WFTW Body: 

ಭೂಲೋಕದಲ್ಲಿ ನಡೆದ ಅತ್ಯಂತ ದೊಡ್ಡ ಮಹಾಯುದ್ಧದ ವಿವರಣೆ ಜಗತ್ತಿನ ಯಾವುದೇ ಇತಿಹಾಸದ ಪುಸ್ತಕದಲ್ಲಿ ಕಂಡುಬರುವುದಿಲ್ಲ. ಆ ಯುದ್ಧ ಯೇಸುವು ತನ್ನ ಮರಣದ ಮೂಲಕ ಈ ಲೋಕದ ಅಧಿಪತಿಯಾದ ಸೈತಾನನನ್ನು ಕಲ್ವಾರಿಯಲ್ಲಿ ಸೋಲಿಸಿದ ಯುದ್ಧವಾಗಿತ್ತು. ನೀವೆಲ್ಲರೂ ಜೀವಿತದ ಉದ್ದಕ್ಕೆ ಎಂದಿಗೂ ನೆನಪಿಡಲು ಯೋಗ್ಯವಾದ ಸತ್ಯವೇದದ ಒಂದು ವಚನ ಇಬ್ರಿಯ 2:14,15ರಲ್ಲಿ ಬರೆಯಲ್ಪಟ್ಟಿದೆ. ನನಗೆ ಚೆನ್ನಾಗಿ ತಿಳಿದಿದೆ, ಸೈತಾನನು ಈ ವಚನ ನಿಮ್ಮ ಗಮನಕ್ಕೆ ಬಾರದಿರಲಿ ಎಂದು ಇಚ್ಛಿಸುತ್ತಾನೆ. ಯಾರೂ ಸಹ ತಮ್ಮ ಸ್ವಂತ ಪರಾಜಯ ಅಥವಾ ಸೋಲಿನ ವಿವರವನ್ನು ಕೇಳಲು ಇಷ್ಟಪಡುವುದಿಲ್ಲ, ಮತ್ತು ಇದಕ್ಕೆ ಸೈತಾನನೂ ಹೊರತಾಗಿಲ್ಲ. ಇಬ್ರಿಯ 2:14,15 ಹೀಗೆ ತಿಳಿಸುತ್ತದೆ: "(ದೇವರ) ಮಕ್ಕಳು ರಕ್ತ ಮಾಂಸಧಾರಿಗಳಾಗಿ ಇರುವುದರಿಂದ ಆತನೂ (ಯೇಸುವು) ಅವರಂತೆಯೇ ಆದನು. ಆತನು ತನ್ನ ಮರಣದಿಂದಲೇ (ಶಿಲುಬೆಯ ಮೇಲೆ) ಮರಣಾಧಿಕಾರಿಯನ್ನು, ಅಂದರೆ ಸೈತಾನನನ್ನು ಅಡಗಿಸಿಬಿಡುವದಕ್ಕೂ, ಮರಣಭಯದ ದೆಸೆಯಿಂದ ತಮ್ಮ ಜೀವಮಾನದಲ್ಲೆಲ್ಲಾ ದಾಸತ್ವದ ಒಳಗಿದ್ದವರನ್ನು ಬಿಡಿಸುವದಕ್ಕೂ, ಅವರಂತೆ ರಕ್ತ ಮಾಂಸಧಾರಿಯಾದನು."

