ಗಂಡಂದಿರು ತಮ್ಮ ಹೆಂಡತಿಯರನ್ನು ಹೇಗೆ ಪ್ರೀತಿಸಬೇಕೆಂದು ಕಲಿಯುವುದಕ್ಕಾಗಿ ಕ್ರೈಸ್ತಸಭೆಯನ್ನು ಯೇಸುವು ಪ್ರೀತಿಸಿದ ಮಾದರಿಯನ್ನು ದೃಷ್ಟಿಸಬೇಕೆಂದು ಸತ್ಯವೇದ ತಿಳಿಸುತ್ತದೆ (ಎಫೆಸದವರಿಗೆ 5:25). ಈ ವಾಕ್ಯಕ್ಕೆ ವಿಧೇಯನಾಗುವುದಕ್ಕೆ ಇಡೀ ಜೀವಮಾನವೇ ಬೇಕೆಂದು ಕೇವಲ10% ನಿಷ್ಠೆಯುಳ್ಳ ಗಂಡನೂ ಸಹ ಒಪ್ಪಿಕೊಳ್ಳುತ್ತಾನೆ. ಇದನ್ನು ಸಾಧಿಸಲು ಯಾವ ಪುರುಷನಿಂದಲೂ ಸಾಧ್ಯವಾಗಿಲ್ಲ. ದುಃಖಕರ ಸಂಗತಿಯೆಂದರೆ ವಿಶ್ವಾಸಿಗಳಲ್ಲಿ ಅಧಿಕಾಂಶ ಮಂದಿ ಇದನ್ನು ಸಾಧಿಸುವ ಪ್ರಯತ್ನವನ್ನೂ ಸಹ ಮಾಡುವುದಿಲ್ಲ. ನಾವು ಪ್ರಯತ್ನವನ್ನೇ ಮಾಡದಿದ್ದರೆ ಇದನ್ನು ಎಂದಿಗೂ ಪಾಲಿಸಲಾರೆವು. ಇದನ್ನೇ ಸತ್ಯವೇದವು "ಪರಿಪೂರ್ಣತೆಯ ಫಲಕ್ಕಾಗಿ ಅತ್ಯಾಸಕ್ತರಾಗಿರಬೇಕು," ಎಂದು ಹೇಳುತ್ತದೆ. ಗಂಡಂದಿರ ಜವಾಬ್ದಾರಿ ಏನೆಂದರೆ: "ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ." ಕ್ರಿಸ್ತನು ಸಭೆಯನ್ನು ಪ್ರತಿಷ್ಠೆ ಪಡಿಸುವುದಕ್ಕಾಗಿ ಅದನ್ನು ಪ್ರೀತಿಸಿ ತನ್ನನ್ನು ಸಭೆಗೆ ಒಪ್ಪಿಸಿಕೊಟ್ಟ ಹಾಗೆ, ಗಂಡಂದಿರು ಈ ಕ್ಷೇತ್ರದಲ್ಲಿ ಪರಿಪೂರ್ಣತೆಗಾಗಿ ಶ್ರಮಿಸುತ್ತಾ ವರ್ಷದಿಂದ ವರ್ಷಕ್ಕೆ ಮುಂದುವರಿದರೆ, ತಮ್ಮತಮ್ಮ ಹೆಂಡತಿಯರನ್ನು ಪ್ರೀತಿಸುವುದರಲ್ಲಿ ಹೆಚ್ಚು ಪರಿಪೂರ್ಣತೆಯನ್ನು ಹೊಂದುತ್ತಾರೆ.
ಕ್ರಿಸ್ತನು ಸಭೆಯ ಸೋಲನ್ನು ಅಥವಾ ಅದರ ಪಾಪವನ್ನು ಗುರುತಿಸಿ, ಅದನ್ನು ಹೇಗೆ ಸರಿಪಡಿಸಿದನು? ಆತನು ಹೆಚ್ಚಿನ ಗಂಡಂದಿರಂತೆ ನಡೆಯಲಿಲ್ಲ. ಹೆಚ್ಚಿನ ಗಂಡಂದಿರು ತಮ್ಮ ಹೆಂಡತಿಯರ ತಪ್ಪನ್ನು ತಿದ್ದಲು ಪ್ರಯತ್ನಿಸುವಾಗ, "ನೀನು ಸರಿಯಾಗಿ ನಡೆದುಕೊಳ್ಳುತ್ತಿಲ್ಲ" ಎಂಬ ತೀವ್ರ ಮಾತುಗಳನ್ನು ಬಳಸುತ್ತಾರೆ ಅಥವಾ ಇದೇ ಧಾಟಿಯ ದೆವ್ವಗಳ ಭಾಷೆಯ ಬಿರುಸಾದ ಇತರ ಪದಗಳನ್ನು ಬಳಸುತ್ತಾರೆ. ಯೇಸುವು ಹಾಗೆ ಮಾಡಲಿಲ್ಲ. ಸಭೆಯನ್ನು ಸುಕ್ಕು ಕಳಂಕಗಳಿಲ್ಲದೆ, ಪರಿಶುದ್ಧವೂ ನಿರ್ದೋಷವೂ ಆಗಿರುವಂತೆ ಮಾಡಬೇಕೆಂದು ಯೇಸುವು ಬಯಸಿದಾಗ, ಆತನು ಏನು ಮಾಡಿದನು? ಆತನು ಆಕೆಯನ್ನು ಪ್ರತಿಷ್ಠೆ ಪಡಿಸಲು ತನ್ನ ಪ್ರಾಣವನ್ನು ಒಪ್ಪಿಸಿಕೊಟ್ಟನು. ನೀನು ನಿನ್ನ ಹೆಂಡತಿಗಾಗಿ ಹೀಗೆ ಮಾಡಬೇಕೆಂದು ಎಂದಾದರೂ ಬಯಸಿದ್ದೀಯಾ? ಇದು ದೇವರ ವಿಧಾನವಾಗಿದೆ. ಇಡೀ ಮಾನವ ಜನಾಂಗವು ಇದಕ್ಕೆ ವಿರುದ್ಧವಾಗಿ, ತಲೆಕೆಳಗಾಗಿ ಸಾಗುತ್ತಿದೆ. ನೀನು ದೇವರ ಮಾರ್ಗವನ್ನು ಅನುಸರಿಸಿದರೆ, ನಿನ್ನ ಕುಟುಂಬದ ಉತ್ತಮ ಜೀವಿತವು ಅತ್ಯುತ್ತಮ ಮಟ್ಟವನ್ನು ತಲಪುತ್ತದೆ. ಗಂಡನಾದ ನೀನು ನಿನ್ನ ಹೆಂಡತಿಯಲ್ಲಿ ಯಾವುದೋ ಒಂದು ತಪ್ಪನ್ನು ಕಂಡಾಗ, ಯೇಸುವನ್ನು ಅನುಸರಿಸಬೇಕು. ನೀನು ನಿನ್ನ ಅಕ್ಕಪಕ್ಕದ ಎಲ್ಲಾ ಇತರ ಪುರುಷರು ಮಾಡುವುದನ್ನು ಅನುಸರಿಸಬಾರದು.
ನಮ್ಮ ಸ್ವಾಭಿಮಾನವು ಬಿಟ್ಟುಬಿಡುವುದಕ್ಕೆ ಅತ್ಯಂತ ಕಠಿಣ ಸಂಗತಿಯಾಗಿದೆ - ಅಂದರೆ "ನಾನು" ಎಂಬ ವ್ಯಕ್ತಿ - ಆತನು ಸಿಂಹಾಸನದ ಮೇಲೆ ಕುಳಿತಿರುವ ಪ್ರಮುಖ ವ್ಯಕ್ತಿಯಾಗಿದ್ದಾನೆ. ಸಿಂಹಾಸನದಲ್ಲಿ ಕುಳಿತಿರುವ ಅರಸನು ಬಯಸಿದ್ದನ್ನು ಆತನ ಹೆಂಡತಿಯು ಮಾಡದಿದ್ದಾಗ ಆತನು ಬಹಳ ಅಸಮಾಧಾನಗೊಳ್ಳುತ್ತಾನೆ ಮತ್ತು ಬೇಸರಿಸುತ್ತಾನೆ. ನಿನ್ನ ಹೆಂಡತಿಯನ್ನು ಪ್ರತಿಷ್ಠಿಸುವುದಕ್ಕಾಗಿ ಈ ’ಸ್ವಯಂ’ಅನ್ನು ನೀನು ಬಿಟ್ಟುಬಿಡಬೇಕು. ಬೇಸರದ ಸಂಗತಿಯೆಂದರೆ, ಈ ಮಾರ್ಗದಲ್ಲಿ ನಡೆಯಲು ಕೆಲವು ಗಂಡಂದಿರು ಮಾತ್ರ ಇಚ್ಛಿಸುತ್ತಾರೆ. ನೀನು ಈ ಮಾರ್ಗದಲ್ಲಿ ನಡೆಯದೇ ಹೋದರೆ, ನಿನ್ನ ಕುಟುಂಬವು ನಿಶ್ಚಯವಾಗಿ ಇಳಿಜಾರು ಸುತ್ತುದಾರಿಯಲ್ಲಿ ಕೆಳಕ್ಕೆ ಜಾರುತ್ತಾ ಹೋಗುತ್ತದೆ. ಆದರೆ ನೀನು ನಿಜವಾಗಿ ಸರಿಯಾದ ಮಾರ್ಗದಲ್ಲಿ ನಡೆಯಬೇಕೆಂದು ಬಯಸಿದರೆ, ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಮತ್ತು ನಿನ್ನ ಹೆಂಡತಿಯನ್ನು ಪ್ರೀತಿಸುವುದಕ್ಕೆ ಪ್ರಾಮುಖ್ಯತೆ ನೀಡಬೇಕು. ಪ್ರೀತಿಯ ಅರ್ಥವನ್ನು ಶಬ್ದಕೋಶ ಅಥವಾ ನಿಘಂಟಿನಲ್ಲಿ ಹುಡುಕಬೇಡಿರಿ. ಬದಲಾಗಿ ಕ್ರಿಸ್ತನ ಮಾದರಿಯನ್ನು ನೋಡಿ ಪ್ರೀತಿ ಏನೆಂದು ಗ್ರಹಿಸಿಕೊಳ್ಳಿರಿ - ನಿಮ್ಮ ಪರಸ್ಪರ ಸಂಬಂಧದಲ್ಲಿ ಕ್ರಿಸ್ತನಂತೆ ಸಾಯಲು ಸಿದ್ಧರಾಗಿರಿ. ಇದೇ ಗಂಡಂದಿರಾದ ನಮಗೆ ಕೊಡಲ್ಪಟ್ಟಿರುವ ಕರೆಯಾಗಿದೆ.
"ನಾವು ಯೇಸುವಿನಿಂದ ಒಬ್ಬ ನಾಯಕನು ಹಾಗೂ ಒಬ್ಬ ಸೇವಕನು ಆಗಿರುವಂತ ಈ ನಾಜೂಕಾದ ಸಮತೋಲನವನ್ನು ಕಲಿತುಕೊಳ್ಳಬೇಕು"
ಯೇಸುವು ನಮ್ಮ ನಾಯಕನಾಗಿದ್ದಾನೆ, ಆದಾಗ್ಯೂ ಆತನ ನಾಯಕತ್ವವು ಲೋಕವು ತಿಳಿದಿರುವಂತದ್ದು ಅಲ್ಲ. ಯೇಸುವಿನ ಭೂಲೋಕ ಜೀವಿತದ ಕೊನೆಯ ದಿನಗಳಲ್ಲಿ ನಾವು ಆತನನ್ನು ಎಲ್ಲಿ ಕಾಣುತ್ತೇವೆಂದು ನಿಮಗೆ ತಿಳಿದಿದೆಯೇ? ಆತನು ತನ್ನ ಮದಲಗಿತ್ತಿಯ ಕಾಲಿನ ಬಳಿ ಕೂತುಕೊಂಡು, ಆಕೆಯ ಕಾಲನ್ನು ತೊಳೆದನು. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಪರಿಪೂರ್ಣತೆಯ ಅತ್ಯುನ್ನತ ಮಟ್ಟವನ್ನು ತಲುಪಿದ ಒಬ್ಬ ಗಂಡನು ತನ್ನ ಹೆಂಡತಿಯನ್ನು ಪ್ರತಿಷ್ಠಿಸುವುದಕ್ಕಾಗಿ ಆಕೆಯ ಕಾಲಿನ ಬಳಿ ಕೂತು, ಕಾಲನ್ನು ತೊಳೆದು ಶುದ್ಧೀಕರಿಸಿ, ಆಕೆಗೆ ಸಹಾಯ ಮಾಡುತ್ತಿರುತ್ತಾನೆ. ಆಕೆಯ ಕಾಲುಗಳನ್ನು ತೊಳೆಯುವುದರ ಅರ್ಥವೇನು? ಇದರ ಅರ್ಥ, ಹೊಲಸು ಕೆಲಸಗಳನ್ನು ಕೈಗೊಳ್ಳುವುದು. ನಿಶ್ಚಯವಾಗಿ, ಇದರ ದುರುಪಯೋಗ ಪಡೆದು ಗಂಡಂದಿರ ಮೇಲೆ ಅಧಿಕಾರ ಚಲಾಯಿಸುವ ಮೂರ್ಖ ಹೆಂಡಂದಿರು ಇದ್ದಾರೆ. ಜನರು ಯೇಸುವನ್ನು ತಮಗೆ ಬೇಕಾದಂತೆ ಕೀಳಾಗಿ ಉಪಯೋಗಿಸಿಕೊಂಡು, ಕೆಳಕ್ಕೆ ತಳ್ಳಲು ಸಾಧ್ಯವಿತ್ತೇ? ಹೆಂಡತಿಯ ಕಾಲುಗಳನ್ನು ತೊಳೆದು ಹೊಲಸು ಕೆಲಸಗಳನ್ನು ಮಾಡಬೇಕು, ಎನ್ನುವ ನಮ್ಮ ಹೇಳಿಕೆಯನ್ನು ಕೆಲವು ಸ್ತ್ರೀಯರು ತಪ್ಪಾಗಿ ಅರ್ಥಮಾಡಿಕೊಳ್ಳುತ್ತಾರೆ. ಅವರು ತಮ್ಮ ಗಂಡಂದಿರನ್ನು ಎಲ್ಲಾ ವಿಧವಾದ ಬಿಟ್ಟೀ ಕೆಲಸಗಳನ್ನು ಮತ್ತು ಹೊಲಸು ಕೆಲಸಗಳನ್ನು ಮಾಡುವ ಆಳುಗಳಾಗಿ ಮಾಡುತ್ತಾರೆ. ಇದು ನನ್ನ ಮಾತಿನ ಅರ್ಥವಲ್ಲ. ಯೇಸುವು ಕಾಲೊರೆಸುವ ಬಟ್ಟೆಯಂತೆ ಇರಲಿಲ್ಲ. ಯೇಸುವು ತನ್ನ ಶಿಷ್ಯರೊಂದಿಗೆ ಕುಳಿತಿರುವುದನ್ನು ನೀವು ನೋಡಿದ್ದೇ ಆದರೆ, ಅಲ್ಲಿ ಯಾರು ನಾಯಕನು ಎಂಬ ಸಂಶಯ ಉಂಟಾಗುತ್ತಿರಲಿಲ್ಲ. ಅಲ್ಲಿ ನಾಯಕತ್ವ ಸ್ಪಷ್ಟವಾಗಿ ಪ್ರಕಟವಾಗುತ್ತಿತ್ತು. ಪೇತ್ರನು ಅಥವಾ ಮತ್ತಾಯನು ಅವರ ನಾಯಕನೆಂದು ನೀವು ಎಂದಿಗೂ ಯೋಚಿಸುತ್ತಿರಲಿಲ್ಲ. ಗಂಡಂದಿರೂ ಸಹ ಇಂತಹ ಸ್ಥಾನವನ್ನು ಹೊಂದಿರಬೇಕು. ನಾವು ಯೇಸುವಿನಿಂದ ಒಬ್ಬ ನಾಯಕನು ಹಾಗೂ ಒಬ್ಬ ಸೇವಕನು ಆಗಿರುವಂತ ಈ ನಾಜೂಕಾದ ಸಮತೋಲನವನ್ನು ಕಲಿತುಕೊಳ್ಳಬೇಕು. ಇಂತಹ ನಾಯಕತ್ವಕ್ಕಾಗಿ ನಿಮಗೆ ಜ್ಞಾನ ಅವಶ್ಯವಾಗಿದೆ, ಮತ್ತು ಕರ್ತನು ಮಾತ್ರವೇ ಇದನ್ನು ಕೊಡಬಲ್ಲನು; ಆದುದರಿಂದ ನೀವು ಇದಕ್ಕಾಗಿ ಪ್ರಾರ್ಥಿಸಿ ಬೇಡಿಕೊಳ್ಳಬೇಕು.
