WFTW Body: 

ಕರ್ತನು ತನ್ನ ಶಿಷ್ಯರಿಗೆ ಕಲಿಸಿದ ಪ್ರಾರ್ಥನೆಯಲ್ಲಿ ಮೊಟ್ಟಮೊದಲನೆಯ ವಿಜ್ಞಾಪನೆ, "ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ," ಎಂಬುದಾಗಿತ್ತು. ಕರ್ತನಾದ ಯೇಸುವಿನ ಹೃದಯದಲ್ಲಿ ಎಲ್ಲಕ್ಕೂ ಮಿಗಿಲಾಗಿ ಈ ಹಂಬಲವಿತ್ತು. ಆತನು, "ತಂದೆಯೇ, ನಿಮ್ಮ ಹೆಸರನ್ನು ಮಹಿಮೆಪಡಿಸಿಕೊಳ್ಳಿರಿ," ಎಂದು ಪ್ರಾರ್ಥಿಸಿದನು ಮತ್ತು ತಂದೆಯಾದ ದೇವರ ಮಹಿಮೆಗಾಗಿ ಶಿಲುಬೆಯ ಮಾರ್ಗವನ್ನು ಆರಿಸಿಕೊಂಡನು (ಯೋಹಾ. 12:27,28). ಕರ್ತನಾದ ಯೇಸುವಿನ ಜೀವಿತವನ್ನು ನಿರ್ಣಯಿಸಿದ ಒಂದು ಆಕಾಂಕ್ಷೆಯೆಂದರೆ ತಂದೆಯನ್ನು ಮಹಿಮೆಪಡಿಸುವುದಾಗಿತ್ತು.

ಆತನು ಕೈಗೊಂಡ ಪ್ರತಿಯೊಂದು ಕಾರ್ಯವು ತಂದೆಯ ಮಹಿಮೆಗಾಗಿ ಆಗಿತ್ತು. ಆತನ ಜೀವನದಲ್ಲಿ ಪವಿತ್ರ ಮತ್ತು ಲೌಕಿಕ ಎಂಬ ಪ್ರತ್ಯೇಕವಾದ ವಿಭಾಗಗಳಿರಲಿಲ್ಲ. ಪ್ರತಿಯೊಂದು ಸಂಗತಿಯೂ ಪವಿತ್ರವಾಗಿತ್ತು. ಆತನು ಹೇಗೆ ತಂದೆಯ ಮಹಿಮೆಗಾಗಿ ಸುವಾರ್ತೆಯನ್ನು ಸಾರಿದನೋ ಮತ್ತು ರೋಗಿಗಳನ್ನು ಗುಣಪಡಿಸಿದನೋ, ಹಾಗೆಯೇ ಆತನು ತಂದೆಯ ಮಹಿಮೆಗಾಗಿಯೇ ಮೇಜು ಮತ್ತು ಬೆಂಚುಗಳನ್ನು ಸಹ ತಯಾರಿಸಿದನು. ಆತನಿಗೆ ಪ್ರತಿಯೊಂದು ದಿನವೂ ಪವಿತ್ರವಾಗಿತ್ತು; ಅದಲ್ಲದೆ, ದಿನನಿತ್ಯದ ಜೀವನದ ಅವಶ್ಯಕತೆಗಳಿಗಾಗಿ ಹಣವನ್ನು ಖರ್ಚುಮಾಡುವುದು, ದೇವರ ಕಾರ್ಯಕ್ಕಾಗಿ ಅಥವಾ ಬಡವರಿಗೆ ನೀಡಲು ಹಣವನ್ನು ಉಪಯೋಗಿಸಿದಷ್ಟೇ ಪವಿತ್ರವಾಗಿತ್ತು.

"ತಂದೆಯೇ, ಭೂಲೋಕದಲ್ಲಿ ನಾನು ನಿಮ್ಮನ್ನು ಮಹಿಮೆ ಪಡಿಸಿದ್ದೇನೆ," ಎಂದು ಯೇಸುವು ಪ್ರಾಮಾಣಿಕವಾಗಿ ಹೇಳಬಹುದಾಗಿತ್ತು.

ಯೇಸುವು ತನ್ನ ತಂದೆಯ ಮಹಿಮೆ ಮತ್ತು ತಂದೆಯ ಮೆಚ್ಚುಗೆಯನ್ನು ಮಾತ್ರ ಬಯಸಿದ್ದರಿಂದ, ಆತನು ಎಲ್ಲಾ ವೇಳೆಯಲ್ಲಿ ಹೃದಯದ ಪರಿಪೂರ್ಣ ವಿಶ್ರಾಂತಿಯೊಂದಿಗೆ ಜೀವಿಸಿದನು. ಆತನು ಯಾವಾಗಲೂ ತನ್ನ ತಂದೆಯ ಮುಖದ ಮುಂದೆ ಜೀವಿಸಿದನು ಮತ್ತು ಆತನು ಮನುಷ್ಯರ ಮನ್ನಣೆ ಅಥವಾ ಹೊಗಳಿಕೆಗೆ ಯಾವುದೇ ಮಹತ್ವವನ್ನು ನೀಡಲಿಲ್ಲ.

