"ನೀತಿಗಾಗಿ ಹಸಿದು ಬಾಯಾರುವವರು ಧನ್ಯರು; ಅವರು ತೃಪ್ತಿ ಹೊಂದುವರು" (ಮತ್ತಾ. 5:6). ಲೋಕದಲ್ಲಿ ಜನರಿಗೆ ಅನೇಕ ವಿಧವಾದ ಹಸಿವು ಮತ್ತು ಬಾಯಾರಿಕೆ ಇದೆ. ಲೋಕದ ಜನರು ಯಾವುದಕ್ಕಾಗಿ ಹಸಿದು ಬಾಯಾರುತ್ತಾರೆಂದು ನೀವು ನೋಡಿದರೆ, ಸಂಪತ್ತು, ಹಣಕಾಸು, ಆರಾಮದಾಯಕ ಜೀವನ, ಮನೆ ಮತ್ತು ಜಮೀನು, ಸಮಾಜದಲ್ಲಿ ಮಾನ್ಯತೆ, ನೌಕರಿಯಲ್ಲಿ ಬಡ್ತಿ, ರೂಪವನ್ನು ಸುಂದರಗೊಳಿಸುವುದು, ಮತ್ತು ಈ ಲೋಕದಲ್ಲಿ ತಮಗೆ ಗೌರವ, ಸುಖ-ಸೌಲಭ್ಯ ಮತ್ತು ಸಂತೋಷವನ್ನು ನೀಡುವ ಸಂಗತಿಗಳಿಗಾಗಿ ಅವರು ತವಕಿಸುತ್ತಾರೆ. ಅನೇಕ ಕ್ರೈಸ್ತರ ನಿಜಸ್ಥಿತಿಯು ಇದೇ ಆಗಿದೆ.
ಹೆಚ್ಚಿನ ಕ್ರೈಸ್ತರು, ತಾವು ಹೊಸದಾಗಿ ಹುಟ್ಟಿದ್ದೇವೆಂದು ಹೇಳಿಕೊಳ್ಳುವವರೂ ಸಹ, ಮೇಲೆ ಪ್ರಸ್ತಾಪಿಸಿದ ಸಂಗತಿಗಳಿಗಾಗಿ ತವಕಿಸುತ್ತಾರೆ. ಆದರೆ ದೈವಿಕ ಜೀವನಕ್ಕಾಗಿ - ಪಾಪದ ಮೇಲೆ ಜಯ ಗಳಿಸುವುದಕ್ಕಾಗಿ - ಹಸಿದು ಬಾಯಾರುವುದು ಎಷ್ಟು ಅಪರೂಪದ ಗುಣವೆಂದರೆ, "ಅದನ್ನು ಕಂಡುಹಿಡಿಯುವವರು ಸ್ವಲ್ಪ ಜನ" ಎಂದು ಯೇಸುವು ಹೇಳಿದ್ದನ್ನು ನಾನು ನಂಬುತ್ತೇನೆ. ಸಂಪೂರ್ಣವಾಗಿ ನೀತಿವಂತರಾಗಬೇಕು ಎನ್ನುವ ಸಂದೇಶದಲ್ಲಿ ಬಹಳ ಕಡಿಮೆ ಜನರು ಆಸಕ್ತಿ ಹೊಂದಿರುವುದನ್ನು ಕಂಡಾಗ ನನಗೆ ಆಶ್ಚರ್ಯ ಎನಿಸುವುದಿಲ್ಲ. ನಿಜ ಹೇಳಬೇಕೆಂದರೆ, "ಸಂಪೂರ್ಣ ನೀತಿವಂತಿಕೆ ಅಸಾಧ್ಯವಾದದ್ದು" ಎಂದು ಜನರು ಹೇಳುವಾಗಲೂ ನನಗೆ ಆಶ್ಚರ್ಯವಾಗುವುದಿಲ್ಲ. ಪರ್ವತ ಪ್ರಸಂಗದ ಮಟ್ಟವು ಅಸಾಧ್ಯವಾದದ್ದು ಮತ್ತು ಅದಕ್ಕೆ ತಕ್ಕಂತೆ ಯಾರೂ ಜೀವಿಸಲು ಸಾಧ್ಯವಿಲ್ಲವೆಂದು ಜನರು ಹೇಳುವಾಗ, ಲೌಕಿಕ ಕ್ರೈಸ್ತರಿಂದ ಅಥವಾ ಹೊಸದಾಗಿ ಹುಟ್ಟಿದ್ದೇವೆಂದು ಹೇಳಿಕೊಂಡು ಲೌಕಿಕ ಮನೋಭಾವವನ್ನು