ನನ್ನ ಸ್ವೇಚ್ಛೆ ಹಾಗೂ ನನ್ನ ಮನಸ್ಸಿನ ಬಯಕೆಗಳ ವಿಷಯದಲ್ಲಿ ನಾನು ಸತ್ತವನಂತೆ ಆಗಬೇಕಿದೆ, ಮತ್ತು ಪ್ರಸ್ತುತ ಸನ್ನಿವೇಶದಲ್ಲಿ ನನ್ನ ಸ್ವಂತ ತಪ್ಪುಗಳು ಯಾವುವೆಂದು ಮಾತ್ರ ನೋಡಿ, ಅವನ್ನು ಸರಿಪಡಿಸುವುದಷ್ಟೇ ನನ್ನ ಜವಾಬ್ದಾರಿ ಎಂಬುದನ್ನು ನಾನು ತಿಳಿಯಬೇಕು.
ಗಂಡನು "ಆತ್ಮಿಕ ನಾಯಕನಾಗಿರುತ್ತಾನೆ" ಎಂಬುದು ಇಂದು ಕ್ರೈಸ್ತ ಧಾರ್ಮಿಕ ಪ್ರಪಂಚದಲ್ಲಿ ಬಹಳಷ್ಟು ಚರ್ಚೆಯ ವಿಷಯವಾಗಿದೆ. ಅನೇಕ ಬಾರಿ ನಾನು ಹೊಸದಾಗಿ ವಿವಾಹವಾಗಿರುವ ಸಹೋದರರಿಗೆ ತಿಳಿಸಿರುವ ಮಾತು, ಒಂದು ಪರಸ್ಪರ ಸಂಬಂಧದಲ್ಲಿ ಆತ್ಮಿಕ ನಾಯಕತ್ವವೆಂದರೆ, ಪ್ರಾಥಮಿಕವಾಗಿ ತಮ್ಮಲ್ಲಿರುವ ಸ್ವಾರ್ಥಭಾವವನ್ನು ಸಾಯಿಸುವುದು, ಎಂಬುದಾಗಿ. ಗಂಡನ ನಾಯಕತ್ವ ಹೇಗಿರಬೇಕು ಎಂಬುದರ ಕುರಿತಾಗಿ ಎಲ್ಲಾ ವಿಧವಾದ ಲೌಕಿಕ ಅಭಿಪ್ರಾಯಗಳು ಪ್ರಸ್ತುತ ಕ್ರೈಸ್ತ ಧಾರ್ಮಿಕ ಪ್ರಪಂಚದಲ್ಲಿ ಪ್ರಚಲಿತವಾಗಿವೆ: ಗೌರವವನ್ನು ಕಡ್ಡಾಯವಾಗಿ ನಿರೀಕ್ಷಿಸುವುದು, ಎಲ್ಲರಿಂದ ವಿಧೇಯತೆಯನ್ನು ಗಳಿಸುವುದು, ಮನೆಯಲ್ಲಿ ಎಲ್ಲವನ್ನು ನಿಯಂತ್ರಿಸುವುದು, ಇತ್ಯಾದಿ. ಇವೆಲ್ಲವೂ ತಪ್ಪು ಕಲ್ಪನೆಗಳಾಗಿವೆ. ನಿಜವಾದ ಆತ್ಮಿಕ ನಾಯಕತ್ವ ಏನೆಂದು ತಿಳಿಯಲು, ನಾವು ಯೇಸು