WFTW Body: 

ಯಾರೂ ಸಹ ದೇವರ ಕೃಪೆಯನ್ನು ಪಡೆಯದೆ ಹೊಸ ಒಡಂಬಡಿಕೆಯ ಆಜ್ಞೆಗಳಿಗೆ ವಿಧೇಯರಾಗಲಾರರು. ಕೆಲವರಲ್ಲಿ ಕೃಪೆಯನ್ನು ಪಡೆಯದೆ ಧರ್ಮಶಾಸ್ತ್ರದ ಹತ್ತು ಆಜ್ಞೆಗಳಲ್ಲಿ ಮೊದಲ ಒಂಭತ್ತನ್ನು ಪಾಲಿಸುವ ಸಾಮರ್ಥ್ಯ ಇರಬಹುದು. ಆದರೆ ದಶಾಜ್ಞೆಗಳಲ್ಲಿ ಹತ್ತನೆಯ ಆಜ್ಞೆ - "ಎಂದಿಗೂ ನಿನ್ನದ್ದಲ್ಲದ್ದನ್ನು ಮೋಹಿಸಬೇಡ" - ಇದನ್ನು ದೇವರ ಕೃಪೆಯಿಲ್ಲದೆ ಯಾರೂ ಪಾಲಿಸಲಾರರು. ಹಾಗೆಯೇ ಕೃಪೆಯಿಲ್ಲದೆ ಹೊಸ ಒಡಂಬಡಿಕೆಯ ಜೀವನದ ಉನ್ನತ ಮಟ್ಟಕ್ಕೆ (ಮತ್ತಾ. 5-7 ರಲ್ಲಿ ವಿವರಿಸಿರುವುದು) ಏರಲು ಯಾರಿಂದಲೂ ಸಾಧ್ಯವಿಲ್ಲ. ಮತ್ತು ದೇವರು ತನ್ನ ಕೃಪೆಯನ್ನು ದೀನರಿಗೆ ಮಾತ್ರ ಅನುಗ್ರಹಿಸುತ್ತಾರೆ (1 ಪೇತ್ರ. 5:5).

ದೀನತೆಯು ಅತ್ಯಂತ ಸುಲಭವಾಗಿ ನಕಲಿ ಮಾಡಲ್ಪಡಬಹುದಾದ ಸದ್ಗುಣಗಳಲ್ಲಿ ಒಂದಾಗಿದೆ. ನಿಜವಾದ ದೀನತೆಯು ಇತರರು ನಮ್ಮಲ್ಲಿ ಕಾಣುವ ವಿಷಯವಲ್ಲ. ಇದನ್ನು ದೇವರು ನಮ್ಮಲ್ಲಿ ನೋಡುತ್ತಾರೆ - ಮತ್ತು ಇದು ನಮ್ಮೊಳಗೆ ಇರುವುದಾಗಿದೆ. ಇದು ಯೇಸುವಿನ ಜೀವನದಲ್ಲಿ ಗರಿಷ್ಟ ಮಟ್ಟದಲ್ಲಿ ತೋರಿಸಲ್ಪಟ್ಟಿತು. ’ಫಿಲಿಪ್ಪಿಯವರಿಗೆ 2:5-8' ವಚನಗಳು, ದೇವಸ್ವರೂಪನಾಗಿದ್ದ ಯೇಸುವು ತನ್ನ ಹಕ್ಕು ಬಾಧ್ಯತೆಗಳನ್ನು ತ್ಯಜಿಸಿದನು ಮತ್ತು ಒಬ್ಬ ದಾಸನ ರೂಪವನ್ನು ಧರಿಸಿದನು, ಮತ್ತು ಮಾನವರ ಕೈಯಿಂದ ಶಿಲುಬೆಯ ಮರಣವನ್ನು ಅನುಭವಿಸುವಷ್ಟು ವಿಧೇಯನಾದನು, ಎಂದು ನಮಗೆ ತಿಳಿಸುತ್ತವೆ. ನಾವು ಆ ದೀನತೆಯ ಹಾದಿಯಲ್ಲಿ ಆತನನ್ನು ಅನುಸರಿಸಿ ನಡೆಯಬೇಕು.

