"ನನ್ನೊಂದಿಗೆ ತಾಳ್ಮೆಯಿಂದಿರು" ಎಂದು ಒಬ್ಬ ಸೇವಕನು ತನ್ನ ಜೊತೆ-ಸೇವಕನಿಂದ ಕರುಣೆಯನ್ನು ಬೇಡಿಕೊಂಡನು (ಮತ್ತಾ. 18:29). ನಮ್ಮೊಟ್ಟಿಗೆ ಜೀವಿಸುವಂತ ಅನೇಕರಿಂದ ಪ್ರತಿದಿನವೂ ಇದೇ ಕೂಗು ಗೃಹಿಣಿಯರು ಮತ್ತು ತಾಯಂದಿರಾದ ನಮಗೆ ಬರುತ್ತದೆ. ಆದರೆ ಈ ಕೂಗನ್ನು ಕೇಳಿಸಿಕೊಳ್ಳುವುದಕ್ಕೆ ನಮ್ಮಲ್ಲಿ ಇತರರ ಬಗ್ಗೆ ಅನುಕಂಪದ ಆತ್ಮವಿರಬೇಕು. ಯಾಕೆಂದರೆ ಇದು ಬಾಯಿಯಿಂದ ಹೇಳದಿರುವ ಕೂಗಾಗಿದೆ.
ಬಹುಶಃ ನಮ್ಮ ಮಕ್ಕಳು ಕಲಿಯುವುದರಲ್ಲಿ ಚುರುಕಾಗಿ ಇಲ್ಲದಿರಬಹುದು ಮತ್ತು ಅವರಿಗೆ ಯಾವುದೋ ವಿಷಯವನ್ನು ಕಲಿಸಲು ನಾವು ಪದೇ ಪದೇ ಪ್ರಯತ್ನಿಸುತ್ತಿರಬಹುದು, ಮತ್ತು ಅವರು ಕಲಿಯುತ್ತಿಲ್ಲವೆಂದು ನಮ್ಮ ತಾಳ್ಮೆಯು ಬಹಳವಾಗಿ ಕುಗ್ಗಿರಬಹುದು. "ನಾನು ಕಲಿಯಲು ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದೇನೆ, ನನ್ನೊಂದಿಗೆ ಸ್ವಲ್ಪ ತಾಳ್ಮೆಯಿಂದಿರು," ಎಂಬ ಸ್ವರವಿಲ್ಲದ ಅವರ ಕೂಗನ್ನು ನಾವು ಕೇಳಿಸಿಕೊಂಡರೆ, ಆಗ ನಾವು ಅವರ ಮೇಲೆ ಸಿಟ್ಟಾಗುವ ಶೋಧನೆಯನ್ನು ಜಯಿಸಲು ಸಾಧ್ಯವಾಗಬಹುದು.
ಬಹುಶಃ ನಮ್ಮ ಮನೆ ಕೆಲಸದ ಹೆಂಗಸು ತೃಪ್ತಿಕರವಾಗಿ ಕೆಲಸ ಮಾಡದಿರಬಹುದು, ಮತ್ತು ಅವಳಲ್ಲಿ ಸ್ವಚ್ಚತೆ ಇಲ್ಲದಿರಬಹುದು. ಹಾಗಾಗಿ ನಾವು ಆಕೆಯೊಂದಿಗೆ ಕಠಿಣವಾಗಿ ನಡೆದುಕೊಳ್ಳುವ ಶೋಧನೆಯನ್ನು ಎದುರಿಸುತ್ತೇವೆ. ಆದರೆ ಅವಳ ಸ್ವರವಿಲ್ಲದ ಕೂಗು, "ನನ್ನೊಂದಿಗೆ ತಾಳ್ಮೆಯಿಂದಿರಿ, ನನಗೆ ಇನ್ನೊಂದು ಅವಕಾಶ ಕೊಡಿ ಮತ್ತು ನಾನು ನನ್ನನ್ನು ತಿದ್ದಿಕೊಳ್ಳುತ್ತೇನೆ," ಎಂದು ಆಗಿರುತ್ತದೆ - ಮತ್ತು ನಾವು ಇದನ್ನು ತಿಳಿದುಕೊಂಡರೆ, ಆಗ ಸಾತ್ವಿಕತೆಯಿಂದ ಮೃದುವಾಗಿ ನಡೆಯುವ ಒಂದು ಅವಕಾಶ ನಮಗೆ ಸಿಗುತ್ತದೆ.
