ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ಆತ್ಮಭರಿತ ಜೀವಿತ
WFTW Body: 

ಪವಿತ್ರಾತ್ಮನ ಸೇವಾಕಾರ್ಯವು ದೇವರ ಇತರ ಎಲ್ಲಾ ಸೇವೆಗಳಿಗಿಂತ ಹೆಚ್ಚು ಮರೆಯಾದದ್ದಾಗಿದೆ. ಪವಿತ್ರಾತ್ಮನು ಪ್ರೋತ್ಸಾಹಿಸುವಾಗ ಮತ್ತು ಸಹಾಯ ನೀಡುವಾಗ, ಮರೆಯಾಗಿ, ಯಾರಿಗೂ ಕಾಣಿಸದಂತೆ, ತಾನು ಮಾಡಿದ ಕಾರ್ಯಕ್ಕಾಗಿ ಸನ್ಮಾನ ಅಥವಾ ಪ್ರಶಂಸೆಯನ್ನು ಬಯಸದೆ, ಕಾರ್ಯವನ್ನು ಮಾಡುತ್ತಾನೆ. ಜನರು ತಂದೆಯಾದ ದೇವರು ಮತ್ತು ಯೇಸುವನ್ನು ಮಾತ್ರ ಸ್ತೋತ್ರ ಮಾಡಿದರೆ ಸಾಕೆಂದು ಮತ್ತು ಈ ಇಡೀ ಚಿತ್ರಣದಲ್ಲಿ ತನ್ನ ಹೆಸರು ಸಂಪೂರ್ಣವಾಗಿ ಮರೆಯಾಗಿಯೇ ಇರಲೆಂದು ಆತನು ಪೂರ್ಣ ತೃಪ್ತನಾಗಿದ್ದಾನೆ. ಇದು ಎಂತಹ ಸುಂದರವಾದ ಸೇವೆ!

ಹಾಗಾದರೆ, ಇಂತಹ ಆತ್ಮನಿಂದ ತುಂಬಲ್ಪಡುವುದರ ಪರಿಣಾಮವೇನು? ಅದೇನೆಂದರೆ, ನಾವು ಆತನಂತೆಯೇ ಆಗುತ್ತೇವೆ, ಆತನಂತೆಯೇ ಸೇವೆ ಮಾಡುವುದರಲ್ಲಿ ತೃಪ್ತರಾಗುತ್ತೇವೆ ಎಂಬುದಾಗಿದೆ - ಅಂದರೆ, ಮರೆಯಾದದ್ದು, ಕಣ್ಣಿಗೆ ಬೀಳದಂತದ್ದು ಮತ್ತು ಯಾವ ಪ್ರಶಂಸೆಯನ್ನು ಹೊಂದದೆ, ಇತರರಿಗೆ ಪ್ರಶಂಸೆ ಸಿಗುವುದರಲ್ಲಿ ತೃಪ್ತಿ ಹೊಂದುವಂಥದ್ದಾಗಿದೆ. ನಾವು ನಿಜವಾಗಿ ಇಂತಹ ಆತ್ಮನಿಂದ ತುಂಬಲ್ಪಟ್ಟಿದ್ದೇವೆಯೇ?

ಆದರೆ ಇಂದಿನ ದಿನದಲ್ಲಿ "ಪವಿತ್ರಾತ್ಮನಿಂದ ತುಂಬಲ್ಪಟ್ಟಿರುವುದಾಗಿ" ಹೇಳಿಕೊಳ್ಳುವ ಅನೇಕ ಜನರು ತಮ್ಮ ವರಗಳನ್ನು ಕ್ರೈಸ್ತ ವೇದಿಕೆಗಳ ಮೇಲೆ ಉಪಯೋಗಿಸಿಕೊಂಡು, ತಮಗೆ ಅತಿಯಾದ ಪ್ರಾಧಾನ್ಯತೆ ಸಿಗಬೇಕೆಂದು ತವಕಿಸುತ್ತಾರೆ, ತಮ್ಮನ್ನೇ ಪ್ರಸಿದ್ಧಿ ಪಡಿಸಿಕೊಳ್ಳುತ್ತಾರೆ ಮತ್ತು ಸ್ವಂತಕ್ಕಾಗಿ ಹಣ ಸಂಪಾದಿಸಲು ಪ್ರಯತ್ನಿಸುತ್ತಾರೆ. ಇವು ಯಾವುವು ಪವಿತ್ರಾತ್ಮನ ಕಾರ್ಯಗಳಲ್ಲ. ಇವೆಲ್ಲ ಪವಿತ್ರಾತ್ಮನನ್ನು ನಕಲಿ ಮಾಡುವ ಬೇರೊಂದು ಆತ್ಮದ ಕಾರ್ಯವಾಗಿವೆ ಮತ್ತು ಕ್ರೈಸ್ತಸಭೆಯಲ್ಲಿ ಇಂತಹ ಕಪಟತನ ಮತ್ತು ವಂಚನೆಯನ್ನು ಬಯಲು ಮಾಡುವುದು ನಮ್ಮ ಕರ್ತವ್ಯವಾಗಿದೆ.

