WFTW Body: 

ಇಬ್ರಿಯ 5:8 ರಲ್ಲಿ ನಾವು ಹೀಗೆ ಓದುತ್ತೇವೆ "ಹೀಗೆ ಆತನು ಮಗನಾಗಿದ್ದರೂ, ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನು". ಯೇಸುವು ವಿಧೇಯತೆಯನ್ನು ಕಲಿಯಬೇಕಾಗಿತ್ತು. "ಕಲಿಯುವುದು" ಎಂಬ ಪದವು ವಿದ್ಯಾಭ್ಯಾಸಕ್ಕೆ (ಶಿಕ್ಷಣಕ್ಕೆ) ಸಂಬಂಧಿಸಿದ್ದಾಗಿದೆ. ಯೇಸುವು ಮನುಷ್ಯನಾಗಿ ಈ ಭೂಮಿಯ ಮೇಲೆ ನಡೆದಾಡಿದ ಸಮಯದಲ್ಲಿ ವಿಧೇಯತೆಯ ಶಿಕ್ಷಣವನ್ನು ಕಲಿಯಬೇಕಾಗಿತ್ತು. ಆತನು ಪರಲೋಕದಲ್ಲಿ ದೇವರಾಗಿದ್ದಾಗ ಯಾರಿಗೂ ವಿಧೇಯನಾಗಿರಲಿಲ್ಲ. ನೀವು ನಿಮ್ಮ ಜೀವನವಿಡೀ ಮಾಡದೇ ಇರುವಂತಹ ಕೆಲಸವನ್ನು ಮೊದಲನೇ ಸಲ ಮಾಡಿದಾಗ ನೀವು ಕೆಲವು ಸಂಗತಿಗಳನ್ನು ಕಲಿಯುತ್ತೀರಿ. ಅದೇ ರೀತಿಯಲ್ಲಿ ಯೇಸುವು ಕೂಡ ಮನುಷ್ಯನಾಗಿ ಭೂಮಿಗೆ ಬಂದಾಗ ವಿಧೇಯತೆಯನ್ನು ಕಲಿತನು. ತನ್ನ ಪರಲೋಕದ ತಂದೆಗೆ ವಿಧೇಯನಾಗುವುದರ ಜೊತೆಗೆ, ಯೋಸೆಫ ಹಾಗೂ ಮರಿಯ ಇವರಿಬ್ಬರಿಗೂ ವಿಧೇಯನಾಗಬೇಕಾಗಿತ್ತು. ಯೋಸೇಫ ಮತ್ತು ಮರಿಯಳು ಪಾಪಿಗಳಾಗಿದ್ದರು ಮತ್ತು ಪರಿಪೂರ್ಣರಾಗಿರಲಿಲ್ಲ. ಅವರೂ ಸಹ ಎಲ್ಲಾ ತಂದೆ-ತಾಯಿಯರಂತೆ ತಪ್ಪುಗಳನ್ನು ಮಾಡುವವರಾಗಿದ್ದರು. ಹಾಗಿದ್ದರೂ ಯೇಸು ಅವರಿಗೆ ವಿಧೇಯನಾದನು. ಇದು ಆತನಿಗೆ ತುಂಬಾ ಕಷ್ಟಕರವಾಗಿರಬೇಕು. ಆತನು ವಿಧೇಯನಾದನು ಹಾಗೂ ವಿಧೇಯತೆಯ ಮೂಲಕ ಕಷ್ಟಗಳನ್ನು ಸಹಿಸಿಕೊಂಡನು. ಇದರ ಅರ್ಥವೇನೆಂದರೆ, ಯೇಸು ತನ್ನ ಜೀವನವಿಡೀ ಸ್ವಂತ ಇಚ್ಚೆಯನ್ನು(ಚಿತ್ತವನ್ನು) ನಿರಾಕರಿಸುವಂತಹ ನೋವನ್ನು ಅನುಭವಿಸಿದನು ಮತ್ತು ಈ ಮೂಲಕ ತನ್ನ ತಂದೆಗೆ ವಿಧೇಯನಾದನು. ಈ ರೀತಿಯಾಗಿ ಅವನು ಕಷ್ಟದ (ಬಾಧೆಯ) ಮೂಲಕ ವಿಧೇಯತೆಯನ್ನು ಕಲಿತುಕೊಂಡನು.

