ನಮ್ಮ CFC ಕ್ರೈಸ್ತಸಭೆಗಳಲ್ಲಿ, ನೀವು ಸತ್ತ ನಂತರ ಹೇಗೆ ಪರಲೋಕಕ್ಕೆ ಹೋಗಬಹುದೆಂಬ ವಿಚಾರವಾಗಿ ನಾವು ಬೋಧಿಸುವುದಿಲ್ಲ. ಯೇಸುವು ನಮಗೆ ಪ್ರತಿಯೊಂದು ದೇಶದಲ್ಲಿ ಶಿಷ್ಯರನ್ನು ಮಾಡಬೇಕೆಂದು - ಮತ್ತು ಅವರಿಗೆ ತನ್ನ ಎಲ್ಲಾ ಆಜ್ಞೆಗಳನ್ನು ಪಾಲಿಸುವುದು ಹೇಗೆಂದು ತೋರಿಸಬೇಕೆಂದು ಹೇಳಿದರು - ಆದರೆ ನರಕದಿಂದ ಪಾರಾಗಿ ಸ್ವರ್ಗಕ್ಕೆ (ಪರಲೋಕಕ್ಕೆ) ಹೋಗುವುದು ಹೇಗೆಂದಲ್ಲ!!ಆದಾಗ್ಯೂ, ದುರದೃಷ್ಟಕರವಾಗಿ, ಇಂದು ಬಹಳಷ್ಟು ಸುವಾರ್ತಾ ಸಂದೇಶಗಳಲ್ಲಿ ಮುಖ್ಯವಾಗಿ ಬೋಧಿಸಲಾಗುವುದು ಏನೆಂದರೆ, ನೀವು ಸತ್ತ ನಂತರ ಪರಲೋಕವನ್ನು ಸೇರುವುದು ಹೇಗೆಂಬ ವಿಚಾರ. ನಾನು ಇಂತಹ ಸುವಾರ್ತೆಯನ್ನು ಸಾರುವುದಿಲ್ಲ, ಏಕೆಂದರೆ ನಾನು ಜನರನ್ನು ಪರಲೋಕಕ್ಕೆ ಕರೆದುಕೊಂಡು ಹೋಗಲು ಆಸಕ್ತನಾಗಿಲ್ಲ. ಅದು ದೇವರ ಕೈಯಲ್ಲಿದೆ. ನಾನು ಈ ಭೂಲೋಕದಲ್ಲಿ ಜನರನ್ನು ಯೇಸು ಕ್ರಿಸ್ತನ ಶಿಷ್ಯರನ್ನಾಗಿ ಮಾಡಲು ಪ್ರಯತ್ನಿಸುತ್ತೇನೆ ಮತ್ತು ಇದರ ನಂತರ, ಅವರಿಗೆ ಯೇಸುವು ಆಜ್ಞಾಪಿಸಿದ್ದನ್ನೆಲ್ಲಾ ಪಾಲಿಸುವುದು ಹೇಗೆಂದು ತೋರಿಸಲು ಪ್ರಯತ್ನಿಸುತ್ತೇನೆ. ಇದು ಮತ್ತಾಯನು 28:18-20ರಲ್ಲಿ ಕರ್ತನು ನಮಗೆ ಬಹಳ ಸ್ಪಷ್ಟವಾಗಿ ನೀಡಿರುವ ಆದೇಶವಾಗಿದೆ. ಜಗತ್ತಿನ ನಾನಾ ಭಾಗಗಳಲ್ಲಿ ನಮ್ಮ CFC ಸಭೆಗಳಲ್ಲಿ ಕಳೆದ 50 ವರ್ಷಗಳಲ್ಲಿ ನಾವು ಇದನ್ನೇ ಮಾಡಲು ಪ್ರಯತ್ನಿಸುತ್ತಿದ್ದೇವೆ.