ಪವಿತ್ರಾತ್ಮನ ದೀಕ್ಷಾಸ್ನಾನವನ್ನು ಹೊಂದಿದ್ದರ ಗುರುತೇನು? ಯೇಸುವು ಅ.ಕೃ. 1:8 ರಲ್ಲಿ ಬಹಳ ಸ್ಪಷ್ಟವಾಗಿ ತಿಳಿಸಿರುವಂತೆ, ಅದರ ಗುರುತು ’ಬಲವಾಗಿದೆ’. ಅನ್ಯಭಾಷೆಯಲ್ಲಿ ಮಾತಾನಾಡುವುದು ಪವಿತ್ರಾತ್ಮನ ತುಂಬುವಿಕೆಯ ಸಾಕ್ಷಿಯಾಗಿದೆ ಎಂದು ಯೇಸುವು ಒಂದು ಸಲವೂ ಹೇಳಲಿಲ್ಲ. ಅಪೊಸ್ತಲರೂ ಸಹ ಇದರ ಬಗ್ಗೆ ಒಂದು ಮಾತನ್ನೂ ಹೇಳಲಿಲ್ಲ. ಆ ಕಾದುಕೊಂಡಿದ್ದ ಶಿಷ್ಯರ ಬಳಿಗೆ ನೀವು ಹೋಗಿ, "ನೀವು ಪವಿತ್ರಾತ್ಮನಿಂದ ದೀಕ್ಷಾಸ್ನಾನ ಹೊಂದಿದ್ದು ನಿಮಗೆ ಹೇಗೆ ತಿಳಿಯುತ್ತದೆ?" ಎಂದು ಪ್ರಶ್ನಿಸಿದ್ದರೆ, ಅವರು ಅನ್ಯಭಾಷೆಯಲ್ಲಿ ತಾವು ಮಾತನಾಡುವುದಾಗಿ ಹೇಳುತ್ತಿರಲಿಲ್ಲ. ತಾವು ಬಲವನ್ನು ಪಡೆಯುವುದಾಗಿ ಯೇಸುವು ತಮಗೆ ತಿಳಿಸಿದರೆಂದು ಅವರು ಹೇಳುತ್ತಿದ್ದರು. "ನಾನು ಈ ಬಲವನ್ನು ಹೊಂದಿರುವುದು ನನಗೆ ತಿಳಿಯುವುದು ಹೇಗೆ?" ಎಂದು ನೀವು ಕೇಳಬಹುದು. ದೇವರು ನಮಗೆ ನಮ್ಮ ಪಾಪಗಳು ಕ್ಷಮಿಸಲ್ಪಟ್ಟದ್ದರ ಭರವಸೆಯನ್ನು ಕೊಟ್ಟ ಹಾಗೆ, ಅವರು ನಮಗೆ ಈ ಭರವಸೆಯನ್ನು ಕೊಡಬಲ್ಲರು. ನಮ್ಮ ಪಾಪಗಳು ಮನ್ನಿಸಲ್ಪಟ್ಟಿರುವುದನ್ನು ನಮ್ಮ ಆತ್ಮದೊಂದಿಗೆ ಪವಿತ್ರಾತ್ಮನು ಸಾಕ್ಷೀಕರಿಸುವ ಹಾಗೆ, ನಾವು ಬಲವನ್ನು ಹೊಂದಿರುವುದನ್ನೂ ಸಾಕ್ಷೀಕರಿಸುತ್ತಾನೆ. ಇವೆರಡು ಅವಶ್ಯಕ ವಿಷಯಗಳ ಬಗ್ಗೆ ನಿಮಗೆ ಭರವಸೆಯನ್ನು ಕೊಡುವಂತೆ ದೇವರನ್ನು ಕೇಳಿಕೊಳ್ಳಿರಿ. ಹಾಗಾಗಿ ಶಿಷ್ಯರು ಬಲಕ್ಕಾಗಿ ಕಾದಿದ್ದರು. ಆದರೆ ಅವರು ಬಲವನ್ನು ಹೊಂದುವುದರ ಜೊತೆಗೆ, ತಿಳಿಯದ ಭಾಷೆಗಳಲ್ಲಿ ಮಾತನಾಡುವ (’ಭಾಷೆಗಳ’) ವರವನ್ನು ಸಹ ಪಡೆದರು.

