WFTW Body: 

ದೇವರು ಸತ್ಯವೇದದಲ್ಲಿ "ರಕ್ಷಣೆ"ಯನ್ನು ಮೂರು ಕಾಲಗಳಲ್ಲಿ ತೋರಿಸುತ್ತಾರೆ - ಭೂತ ಕಾಲ (ಎಫೆ. 2:8), ವರ್ತಮಾನ ಕಾಲ (ಫಿಲಿ. 2:12) ಮತ್ತು ಭವಿಷ್ಯ ಕಾಲಗಳು (ರೋಮಾ. 13:11)- ಅಥವಾ ಬೇರೆ ಶಬ್ದಗಳಲ್ಲಿ ಹೇಳುವುದಾದರೆ, "ರಕ್ಷಣೆ"ಯಲ್ಲಿ ನೀತೀಕರಣ, ಶುದ್ಧೀಕರಣ ಮತ್ತು ಮಹಿಮೆ ಪಡಿಸುವಿಕೆ ಇವುಗಳು ಸೇರಿವೆ.

1. ನೀತೀಕರಣ

’ರಕ್ಷಣೆ’ಯು ಒಂದು ’ಅಸ್ತಿವಾರ’ ಹಾಗೂ ಅದರ ಮೇಲೆ ಒಂದು ’ಕಟ್ಟಡ’ವನ್ನು ಹೊಂದಿರುತ್ತದೆ. "ಅಸ್ತಿವಾರ" ಯಾವುದೆಂದರೆ, ಪಾಪಗಳ ಕ್ಷಮಾಪಣೆ ಮತ್ತು ನೀತೀಕರಣ. ನೀತೀಕರಣವು ನಮ್ಮ ಪಾಪಗಳ ಕ್ಷಮಾಪಣೆ ಮಾತ್ರವೇ ಅಲ್ಲ. ಅದರ ಜೊತೆಗೆ, ಇದರಲ್ಲಿ ಕ್ರಿಸ್ತನ ಮರಣ, ಪುನರುತ್ಥಾನ ಮತ್ತು ಮೇಲೇರುವಿಕೆಯ ಅಧಾರದ ಮೇಲೆ, ’ದೇವರ ದೃಷ್ಟಿಯಲ್ಲಿ ನಾವು ನೀತಿವಂತರೆಂದು ಘೋಷಿಸಲ್ಪಡುವುದೂ’ ಸಹ ಸೇರಿದೆ. ಇದು ನಮ್ಮ ಕಾರ್ಯಗಳ ಅಧಾರದ ಮೇಲೆ ಆಗುವುದಿಲ್ಲ (ಎಫೆ. 2:8,9), ಏಕೆಂದರೆ ದೇವರ ದೃಷ್ಟಿಯಲ್ಲಿ ನಮ್ಮ ಪುಣ್ಯಕ್ರಿಯೆಗಳು ಹೊಲೆಯ ಬಟ್ಟೆಯಂತಿವೆ (ಯೆಶಾ. 64:6). ಕ್ರಿಸ್ತನ ನೀತಿಯೆಂಬ ಉಡುಪನ್ನು ನಮಗೆ ತೊಡಿಸಲಾಗಿದೆ (ಗಲಾ. 3:27).

