ಮತ್ತಾಯ: 6:5–8ರಲ್ಲಿ ಯೇಸುಸ್ವಾಮಿ ನಮಗೆ ಹೇಗೆ ಪ್ರಾರ್ಥಿಸಬಾರದು ಎಂಬುದನ್ನು ಕಲಿಸಿದ ನಂತರ ಕಪಟಿಗಳ ಹಾಗೆ ಅಲ್ಲ, ಅಜ್ಞಾನಿಗಳ ಹಾಗೆ ಹೇಳಿದ್ದನ್ನೇ ಸುಮ್ಮಸುಮ್ಮನೆ ಹೇಳುವಂತೆ ಅಲ್ಲ, ಉದ್ದವಾದ ಪ್ರಾರ್ಥನೆಗಳಿಂದಲ್ಲ, ಬದಲಾಗಿ, ನಮ್ಮ ತಂದೆಗೆ ನಮಗೆ ಏನು ಅಗತ್ಯವೆಂಬುದು ತಿಳಿದಿದೆ ಎಂದು ನಂಬುತ್ತಾ, ಹೇಗೆ ಪ್ರಾರ್ಥಿಸಬೇಕು ಎಂಬುದನ್ನು ಯೇಸುಸ್ವಾಮಿ ನಮಗೆ ತಿಳಿಸುತ್ತಾರೆ. ನಾನು ಕ್ರೈಸ್ತರನ್ನು ಗಮನಿಸಿದಾಗ ಕಂಡುಕೊಂಡದ್ದು ಏನೆಂದರೆ, ಒಂದು ಮಗು ಕೂಡ ಅರ್ಥಮಾಡಿಕೊಳ್ಳಬಲ್ಲಂತಹ ಯೇಸುವಿನ ಈ ಸರಳ ಮಾತುಗಳಿಗೆ — ಕೆಲವೇ ಜನ ಮಾತ್ರ ಗಮನ ಕೊಡುತ್ತಾರೆ. ಯೇಸುಸ್ವಾಮಿ ನಮಗೆ ಹೇಗೆ ಪ್ರಾರ್ಥಿಸಬಾರದು ಎಂದು ಕಲಿಸಿದರು. ಆದರೆ ಅನೇಕರು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ; ಹಾಗೆಯೇ ಹೇಗೆ ಪ್ರಾರ್ಥಿಸಬೇಕು ಎಂದೂ ಸಹ ಕಲಿಸಿದರು, ಅದನ್ನೂ ಅನೇಕರು ಗಂಭೀರವಾಗಿ ಪರಿಗಣಿಸಿಲ್ಲ.
ಯೇಸುಸ್ವಾಮಿ ನಾವು ಕುರುಡರಂತೆ ಪುನರಾವರ್ತಿಸುವ ಒಂದು ಪ್ರಾರ್ಥನೆಯನ್ನು ಕಲಿಸಲಿಲ್ಲ. ನೀವು ಪ್ರತಿಯೊಂದು ವಾಕ್ಯವನ್ನೂ ಮನಸಾರೆ ಅರ್ಥಮಾಡಿಕೊಂಡು ಪ್ರಾರ್ಥಿಸಿದರೆ, ಅದನ್ನು ಪುನರಾವರ್ತಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಯೇಸು ನಮ್ಮ ಎಲ್ಲಾ ಪ್ರಾರ್ಥನೆಗಳಲ್ಲಿ ಒಂದು ಮಾದರಿಯು ಕಾಣಸಿಗಬೇಕೆಂದು ನಮಗೆ ಕಲಿಸುತ್ತಿದ್ದರು.
