WFTW Body: 

ನಿರೀಕ್ಷೆ

"ನಿರೀಕ್ಷೆ" ಎಂಬ ಪದವು, ಹೊಸ ಒಡಂಬಡಿಕೆಗೆ ಸೇರಿದ "ಕೃಪೆ", "ಸೌಮ್ಯಭಾವ", "ಆತ್ಮಿಕ ಬಡತನ" ಮತ್ತು "ಜಯ" ಮೊದಲಾದ ಪದಗಳ ಪಟ್ಟಿಗೆ ಸೇರಿದೆ. ವಿಶ್ವಾಸಿಗಳಲ್ಲಿ ಬಹಳ ಕಡಿಮೆ ಜನ ನಿರೀಕ್ಷೆಯ ಕುರಿತಾಗಿ ಯೋಚಿಸುತ್ತಾರೆ. ಆದರೆ ಈ ಪದವನ್ನು ಪದಗಳ ಅನುಕ್ರಮಣಿಕಾ ಗ್ರಂಥದ ('Concordance') ಸಹಾಯದಿಂದ ಅಧ್ಯಯನ ಮಾಡುವುದು ಲಾಭದಾಯಕವಾಗಿದೆ.

ರೋಮಾ. 5:2-4 ನಮಗೆ ತಿಳಿಸುವಂತೆ, ನಮ್ಮಲ್ಲಿ ದೇವರ ಮಹಿಮೆಯ ’ಭರವಸೆ’ಯ ಮೂಲಕ ಉಲ್ಲಾಸವು ಚಿಮ್ಮುತ್ತದೆ. ನಾವು ಉಪದ್ರವಗಳ ನಡುವೆಯೂ ಉಲ್ಲಾಸಿಸುತ್ತೇವೆ, ಏಕೆಂದರೆ ನಾವು ಆ ಸಮಯದಲ್ಲಿ ತಾಳ್ಮೆಯಿಂದಿದ್ದರೆ, ನಮಗೆ ಅನುಭವ ಸಿದ್ಧಿ ಸಿಗುತ್ತದೆ. ಈ ಅನುಭವವು ನಿರೀಕ್ಷೆಯನ್ನು ಹುಟ್ಟಿಸುತ್ತದೆ. ಇದು ಹೇಗೆಂದರೆ, ದೇವರು ನಮ್ಮ ಹಿಂದಿನ ಜೀವಿತದಲ್ಲಿ ನಮ್ಮನ್ನು ಬದಲಾಯಿಸಿದ್ದನ್ನು ನೋಡಿ, ಅವರು ಮುಂದಿನ ದಿನಗಳಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸುತ್ತಾರೆ ಎಂಬ ನಿರೀಕ್ಷೆ ನಮ್ಮಲ್ಲಿ ಚಿಮ್ಮುತ್ತದೆ.

ಮುಂದೆ ಬರಲಿರುವ ದಿನಗಳಿಗಾಗಿ ದೇವರು ನಮ್ಮ ನಿರೀಕ್ಷೆಯನ್ನು ಪೂರ್ಣಗೊಳಿಸಲು ಬಯಸುತ್ತಾರೆ. ನಾವು ನಮ್ಮ ಅಕ್ಕಪಕ್ಕದವರ ಹಾಗೆ, ಭವಿಷ್ಯದ ಕುರಿತಾಗಿ ನಿರಾಶೆ ಮತ್ತು ಕತ್ತಲಿನ ದೃಷ್ಟಿಕೋನವನ್ನು ಇರಿಸಿಕೊಳ್ಳಬಾರದು. ನಮ್ಮಲ್ಲಿ ಒಳ್ಳೆಯ ಕೆಲಸವನ್ನು ಪ್ರಾರಂಭಿಸಿದ ದೇವರು ಖಂಡಿತವಾಗಿ ಅದನ್ನು ಪೂರ್ಣಗೊಳಿಸಿ ಸಿದ್ಧಿಗೆ ತರುತ್ತಾರೆ, ಎಂಬ ಸಂಪೂರ್ಣ ನಂಬಿಕೆ ನಮ್ಮಲ್ಲಿ ಇರುವುದರಿಂದ, ನಾವು ಬಲವಾದ ನಿರೀಕ್ಷೆಯೊಂದಿಗೆ ಭವಿಷ್ಯವನ್ನು ಎದುರುನೋಡುತ್ತೇವೆ (ಫಿಲಿ. 1:6). ನಿರೀಕ್ಷೆಯು ನಿರುತ್ಸಾಹ ಮತ್ತು ಖಿನ್ನತೆಗೆ ಉತ್ತಮ ಔಷಧವಾಗಿದೆ.

