WFTW Body: 

ಯಾಕೋಬನು ದೇವರನ್ನು ಎರಡು ಬಾರಿ ಭೇಟಿ ಮಾಡಿದನು - ಒಂದು ಸಲ ಬೇತೇಲ್ನಕಲ್ಲಿ (ಆದಿಕಾಂಡ 28) ಮತ್ತು ಇನ್ನೊಂದು ಸಲ ಪೆನೀಯೇಲ್ನಂಲ್ಲಿ (ಆದಿಕಾಂಡ 32).

ಬೇತೇಲ್ ಎಂದರೆ "ದೇವರ ಮನೆ" ಮತ್ತು ಪೆನೀಯೇಲ್‍ ಎಂದರೆ "ದೇವರ ಮುಖ" ಎಂಬ ಅರ್ಥವಿದೆ. ನಾವೆಲ್ಲರೂ ದೇವರ ಕ್ರೈಸ್ತಸಭೆಗೆ ಹೋಗುವುದು ಮಾತ್ರವಲ್ಲದೆ, ಅಲ್ಲಿ ದೇವರ ಮುಖವನ್ನು ನೋಡಬೇಕಾಗಿದೆ. ಬೇತೇಲ್ ನಲ್ಲಿ "ಸೂರ್ಯನು ಮುಳುಗಿದನು" ಎಂದು ಬರೆಯಲ್ಪಟ್ಟಿದೆ (ಆದಿ. 28:11) - ಇದು ಕೇವಲ ಭೌಗೋಳಕ್ಕೆ ಸಂಬಂಧಿಸಿದ ಒಂದು ವಾಸ್ತವಾಂಶವಾಗಿದ್ದರೂ, ಯಾಕೋಬನ ಜೀವನದಲ್ಲಿ ಪ್ರಸ್ತುತ ನಡೆಯುತ್ತಿದ್ದ ಸಂಗತಿಗಳನ್ನು ಸೂಚಿಸುತ್ತದೆ, ಏಕೆಂದರೆ ಮುಂದಿನ 20 ವರ್ಷಗಳು ಆತನ ಜೀವಿತದಲ್ಲಿ ಗಾಢಾಂಧಕಾರದ ಅವಧಿಯಾಗಿತ್ತು. ಆ ಮೇಲೆ ಪೆನೀಯೇಲ್ ನಲ್ಲಿ "ಸೂರ್ಯೋದಯವಾಯಿತು" ಎಂದು ಹೇಳಲಾಗಿದೆ - ಇದು ಸಹ ಭೌಗೋಳಕ್ಕೆ ಸಂಬಂಧಿತ ಅಂಶವಾಗಿತ್ತು, ಆದರೆ ಯಾಕೋಬನೂ ಸಹ ಕೊನೆಗೆ ದೇವರ ಬೆಳಕಿನ ಕೆಳಗೆ ಬಂದು ಸೇರಿದ್ದನು.

