WFTW Body: 

ದೇವರಲ್ಲಿ ಭರವಸೆಯಿಟ್ಟು ಜೀವಿಸುವ ಮನುಷ್ಯನನ್ನು ಸತ್ಯವೇದವು ಒಂದು ಮರಕ್ಕೆ ಹೋಲಿಸಿ, ಆ ಮರವು ತನಗೆ ಬೇಕಾದ ಪೋಷಣೆಯನ್ನು ಭೂಮಿಯ ಕೆಳಗೆ ಹರಿಯುವ ಒಂದು ನದಿಯಿಂದ ಪಡೆಯುತ್ತದೆಂದು ಹೇಳುತ್ತದೆ (ಯೆರೆಮೀಯನು 17:5-8). ಯೇಸುವು ಮನುಷ್ಯನಾಗಿ ಬಂದು ಇದೇ ರೀತಿ ಜೀವಿಸಿದರು - ಪವಿತ್ರಾತ್ಮನಿಂದ (ದೇವರ ಹೊಳೆಯಿಂದ) ನಿರಂತರವಾಗಿ ತನ್ನ ಆತ್ಮಿಕ ಸಂಪನ್ಮೂಲವನ್ನು (ಬಲವನ್ನು) ಪಡೆದರು.

ಯೇಸುವು ಮಾನವ ಛಲದಿಂದ ಶೋಧನೆಯನ್ನು ಜಯಿಸಲಿಲ್ಲ, ಆದರೆ ಕ್ಷಣ ಕ್ಷಣಕ್ಕೂ ತನ್ನ ತಂದೆಯಿಂದ ಶಕ್ತಿಯನ್ನು ಪಡೆದು ಜಯಿಸಿದರು. ಯೇಸುವು ನಮಗೆ ಮಾದರಿಯಾಗಿ ಜೀವಿಸಿ, ನಮಗೆ ಕಲಿಸಿದಂತ ನಿಸ್ವಾರ್ಥ ಜೀವಿತವು ಮಾನವ (ಪ್ರಾಣದ) ಬಲದಿಂದ ತನ್ನನ್ನೇ ಹಿಡಿತದಲ್ಲಿ ಇರಿಸಿಕೊಳ್ಳುವ ವಿಧಾನವಾಗಿರಲಿಲ್ಲ. ಇಲ್ಲ. ಅದು ಭೌದ್ಧಧರ್ಮ ಮತ್ತು ಯೋಗಾಸನವಾಗಿದೆ, ಮತ್ತು ಭೂಮಿ ಹಾಗೂ ಆಕಾಶದ ನಡುವೆ ಎಷ್ಟು ಅಂತರವಿದೆಯೋ, ಇದಕ್ಕೂ ಮತ್ತು ಧರ್ಮಶಾಸ್ತ್ರದ ಉಪದೇಶಕ್ಕೂ ಅಷ್ಟೇ ದೊಡ್ಡ ಅಂತರವಿದೆ.

ಮಾನವರಾದ ನಾವು ಜೀವಿಸುವುದಕ್ಕೆ ಮತ್ತು ದೇವರ ಸೇವೆ ಮಾಡುವುದಕ್ಕೆ ಬೇಕಾದ ಶಕ್ತಿ ನಮ್ಮಲ್ಲಿಲ್ಲವೆಂದು ಯೇಸುವು ವಿವರಿಸಿದರು. ನಾವು ಏನೂ ಮಾಡಲಾರದ ಕೊಂಬೆಗಳಂತಿದ್ದೇವೆ ಮತ್ತು ಫಲ ಕೊಡುವುದಕ್ಕೆ ಮರವು ಒದಗಿಸುವ ಸತ್ವವನ್ನು ಸಂಪೂರ್ಣವಾಗಿ ಅವಲಂಬಿಸಿದ್ದೇವೆ ಎಂಬುದನ್ನು ಅವರು ತೋರಿಸಿಕೊಟ್ಟರು. "ನೀವು ನನ್ನನ್ನು ಬಿಟ್ಟು ಏನೂ ಮಾಡಲಾರಿರಿ" ಎಂದು ಅವರು ಹೇಳಿದರು (ಯೋಹಾನನು 15:5). ಆದುದರಿಂದ ಪವಿತ್ರಾತ್ಮನ ಸಹಾಯವಿಲ್ಲದೆ ನಾವು ಸಾಧಿಸುವ ಎಲ್ಲಾ ಕಾರ್ಯಗಳು ಶೂನ್ಯ ಎಂದು ಹೇಳಬಹುದು. ಹಾಗಾಗಿ "ಎಲ್ಲಾ ವೇಳೆಯಲ್ಲಿ ಪವಿತ್ರಾತ್ಮನಿಂದ ತುಂಬಲ್ಪಡಿರಿ" ಎಂಬುದು ಎಷ್ಟು ಮುಖ್ಯವಾದ ಅವಶ್ಯಕತೆಯೆಂದು ನಮಗೆ ತಿಳಿದುಬರುತ್ತದೆ (ಎಫೆಸದವರಿಗೆ 5:19).