ಕ್ರಿಸ್ತನನ್ನು ನಮ್ಮ ಆತ್ಮಿಕ ನಾಯಕನಾಗಿಯೂ ಮತ್ತು ಕ್ರೈಸ್ತ ಸಭೆಯ ಗಂಡನಾಗಿಯೂ ಕಾಣಬೇಕು. ನಮ್ಮ ತಲೆಯಾಗಿರುವ ಕ್ರಿಸ್ತನನ್ನು ನೋಡಿ, ಆತನು ತನ್ನ ಸಭೆಯನ್ನು ಆತ್ಮಿಕವಾಗಿ ಹೇಗೆ ಮುನ್ನಡೆಸಿದ್ದಾನೆ ಎಂಬುದನ್ನು ನಾವು ನೋಡುವಾಗ, ಆತನ ಆತ್ಮಿಕ ನಾಯಕತ್ವದ ಮೂಲಸ್ವರೂಪವು ನಮಗೆ ಕಾಣಿಸುತ್ತದೆ - ಯೇಸು ಕ್ರಿಸ್ತನು ಪ್ರತಿದಿನ ತನ್ನ ಸ್ವಂತ ಇಚ್ಛೆಗೆ ಸತ್ತು, ತನ್ನ ತಂದೆಯ ಕಡೆ ನೋಡುತ್ತಾ, ಪವಿತ್ರಾತ್ಮನ ಮೇಲೆ ಅವಲಂಬಿತನಾಗಿ, ತನ್ನ ಶಿಲುಬೆಯನ್ನು ಹೊತ್ತುಕೊಂಡು, ನಮ್ಮನ್ನು ಪ್ರೀತಿಸುವ ಸಲುವಾಗಿ ಮತ್ತು ನಮ್ಮ ಸೇವೆ ಮಾಡುವುದಕ್ಕಾಗಿ ನಮಗಿಂತ ಕೆಳಮಟ್ಟಕ್ಕೆ ಇಳಿದನು. ಆತನು ಎಂದಿಗೂ ಗೌರವಕ್ಕಾಗಿ ತವಕಿಸಲಿಲ್ಲ, ಅಥವಾ ಬಲವಂತದ ವಿಧೇಯತೆಯನ್ನು ನಮ್ಮಿಂದ ನಿರೀಕ್ಷಿಸಲಿಲ್ಲ, ಇದಕ್ಕೆ ಬದಲಾಗಿ ತನ್ನನ್ನು ದೀನತೆಯಿಂದ ತಗ್ಗಿಸಿಕೊಂಡು, ತಂದೆಯಾದ ದೇವರ ಚಿತ್ತಕ್ಕೆ ವಿಧೇಯನಾಗಿ, ನಮಗೆ ಒಂದು ಮಾದರಿಯನ್ನು ನೀಡಿದನು.
ಗಂಡಸರಾದ ನಾವು ನಮ್ಮ ಮನೆಯಲ್ಲಿ ದೇವರ ಮುಂದೆ ನಮ್ಮನ್ನು ತಗ್ಗಿಸಿಕೊಂಡು, ದೇವರಿಗೆ ವಿಧೇಯರಾಗಿ ನಡೆದು, ನಾವು ಸಹ ಇದೇ ರೀತಿಯ ಆತ್ಮಿಕ ನಾಯಕತ್ವದ ಮಾದರಿಯನ್ನು ಇತರರಿಗೆ ತೋರಿಸಬೇಕಿದೆ.
