WFTW Body: 

"ಆದರೆ ನನಗೆ ಲಾಭವಾಗಿದ್ದಂಥವುಗಳನ್ನು ಕ್ರಿಸ್ತನ ನಿಮಿತ್ತ ನಷ್ಟವೆಂದೆಣಿಸಿದ್ದೇನೆ. ಇಷ್ಟೇ ಅಲ್ಲದೆ, ನನ್ನ ಕರ್ತನಾದ ಕ್ರಿಸ್ತ ಯೇಸುವನ್ನರಿಯುವುದೇ ಅತಿ ಶ್ರೇಷ್ಠವಾದದ್ದೆಂದು ತಿಳಿದು, ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ಆತನ ನಿಮಿತ್ತ ನಾನು ಎಲ್ಲವನ್ನೂ ಕಳಕೊಂಡು ಅದನ್ನು ಕಸವೆಂದೆಣಿಸುತ್ತೇನೆ. ಇದರಲ್ಲಿ ನನ್ನ ಉದ್ದೇಶವೇನೆಂದರೆ - ನಾನು ಕ್ರಿಸ್ತನನ್ನು ಸಂಪಾದಿಸಿಕೊಂಡು, ನೇಮ ನಿಷ್ಠೆಗಳ ಫಲವಾಗಿರುವ ಸ್ವನೀತಿಯನ್ನಾಶ್ರಯಿಸದೆ, ಕ್ರಿಸ್ತನನ್ನು ನಂಬುವುದರಿಂದ ದೊರಕುವಂಥ, ಅಂದರೆ ಕ್ರಿಸ್ತನ ಮೇಲಣ ನಂಬಿಕೆಯ ಆಧಾರದಿಂದ ದೇವರು ಕೊಡುವಂಥ ನೀತಿಯನ್ನೇ ಹೊಂದಿ, ಕ್ರಿಸ್ತನಲ್ಲಿರುವವನಾಗಿ ಕಾಣಿಸಿಕೊಳ್ಳಬೇಕೆಂಬುದೇ. ಆತನನ್ನೂ, ಆತನ ಪುನರುತ್ಥಾನದಲ್ಲಿರುವ ಶಕ್ತಿಯನ್ನೂ, ಆತನ ಬಾಧೆಗಳಲ್ಲಿ ಪಾಲುಗಾರನಾಗಿರುವ ಪದವಿಯನ್ನೂ ತಿಳುಕೊಂಡು, ಆತನ ಮರಣದ ವಿಷಯದಲ್ಲಿ ಆತನಿಗೆ ಸರೂಪನಾಗಬೇಕೆಂಬುದೇ ನನ್ನ ಕುತೂಹಲವಾಗಿದೆ. ಹೀಗಾದರೆ ಸತ್ತವರಲ್ಲಿ ಕೆಲವರಿಗೆ ಆಗುವ ಪುನರುತ್ಥಾನವು ನನಗೆ ಒದಗಿ ಬಂದೀತು. ಇಷ್ಟರೊಳಗೆ ನಾನು ಬಿರುದನ್ನು ಪಡಕೊಂಡು ಸಿದ್ಧಿಗೆ ಬಂದವನೆಂದು ಹೇಳುವುದಿಲ್ಲ; ನಾನು ಯಾವುದನ್ನು ಹೊಂದುವುದಕ್ಕಾಗಿ ಕ್ರಿಸ್ತ ಯೇಸು ನನ್ನನ್ನು ಹಿಡಿದುಕೊಂಡನೋ, ಅದನ್ನು ಹಿಡಿದುಕೊಳ್ಳುವುದಕ್ಕೋಸ್ಕರ ಓಡುತ್ತಾ ಇದ್ದೇನೆ. ಸಹೋದರರೇ, ನಾನಂತೂ ಹಿಡಿದುಕೊಂಡವನೆಂದು ನನ್ನನ್ನು ಈವರೆಗೂ ಎಣಿಸಿಕೊಳ್ಳುವುದಿಲ್ಲ; ’ಆದರೆ ಒಂದು’ - ನಾನು ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ಮುಂದಿನವುಗಳನ್ನು ಹಿಡಿಯುವುದಕ್ಕೆ ಎದೆ ಬೊಗ್ಗಿದವನಾಗಿ, ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ ಕರೆದು, ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಗುರಿ ಮಾಡಿಕೊಂಡು ಓಡುತ್ತಾ ಇದ್ದೇನೆ. (ಫಿಲಿ. 3:7-14) .

