"ಸಾತ್ವಿಕತೆಯನ್ನು ಹೊಂದಿರುವವರು (ತಮ್ಮನ್ನು ತಗ್ಗಿಸಿಕೊಂಡ ದೀನರು) ಧನ್ಯರು, ಏಕೆಂದರೆ ಅವರು ಭೂಲೋಕವನ್ನು ಬಾಧ್ಯತೆಯಾಗಿ ಪಡೆಯುವರು" (ಮತ್ತಾ. 5:5). ಈ ವಚನವು ಯಾರು ತಮ್ಮ ಹಕ್ಕು-ಬಾಧ್ಯತೆಗಳಿಗಾಗಿ ಹೋರಾಡುವುದಿಲ್ಲವೋ, ಯಾರು ತಮಗಾದ ಅನ್ಯಾಯಕ್ಕೆ ಪ್ರತೀಕಾರ ತೀರಿಸುವುದಿಲ್ಲವೋ, ಅಂಥವರ ಬಗ್ಗೆ ಉಲ್ಲೇಖಿಸುತ್ತಿದೆಯೆಂದು ನಾನು ನಂಬುತ್ತೇನೆ. ಯೇಸುವಿನ ಹಕ್ಕುಗಳು ನಿರಾಕರಿಸಲ್ಪಟ್ಟಾಗ ಆತನು ಹೊಡೆದಾಡಲಿಲ್ಲ, ಮತ್ತು ಸಾತ್ವಿಕತೆಯನ್ನು ತೋರಿಸಿದನು. ಆತನು ತನ್ನನ್ನು ಶಪಿಸಿದವರನ್ನು ತಿರುಗಿ ಶಪಿಸಲಿಲ್ಲ. ಆತನು ತನ್ನನ್ನು ಶಿಲುಬೆಗೆ ಹಾಕಿದವರ ವಿರುದ್ಧ ನ್ಯಾಯತೀರ್ಪಿಗಾಗಿ ದೇವರೊಡನೆ ಪ್ರಾರ್ಥಿಸಲಿಲ್ಲ. ಮತ್ತಾ.11:29ರಲ್ಲಿ ಆತನು ನಮಗೆ, "ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನನ್ನಿಂದ ಕಲಿತುಕೊಳ್ಳಿರಿ - ನನ್ನಲ್ಲಿ ದೀನತೆ ಮತ್ತು ಹೃದಯದ ಸಾತ್ವಿಕತೆಯಿದೆ," ಎಂದು ಹೇಳಿದನು. ಈ ವಚನದಲ್ಲಿ ಪ್ರಯೋಗಿಸಲಾದ ಮೂಲಪದವನ್ನು ಸಮರ್ಪಕವಾಗಿ ಭಾಷಾಂತರಿಸುವುದು ಸುಲಭವಲ್ಲ. ಹಾಗಾಗಿ ಜನರು "ಸಾತ್ವಿಕ" ಎಂಬ ಪದವನ್ನು ನಾನಾ ರೀತಿಯಲ್ಲಿ ಭಾಷಾಂತರಿಸಿದ್ದಾರೆ (ನನ್ನ ಸತ್ಯವೇದದ ಟಿಪ್ಪಣಿಯಲ್ಲಿ "ದೀನನು, ತಗ್ಗಿಸಿಕೊಂಡವನು" ಎಂದು ಬರೆಯಲ್ಪಟ್ಟಿದೆ). ಇಲ್ಲಿ ಕಾಣಿಸುವ ಚಿತ್ರಣವೆಂದರೆ, ಭೂಮಿಯ ಮೇಲೆ ತನ್ನ ಹಕ್ಕು ಬಾಧ್ಯತೆಗಳಿಗಾಗಿ ಹೋರಾಡದೇ ಇರುವವನು. ಏಕೆಂದರೆ ಇಲ್ಲಿ ಹೇಳಿರುವಂತೆ ಒಂದು ದಿನ ಅವನೇ ಭೂಮಿಗೆ ಬಾಧ್ಯನಾಗುತ್ತಾನೆ. ಹಕ್ಕುಗಳಿಗಾಗಿ ಹೋರಾಡದೇ ಇರುವವರಿಗೆ ದೇವರು ಈ ಪ್ರಪಂಚವನ್ನು ಬಾಧ್ಯತೆಯಾಗಿ ನೀಡುತ್ತಾರೆ. ಇದು ದೇವರ ವಿಧಾನವಾಗಿದೆ.
