WFTW Body: 

ಅಪೊಸ್ತಲ ಪೌಲನು ತನ್ನ ಕಾರ್ಯಗಳಲ್ಲಿ ಸ್ವ-ಪ್ರಯೋಜನಕ್ಕಾಗಿ ಚಿಂತಿಸದೆ, ಅನೇಕ ಜನರು ರಕ್ಷಣೆ ಹೊಂದಿ ಪ್ರಯೋಜನ ಪಡೆಯಬೇಕೆಂದು ತಾನು ಚಿಂತಿಸುತ್ತೇನೆಂದು ಹೇಳುತ್ತಾನೆ, ಮತ್ತು ಅನಂತರ ಮುಂದುವರಿದು, ತಾನು ಕ್ರಿಸ್ತನನ್ನು ಅನುಸರಿಸುವಂತೆ ನಾವು ಆತನನ್ನು ಅನುಸರಿಸ ಬೇಕೆಂದು ನಮಗೆ ಹೇಳುತ್ತಾನೆ (1 ಕೊರಿ. 10:33,11:1 ಇವೆರಡು ವಚನಗಳನ್ನು ಒಟ್ಟಾಗಿ ಓದಿರಿ).

ಕೆಲವು ನಿರ್ದಿಷ್ಟ ಕ್ಷೇತ್ರಗಳಲ್ಲಿ, ಅಂದರೆ ಕಾಮ, ಕೋಪ, ಕಹಿತನ, ಹಣದಾಸೆ ಇತ್ಯಾದಿಗಳನ್ನು ಜಯಿಸುವುದರಲ್ಲಿ, ನಾವು ಯೇಸುವನ್ನು ಹಿಂಬಾಲಿಸಿದರೂ, ನಮ್ಮ ಶರೀರಭಾವದಲ್ಲಿ ಇರುವಂತ ಪಾಪದ ಬೇರನ್ನು ಕಿತ್ತು ಹಾಕದೇ ಇರಬಹುದು. ಲೂಸಿಫರನು ಮತ್ತು ಆದಾಮನು ಪಾಪ ಮಾಡಿದರು - ಆದರೆ ಅವರ ಪಾಪ ವ್ಯಭಿಚಾರವಾಗಲೀ, ಕೊಲೆಯಾಗಲೀ, ಚಾಡಿಮಾತು ಅಥವಾ ಹರಟೆ ಮಾತಾಗಲೀ, ಕಾಮುಕ ದೃಷ್ಟಿಯಾಗಲೀ ಆಗಿರಲಿಲ್ಲ. ಅವರಿಬ್ಬರ ಪಾಪ ಏನೆಂದರೆ, ಅವರು ತಮ್ಮ ಸ್ವಂತ ಲಾಭ ಮತ್ತು ಸ್ವಪ್ರಯೋಜನವನ್ನು ಬಯಸಿದರು. ಇದು ಎಲ್ಲಾ ಪಾಪದ ಮೂಲವಾಗಿದೆ - ಅಂದರೆ ’ಸ್ವ-ಇಚ್ಛೆಯನ್ನು ತೃಪ್ತಿಗೊಳಿಸುವಂತದ್ದು’.

ಈ ದುಷ್ಟತನದ ಬೇರನ್ನು ಕೊಡಲಿಯಿಂದ ಕಡಿದಾಗ ಮಾತ್ರವೇ ನಮ್ಮ ಜೀವನದ ದಿಕ್ಕು ಅಥವಾ ಜೀವನದ ಮೂಲತತ್ವವು ಬದಲಾಗುತ್ತದೆ. ಅಲ್ಲಿಯ ವರೆಗೂ, ನಾವು ಆತ್ಮಿಕವಾಗಿ ನಾನಾ ಕ್ಷೇತ್ರಗಳಲ್ಲಿ ಗೆಲುವನ್ನು ಹೊಂದಿದರೂ, ಸ್ವಂತ ಪ್ರಯೋಜನ ಮತ್ತು ಸ್ವಂತ ಲಾಭ ಮತ್ತು ಸ್ವಂತ ಪ್ರಖ್ಯಾತಿ ಇವುಗಳನ್ನು ನಮ್ಮ ಧ್ಯೇಯವಾಗಿ ಇರಿಸಿಕೊಳ್ಳಬಹುದಾದಂತ ಸಾಧ್ಯತೆ ಇದೆ. ಈ ಕಾರಣಕ್ಕಾಗಿಯೇ, ಪಾಪದ ಮೇಲೆ ಜಯವನ್ನು ಉಪದೇಶಿಸುವಂತ ಹಲವರು ಫರಿಸಾಯರಾಗಿಯೇ ಉಳಿದುಕೊಳ್ಳುತ್ತಾರೆ.