ಶ್ರೇಷ್ಠ ಅನುಭವ ಹಾಗೂ ದೇವಕೃಪೆಯ ಮೂಲಕ ಪ್ರವೀಣನೂ ಪ್ರೌಢನೂ ಆಗಿದ್ದ ಒಬ್ಬ ಕ್ರೈಸ್ತನು, ತನ್ನ ಜೀವಿತದ ಅಂತ್ಯಕ್ಕೆ ತಲುಪಿದಾಗ ಕೊಟ್ಟಿರುವ ಸಾಕ್ಷಿ ಇದಾಗಿದೆ. ಅಪೊಸ್ತಲ ಪೌಲನು ರಕ್ಷಣೆ ಹೊಂದಿ 30 ವರ್ಷಗಳು ಕಳೆದಿದ್ದವು. ಆ 30 ವರ್ಷಗಳಲ್ಲಿ ದೇವರು ಆತನ ಮೂಲಕ ಅನೇಕ ಸಭೆಗಳನ್ನು ಸ್ಥಾಪಿಸಿದ್ದರು, ಮತ್ತು ಅವನ ಸೇವೆಯನ್ನು ಸೂಚಕಕಾರ್ಯಗಳಿಂದಲೂ, ಅದ್ಭುತ ಕಾರ್ಯಗಳಿಂದಲೂ ಸಾಕ್ಷೀಕರಿಸಿ, ತನ್ನ ಮೆಚ್ಚುಗೆಯನ್ನು ತೋರಿಸಿದ್ದರು. ಶುರುವಿನಿಂದಲೂ ಪೌಲನು ಸುವಾರ್ತೆಯ ಕಾರ್ಯದಲ್ಲಿ ಬಿಡುವಿಲ್ಲದೆ ಶ್ರಮಿಸಿ, ಹಲವು ಪ್ರದೇಶಗಳಿಗೆ ಪ್ರಯಾಣಿಸಿ, ಬಹಳ ಕಷ್ಟ-ನಷ್ಟಗಳನ್ನು ಅನುಭವಿಸಿದ್ದನು. ಅವನು ಕರ್ತನ ಸಾರೂಪ್ಯದಲ್ಲಿ ಬೆಳೆಯುತ್ತಿರುವಾಗ, ಪಾಪದ ಮೇಲೆ ಜಯದ ಅನುಭವವು ಅವನ ಜೀವನದಲ್ಲಿ ನಿಜವಾಗಿ ಕಂಡುಬಂದಿತ್ತು. ಅವನ ಒಂದು ಅಪೂರ್ವ ದರ್ಶನದಲ್ಲಿ ಅವನು ಮೂರನೆಯ ಆಕಾಶಕ್ಕೆ ಒಯ್ಯಲ್ಪಟ್ಟು, ದೇವರಿಂದ ವಿಶೇಷ ಪ್ರಕಟನೆಗಳನ್ನು ಪಡೆಯುವ ವಿಶಿಷ್ಟವಾದ ಆನಂದವನ್ನು ಪಡೆದಿದ್ದನು.