ಯೇಸುವು ತನ್ನ ಮರಣದ ಮೂಲಕ ಸೈತಾನನನ್ನು ಶಕ್ತಿಹೀನಗೊಳಿಸಿದನು. ಇದರ ಉದ್ದೇಶವೇನು? ನಮ್ಮನ್ನು ಸೈತಾನನಿಂದ ಮತ್ತು ಸೈತಾನನು ನಮ್ಮ ಜೀವಿತದ ಉದ್ದಕ್ಕೂ ನಮ್ಮ ಮೇಲೆ ಇರಿಸಿರುವ ಮರಣಭಯದ ದಾಸತ್ವದಿಂದ ಮುಕ್ತರಾಗಿಸುವ ಸಲುವಾಗಿ ಯೇಸುವು ಇದನ್ನು ಮಾಡಿದನು. ಲೋಕದ ಜನರಲ್ಲಿ ಅನೇಕ ವಿಧವಾದ ಭಯಗಳು ತುಂಬಿರುತ್ತವೆ - ಅನಾರೋಗ್ಯದ ಭಯ, ಬಡತನದ ಭಯ, ಸೋಲಿನ ಭಯ, ಜನರ ಭಯ, ಭವಿಷ್ಯದ ಕುರಿತಾದ ಭಯ, ಇತ್ಯಾದಿ. ಆದರೆ ಇವೆಲ್ಲವುಗಳಿಗಿಂತ ಹೆಚ್ಚಿನ ಭಯವೊಂದಿದೆ - ಮರಣದ ಭಯ. ಯಾವುದೇ ಭಯವು ಮರಣದ ಭಯದಷ್ಟು ಅಗಾಧವಾಗಿ ಇರುವುದಿಲ್ಲ. ಮರಣದ ಭಯವು ಸಾವಿನ ನಂತರ ಏನಾಗುತ್ತದೆ, ಎಂಬ ಭಯಕ್ಕೆ ಮುನ್ನಡೆಸುತ್ತದೆ. ಸತ್ಯವೇದವು ಬಹಳ ಸ್ಪಷ್ಟವಾಗಿ ಬೋಧಿಸುವುದು ಏನೆಂದರೆ, ಪಾಪದಲ್ಲಿ ಜೀವಿಸುವವರು ನರಕಕ್ಕೆ ಹೋಗುತ್ತಾರೆ - ಮಾನಸಾಂತರದ ಮೂಲಕ ದೇವರ ಕಡೆಗೆ ತಿರುಗಿಕೊಳ್ಳಲು ನಿರಾಕರಿಸುವವರಿಗೆ ದೇವರು ಆ ಜಾಗವನ್ನು ಕಾದಿರಿಸಿದ್ದಾರೆ. ಸೈತಾನನೂ ಸಹ ತಾನು ಭೂಲೋಕದಲ್ಲಿ ಮರುಳುಗೊಳಿಸಿ ಪಾಪ ಮಾಡುವಂತೆ ಪ್ರೇರೇಪಿಸದ ಜನರೊಂದಿಗೆ ಬೆಂಕಿಯ ಕೆರೆಗೆ ದಬ್ಬಲ್ಪಡುವನು, ಮತ್ತು ನಿತ್ಯತ್ವವನ್ನು ಅಲ್ಲಿಯೇ ಕಳೆಯುವನು. ಯೇಸುವು ನಮ್ಮ ಪಾಪಗಳ ಶಿಕ್ಷೆಯನ್ನು ತಾನೇ ಅನುಭವಿಸಿ, ನಮ್ಮನ್ನು ನಿತ್ಯ ನರಕದಿಂದ ರಕ್ಷಿಸುವುದಕ್ಕಾಗಿ ಈ ಲೋಕಕ್ಕೆ ಬಂದನು. ಇನ್ನು ಮೇಲೆ ಸೈತಾನನು ನಮ್ಮನ್ನು ಬಾಧಿಸದಂತೆ, ಆತನು ನಮ್ಮ ಮೇಲೆ ಹೊಂದಿದ್ದ ಪ್ರಭಾವವನ್ನೂ ಸಹ ಯೇಸುವು ನಾಶಪಡಿಸಿದನು.

