WFTW Body: 

ಇಬ್ರಿ. 4:13ರಲ್ಲಿ ಈ ರೀತಿಯಾಗಿ ಬರೆಯಲಾಗಿದೆ, "ನಾವು ಯಾವಾತನಿಗೆ ಲೆಕ್ಕ ಒಪ್ಪಿಸ ಬೇಕಾಗಿದೆಯೋ, ಆತನ ದೃಷ್ಟಿಗೆ ಸಮಸ್ತವೂ ಮುಚ್ಚುಮರೆಯಿಲ್ಲದ್ದಾಗಿಯೂ ಬೈಲಾದದ್ದಾಗಿಯೂ ಇದೆ. ಆತನ ಸನ್ನಿಧಿಯಲ್ಲಿ ಅಗೋಚರವಾಗಿರುವ ಸೃಷ್ಟಿಯು ಒಂದೂ ಇಲ್ಲ".

"ನಾವು ಯಾವಾತನಿಗೆ ಲೆಕ್ಕ ಒಪ್ಪಿಸ ಬೇಕಾಗಿದೆಯೋ," ಎಂಬ ಬಹಳ ಸುಂದರವಾದ ಒಂದು ವಾಕ್ಯಭಾಗ ಇಲ್ಲಿ ಕಂಡುಬರುತ್ತದೆ. ಇದರ ಅರ್ಥವೇನೆಂದರೆ, ಮಾನವರಾದ ನಾವು ಸಕಲ ಸೃಷ್ಟಿಯಲ್ಲಿ ಕೇವಲ ಒಬ್ಬ ವ್ಯಕ್ತಿಗೆ ಉತ್ತರ ಕೊಡಬೇಕಾಗಿದೆ - ಅದು ಸ್ವತಃ ದೇವರಿಗೆ ಮಾತ್ರ. ನೀವು ಈ ಒಂದು ಸತ್ಯತೆಯನ್ನು ಗುರುತಿಸಿಕೊಂಡು ಜೀವಿಸಿದರೆ, ನಿಮ್ಮೊಳಗೆ ದೈವಭಕ್ತಿಯು ಹೆಚ್ಚುತ್ತಾ ಹೋಗುತ್ತದೆ. ಆದರೆ ನೀವು ಯಾವಾಗಲೂ ನಿಮ್ಮ ಕುರಿತಾಗಿ ಇತರರ ಅಭಿಪ್ರಾಯ ಏನಾಗಿದೆ ಎಂಬುದರ ಬಗ್ಗೆಯೇ ಯೋಚಿಸುತ್ತಿದ್ದರೆ, ನೀವು ಅವರ ಗುಲಾಮರಾಗುತ್ತೀರಿ.

ನೀವು ದೇವರ ಸೇವಕರಾಗಲು ಬಯಸಿದರೆ, ಯಾವಾಗಲೂ ತಿಳಿದಿರಬೇಕಾದ ಅಂಶ ಇದು: "ನಾವು ದೇವರಿಗೆ ಮಾತ್ರ ಉತ್ತರ ಕೊಡಬೇಕಾಗಿದೆ". ನಿಮ್ಮನ್ನು ಹತ್ತು ಸಾವಿರ ಜನರು ಒಳ್ಳೆಯ ದೈವಭಕ್ತನೆಂದು ಕರೆದರೆ ನೀವು ದೈವಭಕ್ತರಾಗುವುದಿಲ್ಲ. ಅದೇ ರೀತಿ, ಹತ್ತು ಸಾವಿರ ಜನರು ನಿಮ್ಮನ್ನು ದುಷ್ಟರೆಂದು ಕರೆದರೆ, ನೀವು ದುಷ್ಟರಾಗುವುದೂ ಇಲ್ಲ.

