WFTW Body: 

ಈ ಲೋಕದಲ್ಲಿ ’ದೇವರನ್ನು ಅರಿತುಕೊಳ್ಳುವುದು’ ಅತ್ಯಂತ ಶ್ರೇಷ್ಠ ವಿಷಯವಾಗಿದೆ. ಯಾಕೆಂದರೆ ನಾವು ದೇವರನ್ನು ಅರಿತುಕೊಂಡಾಗ, ಪ್ರತಿಯೊಂದು ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆಂದು ನಮಗೆ ಗೊತ್ತಾಗುತ್ತದೆ. ಆಗ ಇಡೀ ಲೋಕವೇ ನಮ್ಮನ್ನು ಎದುರಿಸಿದರೂ ಸಹ ನಾವು ಧೈರ್ಯದಿಂದ ಜೀವನವನ್ನು ಎದುರಿಸುತ್ತೇವೆ, ಏಕೆಂದರೆ ನಾವು ದೃಢವಾದ ಸ್ಥಳದಲ್ಲಿ ನಿಂತಿದ್ದೇವೆಂದು ನಮಗೆ ತಿಳಿದಿರುತ್ತದೆ. ದೇವರನ್ನು ತಿಳಿದುಕೊಳ್ಳಲು ಸಮಯ ಹಿಡಿಯುತ್ತದೆ, ಹಾಗಾಗಿ ನೀವು ಚಿಕ್ಕ ವಯಸ್ಸಿನಿಂದ ದೇವರನ್ನು ತಿಳಿದುಕೊಳ್ಳಲು ಪ್ರಾರಂಭಿಸುವುದು ಒಳ್ಳೆಯದು. ನಿಮಗೆ ದೇವರನ್ನು ಅರಿತುಕೊಳ್ಳುವ ಉದ್ದೇಶವಿದ್ದರೆ, ಆಗ ಅದರ ಹೋಲಿಕೆಯಲ್ಲಿ ಈ ಲೋಕದ ಎಲ್ಲವೂ ಕಸಕ್ಕೆ ಸಮಾನವೆಂದು ಪರಿಗಣಿಸಲು ನೀವು ಸಿದ್ಧರಿರಬೇಕು. ಇದರ ಅರ್ಥವೇನೆಂದರೆ, ನಿಮಗೆ ಲೌಕಿಕ ಜನರ ದೃಷ್ಟಿಯಲ್ಲಿ ಶ್ರೇಷ್ಠವಾಗಿರುವ ವಸ್ತುಗಳ ಆಕರ್ಷಣೆ ಇರಬಾರದು, ಬದಲಾಗಿ ಅವುಗಳನ್ನು ಕಸದಂತೆ ನೋಡಬೇಕು! ಅಪೊಸ್ತಲ ಪೌಲನಲ್ಲಿ ಇಂತಹ ಭಾವನೆಯಿತ್ತು (ಫಿಲಿ. 3:8 ನೋಡಿರಿ).

