WFTW Body: 

ನಾವು ವರ್ಷದ ಅಂತ್ಯಕ್ಕೆ ಬರುತ್ತಿರುವಾಗ, ಅನೇಕ ಸಹೋದರರು ಮತ್ತು ಸಹೋದರಿಯರು ಜೀವಿತದ ಹಿಂದಿನ ವರ್ಷಗಳಲ್ಲಿ ತಾವು ಮಾಡಿದ ಪಾಪದಿಂದ ದೇವರನ್ನು ನಿರಾಸೆಗೊಳಿಸಿದ್ದರಿಂದ, ತಮಗಾಗಿ ದೇವರು ತಯಾರಿಸಿರುವ ಪರಿಪೂರ್ಣ ಯೋಜನೆಯನ್ನು ತಾವು ಪೂರೈಸಲು ಆಗುವುದಿಲ್ಲವೆಂದು ಭಾವಿಸುತ್ತಾರೆ.

ನಾವು ಈ ವಿಚಾರದ ಕುರಿತಾಗಿ ನಮ್ಮ ಸ್ವಂತ ತಿಳುವಳಿಕೆ ಅಥವಾ ಮಾನವ ತರ್ಕವನ್ನು ಅವಲಂಬಿಸದೆ, ದೇವರ ವಾಕ್ಯವನ್ನು ನೋಡೋಣ. ಮೊದಲನೆಯದಾಗಿ, ಸತ್ಯವೇದ ಹೇಗೆ ಆರಂಭವಾಗುತ್ತದೆಂದು ಗಮನಿಸಿ. "ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದರು" (ಆದಿ. 1:1). ದೇವರು ಸೃಷ್ಟಿಸಿದ ಭೂಮ್ಯಾಕಾಶಗಳು ಪರಿಪೂರ್ಣವಾಗಿರುತ್ತವೆ, ಏಕೆಂದರೆ ದೇವರ ಕೈಯಿಂದ ಯಾವುದೇ ದೋಷಯುಕ್ತ ಅಥವಾ ಅಪೂರ್ಣವಾದ ಸಂಗತಿ ಉಂಟಾಗಲಾರದು. ಆದರೆ ಅವರು ಸೃಷ್ಟಿಸಿದ ದೇವದೂತರಲ್ಲಿ ಕೆಲವರು ಬಿದ್ದುಹೋದರು, ಮತ್ತು ಯೆಶಾಯನು 14:11-15ರಲ್ಲಿ ಮತ್ತು ಯೆಹೆಜ್ಕೇಲನು 28:13-18ರಲ್ಲಿ ನಮಗೆ ಇದನ್ನು ವರ್ಣಿಸಲಾಗಿದೆ. ಇದರ ನಂತರ ಭೂಮಿಯು ಆದಿಕಾಂಡ 1:2 ವಿವರಿಸುವ ಸ್ಥಿತಿಯನ್ನು ತಲುಪಿತು, ಅಂದರೆ ಅದು "ಕ್ರಮವಿಲ್ಲದೆಯೂ, ಬರಿದಾಗಿಯೂ ಮತ್ತು ಕತ್ತಲಾಗಿಯೂ" ಇತ್ತು. ಆದಿಕಾಂಡ 1ನೇ ಅಧ್ಯಾಯದ ಮಿಕ್ಕ ಭಾಗದಲ್ಲಿ, ದೇವರು