"ಕರ್ತನ ಭಕ್ತರು ಒಬ್ಬರಿಗೊಬ್ಬರು ಮಾತಾಡಿಕೊಳ್ಳಲು ಕರ್ತನು ಕಿವಿಗೊಟ್ಟು ಆಲಿಸಿ, ಭಯಭಕ್ತಿಯಿಂದ ತನ್ನ ನಾಮಸ್ಮರಣೆ ಮಾಡುವವರಿಗಾಗಿ ತನ್ನ ಮುಂದೆ ಒಂದು ಜ್ಞಾಪಕದ ಪುಸ್ತಕವನ್ನು ಬರೆಯಿಸಿದನು .... ಈ ರೀತಿಯಾಗಿ ಶಿಷ್ಟರಿಗೂ ದುಷ್ಟರಿಗೂ ಇರುವ ತಾರತಮ್ಯ ಏನೆಂದು ನಿಮಗೆ ತಿಳಿಯುತ್ತದೆ" (ಮಲಾಕಿಯನು 3:16-18).
ಮೇಲಿನ ವಚನಗಳಲ್ಲಿ ನಮಗೆ ಎರಡು ವಿಧವಾದ ಜನರ ಪಂಗಡಗಳು ಕಂಡುಬರುತ್ತವೆ - ನೀತಿವಂತರು ಮತ್ತು ದುಷ್ಟರು. ಅಲ್ಲಿ ಹೇಳಿರುವಂತೆ, ದೇವರು ಯಥಾರ್ಥ ಭಯಭಕ್ತಿಯಿರುವ ಮತ್ತು ತನ್ನ ನಾಮವನ್ನು ಮಹಿಮೆ ಪಡಿಸುವಂತ ಕ್ರೈಸ್ತರ ಹೆಸರುಗಳನ್ನು ಮಾತ್ರ ಒಳಗೊಂಡಿರುವ "ಒಂದು ಜ್ಞಾಪಕದ ಪುಸ್ತಕವನ್ನು" ಬರೆಯಿಸಿದ್ದಾರೆ. ಅದಲ್ಲದೆ ದೇವರು ಹೇಳುವುದು ಏನೆಂದರೆ, ’ಈ ರೀತಿಯಾಗಿ ದುಷ್ಟರ ನಡುವೆ ಯಥಾರ್ಥ ನೀತಿವಂತರು ಗುರುತಿಸಲ್ಪಡುತ್ತಾರೆ’.
ಈ ಹೇಳಿಕೆಯನ್ನು ’ಮತ್ತಾಯನು 23:25,26'ರಲ್ಲಿರುವ ಯೇಸುವಿನ ಹೇಳಿಕೆಯೊಂದಿಗೆ ಹೋಲಿಸಬಹುದು. ಆತನು ಅಲ್ಲಿ ಹೇಳಿರುವಂತೆ, "ದುಷ್ಟ" ಫರಿಸಾಯರು ಬಟ್ಟಲಿನ "ಹೊರಭಾಗವನ್ನು" ಮಾತ್ರ ಶುಚಿ ಮಾಡುತ್ತಾರೆ; ಆದರೆ ನಿಜವಾದ "ನೀತಿವಂತರು" ಬಟ್ಟಲಿನ "ಹೊರಭಾಗ" ಹಾಗೂ "ಒಳಭಾಗ" ಎರಡನ್ನೂ ಶುದ್ಧವಾಗಿ ಇಟ್ಟುಕೊಳ್ಳುತ್ತಾರೆ. ನಾವು ಈ ರೀತಿಯಾಗಿ ನೀತಿವಂತರನ್ನು ಮತ್ತು ದುಷ್ಟರನ್ನು ಗುರುತಿಸಬಹುದು.