ಯೇಸುವು ಸ್ವತಃ ಪವಿತ್ರಾತ್ಮನಿಂದ ತುಂಬಲ್ಪಟ್ಟರು ಮತ್ತು ಅಭಿಷೇಕಿಸಲ್ಪಟ್ಟರು (ಲೂಕ. 4:1,18), ಮತ್ತು ಅವರು ಪವಿತ್ರಾತ್ಮನ ಬಲದಿಂದ ತನ್ನ ತಂದೆಗಾಗಿ ಜೀವಿಸಿದರು ಮತ್ತು ಅವರ ಸೇವೆ ಮಾಡಿದರು. ಆದರೆ ಯೇಸುವು ಮನುಷ್ಯನಾಗಿದ್ದಾಗ ಆತ್ಮದ ಬಡತನವನ್ನು ಹೊಂದಿದ್ದರಿಂದಲೇ ಇದು ಸಾಧ್ಯವಾಯಿತು.

ಯೇಸುವಿಗೆ ತಾನು ಬಲಹೀನ ಮಾನವ ಜನ್ಮ ತಾಳಿ ಲೋಕಕ್ಕೆ ಬಂದಿದ್ದೇನೆಂಬ ಅರಿವಿತ್ತು. ಹಾಗಾಗಿ ಅವರು ಏಕಾಂತದಲ್ಲಿ ತಂದೆಯನ್ನು ಪ್ರಾರ್ಥಿಸುವ ಅವಕಾಶವನ್ನು ನಿರಂತರವಾಗಿ ಹುಡುಕುತ್ತಿದ್ದರು. ಇಂತಹ ತವಕವನ್ನು ಯಾರೋ ಒಬ್ಬರು ಹೀಗೆ ವಿವರಿಸಿದ್ದಾರೆ: ಹೇಗೆ ಪ್ರವಾಸಿಗಳು ಒಂದು ಹೊಸ ಪಟ್ಟಣಕ್ಕೆ ಬಂದಾಗ, ಅಲ್ಲಿ ಪ್ರೇಕ್ಷಣೀಯ ಸ್ಥಳಗಳು, ಒಳ್ಳೆಯ ತಂಗುದಾಣಗಳು (ಹೋಟೆಲ್‍ಗಳು) ಎಲ್ಲಿವೆಯೆಂದು ಹುಡುಕುತ್ತಾರೋ, ಹಾಗೆಯೇ ಯೇಸುವು ಪ್ರಾರ್ಥಿಸುವುದಕ್ಕಾಗಿ ಏಕಾಂತ ಸ್ಥಳವನ್ನು ಹುಡುಕುತ್ತಿದ್ದರು.

"ಯೇಸುವು ದೇವರ ಬಲಕ್ಕಾಗಿ ತವಕಿಸಿ ನಿರಂತರವಾಗಿ ಪ್ರಾರ್ಥಿಸಿದರು, ಮತ್ತು ಯಾವತ್ತೂ ನಿರಾಶರಾಗಲಿಲ್ಲ."