ಯಾಕೋಬನು ಬೇತೇಲ್ ನಲ್ಲಿ ಕಂಡ ಕನಸಿನಲ್ಲಿ, ನೆಲದ ಮೇಲೆ ಇಟ್ಟಿದ್ದ ಒಂದು ಏಣಿಯ ತುದಿಯು ಆಕಾಶವನ್ನು ತಲಪಿತ್ತು. ಯೋಹಾನನು 1:51ರಲ್ಲಿ, ಯೇಸುವು ಆ ಏಣಿ ಸ್ವತಃ ತನಗೆ ಅನ್ವಯಿಸುತ್ತದೆಂದು ಹೇಳಿದರು - ತಾನು ಭೂಲೋಕದಿಂದ ಪರಲೋಕಕ್ಕೆ ಏರುವ ದಾರಿಯಾಗಿದ್ದೇನೆಂದು ವಿವರಿಸಿದರು. ಹಾಗಾಗಿ ವಾಸ್ತವವಾಗಿ ಯಾಕೋಬನ ಕನಸು, ಯೇಸುವು ಪರಲೋಕಕ್ಕೆ ಹೋಗುವ ದಾರಿಯನ್ನು ತೆರೆಯುವುದರ ಒಂದು ಪ್ರವಾದನಾ ದರ್ಶನವಾಗಿತ್ತು. ಆ ಮೇಲೆ ಕರ್ತರು ಯಾಕೋಬನಿಗೆ ಆ ಕನಸಿನಲ್ಲಿ ಅನೇಕ ಸಂಗತಿಗಳನ್ನು ವಾಗ್ದಾನ ಮಾಡಿದರು. ಆದರೆ ಯಾಕೋಬನ ದೃಷ್ಟಿ ಎಷ್ಟು ಲೌಕಿಕವಾಗಿತ್ತು ಎಂದರೆ, ಆತನು ಕೇವಲ ಲೌಕಿಕ ಸುರಕ್ಷತೆ, ದೈಹಿಕ ಆರೋಗ್ಯ ಮತ್ತು ಹಣಕಾಸಿನ ವಿಷಯದಲ್ಲಿ ಸುಭದ್ರತೆ ಇವುಗಳ ಕುರಿತಾಗಿ ಮಾತ್ರ ಯೋಚಿಸುತ್ತಿದ್ದನು. ಹಾಗಾಗಿ ಆತನು ದೇವರಿಗೆ, "ಕರ್ತನೇ, ನೀನು ನನ್ನ ಸಂಗಡ ಇದ್ದು, ನಾನು ಹೋಗುವ ಮಾರ್ಗದಲ್ಲಿ ನನ್ನನ್ನು ಕಾಪಾಡಿ, ತಿನ್ನುವುದಕ್ಕೆ ಆಹಾರವನ್ನೂ ಉಡುವುದಕ್ಕೆ ಉಡುಪನ್ನೂ ಕೊಟ್ಟು, ತಿರುಗಿ ನನ್ನನ್ನು ಸುರಕ್ಷಿತವಾಗಿ ಮನೆಗೆ ಬರಮಾಡಿದರೆ, ನಿನಗೆ ನನ್ನ ಸಂಪಾದನೆಯಲ್ಲಿ ಹತ್ತರಲ್ಲಿ ಒಂದು ಭಾಗವನ್ನು ಸಮರ್ಪಿಸುವೆನು" ಎಂದು ಹೇಳಿದನು. ಯಾಕೋಬನು ದೇವರನ್ನು ತನ್ನ ಯೋಗಕ್ಷೇಮವನ್ನು ನೋಡಿಕೊಳ್ಳುವ ಒಬ್ಬ ನೌಕರನಂತೆ ನೋಡಿದನು. ದೇವರು ಇವೆಲ್ಲವನ್ನು ಮಾಡಿದರೆ, ಆತನು ಅವರಿಗೆ ವೇತನವನ್ನು - ತನ್ನ ಸಂಪಾದನೆಯ 10% ಅಂಶವನ್ನು - ಕೊಡುವುದಾಗಿ ಹೇಳಿದನು!!