ಪ್ರತಿಯೊಬ್ಬ ಕ್ರೈಸ್ತನು’ಬಲವನ್ನು’ ಹೊಂದಬೇಕೆಂದು ದೇವರ ಚಿತ್ತವಾಗಿದೆ, ಎನ್ನುವುದರಲ್ಲಿ ಸಂಶಯವಿಲ್ಲ. ಬಲವನ್ನು ಹೊಂದುವುದರ ಅರ್ಥ, ನೀವು ಬೆಂಕಿಯ ಜ್ವಾಲೆಯಂತೆ ಬೋಧನೆ ಮಾಡುವ ಒಬ್ಬ ಸುವಾರ್ತಿಕರು ಆಗುತ್ತೀರೆಂದಲ್ಲ. ನೀವು ಕ್ರಿಸ್ತನ ದೇಹದಲ್ಲಿ ನಿಮ್ಮ ಸ್ವಂತ ಸೇವೆಯನ್ನು ಪೂರೈಸುವುದಕ್ಕೆ ಬಲವನ್ನು ಪಡೆಯುತ್ತೀರಿ. ಮಾನವ ಶರೀರವನ್ನು ಪರಿಗಣಿಸಿರಿ, ಒಂದು ಅಂಗದ ಮೂಲಕ ರಕ್ತ ಹರಿದಾಗ ಮಾತ್ರ, ಅದು ನಮ್ಮ ಮಾನವ ದೇಹದ ಅಂಗವಾಗುತ್ತದೆ. ಕೃತಕವಾಗಿ ಅಳವಡಿಸಲ್ಪಟ್ಟ ಕೈ ದೇಹದ ಅಂಗವಾಗಲು ಸಾಧ್ಯವಿಲ್ಲ, ಏಕೆಂದರೆ ಅದರ ಮೂಲಕ ರಕ್ತ ಹರಿಯುವುದಿಲ್ಲ. ಅದೇ ರೀತಿಯಾಗಿ, ಕ್ರಿಸ್ತನ ರಕ್ತವು ಒಬ್ಬ ವ್ಯಕ್ತಿಯನ್ನು ಶುದ್ಧಿ ಗೊಳಿಸಿದ್ದರೆ ಮಾತ್ರ, ಆತನು ಕ್ರಿಸ್ತನ ದೇಹದ ಒಂದು ಅಂಗವಾಗಬಹುದು. ಆದರೆ ಒಂದು ತೋಳಿನ ಮೂಲಕ ರಕ್ತ ಹರಿಯುತ್ತಿದ್ದರೂ, ಅದಕ್ಕೆ ಪಾರ್ಶ್ವವಾಯು ತಗಲಬಹುದು - ಮತ್ತು ಈ ಕಾರಣದಿಂದಾಗಿ ಅದು ಒಂದು ಉಪಯೋಗವಿಲ್ಲದ ಅಂಗವಾಗುತ್ತದೆ. ಆ ತೋಳು ಪಾರ್ಶ್ವವಾಯುವಿನಿಂದ ಗುಣಹೊಂದಿ ಬಲಗೊಂಡರೆ, ಅದು ಒಂದು ನಾಲಿಗೆ ಆಗುತ್ತದೆಯೇ? ಇಲ್ಲ! ಅದು ಒಂದು ಬಲಶಾಲಿಯಾದ ತೋಳು ಆಗುತ್ತದೆ. ಹಾಗೆಯೇ, ಪಾರ್ಶ್ವವಾಯು ಹಿಡಿದಿದ್ದ ನಾಲಿಗೆ ಬಲಗೊಂಡರೆ, ಅದು ಒಂದು ತೋಳು