WFTW Body: 

ಫಿಲಿಪ್ಪಿಯವರಿಗೆ ಬರೆದ ಪತ್ರಿಕೆಯಲ್ಲಿ ’ಸಂತೋಷಿಸುವ’ ಮನೋಭಾವಕ್ಕೆ ಬಹಳಷ್ಟು ಒತ್ತು ನೀಡಲಾಗಿದೆ. "ಎಲ್ಲಾ ಸಮಯಗಳಲ್ಲಿಯೂ ನಿಮಗೋಸ್ಕರ ಸಂತೋಷದಿಂದಲೇ ಬೇಡುವವನಾಗಿದ್ದೇನೆ" (ಫಿಲಿ. 1:4) ಮತ್ತು "ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ; ಸಂತೋಷಪಡಿರಿ ಎಂದು ತಿರಿಗಿ ಹೇಳುತ್ತೇನೆ" (ಫಿಲಿ.4:4).

ಪೌಲನು ಈ ಪತ್ರಿಕೆಯನ್ನು ಫಿಲಿಪ್ಪಿಯವರಿಗೆ ಸೆರೆಮನೆಯಿಂದ ಬರೆದನು (ಫಿಲಿ. 1:13) . ಪೌಲನು ಸೆರೆಮನೆಯಿಂದ ಬರೆದ ಪತ್ರಿಕೆಯಲ್ಲಿ ಸಂತೋಷಕ್ಕೆ ಇಷ್ಟು ಒತ್ತು ಕೊಟ್ಟಿರುವದು ನಮಗೆ ಒಂದು ಅದ್ಭುತ ಸವಾಲಾಗಿದೆ. ಅನುಕೂಲಕರ ಪರಿಸ್ಥಿತಿಗಳಲ್ಲಿ ಹರ್ಷೋಲ್ಲಾಸದ ಕುರಿತಾಗಿ ಬೋಧಿಸುವದು ಸ್ವಾಭಾವಿಕ ಎನ್ನಬಹುದು. ಆದರೆ ಅದೇ ಮಾತನ್ನು ಕಠಿಣ ಪರಿಸ್ಥಿತಿಯನ್ನು ಎದುರಿಸುವ ಸಮಯದಲ್ಲಿ ಆಡುವುದು ಬೇರೆ ಸಂಗತಿಯಾಗಿದೆ. ಒಬ್ಬ ಕ್ರೈಸ್ತನು ಎಲ್ಲಾ ಸಂದರ್ಭಗಳಲ್ಲಿ ಸಂತೋಷಿಸಬಹುದು, ಎಂಬುದನ್ನು ಪೌಲನ ಈ ಮಾತುಗಳು ನಮಗೆ ಕಲಿಸಿಕೊಡುತ್ತವೆ. ಇದೇ ಕ್ರಿಸ್ತನ ಮನಸ್ಸು ಮತ್ತು ಆತನ ಸ್ವಭಾವವಾಗಿದೆ.

ಏಸುವು ಶಿಲುಬೆಗೆ ಹಾಕಲ್ಪಡುವ ಹಿಂದಿನ ರಾತ್ರಿ, ಸಂತೋಷದ ವಿಷಯವಾಗಿ ಹೆಚ್ಚಾಗಿ ಕಲಿಸಿಕೊಟ್ಟರು (ಯೋಹಾ. 15 ಮತ್ತು 16ನೇ ಅಧ್ಯಾಯಗಳಲ್ಲಿ). ಕೊನೆಯ ಭೋಜನದ ಸಂದರ್ಭದಲ್ಲಿ ಅವರು ತನ್ನ ಶಿಷ್ಯರಿಗೆ ಹೀಗೆ ಹೇಳಿದರು, "ನಿಮ್ಮ ಆನಂದ ಪರಿಪೂರ್ಣವಾಗಬೇಕೆಂದು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ ... ನಿಮ್ಮ ಆನಂದವನ್ನು ಯಾರೂ ನಿಮ್ಮಿಂದ ತೆಗೆಯುವುದಿಲ್ಲ ... ನನ್ನಲ್ಲಿರುವ ಆನಂದವು ನಿಮ್ಮಲ್ಲಿಯೂ ಇರಬೇಕೆಂದು ನಿಮಗೆ ಕೊಡುತ್ತೇನೆ." ಮುಂದೆ ಕೆಲವೇ ತಾಸುಗಳಲ್ಲಿ ಅವರು ಸುಳ್ಳು ದೂಷಣೆಗೆ ಒಳಗಾಗಿ, ಒಬ್ಬ ಅಪರಾಧಿಯಂತೆ ಸಾರ್ವಜನಿಕವಾಗಿ ಶಿಲುಬೆಯ ಮರಣವನ್ನು ಅನುಭವಿಸಲಿದ್ದರು. ಆದಾಗ್ಯೂ ಅವರು ತನ್ನ ಆನಂದವನ್ನು ಇತರರಿಗೆ ಹಂಚುತ್ತಾ, ಅವರನ್ನು ಉತ್ತೇಜಿಸುತ್ತಿದ್ದರು!!