ಹೊಂದಿರುವ ಕ್ರೈಸ್ತರಿಂದ ನಾನು ನಿರೀಕ್ಷಿಸುವ ಉತ್ತರ ನಿಖರವಾಗಿ ಇದೇ ಆಗಿದೆ. ಪರ್ವತ ಪ್ರಸಂಗದಲ್ಲಿ ಯೇಸುವು ಕಲಿಸಿದ ಎಲ್ಲಾ ಸಂಗತಿಗಳನ್ನು ನಿರ್ಲಕ್ಷಿಸುವಂತ ಒಬ್ಬ ವ್ಯಕ್ತಿ ಹೊಸದಾಗಿ ಹುಟ್ಟಿದ್ದಾನೋ, ಇಲ್ಲವೋ, ಎಂದು ನಾನು ಪ್ರಶ್ನಿಸಬೇಕಾಗುತ್ತದೆ. ಅದಕ್ಕಾಗಿಯೇ "ಮತ್ತಾ. 28:20"ರಲ್ಲಿ ಯೇಸುವು, "ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಅವರಿಗೆ ಕಲಿಸಿರಿ," ಎಂದು ಹೇಳುವುದಕ್ಕೆ ಮೊದಲು, "ಅವರನ್ನು ಶಿಷ್ಯರನ್ನಾಗಿ ಮಾಡಿರಿ," ಎಂದು ಹೇಳಿದರು.
ಒಬ್ಬ ವ್ಯಕ್ತಿಯು ತಾನು ಕ್ರೈಸ್ತನೆಂದು ಹೇಳಿಕೊಂಡರೂ ಸಹ, ಆತನಲ್ಲಿ ಯೇಸುವಿನ ಎಲ್ಲಾ ಆಜ್ಞೆಗಳಿಗೆ ವಿಧೇಯನಾಗುವ ಆಸಕ್ತಿ ಇಲ್ಲವಾದರೆ, ಮತ್ತು ಕೇವಲ ಸ್ವರ್ಗಕ್ಕೆ ಹೋಗುವುದನ್ನು ಮಾತ್ರ ಆತನು ಬಯಸುವುದಾದರೆ, ಅಂತಹ ಪ್ರತಿಯೊಬ್ಬ ವ್ಯಕ್ತಿಯೂ ಕ್ರೈಸ್ತತ್ವದಿಂದ ಬಹಳ ದೂರವಿದ್ದಾನೆ. ಒಬ್ಬ ವ್ಯಕ್ತಿ ನಿಜವಾಗಿಯೂ ಶಿಷ್ಯನಾದಾಗ, ಅವನು ಯೇಸುವು ಏನು ಆಜ್ಞಾಪಿಸಿದ್ದಾರೆಂದು ತಿಳಿಯುವ ಆಸಕ್ತಿಯನ್ನು ಹೊಂದಿರುತ್ತಾನೆ. ಯೇಸುವಿನ ನಿಜವಾದ ಶಿಷ್ಯನ ಮನೋಭಾವ ಹೇಗಿರುತ್ತದೆಂದರೆ, "ನಾನು ಆತ್ಮದಲ್ಲಿ ಬಡವನಾಗಿರಬೇಕೆಂದು ಯೇಸುವು ಬಯಸಿದರೆ, ನಾನು ಅದರ ಅರ್ಥವೇನೆಂದು ಅರಿತುಕೊಳ್ಳಬೇಕು ಮತ್ತು ಅದನ್ನು ಪಾಲಿಸಬೇಕು. ನಾನು ನನ್ನ ಪಾಪಗಳಿಗಾಗಿ ದುಃಖಿಸಬೇಕೆಂದು ಅಥವಾ ಸೌಮ್ಯ ಸ್ವಭಾವವನ್ನು ಹೊಂದಬೇಕೆಂದು ಯೇಸುವಿನ ಇಚ್ಛೆಯಾದರೆ, ನಾನು ಅದನ್ನು ಪೂರೈಸುವುದನ್ನು ಕಲಿತುಕೊಳ್ಳಲು ಬಯಸುತ್ತೇನೆ. ನಾನು ನೀತಿಗಾಗಿ ಹಸಿದು ಬಾಯಾರಬೇಕೆಂದು ಆತನು ಬಯಸಿದರೆ, ನೀತಿಗಾಗಿ ಹಸಿದು, ಬಾಯಾರಲು ನಾನು ಇಷ್ಟಪಡುತ್ತೇನೆ."