ಅವರು ಶೋಧನೆಯನ್ನು ಜಯಿಸುವ ಹಾಗೂ ತನ್ನ ಸ್ವಂತ ಮಾನವ (ಪ್ರಾಣದ) ಬಲವನ್ನು ಸಾಯಿಸುವ ಬಲಕ್ಕಾಗಿ ಬೇಡಿಕೊಂಡರು. ಶರೀರಭಾವದ ಅತೀ ಬಲಹೀನ ಸ್ಥಿತಿಯನ್ನು ಯೇಸುವಿನಂತೆ ಇನ್ಯಾವ ಮನುಷ್ಯನೂ ಅರಿತಿರಲಿಲ್ಲ, ಮತ್ತು ಈ ಕಾರಣಕ್ಕಾಗಿ ಅವರು ಪ್ರಾರ್ಥನೆಯಲ್ಲಿ ತಂದೆಯ ಮುಖವನ್ನು ನೋಡುತ್ತಾ ಸಹಾಯಕ್ಕಾಗಿ ಮೊರೆಯಿಟ್ಟಂತೆ ಬೇರೆ ಯಾವ ಮನುಷ್ಯನೂ ಎಂದೂ ಬೇಡಲಿಲ್ಲ. ಯೇಸುವು ಭೂಲೋಕದಲ್ಲಿದ್ದಾಗ ಬಲವಾಗಿ ಕೂಗುತ್ತಾ ಕಣ್ಣೀರು ಸುರಿಸುತ್ತಾ ಪ್ರಾರ್ಥನೆ ವಿಜ್ಞಾಪನೆಗಳನ್ನು ಸಮರ್ಪಿಸಿದರು. ಇದರ ನಿಮಿತ್ತವಾಗಿ ಬೇರೆಲ್ಲಾ ಮನುಷ್ಯರಿಗಿಂತ ಹೆಚ್ಚಾಗಿ ಅವರು ತಂದೆಯಿಂದ ಬಲವನ್ನು ಪಡೆದರು. ಈ ರೀತಿಯಾಗಿ ಯೇಸುವು ಎಂದಿಗೂ ಪಾಪ ಮಾಡಲಿಲ್ಲ ಮತ್ತು ಮಾನವ (ಪ್ರಾಣದ) ಬಲದಿಂದ ಬದುಕಲಿಲ್ಲ (ಇಬ್ರಿಯರಿಗೆ 4:15, ಇಬ್ರಿಯರಿಗೆ 5:7-10).

ಯೇಸುವನ್ನು ಕುರಿತು ಸುವಾರ್ತೆಗಳಲ್ಲಿ 25ಕ್ಕೂ ಹೆಚ್ಚು ಬಾರಿ "ಪ್ರಾರ್ಥಿಸು" ಅಥವಾ "ಪ್ರಾರ್ಥನೆ" ಎಂಬ ಪದಗಳನ್ನು ಉಲ್ಲೇಖಿಸಿರುವುದು ಗಮನಾರ್ಹವಾಗಿದೆಯಲ್ಲವೇ? ಇದರಲ್ಲೇ ಯೇಸುವಿನ ಜೀವನದ ಹಾಗೂ ಸೇವೆಯ ರಹಸ್ಯ ಅಡಗಿದೆ

ಯೇಸುವು ತನ್ನ ಜೀವನದ ಪ್ರಮುಖ ಘಟನೆಗಳ ಮೊದಲು ಪ್ರಾರ್ಥಿಸಿದ್ದಲ್ಲದೆ, ತನ್ನ ಕೆಲವು ಮಹತ್ಕಾರ್ಯಗಳ ನಂತರವೂ ಸಹ ಪ್ರಾರ್ಥಿಸಿದರು. ಐದು ಸಾವಿರ ಜನರಿಗೆ ಊಟಮಾಡಿಸಿದ ಮಹತ್ಕಾರ್ಯದ ನಂತರ, ಯೇಸುವು ಪ್ರಾರ್ಥನೆ ಮಾಡುವುದಕ್ಕಾಗಿ ಪರ್ವತಕ್ಕೆ ಹೋದರು. ಕಾರ್ಯ ಸಾಧನೆಯ ಬಗ್ಗೆ ಅಹಂಕಾರ ಅಥವಾ ಆತ್ಮತೃಪ್ತಿಯ ಮನೋಭಾವದಿಂದ ದೂರವಿರುವುದು, ಮತ್ತು ತನ್ನ ತಂದೆಯನ್ನು ನಿರೀಕ್ಷಿಸುತ್ತಾ ಹೊಸ ಬಲವನ್ನು ಹೊಂದುವುದೇ ಯೇಸುವಿನ ಉದ್ದೇಶವಾಗಿತ್ತು, ಎಂಬುದರಲ್ಲಿ ಸಂದೇಹವಿಲ್ಲ(ಯೆಶಾಯನು 40:31). ನಾವು ಸಾಮಾನ್ಯವಾಗಿ ಕರ್ತನಿಗಾಗಿ ಯಾವುದೋ ಮುಖ್ಯ ಕಾರ್ಯವನ್ನು ಮಾಡಬೇಕಾದ ಸಂದರ್ಭದಲ್ಲಿ ಮಾತ್ರ ಪ್ರಾರ್ಥಿಸುತ್ತೇವೆ. ಆದರೆ, ನಾವು ಒಂದು ಕೆಲಸವನ್ನು ಮುಗಿಸಿದ ನಂತರ ಪರಲೋಕದ ತಂದೆಯ ಮುಂದೆ ಕಾದು ನಿಲ್ಲುವ ಯೇಸುವಿನ ಅಭ್ಯಾಸವನ್ನು ಬೆಳೆಸಿಕೊಂಡರೆ, ಆಗ ಅಹಂಕಾರದಿಂದ ದೂರವಿರುತ್ತೇವೆ ಮತ್ತು ಕರ್ತನಿಗಾಗಿ ಇನ್ನಷ್ಟು ಶ್ರೇಷ್ಠ ಸಂಗತಿಗಳನ್ನು ಮಾಡಲು ಸಜ್ಜಾಗುತ್ತೇವೆ.