ಹಾಗಿದ್ದರೂ ಇವೆಲ್ಲವುಗಳನ್ನು ಅನುಭವಿಸಿದ ಮೇಲೆ, ಅವನು ಹೇಳುವುದು ಏನೆಂದರೆ, ದೇವರು ತನ್ನ ಜೀವನದಲ್ಲಿ ಸಂಕಲ್ಪಿಸಿದ್ದ ಎಲ್ಲಾ ಸಂಗತಿಗಳನ್ನು ತಾನು ಇನ್ನೂ ಸಾಧಿಸಬೇಕಿದೆ, ಎಂದು. ಭೂಮಿಯ ಮೇಲೆ ಜೀವಿಸಿದ ಅತಿ ಶ್ರೇಷ್ಠ ಕ್ರೈಸ್ತರಲ್ಲಿ ಒಬ್ಬನಾಗಿರುವ ಇವನು ತನ್ನ ಜೀವಿತದ ಕೊನೆಯನ್ನು ಸಮೀಪಿಸಿದಾಗ, ತಾನು ಇನ್ನೂ ದೇವರು ನಿಯಮಿಸಿರುವ ಗುರಿಯ ಕಡೆಗೆ ಎದೆ ಬೊಗ್ಗಿಸಿ ಓಡಬೇಕಿದೆ, ಎಂದು ಹೇಳುತ್ತಿದ್ದಾನೆ. ಅಯ್ಯೋ, ಹೆಚ್ಚಿನ ವಿಶ್ವಾಸಿಗಳ ರಕ್ಷಣೆಯ ಅನುಭವ, ಹೊಸದಾಗಿ ಹುಟ್ಟಿದಾಗ ತಾವು ದೇವರ ನ್ಯಾಯತೀರ್ಪಿನ ಶಿಕ್ಷೆಯಿಂದ ಪಾರಾದೆವು ಎಂಬ ನಿರೀಕ್ಷೆಯೊಂದಿಗೆ ಆರಂಭವಾಗಿ, ಅಲ್ಲಿಯೇ ಕೊನೆಗೊಳ್ಳುತ್ತದೆ. ಆದರೆ ಅಪೊಸ್ತಲ ಪೌಲನಿಗೆ ಹಾಗಿರಲಿಲ್ಲ, ಮತ್ತು ಅವನ ಹಾಗೆಯೇ ಯೇಸುವಿನ ಯಥಾರ್ಥನಾದ ಶಿಷ್ಯನಾಗಲು ಬಯಸುವ ಪ್ರತಿಯೊಬ್ಬನ ಜೀವನದಲ್ಲಿಯೂ ಅದು ಅಲ್ಲಿ ಕೊನೆಗೊಳ್ಳುವುದಿಲ್ಲ. ಮೇಲೆ ಹೇಳಿದ ವಚನಗಳಲ್ಲಿ ಕಂಡುಬರುವ ಅವನ ದೃಢ ನಂಬಿಕೆ ಏನೆಂದರೆ, ಕ್ರಿಸ್ತನು ತನ್ನನ್ನು ಹಿಡಿದುಕೊಂಡದ್ದು ಯಾವುದೋ ಒಂದು ಉದ್ದೇಶಕ್ಕಾಗಿ, ಎಂದು. ಇದರ ಫಲವಾಗಿ ಅವನು ಆ ಉದ್ದೇಶವನ್ನು ಪೂರೈಸಲು ಎಷ್ಟು ಬೆಲೆಯನ್ನಾದರೂ ಕೊಡುತ್ತೇನೆ, ಎಂಬ ನಿರ್ಧಾರವನ್ನು ಮಾಡಿದ್ದನು.