ನಾವು ಈ ಲೋಕದಲ್ಲಿ ಸಂಪತ್ತು ಅಥವಾ ಸಂತೋಷ ಅಥವಾ ಗೌರವ ಅಥವಾ ಶ್ರೇಷ್ಠತೆಗಾಗಿ ತವಕಿಸಿದರೆ, ಮುಂದೆ ಒಂದು ದಿನ ನಿತ್ಯತ್ವದ ಶುಭ್ರ ಬೆಳಕಿನಲ್ಲಿ, ನಮ್ಮ ಕೈಗಳಲ್ಲಿ ಇರುವಂಥದ್ದು ಉಪಯೋಗಕ್ಕೆ ಬಾರದ ಕಸ ಮಾತ್ರವೆಂದು ನಾವು ಕಂಡುಕೊಳ್ಳುತ್ತೇವೆ. ದೇವರು ತನ್ನ ಸಂಪತ್ತನ್ನು ಪಡೆದುಕೊಳ್ಳಿರಿ ಎಂದು ನಮ್ಮನ್ನು ಕರೆಯುತ್ತಿದ್ದಾಗ, ನಾವು ವ್ಯರ್ಥವಾದ ಕಸವನ್ನು ಗಟ್ಟಿಯಾಗಿ ಹಿಡಿದುಕೊಂಡು ನಮ್ಮ ಲೌಕಿಕ ಜೀವನವನ್ನು ಜೀವಿಸಿದೆವೆಂದು ಆಗ ನಮಗೆ ಮನವರಿಕೆಯಾಗುತ್ತದೆ. ಆದ್ದರಿಂದ ಬುದ್ಧಿವಂತರಾಗಿರಿ - ಮತ್ತು ಇಹಲೋಕದ ವಸ್ತುಗಳನ್ನು ಬಳಸಿಕೊಳ್ಳಿರಿ, ಅಷ್ಟೇ (ಏಕೆಂದರೆ ಅವು ನಮಗೆ ಇಲ್ಲಿ ಜೀವಿಸಲು ಬೇಕಾಗಿವೆ), ಆದರೆ ಅವುಗಳಲ್ಲಿ ಯಾವುದರಲ್ಲೂ ಅತಿಯಾದ ಆಸಕ್ತಿ ವಹಿಸಬೇಡಿರಿ, ಇಲ್ಲವಾದರೆ ನೀವು "ಒಂದು ಬಟ್ಟಲು ಗಂಜಿಗಾಗಿ" ನಿಮ್ಮ ಜನ್ಮಸಿದ್ಧ ಹಕ್ಕನ್ನು ಮಾರಿಬಿಡುತ್ತೀರಿ.

ನೀವು ನಿಮ್ಮ ಕ್ರೈಸ್ತ ಜೀವಿತವನ್ನು ಗಂಭೀರವಾಗಿ ಪರಿಗಣಿಸುತ್ತೀರೆಂದು ದೇವರು ಗಮನಿಸಿದರೆ, ಆಗ ಅವರು ನಿಮ್ಮ ಜೀವನದಲ್ಲಿ ಅಲುಗಾಡಬಹುದಾದ ಎಲ್ಲಾ ಸಂಗತಿಗಳನ್ನು ಕದಲಿಸಿ ಬೀಳಿಸುತ್ತಾರೆ, ಮತ್ತು ಈ ರೀತಿಯಾಗಿ ಅವರೊಂದಿಗೆ ನಿಮ್ಮ ಸಂಬಂಧದ ಬಗ್ಗೆ ನೀವು ಮೋಸಹೋಗದಂತೆ ನೋಡಿಕೊಳ್ಳುತ್ತಾರೆ. ಅವರು ನಿಮ್ಮ ಆತ್ಮಕ್ಕಾಗಿ ಬಹಳ ಉತ್ಸುಕರಾಗಿದ್ದಾರೆ. ನೀವು ಅವರನ್ನು ವೈಯಕ್ತಿಕವಾಗಿ ತಿಳಿದುಕೊಳ್ಳಬೇಕು, ಮತ್ತು ಒಂದು ಪುಸ್ತಕದಲ್ಲಿ (ಸತ್ಯವೇದದಲ್ಲಿ) ಓದಿಕೊಂಡು ಅಥವಾ ಬೇರೊಬ್ಬ ವ್ಯಕ್ತಿಯ ಮೂಲಕವಲ್ಲ, ಎಂದು ಅವರು ಬಯಸುತ್ತಾರೆ.

