WFTW Body: 

ಯೇಸುವು ನಾವೆಲ್ಲರೂ ಪ್ರತಿದಿನ ಎದುರಿಸುವ ಶೋಧನೆಗಳಿಗೆ ಎಲ್ಲಾ ರೀತಿಯಲ್ಲಿ ಸಮಾನವಾದ ಶೋಧನೆಗಳನ್ನು ಎದುರಿಸಿದರು (ಇಬ್ರಿ. 4:15). ಅವರಲ್ಲಿ ನಮ್ಮಲ್ಲಿರುವ ಸಕಲ ಇತಿಮಿತಿಗಳು ಇದ್ದವು, ಆದರೂ ಅವರು ಅವೆಲ್ಲವನ್ನು ಜಯಿಸಿದರು - ಅದಕ್ಕೆ ಕಾರಣ, ಅವರು ಧರ್ಮವನ್ನು ಪ್ರೀತಿಸಿದರು ಮತ್ತು ಅಧರ್ಮವನ್ನು ದ್ವೇಷಿಸಿದರು ಮತ್ತು ಪ್ರತಿಯೊಂದು ಶೋಧನೆಯ ನಡುವೆ ಕಣ್ಣೀರಿನ ಪ್ರಾರ್ಥನೆಯ ಮೂಲಕ ತಂದೆಯ ಸಹಾಯವನ್ನು ಬೇಡಿಕೊಂಡರು (ಇಬ್ರಿ. 1:9; 5:7). ಯೇಸುವು ಒಬ್ಬ ಮನುಷ್ಯನಾಗಿ ಇದ್ದಾಗ ಪವಿತ್ರಾತ್ಮನು ಅವರಿಗೆ ಸಹಾಯ ಒದಗಿಸಿದನು - ಪವಿತ್ರಾತ್ಮನು ನಿಮಗೂ ಸಹ ಹೀಗೆಯೇ ಸಹಾಯವನ್ನು ನೀಡುವನು.

ಯೇಸುವು ಯೌವನ ಪ್ರಾಯದಲ್ಲಿ ಶೋಧನೆಯನ್ನು ಎದುರಿಸಿದ ರೀತಿಯನ್ನು ಆಗಾಗ ನೆನಪಿಸಿಕೊಳ್ಳಿರಿ. ಪ್ರತಿಯೊಬ್ಬ ಯುವಕನನ್ನು ಎದುರಿಸುವ ಶೊಧನೆಗಳ ಸೆಳೆತ ಅವರನ್ನೂ ಸಹ ಎದುರಿಸಿತು. ಅವರಿಗೆ ಶೋಧನೆಗಳನ್ನು ಎದುರಿಸುವುದು ನಮಗಿಂತ ಸುಲಭವಾಗಿರಲಿಲ್ಲ. ವಾಸ್ತವವಾಗಿ, ಅವರಿಗೆ ಇದು ನಮಗಿಂತಲೂ ಹೆಚ್ಚು ಕಷ್ಟಕರವಾಗಿರಬೇಕು, ಏಕೆಂದರೆ ಅವರ ಸಂಪೂರ್ಣ ಪರಿಶುದ್ಧವಾದ ಸ್ವಭಾವಕ್ಕೆ ಶೋಧನೆಯ ವಾಸನೆ ಬಹಳ ಅಸಹ್ಯಕರವಾಗಿರಬೇಕು - ಹಾಗಾಗಿ ಅದರ ಪ್ರಭಾವವು ನಾವು ಅನುಭವಿಸುವದಕ್ಕಿಂತ ಹೆಚ್ಚು ಪ್ರಬಲವಾಗಿರಬೇಕು. ಆದಾಗ್ಯೂ ಅವರು ಅದನ್ನು ಸೋಲಿಸಿದರು.