ನಿಮ್ಮಲ್ಲಿ ಪ್ರತಿಯೊಬ್ಬನೂ ಈ ಒಂದು ಸತ್ಯವನ್ನು ಜೀವನವಿಡೀ ಮರೆಯದಿರಲಿ, ಎಂಬುದು ನನ್ನ ಇಚ್ಛೆಯಾಗಿದೆ: "ದೇವರು ಸೈತಾನನ ವಿರುದ್ಧವಾಗಿ ಎಂದೆಂದಿಗೂ ನಿಮ್ಮೊಡನೆ ಇರುತ್ತಾರೆ." ನಾನು ಇದನ್ನು ಜಗತ್ತಿನ ಎಲ್ಲೆಡೆ ಪ್ರತಿಯೊಬ್ಬ ವಿಶ್ವಾಸಿಗೂ ಸಾರಿ ಹೇಳಬೇಕೆಂದು ಬಹಳ ಇಚ್ಛಿಸುತ್ತೇನೆ, ಏಕೆಂದರೆ ಇದು ನನಗೆ ಬಹಳಷ್ಟು ಪ್ರೋತ್ಸಾಹ, ಸಮಾಧಾನ ಮತ್ತು ಜಯವನ್ನು ತಂದಿರುವ ಒಂದು ಮಹಿಮೆಯುಳ್ಳ ಸತ್ಯವಾಗಿದೆ. ಸತ್ಯವೇದವು ನೀಡಿರುವ ವಾಗ್ದಾನ, "ದೇವರಿಗೆ ಒಳಗಾಗಿರಿ. ಸೈತಾನನನ್ನು ಎದುರಿಸಿರಿ, ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು" (ಯಾಕೋಬ 4:7). ಯಾವಾಗಲೂ ಯೇಸುವಿನ ನಾಮ ಸೈತಾನನನ್ನು ಹೆದರಿಸಿ ಪಲಾಯನ ಮಾಡಿಸುತ್ತದೆ. ಬಹುತೇಕ ಕ್ರೈಸ್ತರ ಮನಸ್ಸಿನಲ್ಲಿ ಸೈತಾನನ ವಿಷಯವಾಗಿ ಇರುವ ಭಾವನೆ ಹೀಗಿದೆ: ಸೈತಾನನು ತಮ್ಮನ್ನು ಅಟ್ಟಿಸುತ್ತಿದ್ದಾನೆ ಮತ್ತು ತಾವು ಅವನಿಂದ ಹೇಗಾದರೂ ತಪ್ಪಿಸಿಕೊಂಡು ಜೀವ ಉಳಿಸಿಕೊಳ್ಳಬೇಕು. ಆದರೆ ಸತ್ಯವೇದದ ಬೋಧನೆ ಇದಕ್ಕೆ ಸಂಪೂರ್ಣ ವಿರುದ್ಧವಾಗಿದೆ. ನಿಮಗೆ ಏನು ಅನ್ನಿಸುತ್ತದೆ? ಸೈತಾನನು ಯೇಸುವಿಗೆ ಭಯಪಟ್ಟನೋ, ಇಲ್ಲವೋ? ನಮ್ಮ ರಕ್ಷಕನ ಮುಂದೆ ನಿಲ್ಲಲು ಸೈತಾನನು ಭಯಪಟ್ಟನೆಂದು ನಮ್ಮೆಲ್ಲರಿಗೆ ತಿಳಿದಿದೆ. ಯೇಸುವು ಲೋಕದ ಬೆಳಕು ಆಗಿದ್ದಾನೆ, ಮತ್ತು ಆತನ ಸಾನ್ನಿಧ್ಯದಿಂದ ಕತ್ತಲೆಯ ಅಧಿಪತಿಯು ತೊಲಗಿ ಓಡದೆ ಬೇರೆ ದಾರಿ ಇರಲಿಲ್ಲ.

