WFTW Body: 

ಪರಮಗೀತ 1:5 ರಲ್ಲಿ ವಧುವು, "ನಾನು ಕಪ್ಪಾಗಿದ್ದರೂ ಚಂದವಾಗಿದ್ದೇನೆ," ಎಂದು ಹೇಳುತ್ತಾಳೆ. ಅವಳ ಮಾತಿನ ಅರ್ಥವೇನೆಂದರೆ, ಅವಳು ಹೊರನೋಟಕ್ಕೆ ಸುಂದರಿಯಲ್ಲವಾದರೂ, ಅವಳ ವರನು ಅವಳನ್ನು ಆರಿಸಿಕೊಂಡಿದ್ದಾನೆ. ಸತ್ಯವೇದವು ಹೇಳುವಂತೆ, ದೇವರು ಈ ಲೋಕದ ಬಲಿಷ್ಠರನ್ನು, ಮಾನ್ಯರನ್ನು ಮತ್ತು ಜ್ಞಾನಿಗಳನ್ನು ಆರಿಸಿಕೊಳ್ಳದೆ, ಮುಖ್ಯವಾಗಿ ಲೋಕದ ಬಡವರನ್ನು ಮತ್ತು ಬುದ್ಧಿಹೀನರನ್ನು ಆರಿಸಿಕೊಂಡಿದ್ದಾರೆ (1 ಕೊರಿ. 1:26-29). ಬಹುಶಃ ನಮ್ಮಲ್ಲಿ ಕೆಲವರು, "ನಾನು ಬೇರೆಯವರಂತೆ ಯೋಗ್ಯನಲ್ಲ. ನಾನು ಅಜ್ಞಾನಿ. ನಾನು ಬೇರೆಯವರಂತೆ ವಾಕ್ಚಾತುರ್ಯವುಳ್ಳವನಲ್ಲ. ನನ್ನಲ್ಲಿರುವ ಸಾಮರ್ಥ್ಯವು ಬಹಳ ಸ್ವಲ್ಪ," ಎಂದು ಭಾವಿಸಬಹುದು. ಆದಾಗ್ಯೂ ಕರ್ತರು ನಮ್ಮನ್ನು ಆರಿಸಿಕೊಂಡಿದ್ದಾರೆ! ಯೆರೂಸಲೇಮಿನಲ್ಲಿ ಅನೇಕ ಅಂದದ ಹುಡುಗಿಯರಿದ್ದರು; ಆದರೆ ಮದಲಿಂಗನು ಈ ಕಪ್ಪಾದ ಹುಡುಗಿಯನ್ನು ಆರಿಸಿಕೊಂಡನು.

ಯೇಸುವಿನ ಸ್ವಭಾವವೂ ಇದೇ ಆಗಿದೆ, ಏಕೆಂದರೆ ಅವರು ಹೊರನೋಟದ ಸೌಂದರ್ಯವನ್ನು, ಪ್ರತಿಭೆಯನ್ನು ಅಥವಾ ಸಾಮರ್ಥ್ಯವನ್ನು ನೋಡದೆ, ಹೃದಯದ ಗುಣಗಳನ್ನು ನೋಡುತ್ತಾರೆ. ಇಲ್ಲಿ ನಾವು ಒಂದು ವಿಷಯವನ್ನು ಕಲಿಯಬೇಕು. ನಮ್ಮ ಸಹಜ ಪ್ರತಿಭೆಗಳು, ಕುಟುಂಬದ ಹಿನ್ನೆಲೆ ಮತ್ತು ಸಾಧನೆಗಳು ಇವೆಲ್ಲಾ ದೇವರಿಗೆ ಉಪಯೋಗವಿಲ್ಲ. ಅವರು ದೇವಭಕ್ತಿಯಿಂದ ಕೂಡಿದ ಹೃದಯವನ್ನು ಹುಡುಕುತ್ತಾರೆ. ಕರ್ತರು ಯಾರನ್ನಾದರೂ ತನ್ನ ಸೇವಕನಾಗಿ ಆರಿಸಿಕೊಳ್ಳುವಾಗ ಇದನ್ನೇ ಹುಡುಕಿನೋಡುತ್ತಾರೆ.