ಹಾಗಾಗಿ ಈಗ ನೀವು ಶೋಧನೆಯ ಸೆಳೆತವನ್ನು ಎದುರಿಸಿ ಹೋರಾಡುವ "ಎಳೆದಾಟದ ಪಂದ್ಯ"ದಲ್ಲಿ, ಯೇಸುವು ನಿಮ್ಮೊಂದಿಗೆ ಭುಜಕ್ಕೆ ಭುಜ ಕೊಟ್ಟು ನಿಮ್ಮನ್ನು ಜಯದ ಕಡೆಗೆ ಎಳೆಯುತ್ತಾರೆ - ಅವರು ನಿಮ್ಮ ಸಹಾಯಕ್ಕಾಗಿ ಯಾವಾಗಲೂ ಸಿದ್ಧರಾಗಿ ನಿಂತಿದ್ದಾರೆ. ಈ ’ಎಳೆದಾಡುವ ಪಂದ್ಯದಲ್ಲಿ’ ಶತ್ರು ಪಕ್ಷದ ಮುಂದಾಳು ’ಅಹಂಕಾರ’ ಎಂಬ ದೈತ್ಯಾಕಾರದ ವ್ಯಕ್ತಿಯಾಗಿದ್ದಾನೆ. ಅವನ ಹಿಂದೆ ’ಸ್ವೇಚ್ಛೆ’ ಎಂಬ ಇನ್ನೊಬ್ಬ ದೈತ್ಯಾಕಾರದ ವೈರಿ ಇದ್ದಾನೆ. ಆದರೆ ಇವರಿಬ್ಬರನ್ನು ಹಾಗೂ ಇವರ ಜೊತೆಗಾರರಾದ ಇತರ ಪಾಪಗಳನ್ನು ಜಗ್ಗಿ ಎಳೆಯಲು ನಿಮಗೆ ದೇವರು ಸಹಾಯ ಒದಗಿಸುತ್ತಾರೆ - ಮತ್ತು ನೀವು ಜಯ ಗಳಿಸುವಿರಿ. ಕರ್ತನಿಗೆ ಸ್ತೋತ್ರವಾಗಲಿ!

ನೀವು ನಂಬಿಕೆಯ ಮೂಲಕ ಭದ್ರವಾಗಿ ಹಿಡಿಯಬಹುದಾದ ಒಂದು ವಾಗ್ದಾನ ಇಲ್ಲಿದೆ: "ನೀವು ಎಡವಿ ಬೀಳದಂತೆ ಕಾಪಾಡುವುದಕ್ಕೆ ಯೇಸುವು ಶಕ್ತನಾಗಿದ್ದಾನೆ" (ಯೂದ. 24). ಒಂದು ಕೂಸು ನಡಿಗೆಯನ್ನು ಆರಂಭಿಸುವ ಹಾಗೆ, ನಾವು ನಂಬಿಕೆಯಲ್ಲಿ ನಡೆಯಲು ಕಲಿಯಬೇಕು. ಮೊದಮೊದಲು, ಒಂದು ಮಗುವಿನಂತೆ ಅನೇಕ ಬಾರಿ ಮುಗ್ಗರಿಸಿ ಬೀಳಬಹುದು. ಆದರೆ ನೀವು ಹೆಚ್ಚು ಹೆಚ್ಚಾಗಿ ಪ್ರಯತ್ನಿಸುತ್ತಾ ಮುಂದುವರಿದಾಗ, ಬೀಳುವಿಕೆಯು ಕಡಿಮೆಯಾಗುತ್ತದೆ. ಅಂತಿಮವಾಗಿ, ಬೀಳುವಿಕೆಯು ಬಹಳ ಅಪರೂಪದ ಸಂಗತಿಯಾಗುತ್ತದೆ; ಆದರೆ ಒಬ್ಬ ಅತ್ಯುತ್ತಮ ದೇವಭಕ್ತನೂ ಸಹ ತಾನು ಎಂದಿಗೂ ಬೀಳಲಾರೆ, ಎನ್ನುವ ಸ್ಥಿತಿಯನ್ನು ತಲುಪಲಾರನು!