ದೇವರು ತಮ್ಮ ಶ್ರೇಷ್ಠ ಅಶೀರ್ವಾದಗಳನ್ನು ನೀಡುವುದು ತಮ್ಮ ಹಕ್ಕುಗಳಿಗಾಗಿ ಹೋರಾಡುವವರಿಗಲ್ಲ. ಬದಲಾಗಿ ಹಕ್ಕುಗಳನ್ನು ಬಿಟ್ಟುಕೊಡುವವರಿಗೆ. ಯೇಸುವು ತನ್ನ ಎಲ್ಲಾ ಹಕ್ಕುಗಳನ್ನು ಬಿಟ್ಟುಕೊಟ್ಟನು; ಆತನು ಶಿಲುಬೆಯನ್ನು ಏರುವುದಕ್ಕೆ ತನ್ನನ್ನು ಒಪ್ಪಿಸಿಕೊಟ್ಟನು. ಆತನ ದೀನತೆ ಮತ್ತು ಸಾತ್ವಿಕತೆಯು ಕಂಡುಬರುವುದು ಯಾವುದರಲ್ಲಿ ಎಂದರೆ, ಆತನು ತನ್ನನ್ನು ತಗ್ಗಿಸಿಕೊಂಡು ಮರಣವನ್ನು, ಅಂದರೆ ಅವಮಾನಕರ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು (ಫಿಲಿ. 2:8). ಅವನು ಅವಮಾನಕ್ಕೂ ನಾಚಿಕೆಗೂ ಒಳಗಾದನು, ಮತ್ತು ಆತನು ಇವೆಲ್ಲವನ್ನು ಸಂಪೂರ್ಣವಾಗಿ ಸ್ವೀಕರಿಸಿದ್ದರಿಂದ, ಫಿಲಿ. 2:9ರಲ್ಲಿ ಹೀಗೆ ಹೇಳಲ್ಪಟ್ಟಿದೆ. "ದೇವರು ಆತನನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ, ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾರೆ." ಕ್ರಿಸ್ತನು ಈ ದಿನ ತಂದೆಯ ಬಲಪಾರ್ಶ್ವಕ್ಕೆ ಏರಿಸಲ್ಪಟ್ಟಿರುವುದಕ್ಕೆ ಕಾರಣವೇನೆಂದರೆ, ಆತನು ಆದಿಯಿಂದಲೂ ಸದಾಕಾಲವೂ ಆ ಪದವಿಯನ್ನು ಹೊಂದಿದ್ದನು ಎಂಬುದಲ್ಲ. ಆತನು ಆದಿಯಿಂದಲೂ ದೇವರ ಸ್ಥಾನದಲ್ಲಿದ್ದನು. ಆದರೆ ಆತನು ಮನುಷ್ಯನಾಗಿ ಭೂಲೋಕಕ್ಕೆ ಬಂದನು ಮತ್ತು ತಂದೆಯ ಬಲಭಾಗದ ಪದವಿಗೆ ಹಿಂದಿರುಗುವ ಹಕ್ಕನ್ನು ಗಳಿಸಿದನು. ಇದನ್ನು ನಾವು ಅರ್ಥ ಮಾಡಿಕೊಳ್ಳುವುದು ಬಹಳ ಪ್ರಾಮುಖ್ಯವಾಗಿದೆ. ಆತನು ತಂದೆಯ ಬಲ ಭಾಗದ ಪದವಿಗೆ ಮತ್ತೊಮ್ಮೆ ಹಿಂದಿರುಗುವ ಹಕ್ಕನ್ನು ಹೇಗೆ ಗಳಿಸಿದನೆಂದರೆ, ಆತನು ತನ್ನ ಭೂಲೋಕದ ಜೀವಿತದಲ್ಲಿ ದೇವರ ಗುಣಸ್ವಭಾವವನ್ನು ಪರಿಪೂರ್ಣವಾಗಿ ಪ್ರದರ್ಶಿಸಿದನು. ಮನುಷ್ಯನಾಗಿ ಎಲ್ಲಾ ರೀತಿಯ ಶೋಧನೆಗಳನ್ನು ಎದುರಿಸಿದನು ಮತ್ತು ಮರಣಕ್ಕೆ ಅದರಲ್ಲೂ ಶಿಲುಬೆಯ ಮರಣಕ್ಕೆ ವಿಧೇಯನಾಗುವ ಮಟ್ಟಕ್ಕೆ ತನ್ನನ್ನು ತಗ್ಗಿಸಿಕೊಂಡನು. ಆತನು ತನ್ನ ಹಕ್ಕುಗಳಿಗಾಗಿ ಹೋರಾಡಲಿಲ್ಲ. ಆದ್ದರಿಂದ ಒಂದು ದಿನ ಇಡೀ ಲೋಕವು ಆತನಿಗೆ ಅಧೀನ ಮಾಡಲಾಗುವುದು.