ಯೇಸು ಹೇಳಿದ್ದು ಏನೆಂದರೆ ನೀವು ಪ್ರಾರ್ಥಿಸುವಾಗ ಹೀಗೆ ಪ್ರಾರ್ಥಿಸಿರಿ — “ಪರಲೋಕದಲ್ಲಿರುವ ನಮ್ಮ ತಂದೆಯೇ.” ದೇವರೊಂದಿಗೆ ಮಾತನಾಡುವಾಗ ಮೊದಲನೆಯದಾಗಿ ಅವರನ್ನು “ತಂದೆಯೇ” ಎಂದು ಕರೆಯಿರಿ ಎಂದು ಹೇಳಿದರು. ಹಳೆಯ ಒಡಂಬಡಿಕೆಯಲ್ಲಿ ಯಾರೂ ದೇವರನ್ನು ನೋಡಿ “ತಂದೆಯೇ”ಎಂದು ಕರೆಯಲು ಧೈರ್ಯ ಮಾಡಿರಲಿಲ್ಲ. ಆಗಿನ ಪ್ರಾರ್ಥನೆಗಳು ಸದಾ “ಓ ದೇವರೇ, ಸರ್ವಶಕ್ತನಾದ ಕರ್ತನೇ…” ಎಂಬುದಾಗಿದ್ದವು. ದೇವರು ವಿಶ್ವದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜನರು ಆ ಕಾರ್ಖಾನೆಯ ಸಣ್ಣ ಉದ್ಯೋಗಿಗಳಂತೆ ಇದ್ದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಜೊತೆ ನೀವು ಇಚ್ಛಿಸಿದಾಗಲೆಲ್ಲಾ ಮಾತನಾಡಲು ಸಾಧ್ಯವಿಲ್ಲ! ಆದರೆ ಹೊಸ ಒಡಂಬಡಿಕೆಯಲ್ಲಿ ನಾವು ದೇವರ ಮಕ್ಕಳಾಗಿದ್ದೇವೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಮಗ ತನ್ನ ತಂದೆಯ ಕಚೇರಿಗೆ ನೇರವಾಗಿ ಹೋಗಿ “ಅಪ್ಪ” ಎಂದು ಕರೆಯುವಂತೆ, ನಾವು ದೇವರ ಮಕ್ಕಳಾಗಿರುವ ಸೌಭಾಗ್ಯವನ್ನು ಅರ್ಥಮಾಡಿಕೊಳ್ಳಬೇಕು. ಇದು ಮೂಲತಃ ಸಂಪೂರ್ಣ ವಿಭಿನ್ನವಾದದ್ದಾಗಿದೆ!
ಆದರೂ ಹೆಚ್ಚಿನ ಕ್ರೈಸ್ತರ ವಿಷಯದಲ್ಲಿ ಸತ್ಯವೆಂದರೆ, ಅವರು ದೇವರನ್ನು “ತಂದೆಯೇ” ಎಂದು ಕರೆಯುವುದಿಲ್ಲ; “ಓ ದೇವರೇ” ಎಂದು ಮಾತ್ರ ಕರೆಯುತ್ತಾರೆ. ಅದರಲ್ಲಿ ತಪ್ಪೇನಿಲ್ಲ — ಅವರು ನಿಜವಾಗಿಯೂ ದೇವರೇ, ಹಾಗಾಗಿ ದೇವರೆಂದು ಕರೆಯುವುದು ಸರಿಯೇ. ಆದರೆ ನೀವು ಅವರನ್ನು ದೇವರೆಂದು ಮಾತ್ರ ಕರೆಯುತ್ತಾ, ತಂದೆಯೆಂದು ಕರೆಯದೆ ಇದ್ದರೆ, ಅದರಲ್ಲಿ ಏನೋ ತಪ್ಪಿದೆ.
ಹಳೆಯ ಒಡಂಬಡಿಕೆಯಲ್ಲಿ ದೇವರಿಗೆ ಒಂದು ಹೆಸರಿತ್ತು ಯೆಹೋವ ಅಥವಾ ಯಾವೆ (ಯಾರಿಗೂ ಆ ಹೆಸರನ್ನು ಹೇಗೆ ಉಚ್ಚರಿಸಬೇಕೆಂದು ಗೊತ್ತಿರಲಿಲ್ಲ. ಯಾಕೆಂದರೆ ಇಬ್ರಿಯ ವರ್ಣಮಾಲೆಯಲ್ಲಿ ಸ್ವರಾಕ್ಷರಗಳು ಇರಲಿಲ್ಲ.) ನನಗೆ ತಿಳಿದ ಮಟ್ಟಿಗೆ ಇದೊಂದು ಅವಶ್ಯವಾದ ಚರ್ಚೆಯಲ್ಲ. ಯಾಕೆಂದರೆ ನಾನು ದೇವರನ್ನು ಯಹೋವ ಅಥವಾ ಯಾವೆ ಎಂಬುದಾಗಿ ಕರೆಯುವುದಿಲ್ಲ. ನಾನು ಆತನನ್ನು ತಂದೆ ಎಂಬದಾಗಿ ಕರೆಯುತ್ತೇನೆ.
