ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮನೆ ಸಭೆ
WFTW Body: 

ಅಪೊಸ್ತಲ ಪೌಲನು "ಭ್ರಮೆಯಲ್ಲದಂತ ಪವಿತ್ರತೆ" ಎಂದು ಹೇಳಿದ್ದಾನೆ (ಎಫೆಸದವರಿಗೆ 4:24 - J B Philips ಭಾಷಾಂತರ). ಧಾರ್ಮಿಕ ಬೋಧನೆಯನ್ನು ಅರ್ಥ ಮಾಡಿಕೊಳ್ಳುವುದರಿಂದ ಪವಿತ್ರತೆಯನ್ನು ಹೊಂದಲು ಆಗುವುದಿಲ್ಲ, ಆದರೆ ನಮ್ಮ ಮೂಲಕ ಯೇಸುವು ತನ್ನ ಜೀವಿತವನ್ನು ಜೀವಿಸುವುದರಿಂದ ಅದು ಸಾಧ್ಯವಾಗುತ್ತದೆ. ದೈವಿಕತೆಯ ರಹಸ್ಯ ಎಂಬುದಾಗಿ 1 ತಿಮೊಥೆಯನಿಗೆ 3:16'ರಲ್ಲಿ ಹೇಳಲ್ಪಟ್ಟದ್ದು "ಯೇಸುವು ಶರೀರಧಾರಿಯಾಗಿ ಪ್ರತ್ಯಕ್ಷನಾದನು" ಎಂಬ ಬೋಧನೆಯಲ್ಲ, ಆದರೆ ಯೇಸುವೇ ನಮ್ಮೊಳಗೆ ಸ್ವತಃ ಜೀವಿಸುತ್ತಾನೆ ಎಂಬ ಅಂಶವಾಗಿದೆ. ನಾವು ಯೇಸುವನ್ನು ದೃಷ್ಟಿಸುವುದರ ಮೂಲಕ ಯೇಸುವಿನ ಸಾರೂಪ್ಯಕ್ಕೆ ಬದಲಾಗುತ್ತೇವೆ ಮತ್ತು ಯಾವುದೇ ಧಾರ್ಮಿಕ ಬೋಧನೆಯ ಮೂಲಕವಲ್ಲ (2 ಕೊರಿಂಥದವರಿಗೆ 3:18). ಇದನ್ನು ನಿಮ್ಮ ಜೀವಮಾನವಿಡೀ ನೆನಪಿನಲ್ಲಿ ಇಟ್ಟುಕೊಳ್ಳಿರಿ.

ಪ್ರತಿಯೊಂದು ಧಾರ್ಮಿಕ ಬೋಧನೆಯು ಈ ಕೆಳಗಿನ ಎರಡು ಸಂದರ್ಭಗಳಲ್ಲಿ ನಿಮ್ಮನ್ನು ದಾರಿ ತಪ್ಪಿಸಬಹುದು:

(1) ನೀವು ನಿಮ್ಮ ದೃಷ್ಟಿಯನ್ನು ಸ್ವತಃ ಕರ್ತನ ಮೇಲೆ ಇರಿಸದಿದ್ದರೆ - ಮತ್ತು
(2) ಜನರು ಯಾವ ಕ್ರೈಸ್ತ ಪಂಗಡಕ್ಕೆ ಸೇರಿದ್ದರೂ, ಮತ್ತು ಯಾವ ಧಾರ್ಮಿಕ ಬೋಧನೆಯನ್ನು ಹೊಂದಿದ್ದರೂ, ನೀವು ಯೇಸುವನ್ನು ಪ್ರೀತಿಸುವ ಪ್ರತಿಯೊಬ್ಬನನ್ನು ಪ್ರೀತಿಸದಿದ್ದರೆ.

ಯೇಸುವು ಕ್ರೈಸ್ತ ಸಭೆಗೆ ತಾನೇ ತಲೆಯಾಗಿದ್ದಾನೆ, ಮತ್ತು ಸಭೆಯು ಆತನ ದೇಹವಾಗಿರಬೇಕು. ಆದರೆ ಒಂದು ಧಾರ್ಮಿಕ ಬೋಧನೆಯು ಸಭೆಗೆ ತಲೆಯಾದರೆ, ಆಗ ಜನರು ಫರಿಸಾಯರಾಗುತ್ತಾರೆ - ಮತ್ತು ಆ ಧಾರ್ಮಿಕ ಬೋಧನೆಯು ಹೆಚ್ಚು ಪರಿಶುದ್ಧವಾದಷ್ಟು, ಅಲ್ಲಿ ದೊಡ್ಡ ಫರಿಸಾಯರು ಹುಟ್ಟಿಕೊಳ್ಳುತ್ತಾರೆ! ಸ್ತೋತ್ರಗೀತೆಯ ಒಂದು ಸಾಲನ್ನು ನೆನಪಿಸಿಕೊಳ್ಳಿರಿ: "ಹಿಂದೊಮ್ಮೆ ಆಶೀರ್ವಾದ ಬೇಕಾಗಿತ್ತು, ಈಗ ಕರ್ತನು ಬೇಕಾಗಿದ್ದಾನೆ".
===================
"ಸಭೆಯು ಒಂದು ಆಸ್ಪತ್ರೆಯಂತಿದೆ, ಅಲ್ಲಿ ಬಹಳ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳು ಸ್ವಾಗತಿಸಲ್ಪಡುತ್ತಾರೆ. ಅವರೆಲ್ಲರೂ ಗುಣಹೊಂದಬಹುದು. ಯಾವ ಸ್ತ್ರೀ ಅಥವಾ ಪುರುಷರಿಗೂ ತಾವು ಸಹಾಯ ಪಡೆಯಲಾರದ ದರಿದ್ರರೆಂಬ ಭಾವನೆ ಇರಬೇಕಿಲ್ಲ."
===================