ಯೇಸುವು ಮೂರು ಹಂತಗಳಲ್ಲಿ ತನ್ನನ್ನು ತಗ್ಗಿಸಿಕೊಂಡರು:
(ಅ) ಅವರು ಒಬ್ಬ ಮನುಷ್ಯರಾದರು.
(ಆ) ಅವರು ಒಬ್ಬ ಸೇವಕರಾದರು.
(ಇ) ಶಿಲುಬೆಯ ಮೇಲೆ, ಅವರು ಒಬ್ಬ ಅಪರಾಧಿಯೆಂದು ಪರಿಗಣಿಸಲ್ಪಡಲು ಸಿದ್ಧರಾಗಿದ್ದರು.

ಇದರಲ್ಲಿ ನಾವು ಕ್ರೈಸ್ತ ಜೀವನದ ಮೂರು ರಹಸ್ಯಗಳನ್ನು ನೋಡುತ್ತೇವೆ: ದೀನತೆ, ದೀನತೆ ಮತ್ತು ದೀನತೆ.

ಯೇಸುವು 33 ವರ್ಷಗಳು ಜೀವಿಸಿದ್ದನ್ನು ನೋಡಿದ ದೇವದೂತರು, ಅವರು ಅಷ್ಟು ದೀನತೆಯಿಂದ ಇತರರ ಸೇವೆ ಮಾಡುವುದನ್ನು, ಮತ್ತು ಬಾಧೆ, ನಿಂದೆ ಹಾಗೂ ನೋವುಗಳನ್ನು ತಾಳ್ಮೆಯಿಂದ ಸಹಿಸುವುದನ್ನು ನೋಡಿ ಆಶ್ಚರ್ಯಗೊಂಡಿರಬೇಕು. ಅವರು ವರ್ಷಾನುಗಟ್ಟಲೆ ಆತನನ್ನು ಪರಲೋಕದಲ್ಲಿ ಆರಾಧಿಸುವ ಅನುಭವವನ್ನು ಹೊಂದಿದ್ದರು. ಆದರೆ ಅವರು ಭೂಲೋಕದಲ್ಲಿ ಆತನ ನಡವಳಿಕೆಯನ್ನು ನೋಡಿದಾಗ, ಅವರು ದೇವರ ಸ್ವಭಾವದ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ಪಡೆದರು - ಅವರ ತಗ್ಗಿಸಿಕೊಳ್ಳುವಿಕೆ ಮತ್ತು ದೀನತೆ - ಯೇಸುವು ಪರಲೋಕದಲ್ಲಿದ್ದ ಅಷ್ಟು ವರ್ಷಗಳಲ್ಲಿ ಅವರು ಇದನ್ನು ನೋಡಿರಲಿಲ್ಲ ಮತ್ತು ಅರ್ಥಮಾಡಿಕೊಂಡಿರಲಿಲ್ಲ. ಈಗ ದೇವರು ಕ್ರೈಸ್ತಸಭೆಯಲ್ಲಿ ನಮ್ಮ ಮೂಲಕ ಕ್ರಿಸ್ತನ ಅದೇ ಆತ್ಮವನ್ನು ಪರಲೋಕದಲ್ಲಿರುವ ದೇವದೂತರಿಗೆ ತೋರಿಸಲು ಬಯಸುತ್ತಾರೆ (ಎಫೆ. 3:10 ರಲ್ಲಿ ಹೇಳಿರುವಂತೆ). ಈಗ ನಮ್ಮಲ್ಲಿ ಮತ್ತು ನಮ್ಮ ನಡತೆಯಲ್ಲಿ ದೇವದೂತರು ಏನನ್ನು ನೋಡುತ್ತಾರೆ? ನಮ್ಮ ನಡತೆಯು ದೇವರಿಗೆ ಮಹಿಮೆಯನ್ನು ತರುತ್ತದೋ?