ಆತನು ನನ್ನ ತಂದೆ. ಯಾಕೆಂದರೆ ಯೇಸು ನಮಗೆ ನಮ್ಮ ತಂದೆಯೇ ಎಂಬದಾಗಿ ಪ್ರಾರ್ಥಿಸಲು ಕಲಿಸಿದರು. ರೋಮಾ 8 ರಲ್ಲಿ ಪವಿತ್ರಾತ್ಮನು ನಮ್ಮ ಹೃದಯದೊಳಗೆ ಬಂದು,' ಅಪ್ಪ ತಂದೆಯೇ'ಎಂಬದಾಗಿ ಕರೆಯುತ್ತಾನೆ ಎಂಬುದಾಗಿ ಕಲಿತಿದ್ದೇವೆ (ರೋಮಾ 8:15). ಆದರೂ ಸಹ ಕೆಲವು ಜನರು ಹಾಡುವ ಕೆಲವು ಹಾಡುಗಳನ್ನು ಗಮನಿಸುವಾಗ 'ನನ್ನನ್ನು ಮುನ್ನಡೆಸು ಓ ದೊಡ್ಡ ಯಹೋವ' ಎಂಬ ಪದಗಳಿವೆ ಅವರು ತಮ್ಮ ತಂದೆಯೊಡನೆ ಮಾತನಾಡುತ್ತಿದ್ದಾರಾ? ಆತನು ಯೆಹೋವ. ಆದರೆ ನಾವು ಆತನನ್ನು ತಂದೆಯೇ ಎಂಬದಾಗಿ ಕರೆಯಲು ಕಲಿಯಬೇಕು. ಒಂದು ವೇಳೆ ನನ್ನ ಮಕ್ಕಳು ನನ್ನ ಬಳಿ ಬಂದು ಶ್ರೀ ಪೂನನ್ ರವರೇ ಎಂದು ಕರೆದರೆ ಅವರಲ್ಲಿ ಏನೋ ತಪ್ಪಾಗಿದೆ ಎಂದು ನಾನು ಯೋಚಿಸುತ್ತೇನೆ. ಯಾಕೆ ಅವರು ನನ್ನನ್ನು ಶ್ರೀ ಪೂನನ್ ಎಂಬುದಾಗಿ ಕರೆಯುತ್ತಿದ್ದಾರೆ? ಅವರು ನನ್ನನ್ನು ಅಪ್ಪ ಎಂಬುದಾಗಿ ಕರೆಯಬೇಕು. ನಾನು ದೇವರ ಬಳಿ ಬರುವಾಗ ನಾನು ಆತನನ್ನು ಯಹೋವ ಅಥವಾ ಯಾವುದೇ ಎಂಬುದಾಗಿ ಕರೆಯುವುದಿಲ್ಲ. ಅದು ಆತನ ಹೆಸರಾದರೂ ಸಹ, ನಾನು' ಅಪ್ಪ' ಎಂಬುದಾಗಿ ಕರೆಯುತ್ತೇನೆ. ಯಾಕೆಂದರೆ ಆತನು ನನ್ನ ತಂದೆ. ನಾನು ಆತನ ಮಗುವಾಗಿದ್ದೇನೆ.