ಪಾಪ ಕ್ಷಮಾಪಣೆ ಹಾಗೂ ನೀತೀಕರಣದಲ್ಲಿ ಪಾಲ್ಗೊಳ್ಳುವುದಕ್ಕೆ, ನಮ್ಮಲ್ಲಿ ’ಪಶ್ಚಾತ್ತಾಪ’ ಮತ್ತು ’ನಂಬಿಕೆ’ ಖಂಡಿತವಾಗಿ ಇರಬೇಕು (ಅ.ಕೃ. 20:21). ನಿಜವಾದ ಪಶ್ಚಾತ್ತಾಪವು ನಮ್ಮಿಂದ ಇತರರಿಗೆ ಆಗಿರುವ ನಷ್ಟವನ್ನು ಭರಿಸುವ ನಿರ್ಧಾರವನ್ನು ನಮ್ಮಲ್ಲಿ ಹುಟ್ಟಿಸಬೇಕು - ಅನ್ಯಾಯವಾಗಿ ಇತರರಿಂದ ಕಸಿದುಕೊಂಡ ಹಣ ಮತ್ತು ವಸ್ತುಗಳನ್ನು ಹಿಂದಿರುಗಿಸುವುದು ಹಾಗೂ ತೆರಬೇಕಾದ ತೆರಿಗೆಯನ್ನು ಭರ್ತಿ ಮಾಡುವುದು ಮತ್ತು ಸಾಧ್ಯವಾದಷ್ಟು ಮಟ್ಟಿಗೆ, ನಾವು ತಪ್ಪು ಮಾಡಿರುವ ಜನರಿಂದ ಕ್ಷಮಾಪಣೆ ಕೇಳುವುದಾಗಿದೆ (ಲೂಕ. 19:8,9). ನಮ್ಮನ್ನು ಕ್ಷಮಿಸಿರುವ ದೇವರು, ನಾವು ಸಹ ಅದೇ ರೀತಿಯಾಗಿ ಇತರರನ್ನು ಕ್ಷಮಿಸಬೇಕೆಂದು ಅಪೇಕ್ಷಿಸುತ್ತಾರೆ. ನಾವು ಕ್ಷಮಿಸದೆ ಹೋದರೆ, ದೇವರು ತನ್ನ ಕ್ಷಮಾಪಣೆಯನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಾರೆ (ಮತ್ತಾ. 18:23-35).

’ಪಶ್ಚಾತ್ತಾಪ’ ಮತ್ತು ’ನಂಬಿಕೆ’ಯ ನಂತರ ನೀರಿನ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕು, ಮತ್ತು ಆ ಮೂಲಕವಾಗಿ ದೇವರಿಗೆ, ಮನುಷ್ಯರಿಗೆ ಹಾಗೂ ದೆವ್ವಗಳಿಗೆ ನಾವು ಕೊಡುವ ಬಹಿರಂಗ ಸಾಕ್ಷಿ ಏನೆಂದರೆ, ನಮ್ಮ ಪೂರ್ವಸ್ವಭಾವವು (ಹಿಂದಿನ ಸ್ವಭಾವ) ನಿಜವಾಗಿ ಹೂಳಲ್ಪಟ್ಟಿದೆಯೆಂದು (ರೋಮಾ. 6:4,6). ಇದರ ನಂತರ ನಾವು ಪವಿತ್ರಾತ್ಮನ ದೀಕ್ಷಾಸ್ನಾನವನ್ನು ಪಡೆಯಬಹುದು ಮತ್ತು ಅದರ ಮೂಲಕ ನಾವು ನಮ್ಮ ಜೀವನ ಮತ್ತು ನಮ್ಮ ಮಾತಿನಿಂದ ಕ್ರಿಸ್ತನ ಸಾಕ್ಷಿಗಳಾಗುವ ಸಾಮರ್ಥ್ಯವನ್ನು ಹೊಂದುತ್ತೇವೆ (ಅ.ಕೃ. 1:8). ಪವಿತ್ರಾತ್ಮನ ದೀಕ್ಷಾಸ್ನಾನದ ವರವು ನಂಬಿಕೆಯ ಮೂಲಕ ದೇವರ ಎಲ್ಲಾ ಮಕ್ಕಳಿಗೆ ಲಭಿಸುವ ಒಂದು ವಾಗ್ದಾನವಾಗಿದೆ (ಮತ್ತಾ. 3:11; ಮತ್ತು ಲೂಕ. 11:13). ಯೇಸುವಿನ ಪ್ರತಿಯೊಬ್ಬ ಶಿಷ್ಯನು ಹೊಂದಿರುವ ವಿಶೇಷ ಹಕ್ಕು ಯಾವುದೆಂದರೆ, ತಾನು ದೇವರ ಮಕ್ಕಳಲ್ಲಿ ಒಬ್ಬನು ಎಂಬ ಸಾಕ್ಷಿಯನ್ನು ಪವಿತ್ರಾತ್ಮನಿಂದ ಪಡೆಯುವುದು (ರೋಮಾ. 8:16) ಮತ್ತು ತಾನು ನಿಜವಾಗಿ ಪವಿತ್ರಾತ್ಮನನ್ನು ಸ್ವೀಕರಿಸಿರುವುದನ್ನು ಖಚಿತವಾಗಿ ತಿಳಕೊಳ್ಳುವದು (ಅ.ಕೃ. 19:2).