ಯೇಸು ಹೇಳುವುದೇನೆಂದರೆ, "ನನ್ನನ್ನು ನೋಡಿರಿ ಮತ್ತು ನಾನು ಹೇಗೆ ನನ್ನ ಹಕ್ಕುಗಳಿಗಾಗಿ ಹೋರಾಡಲಿಲ್ಲ, ನನ್ನ ಹಕ್ಕುಗಳನ್ನು ಹೇಗೆ ತ್ಯಜಿಸಿದೆನು ಮತ್ತು ದೀನನೂ, ತಗ್ಗಿಸಿಕೊಂಡವನೂ ಆಗಿದ್ದೆನು ಎಂಬುದನ್ನು ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಗುವುದು."
ಈಗ ದೇವರು ಯೇಸುವಿಗೆ ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ದಯಪಾಲಿಸಿದ್ದಾರೆ; ಆದುದರಿಂದ ಸ್ವರ್ಗ ಮರ್ತ್ಯ ಪಾತಾಳಗಳಲ್ಲಿ ಇರುವವರೆಲ್ಲರೂ ಯೇಸುವಿನ ಹೆಸರಿಗೆ ಅಡ್ಡ ಬೀಳಲಿದ್ದಾರೆ. ಇದು ಇನ್ನೂ ನಡೆದಿಲ್ಲ. ಇಂದು ಅನೇಕ ಜನರು ಯೇಸುವಿನ ಹೆಸರನ್ನು ತಿರಸ್ಕಾರಭಾವದಿಂದ ಕಾಣುತ್ತಾರೆ ಮತ್ತು ಆತನ ಹೆಸರಿಗೆ ಅಡ್ಡ ಬೀಳುವುದಿಲ್ಲ. ದೆವ್ವಗಳು ಅಡ್ಡಬೀಳುವುದಿಲ್ಲ ಮತ್ತು ಭೂಲೋಕದ ಅನೇಕ ಜನರು ಅಡ್ಡ ಬೀಳುವುದಿಲ್ಲ. ಆದರೆ ಖಂಡಿತವಾಗಿ ಮುಂದೆ ಬರಲಿರುವ ಒಂದು ದಿನ ಪ್ರತಿಯೊಬ್ಬರೂ ಮೊಣಕಾಲೂರಿ ಆತನ ನಾಮಕ್ಕೆ ಅಡ್ಡ ಬೀಳುವರು ಮತ್ತು ಪ್ರತಿಯೊಂದು ನಾಲಿಗೆಯೂ ಯೇಸು ಕ್ರಿಸ್ತನು ಒಡೆಯನೆಂದು ಅರಿಕೆ ಮಾಡಲಿದೆ. ಅದಲ್ಲದೆ ಇಡೀ ಪ್ರಪಂಚವು ಆತನ ಅಧೀನವಾಗಲಿದೆ. ಆತನಲ್ಲಿ ನಮ್ರತೆ ಇದ್ದುದರಿಂದ ಇದು ಆತನದ್ದಾಗುತ್ತದೆ. ಆದ್ದರಿಂದ ಯಾರು ದೀನತೆಯ ಈ ಹಾದಿಯಲ್ಲಿ ಆತನನ್ನು ಹಿಂಬಾಲಿಸುತ್ತಾರೋ ಅವರಿಗೆ ಯೇಸುವು ಹೇಳಿದ್ದೇನೆಂದರೆ, "ನನ್ನಿಂದ ಕಲಿತುಕೊಳ್ಳಿರಿ" (ಮತ್ತಾ. 