WFTW Body: 

ಹೊಸ ಒಡಂಬಡಿಕೆಯ ಬೋಧನೆಯ ಪ್ರಕಾರ, ಒಬ್ಬ ವ್ಯಕ್ತಿ ರಕ್ಷಣೆ ಹೊಂದಬೇಕಾದರೆ ಆತನು ಅವಶ್ಯವಾಗಿ ಪಶ್ಚಾತ್ತಾಪದೊಂದಿಗೆ ಆರಂಭಿಸಬೇಕು. ಪಶ್ಚಾತ್ತಾಪ ಅಂದರೆ ನಮ್ಮ ಪೂರ್ವ ಸ್ವಭಾವವನ್ನು ತ್ಯಜಿಸುವುದು. ಪಶ್ಚಾತ್ತಾಪವು ಕೆಲವು ದುರಭ್ಯಾಸಗಳನ್ನು, ಅಂದರೆ ಮಧ್ಯಪಾನ ಮತ್ತು ಜೂಜಾಟ, ಇಂತಹ ಕಾರ್ಯಗಳನ್ನು ಮಾತ್ರ ಬಿಟ್ಟು ಬಿಡುವದಕ್ಕಿಂತ ಬಹಳ ಹೆಚ್ಚಿನ ಅರ್ಥವನ್ನು ಹೊಂದಿದೆ. ಸ್ವ-ಕೇಂದ್ರಿತವಾದ ಜೀವನ ನಮ್ಮ ಹಳೆಯ ಜೀವನ ವಿಧಾನವಾಗಿದೆ; ಮತ್ತು ಮಾನಸಾಂತರದ ಅರ್ಥ, "ಕರ್ತನೇ, ನಾನು ಸ್ವಾರ್ಥದಲ್ಲೇ ಕೇಂದ್ರಿತನಾಗಿ ಬೇಸರ ಗೊಂಡಿದ್ದೇನೆ ಮತ್ತು ಈಗ ನಿನ್ನ ಕಡೆಗೆ ತಿರುಗ ಬಯಸುತ್ತೇನೆ ಹಾಗೂ ನನ್ನ ಜೀವನದ ಮಧ್ಯೆ ನಿನ್ನನ್ನು ಇರಿಸಲು ಇಚ್ಛಿಸುತ್ತೇನೆ."

ಯೇಸುವು ನಮ್ಮನ್ನು ಪಾಪದಿಂದ ಬಿಡಿಸುವದಕ್ಕಾಗಿ ಬಂದನು. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಆತನು ನಮ್ಮನ್ನು ನಮ್ಮ ಸ್ವಾರ್ಥದ ಜೀವಿತದಿಂದ ಬಿಡಿಸುವದಕ್ಕೆ ಬಂದನು. ಹೊಸ ಒಡಂಬಡಿಕೆಯ ವಚನಗಳಲ್ಲಿ "ಪಾಪ" ಎಂಬ ಶಬ್ದಕ್ಕೆ ಬದಲಾಗಿ "ಸ್ವಾರ್ಥ" ಎಂಬ ಪದವನ್ನು ಬಳಸಿದಾಗ, ಹಲವಾರು ವಚನಗಳಿಂದ ಒಂದು ಹೊಸ ಅರ್ಥ ಮೂಡಿ ಬರುತ್ತದೆ. "ಪಾಪವು ನಿಮ್ಮ ಮೇಲೆ ಅಧಿಕಾರ ನಡೆಸದು" ಎಂಬ ವಚನವು ಹೀಗೆ ಬದಲಾಗುತ್ತದೆ: "ಸ್ವಾರ್ಥವು ನಿಮ್ಮ ಮೇಲೆ ಅಧಿಕಾರ ನಡೆಸದು" (ರೋಮಾ. 