ಆಕಾರವಿಲ್ಲದ, ಬರಿದಾದ ಮತ್ತು ಕತ್ತಲು ಕವಿದ ಆ ವಿಸ್ತಾರವಾದ ಪ್ರದೇಶದಲ್ಲಿ ಕೆಲಸ ಮಾಡಿ, ಅದನ್ನು ಅತಿ ಸುಂದರವಾದ ಪ್ರದೇಶವನ್ನಾಗಿ ಪರಿವರ್ತಿಸಿದರು ಎಂಬುದನ್ನು ವಿವರಿಸಿ, ಅದನ್ನು "ಬಹು ಒಳ್ಳೇದಾಗಿದೆ" ಎಂದು ಸ್ವತಃ ದೇವರೇ ಹೇಳಿದರೆಂದು ತಿಳಿಸುತ್ತದೆ (ಆದಿ. 1:31). ನಾವು ಆದಿಕಾಂಡ 1:2,3ರಲ್ಲಿ ದೇವರಾತ್ಮನು ಭೂಮಿಯ ಮೇಲೆ ಚಲಿಸಿದನು, ಮತ್ತು ದೇವರು ವಾಕ್ಯವನ್ನು ನುಡಿದರು ಎಂಬುದಾಗಿ ಓದುತ್ತೇವೆ - ಆ ಬದಲಾವಣೆ ಇವೆರಡು ಸಂಗತಿಗಳ ಮೂಲಕ ಉಂಟಾಯಿತು. ಇದರಿಂದ ನಮಗೆ ಇಂದು ಸಿಗುವ ಸಂದೇಶವೇನು? ಕೇವಲ ಇಷ್ಟು: ನಾವು ಎಂತಹ ಸೋಲನ್ನು ಅನುಭವಿಸಿದ್ದರೂ ಅಥವಾ ನಮ್ಮ ಜೀವಿತವನ್ನು ಎಷ್ಟು ಹಾಳು ಮಾಡಿಕೊಂಡಿದ್ದರೂ, ದೇವರು ತಮ್ಮ ಪವಿತ್ರಾತ್ಮನ ಮೂಲಕ ಮತ್ತು ತಮ್ಮ ವಾಕ್ಯದ ಮೂಲಕ ನಮ್ಮ ಜೀವಿತಗಳಲ್ಲಿ ಒಂದು ಅದ್ಭುತವಾದ ಕಾರ್ಯವನ್ನು ಮಾಡಲು ಶಕ್ತರಾಗಿದ್ದಾರೆ. ದೇವರು ಒಂದು ಪರಿಪೂರ್ಣ ಯೋಜನೆಯನ್ನು ಹಾಕಿ ಆಕಾಶ ಮಂಡಲವನ್ನು ಮತ್ತು ಭೂಮಿಯನ್ನು ಸೃಷ್ಟಿಸಿದ್ದರು. ಆದರೆ ಆ ಯೋಜನೆಯನ್ನು ಲೂಸಿಫರನ ಬೀಳುವಿಕೆಯಿಂದಾಗಿ ಪಕ್ಕಕ್ಕೆ ಇರಿಸಬೇಕಾಯಿತು. ಆದರೆ ದೇವರು ಆಕಾಶ ಮತ್ತು ಭೂಮಿಯನ್ನು ಮರುಸೃಷ್ಟಿ ಮಾಡಿದರು, ಮತ್ತು ಇಂತಹ ಅಸ್ತವ್ಯಸ್ತ ಪರಿಸ್ಥಿತಿಯಿಂದಲೂ "ಬಹು ಒಳ್ಳೇಯದನ್ನು" ಉಂಟುಮಾಡಿದರು.