11:29). ಆತನು ಕಲಿತುಕೊಳ್ಳಬೇಕೆಂದು ನಮಗೆ ಹೇಳಿದ ಒಂದೇ ಒಂದು ವಿಷಯವೆಂದರೆ ಸಾತ್ವಿಕತೆ ಮತ್ತು ದೀನ ಮನಸ್ಸು ಆಗಿತ್ತು. "ನನ್ನಿಂದ ಕಲಿಯಿರಿ, ನಾನು ಸಾತ್ವಿಕನೂ ದೀನಮನಸ್ಸು ಉಳ್ಳವನೂ ಸೌಮ್ಯ ಸ್ವಭಾವ ಉಳ್ಳವನೂ ಆಗಿರುವುದರಿಂದ ನನ್ನಿಂದ ಕಲಿತುಕೊಳ್ಳಿರಿ." ನಾವು ಇದನ್ನು ಯೇಸುವಿನಿಂದಲೇ ಕಲಿಯಬೇಕಿದೆ. ಆತನು ಇದನ್ನು ಯಾವುದೋ ಒಂದು ಪುಸ್ತಕದಿಂದ ಕಲಿಯಬೇಕೆಂದು ನಮಗೆ ಹೇಳುವುದಿಲ್ಲ. ಆತನು ಹೇಳುವುದೇನೆಂದರೆ, "ನಾನು ಹೇಗೆ ನನ್ನ ಹಕ್ಕುಗಳನ್ನು ಬಿಟ್ಟುಕೊಟ್ಟೆನೋ, ನಾನು ಹೇಗೆ ನನ್ನ ಹಕ್ಕುಗಳಿಗಾಗಿ ಹೋರಾಡಲಿಲ್ಲವೋ, ಮತ್ತು ನಾನು ಹೇಗೆ ಸೌಮ್ಯ ಸ್ವಭಾವ ಉಳ್ಳವನೂ ದೀನನೂ ಆಗಿದ್ದೆನೋ - ಇದನ್ನೆಲ್ಲಾ ನನ್ನನ್ನು ನೋಡಿ ಕಲಿತುಕೊಳ್ಳಿರಿ. ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಗುವುದು." ಬಹಳ ಮಂದಿ ಕ್ರೈಸ್ತ ವಿಶ್ವಾಸಿಗಳು ಅವಿಶ್ರಾಂತಿ, ಉದ್ವೇಗಗಳಿಗೆ ಒಳಗಾಗಲು ಕಾರಣವೇನು? ಕೆಲವರು ತೀವ್ರ ಮಾನಸಿಕ ಒತ್ತಡಕ್ಕೆ ಏಕೆ ಗುರಿಯಾಗುತ್ತಾರೆ? ಇವೆಲ್ಲವುಗಳಿಗೆ ಕಾರಣ ಒಂದೇ ಒಂದು ಎಂಬುದಾಗಿ ನಾನು ನಂಬುತ್ತೇನೆ: ಅವರಲ್ಲಿ ಸೌಮ್ಯಸ್ವಭಾವವಿಲ್ಲ. ಅವರ ಮನಸ್ಸಿನ ಒಳಗಡೆ ಯಾವುದೋ ಹೋರಾಟ ನಡೆಯುತ್ತಿದೆ. ಅವರು ತಮ್ಮ ಹಕ್ಕುಗಳನ್ನು ಪಡೆಯಲು ಹಂಬಲಿಸುತ್ತಿದ್ದಾರೆ. ಆದಕಾರಣ ಅವರು ಅಶಾಂತರಾಗಿದ್ದಾರೆ.