6:14) . ದೇವಜನರಿಗಾಗಿ ದೇವರ ಇಚ್ಛೆ ಇದಾಗಿದೆ. ಇದರ ಹಿನ್ನೆಲೆಯಲ್ಲಿ ನಾವು ನಮ್ಮ ಜೀವನ ಶೈಲಿಯನ್ನು ಪರೀಕ್ಷಿಸಿದಾಗ ನಮಗೆ ಕಾಣಿಸುವದು ಏನೆಂದರೆ, ನಾವು ದೇವರಿಗೆ ವಿಶೇಷವಾಗಿ ಮುಡಿಪಾಗಿ ಇರಿಸುವ ಕಾರ್ಯಗಳಲ್ಲೂ ಸಹ ಸ್ವಾರ್ಥತೆ ಅಡಗಿದೆ. ನಾವು ಪವಿತ್ರಾತ್ಮನ ತುಂಬುವಿಕೆಗಾಗಿ ದೇವರನ್ನು ಕೇಳಿಕೊಳ್ಳುವಾಗ, ದೇವರು ಕೊಡುವ ಆ ಶಕ್ತಿಯ ಮೂಲಕ ನಾವು ಒಬ್ಬ ಶ್ರೇಷ್ಠ ಬೋಧಕ, ಅಥವಾ ರೋಗಗಳನ್ನು ಗುಣಪಡಿಸುವ ಒಬ್ಬ ಪ್ರಸಿದ್ಧ ವ್ಯಕ್ತಿ ಆಗುವ ಉದ್ದೇಶವನ್ನು ಇರಿಸಿಕೊಂಡರೆ, ನಮ್ಮ ಆಸೆ ಸ್ವಾರ್ಥದ ಆಸೆ ಆಗುತ್ತದೆ. ಇದು ಲೋಕದಲ್ಲಿ ಒಬ್ಬ ಗಣ್ಯ ವ್ಯಕ್ತಿಯಾಗುವ ಬಯಕೆಯಷ್ಟೇ ಸ್ವಾರ್ಥಪರವಾಗಿದೆ. ಪಾಪವು ಹೇಗೆ ಅತ್ಯಂತ ಪವಿತ್ರ ಸ್ಥಳವನ್ನು ಸಹ ಪ್ರವೇಶಿಸುತ್ತದೆಂದು ಈಗ ನಿಮಗೆ ತಿಳಿಯಿತೇ?

ಈ ಕಾರಣಕ್ಕಾಗಿ ಯೇಸುವು ಪ್ರಾರ್ಥನೆಯ ಬಗ್ಗೆ ಕಲಿಸುವಾಗ ಮೊದಲು ನಮಗೆ ತೋರಿಸಿಕೊಟ್ಟದ್ದು, ’ನಮ್ಮನ್ನು ಪವಿತ್ರಾತ್ಮನಿಂದ ತುಂಬಿಸು’ ಎಂಬ ಪ್ರಾರ್ಥನೆಯೂ ಅಲ್ಲ, ಆದರೆ ’ದೇವರ ನಾಮ ಪರಿಶುದ್ಧವೆಂದು ಎಣಿಸಲ್ಪಡಲಿ’ ಎಂದು ಆರಂಭಿಸುವಂತೆ. ಒಬ್ಬ ನಿಜವಾದ ಆತ್ಮಿಕ ಮನುಷ್ಯನು ಮಾತ್ರ ಈ ಪ್ರಾರ್ಥನೆಯನ್ನು ಯಥಾರ್ಥನಾಗಿ ಮಾಡಲು ಸಾಧ್ಯವಿದೆ. ಹೌದು, ಯಾರು ಬೇಕಾದರೂ ಇಂತಹ ಪ್ರಾರ್ಥನೆಯ ತೋರಿಕೆಯನ್ನು ಮಾಡಲು ಸಾಧ್ಯವಿದೆ. ಒಂದು ಗಿಳಿಯೂ ಸಹ ಇದರ ಅನುಕರಣೆ ಮಾಡಬಹುದು. ಆದರೆ ಈ ಮಾತನ್ನು ಹೃತ್ಪೂರ್ವಕವಾಗಿ ನುಡಿಯುವದಕ್ಕೆ, ನಮ್ಮ ಸಂಪೂರ್ಣ ಸಮರ್ಪಣೆ ದೇವರಲ್ಲಿ ಇರಬೇಕಾಗುತ್ತದೆ, ಅವರು ನಮ್ಮ ಜೀವನದಲ್ಲಿ ಸರ್ವೋಚ್ಚರು ಆಗಿರಬೇಕು, ನಾವು ಅವರಲ್ಲಿ ಕೇಂದ್ರಿತರು ಆಗಬೇಕಾಗುತ್ತದೆ, ಮತ್ತು ಅವರ ಆಶೀರ್ವಾದಕ್ಕಿಂತ ಹೆಚ್ಚಾಗಿ ಅವರೇ ಬೇಕು ಎಂಬ ಭಾವನೆ ನಮ್ಮಲ್ಲಿ ಇರಬೇಕು. ಅವರು ನಮಗೆ ವರಗಳನ್ನು