ಇಲ್ಲವೇ ನಮ್ಮ ವಯಸ್ಸಾದ ತಂದೆ ತಾಯಿ ಈಗ ಮುದುಕರೂ, ಬಲಹೀನರೂ ಆಗಿದ್ದು, ನಮ್ಮ ಮೇಲೆ ಅವಲಂಬಿತರಾಗಿರಬಹುದು. ಅವರ ಹೃದಯದ ಒಳಗಿನ ನುಡಿಯಲಾರದ ಕೂಗು ಏನೆಂದರೆ, "ನನ್ನೊಂದಿಗೆ ತಾಳ್ಮೆಯಿಂದಿರು". ನಿನಗೆ ತೊಂದರೆ ಕೊಡಲು ನನಗೆ ಇಷ್ಟವಿಲ್ಲ, ಆದರೆ ಏನು ಮಾಡಲಿ, ನಿನ್ನ ಹೊರತಾಗಿ ನನಗೆ ಬೇರೆ ಆಶ್ರಯವಿಲ್ಲ." ನಮ್ಮಲ್ಲಿ ಅವರ ಭಾವನೆಗಳನ್ನು ಅರಿತುಕೊಳ್ಳುವ ಚುರುಕುತನವಿದ್ದರೆ, ನಾವು ಅವರ ಹೃದಯದ ಕೂಗಿಗೆ ಕಿವಿಗೊಟ್ಟು, ಅವರ ಆತ್ಮಗೌರವಕ್ಕೆ ಹಾನಿ ಮಾಡದೆ ಮತ್ತು ಅವರು ನಮ್ಮನ್ನೇ ಆಶ್ರಯಿಸಿದ್ದಾರೆಂಬ ಭಾವನೆ ಅವರಿಗೆ ಬಾರದಂತೆ ಎಚ್ಚರವಹಿಸಿ, ಅವರಿಗೆ ಅವಶ್ಯವಾದ ಸಹಾಯವನ್ನು ಒದಗಿಸುತ್ತೇವೆ.
"ತಾಳ್ಮೆಯು ಪರಿಪೂರ್ಣತೆಗೆ ಬರಲಿ; ಆಗ ನೀನು ಶಿಕ್ಷಿತನೂ ಪರಿಪೂರ್ಣನೂ ಆಗುವೆ, ಮತ್ತು ನಿನಗೆ ಯಾವುದರಲ್ಲೂ ಕಡಿಮೆಯಿರುವುದಿಲ್ಲ"
ಬಹುಶಃ ಸಭೆಯಲ್ಲೂ ನಮಗೆ ಇತರ ಸಹೋದರಿಯರ ನಡತೆ ಒಂದು ಶೋಧನೆಯಾಗಿರಬಹುದು. ಆ ಸಹೋದರಿಯರ ಹೃದಯದಲ್ಲಿ ಒಂದು ಕೂಗು ಇದೆ, "ನನಗೆ ಸ್ವಲ್ಪ ತಾಳ್ಮೆಯನ್ನು ತೋರಿಸಿರಿ, ನನ್ನಲ್ಲಿ ಇನ್ನೂ ಜ್ಞಾನದ ದೊಡ್ಡ ಕೊರತೆಯಿದೆ." ನಾವು ಇದನ್ನು ಅರ್ಥ ಮಾಡಿಕೊಂಡರೆ, ಆಗ ಅವರು ಸಹ ನಮ್ಮಂತೆಯೇ ಪರಿಪೂರ್ಣತೆಗಾಗಿ ತವಕಿಸುತ್ತಿದ್ದಾರೆ, ಎಂಬುದನ್ನು ನಾವು ಗ್ರಹಿಸುತ್ತೇವೆ.
ಇಂತಹ ಸಂದರ್ಭಗಳಲ್ಲಿ ಆ ಕರುಣೆಯಿಲ್ಲದ ಸೇವಕನಂತೆ ನಡೆದುಕೊಳ್ಳಲು ನಮ್ಮೆಲ್ಲರ ಸಹಜ ಮಾನವ ಗುಣವು ನಮ್ಮನ್ನು ಪ್ರೇರೇಪಿಸುತ್ತದೆ. ಇಂತಹ ಕ್ಷಣದಲ್ಲಿ ನಾವು ದೇವರಿಂದ ಎಷ್ಟು ಕ್ಷಮಿಸಲ್ಪಟ್ಟಿದ್ದೇವೆ ಮತ್ತು ಇತರರು ನಮ್ಮ ಸ್ವಂತ ಮೂರ್ಖತನದ ತಪ್ಪುಗಳನ್ನು ಸಹಿಸಿಕೊಳ್ಳಲು ಎಷ್ಟು ತಾಳ್ಮೆ ತೋರಿಸಿದ್ದಾರೆಂದು ನಾವು ಮತ್ತೊಮ್ಮೆ ಜ್ಞಾಪಿಸಿಕೊಳ್ಳಬೇಕಿದೆ.
ಆದ್ದರಿಂದ ನಮ್ಮ ಜೊತೆ-ಸೇವಕರು, ಯೌವನಸ್ಥರು ಮತ್ತು ವಯಸ್ಸಾದವರು ನಮ್ಮಿಂದ ತಾಳ್ಮೆಗಾಗಿ ಕೂಗಿ ಬೇಡುತ್ತಿರುವ ಧ್ವನಿಯನ್ನು ಕೇಳಿಸಿಕೊಳ್ಳಲು ನಮ್ಮ ಆತ್ಮಿಕ ಕಿವಿಗಳು ಯಾವಾಗಲೂ ಚುರುಕಾಗಿ ಇರಬೇಕು.
"ತಾಳ್ಮೆಯು ಪರಿಪೂರ್ಣತೆಗೆ ಬರಲಿ; ಈ ರೀತಿಯಾಗಿ ನೀನು ಶಿಕ್ಷಿತನೂ ಪರಿಪೂರ್ಣನೂ ಆಗುವೆ, ಮತ್ತು ನಿನಗೆ ಯಾವುದರಲ್ಲೂ ಕಡಿಮೆಯಿರುವುದಿಲ್ಲ"(ಯಾಕೋಬ. 1:4).