ಯಾರು ಕರ್ತನ ಸೇವೆಯನ್ನು ಮಾಡುತ್ತಾರೋ, ಅವರು ಸೈತಾನನ ದಾಳಿಗೆ ಗುರಿಯಾಗುತ್ತಾರೆ. ನಾವು ದೇವರಿಗೆ ಎಷ್ಟು ಹೆಚ್ಚಾಗಿ ಉಪಯುಕ್ತರಾಗುತ್ತೇವೋ, ಅಷ್ಟೇ ಹೆಚ್ಚಾಗಿ ನಾವು ಶತ್ರುವಿನ ದಾಳಿಗೆ ಗುರಿಯಾಗುತ್ತೇವೆ. ನಾವು ಇದನ್ನು ತಪ್ಪಿಸಲಾರೆವು. ಸೈತಾನನು ಚಾಡಿ ಮಾತುಗಳ ಮೂಲಕ, ಸುಳ್ಳು ಆರೋಪಗಳ ಮೂಲಕ ಮತ್ತು ಕಟ್ಟುಕಥೆಗಳ ಮೂಲಕ ನಮ್ಮ ಮೇಲೆ ದಾಳಿ ಮಾಡುತ್ತಾನೆ. ಅದಲ್ಲದೆ ಆತನು ನಮ್ಮ ಹೆಂಡತಿ ಮಕ್ಕಳ ಮೇಲೂ ಸಹ ದಾಳಿ ಮಾಡುತ್ತಾನೆ.
ಯೇಸುವಿನ ಜೀವಿತಕಾಲದಲ್ಲಿ ಆತನ ಕುರಿತಾಗಿ ಜನರು ಹೇಳಿದ ಮತ್ತು ಈ ದಿನವೂ ಸಹ ಹೇಳುತ್ತಿರುವ ಕೆಟ್ಟ ಮಾತುಗಳನ್ನು ಒಮ್ಮೆ ಯೋಚಿಸಿರಿ. ಅವರು ಕರ್ತನನ್ನು ’ಹೊಟ್ಟೆಬಾಕನು’ ಮತ್ತು ’ಕುಡುಕನು’ ಎಂಬುದಾಗಿಯೂ (ಲೂಕ. 7:34), ಹುಚ್ಚುಹಿಡಿದವನು (ಮಾರ್ಕ. 3:21), ದೆವ್ವಹಿಡಿದವನು (ಯೋಹಾ. 8:48) ಮತ್ತು ದೆವ್ವಗಳ ಒಡೆಯನು (ಮತ್ತಾ. 12:24) ಮತ್ತು ಇಂತಹ ಇನ್ನೂ ಅನೇಕ ಕೆಟ್ಟ ಹೆಸರುಗಳಿಂದ ಕರೆದರು. ಸತ್ಯವೇದ ಮತ್ತು ಮೋಶೆಯ ಬೋಧನೆಗಳಿಗೆ ವಿರುದ್ಧವಾದ ಸುಳ್ಳು ಧಾರ್ಮಿಕ ತತ್ವಗಳನ್ನು ಬೋಧಿಸುವ ಧರ್ಮದ್ರೋಹಿ ಎಂಬುದಾಗಿ ಅವರು ಆತನನ್ನು ಆಪಾದಿಸಿದರು (ಯೋಹಾ. 9:29). ಈ ರೀತಿಯಾಗಿ ಅವರು ಕರ್ತನ ಮಾತಿಗೆ ಕಿವಿಗೊಡದಂತೆ ಜನರನ್ನು ಆತನಿಂದ ದೂರ ಅಟ್ಟಿದರು. ಆದರೆ ಆತನು ಇಂತಹ ಜನರಿಗೆ ಉತ್ತರ ಕೊಡಲು ಎಂದಿಗೂ ತಲೆಕೆಡಿಸಿಕೊಳ್ಳಲಿಲ್ಲ. ಆತನು ಒಂದೇ ಒಂದು ವೈಯಕ್ತಿಕ ಆಪಾದನೆಗೂ ಉತ್ತರ ನೀಡಲಿಲ್ಲ. ನಾವು ಸಹ ಉತ್ತರಿಸಕೂಡದು. ಯೇಸುವು ಕೇವಲ ಧಾರ್ಮಿಕ ತತ್ವಗಳ ಕುರಿತಾದ ಪ್ರಶ್ನೆಗಳಿಗೆ ಉತ್ತರ ನೀಡಿದರು. ಈ ದಿನ, ಜನರು ನಮ್ಮ ಕರ್ತನ ಕುರಿತಾಗಿ ಅನೈತಿಕ ವಿಷಯಗಳನ್ನು ಸಹ ಹೇಳುತ್ತಾರೆ. ಆದರೆ ದೇವರು ಅವರನ್ನು ತೀರ್ಪುಮಾಡುವುದಿಲ್ಲ.
