WFTW Body: 

ಒಳ್ಳೆಯ ಸಮಾರ್ಯದವನ ಸಾಮ್ಯದಲ್ಲಿ, ಒಬ್ಬ ಸಹೋದರನು ಯಾವುದೋ ಅಗತ್ಯತೆಯಲ್ಲಿ ಇರುವುದನ್ನು ನಾವು ಗಮನಿಸಿದಾಗ ಆತನಿಗೆ ಸಹಾಯ ಒದಗಿಸುವುದರ ಪ್ರಾಮುಖ್ಯತೆಯನ್ನು ಯೇಸುವು ಕಲಿಸಿಕೊಟ್ಟರು (ಲೂಕ. 10:25-37).

ಈ ಪ್ರಸಂಗದಲ್ಲಿ ಒಬ್ಬ ಧರ್ಮಶಾಸ್ತ್ರ ಪಂಡಿತನು, ನಿತ್ಯಜೀವಕ್ಕೆ ಬಾಧ್ಯರಾಗಲು ಏನು ಮಾಡಬೇಕೆಂದು ಯೇಸುವನ್ನು ಪ್ರಶ್ನಿಸುವುದನ್ನು ನಾವು ನೋಡುತ್ತೇವೆ. ದೇವರನ್ನು ಪೂರ್ಣ ಹೃದಯದಿಂದ ಪ್ರೀತಿಸಿ, ನೆರೆಯವನನ್ನು ನಮ್ಮಂತೆಯೇ ಪ್ರೀತಿಸಿದರೆ ಅದು ಸಾಧ್ಯವಾಗುತ್ತದೆಂದು ಯೇಸುವು ಉತ್ತರಿಸಿದರು. ಆದರೆ ಆ ಪಂಡಿತನು (ಇಂದಿನ ಅನೇಕ ಸತ್ಯವೇದ ಪರಿಣತರ ಹಾಗೆ), ’ತಾನು ಕೆಲವು ಜನರಿಗೆ ಪ್ರೀತಿ ತೋರಿಸದೇ ಇರುವುದನ್ನು ಸಮರ್ಥಿಸಿಕೊಳ್ಳಲು’ (ಲೂಕ. 10:29- Living Bible), "ನೆರೆಯವನು" ಎಂಬ ಪದ ಯಾರನ್ನು ಸೂಚಿಸುತ್ತದೆ, ಎಂದು ಯೇಸುವನ್ನು ಕೇಳಿದನು. ಯೇಸುವು ಅವನಿಗೆ ಪ್ರತ್ಯುತ್ತರವಾಗಿ ಒಂದು ಸಾಮ್ಯವನ್ನು ಹೇಳಿದರು.

ಒಬ್ಬಾನೊಬ್ಬ ಮನುಷ್ಯನು ದರೋಡೆಕಾರರ ಕೈಗೆ ಸಿಕ್ಕಿ ಗಾಯಗೊಂಡು ದಾರಿಯಲ್ಲಿ ಬಿದ್ದಿದ್ದ ಪ್ರಸಂಗವನ್ನು ಯೇಸುವು ಉಲ್ಲೇಖಿಸಿದರು. ಒಬ್ಬ ಯಾಜಕನು (ದೇವರ ಮಂದಿರದ ಒಬ್ಬ ಹಿರಿಯನು) ಅವನನ್ನು ಕಂಡೂ ಕಾಣದಂತೆ ಮುಂದೆ ಹೋದನು. ಆಗಿನ ಕಾಲದಲ್ಲಿ ಇಸ್ರಾಯೇಲಿನಲ್ಲಿದ್ದ ಎಲ್ಲರೂ ಅಬ್ರಹಾಮ, ಇಸಾಕ ಮತ್ತು ಯಾಕೋಬರ ವಂಶಸ್ಥರಾಗಿದ್ದರು. ಹಾಗಾಗಿ ಅವರೆಲ್ಲರೂ ಸಹೋದರ ಸಹೋದರಿಯರಾಗಿದ್ದರು; ಇದು ವಿಶ್ವಾಸಿಗಳ ನಡುವೆ ನಮ್ಮ ಸಂಬಂಧವನ್ನು ಚೆನ್ನಾಗಿ ಹೋಲುತ್ತದೆ. ಹಾಗಾಗಿ ದಾರಿಯಲ್ಲಿ ಬಿದ್ದಿದ್ದ ಆ ಮನುಷ್ಯನು ಆ ಯಾಜಕನಿಗೆ ಒಬ್ಬ ಸಹೋದರನಾಗಿದ್ದನು. ಆದರೆ ಆ ಯಾಜಕನು ಅವನನ್ನು ನೋಡಿ ನಿರ್ಲಕ್ಷಿಸಿದನು. ಅವನು ಆತನನ್ನು ಮನಸ್ಸಿನಲ್ಲಿ ತೀರ್ಪು ಮಾಡಿ, ರಾತ್ರಿಯ ಸಮಯದಲ್ಲಿ ನಿರ್ಜನವಾಗಿದ್ದ ಆ ದಾರಿಯಲ್ಲಿ ಅವನು ಒಬ್ಬನೇ ಏಕೆ ಹೋಗಬೇಕಾಗಿತ್ತು, ಎಂದು ಸಹ ಯೋಚಿಸಿರಬಹುದು. ಕೆಲವೊಮ್ಮೆ ಒಬ್ಬ ಸಹ-ವಿಶ್ವಾಸಿಯು ಕಷ್ಟದಲ್ಲಿ ಇರುವುದನ್ನು ನೋಡಿ, ಅವನಿಗೆ ಸಹಾಯ ಮಾಡಲು ಪ್ರಯತ್ನಿಸುವುದರ ಬದಲಾಗಿ, ನಾವು ತಕ್ಷಣ ಅವನಲ್ಲಿ ತಪ್ಪು ಹುಡುಕಿದ್ದೂ ಇದೆಯಲ್ಲವೇ?