2. ಶುದ್ಧೀಕರಣ

"ಶುದ್ಧೀಕರಣ"ವು ಕಟ್ಟಡದ ಕೊಠಡಿಗಳಂತೆ ಇರುತ್ತದೆ (ಪಾಪ-ಕ್ಷಮಾಪಣೆ ಹಾಗೂ ನೀತೀಕರಣವು ಕಟ್ಟಡದ ಅಸ್ತಿವಾರವಾಗಿದೆ). ’ಶುದ್ಧೀಕರಣ’ವು (ಅಂದರೆ, ಪಾಪದಿಂದ ಮತ್ತು ಲೋಕದಿಂದ ’ವಿಂಗಡಿಸಲ್ಪಡುವ’ ಕಾರ್ಯವಿಧಾನ - 1 ಕೊರಿ. 1:2) ಹೊಸ ಜನ್ಮದೊಂದಿಗೆ ಶುರುವಾಗಿ, ಭೂಮಿಯ ಮೇಲಿನ ನಮ್ಮ ಜೀವಿತದ ಉದ್ದಕ್ಕೂ ಮುಂದುವರಿಯಬೇಕು (1 ಥೆಸ. 5:23,24). ಈ ಕಾರ್ಯವನ್ನು ದೇವರು ನಮ್ಮ ಹೃದಯಗಳಲ್ಲಿ ಮತ್ತು ಮನಸ್ಸುಗಳಲ್ಲಿ ತನ್ನ ಧರ್ಮಶಾಸ್ತ್ರವನ್ನು ಪವಿತ್ರಾತ್ಮನ ಮೂಲಕ ಬರೆಯುವುದರಿಂದ ಆರಂಭಿಸುತ್ತಾರೆ; ಆದರೆ ಮನೋಭೀತಿಯಿಂದ ನಡುಗುತ್ತಾ ನಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳುವ ನಮ್ಮ ಪಾಲಿನ ಕೆಲಸವನ್ನು ನಾವು ಪೂರೈಸಬೇಕು (ಫಿಲಿ. 2:12,13). ನಮಗೆ ದೇವರಾತ್ಮನು ಒದಗಿಸುವ ಬಲದಿಂದ, ನಾವು ಶರೀರಭಾವದ ದುರಾಭ್ಯಾಸಗಳನ್ನು ನಾಶಗೊಳಿಸಬೇಕು (ರೋಮಾ. 8:13). ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ, ದೇವ ಭಯದಿಂದ ಕೂಡಿದವರಾಗಿ, ಸಂಪೂರ್ಣ ಪವಿತ್ರತೆಯ ಕಡೆಗೆ ಮುಂದುವರಿಯುವುದು ನಾವು ಮಾಡಬೇಕಾದ ಕಾರ್ಯವಾಗಿದೆ (2 ಕೊರಿ. 7:1).

ಒಬ್ಬ ಶಿಷ್ಯನು ಇದರಲ್ಲಿ ಕಾರ್ಯೋನ್ಮುಖನಾಗಿದ್ದು, ಪೂರ್ಣಮನಸ್ಸಿನಿಂದ ಪವಿತ್ರಾತ್ಮನೊಂದಿಗೆ ಸಹಕರಿಸಿದರೆ, ಆತನ ಜೀವನದಲ್ಲಿ ಶುದ್ಧೀಕರಣದ ಕಾರ್ಯವು ವೇಗವಾಗಿ ಸಾಗುತ್ತದೆ. ಒಬ್ಬನು ಪವಿತ್ರಾತ್ಮನ ನಿರ್ದೇಶನಕ್ಕೆ ಅರೆಮನಸ್ಸಿನ ಪ್ರತಿಕ್ರಿಯೆ ತೋರಿಸಿದಾಗ, ಅದರ ಪರಿಣಾಮವಾಗಿ ಆತನ ಜೀವನದಲ್ಲಿ ಶುದ್ಧೀಕರಣವು ನಿಧಾನವಾಗುತ್ತದೆ ಅಥವಾ ನಿಂತುಬಿಡುತ್ತದೆ. ಶೋಧನೆಯು ನಮ್ಮನ್ನು ಎದುರಿಸುವ ಗಳಿಗೆಯಲ್ಲಿ, ನಾವು ಈ ಶುದ್ಧೀಕರಣವನ್ನು ಎಷ್ಟು ಮನಃಪೂರ್ವಕವಾಗಿ ಬಯಸುತ್ತೇವೆ ಎನ್ನುವದು ನಿಜವಾಗಿ ಪರೀಕ್ಷಿಸಲ್ಪಡುತ್ತದೆ. ಶುದ್ಧೀಕರಿಸಲ್ಪಡುವುದು ಎಂದರೆ, ನಮ್ಮ ಹೃದಯಗಳು ಧರ್ಮಶಾಸ್ತ್ರದ ನೀತಿವಂತಿಕೆಗೆ ಒಳಪಡುವುದು - ಮತ್ತು ಹಳೆಯ ಒಡಂಬಡಿಕೆಯ ವಾಡಿಕೆಯಂತೆ ಅದನ್ನು ಕೇವಲ ಹೊರತೋರಿಕೆಗೆ ಪಾಲಿಸುವುದು ಅಲ್ಲ (ರೋಮಾ. 8:4). ಯೇಸುವು ಇದನ್ನೇ ಮತ್ತಾ. 5:17-48 ರಲ್ಲಿ ಒತ್ತಿ ಹೇಳಿದನು.