ಈ ಭೂಲೋಕದಲ್ಲಿ ಯೇಸು ಕ್ರಿಸ್ತನ ಒಬ್ಬ ಶಿಷ್ಯನಾಗುವುದು ಹೇಗೆ ಮತ್ತು ದಿನನಿತ್ಯ ಆತನನ್ನು ಅನುಸರಿಸುವುದು ಹೇಗೆ ಎಂಬುದು ನನ್ನ ಸುವಾರ್ತೆಯಾಗಿದೆ. ಯೇಸುವು ಹೇಳಿದ್ದು ಏನೆಂದರೆ, ಒಂದು ಇಕ್ಕಟ್ಟಾದ ಬಾಗಿಲು ಮತ್ತು ಒಂದು ಬಿಕ್ಕಟ್ಟಿನ ದಾರಿಯು ನಿತ್ಯಜೀವಕ್ಕೆ ನಡೆಸುತ್ತದೆ (ಮತ್ತಾ. 7:14). ನಾವು ನಮ್ಮ ಪಾಪಗಳಿಗಾಗಿ ಪಶ್ಚಾತ್ತಾಪ ಪಡುವುದು ಮತ್ತು ಕ್ರಿಸ್ತನ ಮರಣ ಮತ್ತು ಪುನರುತ್ಥಾನವನ್ನು ನಂಬುವುದರ ಮೂಲಕ ಇಕ್ಕಟ್ಟಾದ ಬಾಗಿಲನ್ನು ಪ್ರವೇಶಿಸಬಹುದು. ಇದರ ನಂತರ ನಮಗೆ ಕೊಡಲ್ಪಟ್ಟಿರುವ ಬಿಕ್ಕಟ್ಟಿನ ದಾರಿಯಲ್ಲಿ ನಡೆಯುವ ಕರೆ, ಪ್ರತಿದಿನವೂ ನಮ್ಮ ಶಿಲುಬೆಯನ್ನು ಹೊರುವುದು ಮತ್ತು ನಮ್ಮ ಸ್ವಾರ್ಥಕ್ಕೆ ಸಾಯುವುದು, ಮತ್ತು ನಮ್ಮ ಜೀವಿತಗಳಲ್ಲಿ ಕ್ರಿಸ್ತನಿಗೆ ಮೊದಲನೇ ಸ್ಥಾನವನ್ನು ನೀಡುವುದು ಮತ್ತು ಆತನನ್ನು ಹಿಂಬಾಲಿಸುವುದು, ಇದೇ ಆಗಿದೆ. ಇದು ಜೀವಮಾರ್ಗ ಮತ್ತು ಶಿಷ್ಯತ್ವವಾಗಿದೆ, ಮತ್ತು ಯೇಸುವು ಇದನ್ನು ಮೇಲೆ ಪ್ರಸ್ತಾಪಿಸಿದ ವಚನದಲ್ಲಿ ಕಲಿಸಿದರು - ಹಾಗಾಗಿ ನಾವು ನಮ್ಮ ಎಲ್ಲಾ ಸಭೆಗಳಲ್ಲಿ ಈ ನಿತ್ಯಜೀವದ ಮಾರ್ಗವನ್ನು ಕಲಿಸುತ್ತೇವೆ.
ಶಿಷ್ಯತ್ವಕ್ಕೆ ಸಂಬಂಧಿಸಿದಂತೆ, "ಯಾವನಾದರೂ ನನ್ನ ಬಳಿಗೆ ಬಂದು ತನ್ನ ತಂದೆ ತಾಯಿ ಹೆಂಡತಿ ಮಕ್ಕಳು ಅಣ್ಣತಮ್ಮಂದಿರು ಅಕ್ಕತಂಗಿಯರು ಇವರನ್ನೂ, ತನ್ನ ಪ್ರಾಣವನ್ನೂ ಸಹ ಹಗೆ ಮಾಡದಿದ್ದರೆ, ಅವನು ನನ್ನ ಶಿಷ್ಯನಾಗಿರಲಾರನು," ಎಂದು ಯೇಸುವು ಲೂಕನು 14:26ರಲ್ಲಿ ಹೇಳಿದರು. ಯೇಸುವಿನ ಈ ವಾಕ್ಯಕ್ಕೆ ಅನುಸಾರವಾಗಿ, ನಿಮ್ಮ ಪ್ರೀತಿಪಾತ್ರರಾದ ಜನರನ್ನು ದ್ವೇಷಿಸಬೇಕೆಂದು ಯಾರಾದರೂ ಬೋಧಿಸಿದ್ದನ್ನು ನೀವು ಎಷ್ಟು ಸಲ ಕೇಳಿಸಿಕೊಂಡಿದ್ದೀರಿ? ಇದು ಯೇಸುವಿನ ಶಿಷ್ಯನಾಗುವದಕ್ಕೆ ಮೊದಲನೆಯ ಷರತ್ತು ಆಗಿದೆ. ಇದಲ್ಲದೆ ಎಲ್ಲಾ ಕಡೆಗಳಿಗೆ ಹೋಗಿ ಜನರನ್ನು ಶಿಷ್ಯರನ್ನಾಗಿ ಮಾಡಬೇಕೆಂದು ಯೇಸುವು ನಮಗೆ ಆಜ್ಞಾಪಿಸಿದರು - ಜನರನ್ನು ಕೇವಲ ಮಾನಸಾಂತರಕ್ಕೆ ನಡೆಸುವುದಲ್ಲ. ಹಾಗಾದರೆ, ನಾವು ಶಿಷ್ಯರನ್ನು ಮಾಡಲು ಬಯಸಿದರೆ, ನಾವು ಅವರಿಗೆ ಇತರ ಸಂಗತಿಗಳನ್ನು ಕಲಿಸುವುದಕ್ಕೆ ಮುಂಚೆ, ಶಿಷ್ಯತ್ವದ ಮೊದಲನೇ ಷರತ್ತನ್ನು ಕಲಿಸುವುದು ಅವಶ್ಯವಾಗಿದೆ.
ಒಂದು ಮಗುವು ಶಾಲೆಗೆ ಸೇರಿದಾಗ, ಆತನಿಗೆ ಪ್ರಾರಂಭದಲ್ಲಿ ಭೌತಶಾಸ್ತ್ರ ಅಥವಾ ರಸಾಯನಶಾಸ್ತ್ರವನ್ನು ಕಲಿಸಲಾಗುವುದಿಲ್ಲ. ಇಲ್ಲ. ಆತನಿಗೆ ಮೊದಲು ವರ್ಣಮಾಲೆಯನ್ನು ಕಲಿಸಲಾಗುತ್ತದೆ - ಅ, ಆ, ಇ, ಈ, ಇತ್ಯಾದಿ. ಅದೇ ರೀತಿ, ನಮ್ಮ ಸಭೆಗಳಿಗೆ ಸೇರುವವರಿಗೆ ಎಲ್ಲಕ್ಕೂ ಮೊದಲು ಶಿಷ್ಯತ್ವದ ವರ್ಣಮಾಲೆಯನ್ನು ಕಲಿಸಲಾಗುತ್ತದೆ - ಅಂದರೆ ಯೇಸುವನ್ನು ಅತಿ ಹೆಚ್ಚಾಗಿ ಪ್ರೀತಿಸುವುದು. ಈ ಷರತ್ತನ್ನು ಪಾಲಿಸಲು ಇಷ್ಟಪಡದವರು ಕರ್ತ ಯೇಸು ಕ್ರಿಸ್ತನ ಶಿಷ್ಯರು ಆಗಲಾರರು, ಎಂಬುದನ್ನು ಅವರಿಗೆ ಆರಂಭದಲ್ಲಿಯೇ ಸ್ಪಷ್ಟವಾಗಿ ತಿಳಿಸಬೇಕು. ಶಿಷ್ಯರಲ್ಲಿ ಒಂದೇ ಒಂದು ವರ್ಗ ಅಥವಾ ಶ್ರೇಣಿ ಇದೆ - "ತಂದೆ ತಾಯಿ ಅಣ್ಣತಮ್ಮಂದಿರು ಅಕ್ಕತಂಗಿಯರು ಹೆಂಡತಿ ಮಕ್ಕಳು ಇವರನ್ನು ಮತ್ತು ಸ್ವಂತ ಪಾಣವನ್ನು ಸಹ ಹಗೆ ಮಾಡುವವರು" (ಲೂಕನು 14:26).