ಇದರ ನಂತರ ನಡೆದ ಸಂಗತಿಯನ್ನು ಈಗ ಪರಿಗಣಿಸಿರಿ. ದೇವರು ಆದಾಮ ಮತ್ತು ಹವ್ವರನ್ನು ಉಂಟುಮಾಡುವುದರ ಮೂಲಕ ಮತ್ತೊಮ್ಮೆ ಹೊಸ ಆರಂಭವನ್ನು ಮಾಡಿದರು. ದೇವರು ಇವರಿಗಾಗಿಯೂ ಒಂದು ಪರಿಪೂರ್ಣ ಯೋಜನೆಯನ್ನು ಹಾಕಿಕೊಂಡಿರುತ್ತಾರೆ, ಮತ್ತು ಆ ಯೋಜನೆಯಲ್ಲಿ ಅವರು ಒಳ್ಳೇದರ ಮತ್ತು ಕೆಟ್ಟದ್ದರ ಅರಿವನ್ನು ಹುಟ್ಟಿಸುವ ಮರದ ಹಣ್ಣನ್ನು ತಿಂದು ಪಾಪ ಮಾಡುವುದು ಸೇರಿರುವುದಿಲ್ಲ. ಆದರೆ ನಿಷೇಧಿಸಲಾಗಿದ್ದ ಹಣ್ಣನ್ನು ಅವರು ತಿಂದರು ಮತ್ತು ದೇವರು ಅವರಿಗಾಗಿ ಮೊದಲು ತಯಾರಿಸಿದ್ದ ಯೋಜನೆಯನ್ನು - ಅದು ಎಂತಹ ಯೋಜನೆಯಾಗಿದ್ದರೂ ಸರಿ - ವಿಫಲ ಗೊಳಿಸಿದರು. ಹಾಗಿರುವಾಗ ನಮ್ಮ ಸ್ವಂತ ವಿವೇಚನೆ ಏನು ಹೇಳುತ್ತದೆ ಎಂದರೆ, ಇನ್ನು ಮುಂದೆ ಅವರು ದೇವರ ಪರಿಪೂರ್ಣ ಯೋಜನೆಯನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಆದಾಗ್ಯೂ ದೇವರು ಏದೆನ್ ತೋಟಕ್ಕೆ ಬಂದು ಅವರನ್ನು ಭೇಟಿ ಮಾಡಿದಾಗ, ಅವರು ಇನ್ನು ಮುಂದಿನ ಇಡೀ ಜೀವಿತವನ್ನು ದೇವರ ಅತ್ಯುತ್ತಮ ಮಾದರಿಗಿಂತ ಕೆಳಮಟ್ಟದಲ್ಲಿ ಜೀವಿಸ ಬೇಕಾಗುತ್ತದೆಂದು ಅವರಿಗೆ ಹೇಳುವುದಿಲ್ಲ. ಹಾಗಲ್ಲ. ಆದಿಕಾಂಡ 3:15ರಲ್ಲಿ ಅವರು, ಆ ಸ್ತ್ರೀಯ ಸಂತಾನವು ಸರ್ಪದ ತಲೆಯನ್ನು ಜಜ್ಜುವದು, ಎಂದು ಅವರಿಗೆ ವಾಗ್ದಾನ ಮಾಡುತ್ತಾರೆ. ಇದು ಲೋಕದ ಪಾಪಗಳಿಗಾಗಿ ಕ್ರಿಸ್ತನು ಮರಣ ಹೊಂದುವುದನ್ನು ಮತ್ತು ಕಲ್ವಾರಿಯಲ್ಲಿ ಸೈತಾನನ ಮೇಲೆ ಜಯಗಳಿಸುವುದನ್ನು ತೋರಿಸುವ ವಾಗ್ದಾನವಾಗಿತ್ತು.