ದೀನತೆಯು ಎಲ್ಲ ಸದ್ಗುಣಗಳಿಗಿಂತ ಮಿಗಿಲಾದದ್ದೆಂದು ನೆನಪಿನಲ್ಲಿ ಇಟ್ಟುಕೊಳ್ಳಿರಿ. ನಾವು ಏನಾಗಿದ್ದೇವೋ ಮತ್ತು ಏನನ್ನು ಹೊಂದಿದ್ದೇವೋ ಎಲ್ಲವೂ ದೇವರಿಂದ ಬಂದ ವರಗಳೆಂದು ದೀನತೆಯು ಒಪ್ಪಿಕೊಳ್ಳುತ್ತದೆ. ಎಲ್ಲಾ ಮನುಷ್ಯರನ್ನು, ವಿಶೇಷವಾಗಿ ಬಲಹೀನರು, ನಯ-ನಾಜೂಕು ಇಲ್ಲದವರು, ಬುದ್ಧಿಮಾಂದ್ಯರು ಮತ್ತು ಬಡವರು, ಇವರೆಲ್ಲರನ್ನು ಶ್ರೇಷ್ಠರು ಮತ್ತು ಅಮೂಲ್ಯರೆಂದು ಎಣಿಸುವುದಕ್ಕೆ ನಮಗೆ ದೀನತೆ ಬೇಕಾಗಿದೆ. "ಇಂತಹ ದೀನತೆಯ ಮಣ್ಣಿನಲ್ಲಿ ಮಾತ್ರ ದೇವರಾತ್ಮನ ಫಲವೂ, ಕ್ರಿಸ್ತನ ಸದ್ಗುಣಗಳೂ ವೃದ್ಧಿಯಾಗುತ್ತವೆ." ಆದುದರಿಂದ ಯಾವಾಗಲೂ ನೀವು ನಿಮ್ಮನ್ನು ನ್ಯಾಯವಿಚಾರಣೆ ಮಾಡಿಕೊಂಡು, ದೇವರಿಗೆ ಸಲ್ಲಬೇಕಾದ ಘನತೆ, ಶ್ರೇಷ್ಠತೆ, ಮಹಿಮೆಯನ್ನು ನೀವು ನಿಮಗೇ ತೆಗೆದುಕೊಳ್ಳುವಂಥಹ ಅತ್ಯಂತ ವಿಷಭರಿತ ಆಲೋಚನೆಯು ನಿಮ್ಮ ಹೃದಯವನ್ನು ಎಂದಿಗೂ ಪ್ರವೇಶಿಸದಂತೆ ಖಚಿತಪಡಿಸಿಕೊಂಡು ಜೀವಿಸಬೇಕು. ಯೇಸುವಿನ ದೀನತೆಯನ್ನು ಸದಾಕಾಲ ಧ್ಯಾನಿಸಿರಿ. ಇದು ನಾನು ನಿಮಗೆ ಕೊಡುವಂತ ಅತ್ಯಂತ ಪ್ರಮುಖ ಉಪದೇಶವಾಗಿದೆ.

ಯೇಸುವು ತನ್ನ ಎಪ್ಪತ್ತು ಮಂದಿ ಶಿಷ್ಯಂದಿರಿಗೆ, "ದೆವ್ವಗಳು ನಿಮಗೆ ಅಧೀನವಾಗಿವೆಯೆಂದು ಸಂತೋಷಪಡದೆ, ನಿಮ್ಮ ಹೆಸರುಗಳು ಪರಲೋಕದಲ್ಲಿ ಬರೆದಿರುತ್ತವೆ ಎಂದು ಸಂತೋಷಪಡಿರಿ," ಎಂಬುದಾಗಿ ಹೇಳಿದರು (ಲೂಕ. 10:20). ಈ ಕೆಳಗಿನ ಸಂಗತಿಗಳಿಗಾಗಿ ನಾವು ಸಂತೋಷಿಸುವುದು ಸರಿಯಲ್ಲ:
(ಅ) ನಾವು ಏನಾಗಿದ್ದೇವೋ ಅದಕ್ಕಾಗಿ;
(ಆ) ನಾವು ಮಾಡಿರುವ ಕಾರ್ಯಗಳಿಗಾಗಿ;ಮತ್ತು
(ಇ) ನಾವು ಏನು ಮಾಡಬಲ್ಲೆವೋ ಅದಕ್ಕಾಗಿ.