ನಾವು ಯೇಸುವಿನ ಈ ಷರತ್ತಿನೊಂದಿಗೆ, "ನಿಮ್ಮ ತಂದೆತಾಯಿಗಳನ್ನು ಸನ್ಮಾನಿಸಿರಿ," ಮತ್ತು "ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ನಿಮ್ಮ ಹೆಂಡತಿಯನ್ನು ಪ್ರೀತಿಸಿರಿ," ಎಂದು ಹೇಳುವ ಸತ್ಯವೇದದ ಇತರ ಆಜ್ಞೆಗಳನ್ನು ಹೇಗೆ ಹೊಂದಾಣಿಕೆ ಮಾಡಬೇಕು ಮತ್ತು ನಮ್ಮ ಮಕ್ಕಳನ್ನು ಮತ್ತು ನಮ್ಮ ಸಹೋದರರು ಮತ್ತು ಸಹೋದರಿಯರನ್ನು ಹೇಗೆ ಪ್ರೀತಿಸಬೇಕು?
ಯೇಸುವು ಅನೇಕ ಬಾರಿ ತನ್ನ ಸಂದೇಶಗಳಲ್ಲಿ ಯಾವುದಾದರೂ ಅಂಶವನ್ನು ಸ್ಪಷ್ಟಪಡಿಸಲು ಚಿತ್ರಣಗಳನ್ನು ಬಳಸುತ್ತಿದ್ದರು. ಹಾಗಾಗಿ ಇಲ್ಲಿ ಒಂದಕ್ಕೊಂದು ವಿರುದ್ಧವಾಗಿ ತೋರುವಂತ ಕುಟುಂಬದ ಸದಸ್ಯರನ್ನು ಪ್ರೀತಿಸಬೇಕು ಹಾಗೂ ದ್ವೇಷಿಸಬೇಕು ಎಂದು ಹೇಳುವ ಇವೆರಡು ಆಜ್ಞೆಗಳನ್ನು ಅರ್ಥಮಾಡಿಕೊಳ್ಳಲು ಯಾವುದಾದರೂ ಚಿತ್ರಣ ಅಥವಾ ಉದಾಹರಣೆ ಸಿಗುತ್ತದೆಯೇ ಎಂದು ನಾನು ಹುಡುಕಿದೆ! ಮತ್ತು ನನಗೆ ಇದರ ಅರ್ಥವು ಈ ಕೆಳಗಿನ ಚಿತ್ರಣದ ಮೂಲಕ ಸ್ಪಷ್ಟವಾಗಿ ತಿಳಿಯಿತು; ನಾನು ನನ್ನ ತಂದೆ, ತಾಯಿ, ಹೆಂಡತಿ, ಮಕ್ಕಳು, ಸಹೋದರರು ಮತ್ತು ಸಹೋದರಿಯರಿಗಾಗಿ ನನ್ನಲ್ಲಿ ಇರಬೇಕಾದ ಪ್ರೀತಿಯನ್ನು ನಕ್ಷತ್ರಗಳ ಬೆಳಕಿಗೆ ಹೋಲಿಸುತ್ತೇನೆ - ಶುಭ್ರವಾದ ಬೆಳಕು ಮತ್ತು ಅದರಲ್ಲಿ ಯಾವುದೇ ಕತ್ತಲೆ ಇರುವುದಿಲ್ಲ - ಇದು ನಮ್ಮಲ್ಲಿ ನಮ್ಮ ಕುಟುಂಬದ ಸದಸ್ಯರಿಗಾಗಿ ಇರಬೇಕಾದ ಪ್ರೀತಿಯ ಒಂದು ಚಿತ್ರಣವಾಗಿದೆ. ಆದರೆ ಬೆಳಗ್ಗೆ, ಸೂರ್ಯನು ಮೂಡುವಾಗ, ನಕ್ಷತ್ರಗಳು ಕಣ್ಣಿಗೆ ಕಾಣಿಸುವುದಿಲ್ಲ. ಅವೆಲ್ಲವೂ ಆಕಾಶದಲ್ಲಿವೆ, ಆದರೆ ನಾವು ಅವುಗಳನ್ನು ಕಾಣಲಾರೆವು. ಇದೇ ರೀತಿ, ಕ್ರಿಸ್ತನಿಗಾಗಿ ನನ್ನ ಪ್ರೀತಿಯು ಸೂರ್ಯನ ಬೆಳಕಿನಂತೆ ಇರಬೇಕು; ಮತ್ತು ಆ ಬೆಳಕಿನ ಮುಂದೆ, ನನ್ನ ಕುಟುಂಬದ ಸದಸ್ಯರಿಗಾಗಿ ನನ್ನಲ್ಲಿರುವ ಪ್ರೀತಿಯು ಗಣನೆಗೆ ಬಾರದಷ್ಟು ಮಂದವಾಗಿ ಅಥವಾ ವಿರಳವಾಗಿ ಕಾಣಿಸುತ್ತದೆ. ನಾನು ಈಗಲೂ ನನ್ನ ಕುಟುಂಬದ ಸದಸ್ಯರನ್ನು ಪ್ರೀತಿಸುತ್ತೇನೆ (ಬೆಳಿಗ್ಗಿನ ವೇಳೆಯಲ್ಲೂ ನಕ್ಷತ್ರಗಳು ಇರುತ್ತವೆ). ಆದರೆ ಕ್ರಿಸ್ತನಿಗಾಗಿ ನನ್ನ ಪ್ರೀತಿ ಎಷ್ಟು ಅಪಾರವಾಗಿದೆಯೆಂದರೆ, ಈಗ ಕ್ರಿಸ್ತನ ಪ್ರೀತಿಯ ಮೂಲಕ ಮಾತ್ರವೇ ನಾನು ಬೇರೆಲ್ಲರನ್ನೂ ಪ್ರೀತಿಸುತ್ತೇನೆ. ಅದರ ಅರ್ಥ, ನನ್ನಲ್ಲಿ ಕ್ರಿಸ್ತನಿಗಾಗಿ ಪ್ರೀತಿ ಎಷ್ಟು ಹೆಚ್ಚಾಗಿದೆಯೆಂದರೆ, ನನ್ನ ಮತ್ತು ಕ್ರಿಸ್ತನ ನಡುವೆ ನನ್ನ ಹೆಂಡತಿ ಅಥವಾ ನನ್ನ ತಂದೆತಾಯಿ ಅಥವಾ ಬೇರೆ ಯಾರೇ ಇರಲಿ ಎಂದಿಗೂ ತಡೆಯಾಗಿ ಬಾರದಂತೆ ನಾನು ನೋಡಿಕೊಳ್ಳುತ್ತೇನೆ. ಇನ್ನು ಮುಂದೆ ಕ್ರಿಸ್ತನಿಗಾಗಿ ನನ್ನ ಪರಮ ಪ್ರೀತಿಯ ಮೂಲಕ ಮಾತ್ರವೇ ನಾನು ಬೇರೆಲ್ಲರನ್ನು ಪ್ರೀತಿಸುತ್ತೇನೆ.
ಯೇಸುವು, "ನಾನು ನನ್ನ ಸಭೆಯನ್ನು ಕಟ್ಟುವೆನು," ಎಂದು ಹೇಳಿದರು. ಆತನು ಮಾತ್ರವೇ ಅದನ್ನು ಕಟ್ಟಬಲ್ಲನು. ನಾವು ಕೇವಲ ಆತನ ದೇಹದ ಅಂಗಗಳಾಗಿದ್ದೇವೆ - ಒಬ್ಬನು ನಾಲಿಗೆಯಂತಿದ್ದಾನೆ, ಮತ್ತೊಬ್ಬನು ಕೈಯಂತಿದ್ದಾನೆ ಹಾಗೂ ಇನ್ನೊಬ್ಬನು ಕಾಲಿನಂತಿದ್ದಾನೆ. ಅಷ್ಟೊಂದು ಪ್ರಾಮುಖ್ಯತೆ ಹೊಂದದಿರುವ ಇತರ ವಿಶ್ವಾಸಿಗಳು ದೇಹದ ಒಳಗೆ ಮರೆಯಾಗಿರುವ ಅಂಗಗಳಂತೆ ಇದ್ದಾರೆ. ಆದರೆ ತಲೆಯ ಸ್ಥಾನದಲ್ಲಿರುವ ಕ್ರಿಸ್ತನು ತನ್ನ ದೇಹವನ್ನು ನಿರ್ಮಿಸುತ್ತಾನೆ. ನಾವು ಆತನ ದೇಹದ ಅಂಗಗಳಾಗಿದ್ದು, ಆತನ ಆಳ್ವಿಕೆಗೆ, ನಿಯಂತ್ರಣಕ್ಕೆ ನಮ್ಮನ್ನು ಒಪ್ಪಿಸಿಕೊಟ್ಟರೆ ಆತನು ನಮ್ಮನ್ನು ಉಪಯೋಗಿಸಿಕೊಳ್ಳುತ್ತಾನೆ. ಕೈ ಕಾಲುಗಳು ತಾವಾಗಿಯೇ ಏನೂ ಮಾಡಲಾರವು. ಕೈಯು ಏನು ಮಾಡಬೇಕೆಂದು ಮತ್ತು ಕಾಲುಗಳು ಎಲ್ಲಿಗೆ ಹೋಗಬೇಕೆಂದು ತಲೆಯು ಹೇಳುತ್ತದೆ. ನಾವು ಈ ರೀತಿಯಾಗಿ ಕ್ರಿಸ್ತನಿಗೆ ಅಧೀನರಾಗಿರಬೇಕು. ಇದು ಕ್ರಿಸ್ತನ ದೇಹದ ಕಾರ್ಯ ನಿರ್ವಹಣೆ ಹಾಗೂ ಕಟ್ಟಲ್ಪಡುವಿಕೆಯ ವಿಧಾನವಾಗಿದೆ. ನಾವು ಈ ಅಂಶವನ್ನು ನಮ್ಮ ಸಭೆಯಲ್ಲಿ ಒತ್ತಿ ಹೇಳಲು ಪ್ರಯತ್ನಿಸುತ್ತೇವೆ.
