ಪ್ರತಿದಿನವೂ ದೇವರ ಸ್ವರವನ್ನು ಕೇಳಿಸಿಕೊಳ್ಳುವುದಕ್ಕಾಗಿ ಸಮಯವನ್ನು ಕಾದಿರಿಸಿರಿ.
ಸತ್ಯವೇದದ ಮೊದಲನೇ ಅಧ್ಯಾಯದಲ್ಲಿ ಮತ್ತೆ ಮತ್ತೆ ಕಂಡುಬರುವ ಒಂದು ವಾಕ್ಯ ಇದಾಗಿದೆ: "ಬಳಿಕ ದೇವರು ಹೀಗೆಂದರು".
ಅಸ್ತವ್ಯಸ್ಥವಾಗಿದ್ದ ಭೂಲೋಕವನ್ನು ದೇವರು ಮತ್ತೆ ವ್ಯವಸ್ಥಿತಗೊಳಿಸಿದಾಗ, ಆ ಮೊದಲ ಆರು ದಿನಗಳಲ್ಲಿ ಪ್ರತಿಯೊಂದು ದಿನವೂ ಅವರು ಏನನ್ನಾದರೂ ಹೇಳಿದರು. ಮತ್ತು ದೇವರು ಪ್ರತಿ ಬಾರಿ ವಾಕ್ಯವನ್ನು ನುಡಿದಾಗ, ಭೂಮಿಯು ಹೆಚ್ಚು ಹೆಚ್ಚಾಗಿ ವ್ಯವಸ್ಥಿತಗೊಂಡಿತು.
ಆದುದರಿಂದ, ಅಲ್ಲಿ ಸತ್ಯವೇದದ ಮೊಟ್ಟಮೊದಲನೇ ಪುಟದಲ್ಲಿಯೇ ನಾವು ಒಂದು ಬಹಳ ಮುಖ್ಯವಾದ ಸತ್ಯಾಂಶವನ್ನು ಕಲಿಯುತ್ತೇವೆ. ನಾವು ಪ್ರತಿ ದಿನವೂ ದೇವರ ಮಾತನ್ನು ಕೇಳಿಸಿಕೊಳ್ಳಬೇಕು. ಮತ್ತು ಪ್ರತಿ ದಿನವೂ ನಾವು ದೇವರ ಮಾತಿಗೆ ವಿಧೇಯರಾದರೆ, ನಾವು ಉತ್ತಮರೂ ಮತ್ತು ಹೆಚ್ಚು ಉಪಯುಕ್ತ ಕ್ರೈಸ್ತರೂ ಆಗಿ ರೂಪಾಂತರಗೊಳ್ಳುತ್ತೇವೆ.
ದೇವರು ನಮಗೆ ಹೇಳ ಬಯಸುವುದನ್ನು ಕೇಳಿಸಿಕೊಳ್ಳುವುದು ಮತ್ತು ಸತ್ಯವೇದವನ್ನು ಸುಮ್ಮನೆ ಓದುವುದರ ನಡುವೆ ದೊಡ್ಡ ಅಂತರವಿದೆ. ಕರ್ತರಾದ ಯೇಸುವನ್ನು ಶಿಲುಬೆಗೆ ಹಾಕಿದ ಜನರು ಪ್ರತಿದಿನವೂ ತಮ್ಮ ಸತ್ಯವೇದವನ್ನು ಅಧ್ಯಯನ ಮಾಡುತ್ತಿದ್ದರು ಎನ್ನುವುದನ್ನು ನೆನಪಿಗೆ ತಂದುಕೊಳ್ಳಿರಿ. ಅವರು ತಮ್ಮ ಸತ್ಯವೇದವನ್ನು ಪಾರಾಯಣ ಮಾಡಿದರು. ಆದರೆ ದೇವರು ಅವರಿಗೆ ಹೇಳುತ್ತಿದ್ದ ಮಾತನ್ನು ಅವರ ಹೃದಯಗಳು ಗ್ರಹಿಸಲೇ ಇಲ್ಲ (ಅ.ಕೃ. 13:27ನ್ನು ನೋಡಿರಿ). ನಾವು ಸಹ ಇದೇ ಅಪಾಯವನ್ನು ಎದುರಿಸುತ್ತೇವೆ. ಹಾಗಿರುವಾಗ, ಅವರ ಹಾಗೆಯೇ ನಮ್ಮ ಕಣ್ಣುಗಳು ಕುರುಡಾಗಬಹುದು.
ದೇವರು ಪ್ರತಿದಿನವೂ ನಮ್ಮೊಂದಿಗೆ ಮಾತನಾಡಲು ಇಷ್ಟಪಡುತ್ತಾರೆಂದು ನಮಗೂ ಸಹ ಆದಿಕಾಂಡ 1 ಕಲಿಸಿಕೊಡುತ್ತದೆ.