ಅವರು ಅಪೊಸ್ತಲ ಪೌಲನನ್ನು ಮೋಸಗಾರನು, ಸುಳ್ಳು ಪ್ರವಾದಿ ಮತ್ತು ಎಲ್ಲೆಡೆ ವಿರೋಧಿಸಲ್ಪಡುವ ಪಾಷಂಡಮತದವನು ಎಂದು ಕರೆದರು (ಅ.ಕೃ. 24:14,28:22). ಹೀಗೆ ಜನರು ಪೌಲನ ಮಾತಿಗೂ ಕಿವಿಗೊಡದಂತೆ ಅವರು ಜನರನ್ನು ಪೌಲನಿಂದ ದೂರವಿರಿಸಿದರು.
ಕ್ರೈಸ್ತಸಭೆಯ ಇತಿಹಾಸದ ಉದ್ದಕ್ಕೂ ದೇವರ ಪ್ರತಿಯೊಬ್ಬ ಶ್ರೇಷ್ಠ ದೇವಭಕ್ತನಿಗೂ ಇದೇ ರೀತಿ ನಡೆಯಿತು - ಜಾನ್ ವೆಸ್ಲಿ, ಚಾರ್ಲ್ಸ್ ಫಿನ್ನೀ, ವಿಲಿಯಂ ಬೂತ್, ವಾಚ್ಮನ್ ನೀ ಮತ್ತು ದೇವರ ಪ್ರತಿಯೊಬ್ಬ ನಿಜವಾದ ಪ್ರವಾದಿಗೂ ಇದೇ ಅನುಭವವಾಯಿತು.
ಯೇಸುವಿನ ಸಾರೂಪ್ಯವನ್ನು ಪಡೆಯಲು ನಾವು ಇಷ್ಟು ದೊಡ್ಡ ಬೆಲೆಯನ್ನು ಕೊಡಲು ಸಿದ್ಧರಿದ್ದೇವೆಯೆ? ಅಥವಾ ನಾವು ಇನ್ನೂ ಮನುಷ್ಯರ ಗೌರವಕ್ಕಾಗಿ ತವಕಿಸುತ್ತಿದ್ದೇವೆಯೇ?
ನಾವು ಇತರರಿಂದ ಅಪಾರ್ಥಮಾಡಲ್ಪಟ್ಟು, ತಪ್ಪಾಗಿ ತೀರ್ಪುಮಾಡಲ್ಪಟ್ಟು, ಸುಳ್ಳು ಆರೋಪ ಮತ್ತು ಸಾರ್ವಜನಿಕ ಅವಮಾನಕ್ಕೆ ಗುರಿಯಾಗುವುದನ್ನು ಅನುಮತಿಸುವ ಮೂಲಕ ದೇವರು ನಮ್ಮನ್ನು ಮುರಿಯುತ್ತಾರೆ. ಇಂತಹ ಎಲ್ಲಾ ಸಂದರ್ಭಗಳಲ್ಲಿ ನಾವು ನಮಗೆ ಕಿರುಕುಳ ಕೊಡುತ್ತಿರುವ ಜನರನ್ನು ನೋಡಲು ನಿರಾಕರಿಸಬೇಕು. ಇವರು ನಮ್ಮ ಸಹೋದರರು ಆಗಿರಬಹುದು ಅಥವಾ ನಮ್ಮ ಶತ್ರುಗಳಾಗಿರಬಹುದು. ಅದು ಮುಖ್ಯವಾದ ವಿಷಯವಲ್ಲ. ನಮ್ಮ ಪರಲೋಕದ ತಂದೆಯೇ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಇಸ್ಕರಿಯೋತ ಯೂದನ ಕೈಯನ್ನು ಹಿಡಿದು, ನಮಗೆ ಪಾತ್ರೆಯಿಂದ ಕುಡಿಸುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ನಾವು ನಮ್ಮ ತಂದೆಯ ಕೈಯನ್ನು ಕಾಣುವುದಾದರೆ, ಆ ಪಾತ್ರೆಯ ಪಾನವು ಎಷ್ಟು ಕಹಿಯಾಗಿದ್ದರೂ ಮತ್ತು ಎಷ್ಟು ನೋವನ್ನು ಉಂಟುಮಾಡಿದರೂ, ನಾವು ಅದನ್ನು ಸಂತೋಷದಿಂದ ಕುಡಿಯುತ್ತೇವೆ. ಆದರೆ ನಾವು ಯೂದನನ್ನು ಮಾತ್ರ ಕಂಡರೆ, ಆಗ ನಾವು ನಮ್ಮ ಕತ್ತಿಯನ್ನು ಹೊರತೆಗೆಯುತ್ತೇವೆ (ಪೇತ್ರನು ಮಾಡಿದಂತೆ) ಮತ್ತು ಜನರ ಕಿವಿಗಳನ್ನು (ಅಂದರೆ, ಜನರ ಗೌರವವನ್ನು) ಕಡಿದುಹಾಕುತ್ತೇವೆ ಅಥವಾ ಇನ್ನೇನಾದರೂ ಮಾಡುತ್ತೇವೆ.
ನಾವು ದಾಳಿಗೆ ಒಳಗಾದಾಗ ಅಥವಾ ತಪ್ಪಾಗಿ ಆರೋಪಿಸಲ್ಪಟ್ಟಾಗ, ನಾವು ನಮ್ಮನ್ನು ಆತನ ತ್ರಾಣವುಳ್ಳ ಹಸ್ತದ ಕೆಳಗೆ ತಗ್ಗಿಸಿಕೊಳ್ಳಬೇಕೆಂದು ದೇವರು ಬಯಸುತ್ತಾರೆ. ಅದು ದೇವರ ಕೈಯೇ ಹೊರತು ಮನುಷ್ಯನದ್ದಲ್ಲ ಎಂದು ನಾವು ಕಂಡುಕೊಂಡರೆ, ಆಗ ಹೀಗೆ ಮಾಡುವುದು ಸುಲಭ.
ಹಿಂದಿನ ವರ್ಷಗಳಲ್ಲಿ, "ವಿಶ್ವಾಸಿಗಳು" ನನ್ನ ಬಗ್ಗೆ ಮತ್ತು ನನ್ನ ಬೋಧನೆಗಳ ಬಗ್ಗೆ ಎಲ್ಲಾ ರೀತಿಯ ಕೆಟ್ಟ ಮಾತುಗಳನ್ನು ನುಡಿದಿರುವುದನ್ನು ನಾನು ಕೇಳಿಸಿಕೊಂಡಿದ್ದೇನೆ. ಅವರು ನನ್ನ ಮತ್ತು ನನ್ನ ಕುಟುಂಬದ ಸದಸ್ಯರ ವಿರುದ್ಧವಾಗಿ ಸುಳ್ಳು ಆರೋಪಗಳನ್ನು ಸಹ ಮಾಡಿದ್ದಾರೆ ಮತ್ತು ನನ್ನನ್ನು ನಿಂದಿಸಿ ಲೇಖನಗಳನ್ನು ಹಾಗೂ ಪುಸ್ತಕಗಳನ್ನು ಬರೆದಿದ್ದಾರೆ. ಆದರೆ ಕರ್ತರು ಯಾವಾಗಲೂ ನನಗೆ, ’ಇವರಿಗೆ ಯಾವ ಪ್ರತ್ಯುತ್ತರವನ್ನೂ ಕೊಡಬೇಡ,’ ಎಂದು ಹೇಳಿದ್ದಾರೆ. ಹಾಗಾಗಿ ನಾನು ಮೌನವಾಗಿದ್ದೆನು. ಇದರ ಪರಿಣಾಮವಾಗಿ ಕರ್ತರು ನನ್ನಲ್ಲಿ ಮತ್ತು ನನ್ನ ಕುಟುಂಬದ ಸದಸ್ಯರಲ್ಲಿ ಶ್ರೇಷ್ಠವಾದ ಶುದ್ಧೀಕರಣದ ಕಾರ್ಯವನ್ನು ಮಾಡಿದ್ದಾರೆ! ದೇವರು ಕೆಟ್ಟದ್ದನ್ನು ನಮ್ಮ ಒಳ್ಳೆಯದಕ್ಕಾಗಿ ಕಾರ್ಯ ಮಾಡುತ್ತಾರೆ.
