WFTW Body: 

ಯೇಸುವು ಯೋಹಾ. 16:33ರಲ್ಲಿ, "ಲೋಕದಲ್ಲಿ ನಿಮಗೆ ಸಂಕಟ ಉಂಟು; ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ," ಎಂದು ಹೇಳಿದರು. ನಾವು ಸಂಕಟದಿಂದ ಪಾರಾಗುತ್ತೇವೆ ಎಂಬ ವಾಗ್ದಾನವನ್ನು - ಅದು ಚಿಕ್ಕ ಸಂಕಟವಿರಲಿ ಅಥವಾ ಮಹಾ ಸಂಕಟವೇ ಆಗಲಿ - ಅವರು ಎಂದಿಗೂ ಮಾಡಲಿಲ್ಲ. ಅದರೆ ಅವರು ಸ್ಪಷ್ಟವಾಗಿ ತಿಳಿಸಿದ್ದು ಏನೆಂದರೆ, ಅವರು ಜಯಿಸಿದ ಹಾಗೆಯೇ ನಾವೂ ಜಯಿಸುತ್ತೇವೆ, ಎಂಬುದಾಗಿ. ಅವರ ಆಸಕ್ತಿ ನಮ್ಮನ್ನು ಸಂಕಟದಿಂದ ರಕ್ಷಿಸುವುದಕ್ಕಿಂತ ಹೆಚ್ಚಾಗಿ ನಮ್ಮನ್ನು ಸಂಕಟದ ವಿರುದ್ಧ ಜಯಶಾಲಿಗಳನ್ನಾಗಿ ಮಾಡುವದು ಆಗಿದೆ, ಏಕೆಂದರೆ ಅವರ ದೃಷ್ಟಿಯಲ್ಲಿ ನಮ್ಮ ಸುಖ-ಸೌಲಭ್ಯಗಳಿಗಿಂತ ನಮ್ಮ ಆತ್ಮಿಕ ಗುಣ ಬಹಳ ಮುಖ್ಯವಾಗಿದೆ.

ಮಹಾ ಸಂಕಟದಿಂದ ತಪ್ಪಿಸಿಕೊಳ್ಳುವುದು ನಂಬಿಗಸ್ತಿಕೆಯ ಪ್ರತಿಫಲವೆಂದು ಕೆಲವರು ಬೋಧಿಸುವ ಹಾಗೆ, ಯೇಸುವು ಯಾವತ್ತೂ ಬೋಧಿಸಲಿಲ್ಲ. ಇದಕ್ಕೆ ಪ್ರತಿಯಾಗಿ, ಅವರನ್ನು ಹಿಂಬಾಲಿಸದೇ ಇರುವವರಿಗಿಂತ, ಎಲ್ಲವನ್ನೂ ತ್ಯಜಿಸಿ ಅವರನ್ನು ಹಿಂಬಾಲಿಸುವವನಿಗೆ ಇನ್ನೂ ಹೆಚ್ಚಿನ ಸಂಕಟಗಳು ಬರುತ್ತವೆಂದು ಅವರು ತಿಳಿಸಿದರು (ಮಾರ್ಕ. 10:30) . ಅವರು ತನ್ನ ಶಿಷ್ಯರಿಗಾಗಿ ತನ್ನ ತಂದೆಯ ಬಳಿ, "ಇವರನ್ನು ಲೋಕದೊಳಗಿಂದ ತೆಗೆದುಕೊಂಡು ಹೋಗಬೇಕೆಂದು ನಾನು ಕೇಳಿಕೊಳ್ಳುವುದಿಲ್ಲ; ಕೇಡಿನಿಂದ ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ," ಎಂದು ಪ್ರಾರ್ಥಿಸಿದರು (ಯೋಹಾ. 17:15) . ಶಿಷ್ಯರು ಮಹಾ ಸಂಕಟವನ್ನು ಎದುರಿಸ ಬೇಕಾಗುತ್ತದೆ ಎಂಬ ಕಾರಣಕ್ಕಾಗಿ, ಆ ಸಮಯ ಬಂದಾಗ ಅವರು ಲೋಕದಿಂದ ಮೇಲಕ್ಕೆ ಎತ್ತಲ್ಪಡುವದು ಅವರ ಇಚ್ಛೆ ಆಗಿರಲಿಲ್ಲ.