ಆದರೆ ಹೆಚ್ಚಿನ ಕ್ರೈಸ್ತರು ಪ್ರತಿದಿನ ದೇವರ ಸ್ವರವನ್ನು ಕೇಳಿಸಿಕೊಳ್ಳುವುದಿಲ್ಲ. ಅವರು ಮನುಷ್ಯರ ಲೇಖನಗಳನ್ನು ಮಾತ್ರ ಓದುತ್ತಾರೆ.
"ಅಪ್ಪಣೆಯಾಗಲಿ, ನಿನ್ನ ದಾಸನು ಕಾದಿದ್ದಾನೆ," ಎಂದು ನುಡಿದ ಸಮುವೇಲನ ಮನೋಭಾವವನ್ನು ನಾವೆಲ್ಲರೂ ಹೊಂದಬೇಕು
ನಾವು ಆದಿಕಾಂಡ 1ರಲ್ಲಿ ಹೀಗೆ ಓದುತ್ತೇವೆ: ಪ್ರತಿ ಸಲ ದೇವರು ಮಾತನಾಡಿದಾಗ ಅದ್ಭುತಕಾರ್ಯಗಳು ನೆರವೇರಿದವು. ದೇವರು ಮೊದಲು ನಮ್ಮ ಸ್ವಂತ ಹೃದಯಗಳೊಂದಿಗೆ ಮಾತನಾಡಿದ್ದನ್ನೇ ನಾವು ಬೋಧಿಸುವುದಾದರೆ, ನಮ್ಮ ಸೇವಾಕಾರ್ಯದಲ್ಲೂ ಸಹ ಇದೇ ರೀತಿ ಸಂಭವಿಸುವ ಸಾಧ್ಯತೆ ಇದೆ.
ಪೌಲನು ತಿಮೊಥೆಯನಿಗೆ ಹೇಳಿದ್ದು ಏನೆಂದರೆ, ಆತನು ಮೊದಲು ತನ್ನ ಸ್ವಂತ ಜೀವಿತದ ಕಡೆಗೆ ಗಮನ ಹರಿಸಿ ಅದರ ನಂತರ ಉಪದೇಶಕ್ಕೆ ತೊಡಗಿದರೆ, ಆಗ ಆತನು ತನ್ನನ್ನು ಮತ್ತು ತನ್ನ ಸಭಾ ಸದಸ್ಯರನ್ನು ರಕ್ಷಿಸಲು ಸಾಧ್ಯವಾಗುತ್ತದೆ ಎಂಬುದಾಗಿ (1 ತಿಮೊ. 4:16). ನಾವು ಆತ್ಮವಂಚನೆಯಿಂದ ತಪ್ಪಿಸಿಕೊಳ್ಳುವ ಏಕೈಕ ಮಾರ್ಗವೆಂದರೆ, ದೇವರು ನಮಗೆ ಏನನ್ನು ಹೇಳ ಬಯಸುತ್ತಾರೋ ಅದನ್ನು ಕೇಳಿಸಿಕೊಳ್ಳುವುದಾಗಿದೆ.
ಒಂದು ಸಲ ಮಾರ್ಥಳ ತಂಗಿ ಮರಿಯಳು ಯೇಸುವಿನ ಪಾದಗಳ ಬಳಿ ಕುಳಿತುಕೊಂಡು ಆತನ ವಾಕ್ಯವನ್ನು ಕೇಳುತ್ತಿದ್ದಾಗ, ಮತ್ತು ಮಾರ್ಥಳು ಆಕೆಯಂತೆ ಮಾಡದೆ ಅನೇಕ ಕೆಲಸಕಾರ್ಯಗಳಲ್ಲಿ ನಿರತಳಾಗಿದ್ದಾಗ, ಮಾರ್ಥಳ ಗಡಿಬಿಡಿಯ ಓಡಾಟಕ್ಕಾಗಿ ಯೇಸುವು ಆಕೆಯನ್ನು ಗದರಿಸಿದರು. ನಮ್ಮ ಕರ್ತರು ಮುಂದುವರಿಸಿ, ಮರಿಯಳು ಜೀವಿತದಲ್ಲಿ ಅವಶ್ಯಕವಾದ ಒಂದೇ ವಿಷಯವನ್ನು ಆರಿಸಿಕೊಂಡಿದ್ದಾಳೆಂದು ಹೇಳಿದರು (ಲೂಕ. 10:42). ನಾವೆಲ್ಲರೂ "ಅಪ್ಪಣೆಯಾಗಲಿ, ನಿನ್ನ ದಾಸನು ಕಾದಿದ್ದಾನೆ," ಎಂದು ನುಡಿದ ಸಮುವೇಲನ ಮನೋಭಾವವನ್ನು ಹೊಂದಬೇಕು.