ಪೌಲನಲ್ಲಿ ಇಂಥದ್ದೇ ಆದ ಕ್ರಿಸ್ತನ ಮನಸ್ಸು ಮತ್ತು ಸ್ವಭಾವವಿತ್ತು. ಆತನು ಸೆರೆಮನೆಯಲ್ಲಿ ಆನಂದಭರಿತನಾಗಿದ್ದನು. ಫಿಲಿಪ್ಪಿಯವರಿಗೆ ಈ ಪತ್ರವನ್ನು ಬರೆದಾಗ ಪೌಲನು ಗೃಹ ಬಂಧನದಲ್ಲಿ ಇದ್ದನೋ (ಅ.ಕೃ. 28:16,30,31) , ಅಥವಾ ರೋಮಾಪುರದ ಸೆರೆಮನೆಯಲ್ಲೇ ಇದ್ದನೋ, ಎನ್ನುವದು ನಮಗೆ ತಿಳಿದಿಲ್ಲ. ಅಂದಿನ ರೋಮ್ ಪಟ್ಟಣದ ಸೆರೆಮನೆಗಳು ಇಲಿ, ಸೊಳ್ಳೆ ಮತ್ತು ತೆವಳುವ ಕ್ರಿಮಿಕೀಟ ಇವುಗಳಿಂದ ತುಂಬಿದ ಕತ್ತಲೆಯ ಗೂಡುಗಳಾಗಿದ್ದವು. ಇವುಗಳ ಮಧ್ಯೆ ಕೈದಿಗಳು ಬರೇ ನೆಲದ ಮೇಲೆ ಮಲಗಬೇಕಾಗಿತ್ತು ಮತ್ತು ತಿಳಿಗಂಜಿಯನ್ನು ಕುಡಿಯಬೇಕಾಗಿತ್ತು. ಪೌಲನು ಇವೆರಡು ಜಾಗಗಳಲ್ಲಿ ಯಾವುದರಲ್ಲಿ ಇದ್ದರೂ, ಅವನ ಪರಿಸ್ಥಿತಿ ನಿಶ್ಚಯವಾಗಿ ಉಲ್ಲಾಸಕರವಾಗಿ ಇರಲಿಲ್ಲ. ಹಾಗಿದ್ದರೂ ಪೌಲನು ಇಂತಹ ಪರಿಸ್ಥಿತಿಯಲ್ಲಿ ಇದ್ದುಕೊಂಡು, ಉಲ್ಲಾಸದಿಂದ ತುಂಬಿದ್ದನು. ಅವನು ಸುವಾರ್ತೆಯನ್ನು ಸಾರಿದ್ದಕ್ಕಾಗಿ ಸೆರೆಮನೆಗೆ ಹಾಕಲ್ಪಟ್ಟನು. ಆದರೆ ಅವನು ತನ್ನ ದುರವಸ್ಥೆಗಾಗಿ ಕಣ್ಣೀರು ಸುರಿಸಲಿಲ್ಲ. ಅವನು ಯಾರ ಅನುಕಂಪವನ್ನೂ ಸಹ ನಿರೀಕ್ಷಿಸಲಿಲ್ಲ. ಅವನು ಉಲ್ಲಾಸದಿಂದ ಆನಂದಿಸುತ್ತಿದ್ದನು.