ಮುಂದೊಂದು ದಿನ ಕರ್ತನು ನಮಗೆ ಹೀಗೆ ಹೇಳಬೇಕಾಗುತ್ತದೆಯೇ? "ನಾನು ಹಸಿದಿದ್ದೆ, ನೀವು ನನಗೆ ಊಟ ಹಾಕಲಿಲ್ಲ; ನಾನು ಬಾಯಾರಿದ್ದೆ, ನೀವು ನನಗೆ ಕುಡಿಯುವದಕ್ಕೆ ಕೊಡಲಿಲ್ಲ; ಬಟ್ಟೆಯಿಲ್ಲದವನಾಗಿದ್ದೆ, ನೀವು ನನಗೆ ಉಡುವುದಕ್ಕೆ ಕೊಡಲಿಲ್ಲ; ರೋಗದಲ್ಲಿ ಬಿದ್ದಿದ್ದೆ, ನೀವು ನನ್ನ ಆರೈಕೆ ಮಾಡಲು ಬರಲಿಲ್ಲ. ನೀವು ನನಗೆ ಕೇವಲ ಕೀರ್ತನೆಗಳನ್ನು ಹಾಡಿದಿರಿ ಮತ್ತು ಪ್ರಸಂಗಗಳನ್ನು ಬೋಧಿಸಿದಿರಿ, ಆದರೆ ನನ್ನ ಅವಶ್ಯಕತೆಯಲ್ಲಿ ನೀವು ಯಾವ ಸಹಾಯವನ್ನೂ ಮಾಡಲಿಲ್ಲ." ಮೇಲಿನ ಸಾಮ್ಯದಲ್ಲಿ, ಆ ಯಾಜಕನು ತವಕಿಸಿದ್ದು ಯೆರೂಸಲೇಮಿನ ಕೂಟಕ್ಕೆ ಸರಿಯಾದ ಸಮಯಕ್ಕೆ ಹೋಗಬೇಕೆಂದು, ಆದರೆ ತನ್ನ ಸಹೋದರನಿಗೆ ಅವಶ್ಯವಾಗಿದ್ದ ಸಹಾಯವನ್ನು ಒದಗಿಸುವುದಕ್ಕಲ್ಲ. ಸಾಮಾನ್ಯವಾಗಿ ಕೂಟಗಳಲ್ಲಿ ಬೋಧನೆ ಮಾಡುವ ಅನೇಕ ಮಂದಿಯೂ ಸಹ ಕೊನೆಯಲ್ಲಿ ನರಕಕ್ಕೆ ಹೋಗುವ ಸಾಧ್ಯತೆ ಇದೆಯೆಂದು ಯೇಸುವು ನಮ್ಮನ್ನು ಎಚ್ಚರಿಸಿದ್ದಾರೆ (ಮತ್ತಾ. 7:22,23).