"ಯೇಸುವು ಹಸಿದು ಬಾಯಾರಿರಿ, ಎಂದು ನಮಗೆ ತೋರಿಸಿಕೊಟ್ಟ ಮನೋಭಾವ ಯಾವ ವಿಧವಾದದ್ದು ಎಂದರೆ, ನಾನು ಯಾವುದೇ ಬೆಲೆಯನ್ನು ತೆತ್ತು ನೀತಿವಂತನಾಗಬೇಕು ಎಂಬ ತೀವ್ರ ಹಸಿವು ಮತ್ತು ಬಾಯಾರಿಕೆ ನನ್ನಲ್ಲಿ ಇರುತ್ತದೆಯೇ ಹೊರತು, ಅನುಕೂಲಕರವಾದ ವೇಳೆಯಲ್ಲಿ, ನನ್ನ ಇತರ ಯೋಜನೆಗಳಿಗೆ ಅಡ್ಡಿಯಾಗದೇ ಇದ್ದಾಗ ಮಾತ್ರ ನೀತಿವಂತನಾಗುತ್ತೇನೆ ಎಂಬ ಮನೋಭಾವವಲ್ಲ."
ನೀತಿಗಾಗಿ ಹಸಿದು, ಬಾಯಾರುವುದು ಎಂಬುದರ ಅರ್ಥವೇನು? ಉದಾಹರಣೆಗೆ, "ನೀನು ನೀರಿಗಾಗಿ ಸ್ವಲ್ಪ ಬಾಯಾರಿದ್ದೇನೆ" ಎಂದು ಹೇಳುವುದಾದರೆ, ಒಂದು ಲೋಟ ನೀರಿಗಾಗಿ ಎಷ್ಟು ಹಣವನ್ನು ಕೊಡಲು ನೀನು ಸಿದ್ಧನಿರುವೇ? ಒಂದು ಲೋಟ ನೀರಿಗೆ ಒಂದು ಲಕ್ಷ ರೂಪಾಯಿ ವೆಚ್ಚವಾದರೆ, ನೀನು ಏನೆಂದು ಹೇಳುವೆ? ಬಹುಶಃ ನೀನು, "ಇಲ್ಲ, ನಾನು 1,00,000 ರೂಪಾಯಿ ಕೊಡುವಷ್ಟು ಬಾಯಾರಿಲ್ಲ," ಎಂದು ಹೇಳುವೆ. ಆದರೆ ನೀನು ಏಳು ದಿನಗಳ ಕಾಲ ಮರುಭೂಮಿಯಲ್ಲಿ ಅಲೆದಾಡಿದ್ದಿ ಮತ್ತು ನಿನ್ನ ಇಡೀ ದೇಹವು ಒಣಗಿ, ಬಾಯಿಯೂ ಒಣಗಿ, ನೀನು ಬಾಯಾರಿಕೆಯಿಂದ ಸಾಯುವ ಹಂತದಲ್ಲಿರುವೆ ಎಂದು ಯೋಚಿಸು. ಹೌದು, ನೀನು 1,00,000 ರೂಪಾಯಿ ಕೊಟ್ಟು ಆ ಒಂದು ಲೋಟ ನೀರನ್ನು ಕೊಂಡುಕೊಳ್ಳಲು ಸಿದ್ಧನಾಗುವೆ. ಇದನ್ನೇ ಬಾಯಾರಿಕೆ ಎನ್ನುವುದು. ನೀನು ಹಸಿವಿನಿಂದ ಸಾಯುತ್ತಿದ್ದರೆ, ಆಹಾರಕ್ಕಾಗಿ ಯಾವುದೇ ಮೊತ್ತವನ್ನು ಪಾವತಿಸಲು ನೀನು ಸಿದ್ಧನಾಗುವೆ.