ಆಗುವುದಿಲ್ಲ. ಅದು ಒಂದು ಬಲಿಷ್ಠವಾದ ನಾಲಿಗೆಯಾಗುತ್ತದೆ. ಹಾಗಿರುವಾಗ, ದೇವರು ನಿಮ್ಮನ್ನು ಒಬ್ಬ ತಾಯಿಯಾಗಿ ಕರೆದಿದ್ದರೆ ಮತ್ತು ನೀವು ಪವಿತ್ರಾತ್ಮನಿಂದ ತುಂಬಲ್ಪಟ್ಟಾಗ, ನೀವು ಒಬ್ಬ ಸುವಾರ್ತಿಕೆ ಆಗುವುದಿಲ್ಲ; ನೀವು ಒಬ್ಬ ಬಲಶಾಲಿಯಾದ, ಆತ್ಮ-ಭರಿತಳಾದ ತಾಯಿ ಆಗುತ್ತೀರಿ.

ಪಂಚಾಶತ್ತಮ ದಿನದಂದು, ಒಬ್ಬೊಬ್ಬರ ಮೇಲೆ ಕೂತುಕೊಂಡ ಉರಿಯ ಜ್ವಾಲೆಯಂತ ನಾಲಿಗೆಗಳು, ಹೊಸ ಒಡಂಬಡಿಕೆಯ ಅವಧಿಯಲ್ಲಿ ದೇವರು ನಮ್ಮ ದೇಹದಲ್ಲಿ ಉಪಯೋಗಿಸಿಕೊಳ್ಳುವ ಅತಿ ಮುಖ್ಯವಾದ ಅಂಗ ನಾಲಿಗೆಯಾಗಿದೆ, ಎಂಬುದನ್ನು ಸೂಚಿಸಿತು - ಪವಿತ್ರಾತ್ಮನಿಂದ ಬೆಂಕಿಯ ಜ್ವಾಲೆಯಂತೆ ಮಾಡಲ್ಪಟ್ಟ ನಾಲಿಗೆಯು ಎಲ್ಲಾ ವೇಳೆಯಲ್ಲಿ ಆತನ ಸಂಪೂರ್ಣ ನಿಯಂತ್ರಣದಲ್ಲಿರುತ್ತದೆ. ಇದರಲ್ಲಿ ಅನ್ಯಭಾಷೆಗಳ ವರವೂ ಸಹ ಸಾಂಕೇತಿಕವಾಗಿ ಸೇರಿದೆ. ದೇವರು ನಿಮ್ಮ ನಾಲಿಗೆಯನ್ನು ಇತರರ ಆಶೀರ್ವಾದಕ್ಕಾಗಿ ಬಳಸಲು ಇಚ್ಛಿಸುತ್ತಾರೆ - ನೀವು ಒಬ್ಬ ಬೋಧಕರು ಆಗಿದ್ದರೆ ಮಾತ್ರವೇ ಅಲ್ಲ, ಆದರೆ ನೀವು ಜನರೊಂದಿಗೆ ಸಾಮಾನ್ಯವಾಗಿ ಮಾಡುವ ಪ್ರತಿದಿನದ ಸಂಭಾಷಣೆಗಳಲ್ಲೂ ಸಹ. ಆದರೆ ಇದಕ್ಕಾಗಿ ನೀವು ನಿಮ್ಮ ಮಾತಿನ ಸಂಪೂರ್ಣ ನಿಯಂತ್ರಣವನ್ನು, ದಿನದ 24 ಗಂಟೆಗಳು, ವಾರದ 7 ದಿನಗಳು, ಪವಿತ್ರಾತ್ಮನಿಗೆ ಒಪ್ಪಿಸಬೇಕಾಗುತ್ತದೆ.