ವಧುವು ತಾನು ಕಪ್ಪಾಗಿದ್ದರೂ, ತನ್ನ ಮದುಮಗನ ದೃಷ್ಟಿಯಲ್ಲಿ ತಾನು ಸುಂದರಿಯಾಗಿದ್ದೇನೆಂದು ಅರಿತಿದ್ದಳು. ಅನೇಕ ವಿವಾಹಿತ ಮಹಿಳೆಯರ ಬಳಲಿಕೆಗೆ ಕಾರಣವೇನೆಂದರೆ, ತಮ್ಮ ಗಂಡಂದಿರು ನಿಜವಾಗಿ ತಮ್ಮನ್ನು ಇಷ್ಟ ಪಡುತ್ತಾರೆ ಮತ್ತು ತಮ್ಮ ಬಗ್ಗೆ ಸಂತೋಷ ಪಡುತ್ತಾರೆ, ಎಂಬ ಭಾವನೆ ಅವರಲ್ಲಿಲ್ಲ. ನಾನು ನನ್ನ ಹೆಂಡತಿಯಲ್ಲಿ ಆನಂದಿಸುತ್ತೇನೆ. ನೀವೆಲ್ಲರೂ ಗಂಡಂದಿರು ಸಹ ಇದನ್ನು ಮಾಡುತ್ತೀರೆಂದು ನಾನು ಹಾರೈಸುತ್ತೇನೆ. ನಿಮ್ಮ ಹೆಂಡತಿಗೆ ತಿಳಿದಿರಬೇಕಾದ ಬಹಳ ಮುಖ್ಯ ವಿಷಯ ಯಾವುದೆಂದರೆ, ನೀವು ಅವಳಲ್ಲಿ ಸಂತೋಷ ಪಡುತ್ತೀರಿ ಎಂಬುದು. ಅದೇ ರೀತಿ, ಅನೇಕ ವಿಶ್ವಾಸಿಗಳು ಕರ್ತನು ತಮ್ಮ ಬಗ್ಗೆ ಸಂತೋಷ ಪಡುತ್ತಾನೆಂದು ತಿಳಿದಿರುವುದಿಲ್ಲ. ’ಚೆಫನ್ಯನು 3:17'ರಲ್ಲಿ ಹೀಗೆ ಹೇಳಲಾಗಿದೆ, "ನಿಮ್ಮ ಮದ್ಯದಲ್ಲಿರುವ ನಿಮ್ಮ ದೇವರಾದ ಕರ್ತನು ಪರಾಕ್ರಮಶಾಲಿಯಾಗಿದ್ದಾನೆ; ಆತನು ಆನಂದ ಸ್ವರದಿಂದ ನಿಮ್ಮನ್ನು ನೋಡಿ ಉಲ್ಲಾಸಿಸುವನು." ದೇವರು ನಮ್ಮನ್ನು ತನ್ನ ಮಕ್ಕಳಾಗಿ ಪಡೆದಿರುವುದಕ್ಕಾಗಿ ಬಹಳ ಸಂತೋಷ ಪಡುತ್ತಾರೆ. ನಿಮಗೆ ಇದು ಗೊತ್ತಿದೆಯಾ? ನಾವು ಮನುಷ್ಯನ ದೃಷ್ಟಿಯಲ್ಲಿ ಕುರೂಪಿಗಳು ಆಗಿರಬಹುದು, ಆದರೆ ದೇವರ ದೃಷ್ಟಿಯಲ್ಲಿ ನಾವು ಸುಂದರವಾಗಿದ್ದೇವೆ. ನಾವು ಇದನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ.

