ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಯೌವನಸ್ಥರಿಗೆ ಸಭೆ
WFTW Body: 

ಯೇಸುವಿನಂತೆ ಎಲ್ಲವನ್ನೂ ತ್ಯಜಿಸಲು ಸಿದ್ಧರಾಗಿರುವ ಜನರು ಮಾತ್ರ ಯಥಾರ್ಥವಾದ ಕ್ರೈಸ್ತಸಭೆಯನ್ನು ಕಟ್ಟುವುದಕ್ಕೆ ಶಕ್ತರಾಗಿದ್ದಾರೆ.

"ಕ್ರಿಸ್ತನು ಸಭೆಯನ್ನು ಪ್ರೀತಿಸಿ, ಅದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟನು" (ಎಫೆ. 5:25-26). ಇಂದು ಸಭೆಯನ್ನು ಕಟ್ಟಲು ಬಯಸುವ ಪ್ರತಿಯೊಬ್ಬನೂ ಅದೇ ಬೆಲೆಯನ್ನು ತೆರಬೇಕಾಗುತ್ತದೆ - ಪ್ರತಿ ದಿನವೂ ತನ್ನ ಸ್ವೇಚ್ಛಾ ಜೀವನವನ್ನು ಸಂಪೂರ್ಣವಾಗಿ ತ್ಯಜಿಸಿ ಬಿಟ್ಟುಕೊಡುವುದು. ಕ್ರಿಸ್ತನ ದೇಹವಾದ ಸಭೆಯನ್ನು ಕಟ್ಟಲು ಇದರ ಹೊರತಾಗಿ ಬೇರೆ ಸುಲಭ ಮಾರ್ಗವಿಲ್ಲ. ಈ ಮೂಲತತ್ವವನ್ನು ನಾವು ಮಾನವ ಇತಿಹಾಸದ ಆದಿಯಿಂದಲೂ ನೋಡುತ್ತೇವೆ.

ಕಾಯಿನನು ದೇವರಿಗೆ ಕೇವಲ "ಒಂದು ಕಾಣಿಕೆಯನ್ನು" ತಂದನು - ಮತ್ತು ದೇವರು ಅದನ್ನು ತಿರಸ್ಕರಿಸಿದರು. ಆದರೆ ಹೇಬೆಲನು "ತನ್ನ ಕುರಿ ಮಂದೆಯಿಂದ ಅತ್ಯುತ್ತಮವಾದದ್ದನ್ನು" ತಂದನು ಮತ್ತು ದೇವರು ಅದನ್ನು ಸ್ವೀಕರಿಸಿದರು (ಆದಿ. 4:3-5). ಕಾಯಿನನು ಧಾರ್ಮಿಕ ಕ್ರೈಸ್ತರನ್ನು ಸೂಚಿಸುತ್ತಾನೆ - ಅವರು ದೇವರಿಗೆ ತರುವಂತ ಕಾಣಿಕೆಗಳು ಬಹಳ ಕಡಿಮೆ ಖರ್ಚಿನಲ್ಲಿ ಸಿಗುವಂತವು ಅಥವಾ ಯಾವುದೇ ಖರ್ಚು ಮಾಡದೇ ಸಿಕ್ಕಿದವುಗಳು ಆಗಿರುತ್ತವೆ. ಆದರೆ ಹೇಬೆಲನು ಆತ್ಮಿಕ ವಿಶ್ವಾಸಿಗಳನ್ನು ಸೂಚಿಸುತ್ತಾನೆ - ಅವರು ತಮ್ಮಲ್ಲಿರುವ ಎಲ್ಲವನ್ನೂ ವೆಚ್ಚಮಾಡಿ ದೇವರಿಗೆ ಕಾಣಿಕೆಗಳನ್ನು ಅರ್ಪಿಸುತ್ತಾರೆ.

ಅಬ್ರಹಾಮನು ದೇವರ ಕರೆಗೆ ಓಗೊಟ್ಟು, ಮೊರೀಯ ಬೆಟ್ಟದ ಮೇಲೆ ಯಜ್ಞವೇದಿಯಲ್ಲಿ ಇಸಾಕನನ್ನು ಅರ್ಪಿಸಿದಾಗ, ಅದು ಅವನು ಸಮರ್ಪಿಸ ಬಹುದಾಗಿದ್ದ ಅತ್ಯಂತ ದುಬಾರಿಯಾದ ತ್ಯಾಗವಾಗಿತ್ತು. ಹೀಗೆ ಅವನು ಹೇಬೆಲನ ಹೆಜ್ಜೆಯನ್ನು ಅನುಸರಿಸಿದನು (ಆದಿ. 22).