ಇಂದು ಅನೇಕ ವಿಶ್ವಾಸಿಗಳು ಸಹ ದೇವರೊಂದಿಗೆ ಅದೇ ರೀತಿ ನಡೆದುಕೊಳ್ಳುತ್ತಾರೆ. ಅವರು ದೇವರಿಂದ ಕೇವಲ ಲೌಕಿಕ ಸೌಲಭ್ಯಗಳನ್ನು ಆಶಿಸುತ್ತಾರೆ. ಒಂದು ವೇಳೆ ಕರ್ತರು ಇವೆಲ್ಲವನ್ನು ದಯಪಾಲಿಸಿದರೆ, ಅವರು ಸಭಾಕೂಟಗಳಿಗೆ ಶ್ರದ್ಧೆಯಿಂದ ಹಾಜರಾಗುತ್ತಾರೆ ಮತ್ತು ತಮ್ಮ ಆದಾಯದ ಒಂದು ಅಂಶವನ್ನು ಕರ್ತರ ಕೆಲಸಕ್ಕಾಗಿ ಕೊಡುತ್ತಾರೆ. ಇಂತಹ ವಿಶ್ವಾಸಿಗಳು, ನಿಜವಾಗಿ ಯಾರೋ ಒಬ್ಬ ಲೌಕಿಕ ವ್ಯಾಪಾರಸ್ಥನ ಹಾಗೆ, ತಮ್ಮ ಸ್ವಂತ ಸೌಕರ್ಯ ಮತ್ತು ಲಾಭಕ್ಕಾಗಿ ದೇವರೊಂದಿಗೆ ವ್ಯಾಪಾರ ಮಾಡುತ್ತಾರೆ.

ಯಾಕೋಬನು ತನ್ನ ಜೀವನದ ಮುಂದಿನ 20 ವರ್ಷಗಳನ್ನು ಲೌಕಿಕ ಸಂಪತ್ತನ್ನು ವಶಪಡಿಸುವುದರಲ್ಲಿ ಕಳೆದನು. ಆತನು ಲಾಬಾನನ ಮನೆಯಿಂದ ಒಬ್ಬಳು ಪತ್ನಿಯನ್ನು ಕಸಿದುಕೊಳ್ಳಲು ಪ್ರಯತ್ನಿಸಿದನು ಮತ್ತು ಇಬ್ಬರು ಪತ್ನಿಯರನ್ನು ಪಡೆದನು! ಆತನು ಇಬ್ಬರು ಪತ್ನಿಯರನ್ನು ಬಯಸಲಿಲ್ಲ, ಹಾಗಿದ್ದರೂ ಆತನಿಗೆ ಇಬ್ಬರು ಲಭಿಸಿದರು!! ಅನಂತರ ಆತನು ಲಾಬಾನನನ್ನು ಮೋಸಗೊಳಿಸಿ, ಆತನ ಕುರಿ ಹಿಂಡಿನಿಂದ ಕಸಿದುಕೊಂಡು ಅಪಾರ ಶ್ರೀಮಂತ ವ್ಯಕ್ತಿಯಾದನು. ಆತನು ಲಾಬಾನನ ಮನೆಗೆ ಒಬ್ಬ ಭಿಕಾರಿಯಾಗಿ ಹೋಗಿದ್ದನು, ಆದರೆ ಕೊನೆಗೆ ಅಲ್ಲಿ ಒಬ್ಬ ದೊಡ್ಡ ಶ್ರೀಮಂತನಾದನು. ಆತನು ತನ್ನ ಸಂಪತ್ತನ್ನು ದೇವರ ವರವೆಂದು ಹೇಳಿದ್ದೇನೋ ನಿಜ - ಇಂದು ಅನೇಕ ವಿಶ್ವಾಸಿಗಳು ಅದೇ ಮಾತನ್ನು ಹೇಳುತ್ತಾರೆ!! ಆದರೆ "ದೇವರ ಆಶೀರ್ವಾದದ" ನಿಜವಾದ ಗುರುತೇನು? ಹೇರಳ ಐಶ್ವರ್ಯವೇ? ಅಲ್ಲ. ಅದು ಕ್ರಿಸ್ತನ ಸಾರೂಪ್ಯವನ್ನು ಹೊಂದುವುದಾಗಿದೆ. ಒಂದು ಒಳ್ಳೆಯ ಉದ್ಯೋಗ, ಒಂದು ಒಳ್ಳೆಯ ಮನೆ ಮತ್ತು ಅನೇಕ ಸೌಲಭ್ಯಗಳು ಇದ್ದಾಗಲೂ, ನಿಮ್ಮ ಜೀವನವು ದೇವರಿಗೆ ಮತ್ತು ಮನುಷ್ಯನಿಗೆ ಯಾವುದೇ ಉಪಯೋಗವಿಲ್ಲದ್ದು ಆಗಿದ್ದರೆ, ಅದರಿಂದ ಏನು ಲಾಭ? ಆದರೆ ದೇವರು ಇನ್ನೂ ಯಾಕೋಬನೊಂದಿಗೆ ತಾನು ಮಾಡಲಿದ್ದ ಕೆಲಸವನ್ನು ಮುಗಿಸಿರಲಿಲ್ಲ. ಅವರು ಪೆನೀಯೇಲ್ನಿಲ್ಲಿ ಆತನನ್ನು ಎರಡನೇ ಬಾರಿ ಭೇಟಿಯಾದರು.