ಆದರೆ ಯಾರು ಗಂಭೀರವಾಗಿ ತಮ್ಮ ಸ್ವಪ್ರಯೋಜನದ ಗುರಿಯನ್ನು ಬಿಟ್ಟುಬಿಡಲು ಇಚ್ಛಿಸುತ್ತಾರೋ, ಅವರು ಪೌಲನ ಹಾಗೆ, "ಎಲ್ಲಾ ಜನರು ರಕ್ಷಣೆ ಹೊಂದಬೇಕೆಂದು" ಜನರ ಪ್ರಯೋಜನಕ್ಕಾಗಿ ಚಿಂತಿಸುತ್ತಾರೆ (1 ಕೊರಿ. 10:33). ಪೌಲನು ಇದರ ಹಿಂದಿನ ವಚನದಲ್ಲಿ (1 ಕೊರಿ. 10:32), ಮೂರು ವರ್ಗದ ಜನರ ಬಗ್ಗೆ ಹೇಳುತ್ತಾನೆ, "ಯೆಹೂದ್ಯರು, ಅನ್ಯಜನರು ಮತ್ತು ದೇವರಸಭೆ" - ಅಂದರೆ, ’ಹಳೆ’ ಒಡಂಬಡಿಕೆಯಲ್ಲಿ ಇರುವವರು, ಯಾವುದೇ ಒಡಂಬಡಿಕೆಯಲ್ಲಿ ’ಇಲ್ಲದವರು’ ಮತ್ತು ’ಹೊಸ’ ಒಡಂಬಡಿಕೆಯಲ್ಲಿ ಇರುವವರು. ಅವರೆಲ್ಲರೂ ರಕ್ಷಣೆ ಹೊಂದಬೇಕೆಂದು ಪೌಲನು ಹಂಬಲಿಸಿದನು. ಇಂದೂ ಕೂಡ ಈ ಮೂರು ವರ್ಗಗಳ ಜನರು ನಮ್ಮ ಮಧ್ಯದಲ್ಲಿದ್ದಾರೆ - ಪಾಪದ ಮೇಲೆ ಜಯವಿಲ್ಲದ ವಿಶ್ವಾಸಿಗಳು (ಹಳೆ ಒಡಂಬಡಿಕೆ), ಅನ್ಯರು (ಒಡಂಬಡಿಕೆ ಇಲ್ಲದವರು) ಮತ್ತು ಜಯದ ಜೀವಿತ ಬಾಳುವ ಯೇಸುವಿನ ಶಿಷ್ಯರು (ಹೊಸ ಒಡಂಬಡಿಕೆ). ಈ ಮೂರು ವರ್ಗಗಳ ಜನರ ಬಗ್ಗೆ ನಮ್ಮ ಮನೋಭಾವ ಹೇಗಿರಬೇಕೆಂದರೆ: "ನಾನು ನನ್ನ ಸ್ವಂತ ಲಾಭಕ್ಕಾಗಿ ಏನನ್ನೂ ಅಪೇಕ್ಷಿಸುವುದಿಲ್ಲ, ಆದರೆ ಅವರ ಅಭಿವೃದ್ಧಿಯನ್ನು, ಅಂದರೆ ಶರೀರಭಾವದ ದೆಸೆಯಿಂದಾಗಿ ಅವರಲ್ಲಿ ನೆಲೆಸಿರುವ ಎಲ್ಲ ರೀತಿಯ ಪಾಪಗಳಿಂದ ಅವರು ಬಿಡುಗಡೆ ಹೊಂದಬೇಕೆಂದು ನಾನು ಬಯಸುತ್ತೇನೆ." ಯೇಸುವು ಪರಲೋಕದಿಂದ ಬಂದಾಗ, ಸ್ವತಃ ಆತನ ಮನೋಭಾವ ಇದೇ ಆಗಿತ್ತು.