ಒಂದು ಸಾವಿರ ವರ್ಷಗಳ ನಂತರ, ಮೊರೀಯ ಬೆಟ್ಟದ ಮೇಲೆ ಇದೇ ಜಾಗದಲ್ಲಿ (ಅರೌನನ ಕಣದಲ್ಲಿ) ದಾವೀದನು ಒಂದು ಹೋಮವನ್ನು ಅರ್ಪಿಸಿ, "ನನಗೆ ಸುಮ್ಮನೆ ಸಿಕ್ಕಿದ್ದನ್ನು ನನ್ನ ದೇವರಾದ ಕರ್ತನಿಗೆ ಯಜ್ಞವಾಗಿ ಅರ್ಪಿಸಲೊಲ್ಲೆನು," ಎಂದು ಹೇಳಿದನು ಮತ್ತು ತನ್ನ ಸಂಪೂರ್ಣ ತ್ಯಾಗದ ಮನೋಭಾವವನ್ನು ತೋರಿಸಿದನು (2 ಸಮು. 24:24).

ಅಬ್ರಹಾಮ ಮತ್ತು ದಾವೀದರು ಅರ್ಪಿಸಿದ ಬಹಳ ಬೆಲೆಬಾಳುವ ಯಜ್ಞಗಳನ್ನು ದೇವರು ಗಮನಿಸಿದರು ಮತ್ತು ಇವರು ದುಬಾರಿಯಾದ ಯಜ್ಞಗಳನ್ನು ಅರ್ಪಿಸಿದ ಆ ನಿಖರವಾದ ಸ್ಥಳದಲ್ಲೇ - ಮೊರೀಯ ಬೆಟ್ಟದ ಮೇಲೆ ಒರ್ನಾನನ ಕಣದಲ್ಲಿ - ತನ್ನ ಆಲಯವನ್ನು ಕಟ್ಟಬೇಕೆಂದು ಸೊಲೊಮೋನನಿಗೆ ಹೇಳಿದರು (2 ಪೂರ್ವ. 3:1 ನೋಡಿರಿ).

ಇಂತಹ ಸಂಪೂರ್ಣ ತ್ಯಾಗದ ಮನೋಭಾವವನ್ನು ಹೊಂದಿರುವ ಜನರು ಮಾತ್ರ ದೇವರ ಆಲಯವನ್ನು ಕಟ್ಟಲು ಸಾಧ್ಯವಾಗುತ್ತದೆಯೆಂದು ದೇವರು ಈ ಮೂಲಕ ತೋರಿಸಿದರು. ಇಂತವರು ಮಾತ್ರ ಕ್ರಿಸ್ತನ ವಧುವನ್ನು - ಯೆರೂಸಲೇಮನ್ನು - ಕಟ್ಟುತ್ತಾರೆ (ಪ್ರಕ. 21:2). ಇತರ ಎಲ್ಲಾ ಕ್ರೈಸ್ತರು ’ಬಾಬೆಲ್’ ಎಂಬ ಜಾರಸ್ತ್ರೀಯನ್ನು ಕಟ್ಟುತ್ತಾರೆ (ಪ್ರಕ. 17,18).

ಕಾಯಿನನು ಮತ್ತು ಹೇಬೆಲನು ಪ್ರಾರಂಭಿಸಿದ ನೀರಿನ ಕಾಲುವೆಗಳಂತಿರುವ ಜನರ ಎರಡು ಪಂಗಡಗಳು ಯಾವುವೆಂದರೆ - ಧಾರ್ಮಿಕ ಜನರ ಪಂಗಡ ಮತ್ತು ಆತ್ಮಿಕ ಜನರ ಪಂಗಡ. ಮುಂದೆ ಕಾಲಾವಧಿಯಲ್ಲಿ ಈ ಪಂಗಡಗಳು ಇಸ್ರಾಯೇಲಿನ ಇತಿಹಾಸದಲ್ಲಿ ಸುಳ್ಳು ಪ್ರವಾದಿಗಳು ಮತ್ತು ನಿಜವಾದ ಪ್ರವಾದಿಗಳಾಗಿ ಕಾಣಿಸಿದವು; ಹಾಗೆಯೇ ಫರಿಸಾಯರಲ್ಲಿ ಮತ್ತು ಯೇಸುವಿನಲ್ಲಿ ಕಾಣಿಸಿದವು; ಮತ್ತು ಅಂತಿಮವಾಗಿ ಇವುಗಳು ಬಾಬೆಲ್ ಮತ್ತು ಯೆರೂಸಲೇಮ್‌ನಲ್ಲಿ ಕೊನೆಗೊಳ್ಳುತ್ತವೆ (ಪ್ರಕ. 17,18,21).