ನಾವು ನಮ್ಮ ’ನಿರೀಕ್ಷೆಯ ಸಾಕ್ಷಿಯನ್ನು ಭದ್ರವಾಗಿ ಇರಿಸಿಕೊಂಡು’ ನಿಲ್ಲಬೇಕು (ಇಬ್ರಿ. 10:23). ಬೇರೆ ಮಾತುಗಳಲ್ಲಿ ಹೇಳುವುದಾದರೆ, ನಾವು ಸದ್ಯಕ್ಕೆ ಸೋಲು ಅನುಭವಿಸುತ್ತಿದ್ದರೂ, ದೇವರು ನಮಗೆ ಕೊಟ್ಟಿರುವ ವಾಗ್ದಾನದಂತೆ ನಮಗೆ ಜಯವನ್ನು ನೀಡುತ್ತಾರೆ ಮತ್ತು ನಮ್ಮಲ್ಲಿ ಕೈಗೊಂಡಿರುವ ಒಳ್ಳೆಯ ಕೆಲಸವನ್ನು ಪೂರ್ತಿಗೊಳಿಸುತ್ತಾರೆ ಎಂಬ ನಮ್ಮ ನಂಬಿಕೆಯನ್ನು ನಾವು ಧೈರ್ಯವಾಗಿ ಬಾಯಿಂದ ಸಾಕ್ಷೀಕರಿಸಬೇಕು. ಸಾಮಾನ್ಯವಾಗಿ ವಿಶ್ವಾಸಿಗಳು ದೇವರು ನೆರವೇರಿಸಿರುವ ಕಾರ್ಯಗಳಿಗಾಗಿ ಅವರಿಗೆ ಸ್ತೋತ್ರ ಸಲ್ಲಿಸುತ್ತಾರೆ. ಆದರೆ ನಾವು ಇದನ್ನು ಮಾಡುವುದರ ಜೊತೆಗೆ, ಇನ್ನು ಮುಂದೆ ದೇವರು ನಮ್ಮಲ್ಲಿ ಮಾಡಲಿರುವ ಕಾರ್ಯದ ನಿರೀಕ್ಷೆಯಿಂದ ಹರ್ಷಿಸಬೇಕು.

ಕೀರ್ತ. 1:3ರ ವಾಗ್ದಾನ, "ಅವನ ಕಾರ್ಯವೆಲ್ಲವೂ ಸಫಲವಾಗುವದು" ಎಂಬುದಾಗಿದೆ. ಇದು ನಮಗಾಗಿ ಇರುವ ದೇವರ ಚಿತ್ತವಾಗಿದೆ, ಮತ್ತು ಇದನ್ನು ಕ್ರಿಸ್ತನ ಮೂಲಕ ನಮಗೆ ದೊರೆತ ಬಾಧ್ಯತೆಯೆಂದು ನಾವು ಧೈರ್ಯವಾಗಿ ಕೇಳಿ ಪಡೆದುಕೊಳ್ಳಬೇಕು.

ಸಂತೋಷ

ನಾವು ದೇವರ ಸಮ್ಮುಖದಲ್ಲಿ ಜೀವಿಸುತ್ತಿದ್ದೇವೋ, ಇಲ್ಲವೋ ಎಂದು ತಿಳಿದುಕೊಳ್ಳುವ ಒಂದು ವಿಧಾನ, ನಮ್ಮಲ್ಲಿ ’ಸಂಪೂರ್ಣ ಸಂತೋಷ’ ಇದೆಯೋ, ಇಲ್ಲವೋ ಎಂಬುದನ್ನು ಗಮನಿಸುವುದು - ಏಕೆಂದರೆ "ದೇವರ ಸಮ್ಮುಖದಲ್ಲಿ ಪರಿಪೂರ್ಣ ಸಂತೋಷವಿದೆ" (ಕೀರ್ತ. 16:11). ಇದು ನಿಜವಾಗಿ ದೇವರ ರಾಜ್ಯವು ನಮ್ಮ ಹೃದಯಕ್ಕೆ ಬಂದಿರುವುದನ್ನು ಸಹ ನಮಗೆ ತೋರಿಸಿಕೊಡುತ್ತದೆ - ಏಕೆಂದರೆ, "ದೇವರ ರಾಜ್ಯವು ನೀತಿಯೂ, ಸಮಾಧಾನವೂ, ಪವಿತ್ರಾತ್ಮನಿಂದಾಗುವ ಆನಂದವೂ ಆಗಿದೆ" (ರೋಮಾ. 14:17). ಇಂತಹ ಆನಂದವು ನಮಗೆ ಸಿಗುವುದು ನಾವು ಪಾಪವನ್ನು ದ್ವೇಷಿಸಿ, ನೀತಿಯನ್ನು ಪ್ರೀತಿಸುವುದಾದರೆ ಮಾತ್ರ - ಏಕೆಂದರೆ ಪರಮಾನಂದ ತೈಲದ ಅಭಿಷೇಕವು "ದೇವರ ನೀತಿಯನ್ನು ಪ್ರೀತಿಸಿ ಅನೀತಿಯನ್ನು ದ್ವೇಷಿಸುವವರಿಗೆ ಕೊಡಲ್ಪಡುತ್ತದೆ" (ಇಬ್ರಿ. 1:9). ಕರ್ತನ ಆನಂದವೇ ಎಲ್ಲಾ ವೇಳೆಯಲ್ಲಿ ನಿಮ್ಮ ಆಶ್ರಯವಾಗಿ ಇರಲಿ (ನೆಹೆ. 8:10). ಸಂತೋಷವು ಶೋಧನೆಗಳನ್ನು ಎದುರಿಸಿ ಹೋರಾಡುವ ನಿಮ್ಮ ಪ್ರಯಾಸವನ್ನು ಬಹಳ ಹಗುರಗೊಳಿಸುತ್ತದೆ.