ದೇವರ ಮಗುವಾಗಿರುವ ಸತ್ಯಾಂಶ ಅನೇಕ ಕ್ರೈಸ್ತರ ಮನಸ್ಸಿಗೆ ಹೊಳೆದಿಲ್ಲ. ಯಾಕೆಂದರೆ ಅವರು ಪವಿತ್ರಾತ್ಮನಿಗೆ ತಮ್ಮ ಹೃದಯವನ್ನು ತೆರೆದಿಲ್ಲ. ಪವಿತ್ರಾತ್ಮನು ಒಬ್ಬ ವ್ಯಕ್ತಿಯನ್ನು ತುಂಬಿಸುವಾಗ ಮೊದಲನೆಯದಾಗಿ ಅವನು 'ಅಪ್ಪ ತಂದೆಯೇ' ಎಂಬುದಾಗಿ ಕೂಗುವಂತೆ ಮಾಡುತ್ತಾನೆ. ಅಂದರೆ' ಅಪ್ಪ'. ಇದು ನಿಮ್ಮ ಜೀವನದಲ್ಲಿ ನಡೆದಿದೆಯೇ? ಇದು ತುಂಬಾ ತುಂಬಾ ಪ್ರಾಮುಖ್ಯವಾದುದು. ಆ ರೀತಿ ಕರೆಯುವಂತೆ ನಮಗೆ ಯಾರೂ ತರಬೇತಿ ಕೊಡುವುದಿಲ್ಲ. ಅದು ಸ್ವಯಂಪ್ರಜ್ಞೆಯಿಂದ ಒಳಗಿನಿಂದ ಬರುವ ಕೂಗು. ಒಬ್ಬನು ಹೊಸದಾಗಿ ಹುಟ್ಟಿದಾಗ ಪವಿತ್ರಾತ್ಮನು ಆ ವ್ಯಕ್ತಿಯ ಹೃದಯದೊಳಗೆ ಬರುತ್ತಾನೆ, ಆಗ ಅವನ ಸತ್ಯ ಸ್ಥಿತಿಯಿಂದ ಬರುವಂತ ಕೂಗು ಅದಾಗಿರುತ್ತದೆ. ಒಂದು ವೇಳೆ ಅವನು ಪವಿತ್ರಾತ್ಮನಿಂದ ತುಂಬಿದರೆ ಅವನು ನಿಜವಾಗಲೂ ದೇವರು ನನ್ನ ತಂದೆ ಎಂಬದಾಗಿ ತಿಳಿಯುತ್ತಾನೆ. ದೇವರನ್ನು ತನ್ನ ತಂದೆ ಎಂಬುದಾಗಿ ತಿಳಿಯುವಂತದ್ದು ಮತ್ತು ಆತನನ್ನು ತಂದೆ ಎಂಬದಾಗಿ ಕರೆಯುವಂತದ್ದು ಕ್ರಿಸ್ತೀಯ ಜೀವಿತದ ಮುಖ್ಯವಾದ ಸಂಗತಿಗಳಲ್ಲಿ ಒಂದಾಗಿದೆ. ನೀವು ಆತನನ್ನು ಕರ್ತನು ಎಂಬುದಾಗಿ ಕರೆಯಬಹುದು ಮತ್ತು ನೀವು ಆತನನ್ನು ದೇವರು ಎಂಬದಾಗಿ ಕರೆಯಬಹುದು. ಆದರೆ ಮುಖ್ಯವಾಗಿ ನೀವು ಪ್ರಾರ್ಥಿಸಬೇಕಾಗಿರುವುದು ನಿಮ್ಮ ತಂದೆಯೊಡನೆ.
"ನಮ್ಮ ತಂದೆ" ಮಾತ್ರವಲ್ಲ, ಯೇಸುವು "ಪರಲೋಕದಲ್ಲಿರುವ ನಮ್ಮ ತಂದೆಯೇ" ಎಂದು ಪ್ರಾರ್ಥಿಸಲು ಹೇಳಿದರು. ನಾವು ಯಾರೋ ಇಹಲೋಕದ ತಂದೆಯೊಡನೆ ಪ್ರಾರ್ಥಿಸುತ್ತಿಲ್ಲ. ನನ್ನ ಲೌಕಿಕ ತಂದೆ ನನ್ನನ್ನು ಹೆಚ್ಚಾಗಿ ಪ್ರೀತಿಸುತ್ತಿರಬಹುದು, ಆದರೆ ನನ್ನ ಕಷ್ಟದ ಸಂದರ್ಭಗಳಲ್ಲಿ ಅವರು ನನಗೆ ಸಹಾಯ ಮಾಡಲು ಅಸಹಾಯಕರಾಗಿರಬಹುದು. ನನ್ನ ಪರಲೋಕದ ತಂದೆಯು ಅಸಹಾಯಕರಲ್ಲ; ಅವರು ಇಡೀ ವಿಶ್ವವನ್ನೇ ನಡೆಸುತ್ತಾರೆ. ಆತನು ಭಾರತದ ಪ್ರಧಾನ ಮಂತ್ರಿಗಿಂತಲೂ ಹೆಚ್ಚು ಬಲಶಾಲಿ! ನೀವೇ ಯೋಚಿಸಿ. ಒಂದು ವೇಳೆ ಭಾರತದ ಪ್ರಧಾನ ಮಂತ್ರಿ ನಿಮ್ಮ ತಂದೆಯಾಗಿದ್ದರೆ, ನಿಮಗೆ ಏನಾದರೂ ಸಮಸ್ಯೆಯಾದರೆ, ನೀವು ಮಾಡಬೇಕಾಗಿರುವುದೆಲ್ಲಾ, ಇಷ್ಟೇ; ನಿಮ್ಮ ತಂದೆಗೆ ಕರೆ ಮಾಡಿ ಮತ್ತು ಅದರ ಬಗ್ಗೆ ಹೇಳುವುದು. ಸರಿ, ಪರಲೋಕದ ನಿಮ್ಮ ತಂದೆಯು ಈ ಲೋಕದಲ್ಲಿರುವ ಎಲ್ಲರಿಗಿಂತಲೂ ಪರಾಕ್ರಮಶಾಲಿ ಮತ್ತು ಶಕ್ತಿಶಾಲಿಯಾಗಿದ್ದಾರೆ. ನಿನ್ನ ಸಮಸ್ಯೆಗಳೊಂದಿಗೆ, ನೀನು ಏಕೆ ಆತನ ಬಳಿಗೆ ಹೋಗಬಾರದು?