ಯೇಸುವು ಹಸಿದು ಬಾಯಾರಿರಿ, ಎಂದು ನಮಗೆ ತೋರಿಸಿಕೊಟ್ಟ ಮನೋಭಾವ ಯಾವ ವಿಧವಾದದ್ದು ಎಂದರೆ, ನಾನು ಯಾವುದೇ ಬೆಲೆಯನ್ನು ತೆತ್ತು ನೀತಿವಂತನಾಗಬೇಕು ಎಂಬ ತೀವ್ರ ಹಸಿವು ಮತ್ತು ಬಾಯಾರಿಕೆ ನನ್ನಲ್ಲಿ ಇರುತ್ತದೆಯೇ ಹೊರತು, ಅನುಕೂಲಕರವಾದ ವೇಳೆಯಲ್ಲಿ, ನನ್ನ ಇತರ ಯೋಜನೆಗಳಿಗೆ ಅಡ್ಡಿಯಾಗದೇ ಇದ್ದಾಗ ಮಾತ್ರ ನೀತಿವಂತನಾಗುತ್ತೇನೆ ಎಂಬ ಮನೋಭಾವವಲ್ಲ. ಅನೇಕ ಸಭೆಗಳಲ್ಲಿ ಸೇರಿ ಬರುವ ಅಧಿಕಾಂಶ ಜನರು, ಪರಿಶುದ್ಧತೆಯ ಬಗ್ಗೆ ಸಂದೇಶಗಳನ್ನು ಕೇಳಿಸಿಕೊಳ್ಳುವವರೂ ಸಹ, ತಮ್ಮ ಯೋಜನೆಗಳು ಕೆಡದಿದ್ದರೆ, ಅಥವಾ ತಾವು ಭವಿಷ್ಯಕ್ಕಾಗಿ ಇರಿಸಿಕೊಂಡಿರುವ ಗುರಿ ಅಥವಾ ಹೆಬ್ಬಯಕೆಗೆ ಅಡ್ಡಿಯಾಗದಿದ್ದರೆ, ಅಥವಾ ತಾವು ಬಯಸಿದ ಹುಡುಗ ಅಥವಾ ಹುಡುಗಿಯನ್ನು ಮದುವೆಯಾಗಲು ಅಡಚಣೆ ಇಲ್ಲವಾದರೆ ಪವಿತ್ರತೆಯನ್ನು ಇಷ್ಟಪಡುತ್ತಾರೆ. ಅವರಿಗೆ ನೀತಿವಂತಿಕೆ ಬೇಕಾಗಿದೆ, ಆದರೆ ಅದಕ್ಕಾಗಿ ಅತಿಯಾದ ಬೆಲೆಯನ್ನು ಕಟ್ಟಬೇಕಾಗಬಾರದು. ಆದ್ದರಿಂದ ನೀವು ಒಂದು ವೇಳೆ ನೀತಿಯನ್ನು ಅಥವಾ ನ್ಯಾಯಬದ್ಧವಾದ ಜೀವಿತವನ್ನು ಅವರ ಎದುರಿಗೆ ಇಟ್ಟರೆ, ಅವರ ಮೊದಲ ಪ್ರಶ್ನೆ, "ಇದಕ್ಕೆ ಎಷ್ಟು ಕ್ರಯ"? ಆಗ ನಿಮಗೆ ಗೊತ್ತಾಗುವುದೇ ನೆಂದರೆ, ಇವರಿಗೆ ನಿಜವಾಗಿ ಹಸಿವೆ ಇಲ್ಲವೆಂಬುದಾಗಿ. ಒಬ್ಬ ವ್ಯಕ್ತಿ ನಿಜವಾಗಿ ಹಸಿವು ಅಥವಾ ದಾಹದಿಂದ ಇದ್ದರೆ, ಕ್ರಯದ ಬಗ್ಗೆ ವಿಚಾರಿಸುವುದಿಲ್ಲ. "ನನಗೆ ಆ ನೀರನ್ನು ಕೊಡಿ! ನಾನು ಅದಕ್ಕೆ ಕಟ್ಟಬೇಕಾದ ಬೆಲೆಯನ್ನು ಕಟ್ಟುತ್ತೇನೆ! ನನ್ನಲ್ಲಿರುವ ಎಲ್ಲವನ್ನೂ ಕೊಡುತ್ತೇನೆ, ಯಾಕೆಂದರೆ ನಾನು ಸಾಯುತ್ತಿದ್ದೇನೆ!" ಎಂದು ಅವನು ಹೇಳುತ್ತಾನೆ.