ನೀವು ಎಡವಿ ಬಿದ್ದಾಗ, ನಿಮ್ಮ ಬೀಳುವಿಕೆಯನ್ನು "ಪಾಪ"ವೆಂದು ಕರೆಯಲು ಇಷ್ಟಪಡದೆ, ನೀವು ಅದಕ್ಕೆ ಬೇರೊಂದು ವಿವರಣೆಯನ್ನು ಕೊಡಬಹುದು. ಆದರೆ ಹಾಗೆ ಮಾಡುವುದು ಅಪಾಯಕರವಾಗಿದೆ. ಅನೇಕ ಜನರು ಪಾಪದ ಪರಿಣಾಮದಿಂದ ಪಾರಾಗಲಿಕ್ಕಾಗಿ, ತಮ್ಮ ಪಾಪಗಳನ್ನು ಒಪ್ಪಿಕೊಳ್ಳದೆ, ಪಾಪವನ್ನು ’ತಪ್ಪು ಕೆಲಸ’, ’ಕೆಟ್ಟ ಕೆಲಸ’, ಇತ್ಯಾದಿಯಾಗಿ ಕರೆಯುತ್ತಾರೆ. ಅವರು ತಮ್ಮಲ್ಲಿ ಎದ್ದು ಕಾಣಿಸುವ ಪಾಪಗಳಿಗೆ ಕುಂಟು ನೆಪವಾಗಿ, "ಆ ಅಸಹ್ಯವಾದದ್ದನ್ನು ಮಾಡುವವನು ಇನ್ನು ನಾನಲ್ಲ, ನನ್ನಲ್ಲಿ ನೆಲೆಗೊಂಡಿರುವ ಪಾಪವೇ ಅದನ್ನು ಮಾಡುತ್ತದೆ ..." ಎಂದು ರೋಮಾ. 7:17ನ್ನು ತಪ್ಪಾಗಿ ಉಲ್ಲೇಖಿಸಲೂ ಸಹ ಹಿಂಜರಿಯುವುದಿಲ್ಲ. ಇದೊಂದು ಅಪಾಯಕಾರಿ ಹವ್ಯಾಸವಾಗಿದೆ. ಹಾಗೆ ಮಾಡಬೇಡಿ - ಏಕೆಂದರೆ ಆಗ ನೀವು ಆ ಇತರ ಜನರು ಜೀವಿಸುವಂತೆ, ಆತ್ಮ-ವಂಚನೆಯ ಜೀವಿತವನ್ನು ಜೀವಿಸುವಿರಿ.

ನಾವು ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆಮಾಡಿದರೆ, ನಂಬಿಗಸ್ತರೂ ನೀತಿವಂತರೂ ಆಗಿರುವ ದೇವರು ನಮ್ಮ ಪಾಪಗಳನ್ನು ಕ್ಷಮಿಸಿಬಿಡುವರು ಮತ್ತು ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧಿಮಾಡುವರು (1 ಯೋಹಾ. 1:9). ಆದರೆ ನಾವು ನಮ್ಮ ಪಾಪಗಳನ್ನು "ತಪ್ಪುಗಳು" ಎಂದು ಕರೆದಾಗ, ಅವನ್ನು ಶುದ್ಧೀಕರಿಸುವ ’ಯಾವ ವಾಗ್ದಾನವೂ ಇರುವುದಿಲ್ಲ’. ಯೇಸುವಿನ ರಕ್ತವು ’ಪಾಪಗಳನ್ನು ಮಾತ್ರ ಶುದ್ಧಿ ಮಾಡುತ್ತದೆ’. ಹಾಗಾಗಿ, ನೀವು ಪ್ರತೀ ಸಲ ಪಾಪದಲ್ಲಿ ಬಿದ್ದಾಗ ತಪ್ಪದೆ ಪ್ರಾಮಾಣಿಕರಾಗಿರಿ. ನೀವು ಮಾಡಿದ್ದನ್ನು "ಪಾಪವೆಂದು" ಕರೆಯಿರಿ, ಅದನ್ನು ದ್ವೇಷಿಸಿರಿ, ಬಿಟ್ಟುಬಿಡಿರಿ, ದೇವರ ಮುಂದೆ ತಪ್ಪೊಪ್ಪಿಕೊಳ್ಳಿರಿ - ಅಷ್ಟು ಮಾಡಿದ ಮೇಲೆ ಅದನ್ನು ಮರೆತುಬಿಡಿರಿ, ಏಕೆಂದರೆ ಅದು ಅಳಿಸಲ್ಪಟ್ಟಿದೆ!