ಯೇಸುವು ಈ ಪ್ರಾರ್ಥನೆಯ ಮೊದಲ ವಾಕ್ಯದಲ್ಲಿ ನಂಬಿಕೆಗೆ ಅಡಿಪಾಯ ಹಾಕಲು ಯೇಸು ಪ್ರಯತ್ನಿಸುತ್ತಿದ್ದರು. "ಪರಲೋಕದಲ್ಲಿರುವ ನಮ್ಮ ತಂದೆಯೇ" ಎಂದು ನಾನು ಪ್ರಾರ್ಥಿಸಲು ಪ್ರಾರಂಭಿಸುವ ಮೊದಲೇ ಇದು ನನ್ನ ಹೃದಯದಲ್ಲಿ ಸ್ಪಷ್ಟಪಡಿಸುವುದೇನೆಂದರೆ, ನಾನು ಮಾತನಾಡುತ್ತಿರುವುದು ನನ್ನ ಪರಲೋಕದ ತಂದೆಯೊಟ್ಟಿಗೆ, ನನ್ನನ್ನು ಅತಿಯಾಗಿ ಪ್ರೀತಿಸುವ ತಂದೆ. ಈ ತಂದೆ ಪರಲೋಕದಲ್ಲಿದ್ದಾರೆ, ಮತ್ತು ಅವರು ಸರ್ವಶಕ್ತರಾಗಿದ್ದಾರೆ. ದೇವರು ನನ್ನನ್ನು ತೀವ್ರವಾಗಿ ಪ್ರೀತಿಸುತ್ತಾನೆ ಮತ್ತು ದೇವರು ಸರ್ವಶಕ್ತ ಎಂಬ ಈ ಎರಡು ಸತ್ಯಗಳು ನನ್ನ ನಂಬಿಕೆಗೆ ಆಧಾರವಾಗಿವೆ. ಅವರು ಯಾವುದೇ ಸಮಸ್ಯೆಯನ್ನು ಪರಿಹರಿಸಬಲ್ಲರು - ಅವರು ಏನು ಬೇಕಾದರೂ ಮಾಡಬಲ್ಲರು - ಮತ್ತು ಅವರು ನನ್ನನ್ನು ಅತಿಯಾಗಿ ಪ್ರೀತಿಸುತ್ತಾರೆ. ಇದು ನಂಬಿಕೆಗೆ ಅತ್ಯಂತ ದೊಡ್ಡ ಆಧಾರವಾಗಿದೆ.
"ನನ್ನ ಪರಲೋಕದ ತಂದೆಯು ಅಸಹಾಯಕರಲ್ಲ; ಅವರು ವಿಶ್ವವನ್ನು ನಡೆಸುತ್ತಾರೆ."