ದೀನತೆಯು ಬಹಳ ಸುಲಭವಾಗಿ ನಕಲಿ ಮಾಡಬಹುದಾದ ಗುಣಗಳಲ್ಲಿ ಒಂದಾಗಿದೆ. ನಮ್ಮ ನಿಜವಾದ ದೀನತೆಯನ್ನು ಯಾರೂ ನಮ್ಮಲ್ಲಿ ನೋಡಲು ಸಾಧ್ಯವಿಲ್ಲ. ದೇವರು ನಮ್ಮಲ್ಲಿ ಅದನ್ನೇ ನೋಡುತ್ತಾರೆ. ಮತ್ತು ಅದು ನಮ್ಮೊಳಗೆ ಇರುವಂತ ವಿಷಯವಾಗಿದೆ. ನಮಗೆ ಇದರ ಉತ್ತಮ ಉದಾಹರಣೆ ಯೇಸುವಿನ ಜೀವಿತದಲ್ಲಿ ಕೊಡಲ್ಪಟ್ಟಿದೆ. ಫಿಲಿ. 2:5-8ರ ವಾಕ್ಯವು ನಮಗೆ ತಿಳಿಸುವ ಹಾಗೆ, ಯೇಸುವು ದೇವಸ್ವರೂಪನಾಗಿದ್ದರೂ ತನ್ನ ಹಕ್ಕು ಬಾಧ್ಯತೆಗಳನ್ನು ತ್ಯಜಿಸಿದನು ಮತ್ತು ಒಬ್ಬ ದಾಸನ ರೂಪವನ್ನು ಧರಿಸಿದನು, ಮತ್ತು ಮನುಷ್ಯರ ಕೈಯಿಂದ ಶಿಲುಬೆಯ ಮರಣವನ್ನು ಸಹ ಹೊಂದಲು ಸಿದ್ಧನಾದನು. ನಾವು ಆ ದೀನತೆಯ ಹಾದಿಯಲ್ಲಿ ಆತನ ಹಿಂದೆ ಸಾಗಬೇಕಿದೆ.
ಯೇಸುವು 3 ಹಂತಗಳಲ್ಲಿ ತನ್ನನ್ನೇ ತಗ್ಗಿಸಿಕೊಂಡನು.
1. ಅವನು ಒಬ್ಬ ಮನುಷ್ಯನಾದನು.
2. ಅವನು ಒಬ್ಬ ಸೇವಕನಾದನು.
3. ಅವನು ಶಿಲುಬೆಯ ಮೇಲೆ ಅಪರಾಧಿಗಳ ಸಂಗಡ ಶಿಕ್ಷಿಸಲ್ಪಡಲು ಸಿದ್ಧನಾದನು.
ಅಲ್ಲಿ ನಾವು ಕ್ರಿಸ್ತೀಯ ಜೀವನದ ಮೂರು ರಹಸ್ಯಗಳನ್ನು ನೋಡುತ್ತೇವೆ : ದೀನತೆ, ದೀನತೆ ಮತ್ತು ದೀನತೆ.
ಯೇಸುವಿನ 33 ವರ್ಷಗಳ ಕಾಲದ ಭೂಮಿಯ ಮೇಲಿನ ಜೀವಿತವನ್ನು, ಮತ್ತು ಅವನು ತಾಳ್ಮೆಯಿಂದ ಬಾಧೆ, ಅವಮಾನ ಹಾಗೂ ಹಿಂಸೆಗಳನ್ನು ಸಹಿಸಿಕೊಂಡು, ಅಪಾರ ದೀನತೆಯಿಂದ ಇತರರಿಗೆ ಸೇವೆ ಸಲ್ಲಿಸಿದ್ದನ್ನು ನೋಡಿದ ದೇವದೂತರು ಆಶ್ಚರ್ಯಪಟ್ಟಿರಬೇಕು. ಸ್ವರ್ಗದಲ್ಲಿ ಅನೇಕ ವರ್ಷಗಳ ಕಾಲ ಆತನನ್ನು ಆರಾಧಿಸುವುದು ಅವರಿಗೆ ವಾಡಿಕೆಯಾಗಿತ್ತು. ಆದರೆ ಅವರು ಆತನ ಭೂಮಿಯ ಮೇಲಿನ ಜೀವಿತವನ್ನು - ಯೇಸುವು ಸ್ವರ್ಗದಲ್ಲಿದ್ದ ಎಷ್ಟೋ ವರ್ಷಗಳ ಅವಧಿಯಲ್ಲಿ ತಾವು ನೋಡಿರದಂತ ಮತ್ತು ಅರಿಯದೇ ಇದ್ದಂತ ಸ್ವಭಾವವನ್ನು - ಆತನ ದೀನತೆ ಮತ್ತು ಸಾತ್ವಿಕತೆಯನ್ನು ಅವರು ನೋಡಿದಾಗ ದೇವರ ಗುಣಸ್ವಭಾವವನ್ನು ಇನ್ನೂ ಹೆಚ್ಚಾಗಿ ಅರಿತುಕೊಂಡರು. ಈಗ ದೇವರು ಇಚ್ಛಿಸುವುದು ಏನೆಂದರೆ, ಕ್ರಿಸ್ತನ ಅದೇ ಆತ್ಮವನ್ನು ದೇವಸಭೆಯಾದ ನಮ್ಮ ಮೂಲಕ ಸ್ವರ್ಗದ ದೇವದೂತರಿಗೆ ತೋರಿಸುವುದು (ಎಫೆ. 3:10ರಲ್ಲಿ ಇದನ್ನು ಉಲ್ಲೇಖಿಸಲಾಗಿದೆ). ಈಗ ದೇವದೂತರು ನಮ್ಮಲ್ಲಿ ಮತ್ತು ನಮ್ಮ ನಡವಳಿಕೆಯಲ್ಲಿ ಏನನ್ನು ಕಾಣುತ್ತಾರೆ? ನಮ್ಮ ನಡವಳಿಕೆಯು ದೇವರಿಗೆ ಮಹಿಮೆ ತರುತ್ತದೋ?