ಜನರಿಂದ ಸಿಗುವ ಪ್ರಮಾಣ ಪತ್ರಕ್ಕೆ ಯಾವ ಬೆಲೆಯೂ ಇಲ್ಲ. ನೀವು ಅದನ್ನು ನೇರವಾಗಿ ಕಸದ ತೊಟ್ಟಿಗೆ ಹಾಕಿರಿ. ನಿಮ್ಮ ಖಾಸಗಿ ಜೀವನದ ಬಗ್ಗೆ, ನಿಮ್ಮ ಆಲೋಚನೆಗಳು ಮತ್ತು ನಿಮ್ಮ ಹಣಕಾಸಿನ ವ್ಯವಹಾರಗಳು, ಇತ್ಯಾದಿಗಳ ಬಗ್ಗೆ, ಇತರ ಜನರಿಗೆ ಬಹಳ ಸ್ವಲ್ಪ ತಿಳುವಳಿಕೆ ಇದೆ. ನಿಮ್ಮ ಖಾಸಗಿ ಜೀವನದ ಬಗ್ಗೆ ಅವರಿಗೆ ಬಹುಶ: 1% ತಿಳುವಳಿಕೆ ಇರುತ್ತದೆ - ಮತ್ತು ನಿಮ್ಮ ಬಗ್ಗೆ ಅವರ ಅಭಿಪ್ರಾಯವು ಆ 1% ತಿಳುವಳಿಕೆಯ ಮೇಲೆ ಆಧಾರಿತವಾಗಿದೆ. ಹಾಗಾಗಿ ಅವರ ಅಭಿಪ್ರಾಯಗಳಿಗೆ - ಅವು ಒಳ್ಳೆಯದು ಅಥವಾ ಕೆಟ್ಟದ್ದೇ ಆಗಿದ್ದರೂ - ಯಾವ ಬೆಲೆಯೂ ಇರುವುದಿಲ್ಲ. ಇಂತಹ ಒಳ್ಳೆಯ ಮತ್ತು ಕೆಟ್ಟ ಅಭಿಪ್ರಾಯಗಳೆಲ್ಲವೂ ಸಮನಾಗಿ ಕಸದ ಬುಟ್ಟಿಗೆ ಸೇರಬೇಕಾದವುಗಳು ಆಗಿವೆ. ಅವುಗಳನ್ನು ಆ ಜಾಗಕ್ಕೆ ಒಗೆಯಿರಿ. ನಾನು ಹಲವಾರು ವರ್ಷಗಳಿಂದ ಇದನ್ನೇ ಮಾಡುತ್ತಾ ಬಂದಿದ್ದೇನೆ. ಹಾಗೆ ಮಾಡುವುದರ ಮೂಲಕ ನಾನು ದೇವರ ಸೇವೆ ಮಾಡಲು ಸ್ವತಂತ್ರನಾಗಿದ್ದೇನೆ.

ನೀವು ಬಿಡುಗಡೆ ಹೊಂದಿ ದೇವರ ಸೇವೆ ಮಾಡಬೇಕೆಂದು ಬಯಸುವುದಾದರೆ ಹೀಗೆ ಪ್ರಾರ್ಥಿಸಿರಿ, "ಕರ್ತನೇ, ನಾನು ಕೇವಲ ನಿಮಗೆ ಲೆಕ್ಕ ಒಪ್ಪಿಸಬೇಕಿದೆ. ನಾನು ದಿನನಿತ್ಯವೂ ನಿಮ್ಮ ಮುಂದೆ ನಿಂತಿರಲು ಬಯಸುತ್ತೇನೆ. ನಿಮ್ಮ ಕಣ್ಣುಗಳಿಗೆ ಗೋಚರವಾಗದ್ದು ಯಾವುದೂ ಇಲ್ಲ. ನನ್ನ ಜೀವನದ ಎಲ್ಲಾ ವಿಷಯಗಳು ನಿಮ್ಮ ಮುಂದೆ ತೆರೆದು ಮಂಡಿಸಲ್ಪಟ್ಟಿವೆ. ನಾನು ಒಳ್ಳೆಯ ಭಕ್ತನೆಂದು ಜನರನ್ನು ಮರುಳು ಮಾಡಬಹುದು, ಆದರೆ ನಾನು ನಿಮ್ಮನ್ನು ಮಂಕು ಮಾಡಲಾರೆ." ನೀವು ಹೀಗೆ ಜೀವಿಸುವಾಗ, ನಿಮ್ಮ ಜೀವನವು ಸುಧಾರಣೆಯಾಗುವುದನ್ನು ಕಾಣುವಿರಿ. ನೀವು ಈ ರೀತಿಯಾಗಿ ಹೊಸ-ಒಡಂಬಡಿಕೆಯ ಜೀವಿತವನ್ನು ಪ್ರವೇಶಿಸುತ್ತೀರಿ.