ನನ್ನ ಸಹೋದರರೇ ಮತ್ತು ಸಹೋದರಿಯರೇ, ನಾನು ನಿಮಗೆ ಹೇಳ ಬಯಸುವುದು ಏನೆಂದರೆ, ನಿಮ್ಮಲ್ಲಿ ಅನೇಕರು ಎರಡನೇ ಬಾರಿ ದೇವರ ಎದುರಿಗೆ ಬರುವುದು ಅವಶ್ಯವಾಗಿದೆ - ಈ ಭೇಟಿ ನೀವು ನಿಮ್ಮ ಜೀವನದ ಅತ್ಯಂತ ಕೆಳಮಟ್ಟವನ್ನು ತಲಪಿದಾಗ ಸಾಧ್ಯವಾಗುತ್ತದೆ - ಮತ್ತು ಆಗ ದೇವರು ನಿಮ್ಮನ್ನು ನ್ಯಾಯತೀರ್ಪಿಗೆ ಒಳಪಡಿಸಿ ನರಕಕ್ಕೆ ಕಳುಹಿಸುವ ಬದಲಾಗಿ, ತನ್ನ ಪವಿತ್ರಾತ್ಮನಿಂದ ನಿಮ್ಮನ್ನು ತುಂಬುತ್ತಾರೆ!

ನಾವು ಆದಿಕಾಂಡ 32ನೇ ಅಧ್ಯಾಯದಲ್ಲಿ ಓದುವಂತೆ, ಯಾಕೋಬನು ತನ್ನ ಅಣ್ಣನಾದ ಏಸಾವನು ತನ್ನನ್ನು ಎದುರುಗೊಳ್ಳಲು ಬರುತ್ತಾನೆಂದು ಕೇಳಿದೊಡನೆ ಬಹಳ ಭಯಪಟ್ಟನು (ಏಕೆಂದರೆ ಆತನು 20 ವರ್ಷಗಳ ಹಿಂದೆ ಏಸಾವನ ಚೊಚ್ಚಲತನದ ಹಕ್ಕನ್ನು ವಂಚನೆಯಿಂದ ಪಡೆದಿದ್ದನು). ಏಸಾವನು ತನ್ನನ್ನು ಕೊಲ್ಲುತ್ತಾನೆಂದು ಆತನಿಗೆ ಖಚಿತವಾಗಿತ್ತು. ನಮ್ಮನ್ನು ಭಯ ಪಡಿಸುವ ಕೆಲವು ಸನ್ನಿವೇಶಗಳು ನಮ್ಮ ಎದುರು ಬರುವುದಕ್ಕೆ ದೇವರು ಅನುಮತಿಸುವುದು ನಮ್ಮ ಒಳ್ಳೆಯದಕ್ಕಾಗಿ ಆಗಿರುತ್ತದೆ. ಏಕೆಂದರೆ, ಜನರು ನಮಗೆ ಹಾನಿ ಮಾಡಬಹುದೇನೋ ಎಂಬ ಭಯದಿಂದ ನಾವು ದೇವರ ಸಮೀಪಕ್ಕೆ ಹೋಗುತ್ತೇವೆ. ಪೆನೀಯೇಲಿನಲ್ಲಿ ಯಾಕೋಬನು ಒಂಟಿಗನಾಗಿದ್ದನು (ಆದಿ. 