ಮೊದಲು ದೇವರೊಂದಿಗೆ ನನ್ನ ಸಂಬಂಧವನ್ನು ಸರಿಪಡಿಸಲು ಪ್ರಯತ್ನಿಸುವುದು
ನನ್ನ ಸ್ವಂತ ದಾಂಪತ್ಯ ಜೀವನದ ಹೋರಾಟಗಳು ಹಾಗೂ ಭಿನ್ನಾಭಿಪ್ರಾಯಗಳನ್ನು ಪರಿಹರಿಸುವುದರಲ್ಲಿ ನನಗೆ ನಿಜವಾಗಿ ಸಹಾಯಕವಾಗಿರುವ ಒಂದು ಅಂಶವೆಂದರೆ, ಪಿಯಾನೋ ನುಡಿಸುವ ಕೈಗಳ ಚಿತ್ರಣವನ್ನು ಮನಸ್ಸಿನಲ್ಲಿ ಯೋಚಿಸುವುದು. ಇವೆರಡು ಕೈಗಳನ್ನು ಇಬ್ಬರು ದಂಪತಿಗಳಿಗೆ ಹೋಲಿಸಬಹುದು. ಪಿಯಾನೋ ವಾದಕನ ಕೈಗಳು ಮಧುರವಾದ ಗಾನವನ್ನು ನುಡಿಸುವುದರ ಬಗ್ಗೆ ಮನಸ್ಸಿನಲ್ಲಿ ಯೋಚಿಸಿರಿ. ಆ ಕೈಗಳ ನಡುವೆ ಅಷ್ಟು ಉತ್ತಮವಾದ ಹೊಂದಾಣಿಕೆ ಇರುವದಕ್ಕೆ ಕಾರಣ ಸ್ವ-ಪ್ರಯತ್ನವಲ್ಲ ಅಥವಾ ಯಾವುದೋ ಚಮತ್ಕಾರವೂ ಅಲ್ಲ, ಆದರೆ ಇದಕ್ಕೆ ಒಂದೇ ಕಾರಣವೇನೆಂದರೆ ಆ ಸಂಗೀತಗಾರನ ಎರಡು ಕೈಗಳು ಆತನ ಮೆದುಳಿನೊಂದಿಗೆ ಅತ್ಯುತ್ತಮವಾದ ಸಂಪರ್ಕವನ್ನು ಹೊಂದಿವೆ.
ಹಿಂದೆ ನಾನು ಯೋಚಿಸುತ್ತಿದ್ದುದು ಏನೆಂದರೆ, ದಾಂಪತ್ಯದಲ್ಲಿ ದಂಪತಿಗಳು "ಒಂದೇ ಮನಸ್ಸು ಹೊಂದುವುದಕ್ಕಾಗಿ" ತಾವಿಬ್ಬರೂ ಬಹಳವಾಗಿ ಮಾತನಾಡಿಕೊಳ್ಳಬೇಕು, ಎಂಬುದಾಗಿ; ಇದು ಪಿಯಾನೋವನ್ನು ಚೆನ್ನಾಗಿ ನುಡಿಸುವ ಕೈಗಳು "ಒಂದಾಗಿ ಸಮಯ ಕಳೆದಂತೆ" ಆಗಿತ್ತು; ಆದರೆ ವಾಸ್ತವಿಕವಾಗಿ ಇದು ನಮ್ಮನ್ನು ಹೊಂದಾಣಿಕೆಗೆ ನಡೆಸಲೇ ಇಲ್ಲ! ಸಹಕಾರ ಮತ್ತು ಮಾತುಕತೆಯ ಮೂಲಕ ಐಕ್ಯತೆಯು ಉಂಟಾಗುತ್ತದೆಂದು ನಾನು ತಪ್ಪಾಗಿ ಯೋಚಿಸಿದ್ದೆ. ಆದರೆ ಸಹಕಾರ ಮತ್ತು ಮಾತುಕತೆಯನ್ನು ಹೆಚ್ಚಿಸಿದಾಗ ಐಕ್ಯತೆಯು ಹೆಚ್ಚಾಗಲಿಲ್ಲ; ಅನೇಕ ಸಲ, ನನ್ನ ಸ್ವಂತ ಪ್ರಯಾಸದ ಫಲವಾಗಿ ಐಕ್ಯತೆಯು ಇನ್ನಷ್ಟು ಹದಗೆಟ್ಟಿತು.