ಪಾಪ ’ಕಾರ್ಯಗಳಿಗಿಂತ’ ಪಾಪದ ’ಪ್ರವೃತ್ತಿ’ (ಅಥವಾ ಪಾಪದ ಮನೋಭಾವ) ಹೆಚ್ಚು ಗಂಭೀರವಾದದ್ದು, ಏಕೆಂದರೆ ’ಪ್ರವೃತ್ತಿ’ಯು ಸುಲಭವಾಗಿ ಗುರುತಿಸಲ್ಪಡುವುದಿಲ್ಲ. ಕೆಲವು ಪಾಪ ಪ್ರವೃತ್ತಿಗಳು ಇವುಗಳು: ಅಹಂಕಾರ, ದೂಷಿಸುವ ಮನೋಭಾವ, ಕಹಿ ಸ್ವಭಾವ, ಹೊಟ್ಟೆಕಿಚ್ಚು, ಒಳಗೊಳಗೇ ಇತರರ ಬಗ್ಗೆ ತಪ್ಪು ತೀರ್ಮಾನ ಮಾಡುವುದು (ಕಿವಿ ಕೇಳಿಸಿಕೊಂಡಂತೆ ಅಥವಾ ಕಣ್ಣಿಗೆ ಕಂಡಂತೆ ತೀರ್ಪು ಮಾಡುವುದು - ಯೆಶಾ. 11:3), ಸ್ವಹಿತವನ್ನೇ ನೋಡುವುದು, ಸ್ವಾರ್ಥತೆ, ಫರಿಸಾಯತನ, ಇತ್ಯಾದಿ.

ಪಾಪದ ಮೇಲೆ ಜಯದ ಕುರಿತಾಗಿ ಬೋಧನೆ ಮಾಡುವ ಒಬ್ಬ ವಿಶ್ವಾಸಿಯು ಇತರರನ್ನು ಕೀಳಾಗಿ ನೋಡುವುದಾದರೆ, ಆತನಲ್ಲಿ ಎಲ್ಲಕ್ಕಿಂತ ದೊಡ್ಡ ಪಾಪ - ’ಆತ್ಮಿಕ ಗರ್ವ’ - ಇದೆಯೆಂದು ಆತನಿಗೆ ತಿಳಿದಿಲ್ಲ. ಇತರರನ್ನು ಹೀನೈಸಿ ನೋಡುವುದು, ಪಟ್ಟುಬಿಡದೆ ವ್ಯಭಿಚಾರ ಮಾಡುವದಕ್ಕೆ ಸಮನಾಗಿದೆ. ಇಂತಹ ವಿಶ್ವಾಸಿಯು ಪಾಪದ ಮೇಲೆ ಜಯದ ವಿಷಯವಾಗಿ ಮಾತನಾಡುವುದು ಹಾಸ್ಯಾಸ್ಪದವಾಗಿದೆ! ನೀವು ಹೆಚ್ಚು ಹೆಚ್ಚಾಗಿ ಆತ್ಮಿಕ ಬೆಳವಣಿಗೆ ಹೊಂದುವಾಗ, ಹೆಚ್ಚು ಪರಿಶುದ್ಧರಾಗುವಾಗ, ಮತ್ತು ಪಾಪದ ಮೇಲೆ ಜಯದಲ್ಲಿ ಮುನ್ನಡೆ ಸಾಧಿಸುವಾಗ, ನೀವು ’ಹೆಚ್ಚು ದೀನರಾಗುತ್ತೀರಿ’. ಇದು ನಿಜವಾದ ಪರಿಶುದ್ಧತೆಯ ಬಹಳ ಮುಖ್ಯವಾದ ಸೂಚಕವಾಗಿದೆ. ಒಂದು ಹಣ್ಣಿನ ಮರದಲ್ಲಿ, ಹೆಚ್ಚು ಹಣ್ಣುಗಳನ್ನು ಹೊಂದಿರುವ ಕೊಂಬೆಯು ಇತರ ಕೊಂಬೆಗಳಿಗಿಂತ ಹೆಚ್ಚಾಗಿ ಬಾಗಿರುತ್ತದೆ!