ಒಂದು ಮಹತ್ತಾದ ಮತ್ತು ಶ್ರೇಷ್ಠವಾದ ಸತ್ಯಾಂಶ ಏನೆಂದರೆ, ನಮಗೆ ರಕ್ಷಣೆಯನ್ನು ನೀಡಿ ಕರ್ತನು ನಮ್ಮನ್ನು ಹಿಡಿದುಕೊಂಡಾಗ, ಅವನ ಉದ್ದೇಶ ನಮ್ಮನ್ನು ಕೇವಲ ನರಕದ ಅಗ್ನಿಯಿಂದ ರಕ್ಷಿಸಿ ಪರಲೋಕಕ್ಕೆ ಸೇರಿಸುವುದಕ್ಕಿಂತ ಬಹಳಷ್ಟು ಹೆಚ್ಚಿನದ್ದು ಆಗಿರುತ್ತದೆ. ಅಪೊಸ್ತಲ ಪೌಲನಂತ ಒಬ್ಬ ಪ್ರೌಢ ಮನುಷ್ಯನು ತನ್ನ 30 ವರ್ಷಗಳ ನಿರಂತರ ಕ್ರೈಸ್ತ ಸೇವೆಯ ನಂತರ ತಾನು ಇನ್ನೂ ಸಿದ್ಧಿಗೆ ಬಂದಿಲ್ಲ, ದೇವರು ಇರಿಸಿರುವ ಗುರಿಯನ್ನು ಸೇರಲು ತಾನು ಇನ್ನೂ ಬಹಳ ಶ್ರಮಿಸಬೇಕು ಎಂದು ಹೇಳಬೇಕಾದರೆ, ಆ ಉದ್ದೇಶ ಅಥವಾ ಗುರಿ ಎಷ್ಟು ದೊಡ್ಡದಾಗಿರಬೇಕು!

ಮೇಲೆ ಪ್ರಸ್ತಾಪಿಸಿರುವ ವಚನಗಳಲ್ಲಿ, ಪೌಲನು ತನ್ನ ಗುರಿಯನ್ನು ಇನ್ನೂ ವಿಸ್ತಾರವಾಗಿ ವಿವರಿಸಿದ್ದಾನೆ. ದೇವರ ಉದ್ದೇಶವನ್ನು ಕಂಡುಕೊಂಡು ಅದನ್ನು ಪೂರೈಸುವ ಶ್ರೇಷ್ಠವಾದ ಗುರಿಗೆ ಹೋಲಿಸಿ ನೋಡಿದಾಗ, ಈ ಲೋಕದ ದೃಷ್ಟಿಯಲ್ಲಿ ಮಹತ್ವವುಳ್ಳದ್ದು ಅವನಿಗೆ ಕಸಕ್ಕೆ ಸಮಾನವಾಗಿ ಕಾಣುತ್ತದೆ. ಅವನು ಈ ಬಹುಮಾನಕ್ಕಾಗಿ ಎಲ್ಲಾ ಲೌಕಿಕ ಸಂಗತಿಗಳನ್ನು ಮರೆತುಬಿಡಲು ಹಿಂಜರಿಯುವುದಿಲ್ಲ (ವಚನ 14). ನಾವು ನಮ್ಮ ಸುತ್ತಮುತ್ತಲು ಇರುವ ವಿಶ್ವಾಸಿಗಳು ಲೌಕಿಕ ಸಂಪತ್ತು ಮತ್ತು ಪ್ರಾಪಂಚಿಕ ಸಂಗತಿಗಳಿಗೆ ತಮ್ಮ ಜೀವನದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುವುದನ್ನೂ ಮತ್ತು ಅವುಗಳಿಗಾಗಿ ಹೆಣಗುವುದನ್ನೂ ನೋಡುವಾಗ, ಅವರ ಕ್ರೈಸ್ತತ್ವವು ಪೌಲನ ಕ್ರೈಸ್ತತ್ವಕ್ಕೆ ಬಹಳ ದೂರವಾಗಿದೆ ಎಂಬ ನಿರ್ಧಾರಕ್ಕೆ ಬರಬೇಕಾಗುತ್ತದೆ.

