ನಾವು ಭವಿಷ್ಯದ ಕುರಿತಾಗಿ ಯೋಚಿಸುವಾಗ, ಈ ವರೆಗಿನ ಎಲ್ಲಾ ವರ್ಷಗಳಿಗಿಂತ ಅದು ಬಹಳ ಹೆಚ್ಚು ಉತ್ತಮವಾಗಿರಬೇಕು ಎಂದು ಹಾರೈಸುತ್ತೇವೆ. ಆದರೆ ಇದಕ್ಕೆ ಇರುವಂಥದ್ದು ಒಂದೇ ಮಾರ್ಗ, ನಾವು ದೇವರ ವಾಗ್ದಾನಗಳನ್ನು ನಮ್ಮದಾಗಿಸಿಕೊಳ್ಳಬೇಕು. ಹಾಗಾಗಿ ನಾವು ನಮ್ಮ ನಂಬಿಕೆಯನ್ನು ಬಾಯಿಂದ ಅರಿಕೆ ಮಾಡಬೇಕು - ಆದರೆ ನಮ್ಮ ಅರಿಕೆಗಳು ದೇವರ ವಾಗ್ದಾನಗಳನ್ನು ಆಧರಿಸಿರಬೇಕು (ರೋಮಾ. 10:8,9ನ್ನು ಓದಿಕೊಳ್ಳಿರಿ).
ದೇವರು ಅಬ್ರಹಾಮನಿಗೆ ಒಂದು ವಾಗ್ದಾನವನ್ನು ನೀಡಿದಾಗ - ಅದು ನೆರವೇರುವುದು ಅಸಾಧ್ಯ (ಮಾನವ ದೃಷ್ಟಿಯಲ್ಲಿ) ಎಂಬಂತೆ ಕಾಣಿಸುತ್ತಿತ್ತು - ಆಗ ಅಬ್ರಹಾಮನ ಪ್ರತಿಕ್ರಿಯೆ ಏನಾಗಿತ್ತು? "ಅವನು ಹೆಚ್ಚುಕಡಿಮೆ ನೂರು ವರುಷದವನಾಗಿದ್ದು, ತನ್ನ ದೇಹವು ಆಗಲೇ ಮೃತಪ್ರಾಯವಾಯಿತೆಂದೂ, ಸಾರಳಿಗೆ ಗರ್ಭಕಾಲ ಕಳೆದುಹೋಯಿತೆಂದೂ ತೋರಿದರೂ, ಅವನ ನಂಬಿಕೆಯು ಕುಂದಲಿಲ್ಲ. ಅವನು ದೇವರು ಮಾಡಿದ ವಾಗ್ದಾನದ ವಿಷಯದಲ್ಲಿ ಚಂಚಲಚಿತ್ತನಾಗಲಿಲ್ಲ. ದೇವರನ್ನು ಘನಪಡಿಸುವವನಾಗಿ, ಅವರು ಕೊಟ್ಟಿದ್ದ ವಾಗ್ದಾನವನ್ನು ನೆರವೇರಿಸುವದಕ್ಕೆ ಸಮರ್ಥರೆಂದು ಸಂಪೂರ್ಣ ಭರವಸೆಯಿಟ್ಟು ದೃಢನಂಬಿಕೆಯುಳ್ಳವನಾದನು" (ರೋಮಾ. 4:19-21).
"ನಾವು ನಮ್ಮ ನಂಬಿಕೆ ಏನೆಂದು ಬಾಯಿಂದ ಅರಿಕೆ ಮಾಡಬೇಕು - ಆದಾಗ್ಯೂ ನಮ್ಮ ಅರಿಕೆಯು ದೇವರ ವಾಗ್ದಾನವನ್ನು ಆಧರಿಸಿರಬೇಕು"
ನಾವು ದೇವರು ನೀಡಿರುವ ವಾಗ್ದಾನಗಳಲ್ಲಿ ನಂಬಿಕೆಯಿಟ್ಟು, ಈ ಕೆಳಗಿನ ಎಂಟು ಅರಿಕೆಗಳನ್ನು ಮಾಡೋಣ. ಈ ಅಂಶಗಳನ್ನು ನಿಮಗೆ ನೀವೇ ನಿಮ್ಮ ಹೃದಯದಲ್ಲಿ ಆಗಾಗ್ಗೆ ಹೇಳಿಕೊಂಡು, ಅವನ್ನು ಸೈತಾನನಿಗೂ ಆಗಾಗ್ಗೆ ಹೇಳುವವರಾಗೋಣ:
1. ತಂದೆಯಾದ ದೇವರು ಯೇಸುವನ್ನು ಪ್ರೀತಿಸಿದಂತೆ ನನ್ನನ್ನೂ ಪ್ರೀತಿಸುತ್ತಾರೆ - ಹಾಗಾಗಿ ನಾನು ಯಾವಾಗಲೂ ಸಂತೋಷಿಸುತ್ತೇನೆ (ಯೋಹಾ. 17:23).