ನಂತರದ ಆರು ವಿನಂತಿಗಳನ್ನು, ನೀವು ಎಚ್ಚರಿಕೆಯಿಂದ ನೋಡುವುದೇನೆಂದರೆ, ಮೊದಲ ಮೂರು ಬೇಡಿಕೆಗಳು ದೇವರಿಗೆ ಸಂಬಂಧಿಸಿವೆ ಎಂದು ನೀವು ಗಮನಿಸಬಹುದು. ನೀವು ಪ್ರಾರ್ಥನೆಯಲ್ಲಿ ದೇವರ ಬಳಿಗೆ ಹೋದಾಗ ನಿಮ್ಮ ಮೊದಲ ವಿನಂತಿ ಏನು? ಅದು ಯಾವಾಗಲೂ ನಿಮಗಾಗಿ ಅಥವಾ ನಿಮ್ಮ ಕುಟುಂಬಕ್ಕಾಗಿ ಏನಾದರೂ ಆಗಿರುತ್ತದೆ ಎಂದು ನೀವು ಕಂಡುಕೊಳ್ಳುತ್ತೀರಿ. "ಕರ್ತನೇ ಈ ಅಗತ್ಯವನ್ನು ಪೂರೈಸು," ಅಥವಾ "ನನ್ನ ಬೆನ್ನು ನೋವನ್ನು ಗುಣಪಡಿಸು," ಅಥವಾ "ನನಗೆ ಕೆಲಸ ಕೊಡು" ಅಥವಾ "ನನ್ನ ಮಕ್ಕಳನ್ನು ನೋಡಿಕೋ: ಅವರಿಗೆ ಉದ್ಯೋಗವನ್ನು ಮತ್ತು ವಿವಾಹ ಸಂಗಾತಿಯನ್ನು ಒದಗಿಸು," ಇತ್ಯಾದಿ. ಈ ವಿನಂತಿಗಳಲ್ಲಿ ಯಾವುದೇ ತಪ್ಪಿಲ್ಲ, ನಾವು ಖಂಡಿತವಾಗಿಯೂ ಈ ಎಲ್ಲಾ ವಿಷಯಗಳಿಗಾಗಿ ಪ್ರಾರ್ಥಿಸಬಹುದು. ದೇವರು ನಾವು ಪ್ರತಿಯೊಂದು ಸಣ್ಣ ವಿಷಯಕ್ಕೂ ಆತನ ಬಳಿಗೆ ಹೋಗಬೇಕೆಂದು ಬಯಸುತ್ತಾರೆ. ಅತೀ ಸಣ್ಣ ವಿಷಯಗಳಿಗೂ ಸಹ. ನಿಮ್ಮ ಕೀಲಿಗಳು ಕಳೆದುಹೋಗಿದ್ದರೂ ಸಹ, ನೀವು ಅವುಗಳನ್ನು ಹುಡುಕಲು ದೇವರ ಸಹಾಯವನ್ನು ಕೇಳಬಹುದು.
ನಾವು ಪ್ರಾರ್ಥಿಸುವಾಗ ದೇವರಲ್ಲಿ ಸಣ್ಣ ವಿಷಯವನ್ನೂ ಕೇಳಬಹುದು ದೊಡ್ಡ ವಿಷಯವನ್ನೂ ಕೇಳಬಹುದು. ಆದರೆ ಯಾವುದಕ್ಕೆ ನಾವು ಆದ್ಯತೆ ನೀಡುತ್ತೇವೆ? ನೀವು ಪ್ರಾರ್ಥಿಸುವಾಗ, ದೇವರಿಗೆ ಹಾಗೂ ಆತನ ಅಗತ್ಯಗಳಿಗೆ ಆದ್ಯತೆ ನೀಡಬೇಕು ಎಂದು ಯೇಸು ಹೇಳಿದರು. ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕ ಪಡೆಯಿರಿ. ಇವುಗಳ ಕೂಡ ಇಹಲೋಕದ ವಸ್ತುಗಳು ದೊರಕುವವು ಎಂದು ಮತ್ತಾಯ 6:33 ರಲ್ಲಿ ಯೇಸು ಹೇಳಿದರು. ನೀವು ಇವೆಲ್ಲವನ್ನೂ ಕೇಳಬಹುದು, ಆದರೆ ದೇವರ ರಾಜ್ಯಕ್ಕೆ ಮೊದಲು ಸ್ಥಾನ ಕೊಡಿರಿ. ಇದು ದೇವರ ಮಾರ್ಗವಾಗಿದೆ.