"ಆತನ ಕೆತ್ತನೆಗೆ (ತಿದ್ದುಪಾಟಿಗೆ) ನಾವು ನಮ್ಮನ್ನು ಒಪ್ಪಿಸಿಕೊಟ್ಟರೆ, ಕೊನೆಯಲ್ಲಿ ನಾವು ಆತ್ಮಿಕ ಅಧಿಕಾರವುಳ್ಳ ಮತ್ತು ಕ್ರಿಸ್ತನ ಸಾರೂಪ್ಯವುಳ್ಳ ವ್ಯಕ್ತಿಗಳಾಗಿ ಬದಲಾಗುತ್ತೇವೆ."
ಕರ್ತರು ತಮ್ಮದೇ ಆದ ಸಮಯದಲ್ಲಿ ಮೋಡಗಳನ್ನು ಚದುರಿಸುತ್ತಾರೆ ಮತ್ತು ಸೂರ್ಯನು ಪ್ರಕಾಶಿಸುವಂತೆ ಮಾಡುತ್ತಾರೆಂದು ನನಗೆ ಗೊತ್ತಿದೆ. ಆದರೆ ಆ ಸಮಯವನ್ನು (ಅ.ಕೃ. 1:7ರಲ್ಲಿ ನಾವು ಓದುವ ಪ್ರಕಾರ) ಅವರು ನಿರ್ಧರಿಸುತ್ತಾರೆ, ನಾನಲ್ಲ. ಅಲ್ಲಿಯ ವರೆಗೆ, ಅವರ ತ್ರಾಣವುಳ್ಳ ಹಸ್ತದ ಕೆಳಗೆ ನನ್ನನ್ನು ತಗ್ಗಿಸಿಕೊಳ್ಳುವುದು ನಾನು ಮಾಡಬೇಕಾದ ಕಾರ್ಯವಾಗಿದೆ. ಯಾರ ಮುಂದೆಯೂ ನನ್ನನ್ನು ಸಮರ್ಥಿಸಿಕೊಳ್ಳುವುದು ನನ್ನ ಕೆಲಸವಲ್ಲ. ಒಮ್ಮೆ ನಾನು ಹೀಗೆ ಮಾಡಲು ಪ್ರಾರಂಭಿಸಿದರೆ, ಆಗ ಬೇರೆ ಏನನ್ನೂ ಮಾಡಲು ನನಗೆ ಸಮಯವಿರುವುದಿಲ್ಲ.
ಅಪೊಸ್ತಲ ಪೌಲನು ಕಂಚುಗಾರನಾದ ಅಲೆಕ್ಸಾಂದ್ರನ ಕುರಿತು ಹೇಳಿದಂತೆ, ಒಂದು ದಿನ ಸ್ವತಃ ಕರ್ತರೇ ನಮ್ಮ ಶತ್ರುಗಳಿಗೆ ಅವರ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವರು (2 ತಿಮೊ. 4:14). ಹಾಗಾಗಿ ನಾವು ಭಯಪಡದೆ, ಮುಯ್ಯಿಗೆ ಮುಯ್ಯಿ ತೀರಿಸುವ ಕೆಲಸವನ್ನು ಕರ್ತರ ಕೈಗೆ ಒಪ್ಪಿಸಿಬಿಡಬಹುದು (ರೋಮಾ. 12:19).