ನಾವು ಹೊಂದಿರುವ ರಕ್ಷಣೆಯು ಕೇವಲ ನರಕದ ಅಗ್ನಿಜ್ವಾಲೆಗಳಿಂದ ಸಂರಕ್ಷಿಸುವ ಒಂದು ವಿಮಾಪತ್ರ (insurance), ಎಂದು ಯೋಚಿಸುವುದು ಆತ್ಮಿಕವಾಗಿ ಚಿಕ್ಕ ಮಗುವಿನಂತೆ ಇರುವುದರ ಲಕ್ಷಣವಾಗಿದೆ. ನಾವು ಆತ್ಮಿಕವಾಗಿ ಬೆಳವಣಿಗೆ ಹೊಂದಿದಾಗ, ದೇವರು ನಮ್ಮಲ್ಲಿ ಪ್ರತಿಯೊಬ್ಬರನ್ನೂ ರಕ್ಷಿಸಿದ್ದು, ನಿತ್ಯತ್ವದಿಂದಲೇ ಅವರು ನಮಗಾಗಿ ದಿನದಿನವೂ ವಿಭಿನ್ನವಾಗಿ ಯೋಜಿಸಿ ನೇಮಿಸಿರುವ ಸತ್ಕಾರ್ಯದ ಮಾರ್ಗದಲ್ಲಿ ನಡೆಯಲಿಕ್ಕಾಗಿ, ಎಂಬುದನ್ನು ಅರಿತುಕೊಳ್ಳುತ್ತೇವೆ (ಎಫೆ.2:10) ಈ ಮಾರ್ಗದಲ್ಲಿ ನಡೆಯುವುದನ್ನು ಪೌಲನು ತನ್ನ ಜೀವನದ ಉದ್ದೇಶವೆಂದು ತಿಳಿಸಿದನು. ಈ ದಾರಿಯನ್ನೇ ಪೌಲನು ತನ್ನ ಜೀವನಕ್ಕಾಗಿ ದೇವರಿಗಿದ್ದ ಉದ್ದೇಶವೆಂದು ಕರೆದನು. ನಾವು ಕೃಪೆಯನ್ನು ಪಡೆದುಕೊಂಡದ್ದರಲ್ಲೇ ತೃಪ್ತಿಪಟ್ಟುಕೊಂಡು, ನಮ್ಮ ಜೀವಿತಕ್ಕಾಗಿ ದೇವರ ಇಚ್ಛೆಯನ್ನು ಪೂರೈಸಲು ನಾವು ಬದ್ಧರಾಗಿರದಿದ್ದರೆ, ನಾವೆಷ್ಟು ಸುವಾರ್ತಿಕರಾಗಿದ್ದರೂ, ದೇವರಿಗಾಗಿ ಬೆಲೆಯುಳ್ಳುದ್ದಾಗಿ ಬಾಳುವಂಥ ಏನನ್ನೂ ಸಾಧಿಸದೆ ನಾವು ನಮ್ಮ ಜೀವಿತವನ್ನು ಕಳೆಯುವೆವು. ಸೈತಾನನ ಮೊದಲ ಉದ್ದೇಶವೇನೆಂದರೆ, ಕ್ರಿಸ್ತ ಯೇಸುವಿನಲ್ಲಿನ ದೇವರ ಕೃಪೆಯ ಬಗ್ಗೆ ಒಂದಲ್ಲ ಒಂದು ಬಗೆಯಿಂದ ಜನರನ್ನು ಕುರುಡಾಗಿಸುವುದು ಮತ್ತು ಈ ರೀತಿ ರಕ್ಷಣೆ ಹೊಂದುವುದರಿಂದ ಅವರನ್ನು ತಡೆಯುವುದು (2 ಕೊರಿಂಥ. 4:4) . ಆತನು ಅಲ್ಲಿ ಜಯಶಾಲಿಯಾಗದಿದ್ದಲ್ಲಿ, ಆತನ ನಂತರದ ಉದ್ದೇಶವೇನೆಂದರೆ, ದೇವರು ಆ ಹೊಸ ವಿಶ್ವಾಸಿಗೆ ಒಂದು ನಿರ್ದಿಷ್ಟವಾದ ಯೋಜನೆಯನ್ನು ಇಟ್ಟುಕೊಂಡಿದ್ದಾರೆಂಬ ಸತ್ಯದ ಬಗ್ಗೆ ಆತನನ್ನು ಕುರುಡಾಗಿಸುವುದು. ಬಹಳಷ್ಟಾಗಿ ಆತನು ಇಲ್ಲಿ ಜಯಶಾಲಿಯಾಗಿದ್ದಾನೆ. ತಮ್ಮ ಜೀವಿತದಲ್ಲಿ ಮಾಡುವ ಪ್ರಮುಖವಾದ ನಿರ್ಧಾರಗಳ ಬಗ್ಗೆ ದೇವರ ಚಿತ್ತವನ್ನು ಎಂದಿಗೂ ಯಾವುದೇ ರೀತಿಯ ಗಂಭೀರತೆಯಿಂದ ಕಂಡುಕೊಳ್ಳದಿರುವ ಸಾವಿರಾರು ವಿಶ್ವಾಸಿಗಳು ಇದ್ದಾರೆ.