32:24). ದೇವರು ಎಲ್ಲಕ್ಕಿಂತ ಮೊದಲು ನಮ್ಮನ್ನು ಇತರರಿಂದ ಅಗಲಿಸಿ ಒಂಟಿಯಾಗಿಸಬೇಕು, ಆ ಮೇಲೆ ಅವರು ನಮ್ಮೊಂದಿಗೆ ಭೇಟಿಯಾಗಲು ಸಾಧ್ಯವಾಗುತ್ತದೆ. ಇದನ್ನು ತಿಳಿದಿರುವ ಸೈತಾನನು ಇಂದಿನ ಪ್ರಪಂಚದಲ್ಲಿ ಅತಿಯಾದ ಅವಸರದ ಮತ್ತು ಬಿಡುವಿಲ್ಲದ ಚಟುವಟಿಕೆಗಳ ಜೀವನವನ್ನು ರೂಢಿಗೊಳಿಸಿ (ಮುಖ್ಯವಾಗಿ ನಗರಗಳಲ್ಲಿ), ಆ ಮೂಲಕ ಅನೇಕ ವಿಶ್ವಾಸಿಗಳಿಗೂ ಸಹ ದೇವರನ್ನು ಒಂಟಿಯಾಗಿ ಭೇಟಿಯಾಗುವ ಸಮಯವೇ ಇಲ್ಲದಂತೆ ಮಾಡಿದ್ದಾನೆ. ಅವರ ಜೀವನ ವಿಧಾನ ಎಷ್ಟು ಬಿಡುವಿಲ್ಲದ್ದು ಎಂದರೆ, ಅವರ ವೇಳಾಪಟ್ಟಿಯಲ್ಲಿ ಕಡಿಮೆ ಪ್ರಾಮುಖ್ಯ ಸಂಗತಿಗಳಿಗೆ (ದೇವರ ಸಂಪರ್ಕ ಇತ್ಯಾದಿ) ಜಾಗವೇ ಇಲ್ಲ! ಇದು ಇಂದಿನ ಕ್ರೈಸ್ತತ್ವದ ದುರಂತವಾಗಿದೆ.

ಆ ರಾತ್ರಿ ದೇವರು ಯಾಕೋಬನೊಂದಿಗೆ ಅನೇಕ ಗಂಟೆಗಳ ಕಾಲ ಹೋರಾಡಿದರು, ಆದರೆ ಯಾಕೋಬನು ಸೋಲೊಪ್ಪಲಿಲ್ಲ. ಆ ಕುಸ್ತಿ ಪಂದ್ಯವು ಹಿಂದಿನ 20 ವರ್ಷಗಳಲ್ಲಿ ಯಾಕೋಬನ ಜೀವಿತದಲ್ಲಿ ನಡೆದಿದ್ದ ಘಟನೆಗಳನ್ನು ಸಾಂಕೇತಿಕವಾಗಿ ಸೂಚಿಸುತ್ತಿತ್ತು. ಯಾಕೋಬನು ಛಲ ಬಿಡದೆ ಹೋರಾಡುವುದನ್ನು ನೋಡಿದ ದೇವರು, ಕೊನೆಗೆ ಆತನ ತೊಡೆಯ ಕೀಲನ್ನು ಮುಟ್ಟಿದರು. ಇದು