ದಯಪಾಲಿಸಿದರೆ ಒಳ್ಳೆಯದು, ಯಾವ ವರಗಳನ್ನು ಕೊಡದಿದ್ದರೂ ನಮಗೆ ತೃಪ್ತಿಯೇ, ಏಕೆಂದರೆ ನಾವು ಸ್ವತಃ ದೇವರಿಗಾಗಿ ಹಾತೊರೆಯುತ್ತೇವೆ, ದೇವರ ವರಗಳಿಗಾಗಿ ಅಲ್ಲ. ದೇವರು ಇಸ್ರಾಯೇಲ್ಯರಿಗೆ ತನ್ನನ್ನು ಪೂರ್ಣಹೃದಯದಿಂದ ಪ್ರೀತಿಸುವಂತೆ ಮತ್ತು ನೆರೆಯವನನ್ನು ತಮ್ಮಂತೆಯೇ ಪ್ರೀತಿಸುವಂತೆ ಏಕೆ ಕಲಿಸಿಕೊಟ್ಟರು? ಇದರ ಉದ್ದೇಶ, ಇಸ್ರಾಯೇಲ್ಯರನ್ನು ಸ್ವಾರ್ಥದ ಜೀವಿತದಿಂದ ಬಿಡುಗಡೆ ಗೊಳಿಸುವುದೇ ಆಗಿತ್ತು.

ಆಂಗ್ಲ ಭಾಷೆಯ ಒಂದು ಅಂದವಾದ ನಾಣ್ನುಡಿ, "JOY" ಎಂಬ ಪದವನ್ನು ಈ ರೀತಿಯಾಗಿ ಬಿಡಿಸಿ ತೋರಿಸುತ್ತದೆ: "ಮೊದಲು ('J') Jesus= ಯೇಸುವನ್ನು, ಆ ಮೇಲೆ ('O') Others= ಇತರರನ್ನು ಮತ್ತು ಕೊನೆಗೆ ('Y') You= ನಿನ್ನನ್ನು ಇರಿಸಿಕೋ. ಹಾಗಿದ್ದಾಗ ನಿನ್ನಲ್ಲಿ ಸಂತೋಷ (joy) ಉಂಟಾಗುತ್ತದೆ." ದೇವರು ಸದಾ ಸಂತೋಷ ಭರಿತರಾಗಿದ್ದಾರೆ. ಪರಲೋಕದಲ್ಲಿ ದುಃಖ ಅಥವಾ ಚಿಂತೆ ಇರುವುದಿಲ್ಲ, ಏಕೆಂದರೆ ಎಲ್ಲವೂ ದೇವರಲ್ಲಿ ಕೇಂದ್ರಿತವಾಗಿವೆ. ದೇವದೂತರು ಯಾವಾಗಲೂ ಹರ್ಷ ಭರಿತರಾಗಿದ್ದಾರೆ, ಏಕೆಂದರೆ ಅವರು ದೇವರಲ್ಲಿ ಕೇಂದ್ರಿತರಾಗಿದ್ದಾರೆ. ನಾವು ಆನಂದ, ಸಮಾಧಾನ ಮತ್ತು ಇನ್ನೂ ಅನೇಕ ಆತ್ಮಿಕ ಗುಣಗಳಿಂದ ವಂಚಿತರಾಗುವುದಕ್ಕೆ ಕಾರಣ, ನಾವು ಯಾವುದರಲ್ಲಿ ಕೇಂದ್ರಿತರಾಗಬೇಕು ಎನ್ನುವದನ್ನು ಅರಿತುಕೊಂಡಿಲ್ಲ. ನಾವು ದೇವರನ್ನು ನಮ್ಮ ಉದ್ದೇಶಗಳಿಗಾಗಿ ಉಪಯೋಗಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಹಾಗಾಗಿ ನಮ್ಮ ಪ್ರಾರ್ಥನೆಯೂ ಸಹ ಈ ಮಾದರಿಯಲ್ಲಿ ಇರುತ್ತದೆ: "ಕರ್ತನೇ, ನನ್ನ ಉದ್ಯೋಗವನ್ನು ಬೆಳೆಸು ... ನನ್ನ ನೌಕರಿಯಲ್ಲಿ ಬಡ್ತಿಯನ್ನು ಒದಗಿಸು ... ನನಗೆ ಇದಕ್ಕಿಂತ ಉತ್ತಮವಾದ ಒಂದು ಮನೆ ಬೇಕಾಗಿದೆ, ..., ಇತ್ಯಾದಿ". ನಾವು ದೇವರನ್ನು ನಮ್ಮ ಸ್ವಂತ ನೌಕರನನ್ನಾಗಿ ಮಾಡಿಕೊಂಡು - "ಅಲ್ಲಾವುದ್ದೀನ ಮತ್ತು ಆತನ ದೀಪ" ಎಂಬ ಕಥೆಯಲ್ಲಿ ಬರುವ ಜಾದೂದೀಪದ ಹಾಗೆ - ಅವರಿಂದ ಇನ್ನೂ ಹೆಚ್ಚಿನ ಸುಖ-ಸೌಲಭ್ಯಗಳನ್ನು ಪಡೆಯಬೇಕೆಂದು ಬಯಸುತ್ತೇವೆ.

ಬಹಳಷ್ಟು ಮಂದಿ ವಿಶ್ವಾಸಿಗಳು ಪ್ರಾರ್ಥಿಸುವದು ಇಂತಹ ದೇವರಲ್ಲಿ - ತಮ್ಮ ಜೀವನವನ್ನು ಸುಧಾರಿಸಲು ಮತ್ತು ಲೋಕದಲ್ಲಿ ತಮ್ಮ ಸಂಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುವಂತ ದೇವರು. ಆದರೆ ಹೊಸ ಒಡಂಬಡಿಕೆಯ ದೇವರು, ನೀವು ಒಲಿಂಪಿಕ್ ಪಂದ್ಯಾಟದ 100 ಮೀಟರ್ ಓಟದ ಸ್ಪರ್ದೆಯನ್ನು ಜಯಿಸುವಂತೆ ಮಾಡುವ ಅಥವಾ ನಿಮ್ಮ ವ್ಯವಹಾರದ ಪ್ರತಿಸ್ಪರ್ಧಿಯನ್ನು ನೀವು ಹಿಂದಕ್ಕೆ ಹಾಕುವಂತೆ ಮಾಡುವ ದೇವರಲ್ಲ. ನಮ್ಮ ಪ್ರಾರ್ಥನೆಗಳು ನಮ್ಮ ಸ್ವಾರ್ಥತೆಯ ಮಟ್ಟವನ್ನು ಪ್ರದರ್ಶಿಸುತ್ತವೆ.

ಸತ್ಯವೇದವು ಹೀಗೆ ಹೇಳುತ್ತದೆ: "ಕರ್ತನಲ್ಲಿ ಸಂತೋಷಿಸು; ಮತ್ತು ಆತನು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುವನು" (ಕೀರ್ತ. 37:4) . ದೇವರಲ್ಲಿ ಸಂತೋಷಿಸುವುದು ಎಂದರೆ, ದೇವರನ್ನು ನಮ್ಮ ಜೀವನದ ಕೇಂದ್ರಸ್ಥಾನದಲ್ಲಿ ಇರಿಸುವುದು. ಹಾಗಿದ್ದಲ್ಲಿ, ಒಬ್ಬ ವ್ಯಕ್ತಿಯು ದೇವರಲ್ಲಿ ಕೇಂದ್ರಿತನಾಗಿ ಇದ್ದಾಗ ಮಾತ್ರ ಆತನು ತನ್ನ ಹೃದಯದ ಎಲ್ಲಾ ಇಷ್ಟಾರ್ಥಗಳನ್ನು ಪಡೆಯಲು ಸಾಧ್ಯವಾಗುತ್ತದೆ. "ಆತನು ಸದ್ಭಕ್ತರಿಗೆ (’ತಲೆಯೆತ್ತಿ ನಡೆಯುವವರಿಗೆ’) ಯಾವ ಶುಭವನ್ನು ದಯಪಾಲಿಸದೆ ಇದ್ದಾನು?" (’ತಲೆ ಎತ್ತಿ ನಡೆಯುವದು’ ಅಂದರೆ, ದೇವರನ್ನು ಶಿರಸ್ಸಿನ ಸ್ಥಾನದಲ್ಲಿ ಎತ್ತಿ ಹಿಡಿದು, ಅವರ ನಿಯಂತ್ರಣದಲ್ಲಿ ಜೀವಿಸುವುದು) (ಕೀರ್ತ. 84:11) . "ನೀತಿವಂತನ ಅತ್ಯಾಸಕ್ತಿಯುಳ್ಳ ವಿಜ್ಞಾಪನೆಯು ಬಹು ಬಲವಾಗಿದೆ" - ನೀತಿವಂತನು ಯಾರೆಂದರೆ, ದೇವರನ್ನು ತನ್ನ ಜೀವನದ ಕೇಂದ್ರವಾಗಿ ಇರಿಸುವ ಮನುಷ್ಯನು (ಯಾಕೋಬ.5:16) . ಇದಕ್ಕೆ ವ್ಯತಿರಿಕ್ತವಾಗಿ, ಒಬ್ಬ ಸ್ವಾರ್ಥಿಯಾದ ಮನುಷ್ಯನು ಅತ್ಯಾಸಕ್ತಿಯಿಂದ ಪ್ರಾರ್ಥಿಸಿದರೆ, ಆತನು ರಾತ್ರಿಯೆಲ್ಲಾ ಮೊರೆಯಿಟ್ಟರೂ ಸಹ, ಏನನ್ನೂ ಸಾಧಿಸಲಾರದು. ನಮ್ಮ ಜೀವನ ಶೈಲಿಯು ನಾವು ಮಾಡುವ ಪ್ರಾರ್ಥನೆಯ ಬೆಲೆಯನ್ನು ನಿರ್ಧರಿಸುತ್ತದೆ.

ಈ ಕಾರಣಕ್ಕಾಗಿ, ನಮ್ಮ ಜೀವನದಲ್ಲಿ ಮೊದಲಿನ ಮೂರು ಹಂಬಲಗಳು ಹೀಗಿರಬೇಕು: "ತಂದೆಯೇ, ನಿಮ್ಮ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿಮ್ಮ ರಾಜ್ಯವು ಬರಲಿ. ನಿಮ್ಮ ಚಿತ್ತವು ನೆರವೇರಲಿ." ನಮ್ಮಲ್ಲಿ ಇನ್ನೂ ಅನೇಕ ವಿನಂತಿಗಳು ಇರಬಹುದು, ಯಾವುವೆಂದರೆ, "ನನ್ನ ಬೆನ್ನು ನೋವನ್ನು ನಿವಾರಿಸಿ, ನಾನು ಜೀವಿಸುವುದಕ್ಕಾಗಿ ಒಂದು ಉತ್ತಮವಾದ ಮನೆ ಸಿಗುವಂತೆ ಮಾಡಿ, ನನ್ನ ಮಗನಿಗೆ ಒಂದು ನೌಕರಿ ಸಿಗುವಂತೆ ಸಹಾಯ ಮಾಡಿ," ಇತ್ಯಾದಿ. ಇವೆಲ್ಲವೂ ಒಳ್ಳೆಯ ಬೇಡಿಕೆಗಳು. ಆದರೆ ನೀವು ಹೀಗೆ ಹೇಳುವುದಾದರೆ, "ತಂದೆಯೇ, ನೀವು ನನ್ನ ಬೇಡಿಕೆಗಳನ್ನು ಪೂರೈಸದೇ ಇದ್ದರೂ ಸಹ, ನನ್ನ ಪ್ರಧಾನ ಹಂಬಲ ನಿಮ್ಮ ನಾಮವು ಮಹಿಮೆಗೊಳ್ಳಲಿ ಎಂದಾಗಿದೆ," ಆಗ ನೀವು ಒಬ್ಬ ಆತ್ಮಿಕ ಮನುಷ್ಯನಾಗಿದ್ದೀರಿ.