ಅನೇಕ ವಿಶ್ವಾಸಿಗಳು ದೇವದೂತರ ಮತ್ತು ಶರೀರಧಾರಿಯಾದ ಯೇಸುವಿನ ದರ್ಶನವನ್ನು ನೋಡಬೇಕೆಂದು ಉತ್ಸುಕರಾಗಿರುತ್ತಾರೆ. ಆದಾಗ್ಯೂ, ನಮ್ಮ ತೀವ್ರ ಇಚ್ಛೆ ಅಥವಾ ಅಭಿಲಾಷೆ ಯೇಸುವಿನ ಜೀವನದ ಮಹಿಮೆಯನ್ನು - ಅವರ ಭೂಲೋಕದ ಜೀವಿತದ ರೀತಿಯನ್ನು - ನೋಡುವುದಕ್ಕೆ ಆಗಿರಬೇಕು. ಆತನ ಉದಾಹರಣೆಯನ್ನು ನಾವು ಅನುಸರಿಸಬೇಕಾಗಿದೆ.

ಅಪೊಸ್ತಲ ಪೌಲನು ಹೀಗೆ ಹೇಳಿದ್ದಾನೆ: "ನನ್ನಲ್ಲಿ, ಅಂದರೆ ನನ್ನ ಶರೀರಾಧೀನ ಸ್ವಭಾವದಲ್ಲಿ ಒಳ್ಳೇದೇನೂ ವಾಸವಾಗಿಲ್ಲ .... ಅಯ್ಯೋ, ನಾನು ಎಂಥ ದುರವಸ್ಥೆಯಲ್ಲಿ ಬಿದ್ದ ಮನುಷ್ಯನು" (ರೋಮಾ. 7:18,24). ಆತನು ಈ ತಿಳುವಳಿಕೆಯನ್ನು ಹೊಂದಿದ್ದರಿಂದ, ಅವನಲ್ಲಿ ತನ್ನನ್ನು ಸಂಪೂರ್ಣವಾಗಿ ಶುದ್ಧೀಕರಿಸಿಕೊಳ್ಳಲು ಒಳಗಿನಿಂದ ದಹಿಸುವಂತ ಒಂದು ತೀವ್ರ ಉತ್ಸುಕತೆಯು ಉಂಟಾಯಿತು. ನಮಗೂ ಸಹ ನಮ್ಮ ಶರೀರಭಾವದಲ್ಲಿ (ಅಂದರೆ ನಮ್ಮ ಸ್ವಭಾವದಲ್ಲಿ) ಇರುವಂತ ಹೊಲಸುತನದ ಬಗ್ಗೆ ಪ್ರಕಟನೆ ಅವಶ್ಯವಾಗಿ ಬೇಕಾಗಿದೆ. ಆಗ ಮಾತ್ರ ನಾವು "ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿಕೊಂಡು, ದೇವರ ಭಯದಿಂದ ಕೂಡಿದವರಾಗಿ, ಸಂಪೂರ್ಣವಾಗಿ ಪವಿತ್ರರಾಗಲು" ಮುಂದಾಗುತ್ತೇವೆ - ಮತ್ತು ಹೀಗೆ ಕ್ರೈಸ್ತಸಭೆಯನ್ನು ಪರಿಶುದ್ಧವಾಗಿ ಉಳಿಸಿಕೊಳ್ಳುತ್ತೇವೆ (2 ಕೊರಿ. 7:1).