ಯೇಸುವಿನ ಜೀವಿತದ ಚಟುವಟಿಕೆಗಳು ಹೆಚ್ಚುತ್ತಾ ಹೋದಂತೆ, ಅವರು ಹೆಚ್ಚು ಹೆಚ್ಚಾಗಿ ಪ್ರಾರ್ಥಿಸುತ್ತಿದ್ದರು. ಕೆಲವೊಮ್ಮೆ ಅವರಿಗೆ ಊಟಕ್ಕೆ ಅಥವಾ ವಿಶ್ರಾಂತಿಗೂ ಸಹ ಅವಕಾಶ ಸಿಗುತ್ತಿರಲಿಲ್ಲ (ಮಾರ್ಕ. 3:20,6:31,33,46), ಆದಾಗ್ಯೂ ಅವರು ಪ್ರಾರ್ಥನೆಗಾಗಿ ಸಮಯವನ್ನು ತಪ್ಪದೆ ಬದಿಗಿರಿಸುತ್ತಿದ್ದರು. ಅವರು ಆತ್ಮನ ಪ್ರೇರಣೆಗೆ ವಿಧೇಯರಾಗಿದ್ದರಿಂದ, ಯಾವಾಗ ನಿದ್ರಿಸಬೇಕು ಮತ್ತು ಯಾವಾಗ ಪ್ರಾರ್ಥಿಸಬೇಕು ಎಂಬುದನ್ನು ಅರಿಯಲು ಸಾಧ್ಯವಾಯಿತು.

ಆತ್ಮದ ಬಡತನವಿಲ್ಲದೆ ಪ್ರಾರ್ಥನೆಯು ಫಲವನ್ನು ನೀಡುವುದಿಲ್ಲ. ಪ್ರಾರ್ಥನೆಯು ಮನುಷ್ಯನ ಅಸಹಾಯಕತೆಯ ಸಂಕೇತವಾಗಿದೆ, ಮತ್ತು ಅದು ಕೇವಲ ಒಂದು ಪರಿಪಾಠವಾಗಿ ಕೊನೆಗೊಳ್ಳದೆ ಅರ್ಥಪೂರ್ಣವಾಗಿ ಇರಬೇಕಾದರೆ, ಕ್ರಿಸ್ತೀಯ ಜೀವಿತದಲ್ಲಿ ಅಥವಾ ದೇವರ ಸೇವೆಯಲ್ಲಿ ಮಾನವ ಸಂಪನ್ಮೂಲವು (ಬಲವು) ವ್ಯರ್ಥ, ಎಂಬುದರ ಅರಿವು ನಮ್ಮಲ್ಲಿ ಯಾವಾಗಲೂ ಇರಬೇಕು.

ಯೇಸು ಸದಾ ದೇವರ ಶಕ್ತಿಯನ್ನು ಪ್ರಾರ್ಥನೆಯ ಮೂಲಕ ಹುಡುಕಿದರು ಮತ್ತು ಎಂದಿಗೂ ನಿರಾಶರಾಗಲಿಲ್ಲ. ಹೀಗಾಗಿ ಅವರು ಪ್ರಾರ್ಥನೆಯ ಮೂಲಕ ಸಾಧನೆಗಳನ್ನು ಗಳಿಸಿದರು; ಇದನ್ನು ಅವರೂ ಸಹ ಬೇರೆ ಯಾವ ರೀತಿಯಲ್ಲೂ ಮಾಡಲು ಆಗುತ್ತಿರಲಿಲ್ಲ.