ಸತ್ಯವೇದದ ಮೊದಲನೇ ಪುಟದಲ್ಲಿ ನಾವು ಏನನ್ನು ನೋಡಿದೆವು? ಪ್ರತೀ ಬಾರಿ ದೇವರು ವಾಕ್ಯವನ್ನು ನುಡಿದಾಗ, ಆ ಕಾರ್ಯವು ತಕ್ಷಣವೇ ನೆರವೇರಿತು: ಬೆಳಕು ಉಂಟಾಯಿತು, ಜಲಸಮೂಹದ ಮಧ್ಯೆ ನೆಲವು ಮೇಲೆದ್ದಿತು, ಮರಗಿಡಗಳು, ಮೀನುಗಳು ಮತ್ತು ಪಶುಗಳು, ಮುಂತಾದ ಎಲ್ಲವೂ ಸೃಷ್ಟಿಸಲ್ಪಟ್ಟವು.
ಯೆಶಾಯನು 55:10,11 ನಮಗೆ ತಿಳಿಸುವುದು ಏನೆಂದರೆ, ದೇವರ ಬಾಯಿಂದ ಹೊರಡುವ ಮಾತು ದೇವರ ಇಷ್ಟಾರ್ಥವನ್ನು ನೆರವೇರಿಸದೆ ಮತ್ತು ದೇವರ ಉದ್ದೇಶವನ್ನು ಸಫಲಗೊಳಿಸದೆ ವ್ಯರ್ಥವಾಗಿ ಹಿಂದಿರುಗುವುದಿಲ್ಲ.
ಈ ವಾಕ್ಯಗಳಲ್ಲಿ ಬರುವಂತ ಎರಡು ಪದಗಳು. "ಇಷ್ಟಾರ್ಥ ನೆರವೇರುವುದು" ಮತ್ತು "ಸಫಲಗೊಳ್ಳುವುದು", ಇವು ಲೋಕದ ಎಲ್ಲಾ ಜನರು ಅತಿ ಹೆಚ್ಚಾಗಿ ಹಾರೈಸುವ ಸಂಗತಿಗಳಾಗಿವೆ ಎಂಬುದನ್ನು ಗಮನಿಸಿರಿ.
ನಾವೆಲ್ಲರೂ ನಮ್ಮ ಜೀವನದಲ್ಲಿ ಏನನ್ನಾದರೂ ಸಾಧಿಸಲು ಬಯಸುತ್ತೇವೆ ಮತ್ತು ಯಶಸ್ಸನ್ನು ಬಯಸುತ್ತೇವೆ. ಆದರೆ ಜೀವಿತಕಾಲವು ಅಲ್ಪಾವಧಿಯದ್ದಾಗಿದೆ ಮತ್ತು ಯಶಸ್ಸು ಮತ್ತು ಸಾಧನೆಗಾಗಿ ಹಲವಾರು ವಿಧಾನಗಳನ್ನು ಪ್ರಯೋಗಿಸಿ ನೋಡುವುದಕ್ಕೆ ನಮಗೆ ಸಮಯವಿಲ್ಲ. ಅದರಲ್ಲೂ ಆತ್ಮಿಕ ವಿಷಯಗಳಲ್ಲಿ ಇದು ಖಂಡಿತವಾಗಿ ಸಾಧ್ಯವಿಲ್ಲ. ನಾವು ಕರ್ತರ ಸೇವೆಗಾಗಿ ಯಾವುದೋ ವಿಧಾನವನ್ನು ಆರಿಸಿಕೊಂಡು, ಮುಂದೆ 20 ವರ್ಷಗಳ ನಂತರ ಅದು ದೇವರ ಮಾರ್ಗವಾಗಿರಲಿಲ್ಲ, ಮತ್ತು ನಾವು ತಪ್ಪು ದಾರಿಯಲ್ಲಿ ಸಾಗಿದೆವು ಎಂದು ಕಂಡುಕೊಳ್ಳಬಾರದು! ನಾವು ದೇವರು ಹೇಳುವ ಮಾತಿಗೆ ಕಿವಿಗೊಟ್ಟರೆ, ಹೀಗೆ ಸಮಯವನ್ನು ವ್ಯರ್ಥಗೊಳಿಸುವುದನ್ನು ನಾವು ತಪ್ಪಿಸಬಹುದು. ಆಗ ನಿಶ್ಚಯವಾಗಿ ಸಫಲತೆಯೂ, ಇಷ್ಟಾರ್ಥ ಸಾಧನೆಯೂ ಕೈಗೂಡುತ್ತದೆ.