ಸುಖಸೌಲಭ್ಯದಲ್ಲಿ ಜೀವಿಸುತ್ತಿದ್ದರೂ, ಸಣ್ಣ ಪುಟ್ಟ ಅನಾನುಕೂಲತೆಗಳನ್ನು ದೊಡ್ಡದಾಗಿ ಕಾಣುವ ಕ್ರೈಸ್ತರಿಗೆ, ಪೌಲನು ಎಂತಹ ಉತ್ತಮ ಮಾದರಿಯಾಗಿದ್ದಾನೆ! ವಿಶ್ವಾಸಿಗಳು ಸಾಮಾನ್ಯವಾಗಿ ಯಾವುದೋ ಒಂದು ಚಿಕ್ಕ ತೊಂದರೆ ಅಥವಾ ಚಿಕ್ಕ ಶೋಧನೆಯನ್ನು ಎದುರಿಸುವಾಗ ಇತರರ ಅನುಕಂಪವನ್ನು ಎದುರು ನೋಡುವುದನ್ನು ನಾವು ಕಾಣುತ್ತೇವೆ. ಆದರೆ ಇಲ್ಲಿ ಪೌಲನು ತನ್ನ ಯಾತನೆಗಳ ಒಂದು ಸುಳಿವನ್ನೂ ಸಹ ಕೊಡುವುದಿಲ್ಲ. ಅವನು ಹೇಳುವ ಮಾತು, "ನಾನು ನಿಮಗೋಸ್ಕರ ದೇವರನ್ನು ಬೇಡಿಕೊಳ್ಳುವ ಎಲ್ಲಾ ಸಮಯಗಳಲ್ಲಿಯೂ ಸಂತೋಷದಿಂದಲೇ ಬೇಡುವವನಾಗಿದ್ದೇನೆ" (ಫಿಲಿ. 1:3,4) . ಸೊಳ್ಳೆ ಕಡಿತದಿಂದ ನಿದ್ರೆ ಇಲ್ಲದೆ, ವಿಪರೀತ ಚಳಿಯಲ್ಲಿ ಹೊದ್ದುಕೊಳ್ಳಲು ಕಂಬಳಿ ಇಲ್ಲದೆ, ಹಿಂದಿನ ರಾತ್ರಿಯನ್ನು ಕಳೆದ ನಂತರ, ಪೌಲನು ಇದನ್ನು ಬರೆದಿರಬಹುದು. ಆತನ ಸಂತೋಷವು ತನ್ನ ಪರಿಸ್ಥಿತಿಯ ಫಲವಾಗಿ ಬಂದಂಥದ್ದು ಆಗಿರಲಿಲ್ಲ, ಆದರೆ ಫಿಲಿಪ್ಪಿ ಪಟ್ಟಣದ ವಿಶ್ವಾಸಿಗಳು ದೇವರ ಕೃಪೆಯನ್ನು ಹೊಂದಿದ್ದುದನ್ನು ನೋಡಿ ಉಂಟಾಗಿತ್ತು.

