WFTW Body: 

ಬೇರೆಯವರನ್ನು ತೀರ್ಪು ಮಾಡುವುದು ಸರಿಯೋ ತಪ್ಪೋ ಎಂಬ ವಿಷಯದ ಬಗ್ಗೆ ಕ್ರೈಸ್ತ ವಿಶ್ವಾಸಿಗಳಲ್ಲಿ ಬಹಳಷ್ಟು ತಪ್ಪು ತಿಳುವಳಿಕೆ ಇದೆ - ಇದಕ್ಕೆ ಕಾರಣ "ತೀರ್ಪು" ಎಂಬ ಪದವನ್ನು ತಪ್ಪಾಗಿ ಅರ್ಥ ಮಾಡಿಕೊಂಡಿರುವುದೇ ಆಗಿದೆ.

ವಿಶ್ವಾಸಿಗಳಾದ ನಾವು ಇತರರನ್ನು ತೀರ್ಪು ಮಾಡಬೇಕು ಎಂದು ಹೇಳಿರುವುದು, ನಾವು ಜನರನ್ನು ವಿವೇಚಿಸಿ ನೋಡಬೇಕೆಂಬ ಅರ್ಥದಲ್ಲಿ. ದೇವರ ವಾಕ್ಯವು ತಿಳಿಸುವ ಪ್ರಕಾರ, ನಾವು ಯಾರ ಉಪದೇಶವನ್ನಾದರೂ ಕೇಳುವಾಗ, "ಆ ಸಂದೇಶವನ್ನು ವಿವೇಚನೆ ಮಾಡಬೇಕು" (1 ಕೊರಿ. 14:29). ಹಾಗಾಗಿ ಪ್ರಸಂಗಿಸುವ ಪ್ರತಿಯೊಬ್ಬನ ಬೋಧನೆಯು ಸರಿಯೋ ತಪ್ಪೋ ಎಂದು ನಾವು ನಿಜವಾಗಿ ತೀರ್ಪು ಮಾಡಬೇಕೆಂದು ಪವಿತ್ರಾತ್ಮನು ನಮಗೆ ಆಜ್ಞಾಪಿಸುತ್ತಾನೆ. ಇಂದಿನ ಕ್ರೈಸ್ತ ಪ್ರಪಂಚದಲ್ಲಿ ನಾವು ಅನೇಕ ಸುಳ್ಳು ಬೋಧಕರಿಂದ ವಂಚನೆಗೆ ಒಳಗಾಗುವುದನ್ನು ತಪ್ಪಿಸಲು ಇದು ಏಕೈಕ ಮಾರ್ಗವಾಗಿದೆ.

ದೇವರ ವಚನವು ಇನ್ನೊಂದು ಮಾತನ್ನು ಸಹ ಹೇಳುತ್ತದೆ, "ಅನೇಕ ಸುಳ್ಳು ಪ್ರವಾದಿಗಳು ಲೋಕದಲ್ಲಿ ಹರಡಿರುವುದರಿಂದ, ನೀವು ಎಲ್ಲಾ ಆತ್ಮಗಳನ್ನು ನಂಬದೆ, ಮೊದಲು ಆಯಾ ನುಡಿಗಳು ದೇವರಿಂದ ಪ್ರೇರಿತವಾದವುಗಳೋ ಅಲ್ಲವೋ ಎಂದು ಪರೀಕ್ಷಿಸಿ (ತೀರ್ಪು ಮಾಡಿ) ನೋಡಬೇಕು" (1 ಯೋಹಾ 4:1).