ದೇವರಿಗೆ ನಿಜವಾಗಿ ಭಯಪಡುವ ನಂಬಿಗಸ್ತರು ಯಾವಾಗಲೂ ದೇವರ ಮುಂದೆ ತಮ್ಮ ಹೃದಯವನ್ನು ಶುದ್ಧವಾಗಿ ಇಟ್ಟುಕೊಳ್ಳುವುದರ ಜೊತೆಗೆ, ತಮ್ಮ ಬೆಳಕು (ಹೊರಗೆ ಕಾಣಿಸುವ ತಮ್ಮ ಜೀವಿತದ ಸಾಕ್ಷಿ) ಜನರ ಮುಂದೆ ಪ್ರಕಾಶಮಾನವಾಗಿ ಹೊಳೆಯುವಂತೆ ನೋಡಿಕೊಳ್ಳುತ್ತಾರೆ. ಅಂತರಂಗದ ಒಳಜೀವಿತವು ಬಹಳ ಪ್ರಾಮುಖ್ಯವಾದದ್ದೆಂದು ಯಾರು ಪರಿಗಣಿಸುತ್ತಾರೋ, ಅವರು ಮಾತ್ರ ನಿಜವಾಗಿ ಪಾಪವನ್ನು ಜಯಿಸಿ ಜೀವಿಸಲು ಸಾಧ್ಯವಾಗುತ್ತದೆ.
ಶುದ್ಧವಾದ ಮನಸ್ಸಾಕ್ಷಿ ಮತ್ತು ನಿರ್ಮಲ ಹೃದಯ ಇವೆರಡರ ನಡುವೆ ದೊಡ್ಡ ಅಂತರವಿದೆ. ಶುದ್ಧ ಮನಸ್ಸಾಕ್ಷಿ ಎಂದರೆ ’ತಿಳಿದಿರುವ’ ಎಲ್ಲಾ ಪಾಪಗಳಿಂದ ಮುಕ್ತವಾಗುವುದಾಗಿದೆ; ಆದರೆ ನಿರ್ಮಲ ಚಿತ್ತ ಅಥವಾ ಶುದ್ಧ ಹೃದಯ ಎಂದರೆ, ತಿಳಿದಿರುವ ಎಲ್ಲಾ ಪಾಪಗಳಿಂದ ಮುಕ್ತವಾಗಿರುವುದು ಮಾತ್ರವಲ್ಲದೆ, ಸ್ವತಃ ದೇವರ ಬಾಂಧವ್ಯದ ಹೊರತಾಗಿ ಇತರ ಎಲ್ಲಾ ವಿಧವಾದ ಬಾಂಧವ್ಯಗಳಿಂದ ಮುಕ್ತವಾಗಿರುವುದಾಗಿದೆ. ನಿರ್ಮಲಚಿತ್ತನು ದೇವರನ್ನು ಮಾತ್ರ ನೋಡುತ್ತಾನೆ, ಮತ್ತು ಇದರ ಹೊರತಾಗಿ ಯಾವುದನ್ನೂ ಅಥವಾ ಯಾರನ್ನೂ ನೋಡುವುದಿಲ್ಲ. "ನಿರ್ಮಲಚಿತ್ತರು ಧನ್ಯರು, ಏಕೆಂದರೆ ಅವರು ದೇವರನ್ನು ನೋಡುವರು," ಎಂದು ಯೇಸುವು ಹೇಳಿದರು. "ಶುದ್ಧ ಹೃದಯ ಉಳ್ಳವರು ಎಲ್ಲಾ ಪರಿಸ್ಥಿತಿಯಲ್ಲಿ ದೇವರನ್ನು ಮಾತ್ರ ನೋಡುವರು," (ಮತ್ತಾ. 5:8). ಅವರ ಗಮನ ಜನರ ಕಡೆಗೆ (ಒಳ್ಳೆಯವರು ಅಥವಾ ದುಷ್ಟರು) ಅಥವಾ ಸನ್ನಿವೇಶಗಳ ಕಡೆಗೆ (ಸುಲಭವಾದದ್ದು ಅಥವಾ ಕಠಿಣವಾದದ್ದು) ಹೋಗುವುದಿಲ್ಲ. ಅವರು ಸ್ವತಃ ದೇವರನ್ನು ಮಾತ್ರ ಗಮನಿಸುತ್ತಾರೆ.