ನಮ್ಮ ಪರಿಪೂರ್ಣ ಹೃದಯದಿಂದ ದೇವರನ್ನು ಹುಡುಕುವುದೆಂದರೆ ಇದೇ ಆಗಿದೆ. ಕೆಲವರು ದೇವರನ್ನು ಕಂಡುಕೊಂಡಂತೆ ಅನೇಕರು ಕಂಡುಕೊಳ್ಳದೇ ಇರುವುದಕ್ಕೆ ಅಥವಾ ತೃಪ್ತಿಕರವಾದ ಕ್ರಿಸ್ತೀಯ ಜೀವಿತವನ್ನು ಅವರು ಹೊಂದದಿರುವುದಕ್ಕೆ ಕಾರಣವೇನೆಂದರೆ (ಹೊಸದಾಗಿ ಹುಟ್ಟಿದ ಅನೇಕ ಕ್ರೈಸ್ತರ ಸ್ಥಿತಿ ಇದೇ ಆಗಿದೆ), ಅವರು ದೇವರನ್ನು ತಮ್ಮ ಪರಿಪೂರ್ಣ ಹೃದಯದಿಂದ ಹುಡುಕುತ್ತಿಲ್ಲ. ನಾನು 65 ವರ್ಷಗಳ ಕಾಲ ಕ್ರೈಸ್ತನಾಗಿ ಜೀವಿಸಿದ್ದೇನೆ, ಅನೇಕ ದೇಶಗಳಿಗೆ ಪ್ರಯಾಣಿಸಿದ್ದೇನೆ, ಆದರೂ ಯಥಾರ್ಥವಾಗಿ ಈ ಮುಂದಿನ ಮಾತನ್ನು ಹೇಳಬಲ್ಲ ಬಹಳ ಕೆಲವು ಕ್ರೈಸ್ತರನ್ನು ಮಾತ್ರ ಭೇಟಿಯಾಗಿದ್ದೇನೆ : "ನಾನು ಕರ್ತನಲ್ಲಿ ನಿಜವಾಗಿ ತೃಪ್ತನಾಗಿದ್ದೇನೆ, ನಾನು ನನ್ನ ಕ್ರಿಸ್ತೀಯ ಜೀವಿತದಲ್ಲಿ ತೃಪ್ತನಾಗಿದ್ದೇನೆ, ಕರ್ತನು ನನಗೆ ಕೊಟ್ಟಿರುವಂತ ಪ್ರಗತಿಯಲ್ಲಿ ನನಗೆ ತೃಪ್ತಿಯಿದೆ, ಮತ್ತು ನನ್ನ ಜೀವಿತವು ಹೇಗೆ ನಡೆಸಲ್ಪಟ್ಟಿದೆಯೋ ಅದಕ್ಕಾಗಿ ನಾನು ಕೃತಜ್ಞತೆ ಉಳ್ಳವನಾಗಿದ್ದೇನೆ. ನಾನು ಪ್ರತಿದಿನ ನನ್ನ ಜೀವನದ ಬಗ್ಗೆ ಉಲ್ಲಾಸಿಸುತ್ತೇನೆ!" ಕೇವಲ ಕೆಲವು ವಿಶ್ವಾಸಿಗಳು ಮಾತ್ರ ಯಥಾರ್ಥವಾಗಿ ಹೀಗೆ ಹೇಳಬಲ್ಲರು. ನಾನು ಕಂಡುಕೊಂಡಿರುವುದು ಏನೆಂದರೆ, ಹೆಚ್ಚಿನವರು ತಮ್ಮ ಕ್ರೈಸ್ತ ಜೀವಿತಕ್ಕೆ ಬೇಸರಗೊಂಡಿದ್ದಾರೆ. ಬಹುಶಃ ಅವರು ತಮ್ಮ ಮಾನಸಾಂತರದ ದಿನದಲ್ಲಿ ಉತ್ಸುಕರಾಗಿ ಇದ್ದಿರಬಹುದು, ಆದರೆ ಈಗ ಅವರು ತುಂಬಾ ಬೇಸರಗೊಂಡಿದ್ದಾರೆ. ಅವರಿಗೆ ಸತ್ಯವೇದ ಓದಿಕೊಳ್ಳುವುದಕ್ಕೆ ಸಮಯವಿರುವುದಿಲ್ಲ, ಆತ್ಮಿಕ ವಿಷಯಗಳಲ್ಲಿ ಆಸಕ್ತಿಯಿಲ್ಲ; ಬಹುಶಃ ಅವರು ಕೆಲವು ಚಟುವಟಿಕೆಗಳಲ್ಲಿ ತೊಡಗಿರಬಹುದು - ಸಭೆಗೆ ಹೋಗುವುದು, ಸಾಕ್ಷಿ ಹೇಳುವುದು ಮತ್ತು ಬಡವರಿಗೆ ಸಹಾಯ ಮಾಡುವುದು. ಆದರೆ ಯೇಸುವಿನ ಹೆಜ್ಜೆಯ ಜಾಡಿನಲ್ಲಿ ನಡೆಯುವುದರಲ್ಲಿ ಅವರು ಉತ್ಸುಕರಾಗಿಲ್ಲ.