ಇದರ ನಂತರ, ಒಬ್ಬ ಲೇವಿಯನು (ದೇವರ ಮಂದಿರದ ಒಬ್ಬ ಸಹೋದರನು) ಅದೇ ಮಾರ್ಗದಲ್ಲಿ ಹೋದನು, ಮತ್ತು ಅವನೂ ಸಹ ಅಸಹಾಯಕನಾಗಿದ್ದ ತನ್ನ ಸಹೋದರನನ್ನು ನೋಡಿಯೂ ನೋಡದಂತೆ ಮುಂದೆ ಹೋದನು. ಅವನೂ ಸಹ ಪರೀಕ್ಷೆಯಲ್ಲಿ ವಿಫಲನಾದನು. ಅವನೂ ಸಹ ಸರಿಯಾದ ಸಮಯಕ್ಕೆ ಕೂಟಕ್ಕೆ ಹೋಗಲು ಬಯಸಿದನು. ಇವರಿಬ್ಬರೂ ಕೂಟಕ್ಕೆ ಹಾಜರಾಗಿ ತಮಗೆ ದೇವರು ಹೇಳುವ ಮಾತನ್ನು ಕೇಳಿಸಿಕೊಳ್ಳಲು ಬಯಸಿದರು. ಆದರೆ ಅವರು ಅರ್ಥಮಾಡಿಕೊಳ್ಳದ ವಿಷಯವೆಂದರೆ, ಈಗಾಗಲೇ ಅವರು ಕೂಟಕ್ಕೆ ಬರುತ್ತಿದ್ದಾಗ, ಅವಶ್ಯಕತೆಯಲ್ಲಿದ್ದ ಒಬ್ಬ ಸಹೋದರನಿಗೆ ಸಹಾಯ ನೀಡುವಂತೆ ದೇವರು ಅವರಿಗೆ ತಿಳಿಸಿದ್ದರು. ಆದರೆ ಅವರ ಕಿವಿಗಳು ದೇವರ ಮಾತನ್ನು ಕೇಳಿಸಿಕೊಳ್ಳಲು ಅಸಮರ್ಥವಾಗಿದ್ದವು. ಇದರಿಂದಾಗಿ ಆ ಮುಂಜಾನೆ ದೇವರಿಗೆ ಅವರ ಕೀರ್ತನೆಗಳು ಮತ್ತು ಪ್ರಾರ್ಥನೆಗಳು ಯಾವುದೇ ಉಪಯೋಗಕ್ಕೆ ಬರಲಿಲ್ಲ. ದೇವರು ಅನೇಕ ಸಲ ದೇವಜನರ ಕಷ್ಟ-ತೊಂದರೆಗಳ ಮೂಲಕ, ಅವರು ತೊಂದರೆಗೆ ಒಳಗಾಗಿದ್ದನ್ನು ನೋಡಿದವರ ಹೃದಯಗಳನ್ನು ಪರೀಕ್ಷಿಸುತ್ತಾರೆ. ಯೋಬನ ಕಥೆಯನ್ನು ತೆಗೆದುಕೊಳ್ಳಿರಿ. ದೇವರು ಯೋಬನ ತೊಂದರೆಗಳ ಮೂಲಕ ಆತನ ಮೂವರು ಸ್ನೇಹಿತರ ಹೃದಯಗಳನ್ನು ಪರೀಕ್ಷಿಸಿದರು. ಮತ್ತು ಆ ಪರೀಕ್ಷೆಯಲ್ಲಿ ಆ ಮೂವರೂ ವಿಫಲರಾದರು.

ಯೇಸು ಹೇಳಿದ ಸಾಮ್ಯದ ಆ ಯಾಜಕ ಮತ್ತು ಲೇವಿಯರಲ್ಲಿ ನಾವು ನಮ್ಮನ್ನೇ ಕಂಡಿದ್ದೇವೆಯೇ? ಹಾಗಿದ್ದಲ್ಲಿ, ನಾವು ಪಶ್ಚಾತ್ತಾಪ ಪಟ್ಟು ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಬದಲಾಗಲು ಪ್ರಯತ್ನಿಸೋಣ. ಆ ಯಾಜಕ ಮತ್ತು ಲೇವಿಯರು ಹಳೆಯ ಒಡಂಬಡಿಕೆಗೆ ಸೇರಿದವರಾಗಿದ್ದರು. ಆದರೆ ಹೊಸ-ಒಡಂಬಡಿಕೆಯ ಕ್ರೈಸ್ತರಾದ ನಾವು ಅವರಿಗಿಂತ ಉನ್ನತ ಮಟ್ಟಕ್ಕೆ ಏರಿದ್ದೇವೆಂದು ಹೇಳಿಕೊಳ್ಳುತ್ತೇವೆ. ಅದು ನಿಜವಾಗಿದ್ದರೆ, ನಾವು ಸ್ವತಃ ಯೇಸುವನ್ನು ಪ್ರತಿನಿಧಿಸಲು ಕರೆಯಲ್ಪಟ್ಟಿದ್ದೇವೆ. ಹಾಗಾಗಿ ನಾವು ಯೇಸುವನ್ನು ಸೂಕ್ತವಾದ ರೀತಿಯಲ್ಲಿ ಪ್ರತಿನಿಧಿಸುತ್ತಿದ್ದೇವೆಯೇ ಎಂದು ನಮ್ಮನ್ನೇ ಪ್ರಶ್ನಿಸಿಕೊಳ್ಳುವುದು ಅವಶ್ಯವಾಗಿದೆ.

ಕೊನೆಗೆ, ತಿರಸ್ಕಾರದಿಂದ ನೋಡಲ್ಪಡುತ್ತಿದ್ದ ಒಬ್ಬ ಸಮಾರ್ಯದವನು (ಇಂದಿನ ಹೋಲಿಕೆಯಲ್ಲಿ, ಇವನು ಬಾಬೆಲಿನ ಒಂದು ಕ್ರೈಸ್ತ ಪಂಗಡದ ಸದಸ್ಯ ಮತ್ತು ಅನೇಕ ತಪ್ಪು ಸಿದ್ಧಾಂತಗಳನ್ನು ಹೊಂದಿರುವ ಒಬ್ಬ ಸಹೋದರನು), ಆ ಗಾಯಗೊಂಡಿದ್ದ ಅಸಹಾಯಕ ವ್ಯಕ್ತಿಯ ಸಹಾಯಕ್ಕೆ ಬಂದನು. ಆ ಸಮಾರ್ಯದವನು ಒಬ್ಬ ಸಭಾಹಿರಿಯ ಅಥವಾ ಒಬ್ಬ ಬೋಧಕನಾಗಿರಲಿಲ್ಲ. ಅವನು ಯಾರಾದರೂ ಅಗತ್ಯತೆಯಲ್ಲಿ ಇರುವಾಗ ಅವರ ಸಹಾಯಕ್ಕೆ ಬರಲು ಸದಾ ಸಿದ್ಧರಾಗಿರುವಂತ ಶಾಂತ ಸ್ವಭಾವದ ಜನರಲ್ಲಿ ಕೇವಲ ಒಬ್ಬನಾಗಿದ್ದನು - ಇಂಥವರು ತಮ್ಮ ಕಾರ್ಯಗಳನ್ನು ಯಾರಿಗೂ ತೋರಿಸಿಕೊಳ್ಳದೇ ಮಾಡುತ್ತಾರೆ. ಅವನು ಆ ಗಾಯಾಳು ಮನುಷ್ಯನನ್ನು ನೋಡಿದಾಗ, ತನಗೂ ಇಂತಹ ದುರಂತ ಸಂಭವಿಸ ಬಹುದಾಗಿತ್ತು ಎಂದು ಅರಿತುಕೊಂಡನು. ಆದ್ದರಿಂದ ಅವನು ತನ್ನ ಕೆಲಸಗಳನ್ನು ಬದಿಗಿರಿಸಿ, ಆ ಅಸಹಾಯಕ ಸಹೋದರನ ಆರೈಕೆಗಾಗಿ ತನ್ನ ಸಮಯವನ್ನು ಮತ್ತು ಹಣವನ್ನು ವೆಚ್ಚಮಾಡಿದನು.

ಕರ್ತ ಯೇಸು ಕ್ರಿಸ್ತನ ಒಬ್ಬ ನಿಜವಾದ ಶಿಷ್ಯನು ಯಾರು ಎಂಬುದನ್ನು ನಾವು ಇಲ್ಲಿ ನೋಡುತ್ತೇವೆ. ನಾವು ಕ್ರಿಸ್ತನ ಸ್ವಭಾವವನ್ನು ನಮ್ಮ ಸಿದ್ಧಾಂತಗಳ ಮೂಲಕ ತೋರಿಸಿಕೊಡಲು ಆಗುವುದಿಲ್ಲ, ಆದರೆ ಜೀವನದ ಹಾದಿಯಲ್ಲಿ ನಮಗೆ ಎದುರಾಗುವ ಅಗತ್ಯತೆಯುಳ್ಳ ಸಹೋದರರಿಗೆ ನಾವು ತೋರಿಸುವ ಮನೋಭಾವದ ಮೂಲಕ ಅದು ಪ್ರಕಟವಾಗುತ್ತದೆ. ಅಂದರೆ ಪ್ರತಿಯೊಬ್ಬರ ಬಗ್ಗೆ ಒಳ್ಳೆಯತನ ಮತ್ತು ಪ್ರೀತಿ ಮತ್ತು ಕನಿಕರವನ್ನು ಇರಿಸಿಕೊಳ್ಳುವುದು.

ನಾವೆಲ್ಲರು ಎಲ್ಲಾ ಸಂದರ್ಭಗಳಲ್ಲಿ ಹಾಗೆ ನಡೆದುಕೊಳ್ಳುವಂತೆ ಕರ್ತರು ನಮಗೆ ಸಹಾಯ ಮಾಡಲಿ. ಆಮೆನ್!