ಒಂದು ಕೈಯು ಸಂಗೀತಗಾರನ ತಲೆಯೊಂದಿಗೆ ಸಂಪರ್ಕವನ್ನು ಕಳೆದುಕೊಂಡಿದ್ದರಿಂದ ಕೈಗಳ ನಡುವೆ ಹೊಂದಾಣಿಕೆ ಇಲ್ಲವಾಗಿದೆಯೆಂದು ನಾನು ಗಮನಿಸಿದಾಗ, ನನಗೆ ಈ ಸಮಸ್ಯೆಗೆ ಪರಿಹಾರವೇನೆಂದು ತಿಳಿಯಿತು. ಸಂಪರ್ಕ ಇಲ್ಲದಿರುವ ಕೈಗೆ ಲಕ್ವ ಹೊಡೆದಿದೆ, ಮತ್ತು ಕೈಗೆ ಲಕ್ವ ಹೊಡೆದಾಗ ಪಿಯಾನೋ ವಾದಕನು ಮಧುರವಾದ ಸಂಗೀತವನ್ನು ನುಡಿಸಲಾರನು. ಅದೇ ರೀತಿ, ದಂಪತಿಗಳಾದ ನಮಗೆ ಲಕ್ವ ತಗಲಿದಾಗ, ನಾವು ಹೆಚ್ಚು ಸಮಯವನ್ನು ಒಟ್ಟಿಗೆ ಕಳೆಯುವುದರಿಂದ ಉಪಯೋಗವಿಲ್ಲ; ನಾವು ನಮ್ಮ ಶಿರಸ್ಸಾಗಿರುವ ಕ್ರಿಸ್ತನೊಂದಿಗೆ ಸಂಪರ್ಕವನ್ನು ಸರಿಪಡಿಸಿಕೊಂಡು, ಅದನ್ನು ಅತ್ಯುತ್ತಮ ಮಟ್ಟಕ್ಕೆ ಏರಿಸುವುದಕ್ಕೆ ಹಂಬಲಿಸಬೇಕು!
ವೈಯಕ್ತಿಕವಾಗಿ ದೇವರನ್ನು ಹುಡುಕುವಾಗ, ಮೊದಲು ನನ್ನ ಸ್ವಂತ ಹೃದಯವನ್ನು ಪರೀಕ್ಷಿಸಿ ನೋಡಿ (ಮತ್ತು ನನ್ನ ಹೃದಯವನ್ನು ಶೋಧಿಸುವಂತೆ ದೇವರನ್ನು ಕೇಳಿಕೊಂಡು ಮತ್ತು ಆತನಿಗೆ ನೋವು ತರುವಂತ ಅಪರಾಧವೇನಾದರೂ ಅಲ್ಲಿದ್ದರೆ ಅದನ್ನು ತೋರಿಸುವಂತೆ ಪ್ರಾರ್ಥಿಸಿ), ಆತನು ನನಗೆ ತೋರಿಸುವ ಯಾವುದೇ ಅಂಶವನ್ನು ಅತ್ಯಾಸಕ್ತಿಯಿಂದ ಸರಿಪಡಿಸಲು ದೃಢನಿರ್ಧಾರ ಮಾಡುವಂಥದ್ದು, ನನ್ನ ಇಹಲೋಕದ ಸಂಬಂಧದ ಕುರಿತಾಗಿ ನಾನಾ ವಿಧವಾದ ಅಭಿಪ್ರಾಯಗಳನ್ನು ಸಂಗ್ರಹಿಸಿ, ವಿವಿಧ ಪರಿಹಾರ ಮಾರ್ಗಗಳನ್ನು ಚರ್ಚಿಸುವುದಕ್ಕಿಂತ ಹೆಚ್ಚು ಉಪಯುಕ್ತ ಹಾಗೂ ಫಲದಾಯಕವಾದ ಮಾರ್ಗವಾಗಿದೆ.