ಆದರೆ ಈ ಕೆಳಗಿನ ಸಂಗತಿಗಳಿಗಾಗಿ ನಾವು ಆನಂದಿಸಬೇಕು:
(ಅ) ಕರ್ತರು ಏನಾಗಿದ್ದಾರೋ ಅದಕ್ಕಾಗಿ;
(ಆ) ಕರ್ತರು ಮಾಡಿರುವ ಕಾರ್ಯಗಳಿಗಾಗಿ; ಮತ್ತು
(ಇ) ಕರ್ತರು ಏನು ಮಾಡಲಿದ್ದಾರೋ ಅದಕ್ಕಾಗಿ.

ನಾವು ಯಾವುದನ್ನು ಚೆನ್ನಾಗಿ ಮಾಡುತ್ತೇವೋ ಅದಕ್ಕಾಗಿ ಸಂತೋಷಿಸಿದರೆ, ನಾವು ನಮಗೇ ಮಹಿಮೆಯನ್ನು ಪಡೆಯುತ್ತೇವೆ, ಮತ್ತು ಇತರ ವಿಶ್ವಾಸಿಗಳಿಗಿಂತ ಶ್ರೇಷ್ಠರು ಎಂದು ಎಣಿಸಿಕೊಳ್ಳುತ್ತೇವೆ. ಇದೇ ’ಫರಿಸಾಯತನ’ವಾಗಿದೆ. ಇದರಿಂದ ನಾವು "ನಮ್ಮ ಕೈಗಳು ನಿರ್ಮಿಸಿದ ಸಂಗತಿಗಳಲ್ಲಿ ಉಲ್ಲಾಸಪಟ್ಟಂತಾಗುತ್ತದೆ" (ಅ.ಕೃ. 7:41) - ಆ ಕಾರ್ಯ ದೆವ್ವಗಳನ್ನು ಬಿಡಿಸುವುದು, ರೋಗಿಗಳನ್ನು ಗುಣಪಡಿಸುವುದು, ದೇವರ ವಾಕ್ಯವನ್ನು ಬೋಧಿಸುವುದು, ಲೇಖನವನ್ನು ಬರೆಯುವುದು, ಅತಿಥಿ-ಸತ್ಕಾರ ಮಾಡುವುದು, ರುಚಿಕರವಾದ ಅಡುಗೆಯನ್ನು ತಯಾರಿಸುವುದು, ವಾಹನವನ್ನು ಚೆನ್ನಾಗಿ ಓಡಿಸುವುದು, ಅಥವಾ ನಾವು ನಿಪುಣತೆಯಿಂದ ಮಾಡುವ ಯಾವುದೇ ಲೌಕಿಕ ಕಾರ್ಯ ಆಗಿರಬಹುದು. ನಾವು ನಮಗೇ ಮಹಿಮೆ ತಂದುಕೊಳ್ಳುವುದಕ್ಕೆ ಅನೇಕ ಮಾರ್ಗಗಳಿವೆ. ಆದರೆ ಇವೆಲ್ಲವೂ ’ವಿಗ್ರಹಾರಾಧನೆ’ಯಾಗಿದೆ. ಆದಾಗ್ಯೂ, ನಾವು ದೇವರು ಮಾಡಿದ ಕಾರ್ಯಗಳಲ್ಲಿ ಮಾತ್ರ ಸಂತೋಷಿಸಿದರೆ, ಅದು ನಮ್ಮನ್ನು ದೀನರನ್ನಾಗಿ ಇರಿಸುತ್ತದೆ, ಮತ್ತು ಆಗ ನಾವು ಇತರ ವಿಶ್ವಾಸಿಗಳಿಗೆ ನಾವು ಸಮನಾಗಿ ಇರುತ್ತೇವೆ, ಮತ್ತು ಹೀಗೆ ಕ್ರಿಸ್ತನ ದೇಹವನ್ನು ಕಟ್ಟಬಹುದಾಗಿದೆ.