ನಡೆದಾಗ ಯಾಕೋಬನಿಗೆ ಕೇವಲ 40 ವರ್ಷ ವಯಸ್ಸಾಗಿತ್ತು, ಮತ್ತು ಆತನು ಗಟ್ಟಿಮುಟ್ಟಾಗಿದ್ದನು. ಆತನ ಅಜ್ಜನಾದ ಅಬ್ರಹಾಮನು 175ನೇ ವಯಸ್ಸಿನ ವರೆಗೆ ಜೀವಿಸಿದ್ದನು. ಅದನ್ನು ನೋಡಿದರೆ, ಈ ಸಮಯದಲ್ಲಿ ಯಾಕೋಬನು ತನ್ನ ಯೌವನದ ಉತ್ಕೃಷ್ಟ ಮಟ್ಟದಲ್ಲಿ ಇದ್ದನು, ಮತ್ತು ಆತನ ಜೀವಿತದ 75% ಅಂಶ ಆತನ ಮುಂದಿತ್ತು. ಇಂತಹ ಯೌವನ ವಯಸ್ಸಿನಲ್ಲಿ ತನ್ನ ಸೊಂಟವನ್ನು ಮುರಿದುಕೊಳ್ಳುವ ಯೋಚನೆ ಆತನಿಗೆ ಕನಸಿನಲ್ಲೂ ಬಂದಿರಲಿಕ್ಕಿಲ್ಲ - ಏಕೆಂದರೆ ಆಗ ಆತನ ಭವಿಷ್ಯದ ಎಲ್ಲಾ ಯೋಜನೆಗಳು ಒಡೆದು ಹೋಗುತ್ತಿದ್ದವು. ಇಂದಿನ ಪರಿಸ್ಥಿತಿಗೆ ಅನ್ವಯಿಸುವಂತೆ ಹೇಳುವುದಾದರೆ, ಇದು ಒಬ್ಬ 20 ವಯಸ್ಸಿನ ಯುವಕನ ಸೊಂಟವನ್ನು ಮುರಿದಂತೆ, ಮತ್ತು ಆತನು ಮುಂದಿನ ಇಡೀ ಜೀವಿತದಲ್ಲಿ ಕೈಯಲ್ಲಿ ಊರುಗೋಲು ಹಿಡಿಯದೆ ನಡೆಯಲು ಸಾಧ್ಯವಿರಲಿಲ್ಲ. ದೇವರು ಯಾಕೋಬನನ್ನು ಮುರಿಯಲು ಹಲವಾರು ರೀತಿಯಲ್ಲಿ ಪ್ರಯತ್ನಿಸಿದ್ದರು, ಆದರೆ ಸಫಲರಾಗಿರಲಿಲ್ಲ; ಮತ್ತು ಈ ಕಾರಣಕ್ಕಾಗಿ ಕೊನೆಗೆ ಅವರು ಆತನಿಗೆ ಶಾಶ್ವತವಾದ ಅಂಗವಿಕಲತೆಯನ್ನು ಉಂಟುಮಾಡಿದ್ದರು. ಈ ರೀತಿಯಾಗಿ ಕೊನೆಗೆ ಯಾಕೋಬನ ಛಲವನ್ನು ಮುರಿಯಲು ಸಾಧ್ಯವಾಯಿತು.