ದೀನತೆಯು ಎಲ್ಲಕ್ಕಿಂತ ದೊಡ್ಡ ಸದ್ಗುಣವೆಂಬುದನ್ನು ನೆನಪಿಡಿರಿ. ನಾವು ಏನಾಗಿದ್ದೇವೆ ಮತ್ತು ಏನನ್ನು ಹೊಂದಿದ್ದೇವೆ ಇವೆಲ್ಲವೂ ದೇವರಿಂದ ಪಡೆದಿರುವ ವರಗಳು ಎಂಬುದನ್ನು ದೀನತೆಯು ಅಂಗೀಕರಿಸುತ್ತದೆ. ಎಲ್ಲಾ ಮನುಷ್ಯರನ್ನು, ವಿಶೇಷವಾಗಿ ದುರ್ಬಲರು, ಮೂಢರು ಅಥವಾ ಮೊಂಡರು, ಮಂದ ಬುದ್ಧಿಯವರು ಮತ್ತು ಬಡವರನ್ನು ದೀನತೆಯು ಆದರಿಸುತ್ತದೆ ಮತ್ತು ಗೌರವಿಸುತ್ತದೆ. ಇಂತಹ ದೀನತೆಯ ಮಣ್ಣಿನಲ್ಲಿ ಮಾತ್ರವೇ ದೇವರಾತ್ಮನಿಂದ ಉಂಟಾಗುವ ಫಲವೂ, ಕ್ರಿಸ್ತನ ಸದ್ಗುಣಗಳೂ ಬೆಳೆಯುತ್ತವೆ. ಆದುದರಿಂದ ನೀನು ನಿರಂತರವಾಗಿ ನಿನ್ನನ್ನು ನ್ಯಾಯತೀರ್ಪು ಮಾಡಿಕೊಂಡು ಜೀವಿಸಬೇಕು. ಯಾವುದೇ ವಿಷಭರಿತ ಉನ್ನತ ಆಲೋಚನೆಗಳು ಅಥವಾ ಸ್ವಗೌರವಕ್ಕಾಗಿ ತವಕಿಸುವ ಸ್ವಭಾವ ಅಥವಾ ದೇವರಿಗೆ ಸಲ್ಲಬೇಕಾದ ಮಹಿಮೆ ನಿನಗೆ ಸಿಗಬೇಕೆಂದು ಹಂಬಲಿಸುವುದು, ಇವು ಯಾವತ್ತೂ ನಿನ್ನ ಹೃದಯವನ್ನು ಪ್ರವೇಶಿಸದಂತೆ ಕಾಪಾಡಿಕೊಳ್ಳಬೇಕು. ಯೇಸುವಿನ ದೀನತೆಯ ಬಗ್ಗೆ ಹೆಚ್ಚಾಗಿ ಧ್ಯಾನ ಮಾಡು . ಇದು ನಾನು ನಿನಗೆ ಕೊಡುವಂತ ಬಹಳ ಮುಖ್ಯವಾದ ಉಪದೇಶವಾಗಿದೆ.