ಅನೇಕ ವರ್ಷಗಳ ಹಿಂದೆ, ಕರ್ತನಿಂದ ಪೌಲನಿಗೆ ದೊರೆತ ಒಂದು ದರ್ಶನದ ಮೂಲಕ ಆತನು ಫಿಲಿಪ್ಪಿಗೆ ನಡೆಸಲ್ಪಟ್ಟಿದ್ದನು (ಅ.ಕೃ. 16:9-12). ಪೌಲನು ಆ ಆಜ್ಞೆಯ ಪ್ರಕಾರ ಫಿಲಿಪ್ಪಿಗೆ ಹೋದನು ಮತ್ತು ಅಲ್ಲಿನ ಜನರನ್ನು ಕರ್ತನ ಬಳಿಗೆ ನಡೆಸಿದನು - ಮತ್ತು ಫಿಲಿಪ್ಪಿ ಪಟ್ಟಣದಲ್ಲಿ ಸೆರೆವಾಸವನ್ನೂ ಅನುಭವಿಸಿದನು. ಅಂದು ಮಾನಸಾಂತರ ಹೊಂದಿದ ಸೆರೆಮನೆಯ ಯಜಮಾನನು ಬಹುಶಃ ಈ ಸಮಯದಲ್ಲಿ ಫಿಲಿಪ್ಪಿಯಲ್ಲಿ ಒಬ್ಬ ಸಭಾ ಹಿರಿಯನು ಆಗಿದ್ದಿರಬಹುದು. ಅವನು ತನ್ನ ಸಭೆಯ ಜನರಿಗೆ ಹೀಗೆ ಹೇಳಿರಬೇಕು, "ಈ ಪೌಲನು ಸೆರೆಮನೆಯಲ್ಲಿ ಸಂತೋಷಿಸುವುದನ್ನೂ, ಸ್ತುತಿಪದಗಳನ್ನು ಹಾಡುವುದನ್ನೂ ನಾನು ಕಂಡಿದ್ದೇನೆ!" ಕರ್ತನ ಸೇವಕನಾಗಿ ಸಾರ್ಥಕವಾಗಿ ದುಡಿದ ಜೀವಿತದ ಫಲವಾಗಿ ಪೌಲನ ಸಂತೋಷವು ಉಂಟಾಯಿತು. ನೀವು ನಿಮ್ಮ ಜೀವಿತದ ಅಂತ್ಯವನ್ನು ಸಮೀಪಿಸುವಾಗ, ನಿಮಗೆ ಸಂತೋಷ ಕೊಡುವ ಸಂಗತಿ ಯಾವುದೆಂದರೆ, ದೇವರು ನಿಮಗೆ ಬಲ ಆರೋಗ್ಯಗಳನ್ನು ದಯಪಾಲಿಸಿದ ದಿನಗಳನ್ನು ನೀವು ಕರ್ತನ ಸೇವೆಯಲ್ಲಿ, ಆತನ ಪರಲೋಕ ರಾಜ್ಯಕ್ಕೆ ಜನರನ್ನು ಸೇರಿಸುವುದರಲ್ಲಿ ಮತ್ತು ಕರ್ತನ ಸಭೆಯನ್ನು ಕಟ್ಟುವುದರಲ್ಲಿ ಕಳೆದಿರಿ ಎನ್ನುವ ವಿಷಯವೇ.

ಇದರ ಬಗ್ಗೆ ಈಗಲೇ ಯೋಚಿಸಿರಿ, ಆಗ ನೀವೂ ಸಹ ಜೀವಿತದ ಅಂತ್ಯವನ್ನು ತಲುಪುವಾಗ, ಪೌಲನಂತೆ, ದೇವರು ನಿಮ್ಮ ಜೀವನದಲ್ಲಿ ಪೂರೈಸಿದ ಕಾರ್ಯಗಳಿಗಾಗಿ ಅವರಿಗೆ ಸ್ತೋತ್ರವನ್ನು ಸಮರ್ಪಿಸಬಹುದು.

ಫಿಲಿಪ್ಪಿ 4:4 ರಲ್ಲಿ, ಪವಿತ್ರಾತ್ಮನು ನಮಗೆ, "ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ," ಎಂದು ಒತ್ತಾಯಿಸುತ್ತಾನೆ - ಕೆಲವೊಂದು ಸಲ ಅಲ್ಲ ಅಥವಾ ಹೆಚ್ಚಿನ ಸಮಯಗಳಲ್ಲಿಯೂ ಅಲ್ಲ, ಆದರೆ ಯಾವಾಗಲೂ. ಅನೇಕ ವರ್ಷಗಳ ಹಿಂದೆ, ನನಗೆ ಈ ವಚನವು ಇದನ್ನು ಮಾಡುವಂತೆ ಸವಾಲನ್ನು ಹಾಕಿತು. ನನ್ನ ಜೀವನದಲ್ಲಿ ಇದು ನಿಜವಾಗಿರಲಿಲ್ಲವೆಂದು ನಾನು ಒಪ್ಪಿಕೊಂಡೆನು; ಮತ್ತು ಇದನ್ನು ನಿಜವಾಗಿಸುವಂತೆ ನಾನು ದೇವರನ್ನು ಬೇಡಿಕೊಂಡೆನು. ನೀವು ನಿಮ್ಮ ಆರೋಗ್ಯವನ್ನು ಬಯಸುವುದು ’ಕೆಲವೊಮ್ಮೆಯೇ’, ಅಥವಾ ’ಹೆಚ್ಚಿನ ಸಮಯವೇ’, ಅಥವಾ ’ಪ್ರತಿ ದಿನವೇ’? ನಾವು ಪ್ರತಿಯೊಬ್ಬರೂ ’ಯಾವಾಗಲೂ’ ಆರೋಗ್ಯವಾಗಿರಲು ಬಯಸುತ್ತೇವೆ. ಹಾಗೆಯೇ ನೀವು ಉಲ್ಲಾಸದಿಂದ ಆನಂದಿಸಲು ಬಯಸುವುದು ’ಕೆಲವೊಮ್ಮೆ ಮಾತ್ರವೇ’, ಅಥವಾ ’ಹೆಚ್ಚಿನ ಸಮಯವೇ’, ಅಥವಾ ’ಪ್ರತಿ ದಿನವೇ’? "ಇದು ಸಾಧ್ಯವೇ?" ಎಂದು ನೀವು ಕೇಳಬಹುದು. ದೇವರ ಕೃಪೆಯ ಮೂಲಕ ಇದು ಸಾಧ್ಯವಿದೆ!