"ಪಟ್ಟಣದ ನಾರಿಯರೇ, ನೀವು ಚೆಲುವೆಯರು ಮತ್ತು ಒಳ್ಳೆಯ ಮೈಬಣ್ಣ ಉಳ್ಳವರಾದರೂ, ನನ್ನನ್ನು ದಿಟ್ಟಿಸಿ ನೋಡಬೇಡಿರಿ" (ಪರಮಗೀತ 1:6). ಈ ಹೆಣ್ಣು ನಯವಿಲ್ಲದ ಸಂಸ್ಕೃತಿಯ ಹಳ್ಳಿಯ ಹುಡುಗಿಯಾಗಿದ್ದುದರಿಂದ, ಯೆರೂಸಲೇಮಿನ ಸಭ್ಯ ಸ್ತ್ರೀಯರು ಆಕೆಯನ್ನು ಕೀಳಾಗಿ ನೋಡುತ್ತಿದ್ದರು. ಆದರೆ ಮದಲಿಂಗನು ಪಟ್ಟಣದ ಎಲ್ಲಾ ಸುಂದರಿಯರು ಮತ್ತು ಚೆಲುವೆಯರನ್ನು ನಿರ್ಲಕ್ಷಿಸಿದನು ಮತ್ತು ಈ ಹಳ್ಳಿಯ ಹುಡುಗಿಯನ್ನು ಆರಿಸಿಕೊಂಡನು. ಹೀಗೆಯೇ ಕರ್ತನು ನಮ್ಮನ್ನು ಆರಿಸಿಕೊಂಡಿದ್ದಾನೆ. ಇದಕ್ಕಾಗಿ ಕರ್ತನನ್ನು ಸ್ತುತಿಸಿರಿ! ಇತರ ವಿಶ್ವಾಸಿಗಳು ನಿನ್ನನ್ನು ಕೀಳಾಗಿ ನೋಡುತ್ತಿದ್ದಾರಾ? ಇದಕ್ಕಾಗಿ ಎದೆಗುಂದಬೇಡ, ಏಕೆಂದರೆ ನೀನು ನಿನ್ನ ಕರ್ತನಿಗೆ ಅಮೂಲ್ಯನು! ನಾವು ನಿರ್ಲಕ್ಷಿಸಲ್ಪಟ್ಟು ಹೇಸಿಗೆಯಾದ ಮತ್ತು ಅಸಹ್ಯವಾದ ಸ್ಥಿತಿಯಲ್ಲಿದ್ದಾಗ, ಹೇಗೆ ದೇವರು ಅಸಹಾಯಕರಾಗಿದ್ದ ನಮ್ಮನ್ನು ರಸ್ತೆಯ ಬದಿಯಿಂದ ಎತ್ತಿಕೊಂಡರು, ಎಂದು ಯೆಹೆಜ್ಕೇಲನು 16ನೇ ಅಧ್ಯಾಯವು ಸುಂದರವಾಗಿ ವಿವರಿಸುತ್ತದೆ.

ಪರಮಗೀತ 5:16ರಲ್ಲಿ ವಧುವು ತನ್ನ ವರನನ್ನು, "ಅವನು ಸರ್ವಾಂಗದಲ್ಲಿಯೂ ಮನೋಹರನು; ಇವನೇ ನನ್ನ ಇನಿಯನು, ಇವನೇ ನನ್ನ ಪ್ರಿಯನು" ಎಂದು ವಿವರಿಸುತ್ತಾಳೆ. ಯೇಸುವು ನಿಮ್ಮ ರಕ್ಷಕನು ಮಾತ್ರವಲ್ಲ, ಆತನು ನಿಮ್ಮ "ಇನಿಯನು ಅಥವಾ ಸ್ನೇಹಿತನು" ಎಂದು ನೀವು ಹೇಳಬಲ್ಲಿರಾ? ಯೇಸುವು ನಿಮ್ಮ ಆತ್ಮೀಯ ಸ್ನೇಹಿತನು ಮತ್ತು ಪ್ರಾಣಪ್ರಿಯನು ಆಗಿರಲಿ.