ಇನ್ನೊಬ್ಬನನ್ನು ದೂರುವ ಮನುಷ್ಯನು ತನ್ನ ಹೃದಯದ ’ಅಶುದ್ಧತೆಯನ್ನು’ ಸಾಬೀತು ಪಡಿಸುತ್ತಾನೆ, ಯಾಕೆಂದರೆ ಅವನು ದೇವರ ವಿಷಯವನ್ನು ಮಾತ್ರ ಯೋಚಿಸುವುದನ್ನು ಬಿಟ್ಟು, ಇತರರ ಕೆಟ್ಟತನವನ್ನು ನೋಡುವುದರಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾನೆ. ಜನರಿಂದ ತೊಂದರೆಗಳು ಅಥವಾ ಕಷ್ಟದ ಸಂದರ್ಭಗಳು ಎದುರಾದಾಗಲೂ ಸಹ - ಒಬ್ಬನಲ್ಲಿ ’ನಿರ್ಮಲ ಹೃದಯ ಇದ್ದಾಗ’ ಅವನು ದೇವರನ್ನು ಮಾತ್ರ ನೋಡುತ್ತಾನೆ! ಇಂತಹ ವ್ಯಕ್ತಿಯು ಆ ಕಷ್ಟದ ಪರಿಸ್ಥಿತಿಗಳಲ್ಲಿ, ದೇವರು ಎಲ್ಲಾ ಕಾರ್ಯಗಳನ್ನು ಆತನ ಒಳಿತಿಗಾಗಿ ಮಾತ್ರವಲ್ಲದೆ (ರೋಮಾ. 8:28) ದೇವರ ಮಹಿಮೆಗಾಗಿಯೂ ಸಹ ಅನುಕೂಲ ಮಾಡುತ್ತಾರೆಂದು ಗ್ರಹಿಸುತ್ತಾನೆ. ಆಗ ಅವನು ಎಲ್ಲದಕ್ಕಾಗಿ ದೇವರನ್ನು ಸ್ತುತಿಸುತ್ತಾನೆ.
ನಿಮ್ಮ ಹೃದಯ ನಿಜವಾಗಿ ಶುದ್ಧವಾಗಿದ್ದರೆ, ಆಗ ಪ್ರಪಂಚದ ಎಲ್ಲಾ ಜನರು ಮತ್ತು ಸಕಲ ಸೃಷ್ಟಿಯ ಎಲ್ಲಾ ದೆವ್ವಗಳು ಒಟ್ಟಾಗಿ ಸೇರಿದರೂ, ಅವರು ನಿಮ್ಮ ಜೀವನಕ್ಕಾಗಿರುವ ದೇವರ ಯೋಜನೆಯನ್ನು ತಡೆಯಲು ಸಾಧ್ಯವಾಗುವುದಿಲ್ಲ - ಏಕೆಂದರೆ ’ದೇವರು ಪ್ರತಿಯೊಂದು ಪರಿಸ್ಥಿತಿಯಲ್ಲೂ ನಿಮಗಾಗಿ ಕೆಲಸ ಮಾಡುತ್ತಾರೆ’. ಆಗ ಪ್ರತಿಯೊಂದು ಪರಿಸ್ಥಿತಿಯಲ್ಲಿ ನೀವು ಜಯಶಾಲಿಗಳಾಗುತ್ತೀರಿ - ಮತ್ತು ನಿಮ್ಮ ಜೀವನಕ್ಕಾಗಿರುವ ದೇವರ ಪರಿಪೂರ್ಣ ಯೋಜನೆಯನ್ನು ನೀವು ಪೂರೈಸಲು ಸಾಧ್ಯವಾಗುತ್ತದೆ.