ವಿಧೇಯತೆಯಲ್ಲಿ ಕೆಲವು ಸಂಗತಿಗಳು ತುಂಬಾ ಸಂತೋಷದಾಯಕವಾಗಿರುತ್ತವೆ. ನಿಮ್ಮ ಮಗುವಿಗೆ ನೀವು ಐಸ್ ಕ್ರೀಮ್ ತಿನ್ನಲಿಕ್ಕೆ ಹೇಳಿದರೆ, ಆತನು ಖುಷಿಯಿಂದ ನಿಮಗೆ ವಿಧೇಯನಾಗುತ್ತಾನೆ. ಅದರಲ್ಲಿ ಆತನಿಗೆ ಯಾವುದೇ ಕಷ್ಟವಿಲ್ಲ. ಆದರೆ ಆತನು ಹೊರಗಡೆ ಆಟವಾಡುತ್ತಿರುವಾಗ, ಮನೆ ಕೆಲಸ ಮಾಡಲು ಅವನನ್ನು ನೀವು ಕರೆದಾಗ ವಿಧೇಯನಾಗಲು ಅವನಿಗೆ ಕಷ್ಟವಾಗುತ್ತದೆ. ಅದೇ ರೀತಿ ನಮ್ಮ ಜೀವನದಲ್ಲೂ ಕೂಡ ನಾವು ವಿಧೇಯರಾಗುವಾಗ ಕೆಲವೊಂದು ಸಂಗತಿಗಳು/ಕ್ಷೇತ್ರಗಳು ಸುಲಭವಾಗಿರುತ್ತವೆ ಮತ್ತು ಸಂತೋಷದಾಯಕವಾಗಿರುತ್ತವೆ . ಕೆಲ ಸಂಗತಿಗಳು ನಮಗೆ ಒಳ್ಳೆಯದನ್ನುಂಟುಮಾಡುತ್ತವೆ ಎಂದು ತಿಳಿದಿದ್ದಾಗ ನಾವು ವಿಧೇಯರಾಗುತ್ತೇವೆ. ಆದರೆ ನಿಜವಾದ ವಿಧೇಯತೆಯ ನಿಜವಾದ ಪರೀಕ್ಷೆಯೆಂದರೆ ನಮಗೆ ಮಾಡಲು ಮನಸ್ಸಿಲ್ಲದ ಅಥವಾ ನಮಗೆ ನೋವನ್ನುಂಟುಮಾಡುವ ವಿಷಯಗಳಲ್ಲಿ ನಾವು ನಮ್ಮ ಚಿತ್ತವನ್ನು ನಿರಾಕರಿಸುವದಾಗಿದೆ. ಇಂತಹ ವಿಷಯಗಳೇ ನಿಜವಾಗಿಯೂ ನಮ್ಮ ವಿಧೇಯತೆಯನ್ನು ಪರೀಕ್ಷಿಸುತ್ತವೆ.

''ಯೇಸುವು ತನ್ನನ್ನು ನಿರಾಕರಿಸುವುದರಿಂದ ವಿಧೇಯತೆಯನ್ನು ಕಲಿತುಕೊಂಡನು'''. ತಂದೆಯು "ಬೇಡ"ವೆಂದು ಹೇಳಿದ ಕೆಲಸಕ್ಕೆ ತಾನೂ ಕೂಡ "ಬೇಡ"ವೆಂದೇ ಯೇಸು ಹೇಳುತ್ತಿದ್ದರು. ಕಷ್ಟದ ನೋವನ್ನು ಅನುಭವಿಸುವದರ ಮೂಲಕ ಯೇಸುವು ವಿಧೇಯತೆಯನ್ನು ಕಲಿತುಕೊಂಡನು ಮತ್ತು ಕೊನೆಗೆ "ಆತನು ಸಿದ್ಧಿಗೆ ಬಂದನು(ಪರಿಪೂರ್ಣನಾದನು)" (ಇಬ್ರಿಯ 5:9). "ಪರಿಪೂರ್ಣತೆ" ಎಂದರೆ "ಮುಗಿಯಿತು" ಎಂಬುದಾಗಿ. ಯೇಸು ತನ್ನ ವಿದ್ಯಾಭ್ಯಾಸವನ್ನು ಮುಗಿಸಿ ತನ್ನ ಪದವಿಯನ್ನು ಪಡೆದುಕೊಂಡನು. ನಾವು ಕೂಡ ಇದೇ ಪದವಿಯನ್ನು ಪಡೆಯಬೇಕು. ಯೇಸುವಿನಂತೆಯೇ ನಾವೂ ಸಹ ಅನೇಕ ಶೋಧನೆಗಳನ್ನು ಜಯಿಸಬೇಕು. ನಾವು ಒಂದು ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಏನಾಗುತ್ತದೆ? ಆ ಪರೀಕ್ಷೆಯನ್ನು ನಾವು ಮತ್ತೊಮ್ಮೆ ಬರೆಯಬೇಕಾಗುತ್ತದೆ! ಅಂತಿಮವಾಗಿ ನಾವು ಎಲ್ಲಾ ಪರೀಕ್ಷೆಗಳಲ್ಲಿ ಉತ್ತೀರ್ಣರಾದಗ ನಮಗೆ ಪದವಿ ದೊರೆಯುತ್ತದೆ. ಆಗ ನಾವು ಜಯಶಾಲಿಗಳಾಗುತ್ತೇವೆ! ನಾವು ನಮ್ಮ ಜೀವಿತದಲ್ಲಿ ಪಡೆಯಬಹುದಾದ ಅತ್ಯಮೂಲ್ಯ ಪದವಿ ಇದಾಗಿರುತ್ತದೆ. ಜಗತ್ತು ಕೊಡುವ ಎಲ್ಲಾ ಪದವಿಗಳು ಈ ಪದವಿಯ ಮುಂದೆ ಕಸದಂತೆ ಕಾಣುತ್ತದೆ. ನನ್ನನ್ನು "ಹಿಂಬಾಲಿಸಿ" ಎಂದು ಯೇಸು ಹೇಳಿದಾಗ ರಕ್ಷಣೆಯ ನಾಯಕನಾಗಿ ಯೇಸು ಏನು ಮಾಡಿದರೋ ಅದನ್ನೇ ಅನುಸರಿಸಲು ನಮಗೂ ಕರೆಯುತ್ತಾರೆ. ಯೇಸು ಅನುಭವಿಸದ ಯಾವುದೇ ಕಷ್ಟ(ಶೋಧನೆ)ಯನ್ನು ಎದುರಿಸುವಂತೆ ಆತನು ನಮಗೆ ಹೇಳುವದಿಲ್ಲ. ಹಾಗಿದ್ದಲ್ಲಿ ನಮ್ಮ ವಿದ್ಯಾಭ್ಯಾಸವನ್ನು ಪೂರ್ತಿ ಮಾಡಿಕೊಳ್ಳುವದಕ್ಕಾಗಿ ಕೃಪೆಯನ್ನು ಪಡೆಯಲು ಕೃಪಾ-ಸಿಂಹಾಸನದ ಬಳಿಗೆ ಧೈರ್ಯದಿಂದ ಹೋಗೋಣ. ಕಷ್ಟವನ್ನು ಅನುಭವಿಸಬೇಕಾದರೆ ಅದನ್ನೂ ಕೂಡ ಅನುಭವಿಸೋಣ. ಆದರೆ ವಿಧೇಯತೆಯನ್ನು ಕಲಿತುಕೊಳ್ಳಲು ಮತ್ತು ನಮ್ಮ ವಿಧ್ಯಾಭ್ಯಾಸವನ್ನು ಪೂರ್ಣಗೊಳಿಸಲು ಧೃಡವಾಗಿ ನಿರ್ಧರಿಸೋಣ.

ಇಬ್ರಿಯ 5:9ರಲ್ಲಿ "ಇದಲ್ಲದೆ ಆತನು ಸಿದ್ಧಿಗೆ ಬಂದು ದೇವರಿಂದ ಮೆಲ್ಕಿಜೆದೇಕನ ತರಹದ ಮಹಾಯಾಜಕನೆಂದೆನಿಸಿಕೊಂಡವನಾಗಿ ತನಗೆ ವಿಧೇಯರಾಗಿರುವವರೆಲ್ಲರಿಗೂ ನಿರಂತರವಾದ ರಕ್ಷಣೆಗೆ ಕಾರಣನಾದನು". ಯೇಸುವು ವಿಧೇಯತೆಯಂಬ ಕಾಲೇಜಿನ ಮುಖ್ಯೋಪಧ್ಯಾಯನಾಗಿದ್ದಾನೆ. ಯೇಸು ಚಿಕ್ಕ ತರಗತಿಯಿಂದ ಉನ್ನತ ತರಗತಿಯವರೆಗೆ ಇದೇ ಕಾಲೇಜನಲ್ಲಿ ಕಲಿತುಕೊಂಡು ಮತ್ತು ಎಲ್ಲದರಲ್ಲಿಯೂ ವಿಧೇಯನಾದನು. ದೇವರ ಸೇವಕರಾದ ನಾವು ಈ ಕಾಲೇಜಿನ ಕಿರಿಯ ಅಧ್ಯಾಪಕರಾಗಿ ವಿಧೇಯತೆಯನ್ನು ಕಲಿಯಲು ಕರೆಯಲ್ಪಟ್ಟಿದ್ದೇವೆ. ನೀವು ಬಾಧೆಗಳ ಮೂಲಕ ಹೆಚ್ಚು ವಿಧೇಯತೆಯನ್ನು ಕಲಿತುಕೊಂಡಾಗ, ಅಷ್ಟೇ ವಿಧೇಯತೆಯಲ್ಲಿ ಇತರರನ್ನೂ ನಡೆಸುವ ನಿಜವಾದ ಕ್ರಿಸ್ತ ಸೇವಕರಾಗಿ ಹೊರಹೊಮ್ಮುತ್ತೀರಿ. ಇದು ಮಾತ್ರವೇ ನಿಜವಾದ ಕ್ರಿಸ್ತೀಯ ಸೇವೆಯಾಗಿದೆ.