ಯೇಸುವು ಧರ್ಮಶಾಸ್ತ್ರದ ಬೇಡಿಕೆಯನ್ನು ಸಂಕ್ಷೇಪವಾಗಿ ವಿವರಿಸಿದ್ದು ಹೇಗೆಂದರೆ, ದೇವರನ್ನು ಪೂರ್ಣ ಹೃದಯದಿಂದ ಪ್ರೀತಿಸಬೇಕು ಮತ್ತು ನಮ್ಮ ನೆರೆಯವನನ್ನು ನಮ್ಮಂತೆಯೇ ಪ್ರೀತಿಸಬೇಕು ಎಂಬುದಾಗಿ (ಮತ್ತಾ. 22:36-40). ದೇವರು ಈಗ ನಮ್ಮ ಹೃದಯಗಳಲ್ಲಿ ಬರೆಯಲು ಇಚ್ಛಿಸುವ ಪ್ರೀತಿಯ ನಿಯಮವು ಇದೇ ಆಗಿದೆ, ಏಕೆಂದರೆ ಅದು ದೇವಸ್ವಭಾವವೇ ಆಗಿದೆ (ಇಬ್ರಿ. 8:10; 2 ಪೇತ್ರ. 1:4). ಇಂತಹ ಜೀವಿತವನ್ನು ತೋರಿಸುವ ಪ್ರಮಾಣ ಯಾವುದೆಂದರೆ, ಗಮನಿಸಿರುವ ಪ್ರತಿಯೊಂದು ಪಾಪವನ್ನು ಜಯಿಸುವುದು ಹಾಗೂ ಯೇಸುವಿನ ಎಲ್ಲಾ ಆಜ್ಞೆಗಳನ್ನು ಕೈಕೊಂಡು ನಡೆಯುವುದು (ಯೋಹಾ. 14:15).

ಯೇಸುವು ತೋರಿಸಿಕೊಟ್ಟ ಶಿಷ್ಯತ್ವದ ಷರತ್ತುಗಳನ್ನು ಎಲ್ಲಕ್ಕೂ ಮೊದಲು ಪೂರೈಸದೆ, ಇಂತಹ ಜೀವನವನ್ನು ಪ್ರವೇಶಿಸುವುದು ಅಸಾಧ್ಯವಾಗಿದೆ (ಲೂಕ. 14:26-33). ಈ ಷರತ್ತುಗಳ ಮುಖ್ಯಾಂಶ ಏನೆಂದರೆ, ಕರ್ತ ಯೇಸುವಿಗೆ ನಮ್ಮ ಎಲ್ಲಾ ಬಂಧುಗಳಿಗಿಂತ ಮತ್ತು ನಮ್ಮ ಸ್ವ-ಇಚ್ಛೆಗಿಂತ ಹೆಚ್ಚಿನ ಆದ್ಯತೆಯನ್ನು ನೀಡುವುದು ಮತ್ತು ನಮ್ಮ ಸಂಪತ್ತು ಹಾಗೂ ಆಸ್ತಿಪಾಸ್ತಿಗಳ ಹಿಡಿತ ನಮ್ಮ ಮೇಲೆ ಇರದಂತೆ ಎಚ್ಚರ ವಹಿಸುವುದು. ಇದೇ ನಾವು ದಾಟಬೇಕಾದ ಇಕ್ಕಟ್ಟಾದ ಬಾಗಿಲು ಆಗಿದೆ. ಇದರ ನಂತರ ಶುದ್ಧೀಕರಣದ ಇಕ್ಕಟ್ಟಾದ ದಾರಿ ಸಿಗುತ್ತದೆ. ಪರಿಶುದ್ಧತೆಯನ್ನು ಹಿಂಬಾಲಿಸದವರು ಕರ್ತನ ಮುಖವನ್ನು ಎಂದಿಗೂ ನೋಡಲಾರರು (ಇಬ್ರಿ. 12:14).