ಸತ್ಯವೇದವು 'ಜ್ಞಾನೋಕ್ತಿಗಳು 27:19'ರಲ್ಲಿ ಹೇಳುವಂತೆ, "ನೀರು ಮುಖವನ್ನು ಮುಖಕ್ಕೆ ಹೇಗೆ ಪ್ರತಿಬಿಂಬ ಗೊಳಿಸುತ್ತದೋ, ಹಾಗೆಯೇ ಹೃದಯವು ಮನುಷ್ಯನಿಗೆ ಮನುಷ್ಯನನ್ನು ತೋರ್ಪಡಿಸುತ್ತದೆ." ಈ ವಚನದ ಒಂದು ಅರ್ಥವೇನೆಂದರೆ, ಇತರರು ಮಾಡುವ ಕೆಲವು ಕಾರ್ಯಗಳನ್ನು ನೋಡಿ ನೀವು ಅವರ ಮೇಲೆ ಕೆಟ್ಟ ಉದ್ದೇಶಗಳ ಆರೋಪ ಹೊರಿಸಿದಾಗ, ಅದು "ನಿಮ್ಮ ಸ್ವಂತ ಹೃದಯದ ನಿಜಸ್ಥಿತಿಯನ್ನು ಬಹಿರಂಗ ಪಡಿಸುತ್ತದೆ’ - ಏಕೆಂದರೆ ಅದೇ ಕಾರ್ಯಗಳನ್ನು ನೀವು ಮಾಡಿದ್ದರೆ ನೀವು ಹೊಂದಿರ ಬಹುದಾದ ದುರುದ್ದೇಶಗಳನ್ನು ಅವರು ಹೊಂದಿರುತ್ತಾರೆ, ಎಂದು ನೀವು ಊಹಿಸುತ್ತಿದ್ದೀರಿ. ಆದರೆ ಯೇಸುವು ನಮಗೆ ತೋರಿಸಿಕೊಟ್ಟದ್ದು ಏನೆಂದರೆ, ಜನರ ಫಲದಿಂದ (ಬಾಹ್ಯ ಕ್ರಿಯೆಗಳಿಂದ) ಅವರ ಬೆಲೆಕಟ್ಟಬೇಕು, ಎಂಬುದಾಗಿ ("ನೀವು ಅವರ ಫಲಗಳಿಂದ ಅವರನ್ನು ತಿಳಿದುಕೊಳ್ಳುವಿರಿ" - ಮತ್ತಾ. 7:16) - ಮತ್ತು ಅವರ ಬೇರುಗಳಿಂದ ಅಲ್ಲ (ಅವರ ಉದ್ದೇಶಗಳು, ಅವುಗಳು ಕಣ್ಣಿಗೆ ಕಾಣಿಸುವುದಿಲ್ಲ!) ನಾವು ನಮ್ಮ ಜೀವಿತದಲ್ಲಿ ನಮ್ಮನ್ನು ನಿರಂತರವಾಗಿ ಶುದ್ಧ ಪಡಿಸಿಕೊಳ್ಳುತ್ತಿದ್ದರೆ, ನಾವು ನಮ್ಮನ್ನೇ ತೀರ್ಪು ಮಾಡಿಕೊಳ್ಳುತ್ತೇವೆ ಮತ್ತು ಇನ್ನೊಬ್ಬರ ಉದ್ದೇಶಗಳ ಬಗ್ಗೆ ನ್ಯಾಯ ವಿಚಾರಣೆ ಮಾಡುವುದಿಲ್ಲ. ಆಗ ನಾವು ನಮ್ಮ ಹೃದಯಗಳನ್ನು ಯಾವಾಗಲೂ ಪರಿಶುದ್ಧವಾಗಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಆಗ ಸ್ವತಃ ದೇವರೇ ನಮಗೆ ಇತರರ ಬಗ್ಗೆ ವಿವೇಚನೆಯನ್ನು ನೀಡುತ್ತಾರೆ, ಹಾಗಾಗಿ ನಾವು ಮೋಸ ಹೋಗುವುದಿಲ್ಲ. ಯೇಸುವಿನ ಹೃದಯವು ಯಾವಾಗಲೂ ಶುದ್ಧವಾಗಿತ್ತು, ಏಕೆಂದರೆ ಅವರು ಯಾರನ್ನೂ ತೀರ್ಪು ಮಾಡಲಿಲ್ಲ (ಯೋಹಾ. 8:15), ಆದರೆ ಅವರು ಎಲ್ಲರ ಆಂತರ್ಯವನ್ನು ತಿಳಿದುಕೊಂಡಿದ್ದರು (ಯೋಹಾ. 2:24,25).