ವಿಶ್ವಾಸಿಗಳ ಮನೋಭಾವ, "ನಾನು ಸ್ವಂತ ಪ್ರಯೋಜನ ಬಯಸುವುದಿಲ್ಲ, ಆದರೆ ಅನೇಕರು ರಕ್ಷಣೆಯನ್ನು ಪಡೆದು ಲಾಭ ಹೊಂದಲಿ ಎಂದು ಬಯಸುತ್ತೇನೆ," ಎಂದಾಗಿದ್ದಾಗ ಮಾತ್ರ ಅವರು ಕ್ರೈಸ್ತಸಭೆಯನ್ನು ಕ್ರಿಸ್ತನ ದೇಹವಾಗಿ ಬೆಳೆಸಲು ಸಾಧ್ಯವಾಗುತ್ತದೆ. ಇಲ್ಲವಾದರೆ ಅವರು ಸಭಾಕೂಟಗಳಲ್ಲಿ ಆಳವಾದ ಸತ್ಯಾಂಶಗಳನ್ನು ಹಂಚಿಕೊಳ್ಳುವುದು ಸಹ ಸ್ವಂತಕ್ಕಾಗಿ ಒಳ್ಳೆಯ ಹೆಸರು ಗಳಿಸುವುದಕ್ಕೆ ಮಾತ್ರ ಪ್ರಯೋಜನವಾಗುತ್ತದೆ.

ಯೇಸುವು ಯಾವತ್ತೂ ತನ್ನ ಹಿತಕ್ಕಾಗಿ ಚಿಂತಿಸಲಿಲ್ಲ. ಅವರು ಯಾವಾಗಲೂ ತನ್ನ ತಂದೆಯ ಮಹಿಮೆಯನ್ನು ಬಯಸಿದರು. ಇದು ಮಾತ್ರವೇ ನಿಜವಾದ ಆತ್ಮಿಕತೆಯಾಗಿದೆ - ಇದಕ್ಕಿಂತ ಕಡಿಮೆಯಾದದ್ದು ಯಾವುದೂ ಅಲ್ಲ. ’ಒಬ್ಬ ವ್ಯಕ್ತಿಯ ಜೀವನದ ಅಂತಿಮ ಗುರಿ ಏನೆಂಬುದು, ಆತ ದೈವಿಕ ಮನುಷ್ಯನೋ ಅಥವಾ ಪಾಪಿಯೋ ಎಂಬುದನ್ನು ನಿಶ್ಚಯ ಪಡಿಸುತ್ತದೆ’ - ಹಾಗಾಗಿ ಆತನು ಕೇವಲ ಲೈಂಗಿಕ ಕಾಮ ಮತ್ತು ಕೋಪ, ಇಂತಹ ಸ್ವಭಾವಗಳ ಮೇಲೆ ಅಲ್ಲೋ ಇಲ್ಲೋ ಗಳಿಸುವ ಜಯಗಳು ಇದನ್ನು ನಿಶ್ಚಯಿಸಲಾರವು - ಅದೇ ವೇಳೆ ಇವುಗಳಿಗೂ ಪ್ರಾಮುಖ್ಯತೆಯಿದೆ, ಏಕೆಂದರೆ ಇವುಗಳು ಒಬ್ಬ ವ್ಯಕ್ತಿ ತನ್ನ ಸ್ವಂತ ಸುಖವನ್ನು ಹುಡುಕುತ್ತಿಲ್ಲ ಎಂಬುದನ್ನು ರುಜುವಾತು ಪಡಿಸುತ್ತವೆ. ಇನ್ನೊಂದು ಸಂದರ್ಭದಲ್ಲಿ ಯೇಸುವು ಹೀಗೆ ನುಡಿದರು, "ಇವುಗಳನ್ನು ಮಾಡಬೇಕಾಗಿತ್ತು; ಅವುಗಳನ್ನೂ ಬಿಡಬಾರದು."