ಯೇಸುವು ತನ್ನ ಶಿಷ್ಯರಿಗೆ ಸೈತಾನನು ಪರಲೋಕದಿಂದ ಕೆಳಗೆ ಬಿದ್ದುದನ್ನು ತಾನು ನೋಡಿದ್ದಾಗಿ ತಿಳಿಸಿದನು. ದೇವರು ಸೈತಾನನನ್ನು ಹೊರದಬ್ಬಿದಾಗ, "ಸೈತಾನನು ಆಕಾಶದಿಂದ ಸಿಡಿಲಿನಂತೆ ಬೀಳುವುದನ್ನು" ಕಂಡದ್ದಾಗಿ ಯೇಸುವು ವಿವರಿಸಿದನು (ಲೂಕ 10:18). ಅಡವಿಯಲ್ಲಿ ಯೇಸುವು ಸೈತಾನನಿಗೆ, "ನೀನು ತೊಲಗಿ ಹೋಗು," ಎಂದಾಗ ಆತನು ಸಿಡಿಲಿನ ವೇಗದಿಂದ ಅಲ್ಲಿಂದ ಮರೆಯಾದನು. ಹಾಗೆಯೇ ಇಂದು ನಾವು ಸೈತಾನನನ್ನು ಯೇಸುವಿನ ನಾಮದ ಮೂಲಕ ಎದುರಿಸುವಾಗ, ಆತನು ನಮ್ಮ ಬಳಿಯಿಂದಲೂ ಬೆಳಕಿನ ವೇಗದಲ್ಲಿ ಓಡಿಹೋಗುವನು! ಬೆಳಕಿನ ಎದುರು ಕತ್ತಲೆಯು ನಿಲ್ಲಲಾರದೆ ಓಡಿಹೋಗುತ್ತದೆ. ಸೈತಾನನು ಯೇಸುವಿನ ನಾಮಕ್ಕೆ ಹೆದರುತ್ತಾನೆ. ಯೇಸುವು ಸಾರ್ವಭೌಮನಾಗಿದ್ದಾನೆ ಎಂದು ನೆನಪಿಸಲ್ಪಟ್ಟಾಗ ಸೈತಾನನು ಭಯದಿಂದ ನಡುಗುತ್ತಾನೆ. ದೆವ್ವ ಹಿಡಿದ ಜನ ಯೇಸುವು ಕರ್ತನು ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ, ಅಷ್ಟೇ ಅಲ್ಲದೆ, ಶಿಲುಬೆಯ ಮೇಲೆ ಸೈತಾನನಿಗೆ ಸೋಲು ಉಂಟಾಯಿತು ಎಂಬ ಸಾಕ್ಷಿಯನ್ನೂ ಹೇಳುವುದಿಲ್ಲ. ಯೇಸು ಕ್ರಿಸ್ತನ ನಾಮವು ಎಲ್ಲಾ ದೆವ್ವಗಳನ್ನು ಬಿಡಿಸುವ ಶಕ್ತಿಯನ್ನು ಹೊಂದಿದೆ ಮತ್ತು ಅದು - ಸಿಡಿಲಿನ ವೇಗದಲ್ಲಿ - ಎಲ್ಲಾ ದೆವ್ವಗಳನ್ನು ಓಡಿಸುತ್ತದೆ. ಇದನ್ನು ಎಂದಿಗೂ ಮರೆಯಬೇಡಿರಿ.

ನಿಮ್ಮ ಜೀವನದ ಯಾವುದೇ ಕಷ್ಟಕರ ಸಂದರ್ಭದಲ್ಲಿ, ನೀವು ಯಾವುದೋ ಜಟಿಲ ಸಮಸ್ಯೆಯನ್ನು ಎದುರಿಸುವಾಗ, ನಿಮಗೆ ಏನು ಮಾಡಬೇಕೆಂದು ತೋಚದಿರುವ ಪರಿಸ್ಥಿತಿ ಎದುರಾದಾಗ, ನೀವು ಕರ್ತ ಯೇಸುವಿನ ಹೆಸರಿನಲ್ಲಿ ಪ್ರಾರ್ಥನೆ ಮಾಡಿರಿ. ಕರ್ತನಿಗೆ ಹೀಗೆ ಮೊರೆಯಿಡಿರಿ, "ಕರ್ತ ಯೇಸುವೇ, ಸೈತಾನನ ವಿರುದ್ಧವಾದ ಹೋರಾಟದಲ್ಲಿ ನೀನು ನನ್ನೊಂದಿಗೆ ಇರುವೆ. ಈಗ ನನಗೆ ಸಹಾಯ ಬೇಕಾಗಿದೆ." ಅದರ ನಂತರ ಸೈತಾನನನ್ನು ಎದುರಿಸಿ ಹೀಗೆ ಹೇಳಿರಿ, "ಸೈತಾನನೇ, ಯೇಸುವಿನ ಹೆಸರಿನಲ್ಲಿ ನಾನು ನಿನ್ನನ್ನು ಎದುರಿಸುತ್ತೇನೆ." ಒಡನೆಯೇ ಸೈತಾನನು ಅಲ್ಲಿಂದ ಪರಾರಿಯಾಗುವನು ಎಂದು ನಾನು ನಿಮಗೆ ತಿಳಿಸುತ್ತೇನೆ, ಏಕೆಂದರೆ ಯೇಸುವು ಶಿಲುಬೆಯ ಮೇಲೆ ಅವನನ್ನು ಸೋಲಿಸಿದ್ದಾನೆ. ನೀವು ದೇವರ ಬೆಳಕಿನಲ್ಲಿ ನಡೆಯುವಾಗ ಮತ್ತು ಯೇಸುವಿನ ನಾಮದಲ್ಲಿ ಸೈತಾನನನ್ನು ವಿರೋಧಿಸುವಾಗ, ಆತನು ನಿಮ್ಮ ವಿರುದ್ಧವಾಗಿ ಏನೂ ಮಾಡಲಾರದಂತಹ ಬಲಹೀನನಾಗಿರುತ್ತಾನೆ.

