"ನೀತಿವಂತರ ಮಾರ್ಗವು ಮಧ್ಯಾಹ್ನದ ವರೆಗೂ ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಂತಿದೆ"(ಜ್ಞಾನೋಕ್ತಿಗಳು 4:18).
ಈ ವಾಕ್ಯವು ನಿಜವಾಗಿ ಹೊಸ ಒಡಂಬಡಿಕೆಯ ಒಂದು ವಾಗ್ದಾನವಾಗಿದೆ. ನಮಗೆ ತಿಳಿದಿರುವಂತೆ, ಒಬ್ಬ ವ್ಯಕ್ತಿಯು ನೀತಿವಂತನೆಂದು ಕರೆಯಲ್ಪಡುವುದು ಆತನು ಕ್ರಿಸ್ತನಲ್ಲಿ ನಂಬಿಕೆ ಇರಿಸಿ, ತನ್ನ ಪಾಪ ಕ್ಷಮಾಪಣೆಯನ್ನು ಪಡೆದು, ದೇವರಿಂದ ನೀತಿವಂತನೆಂದು ನಿರ್ಣಯಿಸಲ್ಪಟ್ಟು, ಕ್ರಿಸ್ತನ ನೀತಿವಂತಿಕೆಯೆಂಬ ಬಟ್ಟೆಯಿಂದ ಹೊದಿಸಲ್ಪಟ್ಟ ನಂತರ ಮಾತ್ರ. ಆದಾಗ್ಯೂ, ಆತನಿಗಾಗಿ ದೇವರ ಚಿತ್ತ ಆತನ ಜೀವಿತವು ಬೆಳಗ್ಗಿನ ಬೆಳಕಿನಂತೆ ಇರಬೇಕೆಂದು ಮಾತ್ರವೇ ಅಲ್ಲ. ಮೇಲಿನ ವಚನದಲ್ಲಿ, "ನೀತಿವಂತರ ಮಾರ್ಗವು ಸೂರ್ಯನು ಉದಯಿಸಿದಂತೆ ,.,," ಎಂದು ಹೇಳಿದ್ದರೂ, ನಿಮಗೆ ತಿಳಿದಿರುವಂತೆ, ಸೂರ್ಯನು ಉದಯಿಸಿದಾಗ ಬೆಳಕು ಹರಡಿದರೂ, ಸೂರ್ಯನ ಪ್ರಕಾಶ ಇನ್ನೂ ಉನ್ನತ ಮಟ್ಟಕ್ಕೆ ಬಂದಿರುವುದಿಲ್ಲ. ಸೂರ್ಯನು ಆಕಾಶದಲ್ಲಿ ಏರುವುದನ್ನು ನೆನಸಿಕೊಳ್ಳಿ; ಆ ಪ್ರಕಾಶವು ಹೆಚ್ಚುತ್ತಾ ಹೆಚ್ಚುತ್ತಾ ಮತ್ತಷ್ಟು ಹೆಚ್ಚುತ್ತಾ ಕೊನೆಗೆ ಸೂರ್ಯನು ಮಧ್ಯಾಹ್ನದ ಸ್ಥಾನವನ್ನು ತಲುಪಿದಾಗ, ಅತ್ಯಂತ ಉಜ್ವಲ ಪ್ರಕಾಶ ಉಂಟಾಗುತ್ತದೆ. ಆಕಾಶದಲ್ಲಿ ಸೂರ್ಯನು ಏರುತ್ತಿರುವಾಗ ನೆರಳು ಚಿಕ್ಕದಾಗುತ್ತಾ ಹೋಗುತ್ತದೆಂದು ನಾವು ಹೇಳಬಹುದು; ಹಾಗೆಯೇ ನಮ್ಮ ಸ್ವ-ಜೀವಿತದ ನೆರಳು ಕುಗ್ಗುತ್ತಾ, ಕುಗ್ಗುತ್ತಾ, ಇನ್ನೂ ಕಡಿಮೆಯಾಗುತ್ತಾ ಹೋಗುತ್ತದೆ, ಮತ್ತು ಕೊನೆಗೆ ಸೂರ್ಯನು ಮೇಲೇರಿದಾಗ ನೆರಳು ಸಂಪೂರ್ಣವಾಗಿ ಇಲ್ಲದಾಗುತ್ತದೆ. ಇದೇ ನಮಗಾಗಿ ದೇವರ ಚಿತ್ತವಾಗಿದೆ. ನಾವು ಹೊಸದಾಗಿ ಹುಟ್ಟಿದ ದಿನದಿಂದ (ಮಾನಸಾಂತರ ಹೊಂದಿದ ದಿನ) ದೇವರು ನಮಗಾಗಿ ಇರಿಸಿಕೊಂಡಿರುವ ಚಿತ್ತ, ತನ್ನ ಯಾವನೇ ಮಗನಾದರೂ ಏರು-ಇಳಿತಗಳನ್ನು ಅನುಭವಿಸದೇ ಜೀವಿಸಬೇಕು, ಎಂಬುದಾಗಿದೆ.