3. ಮಹಿಮಾ ಪದವಿಗೆ ಏರಿಕೆ

ನಾವು ದೋಷವಿಲ್ಲದ ಮನಸ್ಸಾಕ್ಷಿಯನ್ನು ಈಗಲೇ ಹೊಂದಲು ಸಾಧ್ಯವಿದ್ದರೂ (ಇಬ್ರಿ. 7:19; ಇಬ್ರಿ. 9:9,14), ಯೇಸುವು ಪ್ರತ್ಯಕ್ಷನಾಗಿ ನಾವು ಮಹಿಮಾ ಶರೀರವನ್ನು ಪಡೆಯುವ ತನಕ, ಪಾಪವಿಲ್ಲದ ಸಂಪೂರ್ಣ ಪರಿಶುದ್ಧತೆಯನ್ನು ನಾವು ತಲುಪಲಾರೆವು (1 ಯೋಹಾ. 3:2). ಆಗ ಮಾತ್ರ ನಾವು ಆತನನ್ನು ಹೋಲಲು ಸಾಧ್ಯವಾಗುತ್ತದೆ. ಆದರೆ ಈಗಿನ ಸಮಯದಲ್ಲಿ ನಾವು ಯೇಸು ನಡೆದಂತೆಯೇ ನಡೆಯಲು ಪ್ರಯತ್ನಿಸಬೇಕು (1 ಯೋಹಾ. 2:6). ಈ ಭ್ರಷ್ಟ (ಕೆಟ್ಟ) ಶರೀರದಲ್ಲಿ ನಾವಿರುವಷ್ಟು ದಿನ, ನಾವು ಎಷ್ಟು ಪರಿಶುದ್ಧತೆಯನ್ನು ಹೆಚ್ಚಿಸಿಕೊಂಡರೂ, ನಮಗೆ ಅರಿವಿಲ್ಲದಂತೆ ಶರೀರದಲ್ಲಿ ಪಾಪವು ನೆಲೆಸಿರುತ್ತದೆ (1 ಯೋಹಾ. 1:8). ಆದರೆ ನಮ್ಮ ಮನಸ್ಸಾಕ್ಷಿಯಲ್ಲಿ ನಾವು ಪಾಪವಿಲ್ಲದ ಸಂಪೂರ್ಣ ನಿರ್ದೋಷಿಗಳು ಆಗಿರಲು ಸಾಧ್ಯವಿದೆ (ಅ.ಕೃ. 24:16) ಮತ್ತು ಈಗಲೂ ಸಹ, ನಾವು ಪಾಪವನ್ನು ತೆಗೆದುಹಾಕಲು ಯಥಾರ್ಥರಾಗಿ ಶ್ರಮಿಸಿದರೆ (1 ಕೊರಿ. 4:4), ನಮ್ಮ ಮನಸ್ಸಿಗೆ ಪಾಪದ ಅರಿವಿಲ್ಲದಂತೆ ಜೀವಿಸಬಹುದು (1 ಯೋಹಾ. 2:1).

ನಾವು ಈ ರೀತಿಯಾಗಿ ಕ್ರಿಸ್ತನ ಎರಡನೇ ಬರೋಣಕ್ಕಾಗಿ ಮತ್ತು ಮಹಿಮಾ ಪದವಿಯನ್ನು ತಲಪುವುದಕ್ಕಾಗಿ ಕಾದಿದ್ದೇವೆ - ನಾವು ನಮ್ಮ ರಕ್ಷಣೆಯ ಅಂತಿಮ ಹಂತಕ್ಕೆ ಬಂದಾಗ, ಪಾಪವಿಲ್ಲದ ಪರಿಪೂರ್ಣತೆಯನ್ನು ತಲುಪುತ್ತೇವೆ (ರೋಮಾ. 8:23; ಫಿಲಿ. 3:21).