ನಾವು ಯೋಹಾನನು 8:1-12'ರಲ್ಲಿ ನೋಡುವಂತೆ, ಯೇಸುವು ಧಾರ್ಮಿಕ ಫರಿಸಾಯರ ವಿರುದ್ಧವಾಗಿ, ಪಶ್ಚಾತ್ತಾಪ ಪಟ್ಟಿದ್ದ ವ್ಯಭಿಚಾರಿ ಸ್ತ್ರೀಯ ಪರವಾಗಿ ಇದ್ದರು. ವಿಶೇಷವಾಗಿ ಈ ರೀತಿಯ ಸಂದರ್ಭಗಳಲ್ಲಿ ನಾವು ಒಂದು ಕ್ರೈಸ್ತಸಭೆಯಾಗಿ ಪ್ರಸ್ತುತ ಪಡಿಸುವ ಚಿತ್ರಣವು ಯೇಸುವು ತೋರಿಸಿದ ತಂದೆಯಾದ ದೇವರ ಚಿತ್ರಣಕ್ಕೆ ಹೋಲುವಂತದ್ದು ಆಗಿರಬೇಕು. ಯೇಸುವು ಭೂಲೋಕದಲ್ಲಿ ಅತ್ಯಂತ ಉನ್ನತ ಗುಣಮಟ್ಟದ ಪರಿಶುದ್ಧತೆಯನ್ನು ಬೋಧಿಸಿದರು, ಆದಾಗ್ಯೂ ಆತನು ಅತಿ ದೊಡ್ಡ ಪಾಪಿಗಳೊಂದಿಗೆ ಬೆರೆತನು (ಉದಾಹರಣೆಗೆ, ಮಗ್ದಲದ ಮರಿಯಳು - ಮರಣದಿಂದ ಎದ್ದು ಬಂದ ಕರ್ತನನ್ನು ಮೊಟ್ಟ ಮೊದಲಾಗಿ ನೋಡುವ ಭಾಗ್ಯ ಹೊಂದಿದಳು). ಆತನು ಎಂದಿಗೂ ಅಂತಹ ಪಾಪಿಗಳನ್ನು ಟೀಕಿಸಲಿಲ್ಲ ಅಥವಾ ಅವರ ಹಿಂದಿನ ಜೀವಿತವನ್ನು ಅವರಿಗೆ ನೆನಪಿಸಲಿಲ್ಲ. ಒಂದು ಕ್ರೈಸ್ತಸಭೆಯಾಗಿ ನಮಗೂ ಇದೇ ಕರೆಯನ್ನು ಕೊಡಲಾಗಿದೆ - ಯೇಸುವು ಬೋಧಿಸಿದ ಪರಿಶುದ್ಧತೆಯ ಗುಣಮಟ್ಟವನ್ನು ಬೋಧಿಸುವುದು, ಆದಾಗ್ಯೂ ದೊಡ್ಡ ಪಾಪಿಗಳು ಮತ್ತು ಹಿಂಜಾರಿದ ಜನರನ್ನು ತೆರೆದ ಹೃದಯದಿಂದ ಬರಮಾಡಿಕೊಂಡು, ಅವರನ್ನು ಯೇಸುವಿನ ಕಡೆಗೆ ಕರೆದೊಯ್ಯುವುದು.

ನಮ್ಮ ಸಭೆಯು ಒಂದು ಆಸ್ಪತ್ರೆಯಂತಿದೆ; ಅಲ್ಲಿ ಬಹಳ ಹದಗೆಟ್ಟ ಸ್ಥಿತಿಯಲ್ಲಿರುವ ರೋಗಿಗಳು ಸ್ವಾಗತಿಸಲ್ಪಡುತ್ತಾರೆ. ಅವರೆಲ್ಲರೂ ಗುಣಹೊಂದಬಹುದು. ಯಾವ ಸ್ತ್ರೀ ಅಥವಾ ಪುರುಷರಿಗೂ ತಾವು ಸಹಾಯ ಪಡೆಯಲಾರದ ದರಿದ್ರರೆಂಬ ಭಾವನೆ ಉಂಟಾಗಬೇಕಿಲ್ಲ. ಕೆಲವು ಸಭೆಗಳು ಶ್ರೀಮಂತರು ಮತ್ತು ತಮ್ಮನ್ನು ತಾವೇ ಮೆಚ್ಚಿಕೊಳ್ಳುವ ಜನರು ಒಟ್ಟಾಗಿ ಸೇರುವ ಸಂಘಗಳಂತೆ ಇರುತ್ತವೆ. ಆದರೆ ನಾವು ಅತಿ ಕೆಟ್ಟ ಪಾಪಿಗಳಿಗಾಗಿ ಒಂದು ಆಸ್ಪತ್ರೆಯಂತಿರಲು ಬಯಸುತ್ತೇವೆ.