ಈಗ, ಹೆಚ್ಚಿನ ಕ್ರೈಸ್ತರು ಏರಿಳಿತದ ಅನುಭವವನ್ನು ಹೊಂದುತ್ತಾರೆ ಮತ್ತು ನಾವು ಮಾಡುವ ತಪ್ಪು ಏನೆಂದರೆ, ನಾವು ಇತರ ಜನರ ಏರಿಳಿತಗಳನ್ನು ಅಥವಾ ಕೆಲವು ಲೌಕಿಕ ಬೋಧಕರ ಏರಿಳಿತಗಳನ್ನು ಗಮನಿಸಿ, ನಮ್ಮ ಆತ್ಮಿಕ ಸೋಲುಗಳ ಬಗ್ಗೆ ಒಂದು ರೀತಿಯ ತೃಪ್ತಿಯನ್ನು ಹೊಂದುತ್ತೇವೆ. ನೀತಿವಂತನ ಮಾರ್ಗದಲ್ಲಿ ಏರಿಳಿತಗಳು ಇರುವುದಿಲ್ಲ ಎಂದು ಸಾರುವ ದೇವರ ವಾಕ್ಯದ ಮಟ್ಟಕ್ಕೆ ನಮ್ಮ ಆತ್ಮಿಕ ಮಟ್ಟವನ್ನು ಹೋಲಿಸಿಕೊಳ್ಳುವುದರ ಬದಲಾಗಿ, ಕೆಲವು ಲೌಕಿಕ ವಿಶ್ವಾಸಿಗಳು ಅಥವಾ ಲೌಕಿಕ ಬೋಧಕರಿಗೆ ನಮ್ಮನ್ನು ಹೋಲಿಸಿಕೊಂಡು, ಅದನ್ನೇ ನಮ್ಮ ಆತ್ಮಿಕ ಮಟ್ಟದ ಗುರಿಯಾಗಿ ಇರಿಸಿಕೊಳ್ಳುತ್ತೇವೆ. ಒಬ್ಬ ಕ್ರೈಸ್ತ ವಿಶ್ವಾಸಿಯ ಜೀವಿತವು ಪ್ರಕಾಶಮಾನ, ನಂತರ ಕತ್ತಲೆ, ನಂತರ ಮತ್ತೊಮ್ಮೆ ಪ್ರಕಾಶಮಾನ ಮತ್ತು ನಂತರ ಕತ್ತಲೆ, ಈ ರೀತಿ ಇರುವುದಿಲ್ಲ. ಅದು ಜಯದ ಪರ್ವತದ ಶಿಖರಕ್ಕೆ ಏರಿ, ನಂತರ ನಿರಾಶೆಯ ಹೊಂಡಕ್ಕೆ ಇಳಿಯುವುದಿಲ್ಲ. ಒಂದು ದಿನ ಕರ್ತನನ್ನು ಸ್ತುತಿಸುತ್ತಾ ಆನಂದಿಸುವುದು, ಮರುದಿನ ಮಂಕಾಗುವುದು ಮತ್ತು ಬೇಸರದಿಂದಿರುವುದು, ಇದು ನಮ್ಮ ಅನುಭವವಾಗಿದ್ದರೆ, ಅದು ದೇವರ ಚಿತ್ತವಲ್ಲ ಎಂದು ಮಾತ್ರ ಹೇಳಲು ನಾನು ಬಯಸುತ್ತೇನೆ. ಅದು ನೀತಿವಂತನ ಮಾರ್ಗವಲ್ಲ. ಒಬ್ಬ ವ್ಯಕ್ತಿಯು ಆ ಮಾರ್ಗದಲ್ಲಿ ನಡೆಯುತ್ತಿರುವುದಾದರೆ, ಅವನು ನೀತಿವಂತನ ಮಾರ್ಗದಲ್ಲಿ ನಡೆಯುತ್ತಿಲ್ಲವೆಂದು ನಾವು ಸ್ಪಷ್ಟವಾಗಿ ಹೇಳಬಹುದು.