ಮೂರನೇ ಶತಮಾನದಲ್ಲಿ, ಕ್ರೈಸ್ತರು ರೋಮ್ ಸಾಮ್ರಾಜ್ಯದ ವಿವಿಧ ಪ್ರಾಂತ್ಯಗಳ ಮಹಾ ಕ್ರೀಡಾಂಗಣಗಳಲ್ಲಿ ಸಿಂಹಗಳ ಬಾಯಿಗೆ ಆಹುತಿಯಾಗಿ ಸಾವಿಗೆ ಈಡಾಗುತ್ತಿದ್ದಾಗ ಮತ್ತು ಕಂಭಗಳಿಗೆ ಕಟ್ಟಲ್ಪಟ್ಟು ಸುಟ್ಟು ಸಾಯುತ್ತಿದ್ದಾಗ, ಕರ್ತನು ಅವರನ್ನು ಆ ಸಂಕಟಗಳಿಂದ ರಕ್ಷಿಸಲಿಲ್ಲ. ದಾನಿಯೇಲನ ದಿನದಲ್ಲಿ ಸಿಂಹಗಳ ಬಾಯನ್ನು ಮುಚ್ಚಿಸಿದ ಮತ್ತು ಉರಿಯುವ ಆವಿಗೆಯ ಅಗ್ನಿ ಜ್ವಾಲೆಯನ್ನು ತಣ್ಣಗಾಗಿಸಿದ ದೇವರು, ಯೇಸುವಿನ ಈ ಶಿಷ್ಯರಿಗಾಗಿ ಅಂತಹ ಅದ್ಭುತಕಾರ್ಯಗಳನ್ನು ಮಾಡಲಿಲ್ಲ - ಏಕೆಂದರೆ ಇವರು ಮರಣದ ಮೂಲಕ ದೇವರನ್ನು ಮಹಿಮೆ ಪಡಿಸುವಂಥ ಹೊಸ ಒಡಂಬಡಿಕೆಯ ಕ್ರೈಸ್ತರಾಗಿದ್ದರು. ಅವರ ಒಡೆಯನಾದ ಯೇಸುವಿನಂತೆ, ಅವರೂ ಸಹ ವಿರೋಧಿಗಳಿಂದ ರಕ್ಷಣೆಗಾಗಿ ದೇವದೂತರ 12 ಗಣಗಳು ಬರುವಂತೆ ಪ್ರಾರ್ಥಿಸಲೂ ಇಲ್ಲ, ಅದನ್ನು ನಿರೀಕ್ಷಿಸಲೂ ಇಲ್ಲ.

ದೇವರು ಪರಲೋಕದಿಂದ, ತನ್ನ ಮಗನನ್ನು ವಿವಾಹವಾಗುವ ಕನ್ಯೆಯು ಸಿಂಹಗಳ ಬಾಯಲ್ಲಿ ಸೀಳಲ್ಪಡುವದನ್ನು ಮತ್ತು ಸುಟ್ಟು ಬೂದಿಯಾಗುವುದನ್ನು ಕಂಡರು; ಅವರ ಸಾಕ್ಷಿಯು ದೇವರನ್ನು ಮಹಿಮೆ ಪಡಿಸಿತು - ಏಕೆಂದರೆ, "ಕುರಿಯಾದಾತನು ಎಲ್ಲಿ ಹೋದರೂ ಇವರು ಆತನ ಹಿಂದೆ ಹೋಗುವರು," (ಪ್ರಕ. 14:4) ಎಂಬ ಮಾತನ್ನು, ಅವರು ಕ್ರೂರ ಮರಣದ ಮಾರ್ಗದಲ್ಲಿಯೂ ಸಿದ್ಧಪಡಿಸಿದರು. ಕರ್ತನು ಅವರಿಗೆ ಹೇಳಿದ ಒಂದೇ ಮಾತು, "ನೀನು ಸಾಯಬೇಕಾದರೂ ನಂಬಿಗಸ್ತನಾಗಿರು, ನಾನು ನಿನಗೆ ಜೀವವೆಂಬ ಜಯಮಾಲೆಯನ್ನು ಕೊಡುವೆನು" (ಪ್ರಕ. 2:10) . ಈ ದಿನವೂ, ಅನೇಕ ದೇಶಗಳಲ್ಲಿ ಯೇಸುವಿನ ಶಿಷ್ಯರು ಅವರ ಹೆಸರಿನ ಸಾಕ್ಷಿಗಾಗಿ ಯಾತನೆ ಮತ್ತು ಹಿಂಸೆಯನ್ನು ಅನುಭವಿಸುತ್ತಿರುವಾಗ, ಕರ್ತನು ಅವರನ್ನು ಲೋಕದಿಂದ ತೆಗೆದುಕೊಂಡು ಹೋಗುವುದಿಲ್ಲ. ಅದಲ್ಲದೆ, ದೇವರು ನಮ್ಮನ್ನೂ ಸಹ ಮಹಾ ಸಂಕಟಕಾಲಕ್ಕೆ ಮೊದಲು ಮೇಲಕ್ಕೆ ಎತ್ತುವುದಿಲ್ಲ. ಅವರು ಅದಕ್ಕಿಂತ ಎಷ್ಟೋ ಶ್ರೇಷ್ಠವಾದುದನ್ನು ಮಾಡುತ್ತಾರೆ. ಅವರು ಮಹಾ ಸಂಕಟಕಾಲದ ನಡುವೆ ನಮ್ಮನ್ನು ಜಯಶಾಲಿಗಳನ್ನಾಗಿ ಮಾಡುತ್ತಾರೆ.