ನಾವು ಇದನ್ನು ಮಾಡಿದಾಗ, ಅನೇಕ ಭಿನ್ನಾಭಿಪ್ರಾಯಗಳು ಸಂಪೂರ್ಣವಾಗಿ ಕಾಣೆಯಾಗಿದ್ದನ್ನು ನಾವು ಗಮನಿಸಿದೆವು, ಮತ್ತು ಇದರ ನಂತರ ಮಾತುಕತೆ ಮತ್ತು ಚರ್ಚೆಯ ಅವಶ್ಯಕತೆಯೇ ಇರಲಿಲ್ಲ. ಸಂಪೂರ್ಣ ಆರೋಗ್ಯಕರವಾಗಿ ಕಾರ್ಯ ನಿರ್ವಹಿಸುವ ಎರಡು ಕೈಗಳಂತೆ, ನಮ್ಮಿಬ್ಬರ ನಡುವಿನ ಮಾತುಕತೆಗಳು ಸರಾಗವಾಗಿ ಮತ್ತು ಉಪಯುಕ್ತವಾಗಿ ಸಾಗಿದವು.
ಸಹೋದರ ಜ಼್ಯಾಕ್ ಪೂನನ್‍ರವರು ಒಂದು ಶಿಲುಬೆಯ ಚಿತ್ರಣವನ್ನು ಉಪಯೋಗಿಸಿಕೊಂಡು, ನಮ್ಮ ಸಮಸ್ತ ಮಾನವ ಸಂಬಂಧಗಳು (ಶಿಲುಬೆಯ ಅಡ್ಡವಾದ ತೋಳು) ದೇವರೊಟ್ಟಿಗೆ ನಮ್ಮ ಸಂಬಂಧಕ್ಕೆ (ಶಿಲುಬೆಯ ಉದ್ದವಾದ ಲಂಬವಾದ ತೋಳು) ಜೋಡಣೆಯಾಗಿವೆ ಎಂದು ತೋರಿಸಿರುವ ವಿವರಣೆಯು ನಮ್ಮ ದಾಂಪತ್ಯ ಜೀವನದಲ್ಲಿ ಖಂಡಿತವಾಗಿ ನಿಜವಾಗಿದೆ: ಲಂಬವಾದ ತೋಳು ಮುರಿದಿದ್ದರೆ, ಅಡ್ಡವಾದ ತೋಳು ಅಭಿವೃದ್ಧಿಯಾಗಲಾರದು; ಮತ್ತು ಮುರಿದು ಹೋಗಿರುವ ಎಲ್ಲ ಅಡ್ಡವಾದ ತೋಳುಗಳಿಗೆ ಮೂಲಕಾರಣ ಮುರಿದಿರುವ ಲಂಬವಾದ ತೋಳಾಗಿದೆ.
ನಮ್ಮೆಲ್ಲರ ದಾಂಪತ್ಯ ಜೀವನಗಳಿಗಾಗಿ ದೇವರ ಚಿತ್ತವೇನೆಂದರೆ, ದೇವರೊಂದಿಗೆ ಸಂಪೂರ್ಣ ಐಕ್ಯತೆಯುಳ್ಳ (ಅನ್ಯೋನ್ಯತೆ) ಸಮಾಧಾನಕ್ಕೆ ನಮ್ಮನ್ನು ನಡೆಸಿರುವ ದೇವರ ವಿಮೋಚನೆಯ ಅದ್ಭುತ ಪ್ರೀತಿಯನ್ನು (ಎಫೆ. 5:31-32) ನಮ್ಮ ವಿವಾಹವು ನಿರೂಪಿಸಬೇಕು ಎಂಬುದಾಗಿದೆ. ಭಿನ್ನಾಭಿಪ್ರಾಯಗಳು ನಮ್ಮ ದಾಂಪತ್ಯ ಜೀವನವನ್ನು ಒಡೆದುಹಾಕುವ ಸ್ಥಿತಿಯನ್ನು ಉಂಟುಮಾಡುವಾಗ, ದಂಪತಿಗಳಾದ ನಾವು ನಮ್ಮ ವೈಯಕ್ತಿಕ ಜೀವನದಲ್ಲಿ ದೇವರ ಪ್ರೀತಿಯನ್ನು ಮೇಲೆ ತಿಳಿಸಿರುವ ಎರಡು ಹೆಜ್ಜೆಗಳ ಮೂಲಕ ನಿರೂಪಿಸಬಹುದು.