ಹೊಸ ಒಡಂಬಡಿಕೆಯಲ್ಲಿ, ನೀತಿವಂತನ ಮಾರ್ಗವನ್ನು "ಹೊಸ ಮತ್ತು ಜೀವಂತ ಮಾರ್ಗ" ಎಂದು ಕರೆಯಲಾಗಿದೆ. ಅದು ಅರ್ಥ ಮಾಡಿಕೊಳ್ಳಬೇಕಾದ ಒಂದು ಸಿದ್ಧಾಂತವಲ್ಲ; ಅದು ನೀತಿವಂತನ ಮಾರ್ಗವಾಗಿದೆ. ನಾವು ಈಗ "ಹೊಸ ಮತ್ತು ಜೀವಂತ ಮಾರ್ಗ"ವನ್ನು ನಂಬುವ ಜನರ ಬಗ್ಗೆ ಕೇಳುತ್ತೇವೆ. ಈ ವಾರ ಒಬ್ಬ ವಿಶ್ವಾಸಿಯು "ಹೊಸ ಮತ್ತು ಜೀವಂತ ಮಾರ್ಗದಲ್ಲಿ ನಡೆಯುವ ಸಹೋದರ ಅಥವಾ ಸಹೋದರಿಯರನ್ನು" ಪ್ರಸ್ತಾಪಿಸಿ ನನಗೊಂದು ಪತ್ರ ಬರೆದನು. ಹೊಸ ಮತ್ತು ಜೀವಂತ ಮಾರ್ಗದಲ್ಲಿ ನಡೆಯುವ ಸಹೋದರ ಅಥವಾ ಸಹೋದರಿ ಯಾರು? ಆ ವ್ಯಕ್ತಿ ’ಕ್ರಿಶ್ಚಿಯನ್ ಫೆಲೋಶಿಪ್ ಸಭೆ’ಯಲ್ಲಿ ಕುಳಿತುಕೊಳ್ಳುವ ವ್ಯಕ್ತಿಯಲ್ಲ. ಸಿದ್ಧಾಂತವನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿಯೂ ಅಲ್ಲ, ಆದರೆ ಆತನು ಏರಿಳಿತವಿಲ್ಲದೆ ಜೀವಿಸುವ ಒಬ್ಬ ವ್ಯಕ್ತಿಯಾಗಿದ್ದಾನೆ. ಏರಿಳಿತವಿರುವ ವ್ಯಕ್ತಿಯು ಹೊಸ ಮತ್ತು ಜೀವಂತ ಮಾರ್ಗದಲ್ಲಿ ನಡೆಯುತ್ತಿಲ್ಲ; ಅದು ಹಳೆಯ ನಿರ್ಜೀವ ಮಾರ್ಗವಾಗಿದೆ. ಹೊಸ ಮತ್ತು ಜೀವಂತ ಮಾರ್ಗವು ಪ್ರಕಾಶಮಾನ, ಉಜ್ವಲ, ಇನ್ನಷ್ಟು ಹೆಚ್ಚು ಪ್ರಕಾಶಮಾನವಾಗಿ ಮುಂದುವರಿಯುವಂಥದ್ದು ಆಗಿದೆ. ಇದೊಂದೇ ಹೊಸ ಒಡಂಬಡಿಕೆಯು ತೋರಿಸುವ ಹೊಸ ಮತ್ತು ಜೀವಂತ ಮಾರ್ಗವಾಗಿದೆ: ಇದು ನೀತಿವಂತನ ಮಾರ್ಗವಾಗಿದೆ. ಮೇಲೆ ಪ್ರಸ್ತಾಪಿಸಿದ "ನಿರಾಶೆಯ ಹೊಂಡಕ್ಕೆ ಬೀಳುವ" ವ್ಯವಹಾರವು, ನಾವು ಸಿದ್ಧಾಂತವನ್ನು ಅರ್ಥ ಮಾಡಿಕೊಂಡಿದ್ದರೂ, ಯಥಾರ್ಥವಾಗಿ ಆ ಮಾರ್ಗಕ್ಕೆ ಬಂದೇ ಇಲ್ಲವೆಂದು ಸಾಬೀತು ಪಡಿಸುತ್ತದೆ.