2. ದೇವರು ನನ್ನ ಎಲ್ಲಾ ಪಾಪಗಳನ್ನು ಕ್ಷಮಿಸಿದ್ದಾರೆ - ಹಾಗಾಗಿ ನಾನು ಎಂದಿಗೂ ಸ್ವ-ನಿಂದನೆಯ ಜೀವಿತವನ್ನು ಜೀವಿಸುವುದಿಲ್ಲ (1 ಯೋಹಾ. 1:9; ಇಬ್ರಿ. 8:12).
3. ದೇವರು ನನ್ನನ್ನು ತನ್ನ ಪವಿತ್ರಾತ್ಮನಿಂದ ತುಂಬಿಸುತ್ತಾರೆ - ಹಾಗಾಗಿ ನಾನು ಮಾಡಬೇಕಾದ ಪ್ರತಿಯೊಂದು ಕಾರ್ಯಕ್ಕಾಗಿ ನಾನು ಸಾಕಷ್ಟು ಬಲವುಳ್ಳವನಾಗಿದ್ದೇನೆ (ಲೂಕ. 11:13).
4. ದೇವರು ನನ್ನ ಎಲ್ಲಾ ಮೇರೆಗಳನ್ನು (ಇತಿ-ಮಿತಿಗಳನ್ನು) ನಿಶ್ಚಯಿಸಿದ್ದಾರೆ - ಹಾಗಾಗಿ ನಾನು ಯಾವಾಗಲೂ ಸಂತುಷ್ಟಿಯುಳ್ಳವನಾಗಿರುತ್ತೇನೆ (ಅ.ಕೃ. 17:26; ಇಬ್ರಿ. 13:5).
5. ದೇವರ ಆಜ್ಞೆಗಳೆಲ್ಲವೂ ನನ್ನ ಹಿತಕ್ಕಾಗಿಯೇ ಇವೆ - ಹಾಗಾಗಿ ನಾನು ಅವುಗಳಿಗೆ ವಿಧೇಯನಾಗಲು ಬಯಸುತ್ತೇನೆ (1 ಯೋಹಾ. 5:3; ಧರ್ಮೋ. 10:13).
6. ನಾನು ಎದುರಿಸುವ ಎಲ್ಲಾ ಜನರು ಮತ್ತು ಎಲ್ಲಾ ಪರಿಸ್ಥಿತಿಗಳನ್ನು ದೇವರು ತನ್ನ ಸಂಕಲ್ಪದಂತೆ ನಿಯಂತ್ರಿಸುತ್ತಾರೆ - ಹಾಗಾಗಿ ನಾನು ಯಾವಾಗಲೂ ಕೃತಜ್ಞತಾಸ್ತುತಿ ಮಾಡುತ್ತೇನೆ (ರೋಮಾ. 8:28).
7. ಯೇಸುವು ಸೈತಾನನನ್ನು ಸೋಲಿಸಿದ್ದಾರೆ ಮತ್ತು ನನ್ನನ್ನು ಸೈತಾನನ ದಾಸತ್ವದಿಂದ ಬಿಡಿಸಿದ್ದಾರೆ - ಹಾಗಾಗಿ ನಾನು ಭಯಪಡೆನು (ಇಬ್ರಿ. 2:14,15;13:6).
8. ದೇವರು ನನ್ನನ್ನು ಒಂದು ಆಶೀರ್ವಾದ ನಿಧಿಯಾಗಿಸಲು ಬಯಸುತ್ತಾರೆ - ಹಾಗಾಗಿ ನಾನು ಇತರರಿಗೆ ಒಂದು ಆಶೀರ್ವಾದ ನಿಧಿಯಾಗುತ್ತೇನೆ (ಆದಿ. 12:2; ಗಲಾ. 3:13).
"ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವುದು ಅಸಾಧ್ಯ" (ಇಬ್ರಿ. 11:6).