ಈ ಸ್ಥಿತಿಗೆ ಕಾರಣವೇನೆಂದು ತಿಳಿದುಕೊಳ್ಳಲು ನಾವು ಮನುಷ್ಯರ ಮತ್ತು ದೇವರ ನಡುವಿನ ಒಂದು ನಿಯಮವನ್ನು ಅರ್ಥ ಮಾಡಿಕೊಳ್ಳಬೇಕಿದೆ. "ಯೆರೆಮೀಯನು 29:13"ರಲ್ಲಿ, ಕರ್ತನು ತಾನು ಆರಿಸಿಕೊಂಡ ಇಸ್ರಾಯೇಲ್ಯರಿಗೆ ಹೀಗೆ ಹೇಳುತ್ತಾನೆ, "ನೀವು ನನ್ನನ್ನು ಹುಡುಕುವಿರಿ, ಮತ್ತು ಮನಃಪೂರ್ವಕವಾಗಿ ಹುಡುಕಿದಾಗ ನೀವು ನನ್ನನ್ನು ಕಂಡುಕೊಳ್ಳುವಿರಿ." ಒಂದು ವೇಳೆ ನೀವು ಪೂರ್ಣ ಹೃದಯದಿಂದ ದೇವರನ್ನು ಹುಡುಕದೆ, ಅರೆಮನಸ್ಸು ಅಥವಾ ಹೃದಯದ ಮುಕ್ಕಾಲು ಭಾಗದಿಂದ ಹುಡುಕಿದರೆ ಏನಾಗುತ್ತದೆ? ನಿಶ್ಚಯವಾಗಿ ನೀವು ಒಂದು ಧಾರ್ಮಿಕ ಮನೋಭಾವವನ್ನು ಹೊಂದುವಿರಿ. ಹೌದು, ಹೆಸರಿಗೆ ನಿಮ್ಮಲ್ಲಿ ಕ್ರೈಸ್ತತ್ವ ಇರುತ್ತದೆ, ನೀವು ಅದರ ಬಾಹ್ಯಾಚಾರಗಳು ಮತ್ತು ಸಂಪ್ರದಾಯಗಳನ್ನು ಆಚರಿಸುತ್ತೀರಿ, ಆದರೆ ಕರ್ತನನ್ನು ತಿಳಿದಿರುವುದಿಲ್ಲ. ಯೇಸುವು ನಿಮ್ಮ ಆಪ್ತ ಮಿತ್ರನಾಗಿರುವುದಿಲ್ಲ. ಮತ್ತು ಇದರಿಂದಾಗಿ ನೀವು ಕ್ರೈಸ್ತ ಜೀವಿತದಲ್ಲಿ ಎಲ್ಲವನ್ನು ಕಳೆದುಕೊಳ್ಳುತ್ತೀರಿ. ನೀವು ಒಂದು ಕ್ರೈಸ್ತ ಹೆಸರನ್ನು ಹೊಂದಿರಬಹುದು ಮತ್ತು ಒಂದು ಕ್ರೈಸ್ತ ಸಭೆಯ ಸದಸ್ಯರು ಆಗಿರಬಹುದು, ಆದರೆ ನೀವು ಕರ್ತನನ್ನು ವೈಯಕ್ತಿಕವಾಗಿ ತಿಳಿದುಕೊಳ್ಳದಿದ್ದರೆ, ಕ್ರೈಸ್ತತ್ವದ ಮುಖ್ಯ ಅಂಶವನ್ನು ಕಳೆದುಕೊಂಡಿದ್ದೀರಿ. ಮತ್ತು ಇದಕ್ಕೆ ಕಾರಣ ನೀವು ದೇವರನ್ನು ಪೂರ್ಣ ಹೃದಯದಿಂದ ಹುಡುಕದಿರುವುದು ಆಗಿರಬಹುದು. ನೀವು ಲೋಕದಲ್ಲಿ ಬಹಳಷ್ಟು ಸಂಗತಿಗಳನ್ನು ಪೂರ್ಣ ಹೃದಯದಿಂದ ಹುಡುಕುತ್ತಿರಬಹುದು, ಆದರೆ ಕರ್ತನನ್ನು ಹುಡುಕುತ್ತಿಲ್ಲ.