"ಪವಿತ್ರಾತ್ಮನು ನಮಗೆ ತೋರಿಸುವಂತ ಯೇಸುವಿನ ಮಹಿಮೆ ಅಥವಾ ಪ್ರಭಾವವು ಒಂದು ಬೆಳಕಾಗಿದೆ, ಮತ್ತು ಪವಿತ್ರಾತ್ಮನು ನಮ್ಮನ್ನು ಕರ್ತನ ಪ್ರಭಾವದ ಹೋಲಿಕೆಗೆ ಬದಲಾಯಿಸುತ್ತಾ ಹೋಗುವಾಗ, ನಮ್ಮ ಜೀವಿತದಲ್ಲಿ ಆ ಬೆಳಕು ಹೆಚ್ಚು ಹೆಚ್ಚು ಪ್ರಕಾಶಮಾನವಾಗುತ್ತಾ, ನಾವು ಪ್ರಭಾವದಿಂದ ಅಧಿಕ ಪ್ರಭಾವಕ್ಕೆ ಹೋಗುತ್ತೇವೆ.”
ನೀತಿವಂತನ ಮಾರ್ಗವು, ಮುಂಜಾನೆಯ ಬೆಳಕು ಹೆಚ್ಚು ಹೆಚ್ಚು ಪ್ರಕಾಶಮಾನವಾಗುತ್ತಾ ಹೋಗುವ ಹಾಗೆ ಇರುತ್ತದೆ. ಸೂರ್ಯನು ಹಿಂದೆ ಮತ್ತು ಮುಂದೆ ಹೋಗುತ್ತಾ ಇರುವುದಿಲ್ಲ. ಅದು ಇದ್ದಕ್ಕಿದ್ದಂತೆ ತನ್ನ ಮನಸ್ಸನ್ನು ಬದಲಾಯಿಸುವುದಿಲ್ಲ. ಅದು ನಿರಂತರವಾಗಿ ಮುಂದಕ್ಕೆ ಹೋಗುತ್ತದೆ; ಮತ್ತು ಸಹೋದರ ಸಹೋದರಿಯರೇ, ನಮ್ಮ ಜೀವಿತಗಳಿಗೆ ದೇವರ ಚಿತ್ತ ಇದೇ ಆಗಿದೆ. ನಮ್ಮಲ್ಲಿ ದೇವರ ಪ್ರಭಾವ ಅಥವಾ ಪ್ರಕಾಶವು ಉತ್ತಮ ಮತ್ತೂ ಉತ್ತಮ, ಉತ್ತಮ ಮತ್ತೂ ಉತ್ತಮ ಆಗಬೇಕೆಂದು ದೇವರ ಚಿತ್ತವಾಗಿದೆ. ಅದರ ಅರ್ಥ, ನನ್ನಲ್ಲಿ ವಾಸವಾಗಿರುವ ಶರೀರಭಾವ ಏನೆಂಬುದರ ಬಗ್ಗೆ ನನಗೆ ಹೆಚ್ಚು ಹೆಚ್ಚಾಗಿ ಬೆಳಕು ಸಿಗುತ್ತದೆ. ನನ್ನ ಮಾಂಸದಲ್ಲಿ(ಶರೀರಾಧೀನ ಸ್ವಭಾವ) ಏನು ನೆಲೆಸಿದೆ ಎಂದು ಆರು ತಿಂಗಳ ಹಿಂದೆ ನನಗೆ ತಿಳಿಯದೇ ಇದ್ದುದರ ಬಗ್ಗೆ ಈಗ ನನಗೆ ಬೆಳಕು ಸಿಗುತ್ತಿದೆ. ಒಂದು ವೇಳೆ ನಾವು ಆ ಅನುಭವವನ್ನು ಹೊಂದದೇ ಇದ್ದರೆ, ನಾವು ನೀತಿವಂತರ ಮಾರ್ಗದಲ್ಲಿ ಸಾಗುತ್ತಿಲ್ಲ. ನಾವು ಕೇವಲ ಕೆಲವು ಸಿದ್ಧಾಂತಗಳನ್ನು ಅರ್ಥ ಮಾಡಿಕೊಂಡು ನಮ್ಮನ್ನೇ ನಾವು ವಂಚಿಸಿಕೊಳ್ಳದಂತೆ ಈ ವಿಷಯವನ್ನು ಸ್ಪಷ್ಟವಾಗಿ ತಿಳಿದುಕೊಳ್ಳೋಣ. ಇಲ್ಲ: ಆ ಮಾರ್ಗದಲ್ಲಿ ಬೆಳಕು ಹೊಳೆಯುತ್ತಾ ಮತ್ತೂ ಹೊಳೆಯುತ್ತಾ ಮತ್ತೂ ಹೆಚ್ಚಾಗಿ ಹೊಳೆಯುತ್ತಾ ಹೋಗುತ್ತದೆ. ನನ್ನ ಶರೀರದಲ್ಲಿ (ನನ್ನ ಮಾನವ ಸ್ವಭಾವದಲ್ಲಿ) ಏನು ವಾಸವಾಗಿದೆ ಎಂಬುದರ ಬಗ್ಗೆ ನನಗೆ ಹೆಚ್ಚು ಹೆಚ್ಚಾಗಿ ಬೆಳಕು ಸಿಗುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, '1ಯೋಹಾನನು 1:7'ರಲ್ಲಿ ಹೇಳುವ ಹಾಗೆ, "ಆತನು ಬೆಳಕಿನಲ್ಲಿರುವಂತೆಯೇ ನಾವು ಬೆಳಕಿನಲ್ಲಿ ನಡೆದರೆ ..." ದೇವರು ಬೆಳಕಾಗಿದ್ದಾರೆ, ಮತ್ತು ಒಂದು ವೇಳೆ ನಾನು ಆ ಬೆಳಕಿನಲ್ಲಿ ನಡೆದರೆ, ನಾನು ದೇವರ ಹತ್ತಿರ ಹೋಗುತ್ತಿರುವಾಗ, ಆ ಬೆಳಕು ಅಷ್ಟೇ ಹೆಚ್ಚಾಗಿ ಪ್ರಕಾಶಿಸುತ್ತಾ, ಪ್ರಕಾಶಿಸುತ್ತಾ ಹೆಚ್ಚುತ್ತಿರುತ್ತದೆ. ಅದರ ಅರ್ಥ ನನಗೆ ನನ್ನ ಮಾಂಸದಲ್ಲಿ (ಶರೀರಾಧೀನ ಸ್ವಭಾವ) ಏನು ವಾಸವಾಗಿದೆ ಎಂಬುದರ ಬಗ್ಗೆ ಹೆಚ್ಚು ಹೆಚ್ಚಾಗಿ ಬೆಳಕು ಸಿಗುತ್ತಾ ಹೋಗುತ್ತದೆ. ನಾನು ನನ್ನ ಜೀವಿತದಲ್ಲಿ ಶರೀರಭಾವವನ್ನು ಹೆಚ್ಚು ಹೆಚ್ಚಾಗಿ ಮರಣಕ್ಕೆ ಒಪ್ಪಿಸುತ್ತಾ ಹೋಗಲು ಸಾಧ್ಯವಾಗುತ್ತದೆ ಮತ್ತು ನಾನು ಹೆಚ್ಚು ಜ್ಞಾನಿಯಾಗುತ್ತೇನೆ. ಹೀಗೆ ಯೇಸು ಜ್ಞಾನದಲ್ಲಿ ಬೆಳೆಯುತ್ತಾ ಹೋದನು. ಆತನು ಜೀವವುಳ್ಳ ಹೊಸ ದಾರಿಯಲ್ಲಿ ನಡೆದನು. ’ಲೂಕ. 2:52'ರಲ್ಲಿ, ಆತನು ಜ್ಞಾನದಲ್ಲಿ ವೃದ್ಧಿಯಾಗುತ್ತಾ ಬಂದನು, ಎಂಬುದಾಗಿ ಹೇಳಲಾಗಿದೆ. ಮೇಲೆ ಉಲ್ಲೇಖಿಸಿದ ವಾಕ್ಯದಲ್ಲಿ (ಜ್ಞಾನೋಕ್ತಿಗಳು 4:18ರಲ್ಲಿ) ಇದನ್ನೇ ಸೊಲೊಮೋನನು ಪವಿತ್ರಾತ್ಮನಿಂದ ಪ್ರೇರೇಪಿಸಲ್ಪಟ್ಟು ಹೇಳಿದ್ದಾನೆ.