ನಿಸ್ಸಂಶಯವಾದ ಒಂದು ಸಂಗತಿ ಏನೆಂದರೆ, ಸೈತಾನನು ತನ್ನ ಸೋಲಿನ ವಿಷಯ ನಿಮಗೆ ತಿಳಿಯದಿರಲಿ ಎಂದು ಬಯಸುತ್ತಾನೆ, ಹಾಗಾಗಿ ಇದುವರೆಗೆ ಆ ಸುದ್ದಿ ನಿಮಗೆ ಗೊತ್ತಾಗದಂತೆ ಆತನು ತಡೆಹಿಡಿದಿದ್ದಾನೆ. ಅದಕ್ಕಾಗಿಯೇ ಆತನು ಹೆಚ್ಚಿನ ಬೋಧಕರು ಇದನ್ನು ಬೋಧಿಸದಂತೆ ತಡೆಹಿಡಿದಿದ್ದಾನೆ. ನಾನು ನಿಮ್ಮೆಲ್ಲರಿಗೆ ಸ್ಪಷ್ಟವಾಗಿ ಹೇಳಬಯಸುವದು ಏನೆಂದರೆ, ಕರ್ತನಾದ ಯೇಸು ಕ್ರಿಸ್ತನು ಶಿಲುಬೆಯ ಮೇಲೆ ಸೈತಾನನನ್ನು ಶಾಶ್ವತವಾಗಿ ಸೋಲಿಸಿದನು. ಇನ್ನು ಮುಂದೆ ನೀವು ಯಾವತ್ತೂ ಸೈತಾನನಿಗೆ ಹೆದರಬೇಕಿಲ್ಲ. ಆತನು ನಿಮ್ಮನ್ನು ಪೀಡಿಸಲಾರನು ಮತ್ತು ನಿಮಗೆ ಹಾನಿ ಮಾಡಲಾರನು. ಆತನು ನಿಮ್ಮನ್ನು ಶೋಧನೆಗೆ ಒಳಪಡಿಸಬಹುದು, ನಿಮ್ಮ ಮೇಲೆ ದಾಳಿ ಮಾಡಬಹುದು. ಆದರೆ ನೀವು ಎಲ್ಲಾ ಸಮಯದಲ್ಲಿ ನಿಮ್ಮನ್ನು ತಗ್ಗಿಸಿಕೊಂಡು, ದೇವರಿಗೆ ವಿಧೇಯರಾಗಿ, ಅವರ ಬೆಳಕಿನಲ್ಲಿ ನಡೆಯುವುದಾದರೆ, ಕ್ರಿಸ್ತನಲ್ಲಿರುವ ದೇವರ ಕೃಪೆಯು ಸೈತಾನನ ವಿರುದ್ಧವಾಗಿ ನಿಮ್ಮನ್ನು ಸದಾ ಜಯಶಾಲಿಗಳನ್ನಾಗಿ ಮಾಡುವುದು!