ಮೊದಲು ದೇವರ ರಾಜ್ಯವನ್ನು ಮತ್ತು ಅವರ ನೀತಿಯನ್ನು ಎಲ್ಲಾ ವೇಳೆಯಲ್ಲಿ ಹುಡುಕಿರಿ. ಆಗ ನೀವು ಕೈ ಹಾಕಿದ್ದೆಲ್ಲವೂ ಸಫಲವಾಗುವುದು ಮತ್ತು ದೇವರು ನಿಮ್ಮ ಪರವಾಗಿ ಒಬ್ಬ ಬಲಶಾಲಿಯಾದ ಶೂರನಾಗಿರುತ್ತಾರೆ (ಯೆರೆಮೀಯನು 20:11). ನಾನು ನನ್ನ ಇಡೀ ಜೀವಿತದಲ್ಲಿ ಇದನ್ನೇ ಅನುಭವಿಸಿದ್ದೇನೆ.

"ದೇವರ ರಾಜ್ಯವನ್ನು ಹುಡುಕುವುದು" ಎಂದರೆ ಮೂಲತಃ ಸುವಾರ್ತೆಯನ್ನು ಸಾರುವುದು ಅಥವಾ ಧಾರ್ಮಿಕ ಕಾರ್ಯಕರ್ತರಾಗುವುದು ಎಂಬ ಅರ್ಥವಲ್ಲ. ಅದರ ಅರ್ಥ, ಹಣದ ಆಸೆ, ಲೌಕಿಕ ಸುಖಭೋಗ ಮತ್ತು ಮಾನವನಿಂದ ಸಿಗುವ ಗೌರವಕ್ಕಿಂತ ಹೆಚ್ಚಾಗಿ, ದೇವರನ್ನು ನಿಮ್ಮ ಜೀವಿತದ ಒಡೆಯನಾಗಿ ಮಾಡುವುದು, ಯಾವಾಗಲೂ ದೇವರ ಅಧಿಕಾರಕ್ಕೆ ಒಳಪಡುವುದು, ಮತ್ತು ದೇವರ ಪರಲೋಕದ ಮೌಲ್ಯಗಳಿಗೆ ಪ್ರಾಮುಖ್ಯತೆ ನೀಡುವುದಾಗಿದೆ.

ಮೊದಲು ದೇವರ ನೀತಿಯನ್ನು ಹುಡುಕುವುದು ಎಂದರೆ, ನಿಮ್ಮ ಖಾಸಗಿ ಜೀವಿತ ಹಾಗೂ ನಿಮ್ಮ ಹೊರಗಿನ ನಡವಳಿಕೆಯ ಪ್ರತಿಯೊಂದು ವಿಷಯದಲ್ಲಿ ಅವರ ದೈವಿಕ ಸ್ವಭಾವವು ಪ್ರಕಟಗೊಳ್ಳಬೇಕೆಂದು ಹಂಬಲಿಸುವುದಾಗಿದೆ.

ಈ ಸತ್ಯಾಂಶವು ಜೀವನದ ಪ್ರತಿಯೊಂದು ದಿನವೂ ನಿಮ್ಮನ್ನು ಪ್ರೇರೇಪಿಸಲಿ. ಮತ್ತು ನಿಮಗೆ ಮಕ್ಕಳು ಹುಟ್ಟುವಾಗ, ನೀವು ನಿಮ್ಮ ಮಕ್ಕಳಿಗೂ ಈ ಸತ್ಯಾಂಶವನ್ನು ಕಲಿಸಿ ಕೊಡಬೇಕು, ಮತ್ತು ಆ ಮೂಲಕ ಅವರು ತಮ್ಮ ಜೀವನದಲ್ಲೂ ಇದೇ ಫಲವನ್ನು ಹೊಂದಲು ಸಾಧ್ಯವಾಗುತ್ತದೆ. ಈ ರೀತಿಯಾಗಿ ಕರ್ತರು ಹಿಂದಿರುಗುವ ತನಕ ತಲೆಮಾರಿನಿಂದ ತಲೆಮಾರಿಗೆ ಅವರಿಗೆ ಈ ಲೋಕದಲ್ಲಿ ಒಂದು ಸಾಕ್ಷಿ ಇರುತ್ತದೆ.