ನಮ್ಮನ್ನು ಸಂಕಟಗಳಿಂದ ಬಿಡಿಸುವುದಕ್ಕಿಂತ, ಕೆಟ್ಟತನದಿಂದ ಬಿಡಿಸುವುದರಲ್ಲಿ ಯೇಸುವಿಗೆ ಹೆಚ್ಚು ಆಸಕ್ತಿ ಇದೆ. ಸಂಕಟಗಳ ಮೂಲಕ ಹಾದು ಹೋಗುವ ಅವಕಾಶವನ್ನು ಅವರು ನಮಗೆ ನೀಡುತ್ತಾರೆ, ಏಕೆಂದರೆ ಇದು ನಮ್ಮನ್ನು ಆತ್ಮಿಕವಾಗಿ ಬಲ ಪಡಿಸುವ ಒಂದೇ ಮಾರ್ಗವಾಗಿದೆ, ಎಂದು ಅವರಿಗೆ ಗೊತ್ತಿದೆ.

ಈ ಸಂದೇಶವು ಸುಖವನ್ನೇ ಪ್ರೀತಿಸುವ ಕ್ರೈಸ್ತ ಪ್ರಪಂಚಕ್ಕೆ ನಿಜವಾಗಿ ವಿಚಿತ್ರ ಬೋಧನೆ ಎನಿಸುತ್ತದೆ, ಏಕೆಂದರೆ ಇವರು ಅನೇಕ ವರ್ಷಗಳಿಂದ ಪ್ರತಿ ಭಾನುವಾರವೂ ಸಭಾಕೂಟಗಳಲ್ಲಿ ತಮ್ಮ ಆಸನಗಳಲ್ಲಿ ಕೂರಿಸಲ್ಪಟ್ಟು, ಬೋಧಕರಿಂದ ಜೋಗುಳದಂತಹ ಸಂದೇಶಗಳ ಮೂಲಕ ಮುದ್ದು ಮಾಡಲ್ಪಟ್ಟಿದ್ದಾರೆ. ಆದರೆ ಅಪೊಸ್ತಲರು ಆದಿ ಸಭೆಗಳಲ್ಲಿ ಈ ಸಂದೇಶವನ್ನೇ ನೀಡಿದರು. ಅಪೊಸ್ತಲರಾದ ಪೌಲ-ಬಾರ್ನಬರು ಶಿಷ್ಯರ ಮನಸ್ಸನ್ನು ದೃಢಪಡಿಸುತ್ತಾ, "ನಾವು ಬಹು ಸಂಕಟಗಳನ್ನು ತಾಳಿ ದೇವರ ರಾಜ್ಯದೊಳಗೆ ಸೇರಬೇಕೆಂಬದಾಗಿ ಎಚ್ಚರಿಕೆಯ ಮಾತನ್ನು ಹೇಳಿ, ಕ್ರಿಸ್ತನಂಬಿಕೆಯಲ್ಲಿ ಸ್ಥಿರವಾಗಿರಿ," ಎಂದು ಅವರನ್ನು ಧೈರ್ಯಗೊಳಿಸಿದರು (ಅ.ಕೃ. 14:21-22) .

ನಮ್ಮ ಮನೆಗಳಲ್ಲಿ ಮತ್ತು ಕೆಲಸದ ಸ್ಥಳಗಳಲ್ಲಿ ನಾವು ಎದುರಿಸುವ ಸಣ್ಣ ಶೋಧನೆಗಳು, ಮುಂದಿನ ದಿನಗಳಲ್ಲಿ ಬರಲಿರುವ ದೊಡ್ಡ ಶೋಧನೆಗಳಿಗೆ ಪೂರ್ವ ಸಿದ್ಧತೆಗಳೇ ಆಗಿವೆ. ಹಾಗಾಗಿ ಈಗ ನಾವು ನಂಬಿಗಸ್ತರಾಗಿರುವುದು ಅವಶ್ಯವಾಗಿದೆ. "ನೀನು ಕಾಲಾಳುಗಳ ಸಂಗಡ ಓಡಿ ಆಯಾಸಗೊಂಡಿದ್ದರೆ, ಕುದುರೆಗಳೊಂದಿಗೆ ಓಡಿ ಹೇಗೆ ಮುಂದಾಗುವೆ?" ಎಂದು ದೇವರು ಪಶ್ನಿಸುತ್ತಾರೆ (ಯೆರೆ. 12:5) !