ಈ ಆಜ್ಞೆಯನ್ನು ಪಾಲಿಸುವುದು ಅಸಾಧ್ಯವೆಂದು ದೇವರಿಗೆ ತಿಳಿದಿದ್ದರೆ, ದೇವರು ನಮಗೆ ಅಂತಹ ಆಜ್ಞೆಯನ್ನು ಕೊಡುತ್ತಲೇ ಇರಲಿಲ್ಲ. ನಮ್ಮ ಜೀವಿತದಲ್ಲಿ ಈ ರೀತಿಯಾಗಿ ಇನ್ನೂ ನಡೆದಿರದಿದ್ದರೆ, ನಾವು ಕರ್ತನಿಗೆ ಅದನ್ನು ಯಥಾರ್ಥವಾಗಿ ಅರಿಕೆ ಮಾಡಿಕೊಳ್ಳೋಣ. ನಿಮ್ಮನ್ನು ಪವಿತ್ರಾತ್ಮನಿಂದ ತುಂಬಿಸಲು ಆತನನ್ನು ಕೇಳಿಕೊಳ್ಳಿರಿ ಮತ್ತು ಲೋಕದಲ್ಲಿ ಕ್ರಿಸ್ತನ ಹೊರತಾಗಿ ಮಿಕ್ಕಿದ್ದೆಲ್ಲವೂ ಕಸವಾಗಿದೆ ಎಂಬುದನ್ನು ನಿಮಗೆ ಮನವರಿಕೆ ಮಾಡಿಸುವಂತೆ ಪ್ರಾರ್ಥಿಸಿರಿ. ಆಗ ನೀವು ಪ್ರತಿ ಕ್ಷಣವೂ ಆನಂದಿಸುವಿರಿ. ವಿಶ್ವಾಸಿಗಳ ನಡುವೆ ಹೆಚ್ಚಿನ ಗೊಣಗುಟ್ಟುವಿಕೆ, ದೂರುವಿಕೆ ಮತ್ತು ಕಿರಿಕಿರಿ ಸ್ವಭಾವಕ್ಕೆ ಕಾರಣ, ಅವರು ಲೋಕದಲ್ಲಿ ಕ್ರಿಸ್ತನ ಹೊರತಾಗಿ ಎಲ್ಲವೂ ಹೊಲಸು ಕಸವೆಂಬುದನ್ನು ಕಂಡುಕೊಂಡಿಲ್ಲ - ಹಾಗಿರುವಾಗ ಯಾವಾಗಲೂ ಸಂತೋಷಿಸುವುದು ನಿಜವಾಗಿ ಅಸಾಧ್ಯವೇ! ಪೌಲನು ಈ ವಚನಗಳನ್ನು ಬರೆದಾಗ ಆತನು ಒಂದು ಹೊಲಸು ದುರ್ವಾಸನೆಯ ಗೂಡಿನಂತಿದ್ದ ರೋಮ್ ಪಟ್ಟಣದ ಸೆರೆಮನೆಯಲ್ಲಿ ಕೈದಿಯಾಗಿದ್ದನು. ಆತನು ಅಂತಹ ಪರಿಸರದಲ್ಲಿ ಉಲ್ಲಾಸದಿಂದ ತುಂಬಿದ್ದರೆ, ನಾವೂ ಸಹ ಏಕೆ ಹಾಗಿರಬಾರದು?