ಯೇಸುವು ತನ್ನ ಕುರಿಮಂದೆಯ ಮುಂದೆ ನಡೆಯುವ ಕುರುಬನಾಗಿದ್ದಾನೆ. ಆತನು ಹಿಂದಿನಿಂದ ಅವುಗಳನ್ನು ಒದೆಯುವುದಿಲ್ಲ. ಯೇಸುವು ಲೆಕ್ಕವಿಲ್ಲದಷ್ಟು ಉಪದೇಶಗಳನ್ನು ನೀಡಲಿಲ್ಲ. ಆತನು ತನ್ನ ಮದಲಗಿತ್ತಿಯು ಅನುಸರಿಸಬಹುದಾದ ಒಬ್ಬ ಮಾದರಿಯಾಗಿದ್ದನು. ಒಬ್ಬ ಗಂಡನು ಇದೇ ರೀತಿ ಇರಬೇಕು - ಯೇಸುವಿನ ಹಾಗಿನ ಮಾದರಿ - ತನ್ನ ಹೆಂಡತಿಯನ್ನು ನಡೆಸುವ ಒಬ್ಬ ಕುರುಬನು. ನಿನ್ನ ಹೆಂಡತಿ ಎಡವಿ ಬೀಳುವಾಗ, ನನ್ನ ಪ್ರಿಯ ಸಹೋದರನೇ, ಈ ರೀತಿಯಾಗಿ ನಿನ್ನನ್ನೇ ಪ್ರಶ್ನಿಸಿಕೋ, "ನಾನು ನನ್ನ ಕುರಿಯನ್ನು, ದೇವರು ನನಗೆ ಅಧೀನಪಡಿಸಿರುವ ನನ್ನ ಹೆಂಡತಿಯನ್ನು, ಸರಿಯಾಗಿ ನಡೆಸುತ್ತಿದ್ದೇನೆಯೇ?" ನಿನ್ನ ಹೆಂಡತಿಯ ಹಿಂದೆ ಇತರ ಕುರಿಮರಿಗಳು ಬರುತ್ತವೆ - ಅಂದರೆ ಮಕ್ಕಳು. ಅವರೆಲ್ಲರೂ ಒಬ್ಬ ಪುರುಷನನ್ನು, ತಮ್ಮ ಕುರುಬನನ್ನು, ಆತುಕೊಂಡಿದ್ದಾರೆ. ಗಂಡನಲ್ಲಿ ಸ್ವ-ನಿಯಂತ್ರಣ ಇಲ್ಲವಾದರೆ, ಕುರಿ ಹಾಗೂ ಕುರಿಮರಿಗಳು ಸರಿಯಾಗಿ ನಡೆದುಕೊಳ್ಳಲು ಹೇಗೆ ಸಾಧ್ಯ? ಪುರುಷನು ಬಹಳ ಮನೋಭೀತಿಯಿಂದ ನಡುಗುತ್ತಾ ತನ್ನ ಸ್ವಂತದ ರಕ್ಷಣೆಯನ್ನು ಸಾಧಿಸಿಕೊಳ್ಳದಿದ್ದರೆ, ಮತ್ತು ಯೇಸುವನ್ನು ಹಿಂಬಾಲಿಸದಿದ್ದರೆ, ಆ ಕುಟುಂಬವು ಯಾವ ದಿಕ್ಕಿನಲ್ಲಿ ಸಾಗುತ್ತದೆಂದು ನಿಮಗೆ ಅನಿಸುತ್ತದೆ? ದೇವರು ನಿಯಮಿಸಿದ ದಿಕ್ಕಿಗೆ ವಿರೋಧವಾಗಿ, ಇಡೀ ಮಾನವ ಜನಾಂಗವು ನಡೆಯುತ್ತಿರುವಂತೆ ಸಾಗುತ್ತದೆ.
ಹಾಗಾಗಿ, ವಿವಾಹ ಜೀವಿತವು ಉತ್ತಮದಿಂದ ಅತ್ಯುತ್ತಮ ಮಟ್ಟವನ್ನು ತಲುಪಬೇಕಾದರೆ, ಯೇಸುವನ್ನು ಹಿಂಬಾಲಿಸುವ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವ ಗಂಡಂದಿರು ಅವಶ್ಯವಾಗಿದ್ದಾರೆ. ಆತನ ಹವ್ಯಾಸ, ಆತನ ಜೀವನದ ಹಂಬಲ, ಆತನ ಮುಖ್ಯ ಉದ್ಯೋಗವೂ ಸಹ ಇದೇ ಆಗಿರಬೇಕು - ಇದು ಸಭಾಕೂಟಗಳಲ್ಲಿ ಮಾತ್ರ ಅನುಸರಿಸುವ ಅಪರೂಪದ ಸಂಗತಿಯಲ್ಲ. ಇಂತಹ ಮಾದರಿಯ ವಿವಾಹ ಜೀವಿತ ಶಿಷ್ಯಂದಿರಿಗಾಗಿ ಮೀಸಲಾಗಿ ಇರಿಸಲಾಗಿದೆ, ಕೇವಲ ಸತ್ತ ನಂತರ ಪರಲೋಕಕ್ಕೆ ಹೋಗಬೇಕೆಂದು ಬಯಸುವವರಿಗಾಗಿ ಅಲ್ಲ.