"ಯಾವನು ತನ್ನ ಸ್ವಂತ ಇಷ್ಟದ ಪ್ರಕಾರ ಮಾತನಾಡುತ್ತಾನೋ, ಅವನು ತನ್ನನ್ನೇ ಹೆಚ್ಚಳ ಪಡಿಸಿಕೊಳ್ಳಲು ತವಕಿಸುತ್ತಾನೆ,"ಎಂದು ಯೇಸುವು ಹೇಳಿದನು (ಯೋಹಾ. 7:18).

ಶರೀರಭಾವದ ಕ್ರೈಸ್ತ ವಿಶ್ವಾಸಿಯು ದೇವರನ್ನು ಮಹಿಮೆಪಡಿಸಲು ಬಹಳ ತವಕಿಸುವಂತೆ ಕಂಡುಬಂದರೂ ಅಥವಾ ಹಾಗೆ ನಟನೆ ಮಾಡಿದರೂ, ಆತನು ಯಥಾರ್ಥವಾಗಿ ತನ್ನ ಒಳ ಮನಸ್ಸಿನಲ್ಲಿ ತನ್ನದೇ ಗೌರವವನ್ನು ಬಯಸುತ್ತಾನೆ. ಮತ್ತೊಂದು ಕಡೆ, ಯೇಸುವು ಯಾವತ್ತೂ ತನ್ನದೇ ಗೌರವವನ್ನು ಬಯಸಲಿಲ್ಲ.

ಮನುಷ್ಯನ ಬುದ್ಧಿವಂತಿಕೆಯಿಂದ ಹುಟ್ಟಿ, ಮಾನವ ಕೌಶಲ್ಯ ಮತ್ತು ಪ್ರತಿಭೆಗಳಿಂದ ತಯಾರಾದದ್ದು ಯಾವಾಗಲೂ ಮನುಷ್ಯನನ್ನೇ ಮಹಿಮೆಪಡಿಸುತ್ತದೆ. ಮಾನವ ಪ್ರಾಣದ ಬಲದಿಂದ ಆರಂಭವಾದದ್ದು ಸೃಷ್ಟಿಸಲ್ಪಟ್ಟ ಜೀವಿಗೆ ಮಾತ್ರ ಮಹಿಮೆಯನ್ನು ತರುತ್ತದೆ.

ಆದರೆ ನಿತ್ಯತ್ವದ ಅವಧಿಯಲ್ಲಿ ಪರಲೋಕದಲ್ಲಿ ಅಥವಾ ಭೂಲೋಕದಲ್ಲಿ ಯಾವ ಮನುಷ್ಯನಿಗೂ ಯಾವುದೇ ರೀತಿಯ ಮಾನ್ಯತೆ ಅಥವಾ ಮಹಿಮೆಯನ್ನು ಒದಗಿಸುವ ಒಂದು ಸಂಗತಿಯೂ ಇರುವುದಿಲ್ಲ.

ಕಾಲದ ಮಿತಿಯನ್ನು ದಾಟಿ ಮುಂದುವರಿದು ನಿತ್ಯತ್ವದ ದ್ವಾರವನ್ನು ಪ್ರವೇಶಿಸುವ ಸಮಸ್ತವೂ ದೇವರಿಂದ ಉತ್ಪತ್ತಿಯಾಗಿ, ದೇವರಿಂದ ನಡೆಸಲ್ಪಟ್ಟು, ದೇವರಿಗೆ ಮೀಸಲಾಗಿ ಇಡಲ್ಪಟ್ಟದ್ದು ಆಗಿರುತ್ತದೆ.

ದೇವರ ದೃಷ್ಟಿಯಲ್ಲಿ, ಯಾವುದೇ ಕಾರ್ಯದ ಬೆಲೆ ಮತ್ತು ಅರ್ಹತೆಯು ಅದರ ಹಿಂದೆ ಇರುವ ಉದ್ದೇಶಕ್ಕೆ ತಕ್ಕಂತೆ ನಿಶ್ಚಯಿಸಲ್ಪಡುತ್ತದೆ.

ನಾವು ಏನು ಮಾಡುತ್ತೇವೆ ಎಂಬುದು ಮುಖ್ಯವಾದದ್ದು. ಆದರೆ ಏಕೆ ಅದನ್ನು ಮಾಡುತ್ತೇವೆ ಎಂಬುದು ಅದಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾಗಿದೆ.