ಆದರೆ ದೇವರು ಯಾರನ್ನಾದರೂ ಸಣ್ಣ ಪ್ರಮಾಣದಲ್ಲಿ ಉಪಯೋಗಿಸಿಕೊಂಡಾಗ ಮತ್ತು ಆ ಸ್ಥಳದಲ್ಲಿ ಕ್ರಿಸ್ತನ ದೇಹವು ಅದ್ಭುತವಾದ ರೀತಿಯಲ್ಲಿ ಬೆಳೆಯುತ್ತಿರುವುದು ಆ ವ್ಯಕ್ತಿಯ ಗಮನಕ್ಕೆ ಬಂದಾಗ, ಅಲ್ಲಿ ಆತ್ಮಿಕ ಅಹಂಕಾರ ತಲೆಯೆತ್ತುವ ಬಹಳ ಅಪಾಯಕರ ಸಾಧ್ಯತೆ ಉಂಟಾಗುತ್ತದೆ. ದೇವರ ಆಶೀರ್ವಾದದ ಜೊತೆಜೊತೆಗೆ ಅಹಂಕಾರವೂ ಇರುತ್ತದೆ. ಆ ಸ್ಥಳೀಯ ಸಭೆ ನಮ್ಮಿಂದ ಕಟ್ಟಲ್ಪಟ್ಟಿದೆ ಅಥವಾ ಕ್ರಿಸ್ತನ ಬಳಿಗೆ ಜನರನ್ನು ನಾವು ಕರೆತಂದಿದ್ದೇವೆಂದು ನಾವು ಯೋಚಿಸಲು ಆರಂಭಿಸಬಹುದು. ದೇವರ ಒಬ್ಬ ಸೇವಕನಲ್ಲಿ ಅಥವಾ ಒಂದು ಸಭೆಯಲ್ಲಿ ಅಹಂಕಾರವು ಬಂದಾಗ, ದೇವರು ಒಡನೆಯೇ ಆ ವ್ಯಕ್ತಿಯನ್ನು ಅಥವಾ ಆ ಸಭೆಯನ್ನು ವಿರೋಧಿಸಲು ಆರಂಭಿಸುತ್ತಾರೆ.
ನಾವೆಲ್ಲರೂ ದೇವಭಯದಲ್ಲಿ ಜೀವಿಸೋಣ ಮತ್ತು ಪ್ರತಿದಿನ ದೇವರಾತ್ಮನ ಬಲಕ್ಕಾಗಿ ಬೇಡಿಕೊಳ್ಳೋಣ, ಮತ್ತು ಈ ರೀತಿಯಾಗಿ ನಾವು ನಮ್ಮ ಜೀವಿತಗಳಲ್ಲಿ ದೇವರನ್ನು ಮಹಿಮೆ ಪಡಿಸಬಹುದು ಮತ್ತು ಈ ಕೊನೆಯ ದಿನಗಳಲ್ಲಿ ಆತನ ಸಭೆಯನ್ನು ಕಟ್ಟಬಹುದು.
ಆಮೆನ್