ದೇವರ ಪ್ರೀತಿಯು ನಮಗೆ ನಮ್ಮ ನಿಜಸ್ಥಿತಿಯನ್ನು ತೋರಿಸುತ್ತದೆ, ಮತ್ತು ಇದರಿಂದಾಗಿ ಅಗತ್ಯವಿದ್ದಲ್ಲಿ ನಮ್ಮ ತಪ್ಪುಗಳನ್ನು ಈಗಲೇ ತಿದ್ದಿಕೊಳ್ಳಲು ಸಾಧ್ಯವಾಗುತ್ತದೆ - ಈ ಪ್ರೀತಿಗಾಗಿ ದೇವರಿಗೆ ಸ್ತೋತ್ರವಾಗಲಿ. ನಾವು ಪಾಪವನ್ನು ದ್ವೇಷಿಸಿ ನಮ್ಮಲ್ಲಿ ನಿರ್ಮಲಚಿತ್ತವನ್ನು ಇಟ್ಟುಕೊಂಡರೆ ಮಾತ್ರ ಸಾಲದು. ನಾವು ವೈಯಕ್ತಿಕವಾಗಿ ಕರ್ತನಾದ ಯೇಸುವಿನೊಂದಿಗೆ ಒಂದು ಆಳವಾದ ಸಂಬಂಧವನ್ನು ಬೆಳೆಸಿಕೊಳ್ಳಬೇಕು. ಇಲ್ಲವಾದರೆ ನಾವು ಕೈಗೊಳ್ಳುವ ಎಲ್ಲಾ ಶುದ್ಧೀಕರಣವು ಕೇವಲ ’ನೈತಿಕ ಸ್ವಯಂ ಸುಧಾರಣೆಯ ಕಾರ್ಯಕ್ರಮ’ವಾಗಿ ಬಿಡುತ್ತದೆ. ನೀವು ಕರ್ತನೊಂದಿಗೆ ಆಪ್ತ ಸಂಬಂಧ ಬೆಳೆಸಿಕೊಳ್ಳಲು ಮೊದಲನೆಯದಾಗಿ, ಯಾವುದೇ ಪಾಪದ ಸುಳಿವು ಸಿಕ್ಕಿದೊಡನೆ ಅದಕ್ಕಾಗಿ ದುಃಖಿಸಬೇಕು ಮತ್ತು ಪಾಪವನ್ನು ಅರಿಕೆ ಮಾಡುವುದರ ಮೂಲಕ ಶುದ್ಧವಾದ ಮನಸ್ಸಾಕ್ಷಿಯನ್ನು ಇರಿಸಿಕೊಳ್ಳಲು ಬಹಳ ಎಚ್ಚರಿಕೆ ವಹಿಸಬೇಕು. ನಂತರ ದಿನವಿಡೀ ಕರ್ತರೊಂದಿಗೆ ಆಗಾಗ ಮಾತನಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಹೀಗೆ ಮಾಡಿದರೆ ಮಾತ್ರ ಒಂದು ದಿನ ನಿಮ್ಮ ಸುತ್ತಮುತ್ತಲು ಎಲ್ಲವೂ ಕುಸಿದು ಬೀಳುವಾಗ, ನೀವು ದೃಢವಾಗಿ ನಿಂತಿರಲು ಸಾಧ್ಯವಾಗುತ್ತದೆ.

’ಕರ್ತನನ್ನು ಅರಿತುಕೊಳ್ಳುವುದೇ’ ನನ್ನ ಮಹತ್ತರವಾದ ಹಂಬಲವಾಗಿದೆ, ಏಕೆಂದರೆ ಇದು ಮಾತ್ರವೇ ನಿತ್ಯಜೀವವಾಗಿದೆ (ಯೋಹಾ. 17:3). ನಾನು ಭಾರತದಲ್ಲೂ, ಅನ್ಯದೇಶಗಳಲ್ಲೂ ಕ್ರೈಸ್ತ ಪಂಗಡಗಳ ಮತ್ತು ಬೋಧಕರುಗಳ ವಿರೋಧವನ್ನು ಎದುರಿಸಿದಾಗ ಮತ್ತು ಅವರಿಂದ ಅಪನಿಂದೆಗೆ ಒಳಗಾದಾಗ, ಈ ಕರ್ತನ ಜ್ಞಾನವೇ ನನ್ನನ್ನು ಕದಲದೆ, ಸಮಾಧಾನದಿಂದ, ಮತ್ತು ಎಲ್ಲಕ್ಕೂ ಮೇಲಾಗಿ, ಪ್ರೀತಿಯುಳ್ಳ ಹೃದಯದಿಂದ ನಿಲ್ಲುವಂತೆ ಮಾಡಿತು. ನೀವು ಕರ್ತನನ್ನು ಇದೇ ರೀತಿ - ಮತ್ತು ನಾನು ಅರಿತದ್ದಕ್ಕೂ ಮಿಗಿಲಾಗಿ - ಅರಿತುಕೊಳ್ಳಬೇಕೆಂದು ನನ್ನ ಹಂಬಲವಾಗಿದೆ.