ಸಭೆಯು ನಂಬಿರುವ ಮತ್ತು ಸಭೆಯಲ್ಲಿ ಕಲಿಸಲಾಗುವ ಪರಿಶುದ್ಧವಾದ ಸಿದ್ಧಾಂತಗಳನ್ನು ನಾವು ಕೇವಲ ಸಿದ್ಧಾಂತಗಳೆಂದು ಭಾವಿಸಿದರೆ, ಅವುಗಳು ಬಹಳ ಸುಲಭವಾಗಿ ದೇವಭಕ್ತಿಯ ತೋರಿಕೆಗೆ ಮಾತ್ರ ಉಪಯೋಗವಾಗಬಹುದು, ಮತ್ತು ನಾವು ಅವುಗಳಿಂದ ಪಡೆಯಬೇಕಾದ ಬಲವನ್ನು ಪಡೆಯುವುದಿಲ್ಲ. ಅವುಗಳು ಕೇವಲ ಸಿದ್ಧಾಂತಗಳಾಗಿರದೆ, ನಮಗೆ ಅವಕ್ಕಿಂತ ಹೆಚ್ಚಿನವದಾಗಿರಬೇಕು. ನಾವು ಅವುಗಳ ಮೂಲಕ ಪ್ರಕಟನೆಯನ್ನು ಪಡೆಯಬೇಕು - ಮತ್ತು ನಮ್ಮ ಜೀವನದಲ್ಲಿ ಈ ಪ್ರಕಟನೆಗಳು ಹೆಚ್ಚುತ್ತಿರಬೇಕು. ನಮ್ಮ ಜೀವನದ ಬೇರೆ ಬೇರೆ ಕ್ಷೇತ್ರಗಳಲ್ಲಿ ಎದುರಾಗುವ ಶೋಧನೆಗಳ ವಿರುದ್ಧವಾಗಿ ನಾವು ಬಹಳ ಯಥಾರ್ಥರಾಗಿ ಹೋರಾಡುತ್ತಿರುವಾಗ, ನಮ್ಮೊಳಗೆ ಕ್ರಿಸ್ತನ ಸ್ವಭಾವಕ್ಕೆ ವಿರುದ್ಧವಾದ ಇನ್ನೂ ಅನೇಕ ಸಂಗತಿಗಳು ಪ್ರಕಟವಾಗುತ್ತವೆ - ನಾವು ಇವುಗಳನ್ನು ತೆಗೆದುಹಾಕಿ ನಮ್ಮನ್ನು ಶುದ್ಧೀಕರಿಸಿಕೊಳ್ಳಬೇಕು.

ನಿರಂತರವಾಗಿ ಇಂತಹ ಪ್ರಕಟನೆಗಳನ್ನು ಹೊಂದದೆ, ಕ್ರೈಸ್ತಸಭೆಯನ್ನು ಕಟ್ಟುವುದು - ಅಂದರೆ ಕ್ರಿಸ್ತನ ದೇಹವನ್ನು ಕಟ್ಟುವುದು - ಅಸಾಧ್ಯವಾಗಿದೆ. ನಮ್ಮ ಸ್ವಭಾವದಲ್ಲಿ ಅಡಗಿರುವ ಕಲ್ಮಶಗಳ ಕುರಿತಾದ ಈ ಪ್ರಕಟನೆಯನ್ನು ಪಡೆಯದ ವಿನಾ, ನಾವು ಗಳಿಸುವ ’ಪವಿತ್ರತೆ’ ಹಳೆಯ ಒಡಂಬಡಿಕೆಯ ದೇವಜನರ ಪವಿತ್ರತೆಯಂತೆ (ಹೆಚ್ಚೆಂದರೆ) ಇರುತ್ತದೆ - ಧರ್ಮಶಾಸ್ತ್ರಕ್ಕೆ ಸಂಬಂಧಿಸಿದ ಹೊರತೋರಿಕೆಯ ನೀತಿವಂತಿಕೆ. ಇದು ಇತರ ವಿಶ್ವಾಸಿಗಳ ದೃಷ್ಟಿಯಲ್ಲಿ ನಮಗೆ ಒಳ್ಳೆಯ ಹೆಸರನ್ನು ಕೊಡಬಹುದು, ಆದರೆ ಅದರಿಂದ "ದೇವರ ಮುಂದೆ ನಿನ್ನ ಕೃತ್ಯಗಳು ಸಂಪೂರ್ಣವಾದವುಗಳೆಂದು ಕಂಡುಬರುವುದಿಲ್ಲ" (ಪ್ರಕ. 3:1,2).

ನಾವು ಶೋಧನೆಯನ್ನು ಎದುರಿಸುವ ಕ್ಷಣಗಳಲ್ಲಿ ಯೇಸುವನ್ನು ನಮ್ಮ "ಮಾದರಿಯಾಗಿ ನೋಡದಿದ್ದರೆ," ನಾವು ಹಿಂಜರಿಯುತ್ತಿದ್ದೇವೆ ಎಂಬುದಾಗಿ ನಮಗೆ ಅರಿವಾಗಬೇಕು.