ಯೇಸುವು ಸಹ ನಾವು ಇತರರನ್ನು ಹೇಗೆ ತೀರ್ಪು ಮಾಡಬೇಕೆಂದು ನಮಗೆ ತಿಳಿಸಿದ್ದಾರೆ. ಅವರು ಹೇಳಿದ್ದೇನೆಂದರೆ, "ತೀರ್ಪು ಮಾಡುವಾಗ ಯಥಾರ್ಥವಾಗಿರಿ ಮತ್ತು ಮೇಲ್ನೋಟಕ್ಕೆ ಅನುಸಾರವಾಗಿ ಮತ್ತು ಕಣ್ಣಿಗೆ ತೋರಿದಂತೆ ತೀರ್ಪು ಮಾಡಬೇಡಿ, ಆದರೆ ಪಕ್ಷಪಾತವಿಲ್ಲದೆ ನೀತಿವಂತಿಕೆಯಿಂದ ತೀರ್ಪುಮಾಡಿ" (ಯೋಹಾ. 7:24 - Amplified Bible).

ಹಾಗಿದ್ದರೆ ಯೇಸುವು "ತೀರ್ಪು ಮಾಡಬೇಡ" (ಮತ್ತಾ. 7:1), ಎಂದೂ ಸಹ ಹೇಳಿದ ಮಾತಿನ ಅರ್ಥವೇನು?

"ತೀರ್ಪು ಮಾಡು" ಎಂಬ ಪದಕ್ಕೆ "ಖಂಡಿಸು" (ಮೂಲ ಗ್ರೀಕ್ ಭಾಷೆಯಲ್ಲಿ) ಎಂಬ ಇನ್ನೊಂದು ಅರ್ಥವೂ ಇದೆ. ಮೇಲೆ ಪ್ರಸ್ತಾಪಿಸಿದ ವಚನವು ಸತ್ಯವೇದದ "ಆಂಪ್ಲಿಫೈಡ್" ಅನುವಾದದಲ್ಲಿ ಈ ರೀತಿಯಾಗಿದೆ: "ನೀವು ಇತರರನ್ನು ಖಂಡಿಸಬೇಡಿರಿ, ಇಲ್ಲವಾದರೆ ನಿಮಗೂ ಖಂಡನೆಯಾಗುತ್ತದೆ" (ಮತ್ತಾ. 7:1 - Amplified Bible).

ಅದಲ್ಲದೆ ಸ್ವತಃ ಯೇಸುವೂ ಸಹ ತನ್ನ ಬಗ್ಗೆ ಹೀಗೆ ಹೇಳಿದ್ದಾರೆ, "ನಾನು ಯಾರನ್ನೂ ತೀರ್ಪು ಮಾಡುವುದಿಲ್ಲ ಅಥವಾ ಯಾರಿಗೂ ಶಿಕ್ಷೆ ವಿಧಿಸುವುದಿಲ್ಲ" (ಯೋಹಾ. 8:15 - Amplified Bible).

ಆದ್ದರಿಂದ ಯಾವುದನ್ನು ನಿಷೇಧಿಸಲಾಗಿದೆಯೆಂದರೆ, ಇತರರನ್ನು ಖಂಡಿಸುವುದನ್ನು ಅಥವಾ ದಂಡಿಸುವುದನ್ನು (ನಮ್ಮ ಮಾತಿನಲ್ಲಿ ಅಥವಾ ಮನಸ್ಸಿನ ಆಲೋಚನೆಯಲ್ಲಿ). ದೇವರಿಗೊಬ್ಬರಿಗೆ ಮಾತ್ರ ಈ ಅಧಿಕಾರವಿದೆ.

ಆದರೆ ನಾವು ಪರೀಕ್ಷಿಸಬೇಕು ಮತ್ತು ವಿವೇಚಿಸಬೇಕು.