ಯೇಸುವು ತನ್ನ ತಂದೆಯು ತನಗಾಗಿ ಸಿದ್ಧಪಡಿಸಿದ ಯೋಜನೆಗಾಗಿ ಕಾದಿದ್ದನು ಮತ್ತು ಆ ಯೋಜನೆಯನ್ನು ಪೂರೈಸುವ ಬಲಕ್ಕಾಗಿ ತಂದೆಯನ್ನು ಬೇಡಿಕೊಂಡನು; ಹೀಗೆ ದೇವರ ಬಲದ ಮೂಲಕ ತಂದೆಯ ಸಂಪೂರ್ಣ ಚಿತ್ತವನ್ನು ನೆರವೇರಿಸಿದನು. ಆದರೆ ಆತನು ಅದರಲ್ಲೇ ತೃಪ್ತನಾಗಲಿಲ್ಲ. ಯೇಸುವು ಕೆಲವು ದೊಡ್ಡ ಮಹತ್ಕಾರ್ಯಗಳ ನಂತರವೂ ಸಹ ಪ್ರಾರ್ಥನೆ ಮಾಡಿದನು - ಮತ್ತು ತಂದೆಗೆ ಮಹಿಮೆಯನ್ನು ಸಲ್ಲಿಸಿದನು. ಆತನು ತನ್ನ ಪರಿಶ್ರಮದ ಫಲವನ್ನು ಯಜ್ಞದ ಕಾಣಿಕೆಯಾಗಿ ತನ್ನ ತಂದೆಗೆ ಸಮರ್ಪಿಸಿದನು. ಆತನು ಸ್ವಂತ ಮಾನ್ಯತೆಯನ್ನು ಅಪೇಕ್ಷಿಸಲಿಲ್ಲ, ಅಥವಾ ಅದು ಕೊಡಲ್ಪಟ್ಟಾಗ ಸ್ವೀಕರಿಸಲೂ ಇಲ್ಲ (ಯೋಹಾ. 5:41,8:50). ಆತನ ಕೀರ್ತಿಯು ದೂರದವರೆಗೂ ಹರಡಿದಾಗ, ಆತನು ಅರಣ್ಯಪ್ರದೇಶಗಳಿಗೆ ಹೋಗಿ ತಂದೆಯನ್ನು ಮಹಿಮೆಪಡಿಸಿದನು (ಲೂಕ. 5:15,16). ಆತನು ತಂದೆಯ ಮಹಿಮೆಯನ್ನು ಎಂದಿಗೂ ಮುಟ್ಟುವುದಿಲ್ಲವೆಂದು ನಿಶ್ಚಯಿಸಿಕೊಂಡಿದ್ದನು.

ಯೇಸುವು ನಿರಂತರವಾಗಿ ಇಂತಹ ಮನೋಭಾವವನ್ನು ಇರಿಸಿಕೊಂಡಿದ್ದರ ಫಲವಾಗಿ, ಭೂಮಿಯ ಮೇಲಿನ ತನ್ನ ಜೀವಿತದ ಅಂತ್ಯದಲ್ಲಿ ಯಥಾರ್ಥವಾಗಿ, "ತಂದೆಯೇ, ನಾನು ಭೂಲೋಕದಲ್ಲಿ ನಿನ್ನನ್ನು ಮಹಿಮೆಪಡಿಸಿದ್ದೇನೆ," ಎಂದು ಹೇಳಲು ಸಾಧ್ಯವಾಯಿತು (ಯೋಹಾ. 17:4).

ಆತನು ತನ್ನ ತಂದೆಯನ್ನು ಮಹಿಮೆಪಡಿಸುವ ಸಲುವಾಗಿ ಈ ಭೂಲೋಕಕ್ಕೆ ಮನುಷ್ಯನಾಗಿ ಬಂದಿದ್ದನು. ಪ್ರತಿದಿನವೂ ಈ ಗುರಿಯನ್ನು ಇಟ್ಟುಕೊಂಡು ಆತನು ಜೀವಿಸಿದನು. ಆತನ ಮನಃಪೂರ್ವಕ ಪ್ರಾರ್ಥನೆ, ತಾನು ಎಷ್ಟೇ ದೊಡ್ಡ ಬೆಲೆಯನ್ನು ತೆರಬೇಕಾಗಿ ಬಂದರೂ, ಮಹಿಮೆಯು ತಂದೆಗೆ ಮಾತ್ರ ಸಲ್ಲಬೇಕು, ಎಂಬುದಾಗಿತ್ತು. ಅದಲ್ಲದೆ, ಹೇಗೆ ಪರಲೋಕದಲ್ಲಿ ತಂದೆಯು ಗೌರವಪಾತ್ರರೂ, ಅತ್ಯುನ್ನತರೂ ಮತ್ತು ಮಹಿಮೆಯುಳ್ಳವರೂ ಆಗಿದ್ದಾರೋ, ಭೂಮಿಯ ಮೇಲೂ ಹಾಗೆಯೇ ಆಗಬೇಕೆಂಬ ಉದ್ದೇಶದಿಂದ ಕೊನೆಗೆ ಯೇಸುವು ಮರಣ ಹೊಂದಿದನು.

ನಾವು ನಮ್ಮನ್ನು ಈ ರೀತಿಯಾಗಿ ಪ್ರಶ್ನಿಸಿಕೊಳ್ಳಬೇಕು:
ನಾನು ಜೀವಿಸುತ್ತಿರುವುದು ಮತ್ತು ಶ್ರಮಿಸುತ್ತಿರುವುದು ದೇವರಿಗೆ ಮಾತ್ರ ಮಹಿಮೆ ಸಲ್ಲಬೇಕೆಂಬ ಒಂದೇ ಉದ್ದೇಶದಿಂದಲೇ?