ಪಿಲಿಪ್ಪಿಯರಿಗೆ ಬರೆದ ಪತ್ರದಲ್ಲಿನ ಈ ಭಾಗದಲ್ಲಿ ಕ್ರಿಸ್ತೀಯ ಜೀವನವೆಂಬುದು ನಾವು ನಿರಂತರವಾಗಿ ಬೆಳೆಯಬೇಕೆಂಬ ರೀತಿಯಲ್ಲಿ ಚಿತ್ರಿಸಲ್ಪಟ್ಟಿದೆ. ನಾವು ನಿರಂತರವಾಗಿ ಈ ರೀತಿಯಲ್ಲಿ ಜೀವಿಸುವ ಅಗತ್ಯತೆಯು ಈ ಜಗತ್ತಿನಲ್ಲಿ ನಾವು ಪಡೆದುಕೊಳ್ಳಬಹುದಾದ ಯಾವುದೇ ರೀತಿಯ ಆತ್ಮಿಕ ಪ್ರಬುದ್ಧತೆಗಿಂತಲೂ ಹೆಚ್ಚಾದುದಾಗಿದೆ. ಅನೇಕ ವಿಶ್ವಾಸಿಗಳು ಈ ಪಾಠವನ್ನು ನಿರ್ಲಕ್ಷಿಸಿದ್ದರಿಂದ ಅವರಲ್ಲಿ ಸಜೀವ ಸಾಕ್ಷಿಯಿಲ್ಲ. ಅವರ ಒಂದೇ ಸಾಕ್ಷಿಯೇನೆಂದರೆ, ಯಾವುದೋ ಒಂದು ಭಾಗ್ಯಕರ ದಿನ ಒಂದು ಅನುಭವಕ್ಕೆ ಸಂಬಂಧಿಸಿದ್ದು - ಬಹುಶ ಅವರು ತಮ್ಮ ಕೈಯನ್ನು ಮೇಲಕ್ಕೆತ್ತಿದ ಅಥವಾ ಒಂದು ನಿರ್ಧಾರ ಕಾರ್ಡಿಗೆ ಸಹಿ ಮಾಡಿದ ಅನುಭವಕ್ಕೆ ಮಾತ್ರ ಸೀಮಿತವಾಗಿದೆ. ಅದೊಂದು ಅದ್ಭುತಕರವಾದ ವಿಷಯವೇ ಸರಿ. ಆದರೆ ಅದರ ನಂತರ ಏನೂ ಆಗಿಲ್ಲ. ಜ್ಞಾನೋಕ್ತಿ 24:30-34ರಲ್ಲಿ ಹೇಳಿದಂತೆ ಆರೈಕೆ ಮಾಡದ ತೋಟದ ಚಿತ್ರವು ತನ್ನ ರಕ್ಷಣೆಯ ನಂತರ ವಿಶ್ರಮಿಸುತ್ತಿರುವ ಒಬ್ಬ ಮನುಷ್ಯನ ಸ್ಥಿತಿಯನ್ನು ವಿವರಿಸುತ್ತದೆ. ಒಂದು ತೋಟವನ್ನು ಕಳೆಗಳಿಂದ ರಕ್ಷಿಸಬೇಕಾದರೆ, ನಿರಂತರವಾಗಿ ಕಳೆಗಳನ್ನು ಕೀಳಬೇಕು ಮತು ಅದನ್ನು ಪೋಷಿಸಬೇಕು. ಅಂತೆಯೇ ಮನುಷ್ಯನ ಆತ್ಮವನ್ನೂ ಪೋಷಿಸಬೇಕು.