ಯೇಸುವಿನ ಬಗ್ಗೆ ಹೀಗೆ ಪ್ರವಾದಿಸಲ್ಪಟ್ಟಿತು, "ಅವನು ಕಣ್ಣಿಗೆ ಕಂಡಂತೆ ಅಥವಾ ಕಿವಿಗೆ ಬಿದ್ದಂತೆ ಎಂದಿಗೂ ತೀರ್ಪು ಮಾಡುವುದಿಲ್ಲ, ಆದರೆ ಆತನು ನೀತಿಯಿಂದ ಜನರಿಗೆ ನ್ಯಾಯತೀರಿಸುವನು" (ಯೆಶಾ. 11:3,4). ನಾವು ಸಹ ಆತನ ಮಾದರಿಯನ್ನು ಅನುಸರಿಸಬೇಕು ಮತ್ತು ಯಾವುದನ್ನೇ ಆಗಲೀ ಅಥವಾ ಯಾರನ್ನೇ ಆಗಲಿ ಕೇವಲ ನಮ್ಮ ಕಣ್ಣಿಗೆ ಕಾಣಿಸಿದ್ದು ಅಥವಾ ಕಿವಿಗೆ ಕೇಳಿಸಿದ್ದರ ಆಧಾರದ ಮೇಲೆ ತೀರ್ಪು ಮಾಡಬಾರದು. ನಾವು ಯಾವುದೇ ಸಂಗತಿಯನ್ನು ವಿವರವಾಗಿ ಪರಿಶೀಲಿಸಬೇಕು, ಆನಂತರ ನೀತಿಗೆ ಅನುಸಾರವಾಗಿ, ಪಕ್ಷಪಾತವಿಲ್ಲದೆ, ನ್ಯಾಯವಾಗಿ ತೀರ್ಪು ಮಾಡಬೇಕು.

"ನಾವು ಕ್ರೈಸ್ತ ಜೀವಿತದಲ್ಲಿ ಕಲಿಯಬೇಕಾದ ಅತಿ ಮುಖ್ಯವಾದ ಒಂದು ಪಾಠ ಯಾವುದೆಂದರೆ, ದೇವರ ಬೆಳಕಿನಲ್ಲಿ ನಮ್ಮನ್ನು ನಾವೇ ತೀರ್ಪು ಮಾಡಿಕೊಳ್ಳುವುದು"

ದೇವರ ಕುಟುಂಬದ ಸದಸ್ಯರಾದ ನಮಗೆ ತೋರಿಸಲಾಗಿರುವ ಇನ್ನೊಂದು ವಿಷಯ, ಮೊದಲು ನಾವು ನಮ್ಮನ್ನೇ ನ್ಯಾಯ ವಿಚಾರಣೆ ಮಾಡಬೇಕು (1 ಪೇತ್ರ. 4:17). ಆದರೆ ನಾವು ನಮ್ಮೊಳಗೆ (ನಮ್ಮ ಹೃದಯವನ್ನು) ನೋಡುತ್ತಾ ನಮ್ಮನ್ನು ತೀರ್ಪು ಮಾಡಿಕೊಳ್ಳಬಾರದು. ಇಲ್ಲ. ನಾವು ಯೇಸುವಿನ ಉದಾಹರಣೆಯನ್ನು ನೋಡಬೇಕು ಮತ್ತು ಆತನ ಜೀವಿತದ ಬೆಳಕಿನಲ್ಲಿ ನಮ್ಮ ಸ್ವಂತ ಕುಂದು ಕೊರತೆಗಳನ್ನು ದೃಷ್ಟಿಸಬೇಕು - ಮತ್ತು ಇದರ ನಂತರ ನಮ್ಮನ್ನೇ ತೀರ್ಪು ಮಾಡಿಕೊಳ್ಳಬೇಕು. "ಕರ್ತನೇ, ನಿಮ್ಮ ಜೀವಿತದ ಬೆಳಕಿನಲ್ಲಿ ನಾನು ಬೆಳಕನ್ನು ಕಾಣುವೆ,"(ಕೀರ್ತನೆಗಳು 36:9) ಎಂದು ಬರೆಯಲ್ಪಟ್ಟಿದೆಯಲ್ಲವೇ?