ನಾವು ನಿರ್ಮಲ ಚಿತ್ತರಾಗುವುದು ಅಥವಾ ಹೃದಯವನ್ನು ಶುದ್ಧವಾಗಿ ಇಟ್ಟುಕೊಳ್ಳುವುದು ಎಂಬ ಮಾತಿನ ಅರ್ಥವನ್ನು ತೋರಿಸಿಕೊಡುವ ಒಂದು ಉದಾಹರಣೆ ಇಲ್ಲಿದೆ. ಸಹೋದರ ಜೂನಿಪರ್ 13ನೇ ಶತಮಾನದಲ್ಲಿ ಇಟಲಿ ದೇಶದಲ್ಲಿ ವಾಸಿಸುತ್ತಿದ್ದ ಒಬ್ಬ ದೇವಭಕ್ತರಾಗಿದ್ದರು. ಇವರು ಯಾವಾಗಲೂ ಬಹಳ ಸರಳವಾದ ಬಟ್ಟೆಗಳನ್ನು ಧರಿಸುತ್ತಿದ್ದರು. ಒಂದು ದಿನ ಅವರ ಒಬ್ಬ ಜೊತೆಯ ಸಹೋದರನು ಬಹಳ ದುಬಾರಿ ಪೋಷಾಕನ್ನು ಧರಿಸಿದ್ದನ್ನು ಅವರು ನೋಡಿದರು. ಆದರೆ ಜೂನಿಪರ್‌ರವರು ಅದಕ್ಕಾಗಿ ಆತನನ್ನು ತೀರ್ಪು ಮಾಡಲಿಲ್ಲ. ಅದಕ್ಕೆ ಬದಲಾಗಿ, ಅವರು ತಮ್ಮೊಳಗೆ ಹೀಗೆ ಹೇಳಿಕೊಂಡರು, "ಬಹುಶಃ ಆ ದುಬಾರಿ ಉಡುಪಿನ ಒಳಗಿರುವ ನನ್ನ ಸಹೋದರನ ಹೃದಯವು, ಸರಳವಾದ ಬಟ್ಟೆಯನ್ನು ಧರಿಸಿರುವ ನನ್ನ ಹೃದಯಕ್ಕಿಂತ ಹೆಚ್ಚು ದೀನವಾಗಿರಬಹುದು." ಇಂತಹ ನಿರ್ಮಲ ಮತ್ತು ದೀನ ಮನೋಭಾವದ ಮೂಲಕ, ಅವರು ತನ್ನ ಸಹೋದರನನ್ನು ತೀರ್ಪು ಮಾಡುವ ಪಾಪದಿಂದ ತನ್ನನ್ನು ಕಾಪಾಡಿಕೊಂಡರು. ಇದು ಅವರ ದೇವಭಕ್ತಿಯ ಒಂದು ರಹಸ್ಯವಾಗಿತ್ತು - ಹಾಗಾಗಿ ಅದು ನಾವೆಲ್ಲರೂ ಅನುಸರಿಸಲು ಯೋಗ್ಯವಾದ ಒಂದು ಉತ್ತಮ ಉದಾಹರಣೆಯಾಗಿದೆ. ನಾವು ಯಾವಾಗಲೂ ಹೀಗೆ ಇರೋಣ. ಆಮೆನ್.