’ಪ್ರಕಟನೆ’ ಪುಸ್ತಕದ ಮೊದಲನೇ ಅಧ್ಯಾಯದಲ್ಲಿ ಯೋಹಾನನು ತನ್ನ ಕುರಿತಾಗಿ, "ಯೇಸುವಿನ ನಿಮಿತ್ತ ಹಿಂಸೆಯಲ್ಲಿ ಪಾಲುಗಾರನು" ಎಂದು ಹೇಳುತ್ತಾನೆ (ಪ್ರಕ. 1:9) . ಯೇಸುವಿನ ಪ್ರತಿಯೊಬ್ಬ ಪೂರ್ಣಮನಸ್ಸುಳ್ಳ ಶಿಷ್ಯನೂ, ಈ ಲೋಕದಲ್ಲಿ ತಾನು ಇರುವಷ್ಟು ದಿನ, "ಯೇಸುವಿನ ನಿಮಿತ್ತವಾದ ಸಂಕಟದಲ್ಲಿ ಸಹಭಾಗಿಯಾಗಲು" ತಯಾರಾಗಿರಬೆಕು. ಯೋಹಾನನಿಗೆ ಈ ಪ್ರಕಟನೆ ತೆರೆದು ತೋರಿಸಲ್ಪಟ್ಟದ್ದು ಆತನು ಆರಾಮದ ಜೀವನ ನಡೆಸುತ್ತಿದ್ದಾಗ ಅಲ್ಲ. ಆತನು "ದೇವರ ವಾಕ್ಯಕ್ಕೂ, ಯೇಸುವಿನ ವಿಷಯವಾದ ಸಾಕ್ಷಿಗೂ" ನಂಬಿಗಸ್ತನಾಗಿ ನಡೆದಿದ್ದರ ಫಲವಾಗಿ ಪತ್ಮೊಸ್ ದ್ವೀಪದಲ್ಲಿ ಸಂಕಟವನ್ನು ಅನುಭವಿಸುತ್ತಾ ಇದ್ದಾಗ, ಆತನು ಇದನ್ನು ಪಡೆದನು. ಅಂತ್ಯಕಾಲದಲ್ಲಿ ದೇವಜನರು ಕ್ರಿಸ್ತವಿರೋಧಿಯಿಂದ ಅನುಭವಿಸಲಿರುವ ಮಹಾ ಸಂಕಟವನ್ನು ಸರಿಯಾಗಿ ವಿವರಿಸುವದಕ್ಕಾಗಿ, ಸ್ವತಃ ಯೋಹಾನನು ಸಂಕಟದ ಅನುಭವವನ್ನು ಪಡೆಯಬೇಕಿತ್ತು. ಸಂಕಟವನ್ನು ಅನುಭವಿಸುತ್ತಿರುವ ಜನರ ನಡುವೆ ನಮಗೆ ಸೇವೆಯ ಅವಕಾಶವನ್ನು ಕೊಡುವುದಕ್ಕೆ ಮುಂಚೆ, ದೇವರು ನಮ್ಮನ್ನು ಶೋಧನೆಗಳು ಮತ್ತು ಸಂಕಟಗಳ ಮೂಲಕ ನಡೆಸುತ್ತಾರೆ.

ಸೈರಣೆ ಅಥವಾ ಸತತವಾಗಿ ಶ್ರಮಿಸುವದು ಶ್ರೇಷ್ಠವಾದ ಒಂದು ಸದ್ಗುಣವೆಂದು ಹೊಸ ಒಡಂಬಡಿಕೆಯ ಉದ್ದಕ್ಕೂ ಬಹಳ ಒತ್ತುನೀಡಿ ಹೇಳಲಾಗಿದೆ. "ನಿಮ್ಮನ್ನು ಉಪದ್ರವಕ್ಕೆ ಒಪ್ಪಿಸುವರು ... ಆದರೆ ಕೊನೆಯ ವರೆಗೂ ತಾಳುವವನು ರಕ್ಷಣೆ ಹೊಂದುವನು," (ಮತ್ತಾ. 24:9,13) ಎಂದು ಸ್ವತಃ ಯೇಸುವೇ ಹೇಳಿದ್ದಾರೆ.