ದೇವರಿಗೆ ಎಲ್ಲಾ ಸಂಗತಿಗಳನ್ನು ಒಪ್ಪಿಸುವುದು ಅತ್ಯುತ್ತಮವಾದದ್ದು. ಅವರಿಗೆ ತಾನು ಏನು ಮಾಡುತ್ತಿದ್ದೇನೆಂದು ತಿಳಿದಿದೆ ಮತ್ತು ಪ್ರತಿಯೊಂದನ್ನೂ ಅವರು ತಮ್ಮ ನಿಯಂತ್ರಣದಲ್ಲಿ ಇರಿಸಿಕೊಂಡಿದ್ದಾರೆ. ಅವರು ಬಂಡೆಯನ್ನು (ನಮ್ಮನ್ನು) ಕೆತ್ತಿ ಯೇಸುವಿನ ಸಾರೂಪ್ಯವುಳ್ಳ ಕೆತ್ತನೆಯಾಗಿ ತಯಾರಿಸುತ್ತಿದ್ದಾರೆ. ಬಂಡೆಯ ಕೆಲವು ಭಾಗಗಳು ಬಹಳ ಗಡುಸಾಗಿವೆ ಮತ್ತು ಅವುಗಳನ್ನು ಕೆತ್ತಿ ನಯಗೊಳಿಸಲು ದೇವರು ಸುಳ್ಳು ಆಪಾದನೆಗಳು ಮತ್ತು ಶೋಧನೆಗಳನ್ನು ಬಳಸಿಕೊಳ್ಳಬೇಕಾಗುತ್ತದೆ. ನಾವು ಅವರ ಕೆತ್ತನೆಯ ಕೆಲಸಕ್ಕೆ (ಅಂದರೆ, ಅವರ ತಿದ್ದುಪಾಟಿಗೆ) ನಮ್ಮನ್ನು ಒಪ್ಪಿಸಿಕೊಟ್ಟರೆ, ಅಂತ್ಯದಲ್ಲಿ ನಾವು ಕ್ರಿಸ್ತನ ಸಾರೂಪ್ಯವುಳ್ಳ ಮತ್ತು ಆತ್ಮಿಕ ಅಧಿಕಾರವುಳ್ಳ ಮನುಷ್ಯರಾಗಿ ತಯಾರಾಗುತ್ತೇವೆ.
ಯೂದನು ಯೇಸುವನ್ನು ಹಿಡಿದುಕೊಟ್ಟಾಗ, ಯೇಸುವು ಆತನನ್ನು "ಗೆಳೆಯನೇ" ಎಂದು ಸಂಬೋಧಿಸಲು ಸಾಧ್ಯವಾಯಿತು, ಏಕೆಂದರೆ ಯೇಸುವು ತನ್ನ ತಂದೆಯ ಕೈಯನ್ನು ಸ್ಪಷ್ಟವಾಗಿ ನೋಡಿದರು. ನಾವು ನಮ್ಮನ್ನು ಎದುರಿಸುವ ಎಲ್ಲಾ ಸಂದರ್ಭಗಳಲ್ಲಿ ದೇವರ ಸಾರ್ವಭೌಮತ್ವವನ್ನು ಕಾಣುವುದಾದರೆ, ಆಗ ನಮ್ಮನ್ನೇ ತಗ್ಗಿಸಿಕೊಳುವುದು ಸುಲಭವಾಗುತ್ತದೆ. ಮತ್ತು ತಕ್ಕ ಸಮಯದಲ್ಲಿ ನಮ್ಮನ್ನು ಮೇಲಕ್ಕೆತ್ತುವುದು ಆಗ ದೇವರಿಗೆ ಸುಲಭವಾಗುತ್ತದೆ. ನಮ್ಮ ಹೆಗಲಿನ ಮೇಲಿನ ಹೊರೆಯನ್ನು ಕೆಳಗಿಳಿಸಲಿಕ್ಕೆ ಮತ್ತು ನಮಗೆ ತನ್ನ ಅಧಿಕಾರವನ್ನು ಕೊಡುವುದಕ್ಕೆ ಸರಿಯಾದ ಸಮಯ ಯಾವುದೆಂದು ದೇವರಿಗೆ ತಿಳಿದಿದೆ. ಹಾಗಾಗಿ ನಾವು ಅವರಿಗಾಗಿ ಕಾದಿರೋಣ. ಅವರನ್ನು ನಿರೀಕ್ಷಿಸುವವರು ಎಂದಿಗೂ ಆಶಾಭಂಗ ಹೊಂದುವುದಿಲ್ಲ ಅಥವಾ ನಾಚಿಕೆಗೀಡಾಗುವುದಿಲ್ಲ (ಯೆಶಾಯನು 49:23).