'2 ಕೊರಿಂಥದವರಿಗೆ 3:18'ರಲ್ಲಿ, ಪವಿತ್ರಾತ್ಮನು ನಮಗೆ ಯೇಸುವಿನ ಮಹಿಮೆಯನ್ನು ಅಥವಾ ಪ್ರಭಾವವನ್ನು ತೋರಿಸುತ್ತಾನೆ ಎಂಬದಾಗಿ ಹೇಳುತ್ತದೆ. ಆ ಮಹಿಮೆಯು ಒಂದು ಬೆಳಕಾಗಿದೆ, ಮತ್ತು ಪವಿತ್ರಾತ್ಮನು ನಮ್ಮನ್ನು ಮಹಿಮೆಯಿಂದ ಮಹಿಮೆಗೆ ಸಾಗಿಸುತ್ತಾ ಕರ್ತನ ಸಾರೂಪ್ಯಕ್ಕೆ ಬದಲಾಯಿಸುತ್ತಾ ಹೋಗುವಾಗ, ನಮ್ಮ ಜೀವಿತದಲ್ಲಿ ಬೆಳಕು ಮತ್ತಷ್ಟು ಪ್ರಕಾಶಿಸುತ್ತಾ, ಪ್ರಕಾಶಿಸುತ್ತಾ ಹೋಗುತ್ತದೆ. ’ಜ್ಞಾನೋಕ್ತಿಗಳು 4:18' ಹಳೆ ಒಡಂಬಡಿಕೆಯ ವಾಕ್ಯವಾಗಿದ್ದು, ಅದು '2 ಕೊರಿಂಥದವರಿಗೆ 3:18'ಕ್ಕೆ ಅನುರೂಪವಾಗಿದೆ. ಒಂದು ವೇಳೆ ನೀವು ಈ ಹಳೆಯ ಒಡಂಬಡಿಕೆಯ ವಾಕ್ಯದ ಅರ್ಥವನ್ನು ತಿಳಕೊಳ್ಳಬೇಕಾದರೆ, ನೀವು ಹೊಸ ಒಡಂಬಡಿಕೆಯ '2 ಕೊರಿಂಥದವರಿಗೆ 3:18'ಕ್ಕೆ ತಿರುಗಿಸಿ, "ಪ್ರಭಾವದಿಂದ ಅಧಿಕ ಪ್ರಭಾವಕ್ಕೆ ಮತ್ತೂ ಇನ್ನಷ್ಟು ಪ್ರಭಾವಕ್ಕೆ ಹೋಗುತ್ತೇವೆ," ಎಂದು ಅಲ್ಲಿ ವಿವರಿಸಿರುವ ಅರ್ಥವನ್ನು ತಿಳಕೊಳ್ಳಬೇಕು.
ಪವಿತ್ರಾತ್ಮನು ನಿಮ್ಮನ್ನು ಯೇಸುವಿನ ಸಾರೂಪ್ಯಕ್ಕೆ ಬದಲಾಯಿಸಲಿ, ಪ್ರಭಾವದಿಂದ ಪ್ರಭಾವಕ್ಕೆ ನಡೆಸಲಿ, ಎಂದು ಹೇಳುತ್ತಾ ನಾವು ನಿಮ್ಮೆಲ್ಲರಿಗೆ ಬಹು ಆಶೀರ್ವಾದದ 2026 ವರ್ಷದ ಶುಭಾಶಯವನ್ನು ಕೋರುತ್ತೇವೆ.