ಅನೇಕರು ಮಾನವನ ಆತ್ಮಸಂಯಮವು "ದೇವರ ಸ್ವಭಾವವನ್ನು ಹೊಂದಿರುವದು" ಎಂದು ತಪ್ಪಾಗಿ ಗ್ರಹಿಸುತ್ತಾರೆ. ಮಾನವನ ಆತ್ಮಸಂಯಮವು ಒಂದು ಬಾಹ್ಯ ಪರಿವರ್ತನೆಯನ್ನು ಉಂಟುಮಾಡುತ್ತದೆ. ಅಂತಹ ಮನುಷ್ಯನು ಆಂತರಿಕವಾಗಿ ಅಹಂಕಾರಿ ಮತ್ತು ಸ್ವಾಭಿಮಾನಿ ಮತ್ತು ಫರಿಸಾಯಿತನ ಉಳ್ಳವನು ಆಗಿರುತ್ತಾನೆ. ದೇವರಿಂದ ಕೃಪೆಯನ್ನು ಪಡೆದು ಪಾಪವನ್ನು ಜಯಿಸುವಂತೆ ನಮಗೆ ಕರೆ ನೀಡಲಾಗಿದೆ - ಮತ್ತು ನಾವು ಉಚಿತವಾಗಿ ಪಡೆದದ್ದರ ಬಗ್ಗೆ ಹೇಗೆ ಹೆಮ್ಮೆ ಪಡಲು ಸಾಧ್ಯವಿದೆ? ನಾವು ಸ್ವಂತ ಬಲದಿಂದ ಉತ್ಪಾದಿಸಿರುವದರ ಬಗ್ಗೆ ಮಾತ್ರ ನಾವು ಹೆಚ್ಚಳ ಪಡಬಹುದು - ಮತ್ತು ಸ್ವ-ಪ್ರಯತ್ನದಿಂದ ಉಂಟಾದ ಪರಿಶುದ್ಧತೆಯು ಯಾವಾಗಲೂ ಸುಳ್ಳು ಪರಿಶುದ್ಧತೆ ಆಗಿರುತ್ತದೆ.

ನೀವು ಪಡಕೊಳ್ಳಲಿಕ್ಕಾಗಿ ದೇವರಿಂದ ಕರೆಯಲ್ಪಟ್ಟ ದೈವ ಸ್ವಭಾವ "ಪ್ರೀತಿ"ಯಾಗಿದೆ. ದೇವರು ಕೆಟ್ಟವರ ಮೇಲೆಯೂ, ಕೃತಘ್ನತೆ ಇಲ್ಲದವರ ಮೇಲೆಯೂ ತನ್ನ ಕರುಣೆ ಮತ್ತು ಒಳ್ಳೆಯತನವನ್ನು ತೋರಿಸುತ್ತಾರೆ, ಮತ್ತು ಕೆಟ್ಟವರ ಮೇಲೆಯೂ, ಒಳ್ಳೆಯವರ ಮೇಲೆಯೂ ಸೂರ್ಯನು ಮೂಡುವಂತೆ ಮಾಡುತ್ತಾರೆ (ಮತ್ತಾ. 5:45-48). ನೀವು ಸಹ ಅನುಸರಿಸಬೇಕಾದ ಮಾದರಿ ಇದಾಗಿದೆ. ನಿಮ್ಮನ್ನು ಇತರರು ಒಪ್ಪಿಕೊಂಡರೂ ಒಪ್ಪಿಕೊಳ್ಳದಿದ್ದರೂ - ನೀವು ಎಲ್ಲರನ್ನೂ ಪ್ರೀತಿಸಿರಿ. ಎಲ್ಲಾ ವಿವಾದಾಸ್ಪದ ತರ್ಕಗಳಿಂದ ಮತ್ತು ವಾಗ್ವಾದಗಳಿಂದ ದೂರವಾಗಿರಿ - ಮಹಾಮಾರಿ ಪಿಡುಗು ಎಂಬಂತೆ ಅವುಗಳಿಂದ ತಪ್ಪಿಸಿಕೊಳ್ಳಿರಿ. ನಿಮ್ಮ ಅಕ್ಕಪಕ್ಕದವರು ಯಾವುದೋ ವಿಷಯದಲ್ಲಿ ವಾದಕ್ಕೆ ಇಳಿದರೆ, ನೀವು ವಿವಾದದಿಂದ ದೂರವಿರಲು ಬಯಸುತ್ತೀರಿ, ಎಂದು ಪ್ರೀತಿಯಿಂದ ಅವರಿಗೆ ತಿಳಿಸಿರಿ. ನಿಮ್ಮಲ್ಲಿ ಪ್ರೀತಿಯು ಪೂರ್ಣಗೊಂಡು ಸಿದ್ಧಿಗೆ ಬರುವಂತೆ ಪೂರ್ಣ ಹೃದಯದಿಂದ ಪ್ರಯಾಸ ಪಡಿರಿ.