ಯೇಸು ಹೇಳುವುದೇನೆಂದರೆ ನಿಮ್ಮ ವಿನಂತಿ ಹೀಗಿರಬೇಕು. ದೇವರೇ ಸ್ವರ್ಗದಲ್ಲಿರುವ ನನ್ನ ತಂದೆಯೇ ನಿಮ್ಮ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನನ್ನ ಹೆಸರಿನ ಬಗ್ಗೆ ಯಾರು ಏನು ಹೇಳುತ್ತಾರೆ ಎಂಬುದರ ಬಗ್ಗೆ ನನಗೆ ಚಿಂತೆ ಇಲ್ಲ, ಅದು ಮುಖ್ಯವಲ್ಲ, ಏಕೆಂದರೆ ನನ್ನ ಖ್ಯಾತಿ ಕಸದ ಬುಟ್ಟಿಗೆ ಯೋಗ್ಯವಾಗಿದೆ. ನೀವು ದೇವರ ನಾಮಕ್ಕಿಂತ ನಿಮ್ಮ ಹೆಸರು ಮತ್ತು ಖ್ಯಾತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೀರಾ? ಹಾಗಾದರೆ ನೀವು ಯೇಸು ಕಲಿಸಿದ ಹಾಗೆ ಪ್ರಾರ್ಥನೆ ಮಾಡುತ್ತಿಲ್ಲ. ಯಾರಾದರೂ ನಿಮ್ಮನ್ನು ಅಥವಾ ನಿಮ್ಮ ಮಗಳನ್ನು ನಿಂದಿಸಿದ್ದಾರೆ ಎಂದು ಭಾವಿಸೋಣ. ನಮ್ಮ ದೇಶದಲ್ಲಿ ಯೇಸುವಿನ ನಾಮವನ್ನು ಅವಮಾನಿಸುವುದಕ್ಕಿಂತ ಅದು ನಿಮ್ಮನ್ನು ಹೆಚ್ಚು ಗೊಂದಲಪಡಿಸುತ್ತಿದೆಯೇ? ಕ್ರೈಸ್ತರು ಪರಸ್ಪರ ಜಗಳವಾಡುವುದು ಮತ್ತು ಇಷ್ಟೊಂದು ತಪ್ಪು ಕೆಲಸಗಳನ್ನು ಮಾಡುವುದು ನಮಗೆ ಅಷ್ಟೊಂದು ತೊಂದರೆ ಕೊಡುವುದಿಲ್ಲ. ಅದು ನಮಗೆ ಸ್ವಲ್ಪವೂ ತೊಂದರೆ ಕೊಡದಿದ್ದರೆ, ದೇವರೊಂದಿಗೆ ನಮಗೆ ನಿಜವಾಗಿಯೂ ತಂದೆ ಎಂಬ ಸಂಬಂಧವಿದೆಯೇ ಎಂದು ನಾನು ಆಶ್ಚರ್ಯ ಪಡುತ್ತೇನೆ. ನಿಮ್ಮ ಹೆಸರು, ನಿಮ್ಮ ಕುಟುಂಬದ ಹೆಸರು ಮತ್ತು ನಿಮ್ಮ ಮಕ್ಕಳ ಹೆಸರಿನ ( ಜನರು ಅವರ ಬಗ್ಗೆ ಏನು ಹೇಳುತ್ತಾರೆ ) ಬಗ್ಗೆ ನಿಮಗೆ ಕಾಳಜಿ ಇದ್ದರೆ ಆಗ ನೀವು ನಿಮ್ಮ ಆಲೋಚನೆಯನ್ನು ಪುನರ್ ನಿರ್ಮಿಸಬೇಕು ಮತ್ತು ಅದನ್ನು ದೇವರ ಮೇಲೆ ಹೆಚ್ಚು ಕೇಂದ್ರೀಕರಿಸಬೇಕು.