ದೇವರು ಯಾಕೋಬನ ಸೊಂಟವನ್ನು ಮುರಿದ ಮೇಲೆ ಆತನಿಗೆ, "ಸರಿ, ನಾನು ನನ್ನ ಕೆಲಸವನ್ನು ಮುಗಿಸಿದ್ದೇನೆ. ಈಗ ನಾನು ಹೊರಡುತ್ತೇನೆ. ನಿನಗೆ ಯಾವಾಗಲೂ ನನ್ನ ಅವಶ್ಯಕತೆ ಇರಲಿಲ್ಲ. ನಿನಗೆ ಸ್ತ್ರೀಯರು ಮತ್ತು ಸಂಪತ್ತು ಮಾತ್ರ ಬೇಕಾಗಿತ್ತು," ಎಂದು ಹೇಳಿದರು. ಆದರೆ ಈಗ ಯಾಕೋಬನು ದೇವರನ್ನು ಬಿಡಲು ಸಿದ್ಧನಿರಲಿಲ್ಲ. ಕೊನೆಗೂ ಆತನಲ್ಲಿ ಪರಿವರ್ತನೆ ಉಂಟಾಗಿತ್ತು! ಸ್ತ್ರೀಯರ ಮತ್ತು ಆಸ್ತಿ-ಪಾಸ್ತಿಯ ಹಿಂದೆ ಓಡುತ್ತಿದ್ದ ಈ ಮನುಷ್ಯ, ಈಗ ದೇವರ ಹಿಂದೆ ಓಡುತ್ತಾ, "ನೀನು ನನ್ನನ್ನು ಆಶೀರ್ವದಿಸದಿದ್ದರೆ ನಾನು ನಿನ್ನನ್ನು ಬಿಡುವುದಿಲ್ಲ," ಎಂದು ಹೇಳುತ್ತಾನೆ. ಯಾಕೋಬನ ಸೊಂಟ ಮುರಿಯುವುದರ ಮೂಲಕ ಆತನ ಹೃದಯದಲ್ಲಿ ಎಷ್ಟು ದೊಡ್ಡ ಕಾರ್ಯ ಸಾಧಿಸಲ್ಪಟ್ಟಿತು, ಮತ್ತು ಈಗ ಆತನು ದೇವರನ್ನು ಮಾತ್ರ ಬಯಸಿದನು. ಒಂದು ಹಳೆಯ ಜಾಣ್ಣುಡಿಯಲ್ಲಿ ಹೇಳಿರುವಂತೆ, "ನಿನ್ನ ಬಳಿ ದೇವರು ಮಾತ್ರ ಉಳಿದುಕೊಂಡಾಗ, ದೇವರೊಬ್ಬರೇ ಇದ್ದರೆ ಧಾರಾಳವಾಗಿ ಸಾಕೆಂದು ನಿನಗೆ ತಿಳಿಯುತ್ತದೆ"!! ಇದು ನಿಜವಾದ ಮಾತು. ಈ ವಚನದಲ್ಲಿ ಹೇಳಿರುವಂತೆ, ಯಾಕೋಬನು ಆ ಸ್ಥಳವನ್ನು "ಪೆನೀಯೇಲ್" ಎಂದು ಕರೆದನು, ಏಕೆಂದರೆ ಕೊನೆಗೆ ಆತನು ಪ್ರತ್ಯಕ್ಷವಾಗಿ ದೇವರನ್ನು ಕಂಡಿದ್ದನು. ಬೇತೇಲಿನಲ್ಲಿ ಆತನ ಲಕ್ಷ್ಯ ದೇವರ ಮನೆಯ ಕಡೆಗೆ ಹರಿಯಿತು. ನೀವು ಅನೇಕ ವರ್ಷಗಳಿಂದ ದೇವರ ಮನೆಯಲ್ಲಿ ಇದ್ದಿರಬಹುದು, ಆದರೂ ನೀವು ದೇವರ ಮುಖವನ್ನು ನೋಡದೆ ಇದ್ದಿರಬಹುದು. ಹಾಗಿದ್ದಲ್ಲಿ ನಿಮಗೆ ದೇವರೊಂದಿಗೆ ಎರಡನೆಯ ಭೇಟಿಯು ಅವಶ್ಯವಾಗಿದೆ - ಅದರ ಮೂಲಕ ನೀವು ದೇವರ ಮುಖವನ್ನು ಕಾಣುವಿರಿ. ಯಾಕೋಬನು ಸಂಭ್ರಮದಿಂದ, "ಈಗ ನಾನು ದೇವರನ್ನು ಪ್ರತ್ಯಕ್ಷವಾಗಿ ನೋಡಿದ್ದೇನೆ ಮತ್ತು ನನ್ನ ಪ್ರಾಣವು ರಕ್ಷಿಸಲ್ಪಟ್ಟಿದೆ," ಎಂದು ಹೇಳುತ್ತಾನೆ.