ಈಗ ಈ ಮುಂದಿನ ವಾಸ್ತವಾಂಶದ ಬಗ್ಗೆ ಆಲೋಚಿಸಿರಿ ಮತ್ತು ಇಲ್ಲಿರುವ ಸಂಗತಿಯ ಬಗ್ಗೆ ವಿಚಾರ ಮಾಡಿರಿ. ಕ್ರಿಸ್ತನ ಮರಣವು ಸಂಪೂರ್ಣ ನಿತ್ಯತ್ವಕ್ಕಾಗಿ ದೇವರ ಪರಿಪೂರ್ಣ ಯೋಜನೆಯಲ್ಲಿ ಸೇರಿತ್ತೆಂದು ನಾವು ತಿಳಿದಿದ್ದೇವೆ. "ಜಗದುತ್ಪತ್ತಿಗೆ ಮೊದಲೇ ಕೊಯ್ಯಲ್ಪಟ್ಟ ಕುರಿಯಾದಾತನು" (ಪ್ರಕ. 13:8). ಆದರೆ ಆದಾಮ ಮತ್ತು ಹವ್ವರು ಮಾಡಿದ ಪಾಪ ಮತ್ತು ಅವರ ಅವಿಧೇಯತೆಯು ಕ್ರಿಸ್ತನ ಮರಣಕ್ಕೆ ಕಾರಣವಾಗಿತ್ತೆಂದು ಸಹ ನಮಗೆ ತಿಳಿದಿದೆ. ಹಾಗಾಗಿ ನಾವು ವಿವೇಚಿಸಿ ನೋಡಿದರೆ, ಲೋಕದ ಪಾಪಗಳಿಗಾಗಿ ಕ್ರಿಸ್ತನನ್ನು ಮರಣಕ್ಕೆ ಒಪ್ಪಿಸುವ ದೇವರ ಪರಿಪೂರ್ಣ ಯೋಜನೆಯು ಆದಾಮನು ಬಿದ್ದರೂ ಈಡೇರಿತು ಎನ್ನುವಂತಿಲ್ಲ, ಆದರೆ ಅದು ಆತನ ಬೀಳುವಿಕೆಯ ಮೂಲಕವಾಗಿ ಈಡೇರಿತು! ಆದಾಮನು ಪಾಪ ಮಾಡದೇ ಇದ್ದಿದ್ದರೆ, ಕಲ್ವಾರಿಯ ಶಿಲುಬೆಯ ಮೇಲೆ ಪ್ರದರ್ಶಿಸಲ್ಪಟ್ಟ ದೇವರ ಪ್ರೀತಿಯನ್ನು ಅರಿತುಕೊಳ್ಳುವ ಅವಕಾಶ ನಮಗೆ ಸಿಗುತ್ತಿರಲಿಲ್ಲ.

ಹಾಗಾದರೆ ದೇವರು ಸತ್ಯವೇದದ ಮೊದಲ ಪುಟಗಳಿಂದಲೇ ನಮಗೆ ತೋರಿಸಲು ಬಯಸುವ ಸಂದೇಶವೇನು? ಅವರು ಸೋತು ಹೋಗಿರುವ ಒಬ್ಬ ವ್ಯಕ್ತಿಯನ್ನು ಆರಿಸಿಕೊಂಡು, ಅವನ ಜೀವನದಲ್ಲಿ ಅಮೂಲ್ಯವಾದ ಸಂಗತಿಯನ್ನು ಸಾಧಿಸ ಬಲ್ಲರು ಮತ್ತು ಅವನ ಜೀವಿತಕ್ಕಾಗಿ ಯೋಜಿಸಿದ ದೇವರ ಪರಿಪೂರ್ಣ ಯೋಜನೆಯನ್ನು ಆತನು ಪೂರೈಸುವಂತೆ ಮಾಡಬಲ್ಲರು. ಅದು ಮನುಷ್ಯನಿಗೆ ದೇವರ ಸಂದೇಶವಾಗಿದೆ - ಮತ್ತು ನಾವು ಎಂದಿಗೂ ಅದನ್ನು ಮರೆಯಬಾರದು: ಪದೇ ಪದೇ ಸೋಲನ್ನು ಅನುಭವಿಸಿರುವ ಒಬ್ಬ ಮನುಷ್ಯನನ್ನು ದೇವರು ಆರಿಸಿಕೊಳ್ಳುತ್ತಾರೆ, ಮತ್ತು ಆತನು ದೇವರ ಪರಿಪೂರ್ಣ ಯೋಜನೆಯನ್ನು - ದೇವರ ಎರಡನೆ ಉತ್ತಮವಾದ ಯೋಜನೆಯಲ್ಲ, ಆದರೆ ದೇವರ ಅತ್ಯುತ್ತಮ ಯೋಜನೆಯನ್ನು - ಈಡೇರಿಸುವಂತೆ ಮಾಡುತ್ತಾರೆ. ದೇವರ ಪರಿಪೂರ್ಣ ಯೋಜನೆಯಲ್ಲಿ ಸೋಲು ಸಹ ಸೇರಿರುವ ಅವಕಾಶವಿದೆ ಏಕೆಂದರೆ, ಆ ಮನುಷ್ಯ ಮರೆಯದಂತ ಕೆಲವು ಪಾಠಗಳನ್ನು ಆತನಿಗೆ ಕಲಿಸಲಿಕ್ಕಾಗಿ ಇರಬಹುದು.