ನಮ್ಮ ಕ್ರೈಸ್ತ ಜೀವಿತದಲ್ಲಿ ನಾವು ಕಲಿಯಬೇಕಾದ ಅತಿ ಮುಖ್ಯ ಪಾಠಗಳಲ್ಲೊಂದು ಯಾವುದೆಂದರೆ, ದೇವರ ಬೆಳಕಿನಲ್ಲಿ ನಮ್ಮನ್ನು ನಾವು ತೀರ್ಪುಮಾಡುವುದು. ಅನೇಕರು ಇದನ್ನು ಕಲಿಯುವುದೇ ಇಲ್ಲ ಮತ್ತು ಇದರಿಂದಾಗಿ ಅವರು ಯಾವುದೇ ಆತ್ಮಿಕ ಬೆಳವಣಿಗೆಯನ್ನು ಹೊಂದುವುದಿಲ್ಲ.

ನಮಗೆ ಕೊಡಲ್ಪಟ್ಟಿರುವ ಒಂದು ಅದ್ಭುತವಾದ ವಾಗ್ದಾನವೆಂದರೆ, ಯಾರು ಈಗ ತಮ್ಮನ್ನು ನಂಬಿಗಸ್ತಿಕೆಯಿಂದ ತೀರ್ಪು ಮಾಡಿಕೊಳ್ಳುತ್ತಾರೋ ಅವರು ಕೊನೆಯ ದಿನದಲ್ಲಿ ದೇವರಿಂದ ತೀರ್ಪಿಗೆ ಒಳಗಾಗುವುದಿಲ್ಲ: "ನಮ್ಮನ್ನು ನಾವೇ ಸರಿಯಾಗಿ ಪರೀಕ್ಷಿಸಿಕೊಂಡರೆ, ನಾವು ನ್ಯಾಯ ವಿಚಾರಣೆಗೆ ಒಳಗಾಗುವುದಿಲ್ಲ" (1 ಕೊರಿ. 11:31).

ನಾವು ಇತರರನ್ನು ತೀರ್ಪು ಮಾಡದಿದ್ದರೂ, ಪಾಪದ ವಿರುದ್ಧವಾಗಿ ಬಲವಾಗಿ ಬೋಧಿಸಬೇಕಾಗಿದೆ. ಯೇಸುವು ನಿರ್ದಿಷ್ಟ ಪಾಪಗಳಾದ ಕೋಪ, ಕಣ್ಣಿನ ಮೋಹ, ಹಣದ ಪ್ರೀತಿ, ಕಳವಳ, ಭಯ, ದುರಾಲೋಚನೆಗಳು, ಸುಳ್ಳು ಹೇಳುವುದು, ಜನರಿಂದ ಗೌರವವನ್ನು ಬಯಸುವುದು, ಶತ್ರುಗಳನ್ನು ದ್ವೇಷಿಸುವುದು, ಇತ್ಯಾದಿ ಪಾಪಗಳ ವಿರುದ್ಧವಾಗಿ ಪ್ರಬಲವಾಗಿ ಧ್ವನಿಯೆತ್ತಿ ನುಡಿದರು (ಮತ್ತಾ. 5,6,7). ನಾವು ಸಹ ಆಧುನಿಕ ಪಾಪಗಳಾದ ಇಂಟರ್ನೆಟ್ ನಲ್ಲಿ ಅಶ್ಲೀಲತೆಯನ್ನು ನೋಡುವುದು ಮೊದಲಾದ ಪಾಪಗಳ ವಿರುದ್ಧವಾಗಿಯೂ ಧ್ವನಿಯೆತ್ತಬೇಕು - ಆದರೆ ಜನರನ್ನು ಖಂಡಿಸಬಾರದು. ಯೇಸುವು ಲೋಕದ ಜನರನ್ನು ರಕ್ಷಿಸಲು ಬಂದರೇ ಹೊರತು, ಅವರನ್ನು ಖಂಡಿಸಲು ಬರಲಿಲ್ಲ (ಯೋಹಾ. 3:17). ದೇವರು ಮಾತ್ರವೇ ಎಲ್ಲಾ ಮನುಷ್ಯರ ನ್ಯಾಯಾಧಿಪತಿ ಮತ್ತು ತೀರ್ಪುಗಾರರು ಆಗಿದ್ದಾರೆ (ಯಾಕೋಬ. 4:12).