ಯಾಕೋಬನ ಪತ್ರಿಕೆಯಲ್ಲಿ ನಮಗೆ ತಿಳಿಸಿರುವಂತೆ, ನಮ್ಮನ್ನು ಶೋಧನೆಗಳು ಎದುರಿಸುವ ಸಂದರ್ಭಗಳಲ್ಲೂ ಸಹ ನಾವು ಎರಡು ಕಾರಣಗಳಿಗಾಗಿ ಸಂತೋಷಿಸಬೇಕು (ಯಾಕೋಬ. 1:1-4): (1) ನಮ್ಮ ನಂಬಿಕೆಯು ಶುದ್ಧವಾದದ್ದೋ ಅಲ್ಲವೋ ಎಂಬುದನ್ನು ನಾವು ಕಂಡುಕೊಳ್ಳುತ್ತೇವೆ (ಇದನ್ನು ನಮ್ಮಲ್ಲಿರುವ ಚಿನ್ನವು ಅಪ್ಪಟವಾದದ್ದೋ, ಅಲ್ಲವೋ ಎಂಬುದನ್ನು ಪತ್ತೆಹಚ್ಚುವದಕ್ಕೆ ಹೋಲಿಸಬಹುದು - ಇದರಿಂದ ನಾವು ನಿಜವಾಗಿ ಬಡವರಾಗಿರುವಾಗ ನಾವು ಶ್ರೀಮಂತರೆಂದು ನಮ್ಮನ್ನು ವಂಚಿಸಿಕೊಳ್ಳುವುದು ತಪ್ಪುತ್ತದೆ). (2) ನಮ್ಮ ತಾಳ್ಮೆಯು ಪರಿಪೂರ್ಣತೆಯ ಮಟ್ಟಕ್ಕೆ ಬೆಳೆಯುತ್ತದೆ - ಇದರ ಮೂಲಕ ನಾವು ಪರಿಪೂರ್ಣರು ಮತ್ತು ಸುಶಿಕ್ಷಿತರು ಆಗುತ್ತೇವೆ - ಅಂದರೆ, ನಮಗೆ ಏನೂ ಕಡಿಮೆಯಿರುವುದಿಲ್ಲ.

ಶೋಧನೆಗಳ ಮೂಲಕ - ’ನಾವು ಅವುಗಳಲ್ಲಿ ಸಂತೋಷಿಸುವುದನ್ನು ಕಲಿತುಕೊಂಡರೆ’ - ನಮಗೆ ಅದ್ಭುತವಾದ ಫಲಿತಾಂಶಗಳು ದೊರಕಬಹುದು. ವಿಶ್ವಾಸಿಗಳು ಅನೇಕ ಸಲ ಶೋಧನೆಗಳಿಂದ ಒದಗುವ ಅವಕಾಶವನ್ನು ವ್ಯರ್ಥಗೊಳಿಸುತ್ತಾರೆ. ಅವರು ಶೋಧನೆಗಳ ಮೂಲಕ ಐಶ್ವರ್ಯವಂತರು ಆಗದಿರುವುದಕ್ಕೆ ಕಾರಣ, ಅವರು ಸಂತೋಷಿಸುವುದಕ್ಕೆ ಬದಲಾಗಿ ದೂರುತ್ತಾರೆ ಮತ್ತು ಗೊಣಗುಟ್ಟುತ್ತಾರೆ.