ನೀವು ಎಷ್ಟು ದೊಡ್ಡ ಪ್ರಮಾದಗಳು ಅಥವಾ ತಪ್ಪುಗಳನ್ನು ಮಾಡಿದ್ದರೂ, ನೀವು ದೇವರಿಂದ ಒಂದು ಹೊಸ ಆರಂಭವನ್ನು ನಿರೀಕ್ಷಿಸಬಹುದು. ದೇವರು ನಿಮ್ಮ ಜೀವನದಲ್ಲೂ ಶ್ರೇಷ್ಠ ಸಾಧನೆಯನ್ನು ಮಾಡಬಲ್ಲರು. ಹಾಗಾಗಿ ನಾವು "ದೇವರನ್ನು ಘನಪಡಿಸುವವರಾಗಿ, ಅವರು ತಮ್ಮ ವಾಗ್ದಾನವನ್ನು ನೆರವೇರಿಸುವದಕ್ಕೆ ಸಮರ್ಥರೆಂದು ಪೂರಾ ಭರವಸೆಯಿಟ್ಟು, ದೃಢನಂಬಿಕೆಯುಳ್ಳವರು ಆಗೋಣ" (ರೋಮಾ. 4:21), ಮತ್ತು ಮುಂದಿನ ದಿನಗಳಲ್ಲಿ ನಾವು ಈ ವರೆಗೆ ಅಸಾಧ್ಯವೆಂದು ಪರಿಗಣಿಸಿದ ಸಂಗತಿಗಳ ಸಾಧನೆಗಾಗಿ ಅವರ ಮೇಲೆ ಭರವಸೆ ಇಡೋಣ. ಎಲ್ಲಾ ಮನುಷ್ಯರು - ಯುವಕರು ಹಾಗೂ ಪ್ರಾಯಸ್ಥರು - ನಿರೀಕ್ಷೆಯನ್ನು ಇರಿಸಿಕೊಳ್ಳಬಹುದು; ಅವರು ಹಿಂದೆ ಎಷ್ಟು ಬಾರಿ ಸೋಲನ್ನು ಅನುಭವಿಸಿದ್ದರೂ, ಈಗ ತಮ್ಮ ಸೋಲುಗಳನ್ನು ಒಪ್ಪಿಕೊಂಡು, ದೀನತೆಯಿಂದ ದೇವರನ್ನು ನಂಬಿದರೆ ಇದು ಸಾಧ್ಯವಿದೆ. ಈ ರೀತಿಯಾಗಿ ನಾವೆಲ್ಲರೂ ನಮ್ಮ ಸೋಲುಗಳಿಂದ ಕಲಿತುಕೊಳ್ಳಬಹುದು ಮತ್ತು ಮುಂದುವರಿದು ನಮ್ಮ ಜೀವಿತಗಳಲ್ಲಿ ದೇವರ ಪರಿಪೂರ್ಣ ಯೋಜನೆಯನ್ನು ಈಡೇರಿಸಬಹುದು. ಅದಲ್ಲದೆ ಮುಂದಿನ ಕಾಲಮಾನದಲ್ಲಿ, ದೇವರು ನಮ್ಮನ್ನು ಇತರರಿಗೆ ಮಾದರಿಯಾಗಿ ಎತ್ತಿಹಿಡಿದು, ಅವರು ಸಂಪೂರ್ಣ ಸೋತುಹೋದ ಜೀವಿತಗಳನ್ನು ಹೇಗೆ ಪರಿವರ್ತಿಸಿದರೆಂದು ತೋರಿಸಬಹುದು. ಆ ದಿನದಲ್ಲಿ ದೇವರು "ತಾನು ಕ್ರಿಸ್ತ ಯೇಸುವಿನಲ್ಲಿ ನಮಗೆ ಮಾಡುವ ಉಪಕಾರದ ಮೂಲಕ ತನ್ನ ಅಪಾರವಾದ ಕೃಪಾತಿಶಯವನ್ನು ತೋರಿಸಿ" ನಮ್ಮಲ್ಲಿ ಮಾಡಿದ ಸಾಧನೆಯನ್ನು ತೋರಿಸಲು ಸಾಧ್ಯವಾಗುತ್ತದೆ (ಎಫೆ. 2:7). ಹಲ್ಲೆಲೂಯಾ!