ಯೇಸು ಪ್ರಾರ್ಥನೆಗೆ ಹೆಚ್ಚು ಮಹತ್ವ ಕೊಟ್ಟರು. ಲೂಕ 18:1 ರಲ್ಲಿ ಯೇಸು ಹೇಳಿದ ಒಂದು ವಿಷಯವೆಂದರೆ ಯಾವಾಗಲೂ ಪ್ರಾರ್ಥಿಸಬೇಕು ಮತ್ತು ಬಿಟ್ಟುಕೊಡಬಾರದು, ನಿರುತ್ಸಾಹಗೊಳ್ಳಬಾರದು. ಪ್ರಾರ್ಥನೆಯ ಕುರಿತು ಯೇಸು ನೀಡಿದ ಕೇವಲ ಎರಡು ಸಾಮ್ಯಗಳಲ್ಲಿ ಪ್ರತಿಯೊಂದರಲ್ಲಿ ದೀರ್ಘ ಪ್ರಯತ್ನದ ಬಗ್ಗೆ ಮಾತನಾಡಿದರು. ಇದಕ್ಕೆ ಒಂದು ಉದಾಹರಣೆ ಎಂದರೆ ಲೂಕ 18:1-8 ರಲ್ಲಿ ನ್ಯಾಯಾಧೀಶರ ಬಳಿಗೆ ಹೋದ ವಿಧವೆ, ಅವಳು ತನ್ನ ಶತ್ರುವಿನ ವಿರುದ್ಧ ನ್ಯಾಯ ಸಿಗುವವರೆಗೂ ಕೇಳುತ್ತಲೇ ಇದ್ದಳು. ಸೈತಾನನನ್ನು ಮತ್ತು ನಮ್ಮ ಮಾಂಸದಲ್ಲಿರುವ ಮೋಹವನ್ನು ಜಯಿಸಲು ಒಂದು ಪ್ರಾರ್ಥನೆ ಇಲ್ಲಿದೆ. ಇನ್ನೊಂದು ಉದಾಹರಣೆ ಲೂಕ 11:5-13 ರಲ್ಲಿ ಯೇಸು ದೇವರಿಂದ ರೊಟ್ಟಿಯನ್ನು ಕೇಳುವ ಬಗ್ಗೆ ಮಾತನಾಡಿದ್ದರು. ನಮ್ಮ ಬಳಿಗೆ ಬರುವ ಅಗತ್ಯವಿರುವ ಇನ್ನೊಬ್ಬ ವ್ಯಕ್ತಿಗೆ ಸಹಾಯ ಮಾಡಲು ಶಕ್ತಿ ಮತ್ತು ಉಡುಗೊರೆಗಳಿಗಾಗಿ ಈ ಎರಡು ಸಾಮ್ಯಗಳಲ್ಲಿ, ಬಿಡದೇ ಪ್ರಾರ್ಥಿಸುವ ಬಗ್ಗೆ ಒತ್ತು ನೀಡಲಾಗಿದೆ. ಆ ವ್ಯಕ್ತಿಯು ರೊಟ್ಟಿ ಪಡೆಯುವವರೆಗೂ ಬಾಗಿಲು ತಟ್ಟುತ್ತಲೇ ಇರುತ್ತಾನೆ. ಪ್ರಾರ್ಥನೆಯ ಬಗ್ಗೆ ಯೇಸುವಿನ ಸಂಪೂರ್ಣ ಬೋಧನೆ - ಎಂದಿಗೂ ಬಿಟ್ಟು ಕೊಡಬೇಡಿ ಎಂದಾಗಿದೆ. ದೇವರು ನಿಮ್ಮ ತಂದೆಯಾಗಿದ್ದಾರೆ ಆತನು ನಿಮ್ಮ ಅಗತ್ಯತೆಯನ್ನು ಪೂರೈಸುತ್ತಾನೆ. ಆತನು ನಿಮಗಾಗಿ ಶತ್ರುವನ್ನು ಜಯಿಸುತ್ತಾನೆ ಮತ್ತು ಇತರರನ್ನು ಆಶೀರ್ವದಿಸಲು ನಿಮಗೆ ಬೇಕಾದ ಎಲ್ಲವನ್ನು ಆತನು ನಿಮಗೆ ನೀಡುತ್ತಾನೆ. ನಾವು ದೇವರ ಮಹಿಮೆಗಾಗಿ ಬೇಡಿಕೊಳ್ಳುವಂತ ಸಂಗತಿಗಳನ್ನು ಆತನು ನಮಗೆ ಕೊಡುವನೆಂದು ವಿಶ್ವಾಸಿಸುತ್ತಾ ಪ್ರಾರ್ಥಿಸಿ ಮತ್ತು ನಂಬಿಕೆಯಿಂದ ಆತನ ಬಳಿಗೆ ಹೋಗಬೇಕು ಆಮೆನ್.